ಷಡ್‌ಭುಜ ಮೂರ್ತಿ

ಶ್ರೀ ಚೈತನ್ಯರ ಆರು ಬಾಹುಗಳ ರೂಪ

ಆಕರ: ಬ್ಯಾಕ್‌ ಟು ಗಾಡ್‌ಹೆಡ್‌ ಪತ್ರಿಕೆ, ಸತ್ಯರಾಜ ದಾಸ

ನಾನು ಹರೇ ಕೃಷ್ಣ ಆಂದೋಲನವನ್ನು ಸೇರಿದಾಗ, ಶ್ರೀಲ ಪ್ರಭುಪಾದರ ಪುಸ್ತಕಗಳಲ್ಲಿನ ಯಾವುದೋ ಭಾಗ ನನ್ನ ಕುತೂಹಲವನ್ನು ಕೆರಳಿಸಿತು : ಭಗವಂತನ ಅಪರಿಮಿತ ಲಕ್ಷಣವು ಕೇವಲ ಅಸಂಖ್ಯ ರೂಪಗಳನ್ನು ಹೊಂದಿರುವುದಕ್ಕಿಂಲೂ ಆಚೆಗೆ ಸಾಗಿದೆ; ಅಚ್ಚರಿಯಾದುದೇನೆಂದರೆ, ಈ ರೂಪಗಳು ಆಗಾಗ್ಗೆ ಅಸಂಖ್ಯ ಬಾಹುಗಳನ್ನೂ ಹೊಂದಿವೆ ಎನ್ನುವುದು. ವಾಸ್ತವವಾಗಿ ಭಾರತದ ಜ್ಞಾನ ಗ್ರಂಥಗಳು ದಿವ್ಯಾನಂದದಾಯಕ ಬಹು ಬಾಹು ಜೀವಿಗಳ ಅದ್ಭುತ ಲೋಕವನ್ನು ವಿವರಿಸುತ್ತವೆ. ಅಲ್ಲಿ ನಾಲ್ಕು ಭುಜಗಳ ವಿಷ್ಣು ಮತ್ತು ಅವನ ಸತಿ ಎಂಟು ಭುಜಗಳ ಲಕ್ಷ್ಮಿ; ಹತ್ತು ಭುಜಗಳ ಕಾಲೀ ದೇವಿ; ಮತ್ತು ದಿಗಿಲು ಪಡಿಸುವ ಉಗ್ರ, ಸಾವಿರ ಬಾಹುಗಳ, ಸಿಂಹ ಶಿರದ ದೇವರು ನರಸಿಂಹ ಅಲ್ಲಿ ಉಂಟು. ಇವೆಲ್ಲವೂ ಮತ್ತು ಇನ್ನೂ ಹೆಚ್ಚು ಬಹು ಆಯಾಮದ ಅಲೌಕಿಕ ಸಾಮ್ರಾಜ್ಯದಲ್ಲಿ ನೆಲೆಸಿವೆ. ಇದನ್ನು ನಮ್ಮ ನಿಜವಾದ ಧಾಮ, ದೇವೋತ್ತಮನ ಸಾಮ್ರಾಜ್ಯ, ನಮ್ಮ ಹೃದಯಾನಂದದ ಧಾಮ ಎಂದು ನಮ್ಮ ಪರಂಪರೆಯು ಹೇಳುತ್ತದೆ. ಭಗವಂತ ಅಥವಾ ಅವನ ವಿಸ್ತರಣೆಗಳಿಗೆ ಬಹು ಬಾಹುಗಳ ಅಗತ್ಯವೇಕೆ ಎಂದು ನಾನು ಅಚ್ಚರಿಪಟ್ಟಿರುವೆ. ಎರಡು ಸಾಕಲ್ಲವೇ? “ಅವನ ಕರಗಳಲ್ಲಿ ಇಡೀ ವಿಶ್ವವಿದೆ” ಎಂಬ ಹಳೆಯ ಹಾಡೊಂದರ ಬಗೆಗೆ ಯೋಚಿಸಿದೆ. ಹೌದು, ಅವನ ಕರಗಳಲ್ಲಿ ಇಡೀ ವಿಶ್ವವಿದೆ ಎಂದು ನಾನು ಭಾವಿಸಿದೆ ಮತ್ತು ಪರಂಪರೆಯು ಹೇಳುವಂತೆ ಅವನಿಗೆ ಎರಡಕ್ಕಿಂತ ಹೆಚ್ಚು ಕೈ ಇರಬಹುದು.

ಆದರೂ, ದೇವರು ಏಕೆ ಮಾನವ ಬಾಹ್ಯಾಕಾರಕ್ಕೆ ಸೀಮೀತವಾಗಿರಬೇಕು? ಅವನು ಹಾಗೆ ಮಾಡಿದರೆ, ಆಗ ಅವನೂ ಕೂಡ ಮಾನವ ಸೀಮಿತಗಳಿಗೆ ಅನುಗುಣವಾಗುವುದಿಲ್ಲವೇ? ದೇವರನ್ನು ಹಾಗೇಕೆ ಮಾಡಲು ಪ್ರಯತ್ನಿಸಬೇಕು?

ಗ್ರೀಕ್‌ ತತ್ತ್ವಜ್ಞಾನಿ ಕ್ಸೆನೋಫೇನ್ಸ್‌ ಧರ್ಮದ ವಿಗ್ರಹಗಳನ್ನು ಕುರಿತು ಮನೋಕಲ್ಪನೆಯ ರೂಪವಾಗಿ ಹೇಳಿದ್ದಾನೆ. ನಾವು ಮಾನವರಾಗಿರುವುದರಿಂದ ದೇವರನ್ನು ಮಾನವ ರೀತಿಯಲ್ಲಿ ಕಲ್ಪಿಸಿಕೊಳ್ಳುತ್ತೇವೆ ಎಂದು ಅವನು ಹೇಳಿದ್ದಾನೆ. ನಾವು ಗಿಡಗಳು ಅಥವಾ ಪ್ರಾಣಿಗಳಾಗಿದ್ದರೆ ಅವನನ್ನು ಗಿಡ ಅಥವಾ ಪ್ರಾಣಿಯಾಗಿ ಕಲ್ಪಿಸಿಕೊಳ್ಳುತ್ತಿದ್ದೆವು ಎಂದು ಅವನು ಹೇಳಿದ್ದಾನೆ.

