ಐಹಿಕ ಜಗತ್ತಿನ ಸುಧಾರಣೆ

ಶ್ರೀ ಶ್ರೀಮದ್‌ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ಮತ್ತು ಕೆಲವು ಶಿಷ್ಯರ ನಡುವೆ 1975ರ ಜುಲೈನಲ್ಲಿ ಲಾಸ್‌ ಏಂಜಲೀಸ್‌ನಲ್ಲಿ ನಡೆದ ಸಂವಾದ

ಭಕ್ತ: ಆಧ್ಯಾತ್ಮಿಕ ಜಗತ್ತಿಗೆ ಹೋಗಲು ಅಗತ್ಯವಾದ ಅರ್ಹತೆಗಳೇನು?

ಶ್ರೀಲ ಪ್ರಭುಪಾದ: ಮೊದಲ ಅರ್ಹತೆ ಎಂದರೆ ಈ ಲೌಕಿಕ ಜಗತ್ತು ಸಂಕಷ್ಟಗಳ ನೆಲೆ (ದುಃಖಾಲಯ) ಎಂಬುದನ್ನು ಸದಾ ನೆನಪಿನಲ್ಲಿಟ್ಟುಕೊಳ್ಳುವುದು. ಅನಂತರ ನೀವು ಆಧ್ಯಾತ್ಮಿಕ ಜಗತ್ತಿಗೆ ತೆರಳಬಹುದು. `ಓ, ಈ ಲೌಕಿಕ ಜಗತ್ತು ಎಷ್ಟು ಚೆನ್ನಾಗಿದೆ’ ಎಂದು ನೀವು ಯೋಚಿಸುವವರೆಗೂ ನೀವು ಇಲ್ಲೇ ಇರಬೇಕಾಗುವುದು.

ಭಕ್ತ: ನಿಮ್ಮ ಉಪನ್ಯಾಸದಲ್ಲಿ ನೀವು ರಾಣಿ ಕುಂತಿಯ ಉದಾಹರಣೆ ನೀಡಿದಿರಿ. ಈ ಐಹಿಕ ಜಗತ್ತು ಎಷ್ಟು ಭಯಾನಕ ಎಂಬುದನ್ನು ಅರಿಯಲು ಮತ್ತು ಕೃಷ್ಣನನ್ನು ಸ್ಮರಿಸಲು ಬದುಕಿನಲ್ಲಿ ಪದೇ ಪದೇ ದುರಂತಗಳು ಎದುರಾಗಲಿ ಎಂದು ಪ್ರಾರ್ಥಿಸುತ್ತಿದ್ದ ಕುಂತಿಯ ಮಾತನ್ನು ನೀವು ಉದ್ಧರಿಸಿದಿರಿ.

ಶ್ರೀಲ ಪ್ರಭುಪಾದ: ಹೌದು, ಅದು ಬುದ್ಧಿವಂತಿಕೆ.  `ಈ ಐಹಿಕ ಲೋಕ ನಿಷ್ಪ್ರಯೋಜಕ’ ಎಂದು ಯಾರಾದರೂ ತೀರ್ಮಾನಿಸಿದರೆ ಅದು ನಿಜವಾದ ಜ್ಞಾನ. `ಇಲ್ಲ, ಇದು ಯಾವಾಗಲೂ ಕೆಟ್ಟದಲ್ಲ, ಕೆಲವು ವೇಳೆ ತುಂಬ ಚೆನ್ನಾಗಿರುತ್ತದೆ’ ಎಂದು ಯೋಚಿಸುತ್ತಿದ್ದರೆ ಅದು ಮೌಢ್ಯ.

ಭಕ್ತ: ಕೆಟ್ಟದ್ದಿಲ್ಲದೆ ಒಳ್ಳೆಯದು ಹೆಚ್ಚು ಒಳ್ಳೆಯದಾಗಿ ಕಾಣುವುದಿಲ್ಲ ಎಂದು ಜನರು ಆಗಾಗ್ಗೆ ನಮ್ಮ ಬಳಿ ಹೇಳುತ್ತಾರೆ.

