ಅಲೆಮಾರಿ ಆತ್ಮಕ್ಕೆ ಮನೆ ಎಲ್ಲಿ?

ನಾವು ಅರಸುತ್ತಿರುವ ಅವಿರತ ಸಂತೋಷ ಪಡೆಯುವುದಕ್ಕಾಗಿ ನಾವು ಎಲ್ಲ ಬಗೆಯ ಲೌಕಿಕ ಬಂಧಗಳನ್ನು ತೊಡೆದು ಮುಕ್ತರಾಗಬೇಕು.

ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ

ಸಂಸ್ಥಾಪಕರು ಮತ್ತು ಆಚಾರ್ಯರು : ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘ

ಭಾಗವತ ಧರ್ಮ ಎಂದರೆ,  “ಪರಮ ಪ್ರಭುವಿಗೆ ಸಂಬಂಧಿಸಿದಂತೆ ನಡೆಸಲಾಗುವ ಚಟುವಟಿಕೆಗಳು”. ಪರಮಪ್ರಭು ಭಗವಂತನು ದೇವೋತ್ತಮ ಪರಮ ಪುರುಷನಾಗಿರುವನು. ಭಕ್ತನು ಭಾಗವತ ಎಂದು ಕರೆಯಲ್ಪಡುವನು. ಅಂದರೆ, ಯಾರು ಭಗವಂತನೊಡನೆ ವರ್ತಿಸುವರೋ ಅವನು.

ವಾಸ್ತವವಾಗಿ ಪ್ರತಿಯೊಬ್ಬರೂ, ತಂದೆಗೆ ಮಗನು ಯಾವಾಗಲೂ ಸಂಬಂಧಿಯಾಗಿರುವಂತೆ, ದೇವೋತ್ತಮ ಪರಮ ಪುರುಷನಿಗೆ ಸಂಬಂಧಿಯಾಗಿರುವನು. ಆ ಸಂಬಂಧವು ಯಾವ ಹಂತದಲ್ಲಿಯೂ ಮುರಿಯದು. ಆದರೆ ಕೆಲವೊಮ್ಮೆ ಪುತ್ರನು ಸ್ವೇಚ್ಛೆ ವಹಿಸಿ ಮನೆಯಿಂದ ಹೊರನಡೆಯುವನು ಮತ್ತು ತಂದೆಯೊಂದಿಗಿನ ಪ್ರೇಮಯುತ ಸಂಬಂಧವನ್ನು ಮರೆಯುವನು. ನಿಮ್ಮ ದೇಶದಲ್ಲಿ (ಈ ಮಾತುಗಳನ್ನು ಪ್ರಭುಪಾದರು ಅಮೆರಿಕನ್ನರುದ್ದೇಶಿಸಿ ಆಡುತ್ತಿರುವರು) ಇದೇನೂ ಅತಿಶಯ ಸಂಗತಿಯಲ್ಲ; ಈ ಕ್ಷಣದಲ್ಲಿ ಕೂಡ ಮಕ್ಕಳು ತಂದೆಯ ಪ್ರೇಮದ ಗೃಹವನ್ನು ತೊರೆದು ಹೊರನಡೆಯುತ್ತಲೇ ಇರುವರು.

ಹಾಗೆಯೇ, ನಾವೆಲ್ಲರೂ ಭಗವಂತನ ಮಕ್ಕಳು. ಆದರೆ ಸ್ವೇಚ್ಛಾಚಾರಿಗಳಾದ ನಾವು ಕೆಲವರು ಆಧ್ಯಾತ್ಮಿಕ ಜಗತ್ತನ್ನು ತೊರೆದು, ಆತನೊಂದಿಗಿನ ನಮ್ಮ ಪ್ರೇಮವನ್ನು ಮರೆಯಲು ಯತ್ನಿಸುತ್ತಿರುವೆವು. ಖಂಡಿತವಾಗಿ ನಾವೇನೂ ಸಂಪೂರ್ಣ ಸ್ವತಂತ್ರರಲ್ಲ. ಆದರೆ ನಾವು ಸಣ್ಣ ಮಟ್ಟದ ಸ್ವಾತಂತ್ರ್ಯ ಹೊಂದಿರುವೆವು. ಏಕೆಂದರೆ ಭಗವಂತನು ಸಂಪೂರ್ಣ ಸ್ವತಂತ್ರನು ಮತ್ತು ನಾವೆಲ್ಲರೂ ಅವನ ಮಕ್ಕಳು. ನಾವು ಸ್ವಾತಂತ್ರ್ಯದ ಗುಣವನ್ನು ಚಿಕ್ಕ ಮಟ್ಟದಲ್ಲಿ ಹೊಂದಿರುವೆವು. ಆದ್ದರಿಂದ ನಾವು ಭಗವಂತನೊಂದಿಗಿನ ನಮ್ಮ ಸಂಬಂಧವನ್ನು ನೆನಪಿಡುವ ಅಥವಾ ಮರೆಯುವ ಸ್ವಾತಂತ್ರ್ಯವನ್ನು ಹೊಂದಿರುವೆವು.