ವೈದಿಕ ವ್ಯವಸ್ಥೆಯೂ ಅದೇ ರೀತಿ ಎಂದುಕೊಳ್ಳಬಾರದು. ದೇವೋತ್ತಮನು ಬದುಕಿನ ಎಲ್ಲ ಜೀವಿಗಳ ರೂಪದಲ್ಲಿ ಪ್ರಕಟವಾಗುವುದನ್ನು ನಾವು ಅಲ್ಲಿ ನೋಡುತ್ತೇವೆ – ವರಾಹ, ಮೀನು, ಮೊಸಳೆ, ಮಾನವ-ಸಿಂಹವಾಗಿ ಕೂಡ. ಆದುದರಿಂದ ದೇವರನ್ನು ಕುರಿತ ವೈದಿಕ ಕಲ್ಪನೆಯು ಸುಮ್ಮನೆ ನಮ್ಮದೇ ರೂಪದ ಪರಿಕಲ್ಪನೆಯಲ್ಲ. ಕ್ಸೆನೋಫೇನ್ಸ್‌ನ ವಾದವನ್ನು ನಾವು ಹೀಗೆ ಪ್ರತಿರೋಧಿಸುತ್ತೇವೆ : ದೇವರನ್ನು ಕುರಿತ ವೈದಿಕ ಕಲ್ಪನೆ ಮಾನವ ನಿರ್ಮಿತವಲ್ಲ, ಅಥವಾ ಕೊನೆ ಪಕ್ಷ ಸಾಮಾನ್ಯ ಕಾರಣಗಳಿಗಾಗಿ ಅದನ್ನು ಆರೋಪಿಸಬಾರದು. ಅದು ಎಂತಹ ಕಲ್ಪನೆ ಎಂದರೆ, ಅದು ಮಾನವ ರೂಪದಿಂದ ಹಿಡಿದಿಡುವಂತಹುದಲ್ಲ ಅಥವಾ ನಿರೂಪಿಸುವಂತಹುದಲ್ಲ.

ನಾನು ನೋಡುವ ರೀತಿಯಲ್ಲಿ ಈ ಅಭಿಪ್ರಾಯದ ವಿಸ್ತರಣೆಯನ್ನು ಈಗ ಚರ್ಚೆಯಲ್ಲಿರುವ ಬಹು ಸಂಖ್ಯೆಯ ಬಾಹುಗಳ ವಿಷಯದಲ್ಲಿ ಕಾಣಬಹುದು – ವೈದಿಕ ಕಲ್ಪನೆಯು ನಮ್ಮ ಸಾಮಾನ್ಯ ಎರಡು ಬಾಹು ಕಲ್ಪನೆಗೆ ಸೀಮಿತವಾಗಿಲ್ಲ.

ಆದರೂ ಏಕೆ ಈ ಎಲ್ಲ ಬಾಹುಗಳು?

ಸಾಮಾನ್ಯವಾಗಿ ದೇವರ ಪ್ರತಿಯೊಂದು ರೂಪದಲ್ಲಿಯೂ ಅವನ ಕೈಗಳಲ್ಲಿ ಯಾವುದಾದರೂ ವಸ್ತು ಇರುವುದನ್ನು ನೋಡುತ್ತೇವೆ. ಅವು ಆ ವಿಶಿಷ್ಟ ರೂಪದ ಅವನ ವಿವಿಧ ಗುಣಗಳ ಸಂಕೇತ ಅಥವಾ ಗುಣಗಳನ್ನು ಪ್ರತಿನಿಧಿಸುವಂತಾಗಿರುತ್ತವೆ. ಇತರ ದೈವೀ ವ್ಯಕ್ತಿಗಳ ವಿಷಯದಲ್ಲಿಯೂ ಸಾಮಾನ್ಯವಾಗಿ ಅದೇ ನಿಜ. ಕೆಲವು ವೇಳೆ ಅವುಗಳ ಕೈಗಳು ಖಾಲಿಯಾಗಿರುತ್ತವೆ, ಆದರೆ ಬೆರಳುಗಳ ಮತ್ತು ಅಂಗೈನ ಭಂಗಿಯು ಅವರ ಮನಸ್ಥಿತಿ ಮತ್ತು ಗುಣವನ್ನು ನಿರೂಪಿಸುತ್ತವೆ. ಉದಾಹರಣೆಗೆ, ನಾಟ್ಯ ಶಾಸ್ತ್ರದಿಂದ ಪಡೆದುಕೊಂಡಿರುವ ಪಾರಂಪರಿಕ ಭರತನಾಟ್ಯ ಹಸ್ತದ ಅರ್ಥಸೂಚಕ ಚಲನೆಯು ಸಾಮಾನ್ಯವಾಗಿ ಮಾಹಿತಿಯನ್ನು ನೀಡುತ್ತದೆ : ನರ್ತಕಿಯು ಬೆರಳುಗಳನ್ನು ಕೆಳಗೆ ತೋರಿಸುತ್ತಿದ್ದರೆ, ಈ ನಿರ್ದಿಷ್ಟ ದೈವವು ಅಭಯ ಹಸ್ತ ಉಳ್ಳದ್ದೆಂದು ಅರ್ಥ; ಬೆರಳುಗಳನ್ನು ಮೇಲಕ್ಕೆ ತೋರಿಸುತ್ತಿದ್ದರೆ, ಈ ದೇವರು ವರದಹಸ್ತ.

