ವೈಯಕ್ತಿಕವಾಗಿ  ಹೇಳುವುದಾದರೆ…

ಭಗವಂತನನ್ನು ಒಂದು ವ್ಯಕ್ತಿಯಾಗಿ ಭಾವಿಸುವುದು ಜನರಿಗೆ ಅಷ್ಟೇಕೆ ಕಷ್ಟ?

ಪತ್ರಿಕೆಗಳು ಧರ್ಮಶ್ರದ್ಧೆಯನ್ನು ಕುರಿತಂತೆ ಲೇಖನಗಳನ್ನು ಪ್ರಕಟಿಸಿದಾಗಲೆಲ್ಲ, ಲೇಖಕರಿಗೆ ದೇವರು ವ್ಯಕ್ತಿ ಇರಬಹುದು ಎಂಬ ವಿಚಾರವು ಹೆಚ್ಚೂ ಕಮ್ಮಿ ಅಸಂಗತವಾಗುತ್ತದೆ. ತಮ್ಮನ್ನು ಆಸ್ತಿಕರೆಂದು ಹೇಳಿಕೊಳ್ಳುವವರೂ ಕೂಡ ಎಲ್ಲ ರೀತಿಯ ಪರ್ಯಾಯಗಳನ್ನು ಸೂಚಿಸುತ್ತ ದೇವರು ಒಬ್ಬ ವ್ಯಕ್ತಿ ಎಂಬುವುದಕ್ಕೆ ತಡೆ ಒಡ್ಡುತ್ತಾರೆ.

ಗಾರ್ಡಿಯನ್‌ (ಲಂಡನ್‌) ಪತ್ರಿಕೆಯು ಭಿನ್ನವಾದ ಮತ, ಧರ್ಮಗಳನ್ನು ಕುರಿತಂತೆ ಅಂಕಣವನ್ನು ಪ್ರಕಟಿಸುತ್ತದೆ. ಹಾಗೆ ಪ್ರಕಟಿಸಿದ ಒಂದು ಲೇಖನದಲ್ಲಿ ತತ್ತ್ವಶಾಸ್ತ್ರದ ಪ್ರಾಧ್ಯಾಪಕರೊಬ್ಬರು “ಪಶ್ಚಿಮದ ಧರ್ಮಶ್ರದ್ಧೆಯ ಹಳೆ ಭಗವಂತ ಕಲ್ಪನೆಯನ್ನು ತೊರೆಯಬೇಕು… ನಾವು ಹೆಚ್ಚು ಬುದ್ಧಿಶಕ್ತಿಯ ತತ್ತ್ವಶಾಸ್ತ್ರವಾದ ಅದ್ವೈತ ವೇದಾಂತದತ್ತ ಸಾಗಬೇಕು” ಎಂದು ತಮ್ಮ ಅಭಿಪ್ರಾಯವನ್ನು ನೀಡಿದ್ದರು. ಖ್ಯಾತ ಮನೋವಿಜ್ಞಾನಿಯೊಬ್ಬರು ಬರೆದ ಮತ್ತೊಂದು ಲೇಖನದಲ್ಲಿ “ದೇವರೆಂಬ ವಿಷಯವು ಲೋಕದಲ್ಲಿರುವ ಕ್ರೌರ್ಯ, ನೋವು-ದುಃಖಗಳಿಗೆ ಸಮನ್ವಯವಲ್ಲ ಅಥವಾ ಪರಸ್ಪರ ವಿರುದ್ಧ” ಎಂದು ಹೇಳಿದ್ದರು.