ನಾವು ಭಗವಂತನ ಅಂಗ ಭಾಗಗಳಾಗಿದ್ದರೂ ಸಹ, ನಾವು ಅವನಿಂದ ಸ್ವತಂತ್ರರಾಗಿರಲು ಬಯಸಿದಲ್ಲಿ, ನಮ್ಮ ಅಸ್ತಿತ್ವದ ಬದ್ಧತಾ ಹಂತವು ಆರಂಭಗೊಳ್ಳುವುದು. ನಾವು ಹಲವಾರು ವಿಧದಲ್ಲಿ ಬದ್ಧತೆಗೊಳಗಾದ ಭೌತಿಕ ಶರೀರವನ್ನು ಪಡೆಯಬೇಕಾಗುವುದು. ಇಂತಹ ದೇಹವು ನಿರ್ದಿಷ್ಟ ದಿನದಂದು ಜನಿಸಿ, ಬೆಳೆಯುವುದು. ಕೆಲಕಾಲ ಉಳಿದುಕೊಂಡಿರುವುದು. ಕೆಲವು ಉಪ ಉತ್ಪನ್ನಗಳನ್ನು ಸೃಷ್ಟಿಸುವುದು, ಕುಗ್ಗುವುದು, ಕೊನೆಗೆ ಇಲ್ಲವಾಗುವುದು. ಇದು ದೇಹದಲ್ಲಾಗುವ 6 ಬದಲಾವಣೆಗಳು. ಇದಲ್ಲದೆ ದೇಹವು ಹಲವು ಬಗೆಯ ತಾಪಗಳಿಗೆ ಪಕ್ಕಾಗುವುದು. ತಾಪತ್ರಯಗಳಾದ ಮನೋದೈಹಿಕ ಯಾತನೆ, ಸಹಜೀವಿಗಳು ಉಂಟು ಮಾಡುವ ಯಾತನೆ, ಹಾಗೂ ನೈಸರ್ಗಿಕ ತೊಂದರೆಗಳಿಂದಾಗುವ ಯಾತನೆಗಳಿಗೆ ಈಡಾಗುವುದು. ಎಲ್ಲಕ್ಕಿಂತ ಹೆಚ್ಚಾಗಿ ನಮ್ಮೆಲ್ಲ ಬದ್ಧ್ದತೆಗಳು ನಾಲ್ಕು ತತ್ತ್ವಗಳಾದ – ಜನನ, ಜರಾ, ರೋಗ, ಮೃತ್ಯುಗಳಲ್ಲಿ ಸಂಕ್ಷೇಪವಾಗುವುದು. ಇವು ಭೌತಿಕ ಜೀವನದ ಬದ್ಧತೆಗಳು.

ಆದ್ದರಿಂದ ನಮ್ಮ ಮೇಲೆ ಹೇರಿಕೊಳ್ಳುವ ಈ ಬದ್ಧತೆಗಳಿಂದ ಹೊರಬರಲು, ನಾವು ನಮ್ಮ ಮೂಲ ಪ್ರಜ್ಞೆ – ಕೃಷ್ಣಪ್ರಜ್ಞೆ ಅಥವಾ ಭಗವತ್ಪ್ರಜ್ಞೆಯನ್ನು ಮರಳಿಗಳಿಸಿಕೊಳ್ಳಬೇಕು. ಕೃಷ್ಣ ಪ್ರಜ್ಞೆಯನ್ನು ಮರಳಿ ಗಳಿಸುವುದು ನಮಗೆ ಸಹಜವಾಗಿದೆ. ಏಕೆಂದರೆ, ಕೃಷ್ಣನೇ ನಮ್ಮ ಪರಮೋನ್ನತ ಪಿತನಾಗಿದ್ದಾನೆ. ನಮ್ಮಲ್ಲಿ ಪ್ರತಿಯೊಬ್ಬರೂ ಹೇಳುವುದು, “ನಾನು ಇಂತಿಂಥವರ ಮಗ; ಇಂತಿಂಥ ಮಹಾಶಯರು ನನ್ನ ತಂದೆ” ಎಂದು. ಆದ್ದರಿಂದ ನಮ್ಮ ತಂದೆಯನ್ನು ಹಾಗೂ ಅವನೊಂದಿಗಿನ ಸಂಬಂಧವನ್ನು ನೆನೆಸಿಕೊಳ್ಳುವುದು ಸಹಜವೇ ಆಗಿದೆ.

