ಅಂತಿಮಾರ್ಥವನ್ನು ಹುಡುಕುತ್ತ…

ಬದುಕಿಗೆ ನಾವು ಅರ್ಥ ನೀಡುವವರೆಗೂ ಅದು ಅರ್ಥಹೀನವೇ?

ನಾನು ಇರುವ ದಕ್ಷಿಣ ಆಫ್ರಿಕಾದ ಯುವತಿಯೊಬ್ಬಳು ‘ಮಂಗಳ ಗ್ರಹ ಒಂದು’ ಎಂಬ ಯೋಜನೆಗೆ ಒಬ್ಬ ಅಭ್ಯರ್ಥಿಯಾಗಿ ಆಯ್ಕೆಯಾದರು. ಇದು ನೆದರ್‌ಲೆಂಡ್‌ ಮೂಲದ ತಂಡದ ಯೋಜನೆ. 2025ರ ವೇಳೆಗೆ ಮಂಗಳ ಗ್ರಹದಲ್ಲಿ ಕಾಲೋನಿಯನ್ನು ಸ್ಥಾಪಿಸುವ ಆಶಯವನ್ನು ಈ ತಂಡ ಹೊಂದಿದೆ. ವರ್ಷಾಂತರಗಳ ಕಾಲ ಕಠಿಣ ತರಬೇತಿ, ತ್ರಾಸದಾಯಕ ತೀವ್ರ ಸಂಶೋಧನೆ, ನಿರ್ಬಂಧಿತ ಗಗನನೌಕೆಯಲ್ಲಿ 8 ತಿಂಗಳ ದೀರ್ಘ ಪ್ರಯಾಣ ಮತ್ತು ಅಪರಿಚಿತ ಗ್ರಹದಲ್ಲಿ ಭಿನ್ನವಾದ ಜೀವನ ಸ್ಥಿತಿಯನ್ನು ಅವಳು ನಿರೀಕ್ಷಿಸಿದ್ದಾಳೆ. ಭೂಮಿಗೆ ಎಂದಿಗೂ ಹಿಂದಿರುಗುವುದಿಲ್ಲ ಎಂಬ ನಿಬಂಧನೆಗಳಿದ್ದರೂ ಮಂಗಳ ಗ್ರಹದಲ್ಲಿ ಮೊದಲ ಮಾನವ ನೆಲೆಯ ಭಾಗವಾಗಲು ಅವಳು ಉತ್ಸಾಹಿತಳಾಗಿದ್ದಾಳೆ. ಅಂತಹ ಯಾತ್ರೆಯನ್ನು ಕೈಗೊಳ್ಳಲು ಅವಳಿಗೆ ಯಾವುದು ಪ್ರೇರಣೆ? ಅಕ್ಷರಶಃ ಅವಳ ಬದುಕಿನ ಈ ಯಾತ್ರೆಗೆ ಪ್ರೇರಣೆ ಏನು?