ಎಲ್ಲ ದೇವರುಗಳಲ್ಲಿ ವಿಷ್ಣುವೇ ಪರಮ ಮತ್ತು ಅವನ ನಾಲ್ಕು ಹಸ್ತಗಳು ನಾಲ್ಕು ದಿಕ್ಕುಗಳ ಮೇಲಿನ ಪ್ರಭುತ್ವವನ್ನು ವ್ಯಕ್ತಪಡಿಸುತ್ತವೆ ಎಂದು ವಿಷ್ಣು ಧರ್ಮೋತ್ತರ ಪುರಾಣವು ಹೇಳುತ್ತದೆ. ಅದು “ಸರ್ವವ್ಯಾಪಿ” ಎಂಬ ಅವನ ಹೆಸರಿನ ಅರ್ಥಕ್ಕೇ ನಮ್ಮನ್ನು ಕರೆದೊಯ್ಯುತ್ತದೆ.

ವಿಷ್ಣುವಿನ ಬಾಹುಗಳು ಮಾನವ ಜೀವನದ ನಾಲ್ಕು ಧ್ಯೇಯಗಳನ್ನು (ಪುರುಷಾರ್ಥಗಳು) ನಿರೂಪಿಸುತ್ತವೆ ಎಂದೂ ಅದೇ ಪುರಾಣವು ವಿವರಿಸುತ್ತದೆ : (1) ಕರ್ತವ್ಯ ಮತ್ತು ಸದ್ಗುಣ (ಧರ್ಮ); (2) ಲೌಕಿಕ ವಸ್ತು, ಸಂಪತ್ತು ಮತ್ತು ಯಶಸ್ಸನ್ನು ಗಳಿಸುವುದು (ಅರ್ಥ); (3) ಆನಂದ, ಇಂದ್ರಿಯ ಸುಖ (ಕಾಮ); (4) ವಿಮೋಚನೆ (ಮೋಕ್ಷ). ಮುಖ್ಯ ಉದ್ದೇಶವು ಸ್ವರ್ಗಕ್ಕೆ ಹೋಗುವುದಲ್ಲ, ಆದರೆ ಭಗವಂತನಿಗಾಗಿ ಪ್ರೀತಿಯನ್ನು ಬೆಳೆಸಿಕೊಳ್ಳುವುದು. ಇದೇ ಮಾನವ ಅಸ್ತಿತ್ವದ ನಿಜವಾದ ಧ್ಯೇಯ.

ತುಂಬ ಮುಖ್ಯವಾಗಿ, ವಿಷ್ಣುವಿನ ವ್ಯಕ್ತಿತ್ವವನ್ನು ನಮಗೆ ಹೇಳುವ ಸಾಧನಗಳನ್ನು ಅವನು ತನ್ನ ಕೈಗಳಲ್ಲಿ ಹಿಡಿದಿದ್ದಾನೆ : ಶಂಖ, ಚಕ್ರ, ಗದಾ, ಪದ್ಮ. ಮೊದಲು ನಾನು ಓದಿದ ಪೂರ್ವತ್ತ್ವ ತತ್ತ್ವಜ್ಞಾನ ಅಧ್ಯಯನ ನೆನಪಾಯಿತು : ಶಂಖವು ಸೃಷ್ಟಿಶಕ್ತಿ ಮತ್ತು ವಿಜಯವನ್ನು ಸಂಕೇತಿಸುತ್ತದೆ; ಚಕ್ರವು ಮನಸ್ಸಿನ ಶಕ್ತಿಯನ್ನು (ಈ ಅಸ್ತ್ರದಿಂದ ವಿಷ್ಣುವು ರಾಕ್ಷಸರನ್ನು ಕೊಲ್ಲುತ್ತಾನೆ ಮತ್ತು ತಪ್ಪು ಗ್ರಹಿಕೆ ಹಾಗೂ ಶಂಕೆಗಳನ್ನು ನಿವಾರಿಸುತ್ತಾನೆ) ನಿರೂಪಿಸುತ್ತದೆ; ಗದೆಯಿಂದ ಅವನು ಅಧರ್ಮಿಯರಲ್ಲಿ ಭಯವನ್ನು ಹುಟ್ಟಿಸುತ್ತಾನೆ. ಇದು ಸಾಮರ್ಥ್ಯದ ಸಂಕೇತ; ಮತ್ತು ಕಮಲ ಪುಷ್ಪವು ವಿಮೋಚನೆ ಮತ್ತು ಲೌಕಿಕ ಲೋಕದಾಚೆಗೆ ಮೇಲೇಳುವ ಸಾಮರ್ಥ್ಯವನ್ನು ನಿರೂಪಿಸುತ್ತದೆ.

ಆಧ್ಯಾತ್ಮಿಕ ಮತ್ತು ಲೌಕಿಕ ಲೋಕಗಳಲ್ಲಿ ಕೃಷ್ಣನ ಅಸಂಖ್ಯ ವಿಷ್ಣು ವಿಸ್ತರಣೆಗಳಿವೆ. ಅವುಗಳ ನಾಲ್ಕು ಕೈಗಳಲ್ಲಿ ನಾಲ್ಕು ಸಂಕೇತಗಳ ಸ್ಥಾಪನೆಯಿಂದ ತೋರಿರುವ ವಿಷ್ಣುವಿನ 24 ರೂಪಗಳ ವ್ಯತ್ಯಾಸವನ್ನು ಸಿದ್ಧಾರ್ಥ ಸಂಹಿತವು ವಿವರಿಸುತ್ತದೆ ಎಂದು ಶ್ರೀ ಚೈತನ್ಯ ಮಹಾಪ್ರಭುಗಳು ಸನಾತನ ಗೋಸ್ವಾಮಿ ಅವರಿಗೆ ಬೋಧಿಸುತ್ತಾರೆ.

