ಸಾಹಿತ್ಯದಲ್ಲಿ ಆಧ್ಯಾತ್ಮ

  • ಪತಿತಪಾವನ ದಾಸ

ಸಾಮಾನ್ಯ ಜನರಿಗೆ ಸಾಹಿತ್ಯದ ಬಗ್ಗೆ ಸಹಜವಾಗಿಯೇ ಆಸಕ್ತಿ ಇರುತ್ತದೆ.  ಸಮರ್ಥರಾದವರಿಂದ, ತಮಗೆ ಗೊತ್ತಿಲ್ಲದ್ದನ್ನು ಕೇಳಲು ಮತ್ತು ಓದಲು ಅವರು ಬಯಸುತ್ತಾರೆ.  ಆದರೆ ಇಂದ್ರಿಯ ಸಂತೃಪ್ತಿಗೆ ಬೇಕಾದ ವಿಷಯಗಳೇ ಇರುವ ಕಳಪೆ ಸಾಹಿತ್ಯವು ಜನರ ಅಭಿರುಚಿಯ ಸುಲಿಗೆ ನಡೆಸಿದೆ.  ಅಂತಹ ಸಾಹಿತ್ಯವೆಲ್ಲ ಲೋಕ ವಿಷಯಕ್ಕೆ ಸಂಬಂಧಿಸಿದ್ದು, ಪದ್ಯಗಳಿಂದ ಮತ್ತು ತಾತ್ವಿಕ, ಕಲ್ಪನಾತ್ಮಕ ಬರೆಹಗಳಿಂದ ಕೂಡಿವೆ. ಅವು ಮಾಯೆಯ ಪ್ರಭಾವಕ್ಕೆ ಒಳಗಾಗಿದ್ದು, ಇಂದ್ರಿಯ ತೃಪ್ತಿ ನೀಡುವುದರಲ್ಲಿ ಕೊನೆಗೊಳ್ಳುತ್ತವೆ. ಈ  ಸಾಹಿತ್ಯವು  ವಾಸ್ತವವಾಗಿ ಅಪ್ರಯೋಜಕವಾದದ್ದು.  ಆದರೂ ಮಂದಮತಿಗಳನ್ನು ಸೆಳೆಯುವ ಸಲುವಾಗಿ ಅವು ಬಣ್ಣಬಣ್ಣದ ಶೈಲಿಯಲ್ಲಿ ರಚಿತವಾಗಿರುತ್ತವೆ.  ಇಂತಹ ಸಾಹಿತ್ಯದಿಂದ ಆಕರ್ಷಿತರಾಗುವ ಜೀವಿಗಳು ಇನ್ನಷ್ಟು ಭೌತಿಕ ಬಂಧನಕ್ಕೆ ಒಳಪಡುತ್ತವೆ.  ಅವುಗಳಿಗೆ ಸಾವಿರಾರು ತಲೆಮಾರುಗಳ ಅನಂತರವೂ ಬಿಡುಗಡೆ ಪಡೆಯುವ ಭರವಸೆಯಿಲ್ಲ. 

ಲೋಕದಲ್ಲಿ ಸಾವಿರಾರು ಜನ ಸಾಹಿತಿಗಳಿದ್ದಾರೆ.  ಅವರು ಜನಸಾಮಾನ್ಯರಿಗಾಗಿ ಸಾವಿರಾರು ಕೃತಿಗಳನ್ನು ರಚಿಸಿದ್ದಾರೆ.  ಅವುಗಳಲ್ಲಿ ಸಾವಿರಾರು ವರ್ಷ ಉಪಯೋಗಕ್ಕೆ ಬರಬಲ್ಲ ಮಾಹಿತಿಗಳಿವೆ.  ದುರದೃಷ್ಟವೆಂದರೆ ಅವುಗಳಲ್ಲಿ ಯಾವುವೂ ಲೋಕಕ್ಕೆ ಶಾಂತಿ ನೆಮ್ಮದಿಗಳನ್ನು ನೀಡಲಿಲ್ಲ.  ಇದಕ್ಕೆ ಕಾರಣವೆಂದರೆ ಆ ಸಾಹಿತ್ಯಗಳಲ್ಲಿರುವ ಆಧ್ಯಾತ್ಮಿಕ ಕೊರತೆ.