ಶ್ರೀಲ ಪ್ರಭುಪಾದ: ಶಿಕ್ಷೆಗಾಗಿ ನೀರಿನಲ್ಲಿ ಮುಳುಗಿಸಿದ ಖೈದಿಯ ತರ್ಕ, ಅದು. ಅಧಿಕಾರಿಗಳು ಅವನನ್ನು ಹಿಡಿದು ನೀರಿನಲ್ಲಿ ಹಾಕುತ್ತಾರೆ. ಉಸಿರು ಕಟ್ಟಿ ಅವನು ಒದ್ದಾಡುವಾಗ ಅವರು ಅವನನ್ನು ಸ್ವಲ್ಪ ಮೇಲಕ್ಕೆ ಎತ್ತುತ್ತಾರೆ. ಆಗ ಅವನು ಹೇಳುತ್ತಾನೆ, `ಓ, ಇದೆಷ್ಟು ಚೆನ್ನಾಗಿದೆ!’ ಆದರೆ ಆ ಮರುಕ್ಷಣವೇ ಅವನನ್ನು ಪುನಃ ನೀರಿಗೆ ಹಾಕಲಾಗುತ್ತದೆ.

ಆದುದರಿಂದ ಐಹಿಕ ಜಗತ್ತಿನ ಒಳ್ಳೆಯದು ಮತ್ತು ಕೆಟ್ಟದ್ದು ಇರುವುದು ಹಾಗೆ. ಜನರನ್ನು ನೀರಿಗೆ ಹಾಕಲಾಗುತ್ತದೆ, ಅವರಿಗೆ ಉಸಿರು ಕಟ್ಟಿದಂತಾಗುತ್ತದೆ. ಅವರನ್ನು ಸ್ವಲ್ಪ ಸಮಯ ಮೇಲಕ್ಕೆ ಎತ್ತಿದಾಗ ಅವರು, `ಓ, ಈ ಲೋಕ ಎಷ್ಟು ಚೆನ್ನಾಗಿದೆ’ ಎಂದು ಉದ್ಗರಿಸುತ್ತಾರೆ. ಈ ಮೂರ್ಖರಿಗೆ ಗೊತ್ತಿಲ್ಲ, ಮರುಕ್ಷಣವೇ ಅವರು ಮುಳುಗುವ ಸ್ಥಿತಿ ತಲಪಬಹುದೆಂದು. ಐಹಿಕ ಜಗತ್ತು ಹೇಗೆ ಉಸಿರುಕಟ್ಟುವಂತಿದೆ ಎಂಬುದನ್ನು ನಾವು ನೆನಪಿಸಿಕೊಳ್ಳುವವರೆಗೂ ನಾವು ದೇವೋತ್ತಮನ ಬಳಿಗೆ ಮರಳಲು ಅರ್ಹರಲ್ಲ. ಈ ಲೋಕವನ್ನು ನಾವು ಪೂರ್ಣವಾಗಿ ಹೇಸಬೇಕು. ಈ ವಿಶ್ವಕ್ಕಾಗಿ ಸ್ವಲ್ಪವಾದರೂ ಮಮತೆ ಇಟ್ಟುಕೊಂಡು `ಓ, ಕೆಲವು ವೇಳೆ ಇಲ್ಲಿ ತುಂಬ ಚೆನ್ನಾಗಿರುತ್ತದೆ’ ಎಂದು ಹೇಳಿದರೆ, ನೀವು ಇಲ್ಲೇ ಇರಬೇಕಾಗುತ್ತದೆ.

ಭಕ್ತ: ಇನ್ನೂ ಸ್ವಲ್ಪ ಲೌಕಿಕ ಒಲವು ಉಳ್ಳ ಭಕ್ತನಿಂದ ಕೃಷ್ಣನು ಎಲ್ಲವನ್ನೂ ಕೊಂಡೊಯ್ಯುತ್ತಾನೆ ಎಂಬುದು ನಿಜವೇ?