ಆರು ಬಾಹುಗಳ ರೂಪ

ದೇವರಿಗೆ ಬಹು ಬಾಹುಗಳಿವೆ ಎಂಬ ವಿಷಯದ ಬಗೆಗಿನ ನನ್ನ ಆರಂಭಿಕ ಆಸಕ್ತಿಯನ್ನು ಕುರಿತು ಯೋಚಿಸಿದಾಗ, ಷಡ್‌ಭುಜ ಮೂರ್ತಿ ಎಂದು ಕರೆಯುವ ರೂಪ ಅಥವಾ ಶ್ರೀ ಚೈತನ್ಯ ಮಹಾಪ್ರಭುಗಳ ಆರು ಬಾಹು ರೂಪಕ್ಕೆ ನಾನು ವಿಶೇಷವಾಗಿ ಆಕರ್ಷಿತನಾಗಿದ್ದು ನೆನಪಾಗುತ್ತದೆ. ಕೃಷ್ಣನು ಅರ್ಜುನನಿಗೆ ತೋರಿದ ಸಾವಿರ ಬಾಹುಗಳ ವಿಶ್ವ ರೂಪ, ಭಯಾನಕವಾದ ದಶ ಬಾಹುಗಳ ನರಸಿಂಹದೇವನಿಂದ ನಾನು ಸ್ವಲ್ಪ ದಿಗ್ಭ್ರಮೆಗೊಂಡರೂ ಮಹಾಪ್ರಭುಗಳ ಷಡ್‌ ಬಾಹುಗಳ ರೂಪವು ನನ್ನನ್ನು ಸೆಳೆಯುತ್ತಿದೆ ಎಂದು ನಾನು ಕಂಡುಕೊಂಡಿದ್ದೆ. ಇಂದಿಗೂ ಆ ರೂಪದ ಬಗೆಗೆ ನನಗೆ ವಿಶೇಷ ಪ್ರೀತಿ ಮತ್ತು ಒಲವು.

ಈ ರೂಪದ ಬಗೆಗೆ ಶ್ರೀಲ ಪ್ರಭುಪಾದರ ವಿವರವನ್ನು ನನ್ನ ಆರಂಭಿಕ ಅಧ್ಯಯನದಲ್ಲಿ ಓದಿದ್ದು ನೆನಪಾಗುತ್ತದೆ : “ಆರು ಭುಜಗಳುಳ್ಳ – ಷಡ್ಭುಜ – ಗೌರಸುಂದರ ಪ್ರಭುವಿನ ಆಕಾರವು ಮೂರು ಅವತಾರಗಳ ಪ್ರತೀಕ. ಒಂದು ಕೈಯಲ್ಲಿ ಬಿಲ್ಲು, ಇನ್ನೊಂದರಲ್ಲಿ ಬಾಣ ಶ್ರೀ ರಾಮಚಂದ್ರನ ಪ್ರತೀಕ; ಗೊಲ್ಲನಂತೆ ಒಂದು ಕೈಯಲ್ಲಿ ಕೋಲು ಇನ್ನೊಂದರಲ್ಲಿ ಕೊಳಲು ಹಿಡಿದಿರುವುದು ಶ್ರೀ ಕೃಷ್ಣನ ಪ್ರತೀಕ; ಒಂದು ಕೈಯಲ್ಲಿ ಸಂನ್ಯಾಸ ದಂಡ, ಇನ್ನೊಂದರಲ್ಲಿ ಕಮಂಡಲು ಶ್ರೀ ಚೈತನ್ಯ ಮಹಾಪ್ರಭುಗಳ ಪ್ರತೀಕ.” (ಚೈತನ್ಯ ಚರಿತಾಮೃತ, ಆದಿ 17.12 ಭಾವಾರ್ಥ)

“ಓಹ್‌, ಕೃಷ್ಣನ ಎಲ್ಲ ಪ್ರಮುಖ ಅವತಾರಗಳು ಒಂದೇ ರೂಪದಲ್ಲಿ!” ಎಂದು ನಾನು ಯೋಚಿಸಿದೆ.

ಆ ಕಲ್ಪನೆ ನನಗೆ ಇಷ್ಟವಾಯಿತು ಮತ್ತು ಪ್ರಭುಪಾದರೂ ಈ ರೂಪವನ್ನು ವಿಶೇಷವಾಗಿ ಕಂಡಿದ್ದನ್ನು ನಾನು ಗಮನಿಸಿದೆ : “ಭಗವಾನ್‌ ಶ್ರೀರಾಮಚಂದ್ರನು ತನ್ನ ಭಕ್ತರಲ್ಲಿ ಅದೆಷ್ಟು ದಯಾಳುವೂ ಕರುಣಾಮಯಿಯೂ ಆಗಿರುವನೆಂದರೆ, ಮನುಷ್ಯರಾಗಲಿ, ಬೇರೆ ಯಾರೇ ಆಗಲಿ, ಅಲ್ಪಸೇವೆ ಸಲ್ಲಿಸಿದರೂ ಆತ ಅದರಿಂದ ತುಂಬ ಸುಲಭವಾಗಿ ತೃಪ್ತನಾಗುವನು. ಇದು ಭಗವಾನ್‌ ಶ್ರೀರಾಮಚಂದ್ರನನ್ನು ಆರಾಧಿಸುವುದರಲ್ಲಿ ಇರುವ ವಿಶಿಷ್ಟ ಸೌಕರ್ಯ; ಅದೇ ಸೌಕರ್ಯ ಭಗವಾನ್‌ ಶ್ರೀ ಚೈತನ್ಯ ಮಹಾಪ್ರಭುಗಳನ್ನು ಆರಾಧಿಸುವುದರಲ್ಲೂ ಇದೆ. ಭಗವಾನ್‌ ಕೃಷ್ಣ ಮತ್ತು ಭಗವಾನ್‌ ಶ್ರೀರಾಮಚಂದ್ರರು ಕ್ಷತ್ರಿಯ ರೂಪದಲ್ಲಿದ್ದು, ಅಸುರರನ್ನು ಕೊಂದು ಕೃಪೆದೋರಿದ್ದಾರೆ. ಆದರೆ ಭಗವಾನ್‌ ಶ್ರೀ ಚೈತನ್ಯ ಮಹಾಪ್ರಭುಗಳು ಅಸುರರಿಗೂ ಕೂಡ ಕಷ್ಟವಿಲ್ಲದೆ ಭಗವತ್‌ಪ್ರೇಮವನ್ನು ಕರುಣಿಸಿದ್ದಾರೆ. ದೇವೋತ್ತಮ ಪರಮ ಪುರುಷನ ಎಲ್ಲ ಅವತಾರಗಳು, ವಿಶೇಷವಾಗಿ ಭಗವಾನ್‌ ಶ್ರೀರಾಮಚಂದ್ರ, ಭಗವಾನ್‌ ಕೃಷ್ಣ ಮತ್ತು ಭಗವಾನ್‌ ಶ್ರೀ ಚೈತನ್ಯ ಮಹಾಪ್ರಭುಗಳು ತಮ್ಮ ಎದುರಿಗಿದ್ದ ಅನೇಕ ಜೀವಿಗಳ ಉದ್ಧಾರವನ್ನು ಮಾಡಿದ್ದಾರೆ.” (ಭಾಗವತ, 5.19.8-9 ಭಾವಾರ್ಥ)

