ಮಹಾಪುರುಷ ಅಂಬರೀಷ!

ವೈವಸ್ವತ ಮನುವಿನ ಎಂಟನೆಯ ಮಗ ನಭಗ. ಇವನ ಮಗ ನಾಭಾಗ. ಬಹುಕಾಲ ಜ್ಞಾನಾರ್ಜನೆ ಮಾಡುತ್ತ ಗುರುಕುಲದಲ್ಲೆ ಇದ್ದುಬಿಟ್ಟು ಅನಂತರ ಒಮ್ಮೆ ತನ್ನೂರಿಗೆ ಬಂದಾಗ ಅವನಿಗೊಂದು ಆಘಾತ ಕಾದಿತ್ತು. ಅವನ ಸೋದರರು ತಂದೆಯ ಆಸ್ತಿಯನ್ನು ತಮ್ಮಲ್ಲೇ ಭಾಗಮಾಡಿಕೊಂಡು ಬಿಟ್ಟಿದ್ದರು. ಇವನಿಗಾಗಿ ಏನನ್ನೂ ಉಳಿಸಿಟ್ಟಿರಲಿಲ್ಲ. ಆಸ್ತಿಯ ಬಗ್ಗೆ ಸ್ವತಃ ಏನೂ ಆಸಕ್ತಿ ಇಲ್ಲದಿದ್ದರೂ ಲೋಕಾರೂಢಿಯಾಗಿ ಸೋದರರನ್ನು ಕೇಳಿದ : `ನನ್ನ ಪ್ರೀತಿಯ ಸೋದರರೇ ನಮ್ಮ ತಂದೆಯ ಆಸ್ತಿಯಲ್ಲಿ ನನ್ನ ಪಾಲಿನದೆಂದು ಏನನ್ನು  ಕೊಟ್ಟಿರುವಿರಿ?’ ಅವನ ಸೋದರರು ಅಸಹಜ ನಗೆ ಬರಿಸಿಕೊಳ್ಳುತ್ತ ಹೇಳಿದರು : `ನಮ್ಮ ಪ್ರೀತಿಯ ಸೋದರ, ನಿನಗೆ ನಮ್ಮೆಲ್ಲರ ತಂದೆಯನ್ನೇ ಆಸ್ತಿಭಾಗವಾಗಿ ಇಟ್ಟುಬಿಟ್ಟಿದ್ದೇವೆ!’

ನಾಭಾಗ ತಂದೆಯ ಬಳಿಗೆ ಬಂದು ಹೇಳಿದ : `ನನ್ನ ಪ್ರೀತಿಯ ತಂದೆಯೇ, ನನ್ನ ಪ್ರೀತಿಯ ಹಿರಿಯ ಸೋದರರು, ನಿಮ್ಮನ್ನೇ ನನ್ನ ಪಿತ್ರಾರ್ಜಿತ ಆಸ್ತಿಭಾಗವಾಗಿ ಕೊಟ್ಟಿದ್ದಾರಂತೆ. ಇನ್ನು ಮೇಲೆ ನೀವು-ನಾನು ಒಟ್ಟಾಗಿರಬೇಕು!’

ಅವನ ತಂದೆ ಶುಷ್ಕ ನಗೆ ನಕ್ಕು ಹೇಳಿದ : “ಅಯ್ಯೋ ಮಗುವೆ, ನಿನ್ನ ಅಣ್ಣಂದಿರು ನಿನಗೆ ಮೋಸ ಮಾಡಿದ್ದಾರೆ. ಐಶ್ವರ್ಯವನ್ನೆಲ್ಲ ತಮ್ಮ ತಮ್ಮಲ್ಲಿ ಹಂಚಿಕೊಂಡು ಬಿಟ್ಟಿದ್ದಾರೆ. ನಿನಗಾಗಿ ಏನನ್ನೂ ಉಳಿಸಿಟ್ಟಿಲ್ಲ. ನಾನು ನಿನ್ನ ಆಸ್ತಿ ಆಗಲು ಸಾಧ್ಯವಿಲ್ಲ!

ಮಗ ಖಿನ್ನನಾಗಿ ಮುದುಡಿ ನಿಂತದ್ದನ್ನು ನೋಡಿ ತಂದೆ ಹೇಳಿದ: `ಏನೂ ಚಿಂತಿಸಬೇಡ.  ತಂದೆಯೇ ನಿನ್ನ ಆಸ್ತಿ ಎಂದರಲ್ಲವೇ ನಿನ್ನ ಅಣ್ಣಂದಿರು, ನಾನೇ ನಿನಗೆ ಸಹಾಯ ಮಾಡುತ್ತೇನೆ. ನಾನು ಹೇಳುವುದನ್ನು ಚೆನ್ನಾಗಿ ಗಮನಿಸು. ಅಂಗೀರನ ವಂಶದವರು ಈಗೊಂದು ಮಹಾಯಜ್ಞವನ್ನು ಕೈಗೊಳ್ಳುತ್ತಿದ್ದಾರೆ. ಅವರೆಲ್ಲರೂ ಬುದ್ಧಿಶಾಲಿಗಳೇ ಆದರೂ, ಯಜ್ಞದ ಆರನೆಯ ದಿನದಂದು ದಿಗ್ಭ್ರಮೆಗೊಂಡು ದಿನಂಪ್ರತಿಯ ಆಚರಣೆಗಳಲ್ಲಿ ತಪ್ಪುಗಳನ್ನು ಮಾಡುತ್ತಾರೆ. ನೀನು ಅವರಲ್ಲಿಗೆ ಹೋಗು. ವೈಶ್ವ ದೇವನನ್ನು ಕುರಿತು ಎರಡು ವೇದ ಮಂತ್ರಗಳನ್ನು ಪಠಿಸು. ಯಜ್ಞ ಮುಕ್ತಾಯದ ಬಳಿಕ ಸ್ವರ್ಗೀಯ ಗ್ರಹವ್ಯೂಹಗಳಿಗೆ ತೆರಳುವಾಗ ಯಜ್ಞದಲ್ಲಿ ಬಂದ ಹಣದಲ್ಲಿ ಉಳಿದದ್ದನ್ನು ನಿನಗೆ ಕೊಡುತ್ತಾರೆ. ಆದ್ದರಿಂದ ತಪ್ಪದೆ ಅಲ್ಲಿಗೆ ಹೋಗು!’

ನಾಭಾಗ ಹಾಗೆಯೇ ಮಾಡಿದ. ವೈಶ್ವದೇವ ವೇದ ಮಂತ್ರಗಳನ್ನು ಪಠಿಸಿದ. ಯಜ್ಞ ಮುಗಿದ ಮೇಲೆ ಅವನ ಕೈಗೆ ಸಂಪತ್ತು ಬಂದಿತು. ಅದನ್ನು ಸ್ವೀಕರಿಸುತ್ತಿರುವಾಗ, ಉತ್ತರ ದಿಕ್ಕಿನಲ್ಲಿ ಕಪ್ಪು ವರ್ಣದ ವ್ಯಕ್ತಿಯೊಬ್ಬನು ಅಲ್ಲಿಗೆ ಬಂದ. `ಈ ಯಜ್ಞ ಸ್ಥಳದ ಸಕಲ ಸಂಪತ್ತೂ ನನಗೆ ಸೇರಿದ್ದು! ಎಂದ. ನಾಭಾಗ ಬೆದರಿ ಸುಮ್ಮನಾಗಿಬಿಡಲಿಲ್ಲ. `ಇದು ನನ್ನ ತಂದೆಯವರ ಆಜ್ಞೆ. ಇಲ್ಲಿನ ಕೀರ್ತಿಶಾಲಿ ಮಹರ್ಷಿಗಳು ಈ ಸಂಪತ್ತು ನನ್ನದಾಗಲು ಒಪ್ಪಿದ್ದಾರೆ!’ – ಎಂದು ಹೇಳಿದ. ಆಗ ಆ ಕಪ್ಪು ವರ್ಣದ ವ್ಯಕ್ತಿ – `ಸರಿ ಹಾಗಾದರೆ ಒಂದು ಕೆಲಸ ಮಾಡೋಣ. ಈ ಸಂಪತ್ತು ಯಾರಿಗೆ ಸೇರಬೇಕಾದ್ದು ಎಂದು ನಾವಿಬ್ಬರೂ ಹೋಗಿ ನಿಮ್ಮ ತಂದೆಯವರನ್ನೇ ಕೇಳೋಣ! ಎಂದು ಹೇಳಿದ. ನಾಭಾಗನಿಗಿದು   ಒಪ್ಪಿಗೆಯಾಯಿತು. ಈ ಸಂಪತ್ತು

ಪಡೆಯುವಂತೆ ಹೇಳಿದವರು ಅವರೆ, ಅವರೆಂದಂತೆ ನಡೆಯಲಿ ಎಂದುಕೊಂಡು ಅವನೊಂದಿಗೆ ತಂದೆಯಲ್ಲಿಗೆ ಬಂದು ಪ್ರಶ್ನಿಸಿದ.

ಅವನ ತಂದೆ ಹೇಳಿದ : `ಮಗು ನಾಭಾಗ, ಸಾಕ್ಷಾತ್‌ ಪರಶಿವನೆ ಈಗ ನಿನ್ನೊಂದಿಗೆ ನಿಂತಿದ್ದಾನೆ. ದಕ್ಷಯಜ್ಞ ಶಾಲೆಯಲ್ಲಿ ಏನೇನನ್ನು ಅರ್ಪಿಸಿದರೊ ಅವೆಲ್ಲವೂ ಶಿವನ ಪಾಲಿನದು ಎಂದು ಹೇಳಿಯೇ ಅರ್ಪಿಸಿದರು. ಹೀಗಾಗಿ ಆ ಯಜ್ಞ ಶಾಲೆಯಲ್ಲಿ ಸಕಲ ಸಂಪತ್ತೂ ನಿಜವಾಗಲೂ ಶಿವನಿಗೇ ಸೇರಿದ್ದಾಗಿದೆ!’ ನಾಭಾಗನಿಗೆ ಪರಿಸ್ಥಿತಿಯ ಅರ್ಥವಾಯಿತು. ಅವನಿಗೆ ಬೇಸರ-ನಿರಾಸೆಗಳಾಗಲಿಲ್ಲ. ಬದಲಾಗಿ ಸಂತೋಷವೇ ಆಯಿತು. ಕೂಡಲೇ ಅವನು ಆ ಕಪ್ಪು ವರ್ಣದ ವ್ಯಕ್ತಿ, ಶಿವನಿಗೆ ಸಾಷ್ಟಾಂಗ ನಮಸ್ಕರಿಸಿ ಹೇಳಿದ : `ಹೇ ಪೂಜಾರ್ಹನಾದ ದೇವನೇ, ಈ ಯಜ್ಞಶಾಲೆಯಲ್ಲಿರುವುದೆಲ್ಲ ನಿನ್ನದು ಎಂದು ನನ್ನ ತಂದೆ ಖಚಿತವಾಗಿ ಹೇಳಿದ್ದಾರೆ. ನನ್ನ ತಪ್ಪು ಕ್ಷಮಿಸು. ದಯವಿಟ್ಟು  ಈ ಎಲ್ಲ ಸಂಪತ್ತನ್ನೂ ನೀನೇ ಸ್ವೀಕರಿಸು. ನಿನ್ನ ಕರುಣೆ ನನ್ನ ಮೇಲೆ ಯಾವಾಗಲೂ ಇರಲಿ!’

ಶಿವನಿಗೆ ಸಂತೋಷವಾಯಿತು. ಅವನು ನಾಭಾಗನ  ತಲೆ ನೇವರಿಸಿ ಹೇಳಿದ : `ಮಗು, ನಿನ್ನ ತಂದೆ ಹೇಳಿರುವುದೆಲ್ಲ ದಿಟವೇ ಆಗಿದೆ. ನೀನೂ ಕೂಡ ಆ ಸತ್ಯ ವಾಕ್ಯಗಳನ್ನೇ ಆಡುತ್ತಿರುವೆ. ಆದ್ದರಿಂದ ವೇದ ಮಂತ್ರಗಳನ್ನು ಬಲ್ಲವನಾದ ನಾನು ಅಲೌಕಿಕವಾದ ಶಾಶ್ವತ ದಿವ್ಯಜ್ಞಾನವನ್ನು ನಿನಗೆ ನೀಡುತ್ತೇನೆ’

ನಾಭಾಗನಿಗೆ ಶಿವನ ಅನುಗ್ರಹವೂ ಆಯಿತು. ಜೊತೆಗೆ ಆ ಸಕಲ ಸಂಪತ್ತೂ ದೊರೆಯಿತು.

ಇಂತಹ ಪುಣ್ಯ ಪುರುಷ ನಾಭಾಗನಿಗೆ ಇನ್ನೂ ಮಹಾನ್‌ ಪುಣ್ಯ ಪುರುಷ ಎಂದು ಕೀರ್ತಿವಂತನಾದ ಅಂಬರೀಷ ಮಗನಾಗಿ ಜನಿಸಿದ. ಅಂಬರೀಷ ಗುರುಹಿರಿಯರಲ್ಲಿ ಗೌರವ, ದೈವಗಳಲ್ಲಿ ಅಪಾರ ನಂಬಿಕೆ-ಗೌರವಗಳನ್ನು ಉಳ್ಳವನಾಗಿದ್ದು ಉನ್ನತವಾದ ಗುಣ ಸಂಪನ್ನತೆಗೆ ಪ್ರಖ್ಯಾತನಾಗಿದ್ದನು.

ಶುಕ ಮುನಿಗಳು ಈ ಸಂದರ್ಭದಲ್ಲಿ ಹೇಳಿದರು:

`ನನ್ನ  ಪ್ರೀತಿಯ ರಾಜನೇ ಅಂಬರೀಷನ ಕುರಿತು ಒಂದು ಅಪೂರ್ವ ವಿಷಯವನ್ನು ನಿನಗೆ ಮೊದಲೇ ಹೇಳಬೇಕು ಅನ್ನಿಸುತ್ತಿದೆ. ಈ ಅಂಬರೀಷ ದೇವೋತ್ತಮ ಪರಮ ಪುರುಷನಾದ ವಾಸುದೇವನ ಪರಮ ಭಕ್ತನಾಗಿದ್ದನು. ಹಾಗೆಯೇ ಪ್ರಭುವಿನ ಭಕ್ತರಾದ ಮಹರ್ಷಿಗಳ ಭಕ್ತನೂ ಆಗಿದ್ದನು. ಈ ನಿಮಿತ್ತದಿಂದಲೇ ಅವನಿಗೆ ಅಸ್ಖಲಿತ ಬ್ರಾಹ್ಮಣನೊಬ್ಬನ ಶಾಪಕ್ಕೆ ಗುರಿಯಾಗುವಂತಾದರೂ, ಆ ಶಾಪ ತಟ್ಟಲಿಲ್ಲ. ಭಕ್ತ ಅಂಬರೀಷ ಇಂತಹ ಒಬ್ಬ ಮಹಾನುಭಾವ!’

ಪರೀಕ್ಷಿತ ರಾಜನಿಗೆ ಕುತೂಹಲವನ್ನು ಅದುಮಿಟ್ಟುಕೊಂಡಿರಲಾಗಲಿಲ್ಲ. ಅವನು ಶುಕ ಮುನಿಗಳನ್ನು ಕೇಳಿದ. `ಪೂಜ್ಯ ಗುರುಗಳೇ, ಓಹ್‌, ಎಂತಹ ವಿಷಯವಿದು? ಕೇಳರಿಯದಿರುವುದು : ಬ್ರಹ್ಮ ಶಾಪ ಫಲಿಸಲಿಲ್ಲವೇ? ದಯವಿಟ್ಟು ಏನಾಯಿತು, ಹೇಗಾಯಿತು ಎಂದು ವಿವರವಾಗಿ ತಿಳಿಸುತ್ತೀರಾ?’