ದುರದೃಷ್ಟವಶಾತ್, ನಾವು ಒಮ್ಮೊಮ್ಮೆ  ಪರಮಪಿತನಾದ ಕೃಷ್ಣನನ್ನು ಮರೆತು, ಪ್ರತ್ಯೇಕವಾಗಿ ಇರಲು ಬಯಸುತ್ತೇವೆ. ನಮ್ಮ ಮರ್ಜಿಗೆ ಅನುಗುಣವಾಗಿ ಅನುಭವಿಸಲು ಬಯಸುತ್ತೇವೆ. ಆದರೆ ಇಂತಹ ಸ್ವೇಚ್ಛೆಯಿಂದ ನಾವೆಂದೂ ತೃಪ್ತಿಹೊಂದಲಾರೆವು. ಭ್ರಮಾತ್ಮಕ ಸಂತೋಷದ ಹಿಂದೆ ಬಿದ್ದು ನಾವು ಇಂದ್ರಿಯ ಸುಖವನ್ನರಸುತ್ತ ದೇಹದಿಂದ ದೇಹಕ್ಕೆ ವಲಸೆ ಹೋಗತೊಡಗುವೆವು. ಆದರೆ ಪ್ರತಿ ದೇಹದಲ್ಲಿ, ಪ್ರತಿ ಜೀವಯೋನಿಯಲ್ಲಿ, ನಾವು ಜನನ, ಜರಾ, ರೋಗ, ಮೃತ್ಯುಗಳ ಯಾತನೆಯನ್ನು ಅನುಭವಿಸಲೇಬೇಕಾಗುವುದು.

ಮಾನವ ಸ್ವರೂಪವು ಪರಮಪಿತ ಶ್ರೀಕೃಷ್ಣನೊಂದಿಗಿನ ನಮ್ಮ ನೈಜ ಸಂಬಂಧವನ್ನು ಸ್ಮರಿಸಿಕೊಂಡು, ಜೀವನದ ಯಾತನಾಮಯ ಬದ್ಧತೆಯಿಂದ ಮುಕ್ತರಾಗಲು ಇರುವ ಸದವಕಾಶವಾಗಿದೆ. ಅನಂತರ ನಾವು ಈ ಭೌತಿಕ ಶರೀರದ ಹೊದಿಕೆಯಿರದ ಆಧ್ಯಾತ್ಮಿಕ ಶರೀರವನ್ನು ಪಡೆಯುವೆವು. ಅದುವೇ ನಮ್ಮ ನೈಜ ಗುರುತಾಗಿರುವುದು. ಈಗ ನಾವು ಎರಡು ಬಗೆಯ ಭೌತಿಕ ದೇಹವನ್ನು ಪಡೆದಿರುವೆವು. ಅವು ಸ್ಥೂಲ ಶರೀರ ಮತ್ತು ಸೂಕ್ಷ್ಮ ಶರೀರ. ಸೂಕ್ಷ್ಮ ಶರೀರವು ಮನಸ್ಸು, ಬುದ್ಧಿ ಹಾಗೂ ಅಹಂಕಾರ – ಮಿಥ್ಯಾಹಂಕಾರಗಳಿಂದ ಕೂಡಿರುವುದು. ಸ್ಥೂಲ ಶರೀರವು ಪಂಚಭೂತಗಳಾದ ಭೂಮಿ, ನೀರು, ಅಗ್ನಿ, ವಾಯು ಹಾಗೂ ಆಕಾಶಗಳಿಂದ ಉಂಟಾಗಿರುವುದು. ಈ ಎರಡು ಬಗೆಯ ಶರೀರಗಳು ಸದಾ ಬದಲಾಗುವವು. ಆದರೆ ಆಧ್ಯಾತ್ಮಿಕ ಶರೀರವು ಬದಲಾಗದೆ ಇರುವುದು.