ಶ್ರೀಲ ಪ್ರಭುಪಾದ: ಅದು ಕೃಷ್ಣನ ವಿಶೇಷ ಕೃಪೆ. ಅದು ಸಾಮಾನ್ಯ ಕೃಪೆ ಅಲ್ಲ. ತನ್ನ ಭಕ್ತ ಇನ್ನೂ ಲೌಕಿಕ ಒಲವು ಇಟ್ಟುಕೊಂಡಿರುವುದನ್ನು ಕೃಷ್ಣ ಗಮನಿಸಿದಾಗ, ಅವನು ಹೇಳುತ್ತಾನೆ, `ಈ ಮೂರ್ಖನಿಗೆ ನಾನು ಬೇಕು. ಆದರೆ, ಅದೇ ವೇಳೆ ಅವನಿಗೆ ಈ ಐಹಿಕ ಲೋಕದಲ್ಲಿ ಇರುವ ಆಸೆ. ಆದುದರಿಂದ, ಅವನ ಲೌಕಿಕ ಆಸ್ತಿಗಳನ್ನು ನಾನು ತೆಗೆದುಕೊಂಡು ಬಿಡುವೆ. ಆಗ ಅವನಿಗೆ ನಾನು ಮಾತ್ರ ಬೇಕಾಗುತ್ತದೆ.’ ನನ್ನ ವಿಷಯದಲ್ಲಿ ಇದು ಹಾಗೇ ಆಗಿದ್ದು. ನನಗೆ ಚೆನ್ನಾಗಿ ಅನುಭವವಿದೆ. ನನಗೆ ಸಂನ್ಯಾಸ  ತೆಗೆದುಕೊಳ್ಳಲು ಆಸಕ್ತಿ ಇರಲಿಲ್ಲ.  ನಾನು ವಾಣಿಜ್ಯ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಯೋಚನೆಯಲ್ಲಿದ್ದೆ, ಆದರೆ ನಾನು ಸಂನ್ಯಾಸ ಸ್ವೀಕರಿಸಬೇಕೆಂದು ಕೃಷ್ಣ ನನ್ನ ಮೇಲೆ ಒತ್ತಡ ತಂದ. ಮತ್ತು ನನ್ನ ವ್ಯಾಪಾರ ವ್ಯವಹಾರ ಛಿದ್ರವಾಯಿತು.

ಭಕ್ತ: ಶ್ರೀಲ ಪ್ರಭುಪಾದ, ತನಗೆ ಶರಣಾಗಲೆಂದು ಕೃಷ್ಣನು ನಮಗೆ ಹೊಡೆದು, ಒದೆಯುವಂತೆ ಈ ಲೌಕಿಕ ಸ್ವಭಾವವನ್ನು ತೊಡಗಿಸುತ್ತಾನಾ?

ಶ್ರೀಲ ಪ್ರಭುಪಾದ: ಹೌದು. ಲೌಕಿಕ ಪ್ರಕೃತಿ ವ್ಯವಹಾರವೇ ನಮ್ಮನ್ನು ಹೊಡೆಯುವುದು ಮತ್ತು ಒದೆಯುವುದು. ನಾವೆಷ್ಟು ಮೂರ್ಖರೆಂದರೆ, `ಈ ಒದೆತ ಎಷ್ಟು ಚೆನ್ನಾಗಿದೆ’ ಎಂದು ಯೋಚಿಸುತ್ತೇವೆ. ಇದು ನಮ್ಮ ರೋಗ : ಒದೆತ ಚೆನ್ನಾಗಿದೆ ಎಂದು ಸ್ವೀಕರಿಸುವುದು.  ನಾವು ಯಾವಾಗಲೂ ಮೂರು ವಿಧದ ಕ್ಷೋಭೆಯಿಂದ ನರಳುತ್ತಿದ್ದೇವೆ: ಆಧ್ಯಾತ್ಮಿಕ, ಅಧಿಭೌತಿಕ  ಮತ್ತು ಅಧಿದೈವಿಕ. ಯಾವುದಾದರೊಂದು ಚಿಂತೆಯಿಂದ ನಾವು ಬಳಲುತ್ತಿದ್ದರೂ ನಾವು ಈ ಐಹಿಕ ಲೋಕ ಚೆನ್ನಾಗಿದೆ ಮತ್ತು ಅದರ ಸುಧಾರಣೆ ಮಾಡುತ್ತೇವೆ ಎಂದೇ ಯೋಚಿಸುತ್ತೇವೆ. ಇದು ಮೂರ್ಖತನ. ಕ್ಷೋಭೆ ಮುಂದುವರಿಯುತ್ತಿದ್ದರೆ, ಸುಧಾರಣೆಗೆಲ್ಲಿ ಅರ್ಥ?

ಉದಾಹರಣೆಗೆ, ಕೃಷಿ ಉತ್ಪನ್ನ  ಹೆಚ್ಚಿಸಲು ವಿಜ್ಞಾನಿಗಳು ಕೆಲವು ಸುಧಾರಣೆಗಳನ್ನು ತರಲು ಪ್ರಯತ್ನಿಸುತ್ತಿದ್ದಾರೆ. ಈ ಕ್ರಮಗಳು ಎಲ್ಲಿಯವರೆಗೆ? ಮಳೆ ಇಲ್ಲದಿದ್ದರೆ, ಅವರ `ಸುಧಾರಣೆ’ ಹೇಗೆ ನೆರವಾಗುತ್ತದೆ? ಮಳೆ ಅವರ ಕೈಯಲ್ಲಿ ಇಲ್ಲ. ಅದು ಆಧಿದೈವಿಕ: ಅದು ದೇವತೆಗಳ ಮೇಲೆ ಅವಲಂಬಿತ. ದೇವತೆಗಳು ಇಚ್ಛಿಸಿದರೆ ಅವರು ಮಳೆಯನ್ನೇ ನಿಲ್ಲಿಸಿಬಿಡಬಹುದು. ಆದುದರಿಂದ ಈ ಅವಿವೇಕದ `ಸುಧಾರಣೆ’ ಎಂಬುದೆಲ್ಲ ಏನು?