ಶುಕ ಮುನಿಗಳು ಮುಂದಿನ ಕಥಾ ಭಾಗವನ್ನು ಮುಂದುವರಿಸಿದರು :

ಗುಣದಲ್ಲಿ, ನಡವಳಿಕೆಯಲ್ಲಿ, ದೈವ ಭಕ್ತಿಯಲ್ಲಿ , ರಾಜ್ಯಾಡಳಿತದಲ್ಲಿ ಅಂಬರೀಷ ಮಹಾರಾಜ ಅತ್ಯಂತ ಸುದೈವಿಯಾಗಿದ್ದನೆಂದೇ ಹೇಳಬೇಕು. ಅವನು ಸಪ್ತದ್ವೀಪಗಳನ್ನೊಳಗೊಂಡ ಸಮಸ್ತಲೋಕದ ದೊರೆತನವನ್ನು ಗಳಿಸುವಂತಾಯಿತು. ಅಕ್ಷಯವಾದ, ಮೇರೆಯರಿಯದ ಐಶ್ವರ್ಯ-ಅಭ್ಯುದಯಗಳನ್ನು ಅವನು ಸಾಧಿಸಿದನು. ಹೀಗೆಲ್ಲ ಅತ್ಯುನ್ನತ ಸಿರಿ ಸಂಪತ್ತು-ಸ್ಥಾನಮಾನಗಳನ್ನು ಹೊಂದಿದ್ದರೂ, ಇವೆಲ್ಲ ಐಹಿಕವಾದುದು, ಅಶಾಶ್ವತ ಎನ್ನುವುದು ಅವನಿಗೆ ಚೆನ್ನಾಗಿ  ಗೊತ್ತಿತ್ತು. ಮತ್ತೆ ಭಾಗವತ ಭಕ್ತನಾಗಿದ್ದುದರಿಂದ ಈ ಐಹಿಕವಾದುದೆಲ್ಲ ದಾಸ್ಯಗಳು ಎನ್ನುವ ಸಂಗತಿ ಅವನಿಗೆ ಗೊತ್ತಿತ್ತು. ಈ ಐಹಿಕ ಐಶ್ವರ್ಯ ಆಧ್ಯಾತ್ಮಿಕ ಉನ್ನತಿಗೆ ಅನರ್ಹತೆಯಾಗುವಂತಹದು ಎನ್ನುವುದೂ ಅವನಿಗೆ ತಿಳಿದಿತ್ತು. ಹೀಗಾಗಿ, ಇವೆಲ್ಲ ಐಹಿಕ ಶ್ರೀಮಂತಿಕೆಯಲ್ಲಿದ್ದರೂ ಅವನು ಯಾವುದಕ್ಕೂ ಅಂಟಿಕೊಳ್ಳದೆ, ಲೆಕ್ಕಿಸದೆ, ದೇವೋತ್ತಮ ಪರಮ ಪುರುಷ ವಾಸುದೇವನಲ್ಲಿ ತನ್ನ ಸಮಸ್ತವನ್ನೂ ಲೀನವಾಗಿಸಿ ಹಾಯಾಗಿದ್ದುಬಿಟ್ಟಿದ್ದನು.

ಅಂಬರೀಷ  ಹೀಗೆಲ್ಲ ದೇವರ ಸೇವೆ-ಧ್ಯಾನ ಮಾಡುತ್ತಲೇ ಇದ್ದ  ಎಂದ ಮಾತ್ರಕ್ಕೆ ಅವನು ಮಹಾರಾಜನಾಗಿ ತನ್ನ  ಜವಾಬ್ದಾರಿಗಳೆಲ್ಲದರಿಂದ ತಪ್ಪಿಸಿಕೊಂಡು ಬಿಟ್ಟ ಎಂದೇನಿಲ್ಲ. ಸಾಮ್ರಾಟನಾಗಿ ತನ್ನ ನಿಯತ ಕಾರ್ಯಗಳನ್ನು ಮಾಡುವುದರಲ್ಲಿ ಅವನು ತನ್ನೆಲ್ಲ ರಾಜ್ಯ ಸಂಬಂಧಿತ ಕಾರ್ಯ ಫಲಗಳನ್ನು ದೇವೋತ್ತಮ ಪರಮ ಪುರುಷನೂ ಎಲ್ಲದರ ಭೋಕ್ತನಾದರೂ ಇಂದ್ರಿಯಗಳಿಗೆ ಅತೀತನೂ ಆದ ಶ್ರೀ ಕೃಷ್ಣನಿಗೆ  ಸಮರ್ಪಿಸುತ್ತಿದ್ದನು. ಭಗವಂತನ ನಿಷ್ಠಾವಂತ ಭಕ್ತರಾದ ಬ್ರಾಹ್ಮಣರಿಂದ ಎಲ್ಲ ವಿಷಯಗಳಲ್ಲೂ ಸಲಹೆಗಳನ್ನು ಪಡೆಯುತ್ತಿದ್ದನು. ಹೀಗಾಗಿ ಸುಲಭವಾಗಿ ಭೂಮಂಡಲವನ್ನು ಸ್ವಲ್ಪವೂ ಕಷ್ಟವಿಲ್ಲದೆ ಪರಿಪಾಲಿಸಿದನು.

“ಹಿರಿಯ ಮಹಾರಾಜರೇ ಹಾಗೆ ಅಷ್ಟೊಂದು ದೈವಭಕ್ತರಾಗಿದ್ದರು. ಋತ್ವಿಕ್ಕುಗಳ  ಸಮಸಮಕ್ಕೂ ತಿಳಿದವರಾಗಿದ್ದರು. ಈ ಅಂಬರೀಷ ಮಹಾರಾಜರು ತಮ್ಮ ತಂದೆಯವರನ್ನೇ ಮೀರಿಸುವ ಹಾಗೆ ಕಾಣಿಸುತ್ತದೆ. ಓಹ್‌ ಏನು ದೈವಭಕ್ತಿ, ಏನು ಶ್ರದ್ಧೆ, ಅದೇನು ನಂಬಿಕೆ-ವಿಶ್ವಾಸ. ಜೊತೆಗೆ ಪ್ರಜೆಗಳನ್ನು ಸೌಖ್ಯವಾಗಿಡಬೇಕು ಎನ್ನುವ ಕಳಕಳಿ ಯಾವಾಗಲೂ ಅವರಲ್ಲಿರುತ್ತದೆ. ನಮ್ಮ ರಾಜ್ಯಕ್ಕೆ ಇದೊಂದು ಮಹಾ ಸೌಭಾಗ್ಯದ ಕಾಲ!’ ಎಂದು ಆ ರಾಜ್ಯದ ಮಹಾರಾಜರು ಮಾತನಾಡಿಕೊಳ್ಳುತ್ತಿದ್ದರು.

ಅಂಬರೀಷ ತನ್ನ ಮಂತ್ರಿಗಳಿಗೆ ಮತ್ತು ಅಧಿಕಾರಿಗಳಿಗೆ ಯಾವಾಗಲೂ ಹೇಳುತ್ತಿದ್ದ : `ನಾವೆಲ್ಲ ಬದುಕಿರುವುದೇ ಪ್ರಜೆಗಳಿಗಾಗಿ. ಅವರೆಲ್ಲ ಸುಖವಾಗಿರಬೇಕು. ತಮ್ಮ ತಮ್ಮ ಉದ್ಯೋಗಗಳಲ್ಲಿ ನಿಶ್ಚಿಂತೆಯಿಂದ ತೊಡಗಿಕೊಂಡಿರಬೇಕು. ಇದು ಸರಿಯಾದ ರೀತಿಯಲ್ಲಿ ಆಗುತ್ತಿದೆಯೇ ಎಂದು ಯಾವಾಗಲೂ ನಾವು ಕಣ್ಣಲ್ಲಿ ಕಣ್ಣಿಟ್ಟು ಗಮನಿಸುತ್ತಿರಬೇಕು. ಇದೇ ಪರಿಪೂರ್ಣವಾದ ಕೃಷ್ಣ ಸೇವೆ, ದೇವರ ಪೂಜೆ, ದೈವಾರಾಧನೆ. ನಾವು ಭಗವದ್ಭಕ್ತರಾಗಿದ್ದು ಶಾಂತವಾಗಿ, ನಿಷ್ಠೆಯಿಂದ ಇದ್ದರೆ, ಅದೇ ರೀತಿಯಲ್ಲಿ ಪ್ರಜಾಸೇವೆಯನ್ನೂ ಮಾಡುವುದು ಸಾಧ್ಯವಾಗುತ್ತದೆ. ನಮ್ಮ ಮನಸ್ಸು ಸದಾ ಒಳಿತನ್ನೇ ಬಯಸುತ್ತಿರಬೇಕು!

ಅಂಬರೀಷ ತನ್ನ ಪ್ರಜೆಗಳ ಕಷ್ಟ ಸುಖಗಳನ್ನು ಗಮನಿಸುತ್ತಿದ್ದ ಹಾಗೆಯೇ, ತನ್ನ ಜನರೆಲ್ಲರ ಸೌಖ್ಯಕ್ಕಾಗಿ  ಪರಮಾತ್ಮನನ್ನು ಯಾವಾಗಲೂ ಬೇಡಿಕೊಳ್ಳುತ್ತಿದ್ದ . ಪ್ರಜೆಗಳ ಒಳಿತಿಗಾಗಿ ತೀರ್ಥ ಯಾತ್ರೆಗಳನ್ನು ಮಾಡಿ ಬರುತ್ತಿದ್ದ. ತನ್ನ ಮನಸ್ಸನ್ನು ಯಾವಾಗಲೂ ಕೃಷ್ಣನ ಪಾದಕಮಲಗಳ ಧ್ಯಾನದಲ್ಲಿ ತೊಡಗಿಸಿಟ್ಟಿರುತ್ತಿದ್ದ. ಯಾವಾಗಲೂ ಕೃಷ್ಣ ವಚನಗಳನ್ನು, ಕೃಷ್ಣ ಸ್ತೋತ್ರಗಳನ್ನು ಪಠಿಸುವುದರಲ್ಲೂ ಕೇಳುವುದರಲ್ಲೂ ಕೇಳಿಸುವುದರಲ್ಲೂ ತುಂಬಾ ಗಮನ ಹರಿಸುತ್ತಿದ್ದ. ಕೃಷ್ಣನನ್ನು ಪ್ರತ್ಯಕ್ಷವಾಗಿ ನೋಡಲು ಮಥುರಾ-ವೃಂದಾವನದ ದೇವಾಲಯಗಳಿಗೆ ಹೊರಟು ಬಿಡುತ್ತಿದ್ದ ಅವನ ಕೈಕಾಲುಗಳು, ಕಿವಿ ಬಾಯಿಗಳು ಯಾವಾಗಲೂ ಭಗವಂತನ ಕೈಂಕರ್ಯಗಳಿಗೆ ತುಡಿಯುತ್ತಿದ್ದವು. ಕೃಷ್ಣ ದೇಗುಲಗಳನ್ನು  ನೋಡಲು ಕಣ್ಣುಗಳನ್ನು, ಕೃಷ್ಣ ಭಕ್ತರನ್ನು  ಸ್ಪರ್ಶಿಸಲು ಸ್ಪರ್ಶೇಂದ್ರಿಯವನ್ನು ಭಗವಂತನಿಗೆ ಅರ್ಪಿತವಾದ ತುಳಸೀ ಪರಿಮಳವನ್ನು ಆಘ್ರಾಣಿಸಲು ಘ್ರಾಣೇಂದ್ರಿಯವನ್ನು ಮತ್ತು ಭಗವತ್‌ ಪ್ರಸಾದದ  ಸವಿ ನೋಡಲು ನಾಲಿಗೆಯನ್ನು ಮೀಸಲಾಗಿರಿಸಿದ್ದನು. ಕಾಲುಗಳನ್ನು ಪ್ರಭುವಿನ ಪುಣ್ಯ ಕ್ಷೇತ್ರಗಳಿಗೆ ಅಥವಾ ದೇಗುಲಗಳಿಗೆ ನಡೆದು ಹೋಗಲು ಮತ್ತು  ತಲೆಯನ್ನು ಪ್ರಭುವಿನೆದುರು ಬಾಗಿಸಲು ಹಾಗೂ ತನ್ನೆಲ್ಲ ಅಪೇಕ್ಷೆಗಳನ್ನು ದಿನದ ಇಪ್ಪತ್ತನಾಲ್ಕು ತಾಸುಗಳ ಕಾಲವೂ ಭಗವತ್ಸೇವೆ ಮಾಡಲು ತೊಡಗಿಸಿಕೊಂಡಿದ್ದನು. ನಿಜವಾಗಿ ಅವನಿಗೆ ತನ್ನದೇ ಆದ ಯಾವ ಆಸೆಗಳೂ ಇರಲಿಲ್ಲ. ತನ್ನ ಇಂದ್ರಿಯ ತೃಪ್ತಿಗಾಗಿ ದೇವರಿಂದ ಏನನ್ನೂ ಬೇಡಲಿಲ್ಲ. ತನ್ನೆಲ್ಲ  ಇಂದ್ರಿಯಗಳನ್ನು ಭಕ್ತಿ ಸೇವೆಯಲ್ಲಿ ಹಾಗೂ ಪ್ರಭು ಸೇವೆಗೆ ಸಂಬಂಧಿಸಿದ ಅನೇಕಾನೇಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ. ಅವನ ಬದುಕಿನ ಮುಖ್ಯ ಗುರಿ, ಸಕಲ ಐಹಿಕ ಇಚ್ಛೆಗಳಿಂದ ಮುಕ್ತನಾಗುವುದು, ಪ್ರಭುವಿನಲ್ಲಿ  ಆಸಕ್ತಿ ಹೆಚ್ಚಿಸಿಕೊಳ್ಳುವುದು.

ಹೀಗೆ ಅಂಬರೀಷನ ವೈಯಕ್ತಿಕ ಜೀವನ ಮತ್ತು ಪ್ರಜಾಸೇವೆಗಳೆರಡೂ ಭಗವತ್‌ ಸೇವೆಯೇ ಆಗಿ ಹೋಗಿತ್ತು. ಏಕಾಗ್ರತೆಯಿಂದ ಇದನ್ನವನು ಪಾಲಿಸಿದನು.

ಇಂತಹ ಭಗವದ್ಭಕ್ತನಾದ ಅಂಬರೀಷನಿಗೂ ಪರೀಕ್ಷಾ ಕಾಲವೊಂದು ಬಂದಿತು. ಅವನ ವ್ಯಕ್ತಿತ್ವ, ಅವನ ರಾಜ್ಯ ಅಲ್ಲೋಲ ಕಲ್ಲೋಲವಾಗುವಂತಾಯಿತು.

ಅದೇ ಬ್ರಾಹ್ಮಣ ಶಾಪ!