ಅಂಕಣದಲ್ಲಿ ಪದೇ ಪದೇ ವ್ಯಕ್ತವಾಗುವ ಸಂದೇಹಗಳಿಗೆ ಇವು ಒಂದೆರಡು ಉದಾಹರಣೆಗಳಷ್ಟೆ. ಈ ಲೇಖಕರಲ್ಲಿ ಕಾಣುವ ಒಂದು ಸಾಮಾನ್ಯ ಅಂಶವೆಂದರೆ ಅವರೆಲ್ಲರೂ ಒಂದೇ ತಪ್ಪನ್ನು ಮಾಡುವುದು. ದೇವರ ಬಗೆಗೆ ತಮಗೆ ಏನೂ ತಿಳಿದಿಲ್ಲದಿರುವುದರಿಂದ ಏನನ್ನೂ ತಿಳಿಯುವುದು ಸಾಧ್ಯವಿಲ್ಲ ಅಥವಾ ಕೊನೆ ಪಕ್ಷ ಯಾರಿಗೂ ಗೊತ್ತಿಲ್ಲ ಎಂದು ಅವರು ಒಂದು ರೀತಿಯಲ್ಲಿ ಅಹಂಕಾರದಿಂದ ಅಂದುಕೊಳ್ಳುತ್ತಾರೆ.

“ದೇವರು ವ್ಯಕ್ತಿಯಾಗುವುದು ಹೇಗೆ ಸಾಧ್ಯ? ನನಗಂತೂ ಅರ್ಥವಾಗುವುದಿಲ್ಲ. ಆದುದರಿಂದ ಅದು ಸಾಧ್ಯವಿಲ್ಲ.” ಎಷ್ಟೋ ವಿಷಯಗಳು ನಮಗೆ ಗೊತ್ತಿಲ್ಲ. ಆದರೆ ನಾವು ಯೋಗ್ಯ ಗುರುವಿನ ಬಳಿ ಹೋಗಿ ಅದನ್ನೆಲ್ಲ ಅರಿತುಕೊಳ್ಳಬಹುದು. ದಿಟವಾಗಿ, ನಾವು ಎಲ್ಲಿಗೆ ಬರುತ್ತಿದ್ದೇವೆ? ಭಗವಂತನ ಲಕ್ಷಣವನ್ನು ಅರ್ಥಮಾಡಿಕೊಳ್ಳುವುದು ಅಷ್ಟು ಕಷ್ಟವೇ? ಅರ್ಥಮಾಡಿಕೊಳ್ಳಲು ನಮಗೆ ನೆರವಾಗಲು ಅನೇಕ ಸರಳವಾದ, ಆದರೆ ಗಾಢವಾದ ಸಮರ್ಥನೆಗಳಿವೆ. ಉದಾಹರಣೆಗೆ, ನಿಸ್ಸಂಶಯವಾಗಿ ಗಡಿಯಾರಕ್ಕೆ ಒಬ್ಬ ತಯಾರಿಸುವವನು ಇರುವಂತೆ ವಿಶ್ವವನ್ನು ಸೃಷ್ಟಿಸಿದವನೂ ಇದ್ದಾನೆ. ಗಡಿಯಾರಕ್ಕಿಂತ ಹೆಚ್ಚು ಸಂಕೀರ್ಣ – ಅದರ ಹಿಂದೆ ಮಿದುಳು ಇರಲೇಬೇಕು. ಭಗವಂತನು ತನ್ನ ಆಕಾರದಲ್ಲಿಯೇ ಮಾನವನನ್ನು ಸೃಷ್ಟಿಸಿದರೆ, ಅದು ಭಗವಂತನನ್ನು ಆಕಾರರಹಿತ ಶಕ್ತಿಯನ್ನಾಗಿ ಮಾಡುತ್ತದೆಯೇ? ಯಾವುದೇ ಆಗಲಿ, ವ್ಯಕ್ತಿಯ ಕೈ ಇಲ್ಲದೆ ಸೃಷ್ಟಿಯಾಗಿರುವ ಉದಾಹರಣೆ ಇದೆಯೇ?