ಈ ರೂಪದ ಆರಂಭಿಕ ಕಲಾ ಚಿತ್ರವು ಒಡಿಶಾ ಶೈಲಿಯಲ್ಲಿರುವಂತೆ ಕಾಣುತ್ತದೆ. ಜಗನ್ನಾಥ ಪುರಿಯ ಜಗನ್ನಾಥ ಮಂದಿರ ಮತ್ತು ಗಂಗಾಮಾತ ಮಠದ ಗೋಡೆಗಳ ಮೇಲೆ ಅವು ಚಿತ್ರಿತವಾಗಿವೆ.

ಪುರಿಯ ಮುಖ್ಯ ಮಂದಿರದ ಕಟ್ಟಡದ ದಕ್ಷಿಣ ಭಾಗದಲ್ಲಿ ಷಡ್‌ಭುಜ ರೂಪದಲ್ಲಿ ಶ್ರೀ ಚೈತನ್ಯರ ವಿಗ್ರಹವನ್ನು ಕಾಣಬಹುದು. ಇದು ಏಕೆಂದರೆ ಮಹಾಪ್ರಭುಗಳು ಈ ರೂಪವನ್ನು ರಾಜ ಪ್ರತಾಪರುದ್ರ ಮತ್ತು ಸಾರ್ವಭೌಮ ಭಟ್ಟಾಚಾರ್ಯರಿಗೆ ಪ್ರಕಟಪಡಿಸಿದ್ದರು. ರಾಜನು ಈ ರೂಪವನ್ನು ಮಂದಿರ ಗೋಪುರದ ಹೊರಗೆ, ನಾಟ್ಯ ಮಂದಿರದ ಮೇಲು ಗೋಡೆ ಮತ್ತು ದಕ್ಷಿಣ ದ್ವಾರದ ಸಮೀಪದ ಕೊಠಡಿಯಲ್ಲಿ ಚಿತ್ತಿಸಲು ಕ್ರಮ ಕೈಗೊಂಡಿದ್ದನು.

ಚೈತನ್ಯ ಚರಿತಾಮೃತದಲ್ಲಿ ವಿವರಿಸಿರುವಂತೆ ಶ್ರೀ ಚೈತನ್ಯರು ಈ ರೂಪವನ್ನು ಶ್ರೀ ನಿತ್ಯಾನಂದ ಪ್ರಭುಗಳಿಗೆ ತೋರಿಸಿದ್ದರು. ಶತ ಶತಮಾನಗಳಿಂದ ಅನೇಕ ಕಲಾವಿದರು ಪ್ರಭುವಿನ ಈ ರೂಪವನ್ನು ಚಿತ್ರಿಸಿದ್ದಾರೆ.

ಐತಿಹಾಸಿಕ ಪ್ರಕಟನೆ ಮತ್ತು ಒಳಾರ್ಥ

ಶ್ರೀ ಚೈತನ್ಯರ ಅಧಿಕೃತ ಜೀವನ ಚರಿತ್ರೆಗಳ ಪ್ರಕಾರ, ಆಗ ಷಡ್‌ಭುಜ ಮೂರ್ತಿಯನ್ನು ಮೂರು ಬಾರಿ ಪ್ರಕಟಪಡಿಸಲಾಯಿತು. ಅದು ಈ ಕ್ರಮದಲ್ಲಿ :

1.  ನಿತ್ಯಾನಂದ ಪ್ರಭುಗಳಿಗೆ ಮಾಯಾಪುರದಲ್ಲಿ ಶ್ರೀವಾಸ ಠಾಕುರರ ಮನೆಯಲ್ಲಿ. ಇದು ವ್ಯಾಸ ಪೂಜೆಯ ಸಂದರ್ಭದಲ್ಲಿ ಸಂಭವಿಸಿತು.

2. ಪುರಿಗೆ ಪ್ರಭುಗಳು ಬಂದಾಗ ಸಾರ್ವಭೌಮ ಭಟ್ಟಾಚಾರ್ಯರ ಮನೆಯಲ್ಲಿ ಅವರಿಗೆ ತೋರಿದರು.