ಪ್ರಾಪಂಚಿಕ ಬದುಕಿನಲ್ಲಿ ಜನರೆಲ್ಲರೂ ಯಾವಾಗಲೂ ಶಾಂತಿ ಸಮೃದ್ಧಿಗಳಿಂದ ಜೀವಿಸಲು ತವಕದಿಂದಿರುತ್ತಾರೆ. ಭಗವದ್ಗೀತೆಯಲ್ಲಿ ದೇವೋತ್ತಮ ಪರಮ ಪುರುಷನು ಶಾಂತಿ ಸೂತ್ರವೊಂದನ್ನು ನೀಡಿದ್ದಾನೆ. ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಮತ್ತು ಆರ್ಥಿಕ ಆಗುಹೋಗುಗಳ ಕುರಿತು ಸಮಗ್ರ ಸಲಹೆ ನೀಡಿದ್ದಾನೆ. ಅಂಬರೀಷ ಈ ಚೌಕಟ್ಟಿನಲ್ಲಿಯೇ ರಾಜ್ಯಭಾರ ಮಾಡಿದನು. ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಂಡನು. ವೈಷ್ಣವ ಬ್ರಾಹ್ಮಣರ ಸಲಹೆ ಪಡೆದು ವೈಷ್ಣವನಂತೆ ರಾಜ್ಯವಾಳಿದನು. ಅವನ ರಾಜ್ಯ ಪಾಲನೆ ಆದರ್ಶಗಳ ಆಧಾರದಲ್ಲಿ ನಡೆಯಿತು.

ಅಂಬರೀಷನಿಗೆ ಯಾವಾಗಲೂ ಯಜ್ಞ ಯಾಗಾದಿಗಳ ಮತ್ತು ಮಹಾನ್‌ ಋಷಿಗಳ ನಂಟು ತುಂಬಾ ಇತ್ತು. ದೇವೋತ್ತಮ ಪರಮ ಪುರುಷನ ಸಂಪ್ರೀತಿಗಾಗಿ ಅಶ್ವಮೇಧ ಯಜ್ಞಗಳಂತಹ ಮಹಾಯಜ್ಞಗಳನ್ನು ಆಚರಿಸಿದನು. ಹಿರಿಯರು ಕಿರಿಯರು ಎನ್ನದೆ ಎಲ್ಲರಿಗೂ ಬೇಕಾದ ಹಾಗೆ ದಾನ ಧರ್ಮಗಳನ್ನು ಮಾಡಿದನು. ಋತ್ವಿಕ್ಕುಗಳಿಗೆ ಭೂರಿದಕ್ಷಿಣೆ ನೀಡಿದನು. ಇಷ್ಟೆಲ್ಲ ತಾನಾಗಿಯೇ ನಡೆಸಿದರೂ ಯಾವಾಗಲೂ ದೇವರನ್ನು  ತನಗಾಗಿ ಏನನ್ನೂ ಕೇಳಿಕೊಳ್ಳಲಿಲ್ಲ. ಯಥಾ ರಾಜಾ ತಥಾ ಪ್ರಜಾ ಎನ್ನುವಂತೆ ಅವನ ಪ್ರಜೆಗಳೂ ಸತ್ಯವಂತರೂ, ಧರ್ಮ ಭೀರುಗಳೂ, ದೈವ ಭಕ್ತರೂ ಆಗಿದ್ದರು. ತಮ್ಮ ರಾಜನ ರಾಜ್ಯಭಾರವನ್ನು ಅರ್ಥವತ್ತಾಗಿರುವಂತೆ ಮಾಡಿದರು. ಪ್ರಜೆಗಳ ಸದ್ವರ್ತನೆ, ಸದಾಶಯ, ಸಲಹೆಗಳು ಅಂಬರೀಷ ಮಹಾರಾಜನನ್ನು ನಿರಂತರವಾಗಿ ಕಾಪಾಡಿದವು.

`ದೇವೋತ್ತಮ ಪರಮ ಪುರುಷನಲ್ಲಿ ಅಚಲವಾದ ಭಕ್ತಿಯುಳ್ಳವನು ದೇವತೆಗಳ ಸಕಲ ಉತ್ತಮ ಗುಣಗಳನ್ನೂ ಹೊಂದಿರುತ್ತಾನೆ. ಆದರೆ, ಭಗವಂತನ ಭಕ್ತನಲ್ಲದ ವ್ಯಕ್ತಿಗೆ ಯಾವ ಬೆಲೆಯೂ ಇಲ್ಲದ ಐಹಿಕ ಅರ್ಹತೆಗಳಿರುತ್ತವೆ. ಇದು ಹೀಗೇಕೆಂದರೆ, ಭಕ್ತನಲ್ಲದವನು ಮಾನಸಿಕ ನೆಲೆಯಲ್ಲಿ ಸುಳಿದಾಡುತ್ತಿರುತ್ತಾನೆ ಮತ್ತು ಕಣ್ಣು ಕೋರೈಸುವ ಭೌತಿಕ ಶಕ್ತಿಯಿಂದ ಆಕರ್ಷಿತನಾಗುತ್ತಾನೆ! ಎಂದು ಆ ಕಾಲದ ಋಷಿಗಳು ಅಂಬರೀಷನ ಉನ್ನತ ಗುಣಗಳ ವಿಶ್ಲೇಷಣೆ ಮಾಡುತ್ತಿದ್ದರು.

ಹೀಗಿರುವಾಗ ಒಂದು ದಿವಸ ಅವನನ್ನು ನೋಡಲು ಹಿರಿಯ ಮಹರ್ಷಿಗಳ ಗುಂಪೇ ಬಂದಿತ್ತು. ಅವರಲ್ಲಿ ವಸಿಷ್ಠ ಋಷಿಗಳು, ಅಸಿತರು ಮತ್ತು ಗೌತಮರು ಪ್ರಮುಖರಾಗಿದ್ದರು.

ಅಂಬರೀಷ ಮಹಾರಾಜನಿಗೂ, ಅವನ ರಾಣಿಗೂ, ಮಕ್ಕಳಿಗೂ ಅರಮನೆಯಲ್ಲಿದ್ದ ಬಂಧು ಬಾಂಧವರಿಗೂ, ಮಂತ್ರಿಗಳು, ಪಂಡಿತರು ಮೊದಲಾದವರಿಗೂ ಆದ ಸಂತೋಷಕ್ಕೆ ಮೇರೆಯೇ ಇಲ್ಲ. ಸ್ವರ್ಗ ಲೋಕವೇ ತಮ್ಮಲ್ಲಿಗೆ ಬಂದಿದೆ ಎಂಬಂತನ್ನಿಸುತ್ತಿದ್ದ ಆ ಮುನಿ ಸಮೂಹದ ಪ್ರಕಾಶಮಾನ ಇರವು ಎಲ್ಲರಲ್ಲೂ ವಿದ್ಯುತ್ಸಂಚಾರವನ್ನುಂಟುಮಾಡಿತ್ತು. ಇಡೀ ಅರಮನೆಯೇ ಅವರ ಸ್ವಾಗತ ಮತ್ತು ಸತ್ಕಾರಕ್ಕೆ ಗೌರವದಿಂದ ಸಿದ್ಧವಾಯಿತು.

ಅಂಬರೀಷ ಮಹಾರಾಜ ಮತ್ತವನ ಪತ್ನಿಯು ಋಷಿಪುಂಗವರ ಪಾದಗಳನ್ನು  ತೊಳೆದು ಧನ್ಯರಾದೆವೆಂದುಕೊಂಡರು. ಅಲ್ಲಿದ್ದವರೆಲ್ಲರೂ ಪೂಜ್ಯರಿಗೆಲ್ಲ ಸಾಷ್ಟಾಂಗ ನಮಸ್ಕಾರ ಮಾಡಿ ಆಶೀರ್ವಾದ ಪಡೆದುಕೊಂಡರು. ಮುನಿವರ್ಯರಿಗೆಲ್ಲ ಆಯಾಸ ಪರಿಹಾರಮಾಡಿಕೊಳ್ಳಲು ಅನುವು ಮಾಡಿಕೊಟ್ಟು ಅವರಿಗೆ ಭೋಜನಾದಿ ಸತ್ಕಾರಗಳನ್ನು ಅಂಬರೀಷ ಮಹಾರಾಜ ಮಾಡಿದ.

ಮುನಿ ಸಮೂಹ ಸಂತೃಪ್ತವಾಯಿತು. ಹಿರಿಯ ಋಷಿಗಳು ಸಂತಸದಿಂದ ವಿರಾಜಿಸಿದರು. ಅಂಬರೀಷನನ್ನು, ಮಡದಿ-ಮಕ್ಕಳನ್ನೂ ತಲೆ ನೇವರಿಸಿ ಆಶೀರ್ವದಿಸಿದರು.

`ಇಷ್ಟೊಂದು ಮಂದಿ ಮುನಿಗಳು ಒಮ್ಮೆಗೆ ಬಂದದ್ದು ಏಕಿರಬಹುದು, ಯಾವ ರಾಜಕಾರಣವಿರಬಹುದು, ನನ್ನಿಂದೇನಾಗಬೇಕು?’ ಎಂದೆಲ್ಲ ಕೇಳಬೇಕೆಂದು ಮಹಾರಾಜನಿಗೆ ಅನ್ನಿಸಿದರೂ ಅವನಿಂದ ಮಾತುಗಳು ಹೊರಬರಲಿಲ್ಲ. `ಏಕೆ ಬಂದಿರಿ, ನನ್ನಿಂದೇನಾಗಬೇಕು? ಎಂದು ಕೇಳುವುದು ಉದ್ಧಟತನದ ವರ್ತನೆಯಾದೀತು, ಅವರೆಲ್ಲ ವಿಶ್ರಮಿಸಿಕೊಳ್ಳಲಿ, ಅವರೇ ಮಾತನಾಡಲಿ ಎಂದವನು ಸುಮ್ಮನಿದ್ದುಬಿಟ್ಟ. ಹಿರಿಯರ ಪಾದಗಳನ್ನು  ಮೃದುವಾಗಿ ಅದುಮುತ್ತ ಅವರೆಲ್ಲರ ಮುಂದೆ ಕುಳಿತುಬಿಟ್ಟ.

ವಸಿಷ್ಠರಿಗೆ ಅಂಬರೀಷನ ಮನದಾಳದ ಸಂಕೋಚದ ಸುಳಿವು ಸಿಕ್ಕಿತು.

ಅವರೇ ಮೊದಲು ಮಾತು ಪ್ರಾರಂಭಿಸಿದರು.

`ಅಂಬರೀಷ ಮಹಾರಾಜ, ನಾವೆಲ್ಲರೂ ನಿನ್ನ ರಾಜ್ಯವನ್ನು ಪರಿಶೀಲಿಸಿಕೊಂಡು, ನಿನ್ನ ಪ್ರಜೆಗಳನ್ನು ಮಾತನಾಡಿಸಿಕೊಂಡು ಎಲ್ಲ ಕಡೆಯೂ ಸಂಚರಿಸಿಕೊಂಡು ಬರುತ್ತಿದ್ದೇವೆ. ಎಲ್ಲೆಲ್ಲೂ ನಿನ್ನ ವ್ಯಕ್ತಿತ್ವದ ಗುಣಗಾನ, ರಾಜ್ಯ ಭಾರದ ಬಗ್ಗೆ ಮೆಚ್ಚುಗೆ, ಎಲ್ಲೆಲ್ಲೂ ಸುಖ ಸಂತೋಷಗಳ ಮೆರೆಯುವಿಕೆ ಇವನ್ನೆಲ್ಲ ನಮಗೆ ಕಾಣುವಂತಾಯಿತು. ನಮ್ಮೆಲ್ಲರ ಮೆಚ್ಚಿನ ದೊರೆ ಸಾರ್ಥಕವಾಗಿ ಬದುಕು ಸಾಗಿಸುತ್ತಿದ್ದಾನೆ. ದೈವ ಭಕ್ತಿಯನ್ನೂ, ಧರ್ಮವನ್ನೂ, ಆದರ್ಶವನ್ನೂ ಎಲ್ಲೆಲ್ಲೂ ಹಬ್ಬಿಸುತ್ತಿದ್ದಾನೆ,  ಎನ್ನುವುದು  ತಿಳಿದಾಗ ನಮಗೆ ಆನಂದ ತಡೆಯಲಿಕ್ಕಾಗಲಿಲ್ಲ. ಕೂಡಲೇ ನಿನ್ನನ್ನು ನೋಡಿ ಅಭಿನಂದನೆ  ಸಲ್ಲಿಸಬೇಕು ಎಂದು ನಮ್ಮೆಲ್ಲರ ಮನಸ್ಸಿಗೆ ಬಂದಿತು. ತತ್‌ಕ್ಷಣ ಅರಮನೆಯ ದಾರಿಯನ್ನು ಹಿಡಿದೆವು. ಇಗೋ ಈಗ ನಿನ್ನ ಮುಂದೆ ಬಂದು ಉಪಸ್ಥಿತರಾಗಿದ್ದೇವೆ!’

ಅಂಬರೀಷ ಮಹಾರಾಜನಿಗೆ ಏನು ಮಾತನಾಡುವುದೆಂದೇ ತಿಳಿಯಲಿಲ್ಲ. ಸಂತೋಷ ಗೌರವಗಳಿಂದ ಅವನ ಹೃದಯ ತುಂಬಿ ಬಂದು, ಮನಸ್ಸು ಮೂಕವಾಗಿತ್ತು.

ಮಾತು ಹೊರಡುವುದೇ ಕಷ್ಟವಾಯಿತು.

ಆಗ ಗೌತಮರು ಮಾತನಾಡಿದರು :

`ರಾಜನ್‌, ಎಲ್ಲೆಲ್ಲೂ ರಕ್ತಪಾತ, ಶೋಷಣೆ, ರಾಜ್ಯದಾಹ, ದೈವದ್ರೋಹಗಳು ಆಗುತ್ತಿರುವ  ಈ ಕಾಲದಲ್ಲಿ  ನೀನು ಅಪರೂಪವಾಗಿ ಎತ್ತರದಲ್ಲಿ ನಿಂತಿದ್ದೀಯ. ನಿನ್ನನ್ನು ನೋಡಬೇಕು, ನಿನ್ನನ್ನು ಮಾತನಾಡಿಸಬೇಕು. ನಿನ್ನೊಂದಿಗೆ ಯಜ್ಞಯಾಗಾದಿಗಳಲ್ಲಿ ಭಾಗವಹಿಸಬೇಕು ಎಂದು ಇಲ್ಲಿ ಬಂದಿರುವ ಮುನಿವರ್ಯರುಗಳೆಲ್ಲ ಆಶಿಸಿದರು. ವಸಿಷ್ಠರು ಮತ್ತು ನಾನು ನಿನ್ನೊಂದಿಗೆ ಬೇಕಾದ ಹಾಗೆ ದೇವ ಕಾರ್ಯ ನಡೆಸಿದ್ದೇವೆ. ಆ ಸಂತೋಷ ಸಂದರ್ಭಗಳ ನೆನಪು ಎಂದೆಂದಿಗೂ ನಮ್ಮಲ್ಲಿ ಉಳಿದಿದೆ. ಇಂತಹ ಸಂತೋಷ ಅನುಭವಗಳನ್ನು ತಾವೂ ಪಡೆಯಬೇಕೆಂದು ಈ ಋಷಿಗಳೆಲ್ಲರೂ ನಮ್ಮೊಂದಿಗೆ ಬಂದಿದ್ದಾರೆ.!

