`ಋತುಗಳಲ್ಲಿ ನಾನು ವಸಂತ’ ಎನ್ನುತ್ತಾನೆ ಭಗವಂತನಾದ ಶ್ರೀಕೃಷ್ಣ. ಇಂತಹ ಶ್ರೇಷ್ಠವಾದ ಋತುವಿನಲ್ಲಿ ಉತ್ಪನ್ನವಾಗುವ ಫಲ ಸಮೃದ್ಧಿಯನ್ನು ಶ್ರೀ ಕೃಷ್ಣನಿಗೆ ಅರ್ಪಿಸುವುದು ಬಹಳ ವಿಶೇಷವಲ್ಲವೇ? ಸ್ವಾರ್ಥವೆಂಬ ಹೊರ ಸಿಪ್ಪಿಯನ್ನು ತ್ಯಜಿಸಿ, ಸಂಸಾರದ ಅಂಟಿನಿಂದ ನಿರ್ಲಿಪ್ತತೆಯನ್ನು ಬೆಳೆಸಿಕೊಂಡು, ಭಕ್ತಿ ಎಂಬ ಸಿಹಿ ರಸದಿಂದ ಕೂಡಿದ ಮಾಗಿದ ಮನಸ್ಸಿನೊಂದಿಗೆ ಆ ಪರಮಾತ್ಮನಿಗೆ ಶರಣಾಗಬೇಕು ಎನ್ನುವುದೇ ನಾವು ದೇವರಿಗೆ ಹಣ್ಣು ಅರ್ಪಿಸುವುದರ ತಾತ್ಪರ್ಯ. ತಾಜಾ ಹಣ್ಣುಗಳನ್ನು ಮಾತ್ರವಲ್ಲದೆ ಈ ಹಣ್ಣುಗಳಿಂದ ತಯಾರಿಸಿದ ಮಧುರವಾದ ತಿನಿಸುಗಳನ್ನೂ ಆ ಮಧುರಾಪತಿಗೆ ಅರ್ಪಿಸಿ ಆನಂದ ಹೊಂದೋಣ.
ಮಾವಿನ ಹಣ್ಣಿನ ಅಕ್ಕಾರವಡಿಶಲ್
ಸಕ್ಕರೆ (ಅಕ್ಕಾರಮ್) ಜೊತೆಗೆ ಬಸಿದ ಅನ್ನ (ವಡಿಶಲ್) ಮತ್ತು ಹಾಲು ಸೇರಿಸಿ ತಯಾರಿಸುವ ಪಾಯಸಕ್ಕೆ ಅಕ್ಕಾರವಡಿಶಲ್ ಎನ್ನುತ್ತಾರೆ. ಅಕ್ಕಾರವಡಿಶಲ್ ಶ್ರೀರಂಗಮ್ ದೇವಸ್ಥಾನದ ಶ್ರೀರಂಗನಾಥನಿಗೆ ಮಾಡುವ ವಿಶಿಷ್ಟ ನೈವೇದ್ಯವಾಗಿದೆ. ಮಾವಿನ ಹಣ್ಣಿನ ಅಕ್ಕಾರವಡಿಶಲ್ ತಯಾರಿಕೆಯಲ್ಲಿ ಹಾಲಿಗೆ ಬದಲು ಮಾವಿನ ಹಣ್ಣನ್ನು ಉಪಯೋಗಿಸಲಾಗಿದೆ.
ತಯಾರಿಸಲು ಬೇಕಾದ ಪದಾರ್ಥಗಳು
ಅಕ್ಕಿ – 1/2 ಪಾವು
ಸಿಹಿಯಾದ ಮಾವಿನ ಹಣ್ಣು – 3 (ಕಿವಿಚಿ ತಿರುಳು ಮತ್ತು ರಸವನ್ನು ತೆಗೆದಿಟ್ಟುಕೊಳ್ಳಬೇಕು)
ಸಕ್ಕರೆ – 1/2 ಪಾವು (ಹಣ್ಣಿನ ರುಚಿಗೆ ತಕ್ಕಂತೆ ಹೆಚ್ಚು ಅಥವಾ ಕಡಮೆ ಮಾಡಿಕೊಳ್ಳಬಹುದು)
ಏಲಕ್ಕಿ, ಪಚ್ಚೆ ಕರ್ಪೂರದ ಪುಡಿ – 1 ಚಿಟಿಕೆ
ತುಪ್ಪ – 4 ಟೇಬಲ್ ಚಮಚ
ದ್ರಾಕ್ಷಿ ಮತ್ತು ಗೋಡಂಬಿ – ಸ್ವಲ್ಪ
ತಯಾರು ಮಾಡುವ ವಿಧಾನ
1. ಅಕ್ಕಿಯನ್ನು ಬರಿ ಬಾಣಲೆಯಲ್ಲಿ ಕೆಂಪಾಗುವಂತೆ ಹುರಿದುಕೊಳ್ಳಬೇಕು.