ಸಾಮಾನ್ಯವಾಗಿ ನಾವು ಸ್ಥೂಲ ಶರೀರ ನೋಡಬಹುದೆ ಹೊರತು ಸೂಕ್ಷ್ಮ ಶರೀರವನ್ನಲ್ಲ. ನಿಮಗೆಲ್ಲರಿಗೂ ಮನಸ್ಸು ಮತ್ತು ಬುದ್ಧಿಗಳಿವೆ ಎಂದು ನನಗೆ ಗೊತ್ತು, ಮತ್ತು ನನಗೆ ಮನಸ್ಸು ಮತ್ತು ಬುದ್ಧಿಗಳಿವೆೆ ಎಂದು ನಿಮಗೆ ಗೊತ್ತು. ಆದರೆ ನಿಮ್ಮ ಮನಸ್ಸು, ಬುದ್ಧಿ ಅಥವಾ ನಿಶ್ಚಯಗಳನ್ನು ನಾನು ನೋಡಲು ಸಾಧ್ಯವಿಲ್ಲ. ನಿಮ್ಮ ಯೋಚನೆಯನ್ನು, ಭಾವನೆಯನ್ನು, ನಿರ್ಧಾರವನ್ನು ನೋಡಲು ಸಾಧ್ಯವಾಗದು. ಹಾಗೆಯೇ ನೀವು ಕೂಡ ನನ್ನ ಸೂಕ್ಷ್ಮ ಶರೀರವನ್ನು ನೋಡಲಾರಿರಿ. ಆದರೆ ನೀವು ನನ್ನ ಪಂಚಭೂತಾತ್ಮಕ ಸ್ಥೂಲ ಶರೀರವನ್ನು ನೋಡಬಹುದು. ನಾನು ಕೂಡ ನಿಮ್ಮ ಸ್ಥೂಲ ಶರೀರವನ್ನು ನೋಡಬಹುದು.

ಸ್ಥೂಲ ಶರೀರವು ಮುರಿದು ಬಿದ್ದಾಗ ನಾವು ಮತ್ತೊಂದು ಸ್ಥೂಲ ಶರೀರಕ್ಕೆ ಕರೆದೊಯ್ಯಲ್ಪಡುವೆವು. ಈ ಪ್ರಕ್ರಿಯೆಯನ್ನು `ಸಾವು’ ಎಂದು ಕರೆಯಲಾಗುವುದು. ನಮ್ಮ ತಂದೆಯು ಮರಣಿಸಿದರೆ, “ಓಹ್! ನನ್ನ ತಂದೆಯು ಹೊರಟು ಹೋದರು” ಎನ್ನುವೆವು. ನಮ್ಮ ತಂದೆಯು ಹೊರಟು ಹೋದರು ಎಂದು ನಾವೇಕೆ ಹೇಳುವೆವು? ಅವರ ಶರೀರವು ಇನ್ನೂ ಅಲ್ಲೇ ಇರುವುದು. ಆದರೆ ವಾಸ್ತವವಾಗಿ ತಂದೆಯು ಹೊರಟು ಹೋಗಿರುವರು. ಏಕೆಂದರೆ ಆಧ್ಯಾತ್ಮಿಕ ಆತ್ಮವು ಸೂಕ್ಷ್ಮ ಶರೀರದಿಂದ ಸೆಳೆದೊಯ್ಯಲ್ಪಡುವುದು. ಹಾಗೆಯೇ, ರಾತ್ರಿಯ  ವೇಳೆ ನಮ್ಮ ಸುಂದರ ಮನೆಯಲ್ಲಿ ನಾವು ಮಲಗಿರುವಾಗ ನಮ್ಮ ಸೂಕ್ಷ್ಮ ಶರೀರವು ನಮ್ಮನ್ನು ಪರ್ವತದೆತ್ತರಕ್ಕೆ ಒಯ್ಯಬಹುದು. ನಾವು ಪರ್ವತದೆತ್ತರಕ್ಕೆ ಹೋದ ಹಾಗೆ, ಅಲ್ಲಿಂದ ಬೀಳುತ್ತಿರುವ ಹಾಗೆ ಕನಸು ಕಾಣಬಹುದು. ಆದರೆ ನಮ್ಮ ಸ್ಥೂಲ ಶರೀರವು ಇನ್ನೂ ಸುಖದಾಯಕ  ಮನೆಯಲ್ಲೇ ನಿದ್ರಿಸುತ್ತಿರುವುದು. ನಮ್ಮನ್ನು ಪರ್ವತ ಶಿಖರಕ್ಕೆ ಒಯ್ದದ್ದು ಸೂಕ್ಷ್ಮ ಶರೀರ.