ಯಾವುದೂ ಕೂಡ ಆಕಸ್ಮಿಕವಾಗಿ ನಡೆಯುವುದಿಲ್ಲ. ಪ್ರತಿಯೊಂದೂ ಕೂಡ ಕಾರ್ಯಕಾರಣ ಕಾನೂನನ್ನು ಅನುಸರಿಸುತ್ತದೆ. ಸಂಭವನೀಯತೆ ಸಿದ್ಧಾಂತದಲ್ಲಿಯೂ ಕೂಡ ಆಕಸ್ಮಿಕ ಪದವನ್ನು ಸೂಕ್ತವಾಗಿ ನಿರೂಪಿಸಲು ಸಾಧ್ಯವಾಗಿಲ್ಲ. ನಾನು ದಾಳವನ್ನು ಮೊದಲ ಎಸೆತದಂತೆಯೇ ಮುಂದಿನ ಎಸೆತವನ್ನೂ ನಿಖರವಾಗಿ ಎಸೆದರೆ ನನಗೆ ಅದೇ ಸಂಖ್ಯೆ ಬರುತ್ತದೆ. ನಮಗೆ ವ್ಯತ್ಯಯ-ಸಾಧ್ಯ ಅಂಶಗಳ ಬಗೆಗೆ ಅರಿವು ಇಲ್ಲದಿರಬಹುದು, ಆದರೆ ಯಾವುದೋ ಫಲಿತಾಂಶವನ್ನು ನಿರ್ಧರಿಸುತ್ತದೆ. ಸ್ಥಿರ ಅಂಶಗಳು ಸ್ಥಿರವಾದ ಫಲಿತಾಂಶವನ್ನು ನೀಡುತ್ತವೆ. ಎಲ್ಲ ಕಾರಣಗಳಿಗೆ ಅಂತಿಮ ಕಾರಣ ಎನ್ನುವುದು ಇರಲೇಬೇಕು. ಅದು ವ್ಯಕ್ತಿಯಾಗಿರಬೇಕೆಂಬುದನ್ನು ಅರಿಯಲು ಸ್ವಲ್ಪ ಚಿಂತನೆ ಸಾಕು.

ಪರಿಗಣಿಸಿ : ಬುದ್ಧಿಯ ಪ್ರಭಾವವಿಲ್ಲದೆ ಅವ್ಯವಸ್ಥೆಯಿಂದ ವ್ಯವಸ್ಥೆಯು ಉದ್ಭವಿಸುವುದು ಸಾಧ್ಯವೇ? ಲೌಕಿಕ ವಸ್ತುಗಳು ಕೊಳೆತು ಹೋಗುತ್ತವೆಯೇ? ಅಥವಾ ಅವು ಸ್ವತಃ ಪೂರ್ವಸ್ಥಿತಿಗೆ ಬಂದು ಬೆಳೆಯುತ್ತವೆಯೇ? ನಮ್ಮ ಅನುಭವ ಏನು? ತನ್ನ ಅಸೀಮ, ವ್ಯವಸ್ಥಿತ ತೊಡಕುಗಳೊಂದಿಗೆ ಜಗತ್ತು ಕುದಿಯುವ `ಆದಿಕಾಲದ ಸೂಪ್‌’ ಹಂಡೆಯಿಂದ ಸುಮ್ಮನೆ ಬೆಳೆದುಬಿಟ್ಟಿತೆಂದು ನಾವು ಹೇಗೆ ಹೇಳುವುದು ಸಾಧ್ಯ? ಅಥವಾ ಸ್ಫೋಟಕ ಕಲ್ಲಿನ ರಾಶಿಯಿಂದ?

ವಿಶ್ವವು ಉಲ್ಲಂಘಿಸಲಾಗದ ಕಾನೂನುಗಳಿಂದ ತುಂಬಿದೆ. ನಾವು ಕಾಲಕ್ಕೆ ಶರಣಾಗಬೇಕು – ವೃದ್ಧರಾಗಬೇಕು ಮತ್ತು ಸಾಯಬೇಕು. ಪ್ರತಿಯೊಂದೂ ಭಾಗಭಾಗಗಳಾಗಿ ಒಡೆಯಬೇಕು ಮತ್ತು ಪುನಃ ಹೊಸ ವಸ್ತುಗಳಾಗಿ ರೂಪುಗೊಳ್ಳಬೇಕು. ಸಂಪೂರ್ಣ ಖಚಿತತೆಯಿಂದ ಸೂರ್ಯನು ಉದಯಿಸುತ್ತಾನೆ ಮತ್ತು ಅಸ್ತಮಿಸುತ್ತಾನೆ. ನಕ್ಷತ್ರಗಳು ಮತ್ತು ಗ್ರಹಗಳು ಅದೇ ರೀತಿ ಚಲಿಸುತ್ತವೆ. ಕಾನೂನು ಮಾಡುವವನಿಲ್ಲದೆ ಕಾನೂನುಗಳು ಇರುವುದು ಸಾಧ್ಯವೇ? ಮತ್ತೊಮ್ಮೆ, ನಮ್ಮ ಅನುಭವ ಏನು?

