ಆರೋಗ್ಯಕರ ಪಾಲಕ್ ಸೊಪ್ಪಿನಿಂದ ಮಾಡಬಹುದಾದ ಈ ತಿನಿಸುಗಳನ್ನು ತಯಾರಿಸಿ ಶ್ರೀ ರಾಧಾಕೃಷ್ಣರಿಗೆ ಅರ್ಪಿಸಿ ಮನೆಯವರೊಂದಿಗೆ ಸೇವಿಸಿ.
ಪಾಲಕ್ ಚಪಾತಿ

ಬೇಕಾಗುವ ಸಾಮಾನುಗಳು
ಪಾಲಕ್ ಸೊಪ್ಪು – 2 ಕಟ್ಟು
ಗೋಧಿ ಹಿಟ್ಟು – ಮೂರು ಕಪ್
ಮೆಣಸು – ನಾಲ್ಕರಿಂದ ಐದು
ಉಪ್ಪು – ರುಚಿಗೆ ತಕ್ಕಷ್ಟು
ಮಾಡುವ ವಿಧಾನ : ಪಾಲಕ್ ಸೊಪ್ಪನ್ನು ಮಣ್ಣು ಹೋಗುವಂತೆ ಚೆನ್ನಾಗಿ ತೊಳೆಯಿರಿ. ಕುಕ್ಕರಿನಲ್ಲಿ ಎಲೆಗಳು ಮುಳುಗುವಷ್ಟು ಮಾತ್ರ ನೀರು ಹಾಕಿ ಕೊಂಚ ಉಪ್ಪಿನೊಂದಿಗೆ ಎರಡರಿಂದ ಮೂರು ಸೀಟಿ ಬರುವವರೆಗೆ ಬೇಯಿಸಿ. ಬಳಿಕ ನೀರು ಬಸಿದು ಎಲೆಗಳನ್ನು ಒಂದು ಪಾತ್ರೆಯಲ್ಲಿ ಹಾಕಿ. ಇದಕ್ಕೆ ಕೊಂಚ ತಣ್ಣೀರು ಸುರಿಯಿರಿ. ಅನಂತರ ಈ ನೀರನ್ನೂ ಬಸಿದು ತೆಗೆಯಿರಿ. ಇದರಿಂದ ಹಿಟ್ಟು ನಾದಲು ಎಲೆಗಳು ತಣ್ಣಗಾಗಿ ಸುಲಭವಾಗುತ್ತದೆ. ಈ ಎಲೆಗಳನ್ನು ಮಿಕ್ಸಿಗೆ ಹಾಕಿ ಮೆಣಸಿನ ಸಹಿತ ನುಣ್ಣಗೆ ರುಬ್ಬಿ. ನೀರು ಸೇರಿಸಬೇಡಿ. ಇನ್ನೊಂದು ಪಾತ್ರೆಯಲ್ಲಿ ಗೋಧಿಹಿಟ್ಟು ಮತ್ತು ಕೊಂಚ ಉಪ್ಪು ಸೇರಿಸಿ. ಇದಕ್ಕೆ ರುಬ್ಬಿದ ಪಾಲಕ್ ಎಲೆಗಳನ್ನು ಸೇರಿಸಿ ಹಿಟ್ಟು ಕಲಸಿ. ಬಳಿಕ ಉಂಡೆಗಳಾಗಿಸಿ ಲಟ್ಟಿಸಿ ಚಪಾತಿಯಂತೆಯೇ ಎರಡೂ ಬದಿಗಳನ್ನು ಕಾವಲಿಯ ಮೇಲೆ ಬೇಯಿಸಿ. ಬಿಸಿಬಿಸಿಯಾಗಿದ್ದಂತೆಯೇ ಸವಿಯಲು ನೀಡಿ.
ಪಾಲಕ್ ಪನೀರ್

