ಹರಿಹರ ಕ್ಷೇತ್ರ

ಹರಿ ಮತ್ತು ಹರ ಇಬ್ಬರೂ ಮೇಳೈಸಿರುವ ಅಪರೂಪದ ಸ್ಥಳ ಹರಿಹರೇಶ್ವರ ಕ್ಷೇತ್ರ. ಕರ್ನಾಟಕದ ಧಾರವಾಡ ಮತ್ತು ದಾವಣಗೆರೆ ಜಿಲ್ಲೆಯ ಗಡಿ ಭಾಗವಾದ ಹರಿಹರ ಪಟ್ಟಣದಲ್ಲಿರುವ ಈ ಮಂದಿರವು ದಾವಣಗೆರೆ ಜಿಲ್ಲೆಗೆ ಸೇರಿದೆ. ತುಂಗಭದ್ರಾ ನದಿ ತೀರದ ರಮಣೀಯ ನಿಸರ್ಗದಡಿಯಲ್ಲಿ ವಿರಾಜಮಾನವಾಗಿರುವ ಪುರಾತನವಾದ ಹರಿಹರೇಶ್ವರ ದೇವಾಲಯವು ಪೌರಾಣಿಕವಾಗಿ ಮತ್ತು ಐತಿಹಾಸಿಕವಾಗಿ ಪ್ರಸಿದ್ಧಿ ಪಡೆದಿದೆ. ದೇವಾಲಯವು ಮಾನವ ನಿರ್ಮಿತ. ಆದರೆ ದೇವರು ಮಾತ್ರ ಸ್ವಯಂಭೂ ವಿಗ್ರಹ ಮೂರ್ತಿ. ಪುರಾಣ (ಸ್ಕಾಂದ ಪುರಾಣ) ಮತ್ತು ಇತಿಹಾಸಗಳೆರಡೂ ಶ್ರೀ ಹರಿಹರೇಶ್ವರ ವಿಗ್ರಹವು ಸೃಷ್ಟಿ ನಿರ್ಮಾಣದ ಆದಿಯಲ್ಲಿ ಉದ್ಭವಿಸಿದೆಯೆಂದು ಹೇಳುತ್ತವೆ.

ಈ ದೇವಾಲಯದಲ್ಲಿಯ ಶ್ರೀ ಹರಿಹರೇಶ್ವರ ಮಾನವಾಕಾರದಷ್ಟೇ ಎತ್ತರವಾಗಿದ್ದು ಸಾಲಿಗ್ರಾಮ ಶಿಲೆಯದಾಗಿದೆ. ಈ ದೇವರು ಪೂರ್ವಾಭಿಮುಖನಾಗಿ ನಿಂತಿದ್ದಾನೆ. ಈ ಮೂರ್ತಿಯ ಬಲಭಾಗವು ಪಾರ್ವತೀಪತಿಯಾದ ಶಿವನ ಅರ್ಧ ದೇಹವಾಗಿದ್ದು, ಎಡ ಭಾಗವು ಶ್ರೀ ಲಕ್ಷ್ಮೀಪತಿಯಾದ ವಿಷ್ಣುವಿನ ದೇಹದ ಅರ್ಧ ಭಾಗವಾಗಿದೆ. ಹರಿಯ ಎಡದ ಅರ್ಧಭಾಗ, ಹರನ ಬಲದ ಅರ್ಧ ಭಾಗಗಳೆರಡೂ ಬೆಸೆದು ಒಂದಾಗಿ ಹರಿಹರೇಶ್ವರನಾಗಿ ನಿಂತು ಶೋಭಿಸುತ್ತಿದ್ದಾನೆ, ಈ ಭಗವಂತ.