3. ಮಹಾಪ್ರಭುಗಳು ತಮ್ಮ ದಕ್ಷಿಣ ಭಾರತ ಯಾತ್ರೆಯಿಂದ ಹಿಂದಿರುಗಿದ ಮೇಲೆ ಮಹಾರಾಜ ಪ್ರತಾಪರುದ್ರನಿಗೆ ತೋರಿಸಿದ್ದು.

ಲೋಚನ ದಾಸರ ಚೈತನ್ಯ ಮಂಗಲದಲ್ಲಿ ಇರುವ ಈ ಹಾಡು ನಮಗೆ ಷಡ್‌ಭುಜ ರೂಪದ ಗಾಢ ಅರ್ಥವನ್ನು ನೀಡುತ್ತದೆ. ಶ್ರೀ ಚೈತನ್ಯರು ಸಂನ್ಯಾಸ ಸ್ವೀಕರಿಸಿದ ಅನಂತರದ ದೃಶ್ಯವನ್ನು ಅದು ನಿರೂಪಿಸುತ್ತದೆ. ಆಗ ಮಹಾಪ್ರಭುಗಳು ತಮ್ಮ ದಂಡಕ್ಕೆ ಪ್ರಾರ್ಥನೆ ಸಲ್ಲಿಸುತ್ತಾರೆ. ಅದು ತಮ್ಮ ಬಿಲ್ಲು ಮತ್ತು ಕೊಳಲಿಗೆ ಸಮಾನವಾದುದು ಎಂದು ಅದರಲ್ಲಿ ಹೇಳುತ್ತಾರೆ :

“ಓ ನನ್ನ ದಂಡವೇ! ಸಂನ್ಯಾಸಿಯಾಗಿ ನಾನು ಎಲ್ಲವನ್ನೂ ಬಿಟ್ಟುಬಿಟ್ಟಿರುವೆ. ಆದರೂ ನೀನು ನನ್ನನ್ನು ಬಿಡಲಿಲ್ಲ. ನೀನು ನನ್ನೊಡನೆ ಇರುವೆ, ಜನ್ಮ ಜನ್ಮಾಂತರದಲ್ಲಿ ನನ್ನ ಜೊತೆಗೂಡಿದೆ. ರಾಮನಾಗಿ ಅರಣ್ಯದಲ್ಲಿ ಸಂಚರಿಸುತ್ತಿದ್ದಾಗ ನನ್ನ ಬಿಲ್ಲು ಮತ್ತು ಬಾಣವಾಗಿ ನೀನು ಸದಾ ನನ್ನ ಕೈಯಲ್ಲಿ ಇರುತ್ತಿದ್ದೆ. ಕೃಷ್ಣನಾಗಿ ನನ್ನ ಲೀಲೆಯ ಸಮಯದಲ್ಲಿ, ಭಕ್ತಿಪ್ರೇಮದಿಂದ ಇಡೀ ಲೋಕವನ್ನು ಸೆಳೆಯುತ್ತ ಸದಾ ಕೈಯಲ್ಲಿ ನನ್ನ ಕೊಳಲಾಗಿದ್ದೆ. ಈಗ, ಸಂನ್ಯಾಸಿಯಾಗಿ ನಾನು ಎಲ್ಲವನ್ನೂ ತ್ಯಜಿಸಿರುವಾಗ, ಕಲಿಯುಗದಲ್ಲಿ ನಂಬಿಕೆ ಇಲ್ಲದವರನ್ನು ಅಡಗಿಸಲು ನೀನು ಈಗಲೂ ನನ್ನ ದಂಡವಾಗಿ ನನ್ನೊಡನೆ ಉಳಿದಿರುವೆ.

ಈ ಪ್ರಾರ್ಥನೆಯು ಷಡ್‌ಭುಜ ರೂಪದ ಬಗೆಗೆ ತಿಳಿಯದ ಆಯಾಮವನ್ನು ಕುರಿತಂತೆ ಬೆಳಕು ಚೆಲ್ಲುತ್ತದೆ. ಭಗವಂತನು ಮುಖ್ಯವಾಗಿ ರಾಮ, ಕೃಷ್ಣ ಮತ್ತು ಚೈತನ್ಯರಾಗಿ ಅವತರಿಸಿದಾಗ ಕೈಗಳಲ್ಲಿ ಹಿಡಿದ ವಸ್ತುಗಳ ನಡುವಣ ಆಧ್ಯಾತ್ಮಿಕ ಸಂಬಂಧ, ಸಂಪರ್ಕವನ್ನು ಬಿಂಬಿಸುತ್ತದೆ.