ಆದ್ದರಿಂದ, ಸಾವು ಎಂದರೆ ಸ್ಥೂಲ ಶರೀರದ ಬದಲಾವಣೆ. ಸ್ಥೂಲ ಶರೀರ ಹಾಗೂ ಸೂಕ್ಷ್ಮ ಶರೀರಗಳು ನಮ್ಮ ಕೋಟು ಮತ್ತು ಷರಟುಗಳ ಹಾಗೆ. ಸಾಮಾನ್ಯವಾಗಿ, ನೀವು ಮನೆಗೆ ಮರಳಿದಾಗ ಕೋಟನ್ನು ಬಿಚ್ಚಿ, ಅಂಗಿಯನ್ನು ಇರಿಸಿಕೊಳ್ಳುವಿರಿ. ಹಾಗೆಯೇ, ಮರಣಕಾಲದಲ್ಲಿ ನಾವು ಸ್ಥೂಲ ಶರೀರವನ್ನು ತ್ಯಜಿಸಿ, ಸೂಕ್ಷ್ಮ ಶರೀರವನ್ನು ಉಳಿಸಿಕೊಳ್ಳುವೆವು. ಆಗಲೇ ಸಾವು ಸಂಭವಿಸುವುದು. ಅನಂತರ, ಪ್ರಕೃತಿ ನಿಯಮಕ್ಕನುಗುಣವಾಗಿ, ನಮ್ಮ ಸೂಕ್ಷ್ಮ ಶರೀರದಿಂದ ತಾಯಿಯ ಗರ್ಭಕ್ಕೆ ಕರೆದೊಯ್ಯಲ್ಪಡುವೆವು. ಅಲ್ಲಿ ಆಕೆಯಿಂದ ಪೂರೈಕೆಯಾಗುವ ವಸ್ತುಗಳಿಂದ ಮತ್ತೊಂದು ಸ್ಥೂಲ ಶರೀರವನ್ನು ಬೆಳೆಸಿಕೊಳ್ಳುವೆವು, ಯಾವಾಗ ಶರೀರವು ಸಿದ್ಧಗೊಳ್ಳುವುದೋ, ಆಗ ತಾಯಿಯ ಗರ್ಭದಿಂದ ಹೊರಬರುವೆವು ಹಾಗೂ ಸ್ಥೂಲ-ಸೂಕ್ಷ್ಮ ಶರೀರಗಳೊಂದಿಗೆ ಕ್ರಿಯಾಶೀಲರಾಗುವೆವು.

ಕೃಷ್ಣಪ್ರಜ್ಞೆಯ ಆಚರಣೆಯಿಂದ ನಾವು ಸ್ಥೂಲ-ಸೂಕ್ಷ್ಮ ಶರೀರಗಳೆರಡನ್ನೂ ಮೀರಿ ಆಧ್ಯಾತ್ಮಿಕ ಜಗತ್ತಿಗೆ ಹೋಗಬಹುದು. ಮತ್ತು ನಾವು ಸ್ಥೂಲ-ಸೂಕ್ಷ್ಮ ಶರೀರಗಳಿಂದ ಮುಕ್ತರಾದ ಕೂಡಲೆ, ನಮ್ಮ ನೈಜ ಶರೀರವಾದ ಆಧ್ಯಾತ್ಮಿಕ ಶರೀರವನ್ನು ಪಡೆಯುವೆವು. ಆದ್ದರಿಂದ ಕೃಷ್ಣಪ್ರಜ್ಞೆಯನ್ನು ಮಾನವ ಸಮಾಜಕ್ಕೆ ದೊರೆತ ಅತಿ ದೊಡ್ಡ ವರವೆನ್ನಬಹುದು. ಏಕೆಂದರೆ ಇದರ ಮೂಲಕ ವ್ಯಕ್ತಿಯ ಸ್ಥೂಲ-ಸೂಕ್ಷ್ಮ ಶರೀರಗಳನ್ನು ಮೀರಿ ಆಧ್ಯಾತ್ಮಿಕ ಶರೀರವನ್ನು ಪಡೆಯಬಹುದು. ಅದುವೇ ಉನ್ನತ ಪರಿಪೂರ್ಣತೆ ಎನಿಸುವುದು.