ಶ್ರೀ ಹರಿಹರೇಶ್ವರ ಮೂರ್ತಿಯ ಹರಾಂಶವಾದ ಬಲಭಾಗದ ಒಂದು ಕೈಯಲ್ಲಿ ತ್ರಿಶೂಲವಿದೆ. ಇನ್ನೊಂದು ಕೈ ಅಭಯ ಹಸ್ತ ಬಲಗಿವಿಯು ನಾಗಭೂಷಣವಾಗಿದೆ. ಬಲಪಾರ್ಶ್ವದ ಅರ್ಧ ತಲೆಯು ಜಟಾ, ಗಂಗಾದೇವಿ ಮತ್ತು ಚಂದ್ರನಿಂದ ಅಲಂಕರಿಸಲ್ಪಟ್ಟಿರುವುದು. ಹರಿಯ ಅಂಶವಾದ ಎಡಭಾಗದ ಒಂದು ಕೈಯಲ್ಲಿ ಶಂಖವೂ ಇನ್ನೊಂದು ಕೈಯಲ್ಲಿ ಚಕ್ರವೂ ಇದೆ. ಹರಿ ಭಾಗದ ಕಿವಿಯಲ್ಲಿ ಕರ್ಣಕುಂಡಲಗಳು ಶೋಭಿಸಿದರೆ ಶಿರದಲ್ಲಿ ಕಿರೀಟವಿದೆ. ಇಡೀ ಹರಿಹರೇಶ್ವರ ಮೂರ್ತಿಯು ಏಕಕಂಠದಲ್ಲಿ ರುಂಡಮಾಲೆ, ವೈಜಯಂತಿಮಾಲೆ ಮತ್ತು ಸಾಲಿಗ್ರಾಮದ ಮಾಲೆಗಳಿಂದ ಅಲಂಕೃತವಾಗಿದೆ. ಈ ಮೂರ್ತಿಯ ಬಲಭಾಗದಲ್ಲಿ ಪಾರ್ವತಿ ಮತ್ತು ಗಣಪತಿಯರ ಮೂರ್ತಿಗಳಿದ್ದರೆ ಎಡಭಾಗದಲ್ಲಿ ಶ್ರೀ ಲಕ್ಷ್ಮೀದೇವಿ ಮತ್ತು ಋಷ್ಯಶೃಂಗ ಋಷಿಗಳಿದ್ದಾರೆ.

ಸ್ಥಳ ಪುರಾಣ

ಹರಿಹರ ಮೊದಲು ಕೂಡಲೂರು ಎಂದಾಗಿತ್ತು. ಮತ್ತು ದೇವರನ್ನು ಶಂಕರನಾರಾಯಣ ಎಂದೂ ಕರೆಯಲಾಗುತ್ತಿತ್ತು. ಅನಂತರದ ದಿನಗಳಲ್ಲಿ ಮಂದಿರವು ಹರಿಹರೇಶ್ವರ ದೇವಾಲಯವಾಗಿ ಊರು ಹರಿಹರ ಎಂದು ಪ್ರಸಿದ್ಧಿ ಪಡೆಯಿತು. ದೇವಸ್ಥಾನವು ಜಕಣಾಚಾರಿ ಕಟ್ಟಡ ಮಾದರಿಯ ವಿನ್ಯಾಸ ಹೊಂದಿದೆ. ಇದು ಸುಮಾರು ಎಂಟುನೂರು ವರ್ಷಗಳಷ್ಟು ಪುರಾತನವಾದುದೆಂದು ಇತಿಹಾಸ ಹೇಳುತ್ತದೆ.

ಶ್ರೀ ಹರಿಹರೇಶ್ವರ ವೃತ್ತಾಂತವು ಸ್ಕಾಂದ ಪುರಾಣದಲ್ಲಿ ಬರುತ್ತದೆ. ಅಲ್ಲಿ ಶ್ರೀ ಮಾರ್ಕಂಡೇಯ ಮಹಾಋಷಿಗಳು ಬ್ರಹ್ಮ ಪುತ್ರ ಸನತ್‌ಕುಮಾರನ ಬಳಿ ಹೋಗಿ, “ಶ್ರೀ ಹರಿಹರೇಶ್ವರನ ಮಹಿಮೆ, ಅವನು ನೆಲೆಸಿದ ಕ್ಷೇತ್ರ ಮಹಾತ್ಮೆ ಮತ್ತು ಅಲ್ಲಿ ಅವನ ಪಾದದಡಿಯಲ್ಲಿ ಹರಿಯುತ್ತಿರುವ ತುಂಗಭದ್ರಾ ನದಿಯ ಮಹಿಮೆ ಮೊದಲಾದ ವಿಷಯಗಳನ್ನು ಅರಿಯುವ ಆಸೆ ಇದೆ. ಸವಿಸ್ತಾರವಾಗಿ ತಿಳಿಸಬೇಕು” ಎಂದು ಕೇಳುತ್ತಾರೆ. ಆಗ ಸನತ್‌ ಕುಮಾರನು ನೀಡಿದ ವಿವರವನ್ನು ಆಗಸ್ತ್ಯರು ತಮ್ಮ ಸತಿಗೂ ತಿಳಿಸಿದರು.