2. ಹುರಿದ ಅಕ್ಕಿಯನ್ನು ತೊಳೆದು ಎರಡು ಪಾವು ನೀರು ಸೇರಿಸಿ ಕುಕ್ಕರಲ್ಲಿ ಚೆನ್ನಾಗಿ ಬೇಯಿಸಿಕೊಳ್ಳಬೇಕು.
3. ಬೆಂದ ಅನ್ನದ ಜೊತೆಗೆ ಮಾವಿನ ತಿರುಳು ಮತ್ತು ರಸವನ್ನು ಸೇರಿಸಿ ಕೈಯಾಡಿಸುತ್ತಲೇ ಕುದಿಸಬೇಕು.
4. ಹಣ್ಣು ಮತ್ತು ಅನ್ನ ಚೆನ್ನಾಗಿ ಹೊಂದಿಕೊಂಡ ಮೇಲೆ ಸಕ್ಕರೆಯನ್ನು ಹಾಕಿ ಮತ್ತೆ ಪಾಕ ಮಾಡಬೇಕು.
5. ಎಲ್ಲ ಒಟ್ಟಿಗೆ ಕೂಡಿಕೊಂಡು ಬರುವಾಗ ತುಪ್ಪವನ್ನು ಹಾಕಿ ಕೈಯಾಡಿಸಬೇಕು.
6. ಸ್ವಲ್ಪ ಗಟ್ಟಿಯಾದ ಪಾಯಸದ ಹದ ಬಂದಾಗ ಏಲಕ್ಕಿ, ಪಚ್ಚೆ ಕರ್ಪೂರದ ಪುಡಿ ಸೇರಿಸಿ ಒಲೆ ಆರಿಸಬೇಕು.
7. ತುಪ್ಪದಲ್ಲಿ ಹುರಿದ ದ್ರಾಕ್ಷಿ ಗೋಡಂಬಿಯಿಂದ ಅಲಂಕರಿಸಿದರೆ ಮಾವಿನ ಹಣ್ಣಿನ ಅಕ್ಕಾರವಡಿಶಲ್ ನೈವೇದ್ಯಕ್ಕೆ ಸಿದ್ಧ.
ಹಲಸಿನ ಹಣ್ಣಿನ ದೋಸೆ
ಅನೇಕ ವಿಷ್ಣು ದೇವಾಲಯಗಳಲ್ಲಿ ದೋಸೆ ನೈವೇದ್ಯ ಮಾಡುವುದು ಪದ್ಧತಿಯಲ್ಲಿದೆ. ಅದರಲ್ಲೂ ಅಳಗರ್ ಕೋವಿಲ್ ದೋಸೆ ಹೆಸರಾಂತ ಪ್ರಸಾದವಾಗಿದೆ. ಒಂದು ಬದಲಾವಣೆಗಾಗಿ ಹಲಸಿನ ಹಣ್ಣಿನ ದೋಸೆಯನ್ನು ದೇವರಿಗೆ ನೈವೇದ್ಯ ಮಾಡಬಾರದೇಕೆ?
ತಯಾರಿಸಲು ಬೇಕಾದ ಪದಾರ್ಥಗಳು
ಅಕ್ಕಿ – 1 ಪಾವು
ಅವಲಕ್ಕಿ – 1 ಟೇಬಲ್ ಚಮಚ
ತೆಂಗಿನಕಾಯಿ ತುರಿ – 1 ಬಟ್ಟಲು
ಪುಡಿ ಮಾಡಿದ ಬೆಲ್ಲ – 1/2 ಪಾವು
ಉಪ್ಪು – 1 ಚಿಟಿಕೆ
ಹಲಸಿನ ಹಣ್ಣಿನ ತೊಳೆಗಳು – 10
ದೋಸೆ ಬೇಯಿಸಲು ತುಪ್ಪ
ತಯಾರು ಮಾಡುವ ವಿಧಾನ
1. ಅಕ್ಕಿಯನ್ನು ಅವಲಕ್ಕಿಯ ಜೊತೆಗೆ ತೊಳೆದು ಒಂದು ಗಂಟೆ ಕಾಲ ನೆನಸಿಡಬೇಕು.
2. ಬೆಲ್ಲವನ್ನು ಬಿಸಿನೀರಿನಲ್ಲಿ ಕರಗಿಸಿ ಶೋಧಿಸಿಕೊಳ್ಳಬೇಕು.