ಮಾನವನ ಬುದ್ಧಿಶಕ್ತಿಯು ಕಲೆ, ವಿಜ್ಞಾನ, ತತ್ತ್ವಶಾಸ್ತ್ರ, ಭೌತ ಶಾಸ್ತ್ರ, ರಸಾಯನ ಶಾಸ್ತ್ರ, ಮನಶ್ಶಾಸ್ತ್ರ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ಮೊದಲಾದವುಗಳ ಜ್ಞಾನದ ಬೆಳವಣಿಗೆಗಾಗಿ ಇದೆ.  ಅಂತಹ ಜ್ಞಾನದ ಸಂಸ್ಕಾರದಿಂದಾಗಿ ಮಾನವ ಸಮಾಜವು ಬಾಳಿನ ಪರಿಪೂರ್ಣತೆಯನ್ನು ಸಾಧಿಸಬಹುದು.  ಬಾಳಿನ ಈ ಸಂಪೂರ್ಣತೆಯು ಪರಮ ಚೇತನನಾದ ವಿಷ್ಣುವಿನ ಸಾಕ್ಷಾತ್ಕಾರದಲ್ಲಿ ಕೊನೆಮುಟ್ಟುತ್ತದೆ. ಆದ್ದರಿಂದ ಜ್ಞಾನದಲ್ಲಿ ಮುಂದುವರಿದವರು ಭಗವಂತನಾದ ವಿಷ್ಣುವನ್ನು ಸೇವಿಸಲು  ಬಯಸಬೇಕೆಂದು  ಶ್ರುತಿಯು  ನಿರ್ದೇಶಿಸುತ್ತದೆ. ದುರ್ದೈವವೆಂದರೆ ಯಾರು ವಿಷ್ಣುಮಾಯೆಯ ಬಾಹ್ಯಸೌಂದರ್ಯಕ್ಕೆ ಮರುಳಾಗಿದ್ದಾರೋ ಅವರಿಗೆ, ಆತ್ಮಸಾಕ್ಷಾತ್ಕಾರ ಅಥವಾ ಪರಿಪೂರ್ಣತೆಯ ಕೊನೆ ವಿಷ್ಣುವನ್ನೇ ಅವಲಂಬಿಸಿದೆ ಎನ್ನುವುದು ತಿಳಿದಿಲ್ಲ. ವಿಷ್ಣುಮಾಯೆ ಎಂದರೆ ಇಂದ್ರಿಯಭೋಗ.  ಇಂದ್ರಿಯಭೋಗವು ತಾತ್ಕಾಲಿಕವೂ ದುಃಖಕರವೂ ಆಗಿದೆ.  ವಿಷ್ಣು ಮಾಯೆಯ ಬಲೆಗೆ ಬಿದ್ದವರು ಜ್ಞಾನಾಭಿವೃದ್ಧಿಯನ್ನು ಇಂದ್ರಿಯಭೋಗಕ್ಕೆ ಬಳಸಿಕೊಳ್ಳುತ್ತಾರೆ.  ನಾರದ ಮುನಿಗಳು ವಿವರಿಸಿರುವಂತೆ ಈ ಬ್ರಹ್ಮಾಂಡದ ಎಲ್ಲ ಸಾಮಗ್ರಿಗಳೂ ಭಗವಂತನ ಬೇರೆ ಬೇರೆ ಶಕ್ತಿಗಳ ಹೊರಹೊಮ್ಮುವಿಕೆ ಅಲ್ಲದೆ ಬೇರೆಯಲ್ಲ. ನಾವು ಊಹಿಸಲೂ ಆಗದ ಅವನ ಶಕ್ತಿಯಿಂದಾಗಿ ಈ ಜಗತ್ತಿನ ಕ್ರಿಯೆಪ್ರತಿಕ್ರಿಯೆಗಳಿಗೆ ಚಲನೆ ಬಂದಿದೆ.  ಅವು ಭಗವಂತನ ಚೈತನ್ಯದಿಂದಾಗಿ ಹೊರಹೊಮ್ಮಿವೆ; ಅವನ ಚೈತನ್ಯವನ್ನೇ ಆಶ್ರಯಿಸಿವೆ; ಪ್ರಳಯದ ಅನಂತರ ಅವನೊಳಗೇ ಸೇರುತ್ತವೆ.  ಹೀಗಿರುತ್ತ ಯಾವುದೂ ಅವನಿಂದ ಭಿನ್ನವಾದದ್ದಲ್ಲ.  ಆದರೆ ಭಗವಂತನು ಮಾತ್ರ ಯಾವಾಗಲೂ ಅವುಗಳಿಂದ ಭಿನ್ನನಾಗಿದ್ದಾನೆ.