ಮಾನವ ಜೀವನವು ಬದುಕಿನ ದೈಹಿಕ ಕಲ್ಪನೆಯನ್ನು ಅತಿಶಯಿಸುವುದಕ್ಕಾಗಿಯೇ ಇದೆ. ಈಗಿನ ಯುಗವನ್ನು ಕಲಿಯುಗ ಎಂದು ಕರೆಯಲಾಗುತ್ತದೆ. ಇದೇನೂ ಅಂಥಾ ಒಳ್ಳೆಯ ಸಮಯವಲ್ಲ. ಅಸಮ್ಮತಿ, ಜಗಳ, ಕಲಹ, ಅಪಾರ್ಥಗಳಷ್ಟೆ. ಈ ಯುಗವು ಇವೆಲ್ಲದರಿಂದ ತುಂಬಿದೆ. ಆದ್ದರಿಂದ, ಧ್ಯಾನ ಮುಖೇನ ಅಥವಾ ಗೂಢ ಯೋಗಗಳ ಮೂಲಕ ಆಧ್ಯಾತ್ಮಿಕ ವೇದಿಕೆಯನ್ನು ತಲಪುವುದು ಈ ಯುಗದಲ್ಲಿ ಬಹಳ ಕಷ್ಟ. ಹಿಂದೆ ಅದೇನೂ ಕಷ್ಟವಿರಲಿಲ್ಲ. ಜನರು ವೈದಿಕ ಪ್ರಕ್ರಿಯೆಗಳಿಂದ ಸುಲಭವಾಗಿ ತರಬೇತಿ ಪಡೆಯುತ್ತಿದ್ದರು. ಆದರೆ ಈಗ ಜನರು ಸಾಮಾನ್ಯವಾಗಿ ಆಧ್ಯಾತ್ಮಿಕ ಸಂಗತಿಗಳಲ್ಲಿ ಆಸಕ್ತಿ ಹೊಂದಿರುವುದಿಲ್ಲ. ಅವರು ಕೇವಲ ಸ್ಥೂಲ ಶರೀರದಲ್ಲಿ ಅಥವಾ, ಸ್ವಲ್ಪವಾದರೂ ಮುಂದುವರಿದಿದ್ದರೆ, ಸೂಕ್ಷ್ಮ ಶರೀರದಲ್ಲಿ ಆಸಕ್ತರಾಗಿರುತ್ತಾರೆ. ಶಿಕ್ಷಣದಲ್ಲಿ ಪ್ರಗತಿಯುಂಟಾಗಿದ್ದರೂ ಸಹ, ಆಧ್ಯಾತ್ಮಿಕ ಶರೀರಕ್ಕೆ ಸಂಬಂಧಿಸಿದ ಯಾವ ಶಿಕ್ಷಣವೂ ಇಂದು ಇಲ್ಲ. ಆದ್ದರಿಂದ ಜನರು ಕೇವಲ ಸ್ಥೂಲ ಹಾಗೂ ಸೂಕ್ಷ್ಮ ಭೌತಿಕ ಶರೀರಗಳತ್ತ ಕಾಳಜಿ ಇರಿಸಿಕೊಂಡಿದ್ದಾರೆ.

ನರೋತ್ತಮ ದಾಸ ಠಾಕೂರರು ಗೀತೆಯೊಂದರಲ್ಲಿ ವ್ಯಕ್ತಪಡಿಸಿರುವಂತೆ, – ಹರಿ ಹರಿ ವಿಫಲೇ ಜನಮ ಗೊನೈನೂ – “ಭಗವಂತ, ನಾನು ನನ್ನ ಅಮೂಲ್ಯ ಮಾನವ ಜೀವನವನ್ನು ಸುಮ್ಮನೆ ಪೋಲು ಮಾಡಿಕೊಳ್ಳುತ್ತಿರುವೆ” ಅಗಣಿತ ಜೀವ ರಾಶಿಗಳು ಮಾನವ ಜೀವಿಗಳಾಗಿ ಜನ್ಮ ಪಡೆದವು. ಆದರೆ ಅವುಗಳಲ್ಲಿ ಬಹುಪಾಲು ಜೀವಿಗಳಿಗೆ ತಮ್ಮ ಜೀವನವನ್ನು ಸಾರ್ಥಕಗೊಳಿಸಿಕೊಳ್ಳುವ ಬಗೆ ತಿಳಿದಿಲ್ಲ. ಅವರು ಅದನ್ನು ಪಶುಗಳ ಹಾಗೆ – ಕೇವಲ ನಿದ್ರೆ, ಆಹಾರ, ಮೈಥುನ, ರಕ್ಷಣೆಗಳ ವ್ಯವಸ್ಥಾಪನೆಯಲ್ಲಿ ಪೋಲು ಮಾಡುತ್ತಿರುವರು ಅಷ್ಟೆ. ಪ್ರಾಣಿಯು ತನ್ನ ಆಹಾರವನ್ನು ಸಹಜವಾಗಿ ಪಡೆಯುವುದು. ನಾವು ಕೃತಕವಾಗಿ ಆಹಾರದ ವ್ಯವಸ್ಥೆ ಮಾಡಿಕೊಳ್ಳುತ್ತಿರುವೆವು. ಇದು ನಮ್ಮ ಪ್ರಗತಿ. ಪ್ರಾಣಿಗಳ ರಾಜ್ಯದಲ್ಲಿ ಪ್ರತಿ ಪ್ರಾಣಿಯೂ ನಿರ್ದಿಷ್ಟವಾದ ಆಹಾರ ಹೊಂದಿರುವುದು. ಉದಾ: ಹುಲಿಯು ಮಾಂಸವನ್ನು ತಿನ್ನುವುದು. ಅದಕ್ಕೆ ದ್ರಾಕ್ಷಿ, ಕಿತ್ತಲೆಗಳನ್ನು ನೀಡಿದರೆ ಮೂಸಿ ಕೂಡ ನೋಡುವುದಿಲ್ಲ. ಏಕೆಂದರೆ, ಅವು ಅದರ ಆಹಾರ ಅಲ್ಲ. ಹಾಗೆಯೇ ಹಂದಿಯು ಮಲವನ್ನು ತಿನ್ನುವುದು. ಅದಕ್ಕೇನಾದರೂ ಸಿಹಿ ತಿಂಡಿಯನ್ನು ಕೊಟ್ಟರೆ, ಅದು ಮುಟ್ಟುವುದಿಲ್ಲ.