ನಾವೇ ದೇವರು ಎಂಬ ಅಸಂಬದ್ಧ ಪ್ರಸ್ತಾವವನ್ನು ಈಗಿನ ದಿನಗಳಲ್ಲಿ ಕೇಳುತ್ತಿದ್ದೇವೆ. ಆದರೆ ಎಲ್ಲವೂ ನನ್ನ ನಿಯಂತ್ರಣದಲ್ಲಿದೆ ಎಂದು ನಾನು ಪ್ರಾಮಾಣಿಕವಾಗಿ ಹೇಳುವುದು ಸಾಧ್ಯವೇ? ನಾನು ಇರುವ ಕೋಣೆಯ ಗೋಡೆಯ ಆಚೆಗೆ ನೋಡುವುದು ನನಗೆ ಸಾಧ್ಯವಿಲ್ಲದಿದ್ದರೂ ನಾನು ಸರ್ವಜ್ಞನೇ? ನನ್ನದೇ ತಲೆಯಲ್ಲಿ ಎಷ್ಟು ಕೂದಲುಗಳಿವೆ? ಒಂದಾದರೂ ಅಣುವನ್ನು ಸೃಷ್ಟಿಸುವುದು ನನಗೆ ಸಾಧ್ಯವೇ? ಎಲ್ಲ ಮತ್ತು ಸಂಪೂರ್ಣ ಜ್ಞಾನವನ್ನು ಹೊಂದಿರುವ ನಾನು ಪರಮಜೀವಿ ಎಂದು ಹೇಳುವ ಸಲಹೆಯಲ್ಲಿ ದೋಷವಿರುವುದು ಸ್ಪಷ್ಟ.

ಕೆಲವರು ಮತ್ತೊಂದು ಸಿದ್ಧಾಂತವನ್ನು ಮುಂದಿಡುತ್ತಾರೆ. ಈಗ ನಮಗೆ ನಮ್ಮ ದೈವತ್ವದ ಬಗೆಗೆ ಗೊತ್ತಿಲ್ಲದಿದ್ದರೂ ನಿರ್ವಾಣ ಅಥವಾ ಅಂತಹ ಯಾವುದೋ ಹಂತವನ್ನು ಮುಟ್ಟಿದಾಗ ನಮ್ಮ ಪಾರಮ್ಯದ ಬಗೆಗೆ ನಮಗೆ ಅರ್ಥವಾಗುತ್ತದೆ. ನಾವು ಈಗ ಭ್ರಮೆಯಲ್ಲಿದ್ದೇವೆ, ಆದರೆ ಆತ್ಮಸಾಕ್ಷಾತ್ಕಾರವಾದಾಗ ಅದು ಕೊನೆಗೊಳ್ಳುತ್ತದೆ. ಆದರೆ, ಭ್ರಮೆ ಅಥವಾ ಮರೆಯುವಿಕೆಯಿಂದ ನಾವು ಪರವಶರಾದರೆ ನಮ್ಮ ಪಾರಮ್ಯದ ಅರ್ಥವಾದರೂ ಏನು? ಅದು ಏನೇ ಆಗಿರಲಿ, ಭ್ರಮೆಯ ಬಲವು ನಾವಿರುವುದಕ್ಕಿಂತ ಉತ್ತಮವಾಗಿದ್ದರೆ ನಾವು ಪರಮರಾಗುವುದು ಹೇಗೆ ಸಾಧ್ಯ?