ಜ್ಞಾನದ ಪ್ರಗತಿಯನ್ನು ಭಗವಂತನ ಸೇವೆಯಲ್ಲಿ ಬಳಸಿದಾಗ ಇಡೀ ಪ್ರಕ್ರಿಯೆಯೇ ಪಾರಮಾರ್ಥಿಕವಾಗುತ್ತದೆ. ಪರಮ ಪುರುಷನಾಗಲೀ, ಅವನ ದಿವ್ಯನಾಮವಾಗಲೀ ಅಥವಾ ಅವನ ಕೀರ್ತಿವೈಭವಗಳಾಗಲೀ ಪರಸ್ಪರ ಅಭಿನ್ನವಾದವು. ಆದ್ದರಿಂದ ಕಲೆ, ವಿಜ್ಞಾನ, ತತ್ತ್ವಜ್ಞಾನ, ಭೌತಶಾಸ್ತ್ರ,  ರಸಾಯನಶಾಸ್ತ್ರ,  ಮನಶ್ಶಾಸ್ತ್ರ ಮತ್ತು ಬೇರೆ ಎಲ್ಲ  ಜ್ಞಾನಶಾಖೆಗಳನ್ನೂ ಸಂಪೂರ್ಣವಾಗಿ ಭಗವತ್ಸೇವೆಯಲ್ಲಿ ವಿನಿಯೋಗಿಸಬೇಕೆಂದು ಎಲ್ಲ ಋಷಿಗಳೂ ಭಗವದ್ಭಕ್ತರೂ ತಿಳಿಸಿದ್ದಾರೆ.  ಭಗವಂತನ ಮಹಿಮೆಯನ್ನು ಕೀರ್ತಿಸಲು ಕಲೆ, ಸಾಹಿತ್ಯ, ಕಾವ್ಯ, ಚಿತ್ರಕಲೆಗಳನ್ನು ಬಳಸಬಹುದು.  ಕವಿಗಳು, ಕಾದಂಬರಿಕಾರರು ಅಥವಾ ಯಾರೇ ಸಾಹಿತಿಗಳು ಸಾಮಾನ್ಯವಾಗಿ ವೈಷಯಿಕ ವಸ್ತುಗಳನ್ನು ಕುರಿತು ಬರೆಯುತ್ತಾರೆ.  ಅವರೇನಾದರೂ ಭಗವಂತನ ಸೇವೆಯಲ್ಲಿ ತೊಡಗುವುದಾದರೆ ಆಗ ಭಗವಂತನ ಅಲೌಕಿಕ ಮಹಿಮೆಗಳನ್ನು ವರ್ಣಿಸಬಹುದು. ವಾಲ್ಮೀಕಿ ಋಷಿಗಳು ಮಹಾಕವಿಗಳಾಗಿದ್ದರು.  ಹಾಗೆಯೇ  ವೇದವ್ಯಾಸರು ಮಹಾನ್‌ ಲೇಖಕರು. ಅವರಿಬ್ಬರೂ ದೇವರ ಲೀಲೆಗಳನ್ನು ವರ್ಣಿಸುವುದರಲ್ಲಿ ಸಂಪೂರ್ಣವಾಗಿ ನಿರತರಾದರು. ಅದರಿಂದಾಗಿ ಅವರು ಅಮರರಾಗಿದ್ದಾರೆ. 