ಬದುಕಿಗೆ ನಾವು ನೀಡುವ ಅರ್ಥವು ನಾವು ತೆಗೆದುಕೊಳ್ಳುವ ಪಥ ಮತ್ತು ಅದನ್ನು ಹೇಗೆ ತೆಗೆದುಕೊಳ್ಳುತ್ತೇವೆ ಎನ್ನುವುದನ್ನು ನಿರ್ಧರಿಸುತ್ತದೆ. ಆಸ್ಟ್ರಿಯಾದ ಖ್ಯಾತ ನರ ವಿಜ್ಞಾನಿ ಮತ್ತು ಮನೋರೋಗ ವೈದ್ಯ ಡಾ. ವಿಕ್ಟರ್‌ ಈ. ಫ್ರಾಂಕಲ್‌ ಅವರು ಎರಡನೆಯ ಮಹಾಯುದ್ಧದ ಸಮಯದಲ್ಲಿ ನಾಜಿ ಯಾತನಾ ಶಿಬಿರದಲ್ಲಿ ಕೈದಿಯಾಗಿದ್ದಾಗ ಈ ವಿಷಯವನ್ನು ಕಂಡುಕೊಂಡರು. ತಮ್ಮ ಇತರ ಸಂಗಾತಿಗಳಿಗಿಂತ ಭಿನ್ನವಾಗಿ ತಾವು ಹೇಗೆ ಬದುಕುಳಿದೆವೆಂಬುದನ್ನು ಅವರು ‘ಮ್ಯಾನ್ಸ್‌ ಸರ್ಚ್‌ ಫಾರ್‌ ಮೀನಿಂಗ್‌’ ಎಂಬ ತಮ್ಮ ಪುಸ್ತಕದಲ್ಲಿ ವಿವರಿಸಿದ್ದಾರೆ : ತಮ್ಮ ಬದುಕಿಗೆ ಅರ್ಥವನ್ನು ನೀಡುತ್ತ ಅವರು ತಮ್ಮ ಪೀಡಕರ ನಿಷ್ಕರುಣ ಹಿಂಸೆಯನ್ನು ಸಹಿಸಿಕೊಳ್ಳುವುದು ಸಾಧ್ಯವಾಯಿತು. ತಮ್ಮ ಪತ್ನಿಯನ್ನು ಕಲ್ಪನೆಯಲ್ಲಿ ಕಂಡಂತೆ ಮತ್ತು ಸಮರದ ಅನಂತರ ಅವಳನ್ನು ಪುನಃ ನೋಡುವ ಯೋಚನೆಗಳು ಅವರಿಗೆ ಹೋರಾಡುವ ಧೈರ್ಯ ಮತ್ತು ಆತ್ಮ ವಿಶ್ವಾಸವನ್ನು ನೀಡಿದವು. ತಮ್ಮ ಅನುಭವಗಳಿಂದ ಯಾರಿಗಾದರೂ ಮನೋ ವಿಜ್ಞಾನ ಪಾಠಗಳನ್ನು ನೀಡುವ ಕನಸನ್ನು ಕಾಣಲೂ ಅದು ಪ್ರೇರಣೆ ನೀಡಿತು ಎಂದು ಅವರು ಹೇಳಿದ್ದಾರೆ.

ಆದುದರಿಂದ, ಮಾನವನಲ್ಲಿ ಇರುವ ಪ್ರಾಥಮಿಕ ಮತ್ತು ಅತ್ಯಂತ ಪ್ರಬಲ ಉತ್ತೇಜನಕಾರಿ ಶಕ್ತಿ ಎಂದರೆ ಬದುಕಿನಲ್ಲಿ ಅರ್ಥವನ್ನು ಕಂಡುಕೊಳ್ಳುವುದು ಎಂದು ಅವರು ನಂಬಿದರು.

ಕೆಲವು ವರ್ಷಗಳ ಅನಂತರ ಫ್ರಾಂಕಲ್‌ ತಮ್ಮ ಪುಸ್ತಕದ ಮುಂದುವರಿದ ಭಾಗವನ್ನು ಬರೆದರು, ‘ಮ್ಯಾನ್ಸ್‌ ಸರ್ಚ್‌ ಫಾರ್‌ ಅಲ್ಟಿಮೇಟ್‌ ಮೀನಿಂಗ್‌’. ಅದು ವ್ಯಕ್ತಿಯ ಅಸ್ತಿತ್ವದ ಸ್ಥಿತಿಗಿಂತ ಆಧ್ಯಾತ್ಮಿಕದ ಬಗೆಗೇ ಹೇಳುತ್ತದೆ. ಪ್ರತಿಯೊಬ್ಬ ವ್ಯಕ್ತಿಯ ಸುಪ್ತಪ್ರಜ್ಞೆಯ ಆಳದಲ್ಲಿ ಧಾರ್ಮಿಕ ಪ್ರಜ್ಞೆ ಬೇರೂರಿದೆ. ಮತ್ತು ಪ್ರತಿಯೊಂದು ವ್ಯಕ್ತಿಯಲ್ಲಿಯೂ `ಒಳ ಅರಿವು ಇರುತ್ತದೆ ಮತ್ತು ಅಲೌಕಿಕತೆಗೆ ಹಂಬಲವಿರುತ್ತದೆ’ ಎಂದು ಫ್ರಾಂಕಲ್‌ ತೀರ್ಮಾನಿಸಿದರು. ಆಧ್ಯಾತ್ಮಿಕ ವಿಷಯದ ಅಸ್ಪಷ್ಟ ಮಂಡನೆ ಮತ್ತು ಪ್ರಾಯೋಗಿಕ ಅಳವಡಿಕೆಯ ಲೋಪದಿಂದಾಗಿ ಈ ಪುಸ್ತಕವು ಮೊದಲನೆಯದರಷ್ಟು ಮನವರಿಕೆಯಾಗುವುದಿಲ್ಲ. (ಒಪ್ಪಿಗೆಯಾಗುವುದಿಲ್ಲ) ಆದರೂ ಆಧ್ಯಾತ್ಮಿಕ ಗ್ರಹಿಕೆಗಾಗಿ ನಡೆಯುತ್ತಿರುವ ಪ್ರಸ್ತುತದ ಅನ್ವೇಷಣೆಯಲ್ಲಿ ಅದರ ಅಗತ್ಯ ಸಂದೇಶವು ಸ್ಪಷ್ಟವಾಗಿದೆ.