ಸನತ್‌ ಕುಮಾರ ಹೇಳಿದ ವಿವರ:

ಶ್ರೀ ಹರಿಹರನು ನಿಂತ ಸ್ಥಳವು ದಂಡಕಾರಣ್ಯ ಪ್ರದೇಶವಾಗಿದ್ದು, ರಮಣೀಯವಾಗಿದೆ. ಇಲ್ಲಿನ ಸಸ್ಯ ಮತ್ತು ಪ್ರಾಣಿ ಸಂಕುಲ ವರ್ಣನಾತೀತ. ನಿರ್ಭಯವಾಗಿ ಸಂಚರಿಸುವ ಪಶುಪಕ್ಷಿಗಳು ಮತ್ತು ವೈವಿಧ್ಯಮಯ ಗಿಡಮರಗಳು. ಮತ್ತು ತುಂಬಿ ಹರಿಯುವ ಹಳ್ಳ, ನದಿ, ಸರೋವರಗಳು ಈ ಪ್ರದೇಶದ ಸೌಂದರ್ಯವನ್ನು ಹೆಚ್ಚಿಸಿವೆ. ಈ ಸ್ಥಳದ ತುಂಗಭದ್ರಾ ನದಿ ತೀರವು ಇನ್ನಷ್ಟು ರಮಣೀಯವಾಗಿದೆ. ಅಲ್ಲಿ ಗುಹ ಎಂಬ ಋಷಿ ಕುಮಾರನು ಆಶ್ರಮ ಕಟ್ಟಿಕೊಂಡು ಏಕಾಂತವಾಸಿಯಾಗಿ ಉಗ್ರ ತಪದಲ್ಲಿದ್ದ. ಗುಹನು ಬ್ರಾಹ್ಮಣನಾಗಿದ್ದರೂ ಆಚರಣೆಯಲ್ಲಿ ತಾಮಸಿ. ಮಹಾ ಕ್ರೂರಿ. ಅದ್ಭುತ ದೈಹಿಕ ಶಕ್ತಿ. ನೀಚ ಸ್ವಭಾವ. ಪ್ರಜೆಗಳನ್ನು ಹಿಂಸಿಸುತ್ತ ತಾನೇ ರಾಜನಾಗಿ ಮದೋನ್ಮತ್ತನಾಗಿ ಲೌಕಿಕ ಸುಖ ಭೋಗಿಸುತ್ತಿದ್ದನು. ಇಷ್ಟರಿಂದಲೇ ತೃಪ್ತನಾಗದೆ ಇಡೀ ವಿಶ್ವವನ್ನು ತನ್ನ ಅಂಕೆಯಲ್ಲಿಟ್ಟುಕೊಳ್ಳಲು ತುಂಗಭದ್ರಾ ನದಿ ತೀರದಲ್ಲಿ ಘೋರ ತಪಸ್ಸು ಕೈಗೊಂಡ. ಇದರಿಂದ ಭಯಭೀತರಾದ ಇಂದ್ರಾದಿ ದೇವತೆಗಳು ಬ್ರಹ್ಮನ ಮೊರೆ ಹೊಕ್ಕರು. ಬ್ರಹ್ಮನು ಅವರತ್ತ ಕರುಣೆಯ ದೃಷ್ಟಿ ಬೀರಿ ತಪಸ್ಸನ್ನಾಚರಿಸುತ್ತಿದ್ದ ಗುಹನ ಬಳಿಗೆ ಬಂದ. “ನಿನ್ನ ತಪಸ್ಸಿಗೆ ಒಲಿದು ಬಂದಿರುವೆ. ವರ ಬೇಡು” ಎಂದು ಬ್ರಹ್ಮ ಹೇಳಿದ. “ನನಗೆ ದೇವ, ದಾನವ, ಮಾನವ, ಯಕ್ಷ, ರಾಕ್ಷಸ, ಗಂಧರ್ವ, ಕಿನ್ನರರಿಂದ ಸಾವು ಬೇಡ. ನಿನ್ನಿಂದಲೂ ಬೇಡ. ಅಷ್ಟೇ ಏಕೆ, ಶ್ರೀ ಹರಿಯಿಂದಾಗಲೀ ಹರನಿಂದಾಗಲೀ ಕೂಡ ನನಗೆ ಸಾವು ಬೇಡ” ಎಂದು ಗುಹ ಕೇಳಿದ. `ತಥಾಸ್ತು’ ಎಂದು ಬ್ರಹ್ಮ ಮರೆಯಾದ. ಬ್ರಹ್ಮನ ವರದಿಂದ ಗುಹನು ಇನ್ನಷ್ಟು ಮದೋನ್ಮತ್ತನಾದ. ಋಷಿಗಳನ್ನೂ ಜನರನ್ನೂ ಹಿಂಸಿಸತೊಡಗಿದ. ಯಜ್ಞಯಾಗಾದಿಗಳು ನಡೆಯುವ ಸ್ಥಳಗಳನ್ನು ಅಪವಿತ್ರಗೊಳಿಸಿದ. ಬಾಲಕರನ್ನೂ ವೃದ್ಧರನ್ನೂ ನೀರಿನಲ್ಲಿ ಮುಳುಗಿಸಿ ವಿನೋದಿಸತೊಡಗಿದ. ಸ್ತ್ರೀ ಮಾನಭಂಗ ನಿತ್ಯ ಕರ್ಮವಾಯಿತು. ಅವನು ದೇವಲೋಕಕ್ಕೂ ಲಗ್ಗೆ ಇಟ್ಟಾಗ ಗಾಬರಿಯಾದ ದೇವೇಂದ್ರನು ಇತರ ದೇವತೆಗಳೊಂದಿಗೆ ಬ್ರಹ್ಮನಲ್ಲಿ ದೂರಿದ. ಆದರೆ ತಾನೇ ಗುಹನಿಗೆ ವರ ಕೊಟ್ಟಿರುವುದರಿಂದ ತಾನು ಏನೂ ಮಾಡಲಾಗದೆಂದು ಬ್ರಹ್ಮನು ಶಿವನಲ್ಲಿಗೆ ಹೋಗಲು ಹೇಳಿದ. ಬ್ರಹ್ಮನ ವರವನ್ನು ಅಸತ್ಯಗೊಳಿಸಲಾರೆನೆಂದ ಶಿವನು ಇದಕ್ಕೆ ವಿಷ್ಣುವು ಏನಾದರೂ ಉಪಾಯ ಕಂಡುಹಿಡಿಯುವನೆಂದು ಅವರೆಲ್ಲರನ್ನೂ ಶ್ರೀಮನ್‌ ನಾರಾಯಣನ ಬಳಿಗೆ ಕರೆದೊಯ್ದ. ಅವರ ಸಮಸ್ಯೆ ಅರಿತಿದ್ದ ವಿಷ್ಣುವು ಇದನ್ನು ಯುಕ್ತಿಯಿಂದ ಪರಿಹರಿಸಲು ನಿರ್ಧರಿಸಿದ. ಬ್ರಹ್ಮನ ವರಕ್ಕೆ ಧಕ್ಕೆ ಬಾರದಂತೆ ಗುಹನಿಗೆ ಬುದ್ಧಿ ಕಲಿಸಲು ವಿಷ್ಣು ನಿರ್ಧರಿಸಿದ. ತಾವು ಹರಿಹರೇಶ್ವರನ ರೂಪದಲ್ಲಿ ಗುಹನನ್ನು ಎದುರಿಸಬೇಕೆಂದು ಶಿವನಿಗೆ ತಿಳಿಸಿದ. ಈ ರೀತಿ ಹರಿಹರೇಶ್ವರನ ಉದಯವಾಯಿತು. ಅರ್ಧ ವಿಷ್ಣು ಅರ್ಧ ಶಿವ ಸೇರಿ ಹರಿಹರೇಶ್ವರನಾದ.