ಆನಂದದಿಂದ ಮೈಮರೆತ ಅಂಬರೀಷ ಮಹಾರಾಜ ವಿನೀತನಾಗಿ ಹೇಳಿದ :

`ಪೂಜ್ಯ ಮುನಿವರ್ಯರ ಮಾತುಗಳನ್ನು ಕೇಳುತ್ತ, ನಾನು ನಡೆಯುತ್ತಿರುವ ದಾರಿ ಸರಿಯಾಗಿದೆ ಎಂದೇ ನನಗನ್ನಿಸುತ್ತಿದೆ. ನಿಮ್ಮ ಅನುಗ್ರಹ-ಮಾರ್ಗದರ್ಶನಗಳಿಂದ ನಾನು ಇಷ್ಟಾದರೂ ಉಳಿದಿದ್ದೇನೆ. ನಾನು, ನನ್ನದೆಲ್ಲವೂ ನಿಮ್ಮದು. ನಾನು, ನೀವು ಹೇಳಿದಂತೆ ಕೇಳುವ ಬರೀ ಆಜ್ಞಾಧಾರಕ ಮಾತ್ರ. ನಿಮ್ಮ ಆಜ್ಞೆಯನ್ನು ವಿಷದಪಡಿಸಿದರೆ ಅದನ್ನು ದೈವಾಜ್ಞೆ ಎಂಬಂತೆ ನನ್ನ ತಲೆಯ ಮೇಲಿಟ್ಟುಕೊಂಡು ನಡೆಸುತ್ತೇನೆ.

ಋಷಿ ಸಮೂಹ ಅವನನ್ನು ಮೆಚ್ಚುಗೆಯಿಂದ ನೋಡಿತು. ಇಷ್ಟು ದೊಡ್ಡ ಸಾರ್ವಭೌಮ ಹೀಗೆ ಅತಿ ಸರಳವಾಗಿ, ನಮ್ರನಾಗಿ ಕೈ ಜೋಡಿಸಿ ನಿಂತಿರುವುದನ್ನು ಕಂಡು ಸಂತಸಗೊಂಡಿತು. ಎಲ್ಲರೂ ಕೈ ಎತ್ತಿ ಆಶೀರ್ವಾದ ವಚನಗಳನ್ನು ಹೇಳಿದರು.

ಅನಂತರ ವಸಿಷ್ಠರು ಹೇಳಿದರು :

`ರಾಜನ್‌, ನೀನು ಯಾವಾಗಲೂ ದೇವ ಕಾರ್ಯಗಳಲ್ಲಿ, ಯಜ್ಞ ಯಾಗಾದಿಗಳಲ್ಲಿ ಮುಳುಗಿರುವವನು. ಹೊಸದಾಗಿ ನಿನಗೇನನ್ನೂ ಹೇಳಬೇಕಾಗಿಲ್ಲ. ಆದರೂ ನೀನೊಂದು ಮಹಾಯಜ್ಞವನ್ನು ಮಾಡಿ, ನಾವೆಲ್ಲ ಅದರಲ್ಲಿ ಭಾಗವಹಿಸಬೇಕು ಎಂದು ನಮಗೆಲ್ಲ ಬಹಳ ಅನ್ನಿಸಿದೆ.  ನಾವೆಲ್ಲ ಇಲ್ಲಿದ್ದು ನಿನ್ನ ಯಜ್ಞವನ್ನು ಪೂರೈಸಿಕೊಟ್ಟು, ದೇವತಾರ್ಪಣ ಮಾಡಿ ಮುಂದೆ ಹೋಗಬೇಕೆಂದು ನಮಗೆಲ್ಲ ಬಯಕೆಯಾಗಿದೆ. ಬಹುಶಃ ಮುಂದೆ ಘಟಿಸಲಿರುವ ಕೆಲವಾರು ಆಗುಹೋಗುಗಳಿಗೆ, ನಿನಗೆ ಮತ್ತು ನಿನ್ನ ರಾಜ್ಯಕ್ಕೆ ಸಂರಕ್ಷಣೆಯ ಅನುಗ್ರಹವು ಆಗಬೇಕು ಎಂದು ನಮಗೆ ಅನ್ನಿಸಿದೆ!’

ಅಂಬರೀಷನಿಗೆ ಪೂಜ್ಯ ಮುನಿಗಳ ಮಾತುಗಳನ್ನು  ಕೇಳಿದಾಗ ಒಂದು ಎಚ್ಚರದ ಒಳಸೆಳೆತ ಇದೆಯೆಂಬಂತೆ ಅನ್ನಿಸಿತು. ಭವಿಷ್ಯದ ಬಗ್ಗೆ ದೂರದೃಷ್ಟಿಯಿಂದ ತಿಳಿದು ನನಗೆ ಅನುಗ್ರಹ ಮಾಡಲು ಋಷಿಗಳು ಬಂದಿದ್ದಾರೆ. ಮತ್ತೆ ಎಲ್ಲ ಸಾಧನೆ-ಹೊಗಳಿಕೆಗಳಲ್ಲಿ ನನ್ನ ತಲೆ ತಿರುಗದಂತಿರಲು ನನ್ನನ್ನು ಎಚ್ಚರಿಸಲು ಬಂದಿದ್ದಾರೆ. ಆಪತ್ತುಗಳನ್ನು ತಪ್ಪಿಸಲು ಬಂದಿದ್ದಾರೆ ಎನ್ನಿಸಿತು. ಕೂಡಲೇ ಹೇಳಿದ :

`ಪೂಜ್ಯ ಗುರುಗಳೇ, ನೀವು ಏನೇ ಹೇಳಿದರೂ ಅದು ನನ್ನ ಮೇಲೆ, ಈ ರಾಜ್ಯದ ಮೇಲೆ ದೊಡ್ಡ ಕರುಣೆಯಿಂದ  ಹೇಳುವ ಮಾತುಗಳೇ ಆಗಿರುತ್ತವೆ ಎನ್ನುವುದು ಗೊತ್ತು. ಸರ್ವಪೀಡೆಗಳೂ ಪರಿಹಾರವಾಗುತ್ತವೆ ಎನ್ನುವ ಧೈರ್ಯ ನನ್ನದು. ನಿಮ್ಮೆಲ್ಲರ  ಆಜ್ಞೆಯಂತೆ ರಾಜ್ಯಭಾರವನ್ನು ಮಾಡುತ್ತಿದ್ದೇನೆ, ನನ್ನ ಪ್ರಜೆಗಳನ್ನು ಕಾಪಾಡುವ ಭಾರ ನಿಮ್ಮದು. ನೀವೆಲ್ಲ ಹೇಳಿದಂತೆ ನಡೆಯುತ್ತೇನೆ!’

ಅಸಿತ ಮುನಿಗಳು ಹೇಳಿದರು :

`ಅಂಬರೀಷ ಮಹಾರಾಜ, ನಿನಗೆ ಎಲ್ಲರ ಆಶೀರ್ವಾದ-ಅನುಗ್ರಹಗಳು ದೊರಕಲಿ, ದೈವಾನುಗ್ರಹ ಎಂದೆಂದಿಗೂ ಇರಲಿ. ಮತ್ತೆ ನಾವೆಲ್ಲ  ಸಂಚರಿಸುತ್ತ ಚರ್ಚಿಸಿಕೊಂಡೆವು. ನೀನು ಅಶ್ವಮೇಧದಂತಹ ಮಹಾಯಜ್ಞವನ್ನು ಮಾಡಿ ಕೆಲ ಕಾಲವೇ ಆಯಿತು. ಸಕಲ ಯಜ್ಞಗಳ ಸ್ವಾಮಿಯಾದ ದೇವೋತ್ತಮ ಪರಮ ಪುರುಷನನ್ನು ಸುಪ್ರೀತಗೊಳಿಸಲು ವೈಭವಯುತವಾಗಿ ಸೂಕ್ತ ಪರಿಕರಗಳೊಂದಿಗೆ ಈ ಯಜ್ಞ ಆಚರಿಸು. ನಿನಗೆ ಸರ್ವ ವಿಧದಲ್ಲೂ ಒಳ್ಳೆಯದಾಗುತ್ತದೆ. ಈ ಋಷಿವರ್ಯರಿಗೆಲ್ಲ ನಿನ್ನ ಯಜ್ಞ ಸಂಭ್ರಮದಲ್ಲಿ ಭಾಗವಹಿಸಿ, ದಾನ ಧರ್ಮಗಳನ್ನು ಪಡೆದ ಸಂತೋಷವಾಗುತ್ತದೆ!’

ಅಂಬರೀಷನಿಗೆ ತುಂಬಾ ಸಂತೋಷವಾಯಿತು. ಯಜ್ಞವೊಂದನ್ನು, ಅದರಲ್ಲೂ ಅಶ್ವಮೇಧದಂತಹ ಮಹಾ ಯಜ್ಞವೊಂದನ್ನು ಮಾಡುವುದು ಎಷ್ಟು ಕಷ್ಟ ಎನ್ನುವುದು ಅವನಿಗೆ ಗೊತ್ತು. ಯಜ್ಞ ನಡೆಸಿಕೊಡುವ ಋತ್ವಿಕ್ಕುಗಳಿಗೂ, ಋಷಿಗಳಿಗೂ ಹೇಳಿ ಕಳುಹಿಸುತ್ತ, ಪ್ರಾರ್ಥಿಸುತ್ತ, ಆಹ್ವಾನಿಸುತ್ತ ಎಷ್ಟೊಂದು ಜನ ಅಲೆಯಬೇಕು ಎನ್ನುವುದು ಅವನಿಗೆ ಅನುಭವವಾಗಿದ್ದ ವಿಷಯ.

ಈಗ ಅಚಾನಕ್‌ ಅವರೇ ಬಂದಿದ್ದಾರೆ. ಮಹಾಯಜ್ಞ ಮಾಡು ನಾವೆಲ್ಲ ಇದ್ದೇವೆ ಎನ್ನುತ್ತಿದ್ದಾರೆ. ಇದಲ್ಲವೇ ದೈವ ನಿಮಿತ್ತ, ದೈವಾನುಗ್ರಹ!

ಅಂಬರೀಷ ಹೇಳಿದ :

`ಪೂಜ್ಯರೇ, ಇದಕ್ಕಿಂತಲೂ ಸಂತೋಷದ ಕೈಂಕರ್ಯ ನಮಗೆಲ್ಲ ಬೇರೆ ಯಾವುದಿದೆ? ಈ ಕ್ಷಣದಿಂದಲೇ ನಾವು ಕೆಲಸ ಪ್ರಾರಂಭಿಸೋಣ. ನೀವೆಲ್ಲ ಇಲ್ಲೇ ಉಳಿದು ಎಲ್ಲ ಕೆಲಸಗಳನ್ನೂ ಪರಾಮರ್ಶಿಸಿ, ಮಾರ್ಗದರ್ಶಿಸಿ ಅನುಗ್ರಹ ಮಾಡಬೇಕೆಂದು ಬೇಡಿಕೊಳ್ಳುತ್ತೇನೆ!’

“ತಥಾಸ್ತು!”-ಎಂದರು ಮುನಿವರ್ಯರೆಲ್ಲರೂ ಏಕ ದನಿಯಲ್ಲಿ.

ಅಂದಿನಿಂದ ಅರಮನೆಯಲ್ಲಿ, ಇಡೀ ಸಂಸ್ಥಾನದ ಪ್ರತಿಯೊಂದು ಮನೆಗಳಲ್ಲಿ ಸಂಭ್ರಮ ಪ್ರಾರಂಭವಾಗಿತ್ತು. ಮಹಾರಾಜ ಅಂಬರೀಷ ಅಶ್ವಮೇಧ ಮಹಾಯಜ್ಞ ಮಾಡುತ್ತಾನೆಂದು ಎಲ್ಲರಿಗೂ ಮಹದಾನಂದವಾಗಿತ್ತು. ಎಲ್ಲರೂ ಕಾತುರದಿಂದ ಆ ಮಹಾ ದಿನಕ್ಕಾಗಿ ಎದುರು ನೋಡುವಂತಾಯಿತು. ಸುತ್ತಮುತ್ತಲ ಊರುಗಳಿಂದ, ರಾಜ್ಯಗಳಿಂದ, ಕಾಡು ಪರ್ವತ ಪ್ರದೇಶಗಳಿಂದ ಅಖಂಡವಾಗಿ ಜನರು ಬಂದರು, ಮುನಿಗಳು, ಅಧ್ವರ್ಯುಗಳು, ಕೆಲಸಗಾರರು, ಪಾಕ ಪ್ರವೀಣರು, ಯೋಧರು ಬಂದರು. ಬೇರೆ ಬೇರೆ ರಾಜ್ಯಗಳ ರಾಜ ವಂಶದವರು ಸಹಕಾರದ ನಿರೂಪ  ಕಳುಹಿಸಿದರು. ಕಲಾವಿದರು, ಸಂಗೀತಗಾರರು, ನೃತ್ಯಾಂಗನೆಯರು ರಾಜ್ಯದ ಜನ ಸಂಭ್ರಮದಲ್ಲಿ ಭಾಗವಹಿಸಲು ಬಂದರು.

ಇಡೀ ರಾಜ್ಯವೇ ದೈವೋನ್ಮಾದದಲ್ಲಿ ಮುಳುಗಿ ತೇಲಲಾರಂಭಿಸಿತು.

ರಾಜ್ಯದ ನಗರ ಪ್ರದೇಶ ಮತ್ತು ವನ ಪ್ರದೇಶಗಳೆರಡೂ ಒಂದಾಗಿ ಹೋದಂತೆ, ಜನಗಳು ಎರಡು ಕಡೆಗಳಲ್ಲೂ ಓಡಾಡಲಾರಂಭಿಸಿದರು. ಊರಿನ ಮಹಾ ಛತ್ರಗಳೆಲ್ಲ ಹೊರ ಊರಿನವರಿಂದ ತುಂಬಿ ಹೋಯಿತು. ಬಂಧು ಬಳಗದವರೆಲ್ಲ ಬಂದು ತಮ್ಮ ತಮ್ಮ ನೆಂಟರ ಮನೆಗಳಲ್ಲಿ ಉಳಿದುಕೊಂಡರು.

ಮಹಾ ಸಂಭ್ರಮದಲ್ಲಿ ವನಾಶ್ರಮದಲ್ಲಿ ಅಶ್ವಮೇಧಯಾಗದ ಕೆಲಸಗಳು ಪ್ರಾರಂಭವಾದವು. ವಸಿಷ್ಠರು, ಅಸಿತರು, ಗೌತಮರು ಮೊದಲಾಗಿ ಎಲ್ಲ ಋಷಿಗಳು ಅಲ್ಲಿ ನೆರೆದರು. ಸಾವಿರಾರು ಮಂದಿ ವಟುಗಳು, ಮುನಿ ಶಿಷ್ಯರು ಕೆಲಸ ಕಾರ್ಯಗಳಿಗಾಗಿ ಓಡಾಡಿದರು. ವೇದ ಮಂತ್ರ ಘೋಷಗಳು ಅಷ್ಟ ದಿಕ್ಕುಗಳನ್ನು ಹರಡಿಕೊಂಡವು. ಯಜ್ಞ ಮೊದಲಾಯಿತು.