ಶ್ರೀಲ ಪ್ರಭುಪಾದರು ಅರ್ಥ ನೀಡಿದರು

ಯುವಜನರು, ಮುಖ್ಯವಾಗಿ ಪಶ್ಚಿಮದ ಯುವಜನರು ವಿಧವಿಧವಾದ ಆಧ್ಯಾತ್ಮಿಕ ಆಚರಣೆಗಳ ಮೂಲಕ ಬದುಕಿನ ಮೂಲಭೂತ ಅರ್ಥವನ್ನು, ಉದ್ದೇಶವನ್ನು ಹುಡುಕುತ್ತಿದ್ದಾಗ, 1960ರ ದಶಕದಲ್ಲಿ ಅಲೌಕಿಕತೆಗೆ ಹಂಬಲಿಸುವುದು ದೊಡ್ಡ ಪ್ರಮಾಣದಲ್ಲಿಯೇ ವ್ಯಕ್ತವಾಯಿತು. ಬದುಕನ್ನು ಆನಂದಿಸಲು ಪ್ರಯತ್ನಿಸುವುದೇ ತಮ್ಮ ಅಸ್ತಿತ್ವದ ಅಂತಿಮ ಉದ್ದೇಶ ಎಂದು ಬಹಳ ಜನರು ಯೋಚಿಸಿದರೆ, ಅನೇಕ ಮಂದಿ ಆಧ್ಯಾತ್ಮಿಕ ಮಾರ್ಗದರ್ಶನಕ್ಕಾಗಿ ಪೂರ್ವದತ್ತ ಮುಖ ಮಾಡಿದರು. ಹಠಯೋಗ ಮತ್ತಿತರ ಧ್ಯಾನ ವಿಧಾನಗಳನ್ನು ಕಂಡುಕೊಂಡ ಅವರು ಎಲ್‌ಎಸ್‌ಡಿ ಮತ್ತಿತರ ಮಾದಕ ದ್ರವ್ಯಗಳ ಮೂಲಕ ಆಧ್ಯಾತ್ಮಿಕ ಅನುಭವಗಳನ್ನು ಅರಸಿದರು. ಅರ್ಥವನ್ನು ಕಂಡುಕೊಳ್ಳುವ ಇಂದ್ರಿಯ ಸುಖಿಗಳು ಮತ್ತು ಅಧ್ಯಾತ್ಮವನ್ನು ಅರಸುವವರು ಇವರಿಬ್ಬರ ಪ್ರಯತ್ನಗಳು ಅತೃಪ್ತಿ ಮತ್ತು ನಿರಾಶೆಯಲ್ಲಿ ಪರ್ಯವಸನವಾದವು. ಆದರೂ ಪೂರ್ವವು ಅವರನ್ನು ತೊರೆಯಲಿಲ್ಲ. ಶ್ರೀ ಶ್ರೀಮದ್‌ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ಅವರಿಗೆ ಅಪರೂಪದ ಉಡುಗೊರೆ ನೀಡಲು ಸರಕು ಸಾಗಣೆ ಹಡಗಿನಲ್ಲಿ ಎರಡು ಬಾರಿ ಹೃದಯಾಘಾತವನ್ನು ಅನುಭವಿಸಿ ಉಳಿದರು. ಅವರೂ ಕೂಡ ಅನ್ವೇಷಣೆಯಲ್ಲಿ ಇದ್ದರು – ಅರ್ಥವನ್ನು ಹುಡುಕಲು ಅಲ್ಲ, ಆದರೆ ನೀಡಲು.