“ಶ್ರೀಲ ಪ್ರಭುಪಾದರ ಗುರು ಶ್ರೀಲ ಭಕ್ತಿಸಿದ್ಧಾಂತ ಸರಸ್ವತೀ ಠಾಕುರರು ಈ ರೂಪವನ್ನು ಕುರಿತಂತೆ ಮತ್ತೊಂದು ಒಳ ಅರ್ಥವನ್ನು ನೀಡುತ್ತಾರೆ: ಈ ದೈವೀ ರೂಪವನ್ನು ತಮ್ಮ ಸಹವರ್ತಿಗಳಿಗೆ ವ್ಯಕ್ತಪಡಿಸುತ್ತ ಶ್ರೀ ಚೈತನ್ಯರು ತಮ್ಮ ಅಚಿಂತ್ಯ ಬೇಧಾಬೇಧ ಬೋಧನೆಯನ್ನು ಬೆಳಕಿಗೆ ತರುತ್ತಾರೆ. ಪ್ರಭು ಮತ್ತು ಅವನ ಶಕ್ತಿಯ ವಿವಿಧ ರೂಪಗಳ ನಡುವಣ ವ್ಯತ್ಯಾಸವನ್ನೂ ಬಿಂಬಿಸುತ್ತಾರೆ. “ಪ್ರಕಾಶ ಅಥವಾ ವಿಸ್ತರಣೆ, ಅವತಾರ ಅಥವಾ ಆವಿರ್ಭಾವ, ಶಕ್ತಿಗಳು ಅಥವಾ ಸಾಮರ್ಥ್ಯ ಮತ್ತು ಭಕ್ತರು ಇವೆಲ್ಲವೂ ಸ್ವಯಂ ರೂಪ ಅಥವಾ ದೇವೋತ್ತಮ ಪರಮ ಪುರುಷನಿಂದ ಪ್ರತ್ಯೇಕವಲ್ಲ. ಕೃಷ್ಣ ಚೈತನ್ಯರಲ್ಲಿ ಏಕಕಾಲಕ್ಕೆ ಭಿನ್ನವಾದ ಗುಣಗಳೊಂದಿಗೆ ಅವೆಲ್ಲವೂ ವೈಯಕ್ತಿಕವಾಗಿ ಸೇರಿವೆ. ಈ ಅಚಿಂತ್ಯ ಬೇಧಾಬೇಧ ಸಿದ್ಧಾಂತವನ್ನು ತನ್ನ ಗೌರ ಲೀಲದಲ್ಲಿ ಪ್ರದರ್ಶಿಸಲು ಮಹಾಪ್ರಭುವು ತನ್ನ ಷಡ್‌ಭುಜ ರೂಪವನ್ನು ನಿತ್ಯಾನಂದರಿಗೆ ತೋರಿಸಿದರು.” (ಶ್ರೀ ಚೈತನ್ಯ ಭಾಗವತದ ವ್ಯಾಖ್ಯಾನ, ಮಧ್ಯ 5.105)

ಸಾಂಪ್ರದಾಯಿಕ ವೈಷ್ಣವ ಉಪನ್ಯಾಸದಲ್ಲಿ ಅಚಿಂತ್ಯ ಬೇಧಾಬೇಧ ಸಿದ್ಧಾಂತವು ಪ್ರಭುವಿನ ಶಕ್ತಿಗೆ ಸಂಬಂಧಿಸಿದಂತೆ ಅವರ ಅಗತ್ಯ ಗುಣ, ಲಕ್ಷಣಕ್ಕೆ ಅನ್ವಯಿಸುತ್ತದೆ – ಅವರಿಂದ ಹೊರಹೊಮ್ಮುವ ಪ್ರತಿಯೊಂದರಲ್ಲಿಯೂ ಅವರು ಒಬ್ಬರು ಮತ್ತು ಭಿನ್ನ ಹೇಗೆ ಎನ್ನುವುದನ್ನು ಇದು ವಿವರಿಸುತ್ತದೆ. ಆದರೂ ಈ ಉದಾಹರಣೆಯಲ್ಲಿ, ಶ್ರೀಲ ಭಕ್ತಿಸಿದ್ಧಾಂತರು ಮಹಾಪ್ರಭುವಿನ ಅನೇಕ ನೇರ ರೂಪಗಳು ಸೇರುವಂತೆ ಅದರ ಅರ್ಥವನ್ನು ವಿಸ್ತರಿಸಿದ್ದಾರೆ. ಅಂದರೆ, ಅವರು ತಮ್ಮ ಅವತಾರಗಳು ಮತ್ತು ವಿಸ್ತರಣೆಗಳಲ್ಲಿ ಒಬ್ಬರು ಮತ್ತು ಭಿನ್ನರು. ಷಡ್‌ಭುಜ ಮೂರ್ತಿಯು ಈ ಸತ್ಯದ ಪ್ರದರ್ಶನ ಎಂದು ಶ್ರೀಲ ಭಕ್ತಿಸಿದ್ಧಾಂತರು ಹೇಳುತ್ತಾರೆ.

ಕೈಗಳು ಮತ್ತು ಹೃದಯ

ದೇವರ ಅನೇಕ ದೈವೀ ರೂಪ ಮತ್ತು ಅವುಗಳ ಕೈಗಳ ಬಗೆಯ ವಿವರಗಳಿಂದ ವೈದಿಕ ಸಾಹಿತ್ಯವು ತುಂಬಿದೆ. ಆದರೆ ಭಗವಂತನ ಮುಖ್ಯವಾದ ಭಾಗವೆಂದರೆ ಅವನ ಕೈಗಳು ಅಲ್ಲವೇ ಅಲ್ಲ, ಆದರೆ ಅವನ ಹೃದಯ, ಅವನ ಪ್ರೀತಿ ಎಂದು ಅದೇ ಪವಿತ್ರ ಗ್ರಂಥವು ಹೇಳುತ್ತದೆ. ಭಿನ್ನವಾದ ಸಂಕೇತಗಳು ಮತ್ತು ಅವನ ಉದ್ದೇಶ ಹಾಗೂ ಅರ್ಥಗಳ ಆಧಾರಿತವಾದ ಲಕ್ಷಣಗಳೊಂದಿಗೆ ಅವನ ಕೈಗಳು ಅಸೀಮಿತ ವಿಧಗಳಲ್ಲಿ ಇರಬಹುದು. ಆದರೆ ಅವನ ಹೃದಯ ಒಂದೇ. ನಮಗೆ ಅವನ ಪ್ರೀತಿಯು ಏಕಾಗ್ರವಾದುದು. ಅದು ನಿಶ್ಚಿತ.