ಮಹಾರಾಜ ಅಂಬರೀಷ ನೆರವೇರಿಸಿದ ಯಜ್ಞದಲ್ಲಿ ನೆರೆದಿದ್ದ ಸಭಾಸದರು ಮತ್ತು ಪುರೋಹಿತರು, ವಿಶೇಷವಾಗಿ ಹೋತಾ, ಉದ್ಗಾತಾ ಬ್ರಹ್ಮ ಮತ್ತು ಅಧ್ವರ್ಯುಗಳು, ಉಜ್ವಲವಾದ ವಸ್ತ್ರಗಳಿಂದ ಕಂಗೊಳಿಸುತ್ತಿದ್ದ ಸಾಕ್ಷಾತ್‌ ದೇವತೆಗಳಂತೆಯೇ ಕಾಣುತ್ತಿದ್ದರು. ಯಜ್ಞ ಸಾಂಗವಾಗಿ ನೆರವೇರುವುದನ್ನೇ ಅವರು ಎದುರು ನೋಡುತ್ತಿದ್ದರು.

ಮಹಾರಾಜ ಅಂಬರೀಷನ ರಾಜ್ಯದ ಪ್ರಜೆಗಳಿಗೆ ದೇವೋತ್ತಮ ಪರಮ ಪುರುಷನ ನಾಮ ಸಂಕೀರ್ತನೆ ಹಾಗೂ ಶ್ರವಣಗಳು ರೂಢಿಯಾಗಿದ್ದವು. ಅವೆರಡೂ ಆ ಯಜ್ಞದ ಪರಿಸರದಲ್ಲಿ ಧಾರಾಳವಾಗಿ ಜರುಗಿದವು.

ಅಶ್ವಮೇಧಯಜ್ಞ ಸಾಂಗವಾಗಿ ನಡೆದು ಮುಗಿದ ಮೇಲೆ ಎಲ್ಲ ಋಷಿಗಳೂ ಸಂತಸಗೊಂಡರು. ಮಹಾನ್‌ ಕಾರ್ಯವೊಂದರಲ್ಲಿ ಭಾಗವಹಿಸಿ ಸಾಧಿಸಿದವರಂತೆ ಸುಪ್ರೀತರಾದರು. ಅಂಬರೀಷ ಮಹಾರಾಜನನ್ನು ಅವನ ಸಂಸಾರ, ಬಂಧು ಬಾಂಧವರು, ರಾಜ್ಯ, ಪ್ರಜೆಗಳು ಎಲ್ಲರನ್ನೂ ಮನಸಾರೆ ಹರಸಿದರು.

ವಸಿಷ್ಠರು ಕೊನೆಯ ಮಾತಾಗಿ ಹೇಳಿದರು :

`ಯಜ್ಞವಿಲ್ಲದೆ ಹೋದರೆ ಮಳೆಯು ಬೀಳದು. ಮಳೆ ಬೀಳದಿದ್ದರೆ ಆಹಾರ ಧಾನ್ಯಗಳು ಬೆಳೆಯುವುದಿಲ್ಲ. ಕ್ಷಾಮಗಳು ತಲೆದೋರುತ್ತವೆ. ಅನ್ನಾದ್‌ ಭವಂತಿ ಭೂತಾನಿ, ಅಂದರೆ ಆಹಾರ ಧಾನ್ಯಗಳಿಲ್ಲದೆ ಮನುಷ್ಯರು, ಪ್ರಾಣಿಗಳೂ ಹಸಿವಿನಿಂದ ಬಳಲುತ್ತಾರೆ. ಆದ್ದರಿಂದ ರಾಜನು ಯಜ್ಞವನ್ನು ಮಾಡಬೇಕಾಗಿದೆ!

ಮಹಾಯಜ್ಞ ಮುಗಿದು, ಎಲ್ಲ ಅವಸರವಸರದ ಕೆಲಸ ಕಾರ್ಯಗಳೂ ಕಳೆದು ಹೋಗಿ, ಎಲ್ಲರೂ ಅವರವರ ತಾಣಗಳಿಗೆ ಹೊರಟು ಹೋದ ಮೇಲೆ, ಮಹಾರಾಜ ಅಂಬರೀಷ  ತನ್ನ ಎಂದಿನ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಕೊಂಡ. ಅವನ ಇಂದ್ರಿಯಗಳು ಐಹಿಕ  ಸುಖಗಳಿಂದ ಮುಕ್ತವಾಗಿದ್ದವು. ಭಕ್ತಿ ಸೇವೆಯೇ ಆಧ್ಯಾತ್ಮಿಕ ಎಂದವನು ಬಲವಾಗಿ ನಂಬಿದ್ದ. ಯಾವಾಗಲೂ ಭಗವತ್‌ ಚಿಂತನೆ, ಸಂಕೀರ್ತನೆ ಮತ್ತು ಶ್ರವಣಗಳಲ್ಲಿ ಮನಸ್ಸು ಹರಿಸಿದ. ಭಗವಂತನ ಭಕ್ತಿ ಸೇವೆಯನ್ನು ಮಾಡುವ ಪ್ರಯತ್ನದಲ್ಲಿ ಅತ್ಯುಗ್ರವಾದ ತಪಶ್ಚರ್ಯೆಗಳನ್ನಾಚರಿಸಿದ. ತನ್ನ ಸ್ವಭಾವಜನ್ಯ ಕ್ರಿಯೆಗಳಿಂದ ದೇವೋತ್ತಮ ಪರಮ ಪುರುಷನನ್ನು ಸದಾ ತುಷ್ಟಿಗೊಳಿಸುತ್ತ, ಕ್ರಮೇಣ ತನ್ನೆಲ್ಲ ಐಹಿಕ ಅಪೇಕ್ಷೆಗಳನ್ನು ತೊರೆದ. ಗೃಹ ಕೃತ್ಯಗಳು, ಮಿತ್ರರು, ಪತ್ನಿ-ಪುತ್ರರು, ಬಂಧು ಬಾಂಧವರು ಇವರುಗಳ ಮೇಲಿನ ಎಲ್ಲ ಆಸಕ್ತಿಗಳನ್ನೂ ಕಳೆದುಕೊಂಡ. ಅಶಾಶ್ವತವೂ, ಐಹಿಕವೂ ಆದದ್ದೆಂದು ಭಾವಿಸಿ, ಬಲಶಾಲಿಗಳಾದ ಆನೆಗಳು, ಮನೋಹರವಾದ ರಥಗಳು, ವಾಹನಗಳು, ಕುದುರೆಗಳು, ಅಕ್ಷಯವಾದ ಅಮೂಲ್ಯ ಆಭರಣಗಳು, ಶೃಂಗಾರ ಭೂಷಣಗಳು, ವಸ್ತ್ರಾಲಂಕಾರಗಳು ಹಾಗೂ ಅಕ್ಷಯವಾದ ರಾಜ್ಯ ಕೋಶಗಳು – ಇವೆಲ್ಲವುಗಳ ಮೇಲಿನ ಮೋಹವನ್ನು ಕೂಡ ಅವನು ತೊರೆದು ಬಿಟ್ಟ.

ಮಹಾರಾಜ ಅಂಬರೀಷನ ಅಪ್ಪಟ ಭಕ್ತಿಯಿಂದ ಸುಪ್ರೀತನಾದ ದೇವೋತ್ತಮ ಪರಮ ಪುರುಷನು ಪ್ರತ್ಯಕ್ಷನಾಗಿ, ಅರಿಭಯಂಕರವೂ ಭಕ್ತ ರಕ್ಷಕವೂ ಆಗಿದ್ದ ತನ್ನ ಸುದರ್ಶನ ಚಕ್ರವನ್ನು ನೀಡಿದನು.

ಅಂಬರೀಷ ಮಹಾರಾಜ ಹೀಗೆ ಎಲ್ಲ ಲೋಕಗಳವರ ಪ್ರೀತಿ ಪಾತ್ರನಾಗಿ, ಸದಾ ದೈವ ಚಿಂತನೆಯಲ್ಲಿ ತೊಡಗಿದ್ದಾಗಲೇ ಅವನಿಗೊಂದು ಶಾಪ ತಟ್ಟುವ ಪ್ರಸಂಗ ಎದುರಾಯಿತು. ಅದಾದದ್ದು ಹೀಗೆ!

ಶ್ರೀ ಕೃಷ್ಣ ಪೂಜೆಯ ಅಂಗವಾಗಿ ಮಹಾರಾಜ ಅಂಬರೀಷನೂ, ಆತನಷ್ಟೇ ಭಕ್ತಳಾಗಿದ್ದ ಅವನ ರಾಣಿಯೂ, ಏಕಾದಶಿ  ಮತ್ತು ದ್ವಾದಶಿಗಳ ವ್ರತವನ್ನು ಒಂದು ವರ್ಷ ಪರ್ಯಂತ ಆಚರಿಸಿದರು. ಈ ವ್ರತವನ್ನು ಒಂದು ವರ್ಷ ಕಾಲ ಆಚರಿಸಿದ ತರುವಾಯ, ಮೂರು ರಾತ್ರಿಗಳ ಪರ್ಯಂತ ಉಪವಾಸ ಕೈಗೊಂಡು ಯಮುನಾ ನದಿಯಲ್ಲಿ ಸ್ನಾನ ಮಾಡಿ ಅಂಬರೀಷ ಮಹಾರಾಜನು ಕಾರ್ತಿಕ ಮಾಸದಲ್ಲಿ, ಹರಿಯಾದ ದೇವೋತ್ತಮ ಪರಮ ಪುರುಷನನ್ನು  ಮಧುವನದಲ್ಲಿ ಪೂಜಿಸಿದನು. ಶ್ರೀ ಕೃಷ್ಣನ ಮಹಾಭಿಷೇಕ ನೆರವೇರಿಸಿದನು. ಶ್ರದ್ಧಾ ಭಕ್ತಿಗಳಿಂದ ಕೃಷ್ಣನನ್ನೂ, ಐಹಿಕಾಪೇಕ್ಷೆಗಳಿಂದ ಮುಕ್ತರಾದ ಬಹು ಸುದೈವಿಗಳಾದ ಬ್ರಾಹ್ಮಣರನ್ನೂ ಪೂಜಿಸಿದನು. ಪ್ರತಿಯೊಬ್ಬ ಬ್ರಾಹ್ಮಣನಿಗೂ ದಾನ ನೀಡಿದನು. ಒಟ್ಟು 60 ಕೋಟಿ ಹಸುಗಳನ್ನು ದಾನವಾಗಿ ನೀಡಿದನು. ಪ್ರತಿಯೊಂದು ಹಸುವು ಬಹು ಸುಂದರವೂ, ಶಾಂತ ಸ್ವಭಾವದವೂ ಆಗಿದ್ದವು. ಅವುಗಳ ಕೊಂಬುಗಳಿಗೆ ಚಿನ್ನದ ಅಚ್ಚುಗಳಿದ್ದವು ಮತ್ತು ಗೊರಸುಗಳಿಗೆ  ಬೆಳ್ಳಿಯ ಹೊದಿಕೆ ಹೊದಿಸಲಾಗಿತ್ತು. ಅಷ್ಟೇ ಅಲ್ಲದೆ ಹಸುಗಳು ಅಲಂಕಾರದಿಂದ ಭೂಷಿತವಾಗಿದ್ದವು ಮತ್ತು ತಮ್ಮ ಕರುಗಳೊಡನೆ ಇದ್ದವು. ಗೋವುಗಳ ಕೆಚ್ಚಲು ಹಾಲಿನಿಂದ ತುಂಬಿ ತುಳುಕುತ್ತಿತ್ತು.

ಹೀಗೆ ಎಲ್ಲರನ್ನೂ ಸಂತುಷ್ಟಗೊಳಿಸಿ ಎಲ್ಲರ  ಅನುಮತಿ ಪಡೆದು ಏಕಾದಶಿ ವ್ರತವನ್ನು ಅಂತ್ಯಗೊಳಿಸಿ ಇನ್ನೇನು ಉಪವಾಸವನ್ನು ನಿಲ್ಲಿಸಬೇಕೆಂದುಕೊಂಡಿದ್ದಾಗಲೇ, ವಿರೂಪದಲ್ಲಿ ದೂರ್ವಾಸ ಮಹರ್ಷಿಗಳ ಆಗಮನವಾಗಿತ್ತು. ಮಹಾರಾಜ ಅವರನ್ನು ಸಕಲಾದರಗಳೊಂದಿಗೆ ಬರಮಾಡಿಕೊಂಡ. ಅಂದು ಉಳಿದುಕೊಂಡು ತನ್ನೊಂದಿಗೆ ಭೋಜನ ಸ್ವೀಕರಿಸಬೇಕೆಂದು ಪ್ರಾರ್ಥಿಸಿಕೊಂಡ. ದೂರ್ವಾಸರು ಬಹಳ ಸಂತೋಷದಿಂದ ಈ ಆಹ್ವಾನ ಸ್ವೀಕರಿಸಿ, ಇಂತಹದೊಂದು ಮಹಾನ್‌ ಉಪಾಸನೆಗಾಗಿ ಅಂಬರೀಷನನ್ನು ಅಭಿನಂದಿಸಿ, ಕ್ರಮಬದ್ಧವಾಗಿ ಶಾಸ್ತ್ರ ವಿಧಿಗಳನ್ನಾಚರಿಸುವ ನಿಮಿತ್ತ ಸ್ನಾನಕ್ಕೆಂದು ಯಮುನಾ ನದಿಗೆ ತೆರಳಿದರು. ಅಲ್ಲಿ ಮಿಂದು ಶಾಸ್ತ್ರ ವಿಧಿಗಳನ್ನಾಚರಿಸುತ್ತಾ ನಿರಾಕಾರ ಬ್ರಹ್ಮನ್‌ನನ್ನು  ಕುರಿತು ಧ್ಯಾನಾಸಕ್ತರಾದರು.

ಅಂಬರೀಷ ಮಹಾರಾಜ ದೂರ್ವಾಸರಿಗಾಗಿ ಕಾಯುತ್ತಿದ್ದ. ಅವರು ಕೂಡಲೇ ಬರಲಿಲ್ಲ. ಉಪವಾಸ ಮುಕ್ತಾಯ ಮಾಡಲು ಇನ್ನೂ ಒಂದೇ ಒಂದು ಮುಹೂರ್ತ ಮಾತ್ರ ಉಳಿದಿತ್ತು. ಕೂಡಲೇ ಉಪವಾಸವನ್ನು ಮುಕ್ತಾಯಗೊಳಿಸುವುದು ಅತ್ಯಗತ್ಯವಾಗಿತ್ತು. ಇಲ್ಲದಿದ್ದರೆ ವ್ರತದ ಫಲ ಕೈಗೆಟಕುತ್ತಿರಲಿಲ್ಲ. ರಾಜನಿಗೆ ಚಿಂತೆಯಾಯಿತು. ವಿದ್ವಾಂಸರಾದ ಬ್ರಾಹ್ಮಣರೊಂದಿಗೆ ಸಮಾಲೋಚಿಸಿದ.

`ಪೂಜ್ಯ ಬ್ರಾಹ್ಮಣರೆ ಈಗ ನಾನೇನು ಮಾಡಬಹುದು ಹೇಳಿ! ಬ್ರಾಹ್ಮಣರ ಬಗೆಗೆ ಗೌರವಯುತವಾಗಿ ವರ್ತಿಸಬೇಕೆನ್ನುವ ನಿಯಮವನ್ನು ಉಲ್ಲಂಘಿಸುವುದು ಮಹಾಪರಾಧವಾಗುತ್ತದೆ. ಮತ್ತೆ ಉಪವಾಸವನ್ನು ದ್ವಾದಶಿ ಘಳಿಗೆ ಇರುವಾಗಲೇ ನಿಲ್ಲಿಸದಿದ್ದರೆ ವ್ರತಾಚರಣೆಯಲ್ಲಿ ಲೋಪವೆಸಗಿದಂತಾಗುತ್ತದೆ. ಆದ್ದರಿಂದ ಏನು ಮಾಡಬೇಕು ಎಂದು ನೀವು ಹೇಳಿದರೆ ಹಾಗೆ ಮಾಡುತ್ತೇನೆ! ಎಂದು ಹೇಳಿದ. ಬ್ರಾಹ್ಮಣರು ಹೇಳಿದರು : `ಹೇ ರಾಜನ್‌, ಜಲಪಾನ ಮಾಡಿ ಉಪವಾಸವನ್ನು ಮುಕ್ತಾಯಗೊಳಿಸಿದರೆ ಅಧರ್ಮವಾಗುವುದಿಲ್ಲ!’