ಈ ಐಹಿಕ ಜಗತ್ತು ಸಂಕಷ್ಟಗಳಿಗೆಂದು ಇರುವ ಸ್ಥಳ. ಹಾಗಾದರೆ, ಅದರ ಸುಧಾರಣೆ ಹೇಗೆ ಸಾಧ್ಯ?  ವಿಜ್ಞಾನಿಗಳು ಹೇಳುತ್ತಾರೆ, `ನಾವು ಮುಂದುವರಿಯುತ್ತಿದ್ದೇವೆ, ಭವಿಷ್ಯದಲ್ಲಿ ಜನರು ಶಾಶ್ವತವಾಗಿ ಜೀವಿಸುವರು. ಯಾರೂ ಸಾಯುವುದಿಲ್ಲ.’ ಅದು ಮುಠ್ಠಾಳತನ, ಮಾಯೆ. ಅಸಾಧ್ಯವಾದುದನ್ನು ಮಾಡಲು ಪ್ರಯತ್ನಿಸುತ್ತಿರುವವರು ಮೂರ್ಖರು, ಮೂಢರು. ಅವರ ಮನಸ್ಥಿತಿ ಒಂದು ಕತ್ತೆಯಂತೆ. ಕತ್ತೆಯ ಮುಂದೆ ಹುಲ್ಲಿನ ಚೀಲ ನೇತುಹಾಕುವ ಮಾಲೀಕ ಅದರ ಮೇಲೆ ಕೂರುತ್ತಾನೆ. ಕತ್ತೆ ಯೋಚಿಸುತ್ತದೆ, `ನನಗೆ ಅದು ಸಿಗುತ್ತೆ.’ ಹಾಗೆಂದುಕೊಳ್ಳುತ್ತ ಅದು ಮುಂದೆ ಸಾಗುತ್ತದೆ. `ಇನ್ನು ಸ್ವಲ್ಪ ನಡೆದರೆ ನನಗೆ ಹುಲ್ಲು ಸಿಕ್ಕಿ ಬಿಡುತ್ತದೆ’ ಎಂದು ಹೇಳಿಕೊಳ್ಳುತ್ತದೆ. ಆದರೆ ತನಗೆ ಹುಲ್ಲು ಸಿಗುವುದೇ ಇಲ್ಲವೆಂದು ಅರ್ಥ ಮಾಡಿಕೊಳ್ಳುವಂತಹ ಮಿದುಳು ಅದಕ್ಕಿಲ್ಲ. ಅದು ಮುಂದೆ ನಡೆದಂತೆ ಹುಲ್ಲು ಕೂಡ ಮುಂದಕ್ಕೆ ಸರಿಯುತ್ತೆ ಎಂಬುದು ಅದಕ್ಕೆ ತಿಳಿಯದು.

ಆದುದರಿಂದ ವಿಜ್ಞಾನಿಗಳು ಕತ್ತೆಯಂತೆ. ತಮ್ಮ `ಸುಧಾರಣೆಗಳು’ ಎಷ್ಟು ಮೂರ್ಖತನದೆಂಬ ಅರಿವು ಅವರಿಗಿಲ್ಲ. ಉದಾಹರಣೆಗೆ, ನಾವು ಅಸಂಖ್ಯ ವಿಮಾನಗಳನ್ನು ತಯಾರಿಸಿದ್ದೇವೆ. `ಎರಡು ತಾಸಿನಲ್ಲಿ ನಾವು ನೂರಾರು ಮೈಲಿಗಳ ಪ್ರಯಾಣ ಮಾಡಿಬಿಡಬಹುದು. ಅದೆಷ್ಟು ಚೆನ್ನ!’ ಎಂದು ಯೋಚಿಸಲಾಗಿತ್ತು. ಆದರೆ ವಿಮಾನದಲ್ಲಿ ಅನೇಕ ಅಪಾಯಗಳಿವೆ. ಅಪಘಾತಗಳಿಂದ ನಮ್ಮನ್ನು ರಕ್ಷಿಸುವುದು ಹೇಗೆಂಬ ಸಮಸ್ಯೆ ಈಗಿದೆ. ಹಾಗಾದರೆ, ಏನು ಸುಧಾರಣೆ? ಈಗ ಒಮ್ಮೆಲೆ 200 ಮಂದಿ ಸಾಯಬಹುದು. ಇದೇ ಸುಧಾರಣೆ. ಎಂತಹ ಭಯಾನಕ ನಾಗರಿಕತೆ!