ಪ್ರಭುಪಾದರು ಇದನ್ನು ಅತ್ಯುತ್ತಮವಾಗಿ ಸಂಕ್ಷೇಪಿಸುತ್ತಾರೆ. ಮೂಲವಾಗಿ ಎರಡು ಕಾರ್ಯಗಳನ್ನು ನಿರ್ವಹಿಸಲು ದೇವರಿಗೆ ಅನೇಕ ಬಾಹುಗಳಿವೆ. ಅದನ್ನು ವಿಶೇಷವಾಗಿ ಚತುರ್ಭುಜ ವಿಷ್ಣುವಿನಲ್ಲಿ ಕಾಣಬಹುದು – ಅಸುರರ ಋಣಾತ್ಮಕತೆಯ ವಿರುದ್ಧ ಶಕ್ತಿಯಾಗಿ ಎರಡು ಕೈಗಳು ಮತ್ತು ಭಕ್ತರ ಆನಂದಕ್ಕಾಗಿ ಎರಡು ಕೈಗಳು :

ಕೃಷ್ಣನು ಬಂದಾಗ ಅವನಿಗೆ ಎರಡು ವ್ಯವಹಾರಗಳು ಇರುತ್ತವೆ; ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಮ್‌ – ಭಕ್ತರಿಗೆ, ನಿಷ್ಠರಿಗೆ ರಕ್ಷಣೆ ನೀಡಲು ಮತ್ತು ಅಸುರರನ್ನು ಸಂಹರಿಸಲು. ಆದುದರಿಂದ ಕೃಷ್ಣನು ಪ್ರತ್ಯಕ್ಷನಾಗಿದ್ದಾಗ ಈ ಎರಡೂ ಅಂಶಗಳನ್ನು ತೋರಿದನು. ನೀವು ನಮ್ಮ ನಾರಾಯಣ ಅಥವಾ ವಿಷ್ಣುವಿನ ಚಿತ್ರಗಳನ್ನು ನೋಡಿರಬಹುದು. ವಿಷ್ಣುವಿಗೆ ನಾಲ್ಕು ಕೈಗಳಿವೆ. ಎರಡು ಕೈಗಳಲ್ಲಿ ಅವನು ಕಮಲ ಪುಷ್ಪ ಮತ್ತು ಶಂಖವನ್ನು ಹಿಡಿದಿದ್ದಾನೆ. ಉಳಿದ ಎರಡು ಕೈಗಳಲ್ಲಿ ಅವನ ಬಳಿ ಗಧೆ ಮತ್ತು ಚಕ್ರಗಳಿವೆ. ಚಕ್ರ ಮತ್ತು ಗದೆಯು ವಿನಾಶಾಯ ಚ ದುಷ್ಕೃತಾಮ್‌ ಅಸುರರು ಮತ್ತು ದುಷ್ಕರ್ಮಿಗಳನ್ನು ಸಂಹರಿಸಲು. ಶಂಖ ಮತ್ತು ಕಮಲ ಪುಷ್ಪವು ಭಕ್ತರಿಗೆ ವರ ಮತ್ತು ಅನುಗ್ರಹವನ್ನು ನೀಡಲೆಂದು ಇದೆ. (ಮೆಲ್ಬೋರ್ನ್‌ನಲ್ಲಿ ಉಪನ್ಯಾಸ, ಏಪ್ರಿಲ್‌ 6, 1972)

ಕವಿ ಕರ್ಣಾಪುರರ 16ನೆಯ ಶತಮಾನದ ಕೃತಿ, ಶ್ರೀ ಚೈತನ್ಯ ಚಂದ್ರೋದಯದಲ್ಲಿ (ಅಂಕ 2, ಪಠ್ಯ 82) ಲೇಖಕರು ವಿಶೇಷವಾಗಿ ಷಡ್‌ಭುಜ ಮೂರ್ತಿಯನ್ನು ಕುರಿತಂತೆ ಅದೇ ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ : “ಈ ಆರು ಬಾಹುಗಳಿಂದ ನೀನು ಆರು ಶತ್ರುಗಳನ್ನು ಸಂಹರಿಸುವೆ ಎಂದು ಕೆಲವರು ಹೇಳುತ್ತಾರೆ. ಓ, ಅಪೇಕ್ಷೆಗಳನ್ನು ಈಡೇರಿಸುವವನೇ, ಈ ಬಾಹುಗಳಿಂದ ನೀನು ಭಕ್ತಿಸೇವೆ, ಭಗವತ್‌ ಪ್ರೇಮ ಮತ್ತು ಬದುಕಿನ ನಾಲ್ಕು ಧ್ಯೇಯಗಳನ್ನು ನೀಡುವೆ ಎಂದು ನಾನು ಹೇಳುವೆ.”

ದಿಟವಾಗಿ ಶ್ರೀರಾಮನ ಬಿಲ್ಲು ಮತ್ತು ಬಾಣವು ಅಸುರರಿಗೆ ಭಯ ಉಂಟು ಮಾಡುತ್ತದೆ. ಕೃಷ್ಣನ ಎರಡು ಕೊಳಲು ಹಿಡಿತವು ಭಕ್ತಿಯ ಸ್ಫೂರ್ತಿಯನ್ನು ನೀಡುತ್ತದೆ, ಮತ್ತು ಶ್ರೀ ಚೈತನ್ಯರ ಬಾಹುಗಳು?  ಕೃಷ್ಣಪ್ರಜ್ಞೆಯನ್ನು ಅಳವಡಿಸಿಕೊಳ್ಳುವವರಿಗೆ ಅವು ಅತ್ಯುತ್ತಮ ಪ್ರೀತಿ, ಪ್ರೇಮವನ್ನು ನೀಡುತ್ತದೆ. ಮಹಾಪ್ರಭುಗಳ ಎರಡು ಬಾಹುಗಳು ಭಕ್ತರನ್ನು ಲೌಕಿಕ ಲೋಕದ ಎಲ್ಲ ಆಯಾಮಗಳ ಆಚೆಗೆ ಕರೆದೊಯ್ಯುತ್ತದೆ ಮತ್ತು ಅಲೌಕಿಕತೆಯ ತೆಕ್ಕೆಯಲ್ಲಿ ಅವರನ್ನು ಇಡುತ್ತದೆ.

ಈ ಲೇಖನ ಶೇರ್ ಮಾಡಿ