ಎಲ್ಲ ಪ್ರಾಣಿಗಳಿಗೂ ನಿರ್ದಿಷ್ಟ ಆಹಾರ ನಿಗದಿಯಾಗಿರುವಂತೆ, ಮಾನವ ಜೀವಿಗಳಿಗೆ ಕೂಡ ನಿರ್ದಿಷ್ಟ ಆಹಾರ ಇರುವುದು. ಅದು ಯಾವುದು? ಹಣ್ಣು, ಹಾಲು, ಬೇಳೆ ಕಾಳುಗಳು, ತರಕಾರಿಗಳು. ನಮ್ಮ ಹಲ್ಲುಗಳನ್ನು ಗಮನಿಸಿ. ಹಣ್ಣನ್ನು ತಿಂದಾಗ, ಹಲ್ಲುಗಳ ಮೂಲಕವೇ ಅದನ್ನು ಸುಲಭವಾಗಿ ಚೂರು ಚೂರು ಮಾಡಬಹುದು. ಆದರೆ, ನೀವು ಮಾಂಸದ ತುಣಕನ್ನು ತಿಂದರೆ, ಅದನ್ನು ಅಗಿಯಲು ಕಷ್ಟಪಡಬೇಕಾದೀತು. ಹುಲಿಗೆ ಮಾಂಸವನ್ನು ಸುಲಭವಾಗಿ ಚೂರು ಮಾಡಬಲ್ಲಂಥ ಹಲ್ಲುಗಳಿವೆ.

ನಾವು ಶಿಕ್ಷಣದಲ್ಲಿ ಪ್ರಗತಿ ಸಾಧಿಸುತ್ತಿದ್ದೇವೆ. ಆದರೆ ನಮ್ಮ ಹಲ್ಲನ್ನು ಕೂಡ ಅಭ್ಯಸಿಸಲಾರದವರಾಗಿದ್ದೇವೆ. ಸುಮ್ಮನೆ ದಂತ ತಜ್ಞರ ಬಳಿ ಹೋಗುತ್ತೇವೆ. ಇದು ನಮ್ಮ ನಾಗರಿಕತೆಯ ಪ್ರಗತಿ. ಹುಲಿ ಯಾವತ್ತೂ ದಂತ ತಜ್ಞರುಗಳ ಬಳಿ ಹೋಗುವುದಿಲ್ಲ. ಆದರೂ ಅದರ ಹಲ್ಲುಗಳು ಬಲವಾಗಿದ್ದು, ಮಾಂಸವನ್ನು ಸುಲಭವಾಗಿ ಚೂರು ಮಾಡಬಲ್ಲವಾಗಿವೆ. ಅದಕ್ಕೆ ದಂತತಜ್ಞರು ಬೇಕಿಲ್ಲ. ಏಕೆಂದರೆ, ಅದು ತನಗೆ ಸಹಜವಲ್ಲದ ಏನನ್ನೂ ತಿನ್ನುವುದಿಲ್ಲ. ಆದರೆ ನಾವು ಸಿಕ್ಕಿದ್ದೆಲ್ಲ ತಿನ್ನುತ್ತೇವಾದ್ದರಿಂದ, ನಮಗೆ ದಂತತಜ್ಞರ ಅಗತ್ಯವಿದೆ.