ಬೇಕಾಗುವ ಸಾಮಾನುಗಳು
ಪಾಲಕ್ ಸೊಪ್ಪು – ಒಂದೂವರೆ ಬಟ್ಟಲು ಮಿಕ್ಸಿ ಮಾಡಿದ್ದು
ಪನೀರ್ – 500 ಗ್ರಾಂ – ಕತ್ತರಿಸಿ, ಎಣ್ಣೆಯಲ್ಲಿ ಕರಿದಿದ್ದು
ಎಣ್ಣೆ – 1/4 ಬಟ್ಟಲು
ಜೀರಿಗೆ – ಒಂದು ಟೀ ಚಮಚ
ಶುಂಠಿ – ಕತ್ತರಿಸಿದ್ದು , ಒಂದು ಟೀ ಚಮಚ
ಟೊಮ್ಯಾಟೊ – ಕತ್ತರಿಸಿದ್ದು ಒಂದು ಬಟ್ಟಲು
ಉಪ್ಪು – 2 ಟೀ ಚಮಚ
ಗರಂ ಮಸಾಲಾ – 1/4 ಟೀ ಚಮಚ
ಮೆಣಸು ಪುಡಿ – ಅರ್ಧ ಟೀ ಚಮಚ
ಧನಿಯ ಪುಡಿ – ಒಂದು ಟೀ ಚಮಚ
ಮಾಡುವ ವಿಧಾನ : ಎಣ್ಣೆಯನ್ನು ಕಾಯಿಸಿ ಜೀರಿಗೆ ಹಾಕಿ. ಅದು ಸಿಡಿದಾಗ ಕತ್ತರಿಸಿದ ಶುಂಠಿಯನ್ನು ಹಾಕಿ. ಅನಂತರ ಕತ್ತರಿಸಿದ ಟೊಮ್ಯಾಟೊವನ್ನು ಹಾಕಿ ಕಲಸುತ್ತಿರಿ. ಗಟ್ಟಿ ಪದಾರ್ಥಗಳು ಪ್ರತ್ಯೇಕವಾದಾಗ ಉಪ್ಪು, ಗರಂ ಮಸಾಲ, ಧನಿಯ ಪುಡಿ ಮತ್ತು ಮೆಣಸಿನ ಪುಡಿಯನ್ನು ಹಾಕಿ ಚೆನ್ನಾಗಿ ಬೆರೆಸಿರಿ. ಮಿಕ್ಸಿಯಲ್ಲಿ ರುಬ್ಬಿಕೊಂಡಿರುವ ಪಾಲಕ್ ಸೊಪ್ಪನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಮೂರು ನಿಮಿಷಗಳ ಅನಂತರ ಪನೀರ್ ಚೂರುಗಳನ್ನು ಹಾಕಿ ಮಿಶ್ರಣ ಮಾಡಿ. ಚೆನ್ನಾಗಿ ಕಲಸಿ ಬಿಸಿಯಾಗಿಯೇ ನೀಡಿದರೆ ರುಚಿ ಹೆಚ್ಚು.
ಆಲೂ ಪಾಲಕ್

ಬೇಕಾಗುವ ಸಾಮಾನುಗಳು
ಪಾಲಕ್ – 3/4 ಕಿಲೋ, ಚೆನ್ನಾಗಿ ತೊಳೆದು ಕತ್ತರಿಸಿದ್ದು
ಆಲೂಗಡ್ಡೆ – 2 , ಬೇಯಿಸಿ, ಸಿಪ್ಪೆ ತೆಗೆದು ಚೂರು ಮಾಡಿದ್ದು
ತುಪ್ಪ – 2 ಟೇಬಲ್ ಚಮಚ
ಜೀರಿಗೆ – ಒಂದು ಟೀ ಚಮಚ
ಮೆಂತ್ಯದ ಪುಡಿ – 1/4 ಟೀ ಚಮಚ
ಒಣ ಮೆಣಸಿನಕಾಯಿ – 3
ಶುಂಠಿ – ಒಂದು ಟೇಬಲ್ ಚಮಚ ತೆಳ್ಳಗೆ ಕತ್ತರಿಸಿದ್ದು
ಉಪ್ಪು – 1 1/2 ಟೀ ಚಮಚ
ಸಕ್ಕರೆ – 1 ಟೀ ಚಮಚ
ಮಾಡುವ ವಿಧಾನ : ದಪ್ಪ ತಳವಿರುವ ಪಾತ್ರೆಯಲ್ಲಿ ತುಪ್ಪವನ್ನು ಹಾಕಿ. ಜೀರಿಗೆ, ಮೆಣಸಿನಕಾಯಿ ಮತ್ತು ಮೆಂತ್ಯ ಪುಡಿಯನ್ನು ಹಾಕಿ. ಕಂದು ಬಣ್ಣವಾದಾಗ ಶುಂಠಿ ಹಾಕಿ ಕಲಸಿ. ಉರಿ ಹೆಚ್ಚು ಮಾಡಿಕೊಳ್ಳಿ. ಕತ್ತರಿಸಿದ ಪಾಲಕ್ ಸೊಪ್ಪು ಮತ್ತು ಆಲೂಗೆಡ್ಡೆಯನ್ನು ಹಾಕಿ ಚೆನ್ನಾಗಿ ಬೆರೆಸಿ. ಅನಂತರ ಉಪ್ಪು, ಸಕ್ಕರೆ ಹಾಕಿ ಮಿಶ್ರಣ ಮಾಡಿ. ಸೊಪ್ಪು ಬೇಯುವವರೆಗೂ ಉರಿ ಹೆಚ್ಚಾಗಿರಲಿ. ಅನಂತರ ಉರಿ ಕಡಮೆ ಮಾಡಿ ಚೆನ್ನಾಗಿ ಕಲಸಿ. ಬಿಸಿಯಲ್ಲಿಯೇ ಚಪಾತಿ, ಪೂರಿ, ದೋಸೆ ಜೊತೆ ಕೊಡಿ.
ಪಾಲಕ್ ಸೊಪ್ಪಿನ ಪಲ್ಯ