ನಿಸ್ಸಂಶಯವಾಗಿ ನಾನು ಪರಮನಲ್ಲ, ಆದರೆ ಬೇರೇನೋ ಇರಬೇಕು. ಆದಿವಾಸಿಗಳೂ ಶ್ರೇಷ್ಠತೆಗೆ ಗೌರವ ಸಲ್ಲಿಸುತ್ತಾರೆ. ಕೆಲವು ಬಾರಿ ಅವರು ಆಕಾಶವನ್ನು ಪೂಜಿಸುತ್ತಾರೆ, ಕೆಲವು ಬಾರಿ ಪರ್ವತವನ್ನು, ಸಾಗರವನ್ನು ಮತ್ತು ಎಲ್ಲ ಜೀವಿಯ ಬದುಕು ಅವಲಂಬಿತವಾಗಿರುವ ಮಳೆಯನ್ನು ಅವರು ಪೂಜಿಸುತ್ತಾರೆ. ಏನೇ ಇರಲಿ, ನನಗಿಂತ ಶ್ರೇಷ್ಠವಾದುದು ಉಂಟು ಎಂದು ಪಾರಮ್ಯತೆಯನ್ನು ಒಪ್ಪಿಕೊಳ್ಳುವುದಿದೆ. ಇದನ್ನು ಅಲ್ಲಗಳೆಯುವಂತಿಲ್ಲ. ಪರಿವರ್ತನೆ ಮತ್ತು ಸಾವನ್ನು ಅನಿವಾರ್ಯವಾಗಿ ಎಲ್ಲರಿಗೂ ತರುವ ಪ್ರಕೃತಿಯ ಶಕ್ತಿಯು ಶ್ರೇಷ್ಠವಾದುದು.

ಆದರೆ ಅಂತಿಮವಾದ ಶ್ರೇಷ್ಠತೆ ಏನು? ನಾವು ಸುಂದರವಾದ ಚಿತ್ರವನ್ನು ನೋಡುತ್ತೇವೆ ಮತ್ತು ಅಚ್ಚರಿ ಪಡುತ್ತೇವೆ – ಯಾರು ಇದನ್ನು ಚಿತ್ರಿಸಿದ್ದು? ಆದರೆ ಮೂಲ ಭೂ-ದೃಶ್ಯದ ವಿಷಯವೇನು? ಅದನ್ನು ಯಾರು ಚಿತ್ರಿಸಿದ್ದು? ಮಳೆ ಬೀಳುತ್ತದೆ ಮತ್ತು ನಮಗೆ ಪೌಷ್ಟಿಕಾಂಶ ನೀಡುವ ಆಹಾರವನ್ನು ಬೆಳೆಯುತ್ತೇವೆ. ಅದ್ಭುತವಾದ ವ್ಯವಸ್ಥೆ. ಆದರೆ ಯಾರು ಇದನ್ನು ವಿನ್ಯಾಸಗೊಳಿಸಿದ್ದು? ಶ್ರೇಷ್ಠ ವಿಜ್ಞಾನಿಗಳ ಮಿದುಳು ಕಷ್ಟಪಟ್ಟು ಹೋರಾಡುತ್ತವೆ. ಆದರೂ ಪ್ರಕೃತಿಯ ಸಣ್ಣ ಅಂಶವನ್ನೂ, ಸಣ್ಣ ಅಮೀಬಾದಂತಹ ಜೀವಿಯನ್ನೂ, ಸೃಷ್ಟಿಸುವ ಪ್ರಯತ್ನದಲ್ಲಿ ಅವರು ವಿಫಲರಾಗಿದ್ದಾರೆ.

ನಾನು ಪರಮನಲ್ಲದಿದ್ದರೂ ನನಗೆ ವ್ಯಕ್ತಿತ್ವದ ಲಕ್ಷಣಗಳಿವೆ. ನಾನು ಯೊಚಿಸಬಲ್ಲೆ, ಅನುಭವಿಸಬಲ್ಲೆ, ಇಚ್ಛಿಸಬಲ್ಲೆ ಮತ್ತು ಅಪೇಕ್ಷಿಸಬಲ್ಲೆ. ಅಂದರೆ, ಪರಮಾತ್ಮನಾದ ದೇವರಿಗೆ ಇಲ್ಲದ ಯಾವುದೋ ಸಾಮರ್ಥ್ಯ ನನಗಿದೆ ಎಂದೇ?