ಬದುಕುಳಿಯುವ ಹೋರಾಟದ ಅಥವಾ ಲೌಕಿಕ ಅಗತ್ಯ ಮತ್ತು ಆಸೆಗಳ ಈಡೇರಿಕೆಯ ಆಚೆಗೆ ಅರ್ಥವನ್ನು ಕಂಡುಕೊಳ್ಳುವುದೇ ಆತ್ಮದ ಹಾತೊರೆಯುವಿಕೆಯ ಉದ್ದೇಶ ಎಂದು ಶ್ರೀಲ ಪ್ರಭುಪಾದರಿಗೆ ತಿಳಿದಿತ್ತು. ಆತ್ಮವು ನಮ್ಮ ನಿಜವಾದ ಗುರುತು ಮತ್ತು ಸ್ವಭಾವತಃ ಅಧ್ಯಾತ್ಮ ಎಂದು ಅವರು ಬೋಧಿಸಿದರು. ನಾವು ಅದರ ಅನ್ವೇಷಣೆಯನ್ನು ನಿರ್ಲಕ್ಷಿಸಿದರೆ ಮತ್ತು ಕೇವಲ ಲೌಕಿಕ ದೇಹವನ್ನು ಪೋಷಿಸಿದರೆ, ಆಧ್ಯಾತ್ಮಿಕವಾಗಿ ಹಸಿದವರಾಗುತ್ತೇವೆ. ಮೂಲಭೂತ ಅರ್ಥ, ಮೂಲಭೂತ ಉದ್ದೇಶ ಮಾತ್ರ ಆತ್ಮಕ್ಕೆ ಪೋಷಣೆ ಒದಗಿಸುವುದು ಸಾಧ್ಯ ಎಂದು ಅವರು ಹೊರಗೆಡಹಿದರು.

ತಮ್ಮದೇ ಚಿಂತನೆ ಅಥವಾ ಇಚ್ಛೆಯ ಆಧಾರಿತ ಕಲ್ಪನೆಯೊಂದನ್ನು ಸೃಷ್ಟಿಸುವ ಅಗತ್ಯ ಶ್ರೀಲ ಪ್ರಭುಪಾದರಿಗಿರಲಿಲ್ಲ. ಅಧಿಕೃತ ವೈದಿಕ ಧರ್ಮ ಗ್ರಂಥಗಳಿಂದ ಮತ್ತು ಹಿಂದಿನ ಗುರುಗಳಿಂದ ಅವರು ಆಧ್ಯಾತ್ಮಿಕ ವಿಷಯಗಳನ್ನು ಅರ್ಥಮಾಡಿಕೊಂಡಿದ್ದರು ಮತ್ತು ಅರಿತುಕೊಂಡಿದ್ದರು. ಅವರ ಸಂದೇಶವು ಸ್ಪಷ್ಟ ಮತ್ತು ಪರಿಪೂರ್ಣ. ಅವರ ಉದಾಹರಣೆಯಿಂದ ಜನರು ಪಡೆದ ಸ್ಫೂರ್ತಿಯೇ ಇದಕ್ಕೆ ನಿದರ್ಶನ. ಅವರು ಬೋಧಿಸಿದಂತೆ ಬದುಕಿದರು. ಅವರ ಅನುಯಾಯಿಗಳು ಮೊದಮೊದಲು ಅವರ ಬೋಧನೆಗಳನ್ನೆಲ್ಲ ಪೂರ್ತಿ ಅರ್ಥಮಾಡಿಕೊಳ್ಳದಿದ್ದರೂ ಅವುಗಳನ್ನು ಅನುಸರಿಸುವ ಮೂಲಕ ಅವರು ಯಾವುದೇ ಉತ್ತೇಜನಕಾರಿ ಅಥವಾ ಭ್ರಾಂತಿಜನಕ ಮದ್ದು ಬಳಕೆ ಇಲ್ಲದೆ `ಸದಾ ಉನ್ನತ ಮಟ್ಟದಲ್ಲಿ ಇರುವುದು’ ಸಾಧ್ಯವಾಯಿತು. ತಮ್ಮ ಆಧ್ಯಾತ್ಮಿಕ ಕಲ್ಯಾಣದ ಬಗೆಗೆ ಅವರು ನಿಜವಾಗಿಯು ಕಾಳಜಿ ಹೊಂದಿದ್ದಾರೆ ಮತ್ತು ಬದುಕಿನ ಮೂಲಭೂತ ಉದ್ದೇಶವನ್ನು ಅವರೊಂದಿಗೆ ಹಂಚಿಕೊಳ್ಳುವಾಗ ತಮ್ಮ ಜೀವನವನ್ನು ಅಪಾಯಕ್ಕೆ ಒಡ್ಡಿಕೊಳ್ಳಲೂ ಅವರು ಸಿದ್ಧ ಎನ್ನುವುದನ್ನು ಅವರ ಅನುಯಾಯಿಗಳು ಕಂಡರು.