ಬೇಕಾಗುವ ಸಾಮಾನುಗಳು
ಪಾಲಕ್ ಸೊಪ್ಪು – ಒಂದು ಅಥವಾ ಎರಡು ಕಟ್ಟು
ಟೊಮ್ಯಾಟೊ – 2 ಕತ್ತರಿಸಿದ್ದು
ಹಸಿಮೆಣಸಿನಕಾಯಿ – 4 – ಚೂರು ಮಾಡಿದ್ದು
ರಸಂ ಪುಡಿ – ಸ್ವಲ್ಪ
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಒಗ್ಗರಣೆಗೆ ಅಗತ್ಯವಾದಷ್ಟು
ಜೀರಿಗೆ – 1/4 ಟೀ ಚಮಚ
ಸಾಸಿವೆ- 1/4 ಟೀ ಚಮಚ
ಕೊತ್ತೊಂಬರಿ ಸೊಪ್ಪು – ಸ್ವಲ್ಪ ಕತ್ತರಿಸಿದ್ದು
ಮಾಡುವ ವಿಧಾನ : ಪಾಲಕ್ ಸೊಪ್ಪನ್ನು ಚೆನ್ನಾಗಿ ತೊಳೆದು ಸಣ್ಣಗೆ ಕತ್ತರಿಸಿ. ಬಾಣಲೆಯಲ್ಲಿ ಎಣ್ಣೆ ಹಾಕಿ ಕಾದ ಅನಂತರ ಜೀರಿಗೆ, ಸಾಸಿವೆ ಹಾಕಿ. ಸಿಡಿದ ಮೇಲೆ ಕತ್ತರಿಸಿದ ಟೊಮ್ಯಾಟೊವನ್ನು ಹಾಕಿ 3 ನಿಮಿಷ ಚೆನ್ನಾಗಿ ಹುರಿಯಿರಿ. ಪಾಲಕ್ ಸೊಪ್ಪು ಹಾಕಿ ಚೆನ್ನಾಗಿ ಬೆರೆಸಿ. ಉಪ್ಪು, ಕತ್ತರಿಸಿದ ಹಸಿಮೆಣಸಿನಕಾಯಿ ಮತ್ತು ರಸಂ ಪುಡಿಯನ್ನು ಸೇರಿಸಿ, ಅರ್ಧ ಲೋಟ ನೀರು ಹಾಕಿ 5 ನಿಮಿಷ ಮುಚ್ಚಿಡಿ. ಅನಂತರ ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಹಾಕಿ ಅಲಂಕರಿಸಿ. ಬಿಸಿಯಲ್ಲಿಯೇ ಸವಿಯಲು ನೀಡಿ.
ಪಾಲಕ್ ಸೊಪ್ಪಿನ ಉಪಯೋಗಗಳು

1. ತೂಕ ಕಡಮೆ ಮಾಡಲು : ಪೌಷ್ಟಿಕಾಂಶಭರಿತ ಪಾಲಕ್‌ನಲ್ಲಿ ಕ್ಯಾಲೊರಿ ಮತ್ತು ಕೊಬ್ಬಿನ ಅಂಶ ಕಡಮೆ ಇರುವುದರಿಂದ ತೂಕ ಇಳಿಸಿಕೊಳ್ಳಲು ನೆರವಾಗಬಹುದು.
2. ಮೂಳೆ ರಕ್ಷಣೆ : ಪಾಲಕ್‌ನಲ್ಲಿ ವಿಟಮಿನ್ ‘ಕೆ’ ಸಮೃದ್ಧವಾಗಿದೆ. ಇದು ಆರೋಗ್ಯಕರ ಮೂಳೆ ರಕ್ಷಣೆಗೆ ಮುಖ್ಯವಾದುದು.
3. ರಕ್ತಹೀನತೆಗೆ ರಾಮಬಾಣ : ಕಬ್ಬಿಣದ ಅಂಶ ಇರುವುದರಿಂದ ಪಾಲಕ್‌ನ ಕ್ರಮಬದ್ಧ ಬಳಕೆಯಿಂದ ರಕ್ತಹೀನತೆಯನ್ನು (ಅನೀಮಿಯ) ಗುಣಪಡಿಸಿಕೊಳ್ಳಬಹುದು.
4. ಕಣ್ಣು ರಕ್ಷಣೆ : ಪಾಲಕ್‌ನ ಆಂಟಿ ಆಕ್ಸಿಡೆಂಟ್ ಗುಣ ಮತ್ತು ಅಧಿಕವಾಗಿರುವ ವಿಟಮಿನ್ ’ಎ‘ ಕಣ್ಣುಗಳ ರಕ್ಷಣೆಗೆ ನೆರವಾಗುತ್ತವೆ.