ಭೂಮಿಗಿಳಿದು ಬಂದ ಹರಿಹರೇಶ್ವರನು ಗುಹನೊಂದಿಗೆ ಘೋರ ಕಾಳಗ ನಡೆಸಿದ. ಯುದ್ಧ ಅನೇಕ ಸಂವತ್ಸರಗಳ ಕಾಲ ನಡೆಯಿತಂತೆ. ಕೊನೆಗೆ ಗುಹನಿಗೆ ತನ್ನ ಎದುರಾಳಿ ಯಾರೆಂದು ಅರ್ಥವಾಯಿತು. ಅವನು ಹರಿಹರೇಶ್ವರನಿಗೆ ಶರಣಾದ. ಕರುಣಾಳು ಹರಿಹರೇಶ್ವರನು ಗುಹನ ಅಪರಾಧ ಮನ್ನಿಸಿದನು. “ನನ್ನ ಹೆಸರು ಶಾಶ್ವತವಾಗಿರುವಂತೆ ನಾನು ತಪಸ್ಸು ಮಾಡಿದ ಈ ಸ್ಥಳ ಮತ್ತು ಸುತ್ತಲ ಅರಣ್ಯವನ್ನು ಗುಹಾರಣ್ಯ ಎಂದು ಕರೆಯಬೇಕು. ನೀವು ಹರಿಹರೇಶ್ವರನಾಗಿ ಇಲ್ಲಿಯೇ ನೆಲೆಸಿರಿ. ಮತ್ತು ನಿಮ್ಮ ಪಾದಪದ್ಮಗಳು ನನ್ನ ವಕ್ಷಸ್ಥಳದಲ್ಲಿ ಶಾಶ್ವತವಾಗಿರಲಿ” ಎಂದು ಗುಹನು ಪ್ರಭುವಿನಲ್ಲಿ ಬೇಡಿದನು. ಅದರಂತೆ ಹರಿಹರೇಶ್ವರನು ಗುಹನ ಎದೆಯ ಮೇಲೆ ನಿಂತನು. ಪ್ರಭುವಿನ ಭಾರ ತಾಳಲಾರದೆ ಗುಹನು ಪಾತಾಳಕ್ಕೆ ಕುಸಿದ. ಭಗವಂತನ ಕಾಲುಗಳೂ, ಮೊಳಕಾಲು ಅರ್ಧವಿರುವವರೆಗೆ ಭೂಮಿಯಲ್ಲೇ ನಿಂತವು. ಆದುದರಿಂದ ದೇವರ ಕಾಲುಗಳ ಅರ್ಧ ಭಾಗ ಕಾಣುವುದಿಲ್ಲ. ಶ್ರೀ ಹರಿಹರೇಶ್ವರನು ಸಾಲಿಗ್ರಾಮ ಶಿಲಾರೂಪ ತಳೆದು ಮೂರ್ತಿಯಾಗಿ ಅಲ್ಲಿ ನಿಂತುಬಿಟ್ಟ. ದಂಡಕಾರಣ್ಯವು ಗುಹಾರಣ್ಯವಾಯಿತು.