ಇವೆಲ್ಲ ಸರಳ ವಾದಗಳು. ಅವು ತಮ್ಮ ತರ್ಕದಲ್ಲಿ ಎಲ್ಲವನ್ನೂ ಒಳಗೊಂಡಿಲ್ಲದಿದ್ದರೂ ಮತ್ತು ನಾನು ಅವುಗಳನ್ನು ಕುರಿತ ಸಾಧ್ಯವಾದ ಎಲ್ಲ ಆಕ್ಷೇಪಗಳನ್ನು ಪ್ರಸ್ತಾವಿಸಿಲ್ಲವಾದರೂ, ಅವು ವಿವೇಚನಾಯುಕ್ತ ಎಂದು ಪ್ರಾಮಾಣಿಕ ವ್ಯಕ್ತಿಯು ಒಪ್ಪಿಕೊಳ್ಳುತ್ತಾನೆ. ಆಸ್ತಿಕವಾದಿಯ ಸರಳವಾದ ತರ್ಕದ ಅಂಶಗಳನ್ನು, ಮತ್ತು ನಾಸ್ತಿಕ ವಾದವನ್ನು ಬೆಂಬಲಿಸಲು ಮಾಡುವ ಸಂಕೀರ್ಣ ವಾದಗಳನ್ನು ಹೋಲಿಸಿ ನೋಡಿ. ಯಾವುದು ಹೆಚ್ಚು ವಿಶ್ವಾಸಾರ್ಹ?

ಬದುಕಿನ ದೊಡ್ಡ ಪ್ರಶ್ನೆಗಳಿಗೆ ಉತ್ತರವೇ ಇಲ್ಲ ಎಂದು ಅಂತಿಮವಾಗಿ ತೀರ್ಮಾನಿಸುವುದು ನಿರಾಶಾದಾಯಕ. ಸ್ವತಂತ್ರವಾಗಿ ಉತ್ತರವನ್ನು ಕಂಡುಕೊಳ್ಳಲು ನಮಗೆ ಸಾಕಷ್ಟು ಮಿದುಳಿನ ಶಕ್ತಿ ಇಲ್ಲ ಎನ್ನುವುದೇ ಸರಿಯಾದ ನಿರ್ಣಯ. ನಾವು ಈ ಪ್ರಶ್ನೆಗಳಿಗೆ ಅಧಿಕೃತ ಉತ್ತರವನ್ನು ಸ್ವೀಕರಿಸಬೇಕು – ಧರ್ಮ ಗ್ರಂಥಗಳು.

ಎಲ್ಲ ಧರ್ಮ ಗ್ರಂಥಗಳು ದೇವರನ್ನು ವ್ಯಕ್ತಿಯಾಗಿ ಹೇಳುತ್ತವೆ. ಈ ಪುರಾವೆಯನ್ನು ತಿರಸ್ಕರಿಸಿ, ನಾವು ವೈಯಕ್ತಿಕ ಊಹೆಯ ಲೋಕವನ್ನು ಪ್ರವೇಶಿಸುತ್ತೇವೆ ಮತ್ತು ಇವೆಲ್ಲ ಅಂತ್ಯವಿಲ್ಲದ್ದು ಮತ್ತು ಒಮ್ಮನವಿಲ್ಲದ್ದು ಎಂದು ಕಂಡುಕೊಳ್ಳುತ್ತೇವೆ. ಪರಮ ಸತ್ಯದ ವಿಷಯವು ಅಧ್ಯಯನದ ಅತ್ಯಂತ ಗಾಢ ಕ್ಷೇತ್ರವಾಗಿದ್ದರೂ ಪ್ರತಿಯೊಬ್ಬರೂ ಅದರ ಬಗೆಗೆ ತಮ್ಮದೇ ಸಿದ್ಧಾಂತವನ್ನು ನೀಡುತ್ತಾರೆ. ನಾನು ಕಾನೂನು ಕಾಲೇಜಿಗೆ ಹೋಗದೆ, ನನ್ನದೇ ಕಾನೂನುಗಳನ್ನು ರೂಪಿಸಲು ನಿರ್ಧರಿಸಿ ವಕೀಲ ವೃತ್ತಿಯನ್ನು ಆರಂಭಿಸಿದರೆ ಯಾರಾದರೂ ನನ್ನ ಬಳಿಗೆ ಬರುವರೇ? ಆದರೆ ಭಗವಂತನ ಬಗೆಗೆ ಒಂದೇ ಒಂದು ಶಬ್ದವನ್ನೂ ಓದದ ಯಾರಾದರೂ ಅವನ ಬಗೆಗೆ ಮಾತನಾಡುತ್ತಾರೆ. ಅದನ್ನು ಕೇಳಲು ನಾವು ಮೂರ್ಖರೇ?