ಅದೇ ರೀತಿ ವಿಜ್ಞಾನ ಮತ್ತು ತತ್ತ್ವಶಾಸ್ತ್ರಗಳೂ ಕೂಡ ಭಗವಂತನ ಸೇವೆಗೆ ಬಳಕೆಯಾಗಬೇಕು. ಇಂದ್ರಿಯ ತುಷ್ಟಿಯ ಸಲುವಾಗಿ ಕಲ್ಪನಾತ್ಮಕವಾದ ಒಣಸಿದ್ಧಾಂತಗಳನ್ನು ನಿರೂಪಿಸುವುದರಿಂದ ಯಾವ ಉಪಯೋಗವೂ ಇಲ್ಲ. ತತ್ತ್ವಶಾಸ್ತ್ರ ಮತ್ತು ವಿಜ್ಞಾನಗಳು ಭಗವಂತನ ಮಹಿಮೆಯ ಪ್ರತಿಪಾದನಕ್ಕೆ ಬಳಕೆಯಾಗಬೇಕು.  ಮುಂದುವರಿದ ಜನರು ವಿಜ್ಞಾನದ ಮೂಲಕವಾಗಿ ಪರಮಸತ್ಯವನ್ನು ಅರಿಯಲು ಕಾತರರಾಗಿದ್ದಾರೆ.  ಆದ್ದರಿಂದ ಶ್ರೇಷ್ಠ ವಿಜ್ಞಾನಿಯು, ವಿಜ್ಞಾನದ ಆಧಾರದ ಮೇಲೆ ಭಗವಂತನ ಅಸ್ತಿತ್ವವನ್ನು ಸಾಧಿಸಿ ತೋರಿಸಲು ಪ್ರಯತ್ನ ಮಾಡಬೇಕು. ತಾತ್ತ್ವಿಕ ಚಿಂತನೆಗಳು ಪರಮ ಸತ್ಯವನ್ನು ಚೇತನಾತ್ಮಕವೆಂದೂ ಸರ್ವಶಕ್ತಿಯುತವೆಂದೂ ಸ್ಥಾಪಿಸಲು ಉಪಯೋಗವಾಗಬೇಕು.  ಹಾಗೆಯೇ ವಿಜ್ಞಾನದ ಇತರ ಶಾಖೆಗಳೂ ಭಗವಂತನ ಸೇವೆಯಲ್ಲಿ ವಿನಿಯೋಗವಾಗಬೇಕು.  ಭಗವದ್ಗೀತೆಯಲ್ಲಿಯೂ ಇದನ್ನು ಹೇಳಲಾಗಿದೆ.  ಭಗವತ್ಸೇವೆಯಲ್ಲಿ ಬಳಕೆಯಾಗದ ಎಲ್ಲ ಜ್ಞಾನವೂ ಅವಿದ್ಯೆ ಮಾತ್ರವೇ.  ಉನ್ನತ ಜ್ಞಾನದ ನಿಜವಾದ ಉಪಯೋಗವೆಂದರೆ ಭಗವಂತನ ಮಹಿಮೆಗಳನ್ನು ಸ್ಥಾಪಿಸುವುದು.  ಅದೇ ಅಂತಹ  ಜ್ಞಾನದ  ನಿಜವಾದ ಅರ್ಥ.

ಈ ಲೇಖನ ಶೇರ್ ಮಾಡಿ