ಭಕ್ತ: ಆದರೆ ಕೆಲವರು ಹೇಳಬಹುದು, `ಇದು ಭಯಂಕರ ನಾಗರಿಕತೆ ಎಂದು ನೀವು ಹೇಳುತ್ತೀರಿ. ಹಾಗಾದರೆ ನೀವು ಇಲ್ಲಿಂದ ನಿರ್ಗಮಿಸಬಾರದೇಕೆ? ನಾವು ಬಳಸುವ ಕಾರು, ವಿಮಾನಗಳನ್ನು ಬಳಸುತ್ತ ನೀವೂ ನಗರಗಳಲ್ಲಿ ಇರುವುದಕ್ಕಿಂತ ನಿಮ್ಮಷ್ಟಕ್ಕೆ ನೀವು ಎಲ್ಲಿಯಾದರೂ ಕೃಷಿ ಕೇಂದ್ರಗಳಲ್ಲಿ ಇರಬಾರದೇಕೆ?’

ಶ್ರೀಲ ಪ್ರಭುಪಾದ: ಕೃಷ್ಣಪ್ರಜ್ಞೆಗಾಗಿ ಹಾತೊರೆಯುತ್ತ ಜನರು ಸಂಕಟಪಡುತ್ತಿದ್ದಾರೆ. ಆದುದರಿಂದ ನಾವು ಅವರನ್ನು ಕೃಷ್ಣ ಪ್ರಜ್ಞಾವಂತರನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದೇವೆ. ಐಹಿಕ ಲೋಕದಲ್ಲಿ ಅದು ನಮ್ಮ ಆಸಕ್ತಿ. ಇಲ್ಲವಾದರೆ ನಮಗೆ ಇಲ್ಲಿ ನೆಲೆಸುವುದರಲ್ಲಿ ಆಸಕ್ತಿಯೇ ಇಲ್ಲ. ನಾವು ಸಾಮಾಜಿಕ ಅಥವಾ ರಾಜಕೀಯ ಸೇವಕರಲ್ಲ. ನಾವು ಕೃಷ್ಣನ ಸೇವಕರು. ನಾವು ಜನರಿಗೆ ಸಲಹೆ ನೀಡುತ್ತೇವೆ, `ಕೃಷ್ಣಪ್ರಜ್ಞಾವಂತರಾಗಿ. ನಿಮ್ಮ ಸಮಸ್ಯೆಗಳು ಪರಿಹಾರವಾಗಬಹುದು.’ ಕೃಷ್ಣಪ್ರಜ್ಞಾವಂತರಾಗಲು ಅವರಿಗೆ ಸಲಹೆ ನೀಡುವುದು, ಮನವರಿಕೆ ಮಾಡುವುದು, ಅವರಿಗೆ ಎಲ್ಲ ಅಗತ್ಯ ಸೌಲಭ್ಯಗಳನ್ನು ಒದಗಿಸುವುದು ನಮ್ಮ ಕರ್ತವ್ಯ. ಆದರೆ, ಇಷ್ಟಾದರೂ ಅವರು ಔಷಧ ತೆಗೆದುಕೊಳ್ಳದಿದ್ದರೆ, ಏನು ಮಾಡಲು ಸಾಧ್ಯ? ಅವರು ಸಂಕಷ್ಟ ಅನುಭವಿಸುತ್ತಲೇ ಇರಬೇಕಾಗುತ್ತದೆ. `ಸುಧಾರಣೆ’ಗಳಿಂದ ಈ ಐಹಿಕ ಲೋಕದಲ್ಲಿ ತಾವು ಸಂತೋಷದಿಂದ ಇರಬಹುದೆಂಬ ಅಭಿಪ್ರಾಯ ಉಳ್ಳ ಈ ಮೂರ್ಖರು ಕೃಷ್ಣಪ್ರಜ್ಞೆಯನ್ನು ಎಂದಿಗೂ ಅರ್ಥಮಾಡಿಕೊಳ್ಳಲಾರರು.

ಈ ಲೇಖನ ಶೇರ್ ಮಾಡಿ