ಕೃಷ್ಣನ ಭಕ್ತರಾಗಿ ನಾವು ನಮ್ಮ ಬುದ್ಧಿಯನ್ನು ಒಂದು ನಿರ್ದಿಷ್ಟ ಮತ, ಧರ್ಮಕ್ಕೆ ಒಪ್ಪಿಸಿಬಿಟ್ಟಿದ್ದೇವೆ ಎಂದು ಕೆಲವು ಬಾರಿ ನಮ್ಮ ಬಗೆಗೆ ಆಕ್ಷೇಪಣೆ ಮಾಡಲಾಗುತ್ತದೆ. ಆದರೆ ವಕೀಲನೊಬ್ಬನು ನೆಲದ ಕಾನೂನನ್ನು ಸ್ವೀಕರಿಸಿ, ಅಧ್ಯಯನ ಮಾಡಿ ಮತ್ತು ಅದನ್ನು ತನ್ನ ಕಕ್ಷಿದಾರರ ಬಳಿ ಪುನರುಚ್ಚರಿಸುವ ಮೂಲಕ ಒಂದು ಪದ್ಧತಿಗೆ ಶರಣಾಗಿಲ್ಲವೇ? ನಾವು ದೇವರು ಇದ್ದಾನೆ ಎಂಬ  ನಿಸ್ಸಂಶಯವಾದ ವಾಸ್ತವಾಂಶವನ್ನು ಸ್ವೀಕರಿಸಿದ್ದೇವೆ. ವೈದಿಕ ಸಾಹಿತ್ಯ ಮತ್ತು ಅಧಿಕೃತ ಆಧ್ಯಾತ್ಮಿಕ ಗುರುವಿನ ಮಾರ್ಗದರ್ಶನದಲ್ಲಿ ಭಗವಂತನ ಬಗೆಗೆ ಮತ್ತು ಅವನ ಧ್ಯೇಯವನ್ನು ಅಧ್ಯಯನ ಮಾಡುವುದು ನಮ್ಮ ವ್ಯವಹಾರ ಎಂದು ಅಂಗೀಕರಿಸಿದ್ದೇವೆ.

ಭಗವತ್‌ ವಿಜ್ಞಾನದ ಅಧ್ಯಯನಕ್ಕೆ ಅರ್ಪಿಸಿಕೊಂಡಿರುವ ನಮಗೆ, ಜನರು ಊಹಾತ್ಮಕ ತತ್ತ್ವಜ್ಞಾನಿಗಳ ಅಸಂಬದ್ಧ ಹೇಳಿಕೆಗಳಿಂದ ದಾರಿತಪ್ಪುತ್ತಿರುವುದು ನೋವಿನ ವಿಷಯವಾಗಿದೆ. ತಮಗೆ ಏನೂ ಜ್ಞಾನವಿಲ್ಲದ ಅಥವಾ ಅಲ್ಪ ಜ್ಞಾನವಿರುವ ವಿಷಯಗಳ ಬಗೆಗೆ ಅಭಿಪ್ರಾಯ ರೂಪಿಸುವ ಲೇಖನಗಳನ್ನು ಬರೆಯುವ ಲೇಖಕರ ವಿಶ್ವಾಸಾರ್ಹತೆಯನ್ನು ಪತ್ರಿಕೆಗಳು ಎಚ್ಚರದಿಂದ ಪರೀಕ್ಷಿಸಬೇಕು. ಓದುಗರನ್ನು ಕುರಿತಂತೆ ಅದು ಪತ್ರಿಕೆಗಳ ಕರ್ತವ್ಯ.

ಈ ಲೇಖನ ಶೇರ್ ಮಾಡಿ