ಇತಿಹಾಸ

ಶ್ರೀ ಹರಿಹರೇಶ್ವರ ದೇವಾಲಯದ ಸುತ್ತಲೂ ಶಿಲಾಲೇಖನಗಳಿವೆ. ಹಳೆ ಮೈಸೂರು ಸರ್ಕಾರದ ಗೆಜೆಟಿಯರ್‌ನಲ್ಲೂ  ಕ್ಷೇತ್ರದ ಬಗ್ಗೆ ಸಾಕಷ್ಟು ಮಾಹಿತಿಗಳಿವೆ. ಒಂದು ಶಾಸನದ ಪ್ರಕಾರ ಈಗಿರುವ ದೇವಸ್ಥಾನವನ್ನು ಹೊಯ್ಸಳ ದೊರೆ ಶ್ರೀ ವೀರ ನರಸಿಂಹ ದೇವನ ಮಹಾ ಪ್ರಧಾನ ಶ್ರೀ ಪೊಲಾಳ್ವ ದೇವನು ನಿರ್ಮಿಸಿದ. ಹಳೆಯ ಮಂದಿರದ ಸ್ಥಳದಲ್ಲಿ ಅವನು 115 ಬಂಗಾರ ಕಳಸಗಳಿಂದ ಮೆರೆಯುವ ದೇವಸ್ಥಾನಗಳನ್ನು ಕಟ್ಟಿಸಿದ ಎಂದು ಮತ್ತೊಂದು ಶಿಲಾಲೇಖನ ಹೇಳುತ್ತದೆ. ಅಂದರೆ ಮೊದಲು ಭಗವಂತನಿಗೆ ಸಣ್ಣ ದೇವಸ್ಥಾನವಿತ್ತೆಂಬುದು ಇದರಿಂದ ಸ್ಪಷ್ಟವಾಗುತ್ತದೆ; ಈ ಶಿಲಾ ಲೇಖನದಿಂದ ಗೊತ್ತಾಗುವ ಇನ್ನೊಂದು ಅಂಶವೆಂದರೆ, ಶ್ರೀ ಹರಿಹರೇಶ್ವರನು ಮಾನವ ನಿರ್ಮಿತ ಮೂರ್ತಿಯಲ್ಲ, ಶ್ರೀ ಹರಿ ಮತ್ತು ಹರರೀರ್ವರ ಅರ್ಧರ್ಧ ದೇಹಗಳು ಒಂದಾಗಿ ಕೂಡಿಕೊಂಡು ಸಾಕ್ಷಾತ್‌ ಭೂಮಿಗಿಳಿದು ಬಂದ ದೇವರು. ಮೊದಲು ಈ ದೇವನಿಗೆ ಪುಟ್ಟ ದೇವಸ್ಥಾನವಿತ್ತು. ಪೊಲಾಳ್ವನು ಈಗಿನ ದೇವಾಲಯವನ್ನು ಕಟ್ಟಿಸಿದನು.