3. ಬೀಜವನ್ನೂ ನಾರನ್ನೂ ಬಿಡಿಸಿ ಹಲಸಿನ ತೊಳೆಗಳನ್ನು ಸ್ವಲ್ಪ ಮೃದುವಾಗುವಷ್ಟು ಬೇಯಿಸಿಕೊಳ್ಳಬೇಕು.
4. ನೆನೆದ ಅಕ್ಕಿ, ತೆಂಗಿನ ತುರಿ ಮತ್ತು ಹಲಸಿನ ಹಣ್ಣನ್ನು ಮಿಕ್ಸಿಗೆ ಹಾಕಿ, ಕರಗಿಸಿದ ಬೆಲ್ಲವನ್ನೂ ಉಪ್ಪನ್ನೂ ಸೇರಿಸಿ ಚೆನ್ನಾಗಿ ದೋಸೆ ಹಿಟ್ಟಿನ ಹದಕ್ಕೆ ರುಬ್ಬಿಕೊಳ್ಳಬೇಕು.
5. ತುಪ್ಪ ಹಚ್ಚಿದ ಕಾವಲಿಯನ್ನು ಬಿಸಿ ಮಾಡಿಕೊಂಡು ಒಂದು ಸೌಟು ರುಬ್ಬಿದ ಹಿಟ್ಟನ್ನು ದೋಸೆಯಾಗಿ ಹುಯ್ದು ತುಪ್ಪ ಹಾಕಿ ಬೇಯಿಸಬೇಕು.
6. ಮೇಲ್ಗಡೆ ಬೆಂದ ದೋಸೆಯನ್ನು ಮಗಚಿ ಮತ್ತೆ ಸ್ವಲ್ಪ ತುಪ್ಪ ಹಾಕಿ ಬೇಯಿಸಬೇಕು.
7. ಜೋನಿ ಬೆಲ್ಲ ಅಥವಾ ಜೇನುತುಪ್ಪದೊಂದಿಗೆ ಚಿನ್ನದ ಬಣ್ಣದ ಹಲಸಿನ ದೋಸೆ ನೈವೇದ್ಯಕ್ಕೆ ಸಿದ್ಧ.
ಬಾಳೆ ಹಣ್ಣಿನ ಹಲ್ವಾ
ಯಾವ ದೇವಸ್ಥಾನದಲ್ಲೇ ಆಗಲಿ, ನಾವು ಕೊಳ್ಳುವ ಅರ್ಚನೆ ತಟ್ಟೆಯಲ್ಲಿ ಕಾಯಿ ಜೊತೆಗೆ ಅಗ್ರಸ್ಥಾನ ವಹಿಸಿ ಕುಳಿತಿರುವ ಹಣ್ಣು ಎಂದರೆ ಅದು ಬಾಳೆಹಣ್ಣು ಮಾತ್ರ. ಬಾಳೆಹಣ್ಣು ಸೇರಿಸಿ ಮಾಡಿದ ಪಂಚಾಮೃತವಿಲ್ಲದೆ ಯಾವ ಅಭಿಷೇಕವೂ ಪೂರ್ಣಗೊಳ್ಳುವುದಿಲ್ಲ. ಅಂತಹ ಮಹತ್ತ್ವದ ಬಾಳೆಹಣ್ಣಿನಿಂದ ತಯಾರಿಸುವ ಪ್ರಸಾದ ಬಾಳೆಹಣ್ಣಿನ ಹಲ್ವಾ.
ತಯಾರಿಸಲು ಬೇಕಾದ ಪದಾರ್ಥಗಳು
ಹೆಚ್ಚಿದ ರಸ ಬಾಳೆಹಣ್ಣಿನ ಬಿಲ್ಲೆಗಳು – 2 ಲೋಟ
ಸಕ್ಕರೆ – 1 ಲೋಟ
ತುಪ್ಪ – 4 ಟೇಬಲ್ ಚಮಚ
ಏಲಕ್ಕಿ ಪುಡಿ – 1 ಚಿಟಿಕೆ
ಸಿಪ್ಪೆ ತೆಗೆದು ಚೂರು ಮಾಡಿದ ಬಾದಾಮಿ – 1 ಟೇಬಲ್ ಚಮಚ
ತಯಾರು ಮಾಡುವ ವಿಧಾನ
1. ಬಾಳೆಹಣ್ಣನ್ನು ಬಿಲ್ಲೆಗಳಾಗಿ ಹೆಚ್ಚಿಕೊಳ್ಳಬೇಕು.
2. ಎರಡು ಚಮಚ ತುಪ್ಪವನ್ನು ಬಾಣಲೆಯಲ್ಲಿ ಕಾಯಿಸಿಕೊಂಡು ಅದಕ್ಕೆ ಹೆಚ್ಚಿಟ್ಟ ಬಾಳೆಹಣ್ಣಿನ ಬಿಲ್ಲೆಗಳನ್ನು ಸೇರಿಸಿ ಸಣ್ಣ ಉರಿಯಲ್ಲಿ ಬೇಯಿಸಬೇಕು.