ಅಂಬರೀಷ ಹಾಗೆಯೇ ಅಲ್ಪ ಜಲಪಾನ ಮಾಡಿ ದೂರ್ವಾಸರಿಗಾಗಿ ಕಾದು ಕುಳಿತ.

ಧ್ಯಾನದಲ್ಲಿದ್ದಂತೆಯೇ ದೂರ್ವಾಸರಿಗೆ, ರಾಜ ಜಲಪಾನ ಮಾಡಿ ಉಪವಾಸ ಮುಕ್ತಾಯ ಮಾಡಿದ ವಿಷಯ ತಿಳಿದು ಹೋಗಿತ್ತು. ಇನ್ನೂ ಹಸಿದುಕೊಂಡೇ ಇದ್ದ ಅವರು ಕ್ರೋಧದಿಂದ ಕಂಪಿಸಿದರು. ಭರಭರನೆ  ನಡೆದುಕೊಂಡು ಬಂದು ಅಂಬರೀಷನ ಮುಂದೆ ನಿಂತರು.

`ಮಹಾರಾಜ, ಭೋಜನಕ್ಕೆ ನೀನಾಗಿ ಆಹ್ವಾನಿಸಿದೆ. ಆದರೆ ನನಗಾಗಿ ಕಾಯದೆ ನನಗಿಂತಲೂ ಮೊದಲೇ ಭೋಜನವನ್ನು ಮುಗಿಸಿಬಿಟ್ಟಿದ್ದೀಯೆ. ಇದು ದುರ್ವರ್ತನೆ! ಎನ್ನುತ್ತಲೇ ಅವರು ತಮ್ಮ ಶಿರರೋಮಗಳನ್ನು ಕಿತ್ತು ಅದರಿಂದ ಪ್ರಳಯ ಕಾಲದ ಕಾಲಾಗ್ನಿಯನ್ನು ಹೋಲುವ ದೈತ್ಯನನ್ನು ಸೃಷ್ಟಿಸಿದರು.

ತ್ರಿಶೂಲ ಹಿಡಿದು ಭಯಂಕರವಾಗಿ ನಿಂತ ಆ ದೈತ್ಯನನ್ನು ನೋಡಿ ಅಂಬರೀಷ ಬೆದರಲಿಲ್ಲ. ಅಚಲಿತನಾಗಿ ಪರಮಾತ್ಮನ ಧ್ಯಾನದಲ್ಲಿ  ಮೈಮರೆತ. ಆಗಲೇ ಸುದರ್ಶನ ಚಕ್ರ ಬಂದು ಆ ದೈತ್ಯನನ್ನು ಸುಟ್ಟು ಬೂದಿ ಮಾಡಿ ದೂರ್ವಾಸರಲ್ಲಿಗೆ ನುಗ್ಗಿತು. ಅವರು ಭಯ ಪೀಡಿತರಾಗಿ ಓಡಿದರು. ಎಲ್ಲೆಲ್ಲಿ ಓಡಿದರೂ, ಅಡಗಿಕೊಂಡರೂ ಚಕ್ರ ಅವರನ್ನು ಬಿಡದೆ ಬೆನ್ನಟ್ಟಿತು. ಬ್ರಹ್ಮ ಲೋಕ, ಶಿವಲೋಕ ಎಲ್ಲೆಲ್ಲೂ ಓಡಿ ಬೇಡಿಕೊಂಡರು. ಶಿವನಿಂದ ಅವರಿಗೆ ಸಲಹಾರೂಪದಲ್ಲೊಂದು ಸಹಾಯ  ಬಂದಿತು : `ದೂರ್ವಾಸರೇ, ಸುದರ್ಶನ ಚಕ್ರವನ್ನು ಸಹಿಸುವುದು ಯಾರಿಂದಲೂ ಸಾಧ್ಯವಿಲ್ಲ. ನೀವು ಅದರೊಡೆಯ ವಿಷ್ಣುವಿನಲ್ಲಿಯೇ ಹೋಗಿ ಬೇಡಿಕೊಳ್ಳಿ!

ಬೇರೆ ದಾರಿ ಇಲ್ಲದೆ ದೂರ್ವಾಸರು ವಿಷ್ಣುವಿನ ಮೊರೆ ಹೊಕ್ಕರು. `ಜಗದ್ರಕ್ಷಕಾ ಕಾಪಾಡು, ನನ್ನಿಂದ ಮಹಾಪರಾಧವಾಗಿದೆ, ರಕ್ಷಣೆ ಕೊಡು!’ ಎಂದರು. ಭಗವಾನ್‌ ವಿಷ್ಣು ದುರ್ವಾಸರಿಗೆ ಉತ್ತರಿಸಿದನು:

“ಬ್ರಹ್ಮ ದ್ವಿಜರಾದ ದುರ್ವಾಸರೇ, ನಾನು ಸದಾ ಸಂಪೂರ್ಣವಾಗಿ ನನ್ನ ಭಕ್ತರ ನಿಯಂತ್ರಣದಲ್ಲಿದ್ದೇನೆ, ನಾನು ಅವರಿಂದ ಸ್ವತಂತ್ರನಲ್ಲ. ಏಕೆಂದರೆ ನನ್ನ ಭಕ್ತರು ನಿಷ್ಕಲ್ಮಷರು ಮತ್ತು ಅವರ ಹೃದಯಾಂತರಾಳದಲ್ಲಿ ನಾನು ನೆಲೆಸಿದ್ದೇನೆ. ಅಷ್ಟೇ ಅಲ್ಲ ನನ್ನ ಭಕ್ತರ ಭಕ್ತರಾದವರೂ ನನಗೆ ಬಹಳ ಪ್ರಿಯರು.”

ವಿಷ್ಣುವು ಮುಂದುವರಿಸುತ್ತ : “ನನ್ನನ್ನೆ  ಪರಮ ಗುರಿಯನ್ನಾಗಿ ಮಾಡಿಕೊಂಡಿರುವ ಸಾಧುಗಳಿಲ್ಲದೆ. ನಾನು ನನ್ನ  ದಿನ ವರಮಾನವನ್ನಾಗಲಿ ದಿವ್ಯ ಪರಮ ವೈಭವವನ್ನಾಗಲಿ ನಾನು ಭೋಗಿಸಲಾರೆ. ನಮ್ಮ ಮನೆ, ಮಟ, ಮಕ್ಕಳು, ಬಂಧುಗಳು, ಐಶ್ವರ್ಯಗಳನ್ನೆಲ್ಲ  ನಿನಗಾಗಿ ತ್ಯಜಿಸಿದ ಈ ಸಾಧು ಭಕ್ತರನ್ನು ನಾನೇ ರಕ್ಷಿಸದಿರಲ್ಲ? ಸ್ವತಃ  ಪತ್ನಿ ತನ್ನ ಸೇವೆಯಿಂದ ಪತಿಯನ್ನು ನಿಯಂತ್ರಿಸುವಂತೆ ಎಲ್ಲರನ್ನೂ ಸಮಾನವಾಗಿ ಕಾಣುವ ನನ್ನ ಭಕ್ತರು ಹೃದಯಾಂತರಾಳದಿಂದ ನನ್ನನ್ನು ಪ್ರೀತಿಸಿ ನನ್ನನ್ನು ಸಂಪೂರ್ಣವಾಗಿ ನಿಯಂತ್ರಿಸುತ್ತಾರೆ.

ಇಂತಹ ಶುದ್ಧ ಭಕ್ತನು ಸದಾ ನನ್ನನ್ನು ಹೃದಯದಲ್ಲಿರುತ್ತಾನೆ ಮತ್ತು ನಾನು ಆ ಭಕ್ತನ ಹೃದಯದಲ್ಲಿರುತ್ತೇನೆ. ನನ್ನನ್ನಲ್ಲದೆ ಬೇರೇನನ್ನು ಭಕ್ತರು ಅರಿಯರು ಮತ್ತು ನಾನೂ ಕೂಡ ಅವರನ್ನಲ್ಲದೆ ಬೇರಾರನ್ನೂ ಅರಿಯೆ”.

ದೇವೋತ್ತಮ ಪರಮ ಪುರುಷ ಮುಂದುವರಿಸುತ್ತ ಹೇಳಿದ : `ದೂರ್ವಾಸರೆ, ನಾನು ಭಕ್ತಾದೀನ. ನಿಮ್ಮ ಅಪಚಾರವನ್ನು ನೀವು ಅಂಬರೀಷನಿಂದಲೇ ಪರಿಹರಿಸಿಕೊಳ್ಳಬೇಕು! ಆತನಲ್ಲಿಗೆ ಹೋಗಿ ಕ್ಷಮೆ ಕೋರಿರಿ!

ದೂರ್ವಾಸ ಮುನಿಗಳಿಗೆ ಬೇರೆ ದಾರಿ ಇರಲಿಲ್ಲ. ಬೆದರಿ ಅಲುಗಾಡಿಹೋಗಿದ್ದ ಅವರು ಅಂಬರೀಷನಲ್ಲಿಗೆ ಓಡಿ ಬಂದು ಅವನ ಪಾದಗಳಲ್ಲಿ ಉರುಳಿದರು! ಅಂಬರೀಷ ಸಂಕೋಚದಿಂದ ಮುದುಡಿಕೊಂಡು ಸುದರ್ಶನ ಚಕ್ರವನ್ನು  ಕುರಿತು ಪ್ರಾರ್ಥಿಸಿದ : “ಎಲ್ಲ ಆಯುಧಗಳ ವಿನಾಶಕನೇ, ದೇವೋತ್ತಮನ ಮೂಲ ದರ್ಶನನೇ, ನಿನಗೆ ನನ್ನ ಗೌರವಪೂರ್ಣ ಪ್ರಣಾಮಗಳು. ಈ ಬ್ರಾಹ್ಮಣ ಮಹಾಮುನಿಗೆ ಸ್ವಸ್ತಿಯನ್ನೂ ಆಶ್ರಯವನ್ನೂ ದಯಮಾಡು!

`ಹೇ ವಿಶ್ವ ಪಾಲಕನೇ, ದೇವೋತ್ತಮ ಪರಮ ಪುರುಷನು ಅಸೂಯಾಪರ ಶತ್ರುಗಳನ್ನು ಕೊಲ್ಲಲು ಸರ್ವಶಕ್ತ ಆಯುಧವನ್ನಾಗಿ ನಿನ್ನನ್ನು ಉಪಯೋಗಿಸುತ್ತಾನೆ. ನಮ್ಮ ಇಡೀ ವಂಶದ ಉದ್ಧಾರದ ಸಲುವಾಗಿ, ಈ ಬಡ ಬ್ರಾಹ್ಮಣನನ್ನು ಅನುಗ್ರಹಿಸು, ನಿಜಕ್ಕೂ ಇದು ನಮಗೆಲ್ಲರಿಗೂ ಸಲ್ಲುವ ಅನುಗ್ರಹವೆಂದು ನಾನು ಭಾವಿಸುತ್ತೇನೆ. ನಮ್ಮ ವಂಶವು ಯೋಗ್ಯ ವ್ಯಕ್ತಿಗಳಿಗೆ ದಾನ ಮಾಡಿದ್ದೇ ಆಗಿದ್ದರೆ, ನಾವು ಯಾಗಗಳನ್ನೂ ವಿಧ್ಯುಕ್ತ ಆಚರಣೆಗಳನ್ನೂ ಮಾಡಿದ್ದೇ ಆಗಿದ್ದರೆ, ನಮ್ಮ ವೃತ್ತಿ, ಕರ್ತವ್ಯಗಳನ್ನು ತಕ್ಕ ರೀತಿಯಲ್ಲಿ ಪೂರೈಸಿರುವುದೇ ಆಗಿದ್ದರೆ ಮತ್ತು ವಿದ್ವಾಂಸ ಬ್ರಾಹ್ಮಣರಿಂದ ನಮಗೆ ಮಾರ್ಗದರ್ಶನವಾಗಿದ್ದರೆ, ಇದಕ್ಕೆ ಬದಲಾಗಿ, ಸುದರ್ಶನ ಚಕ್ರದ ಉರಿಯಿಂದ ಈ ಬ್ರಾಹ್ಮಣನು ಪಾರಾಗಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಅದ್ವಿತೀಯನೂ, ಸಕಲ ದಿವ್ಯ ಗುಣಗಳ ಆಗರವೂ, ಸರ್ವ ಜೀವಿಗಳ ಪ್ರಾಣವೂ ಆತ್ಮವೂ ಆದ ದೇವೋತ್ತಮ ಪರಮ ಪುರುಷನು ನಮ್ಮನ್ನು ಮೆಚ್ಚಿದ್ದರೆ, ದೂರ್ವಾಸ ಮುನಿಯನ್ನು ಉರಿಯ ಯಾತನೆಯಿಂದ ಮುಕ್ತಗೊಳಿಸಲಿ ಎಂದು ಪ್ರಾರ್ಥಿಸುತ್ತೇನೆ!

ಅಂಬರೀಷ ಮಹಾರಾಜ ಅತ್ಯಂತ ಕಳಕಳಿಯಿಂದ, ಭಕ್ತಿಯಿಂದ, ಮುನಿಗಳನ್ನು ರಕ್ಷಿಸಲು ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದ.

ಅವನು ಈ ರೀತಿ ವಿಷ್ಣುವಿಗೂ, ಸುದರ್ಶನ ಚಕ್ರಕ್ಕೂ ಪ್ರಾರ್ಥನೆ ಸಲ್ಲಿಸಿದಾಗ, ಪ್ರಾರ್ಥನೆಯ ಕಾರಣ, ಸುದರ್ಶನ ಚಕ್ರವು ಶಾಂತವಾಯಿತು. ದೂರ್ವಾಸ ಮುನಿ ಎಂಬ ಬ್ರಾಹ್ಮಣನನ್ನು ದಹಿಸುವುದನ್ನು ನಿಲ್ಲಿಸಿತು.