ಶ್ರೀ ಹರಿಹರೇಶ್ವರ ದೇವಾಲಯದ ಸಮೀಪದಲ್ಲಿ ಶ್ರೀರಾಯರ ಮಠ ಮತ್ತು ಓಂಕಾರಮಠಗಳಿವೆ. ಹಾಗೂ ಸುತ್ತಲೂ ಅನೇಕ ಸಣ್ಣ ಸಣ್ಣ ದೇವಾಲಯಗಳಿವೆ. ಶ್ರೀ ಹರಿಹರ ಕ್ಷೇತ್ರದಲ್ಲಿ ಹರಿಯುತ್ತಿರುವ ತುಂಗಭದ್ರಾ ನದಿಯಲ್ಲಿ ಹನ್ನೊಂದು ತೀರ್ಥಗಳಿರುವವೆಂದು ಪುರಾಣದಲ್ಲಿ ಹೇಳಲಾಗಿದೆ. ಶ್ರೀ ಹರಿಹರೇಶ್ವನ ಜಾತ್ರೆಯು ಪ್ರತಿ ವರ್ಷವೂ ಮಾಘ ಶುದ್ಧ ದಶಮೀ ತಿಥಿಯಿಂದ ಮಾಘ ಬಹುಳ ಪಾಡ್ಯದವರೆಗೂ ಬಹು ವಿಜೃಂಭಣೆಯಿಂದ ಜರುಗುವುದು. ಸಹಸ್ರಾರು ಭಕ್ತಾದಿಗಳು ಹರಿಹರಕ್ಕೆ ಜಾತ್ರೆಯ ಸಮಯದಲ್ಲಿ ಬರುವರು.

ಶ್ರೀ ಹರಿಹರದಲ್ಲಿ ಇತ್ತೀಚೆಗೆ ಖ್ಯಾತ ಕೈಗಾರಿಕೋದ್ಯಮಿ ಶ್ರೀ ಘನಶ್ಯಾಮ್‌ ಬಿರ್ಲಾರವರು ದೇವಸ್ಥಾನದ ಆವರಣದಲ್ಲಿ ಭವ್ಯವಾದ ಕಲ್ಯಾಣ ಮಂಟಪವನ್ನು ಕಟ್ಟಿಸಿರುವರು. ಮೀರಜ್‌-ಬೆಂಗಳೂರು ರೈಲು ಈ ಊರ ಮೇಲೆ ಹಾದು ಹೋಗುತ್ತದೆ. ಹರಿಹರದಲ್ಲಿ ರೈಲ್ವೆ ನಿಲ್ದಾಣವಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಇಲ್ಲಿಂದ ನಾಲ್ಕು ದಿಕ್ಕಿಗೂ ಬಸ್ಸಿನ ಸೌಕರ್ಯ ಉಂಟು. ಬೆಂಗಳೂರಿನಿಂದ : 275 ಕಿ.ಮೀ. ಜಿಲ್ಲಾ ಕೇಂದ್ರ ದಾವಣಗೆರೆಯಿಂದ 15 ಕಿ.ಮೀ.

ಈ ಲೇಖನ ಶೇರ್ ಮಾಡಿ