3. ಬಾಳೆಹಣ್ಣು ಬೆಂದ ಅನಂತರ ಸಕ್ಕರೆ ಸೇರಿಸಿ ಕೈಯಾಡಿಸುತ್ತಿರಬೇಕು.
4. ಹಲ್ವಾ ಗಟ್ಟಿಯಾಗುತ್ತಿರುವಾಗ ಏಲಕ್ಕಿ ಪುಡಿ ಹಾಕಿ ಉಳಿದ ತುಪ್ಪವನ್ನು ಸ್ವಲ್ಪ ಸ್ವಲ್ಪವಾಗಿ ಸೇರಿಸಿ, ಹಲ್ವಾ ಬಾಣಲೆಗೆ ಅಂಟದೆ ಮುದ್ದೆಯಾಗಿ ಕೂಡಿ ಬರುವಾಗ ಒಲೆಯಿಂದ ಇಳಿಸಬೇಕು.
5. ಬಾದಾಮಿ ಚೂರುಗಳಿಂದ ಅಲಂಕರಿಸಿದರೆ ಬಾಳೆಹಣ್ಣಿನ ಹಲ್ವಾ ನೈವೇದ್ಯಕ್ಕೆ ಸಿದ್ಧ.
ಬೇಲದ ಹಣ್ಣಿನ ಸಿಹಿ ಪಚಡಿ
ಬಲಿತ ಬೇಲದ ಹಣ್ಣು ಸುವಾಸನೆಯಿಂದ ಕೂಡಿರುತ್ತದೆ. ಗಡುಸಾದ ಕರಟವನ್ನು ಒಡೆದರೆ ಒಳಗೆ ಔಷಧೀಯ ಗುಣಗಳನ್ನು ಹೊಂದಿರುವ ಕಂದು ಬಣ್ಣದ ಮೃದುವಾದ ಹಣ್ಣು ಕಂಡುಬರುತ್ತದೆ. ಬೇಲದ ಹಣ್ಣಿನ ಪಾನಕ ಮತ್ತು ಪಚಡಿ ಬಹಳ ರುಚಿಕರ.
ತಯಾರಿಸಲು ಬೇಕಾದ ಪದಾರ್ಥಗಳು
ಬೇಲದ ಹಣ್ಣು – 1
ಪುಡಿ ಮಾಡಿದ ಬೆಲ್ಲ – 1 ಬಟ್ಟಲು
ಉಪ್ಪು – 1 ಚಿಟಿಕೆ
ಎಳ್ಳೆಣ್ಣೆ – 1 ಟೀ ಚಮಚ
ಸಾಸಿವೆ – 1 ಚಿಟಿಕೆ
ಒಣ ಮೆಣಸಿನಕಾಯಿ – 1
ತಯಾರು ಮಾಡುವ ವಿಧಾನ
1. ಕರಟವನ್ನು ಒಡೆದು ಚೆಂಡಿನಂತೆ ಕಾಣುವ ಮೃದುವಾದ ಹಣ್ಣನ್ನು ತೆಗೆದು ಚೆನ್ನಾಗಿ ಕಿವುಚಿ ನಾರನ್ನು ತೆಗೆಯಬೇಕು.
2. ನಾರು ತೆಗೆದ ತಿರುಳಿನೊಂದಿಗೆ ಬೆಲ್ಲದ ಪುಡಿ ಮತ್ತು ಚಿಟಿಕೆ ಉಪ್ಪನ್ನು ಸೇರಿಸಿ, ಬೆಲ್ಲ ಕರಗಿ ಹಣ್ಣಿನೊಂದಿಗೆ ಕೂಡಿಕೊಳ್ಳುವವರೆಗೆ ಕೈಯಿನಿಂದ ಚೆನ್ನಾಗಿ ಕಲಸಬೇಕು.
3. ಎಣ್ಣೆ ಬಿಸಿ ಮಾಡಿ ಸಾಸಿವೆ ಒಣ ಮೆಣಸಿನಕಾಯಿ ಚೂರನ್ನು ಹಾಕಿ ಒಗ್ಗರಣೆ ಮಾಡಿ ಪಚಡಿಗೆ ಹಾಕಬೇಕು.
4. ಸುವಾಸನೆಯಿಂದ ಕೂಡಿದ ಬೇಲದ ಹಣ್ಣಿನ ಪಚಡಿ ನೈವೇದ್ಯಕ್ಕೆ ಸಿದ್ಧ.