ದೂರ್ವಾಸ ಮುನಿಗಳಿಗೆ ತಮ್ಮ ತಪ್ಪು ಅರಿವಾಗುವುದರೊಳಗೆ, ವಿಷ್ಣು ಭಕ್ತನನ್ನು ಮತ್ತೆ ಕಂಡು ಶರಣಾಗತರಾಗುವುದರೊಳಗೆ, ಅವರ ಇಡೀ ವ್ಯಕ್ತಿತ್ವ-ಸಾಧನೆ-ತಪಶ್ಶಕ್ತಿಗಳೆಲ್ಲವೂ ಅಲುಗಾಡಿ ಹೋಗಿತ್ತು. ಅವರು ಮಂಕು ಕವಿದವರಂತೆ ಅಂಬರೀಷನನ್ನು ನೋಡುತ್ತಲೇ ಇದ್ದರು. ಅವನು ಪ್ರಾರ್ಥನೆ ಸಲ್ಲಿಸುವುದನ್ನೇ ನೋಡುತ್ತಿದ್ದರು. ಎಲ್ಲ ಲೋಕಗಳನ್ನು ಓಡಾಡಿದ್ದರೂ, ತ್ರಿಮೂರ್ತಿಗಳ ಕಾಲಿಗೆ ಬಿದ್ದಿದ್ದರೂ ಅವರ ತೊಂದರೆ ಪರಿಹಾರವಾಗಿರಲಿಲ್ಲ. ಕೊನೆಗೆ ರಣ ಕೋಪದಿಂದ ಅತಿ ಸಣ್ಣ ವಿಷಯವೊಂದಕ್ಕಾಗಿ ಅತಿ ದೊಡ್ಡ  ಶಿಕ್ಷೆ ಕೊಡಲು ಮುಂದೆ ನಿಲ್ಲಿಸಿಕೊಂಡಿದ್ದ ವಿಷ್ಣು ಭಕ್ತನೊಬ್ಬನ ಕಾಲಿಗೆ ಬಿದ್ದು ಶರಣಾಗತರಾಗಬೇಕಾಯಿತು. ತನ್ನ ಮಹಾಭಕ್ತನನ್ನು ದೇವೋತ್ತಮ ಪರಮ ಪುರುಷ ಹೇಗೆ ಕಾಪಾಡುತ್ತಾನೆ ಎನ್ನುವುದು ಅವರಿಗರಿವಾಗಿತ್ತು. ಅಷ್ಟರೊಳಗೆ ಅವರ ಪ್ರಾಣ ಹೋಗಿ ಬಂದಿತ್ತು.

ಕೊನೆಗೂ ವಿಷ್ಣುಚಕ್ರ ಶಾಂತವಾಗಿ ತನ್ನ ಸ್ವಸ್ಥಾನ ಸೇರಿದಾಗಲೇ ದೂರ್ವಾಸರ ಎದೆ ಬಡಿತ ನಿಂತದ್ದು. ಅವರ ಮಹಾ ತಪಸ್ಸುಗಳು, ರಣ ಕೋಪ, ಶಾಪ ಶಕ್ತಿ ಯಾವುದೂ ಇಂದು ಉಪಯೋಗಕ್ಕೆ ಬಂದಿರಲಿಲ್ಲ. ಈ ಗಂಡಾಂತರದಿಂದ ಪಾರಾಗಿದ್ದು ಅವರಿಗೆ ನಿಜಕ್ಕೂ ಸಮಾಧಾನವಾಗಿತ್ತು. ಅಂಬರೀಷ ಮಹಾರಾಜನನ್ನು ನೋಡಿ ಹೇಳಿದರು :

`ಓ, ಮಹಾನ್‌ ವಿಷ್ಣು ಭಕ್ತ ಅಂಬರೀಷ ಮಹಾರಾಜನೆ, ಈ ದಿನ ನನಗೆ ಭಾಗವತ ಶಕ್ತಿ, ಭಕ್ತಿ ಸೇವೆಯ ಶಕ್ತಿಗಳ ಅರಿವುಂಟಾಯಿತು. ಇಷ್ಟೊಂದು ವರ್ಷಗಳ ಸತತ ತಪಸ್ಸು ಕೂಡ ನನಗೆ ಬೆಳಕು ತೋರದಿದ್ದದ್ದು ಸಹಾಯಕ್ಕೆ ಬರದಿದ್ದದ್ದು ನನಗೊಂದು ಪಾಠವಾಗಿದೆ. ನೀನೊಬ್ಬ ಮಹಾತ್ಮಾ . ನಿನ್ನನ್ನು ನೀನು ಶ್ರೀ ಕೃಷ್ಣನಿಗೆ ಅರ್ಪಿಸಿಕೊಂಡವ. ಈ ಲೌಕಿಕ ಜಗತ್ತಿನಲ್ಲಿದ್ದರೂ ಇನ್ನೊಬ್ಬರಿಗಾಗಿ ಬಾಳುತ್ತಿರುವವ. ನಾನು ಎನ್ನುವ ಮಾತೇ ನಿನ್ನ ವ್ಯಕ್ತಿತ್ವದಲ್ಲಿಲ್ಲ. ಅತ್ಯಂತ ಸರಳತೆ, ಮಹಾನ್‌ ಭಗವದ್ಭಕ್ತಿ ಇವೆರಡೂ ನಿನ್ನ ಸಾಧನೆಗಳು. ಇವುಗಳ ಮುಂದೆ ಯಾವ ಶಕ್ತಿಯೂ ನಿರರ್ಥಕ. ನಿನಗೆ ಯಾವಾಗಲೂ ಒಳ್ಳೆಯದಾಗುತ್ತದೆ. ನಿನ್ನಿಂದ ಎಲ್ಲರಿಗೂ ಒಳ್ಳೆಯದಾಗುತ್ತದೆ!

ಅಂಬರೀಷ ಮಹಾರಾಜನಿಗೆ ಬಹಳ ಸಂಕೋಚವಾಗಿತ್ತು. ಪೂಜ್ಯರು ಹಿರಿಯರಾದ ಮಹಾತಪಸ್ವಿಗಳಾದ ದೂರ್ವಾಸರು ತನ್ನನ್ನು ಕುರಿತು ಹೀಗೆಲ್ಲ ದೊಡ್ಡ ಮಾತು ಹೇಳುತ್ತಿರುವುದನ್ನು ಕೇಳಿ ಅವನಿಗೆ ಗಲಿಬಿಲಿಯಾಗಿತ್ತು.

`ಮಹಾನ್‌ ತಪಸ್ವಿಗಳೇ, ನನ್ನಿಂದ ಮಹಾಪರಾಧವಾಯಿತು. ನಿಮ್ಮನ್ನು ಭೋಜನಕ್ಕೆ ಆಹ್ವಾನಿಸಿದ ಮೇಲೆ ನಾನು ಕಾಯಬೇಕಾಗಿತ್ತು. ದ್ವಾದಶಿ ಕೊನೆ ಘಳಿಗೆ ಬಂದು ಮುಗಿದು ಹೋಗುತ್ತಿದೆಯಲ್ಲ, ಪತ್ನಿ ಸಮೇತ ಮಾಡಿದ ಕಠಿಣ ವ್ರತ ನಿಷ್ಫಲವಾಗುತ್ತಿದೆಯಲ್ಲ ಎಂದು ಚಿಂತಿಸಿಬಿಟ್ಟೆ, ಉತ್ತಮ ಬ್ರಾಹ್ಮಣರ ಸಲಹೆ ಕೇಳಿದೆ. ಅವರು ದ್ವಾದಶಿ ಫಲ ತಪ್ಪಬಾರದು, ಘಳಿಗೆ ಮೀರಬಾರದು ಎಂದು ಹೇಳಿ, ತೊಟ್ಟು ನೀರು ಸೇವಿಸಿ ಏಕಾದಶಿ ಉಪವಾಸ ಮುರಿಯಬಹುದು ಎಂದು ಸೂಚಿಸಿದ್ದರಿಂದ ಹೀಗೆ ಮಾಡಿದೆ. ನನ್ನದು ದೊಡ್ಡ ಅಪರಾಧವಾಯಿತು. ದಯವಿಟ್ಟು ನನ್ನನ್ನು ಕ್ಷಮಿಸಿ ಅನುಗ್ರಹಿಸಿ’ ಎಂದು ಹೇಳಿದ. ಅವನ ಮನಸ್ಸಿಗೆ ತುಂಬಾ ನೋವಾಗಿದ್ದು ಅವನ ಮಾತಿನಿಂದ ತಿಳಿಯುತ್ತಿತ್ತು. `ನಾನು ಹೀಗೆ ಮಾಡಿದ ಅಪರಾಧದ ನಿಮಿತ್ತದಿಂದಲೇ ನೀವು ಇಷ್ಟೆಲ್ಲ ತೊಂದರೆಗಳನ್ನು, ಭೀತಿಯನ್ನು ಅನುಭವಿಸಬೇಕಾಗಿ ಬಂದಿತು. ಇದಕ್ಕಾಗಿ ನನಗೆ ನಾಚಿಕೆಯಾಗುತ್ತಿದೆ, ಸಂಕಟವಾಗುತ್ತಿದೆ. ನಾನು ಶಾಪಗ್ರಸ್ತನಾಗಿದ್ದರೂ ಪರವಾಗಿಲ್ಲ, ಆದರೆ ನೀವು ಇಷ್ಟೊಂದು ತೊಂದರೆಗಳನ್ನು ಅನುಭವಿಸದಿರಬಹುದಿತ್ತು! ಎಂದೂ ಹೇಳಿದ.

ಈಗ ಸಂಕೋಚ-ನಾಚಿಕೆ ಪಡುವುದು ದೂರ್ವಾಸರ ಸರದಿಯಾಗಿತ್ತು. ಅವರಿಗೆ ತಲೆ ತಗ್ಗಿಸುವಂತಾಗಿತ್ತು. ಎಂತಹಾ ಮಹಾನ್‌ ಭಾಗವತ ಈತ, ಯಾವ ತಪ್ಪು ಮಾಡದೆಯೂ ಕ್ಷಮಿಸಿ ಎಂದು ಅಂಗಲಾಚುತ್ತಿದ್ದಾನಲ್ಲ ಎಂದವರಿಗೆ  ಸಂಕಟವಾಯಿತು. ಅವನ  ಸರಳತನ, ದೊಡ್ಡತನ ಕಂಡು ಹೆಮ್ಮೆಯುಂಟಾಯಿತು. `ಭಗವದ್ಭಕ್ತರ ಆಳವನ್ನು ತಿಳಿದುಕೊಳ್ಳುವುದು ಹೆಮ್ಮೆಯುಂಟಾಯಿತು. `ಭಗವದ್ಭಕ್ತರ ಆಳವನ್ನು ತಿಳಿದುಕೊಳ್ಳುವುದು ಯಾರಿಂದಲೂ ಸಾಧ್ಯವಿಲ್ಲ. ಅದು ಆ ದೇವೋತ್ತಮನಿಗೆ ಮಾತ್ರ ಎಟಕುವ ವಿಷಯ! ಎಂದು ಕೊಂಡರು.

ದೂರ್ವಾಸರು ಹೇಳಿದರು :

`ಪ್ರಿಯ ರಾಜನ್‌, ದೇವೋತ್ತಮ ಪರಮ ಪುರುಷನ ಭಕ್ತರ ಮಹಿಮೆ ಎಂತಹುದು ಎಂದು ಇಂದು, ನಾನು ತಿಳಿದುಕೊಂಡೆ. ನಾನು ತಪ್ಪು ಮಾಡಿದ್ದರೂ ಕೂಡ, ನನ್ನ ಸುಯೋಗಕ್ಕಾಗಿ ನೀನು ಪ್ರಾರ್ಥನೆಯನ್ನು ಮಾಡಿದ್ದೀಯ. ಶುದ್ಧ ಭಕ್ತರ ಅಧಿಪತಿಯಾದ ದೇವೋತ್ತಮ ಪರಮ ಪುರುಷನನ್ನು ಗ್ರಹಿಸಿದವರಿಗೆ ಯಾವುದು ತಾನೆ ಮಾಡಲು ಅಸಾಧ್ಯ? ಯಾವುದನ್ನು ತಾನೆ ತ್ಯಜಿಸಲಾಗುವುದಿಲ್ಲ? ಭಗವಂತನ  ಸೇವಕರಿಗೆ ಯಾವುದು ಸಾಧ್ಯವಿಲ್ಲ? ಆತನ ಪವಿತ್ರ ಹೆಸರು ಕೇಳಿದರೆ ಸಾಕು ಪರಿಶುದ್ಧರಾಗುತ್ತೇವೆ! ಹೇ ರಾಜನೇ, ನನ್ನ ಅಪರಾಧಗಳನ್ನು ಲಕ್ಷಿಸದೆ ನನ್ನ ಪ್ರಾಣವನ್ನು ಉಳಿಸಿರುವೆ. ಇಷ್ಟೊಂದು ಕರುಣಾಮಯಿಯಾದ ನಿನಗೆ ನಾನು ಕೃತಜ್ಞನಾಗಿದ್ದೇನೆ!’

ಅಂಬರೀಷ ಮಹಾರಾಜ ನೆಮ್ಮದಿಯ ನಿಟ್ಟುಸಿರಿಳಿಸಿದನು. ಪೂಜ್ಯ ಹಿರಿಯ ಮುನಿಯೊಬ್ಬರಿಗೆ ತನ್ನಿಂದ ನೋವು-ಅವಮಾನ ಆಗಿ ಹೋಯಿತಲ್ಲ ಎಂದವನ ಹೃದಯ ಹಿಂಡಿ ಹೋಗಿತ್ತು. ದೂರ್ವಾಸರ ಮನಸ್ಸಿನಲ್ಲಿ ಈ ಅನುಭವ ಕಹಿಯಾಗಿ ಎಂದೆಂದಿಗೂ ಉಳಿದುಬಿಡುತ್ತದೇನೋ ಎನ್ನುವ ಭಯ ತಲ್ಲಣಿಸುವಂತೆ ಮಾಡಿತ್ತು. ಈಗ ಆ ಮುನಿವರ್ಯರೇ ಶಾಂತವಾಗಿ ನೆಮ್ಮದಿಯಿಂದ ಪಶ್ಚಾತ್ತಾಪದ ಮಾತುಗಳನ್ನು ಆಡಿದಾಗ ಇವನಿಗೂ ಆ ಭೀತಿ-ತಲ್ಲಣಗಳ ತೆರೆ ಸರಿದಿತ್ತು.

ಏಕಾದಶಿ ಮುಗಿಸಿ ದ್ವಾದಶಿಯ ದಿವಸ ದೂರ್ವಾಸರೊಂದಿಗೆ ಭೋಜನ ಸ್ವೀಕರಿಸುವುದು ಎಂದು ನಿರ್ಧರಿಸಿದ ಮೇಲೆ, ನದಿಯತ್ತ ಹೋದ ಅವರು ಬರುವುದನ್ನೆ ಕಾಯುತ್ತಿದ್ದ ಅವನಿಗೆ, ದ್ವಾದಶಿ ಮುಗಿಯುವ ಮೊದಲು ಉಪವಾಸವನ್ನು ಮುಗಿಸುವುದು ಅತ್ಯಗತ್ಯವಾಗಿತ್ತು. ಅಂತೆಯೇ ದೂರ್ವಾಸರು ಇನ್ನೂ ಬರದಿರುವುದನ್ನು ನೋಡಿ ಅವನು, ಜಲಪಾನ ಮಾಡಿದ್ದ, ಭೋಜನವನ್ನೇ ಸ್ವೀಕರಿಸಿರಲಿಲ್ಲ, ಬರಿಯ ನೀರನ್ನು ಸೇವಿಸುತ್ತ ದೂರ್ವಾಸರು ಬರುವುದನ್ನು ಕಾದಿದ್ದನು.