ಮಾನವ ಜೀವಿಗೆ ತನ್ನದೇ ಆದ ನಿರ್ದಿಷ್ಟ ಉದ್ದೇಶವಿದೆ. ಭಾಗವತ ಧರ್ಮವನ್ನು ಅಭ್ಯಸಿಸುವುದು, ಚರ್ಚಿಸುವುದು, ತನ್ಮುಖೇನ ಭಗವಂತನನ್ನು ಅರಿಯಲು ಯತ್ನಿಸುವುದು. ಇದು ಬಹಳ ಸುಲಭ. ಅದನ್ನು ನಾವು ಹೇಗೆ ತಾನೆ ಮಾಡಬಹುದು? ಸುಮ್ಮನೆ ಕೃಷ್ಣನನ್ನು ಕುರಿತು ಶ್ರವಣ ಮಾಡಿದರಾಯ್ತು. ನಾನೀಗ ಮನೆಯನ್ನು ತೊರೆದು ಬಹಳ ದಿನವಾಗಿದೆ, ನನ್ನ ತಂದೆಯನ್ನು ಮರೆತುಬಿಟ್ಟಿದ್ದೇನೆ ಎಂದಿಟ್ಟುಕೊಳ್ಳಿ. ಯಾರೋ ಒಬ್ಬರು ನನಗೆ “ನಿನಗೆ ಇಂತಿಂಥ ಮಹಾಶಯ ಗೊತ್ತೇ? ಅವರು ನಿನ್ನ ತಂದೆಯಾಗಿದ್ದರು. ಬಹಳ ಹಿಂದೆ ನೀನು ಇಂತಿಂಥ ಕೆಲಸ ಮಾಡಿದ್ದೆ ಮತ್ತು ನಿನ್ನ ತಂದೆ ನಿನಗೆ ಸಹಾಯ ಮಾಡಿದ್ದರು” ಎಂದು ಹೇಳಿ ನೆನಪಿಸುವರು. ಹೀಗೆ, ನೀವು ಸುಮ್ಮನೆ ನನ್ನ ತಂದೆಯ ಬಗ್ಗೆ ಮಾತನಾಡಿದರೆ ಸಾಕು, ನನಗೆ ನನ್ನ ಮನೆ ನೆನಪಾಗುವುದು. ಹಾಗೆಯೇ, ನಾವು ಪರಮಪಿತ ಶ್ರೀಕೃಷ್ಣನೊಂದಿಗಿನ ನಮ್ಮ ಸಂಬಂಧವನ್ನು ಮರೆತಿರುವೆವು. ಅಧಿ ಕೃತ ಮೂಲಗಳಿಂದ ಆತನನ್ನು ಕುರಿತು ಕೇಳಿದರೆ, ನಾವು ಆತನನ್ನು ನೆನೆಸಿಕೊಳ್ಳತೊಡಗುವೆವು. ಇದು ಸರಳ ಪ್ರಕ್ರಿಯೆ.

        ಶೃಣ್ವತಾಂ ಸ್ವಕಥಾಃ ಕೃಷ್ಣಃ ಪುಣ್ಯಶ್ರವಣಕೀರ್ತನಃ ।

        ಹೃದ್ಯಂತಃಸ್ಥೋಹ್ಯಭದ್ರಾಣಿ ವಿಧುನೋತಿ ಸುಹೃತ್ಸತಾಮ್ ॥

“ಕೃಷ್ಣನು ನಮ್ಮ ಪರಮ ಮಿತ್ರನು. ಅವನು ನಮ್ಮ ಹೃದಯದಲ್ಲಿ ಪರಮಾತ್ಮನಾಗಿ ನೆಲೆಸಿರುವನು. ನಾವು ಆತನ ಬಗ್ಗೆ ನಿರಂತರವಾಗಿ ಕೇಳುವುದರಿಂದ, ಆತನು ನಮ್ಮ ಹೃದಯದ ಲೋಭ-ಮೋಹಗಳೇ ಮೊದಲಾದ ಕಶ್ಮಲಗಳನ್ನು ತೊಳೆಯುವನು.”

ನಾವು ಸರಳವಾಗಿ ಕೃಷ್ಣನ್ನು ಕುರಿತು ಶ್ರವಣ ಮಾಡಿದರೆ ಸಾಕು. ನಾವು ಕೃಷ್ಣನನ್ನು, ನಮ್ಮ ಪರಮಪಿತನನ್ನು ಮರೆತಿರುವೆವು. ಆದರೆ, ಆತನ ಬಗ್ಗೆ ಗಮನವಿಟ್ಟು ಕೇಳುವ ಮೂಲಕ ನಾವು ಅವನನ್ನು ನೆನೆಸಿಕೊಳ್ಳತೊಡಗುವೆವು.

ಈ ಲೇಖನ ಶೇರ್ ಮಾಡಿ

ಹೊಸ ಪೋಸ್ಟ್‌ಗಳು