ಆಪೋಽಶ್ನಾತಿ ತನ್‌ ನೈವಾಶಿತಂ ನೈವಾನಶಿತಂ – ನೀರನ್ನು  ಕುಡಿಯುವುದನ್ನು ಅಶನವೆಂದೂ, ನಿರಶನವೆಂದೂ ಪರಿಗಣಿಸಬಹುದು ಎಂದು ಬಗೆದು ಜಲಪಾನ ಮಾಡಿದ್ದು. ಆದರೆ ದುರ್ವಾಸ ಕುಪಿತರಾಗಿ ಶಪಿಸಿದ್ದು ಹಾಗೂ ಸುದರ್ಶನ ಚಕ್ರ ಹಿಂದೆ ಬಂದು ಅವರು ತ್ರಿಲೋಕಗಳನ್ನು ಸುತ್ತಿದ್ದು ಒಂದು ವರ್ಷ ಕಾಲಾವಧಿಯಾಯಿತು. ಈ ನಡುವೆ ಅಂಬರೀಷನು ಈಗ ಎಲ್ಲವೂ ಸುಖಾಂತ್ಯವಾದ ಮೇಲೆ ಅವನು ದೂರ್ವಾಸರನ್ನು ಮತ್ತೊಮ್ಮೆ ಪ್ರೀತಿ ವಿಶ್ವಾಸಗಳಿಂದ ಬರಮಾಡಿಕೊಂಡು ಭೋಜನಕ್ಕೆ ಎಬ್ಬಿಸಿದ. ಯಾವ ತುಟಿ ಪಿಟಿಕ್ಕುಗಳೂ ಇಲ್ಲದೆ ದೂರ್ವಾಸರು ಭೋಜನಕ್ಕೆದ್ದರು. ರಾಜ ಭೂರಿ ಭೋಜನ ಏರ್ಪಡಿಸಿದ್ದ. ಪಂಚ ಭಕ್ಷ್ಯ ಪರಮಾನ್ನಗಳಿದ್ದವು. ಷಡ್ರಸಭರಿತ ಅನ್ನರುಚಿಗಳಿದ್ದವು. ಸಿಹಿಗಳಿದ್ದವು. ವಿಸ್ತಾರವಾದ ಬಾಳೆ ಎಲೆಯಲ್ಲಿ ನಾನಾ ವಿಧದ ಆಹಾರ ಪದಾರ್ಥಗಳಿದ್ದವು. ಸುತ್ತಲೂ ಅಡುಗೆಯವರು, ಪರಿಚಾರಕರು, ಚಾಮರ ಸೇವಕರು ನೆರೆದಿದ್ದರು.

ಬಹಳ ಹಸಿದಿದ್ದ ದೂರ್ವಾಸರು ಪುಷ್ಕಳವಾಗಿ ಭೋಜನ ಮಾಡಿದರು. ಅವರಿಗಾಗಿ ವಿಶೇಷವಾಗಿ ತಯಾರಿಸಿದ್ದ ಖಾದ್ಯಗಳನ್ನು, ತರಕಾರಿ ಬಗೆಗಳನ್ನು ಆಸ್ವಾದಿಸುತ್ತ ಊಟ ಮಾಡಿ ಮುಗಿಸಿದರು. ಅಂತ್ಯದಲ್ಲಿ ತೊಟ್ಟು ನೀರು ಕುಡಿದು, `ಅನ್ನದಾತೋ ಸುಖೀಭವಃ!’ ಎಂದು ಸಂತೃಪ್ತ ಮಾತನ್ನಾಡಿದರು.

ಅಂಬರೀಷನಿಗೆ ಬಹಳ ಸಂತೋಷವಾಯಿತು. ಅವನ ಮನದಾಳದ ಬಿಗಿಯೆಲ್ಲ ಸಡಿಲವಾಗಿತ್ತು. ಮೈ ಮನಸ್ಸುಗಳು ಹಗುರವಾಗಿ ಉಲ್ಲಸಿತಗೊಂಡಿದ್ದವು. ದೂರ್ವಾಸರ ಭೋಜನವಾದ ಮೇಲೆ ಅವರಿಗೆ ಬೇಕಾದ ಹಾಗೆ ದಾನ ಧರ್ಮಗಳ ದಕ್ಷಿಣೆ ನೀಡಿದ ರಾಜ.

ದೂರ್ವಾಸರು ತೃಪ್ತರಾಗಿದ್ದರು. ಅಂಬರೀಷನನ್ನು ಮನಸಾರೆ ಹೊಗಳಿದರು, ಆಶೀರ್ವದಿಸಿದರು. `ನಿನ್ನಿಂದ ನಿರಂತರವಾಗಿ ಹೀಗೆ ಅತಿಥಿ ಸೇವೆ ಜರುಗುತ್ತಿರಲಿ!’ ಎಂದರು. ಕೊನೆಗೆ – `ನಾನು ಹೀಗೆಯೇ ವಿಶ್ರಾಂತಿ ತೆಗೆದುಕೊಳ್ಳುತ್ತೇನೆ. ನಿನ್ನ ಭೋಜನವನ್ನು ಮುಗಿಸು. ನಿನಗಾಗಿ ನಿನ್ನ ಮಡದಿ-ಮಕ್ಕಳು, ಪರಿವಾರದವರು ಕಾದಿದ್ದಾರೆ!’ – ಎಂದು ಹೇಳಿದರು.

ಆದರೆ, ಅಂಬರೀಷ ಮಹಾರಾಜ ಮಾತ್ರ ಭೋಜನ ಸ್ವೀಕರಿಸಲಿಲ್ಲ. ದ್ವಾದಶಿ ಮುಗಿಯುವ ಮೊದಲೇ ಸ್ವೀಕರಿಸಿದ್ದ  ತೊಟ್ಟು ಜಲವೇ ಅವನ ಪಾರಣೆಯಾಗಿ ಹೋಗಿತ್ತು.

ವಿಶ್ರಾಂತಿ ಮುಗಿಸಿ ಅಲ್ಲಿಂದ ಹೊರಟು ನಿಂತ ದೂರ್ವಾಸರು ಕೊನೆಯ ಮಾತುಗಳೆಂಬಂತೆ ಹೇಳಿದರು :

`ಪ್ರಿಯ ರಾಜನೆ, ನಾನು ನಿನ್ನನ್ನು ತುಂಬಾ ಮೆಚ್ಚಿಕೊಂಡಿದ್ದೇನೆ. ಈ ಮೊದಲು ನಿನ್ನನ್ನು ಒಬ್ಬ ಸಾಧಾರಣ ಮನುಷ್ಯ ಎಂದು ತಿಳಿದುಕೊಂಡಿದ್ದೆ. ಈಗ ನನಗೆ ತಿಳಿದಿದೆ. ನಿನ್ನ ಆತಿಥ್ಯವನ್ನು ಸ್ವೀಕರಿಸಿ ಸಂತೋಷ ಪಟ್ಟಿದ್ದೇನೆ. ನೀನು ಭಗವಂತನ ಶ್ರೇಷ್ಠ ಭಕ್ತನೆಂದು ಈಗ ಸ್ವಾನುಭವದಿಂದ ಕಂಡು ಕೊಂಡೆ. ಆದ್ದರಿಂದಲೇ ನಿನ್ನನ್ನು  ನೋಡಿದ ಮಾತ್ರಕ್ಕೇ, ನಿನ್ನ ಪಾದವನ್ನು ಮುಟ್ಟಿ ನಿನ್ನನ್ನು ಮಾತನಾಡಿಸಿದ ಮಾತ್ರಕ್ಕೇ, ನಾನು ಸುಪ್ರೀತನೂ, ಕೃತಜ್ಞನೂ ಆಗಿಹೋದೆ. ವೈಷ್ಣವ ವರ್ಚಸ್ಸು ಎಂತಹುದು ಎಂದು ನನಗೀಗ ತಿಳಿದಿದೆ.

ನಿನ್ನಂತಹ ನಿಜವಾದ ಯೋಗಿಯ ವರ್ಚಸ್ಸನ್ನು ನಾನು ತಿಳಿಯಲಾರದೆ ಹೋದೆ. ಭಕ್ತನನ್ನು ದೇವೋತ್ತಮ ಪರಮ ಪುರುಷ ಎಂದೆಂದಿಗೂ ಕೈ ಬಿಡುವುದಿಲ್ಲ ಎನ್ನುವುದನ್ನು ನಾನಿಂದು ಕಂಡುಕೊಂಡೆ.

`ಪ್ರಿಯ ರಾಜನ್‌, ಇನ್ನು ಮೇಲೆ ಸ್ವರ್ಗ ಲೋಕದ ಮಂಗಳೆಯರೆಲ್ಲರೂ ಕ್ಷಣ ಕ್ಷಣವೂ ನಿನ್ನ ಕಳಂಕರಹಿತ ಚಾರಿತ್ರ್ಯವನ್ನು ಸ್ತುತಿಸುತ್ತಾರೆ. ಈ ಲೋಕದ ಜನರು ಕೂಡ ನಿರಂತರವಾಗಿ ನಿನ್ನ ಮಹಿಮೆಯನ್ನು ಭಜಿಸುತ್ತಾರೆ!

ಹೀಗೆ ತಮ್ಮ ಮನಸ್ಸಿನ ಮಾತುಗಳೆಲ್ಲವೂ ಮುಗಿಯುವವರೆಗೂ ದೂರ್ವಾಸ ಮುನಿಗಳು ಮಾತನಾಡುತ್ತಲೇ ಇದ್ದರು. ಎಂತಹುದೋ ಒಂದು ಅತಿಶಯವನ್ನು ಕಂಡವರ ಹಾಗೆ ಸಂತೋಷ-ಅಚ್ಚರಿಗಳಿಂದ ಆ ದೇವಮುನಿ ಹೃದಯದಿಂದ ಹೃದಯಕ್ಕೆ ಸ್ಪಂದಿಸುತ್ತಲೇ ಇದ್ದರು.

ದೂರ್ವಾಸರು ಎಲ್ಲ ಮಾತುಗಳನ್ನೂ ಆಡಿದ ಮೇಲೆ ಹೊರಟು ನಿಂತರು. ಅಂಬರೀಷನಾದಿಯಾಗಿ ಎಲ್ಲರೂ ಅವರಿಗೆ ಸಾಷ್ಟಾಂಗ ನಮಸ್ಕರಿಸಿದರು. ಮುನಿಗಳು ಆಶೀರ್ವದಿಸುತ್ತ, ಪ್ರಶಂಸಿಸುತ್ತ ಹೊರಟರು. ನಾಸ್ತಿಕರು ಮತ್ತು ಒಣ ಊಹಾತ್ಮಕ ಚಿಂತಕರು ಇರದ ಬ್ರಹ್ಮ ಲೋಕಕ್ಕೆ ಅಂತರಿಕ್ಷ ಮಾರ್ಗವಾಗಿ ಹೊರಟು ಹೋದರು. ಸ್ವರ್ಗ ಲೋಕದಲ್ಲಿ  ಅವರಿಗೆ ಬೇಕಾದಷ್ಟು ಮಾತನಾಡುವುದು ಉಳಿದಿತ್ತು. ಅಂಬರೀಷನ ಕುರಿತು ಅವರು ಅಲ್ಲಿ ಎಲ್ಲರಿಗೂ ತಿಳಿಸಬೇಕಾಗಿತ್ತು.

ಅಂಬರೀಷ ಮಹಾರಾಜ ತನ್ನ ಭಕ್ತಿ ಸೇವಾ ಬದುಕನ್ನು ಮುಂದುವರಿಸಿದ. ನಿರಾಕಾರ ಬ್ರಹ್ಮನ್‌, ಪರಮಾತ್ಮ ಮತ್ತು ದೇವೋತ್ತಮ ಪರಮ ಪುರುಷರ ಸಂಪೂರ್ಣ ಅರಿವನ್ನು ಗಳಿಸಿದ. ಅವನ ಭಕ್ತಿಸೇವೆಯ ಆಚರಣೆ ಪರಿಪೂರ್ಣವಾಗಿತ್ತು. ಈ ಐಹಿಕ ಪ್ರಪಂಚದ ಅತ್ಯುನ್ನತ ಸ್ಥಾನವೂ ಕೂಡ ನರಕಲೋಕಕ್ಕಿಂತಲೂ ಉತ್ತಮವಾದುದೇನಲ್ಲ ಎನ್ನುವುದನ್ನು ಭಕ್ತಿಯಿಂದ ಅವನು ತಿಳಿದುಕೊಂಡ.

ಬದುಕಿನ ಕೊನೆಪುಟಕ್ಕೆ ಬಂದಾಗ ಅಂಬರೀಷ ಮಹಾರಾಜ ಭಕ್ತಿಸೇವೆಯಲ್ಲಿ ಏಳಿಗೆ ಹೊಂದಿದುದರಿಂದ ಐಹಿಕ ವಿಷಯಗಳೊಂದಿಗೆ ಜೀವಿಸಲು ಇನ್ನು ಮುಂದೆ ಬಯಸಲಿಲ್ಲ. ಸಂಸಾರ ಜೀವನದಿಂದ ನಿವೃತ್ತನಾಗಿ, ತನ್ನಷ್ಟೇ ಯೋಗ್ಯರಾಗಿದ್ದ ಮಕ್ಕಳಿಗೆ ಆಸ್ತಿಯನ್ನು ಹಂಚಿ ವಾನಪ್ರಸ್ಥಾಶ್ರಮವನ್ನು ಸ್ವೀಕರಿಸಿದ. ವಾಸುದೇವ ಭಗವಂತನನ್ನು ಕುರಿತು ಚಿಂತಿಸುವಂತೆ ಮನಸ್ಸನ್ನು ಕೇಂದ್ರೀಕರಿಸಲೆಂದು ಕಾಡಿಗೆ ತೆರಳಿದ.

ನೈಮಿಷಾರಣ್ಯದಲ್ಲಿ ಭಾಗವತ ಶ್ರವಣ ಮಾಡುತ್ತಿದ್ದ ಸೂತ ಮುನಿಗಳು ಹೇಳಿದರು : `ಅಂಬರೀಷನ ಪುಣ್ಯ ಕಥಾ ಶ್ರವಣ-ನಿರೂಪಣೆ-ಯೋಚನೆ ಭಗವಂತನ ಶುದ್ಧ ಭಕ್ತನಾಗುವ ಮಾರ್ಗಕ್ಕೆ ತಲುಪಿಸುತ್ತದೆ. ಅಂಬರೀಷನ ಜೀವನ ವೃತ್ತಾಂತ ಕೇಳಿಸಿಕೊಂಡವರು ನಿಶ್ಚಯವಾಗಿ ಶುದ್ಧ ಭಕ್ತರಾಗುತ್ತಾರೆ.”

ಸಾಧವೋ ಹೃದಯಂ ಮಹ್ಯಮ್‌ ಸಾಧೂನಾಂ ಹೃದಯಂ ತ್ವಹಮ್‌

ಮದ್‌ ಅತ್ಯಿತ್‌ ನೇ ನ ಜಾನಾತಿ ನಾಹಂ ವೇದ್ಯೋ ಮನಾಗಪಿ ॥ (ಭಾಗವತ 9.4.68)

ಶುದ್ಧ ಭಕ್ತನು ಸದಾ ನನ್ನ ಹೃದಯ ನಿವಾಸಿ ಯಾಗಿರುವನು. ನಾನು ಸದಾ ಶುದ್ಧ ಭಕ್ತನ ಹೃದಯನಿವಾಸಿಯಾಗಿರುವೆನು. ನನ್ನನ್ನು ಹೊರತು ಅನ್ಯವೊಂದನ್ನು ನನ್ನ ಭಕ್ತರು ಅರಿಯರು. ಭಕ್ತರನ್ನು ಹೊರತುಪಡಿಸಿ ಬೇರೊಂದನ್ನು ನಾನರಿಯೆನು.

ಈ ಲೇಖನ ಶೇರ್ ಮಾಡಿ