ನಮ್ಮ ಅಂತಿಮ ಉದ್ದೇಶ ಕುರಿತಂತೆ ಶ್ರೀಲ ಪ್ರಭುಪಾದರ ಮಂಡನೆಯು ಅತ್ಯಂತ ಸರಳವಾದರೂ ಗಹನವಾದದ್ದು. ದೇಹದ ಸಾವಿನಿಂದ ಬದುಕು ಅಂತ್ಯಗೊಳ್ಳುವುದಿಲ್ಲ ಎಂದು ಅವರು ಮೊದಲು ಬೋಧಿಸಿದರು. ಅಸಂಖ್ಯ ಜೀವ ಜಾತಿಗಳ ಮೂಲಕದ ನಮ್ಮ ಯಾತ್ರೆಯಲ್ಲಿ ಕೇವಲ ಒಂದು ಕ್ಷಣವಾದ ಪ್ರಸ್ತುತ ಮಾನವ ಜನ್ಮವು ಬದುಕಿನ ಅಂತಿಮ ಅರ್ಥ ಮತ್ತು ಉದ್ದೇಶವನ್ನು ಕುರಿತ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳುವ ವೇದಿಕೆ.

ಬದುಕಿಗೆ ನಾವು ಕೇವಲ ಲೌಕಿಕ, ತಾತ್ಕಾಲಿಕ ಅರ್ಥವನ್ನು ನೀಡಿದರೆ ಅದಕ್ಕೆ ನಿಜವಾದ ಉದ್ದೇಶವೇ ಇರುವುದಿಲ್ಲ ಎಂದು ಶ್ರೀಲ ಪ್ರಭುಪಾದರು ವಿವರಿಸುತ್ತಾರೆ. ಶ್ರೀಮದ್‌ ಭಾಗವತವನ್ನು ಕುರಿತ ಉಪನ್ಯಾಸದಲ್ಲಿ (3.26.6) ಅವರು ಹೇಳಿದ್ದಾರೆ :

ಈ ಲೌಕಿಕ ಅಸ್ತಿತ್ವವು ಅನರ್ಥಂ ಎಂದು ಮೊಟ್ಟ ಮೊದಲು ಎಲ್ಲರೂ ಅರ್ಥಮಾಡಿಕೊಳ್ಳಬೇಕು. ಅನರ್ಥಂ ಎಂದರೆ ಉದ್ದೇಶವಿಲ್ಲದ ಬದುಕು. ಉದ್ದೇಶವೇ ಇಲ್ಲ. ಲೌಕಿಕ ಪ್ರಕೃತಿಯ ಪ್ರಭಾವದಿಂದ ಹೇಗೆ ಹೊರಬರಬಹುದೆನ್ನುವುದೇ ನಿಜವಾದ ಉದ್ದೇಶ. ಅದು ನಿಜವಾದ ಉದ್ದೇಶ. ಅವರಿಗೆ ಗೊತ್ತಿಲ್ಲ. ಅವರು ಬದುಕಿನ ಕೆಲವು ತಾತ್ಕಾಲಿಕ ಉದ್ದೇಶಗಳನ್ನು ತುಂಬ ಗಂಭೀರವಾಗಿ ಪರಿಗಣಿಸುತ್ತಿದ್ದಾರೆ. ದೇಹ ಬದಲಾದಂತೆ ಅದೂ ಕೂಡ ಬದಲಾಗುತ್ತದೆ. ನೋಡಿ, ಮಾನವ ಜೀವಿಯಾಗಿ ನಾನು ಈಗ ಬದುಕಿನ ಎಷ್ಟೊಂದು ಉದ್ದೇಶಗಳನ್ನು ತಯಾರಿಸುತ್ತಿರುವೆ. ಆದರೆ ದೇಹವು ಬದಲಾದ ಕೂಡಲೇ ಮತ್ತು ನನಗೆ ಬೆಕ್ಕು ಅಥವಾ ನಾಯಿಯ ಅಥವಾ ಮರದ ದೇಹ ಸಿಕ್ಕ ಕೂಡಲೇ ಇಡೀ ಉದ್ದೇಶ ಬದಲಾಗಿಬಿಡುತ್ತದೆ. ಆದುದರಿಂದ ಅದು ಉದ್ದೇಶರಹಿತ ಜನ್ಮ, ಅನರ್ಥಂ. ಈ ಉದ್ದೇಶಕ್ಕೆ ಅರ್ಥವಿಲ್ಲ. ಏಕೆಂದರೆ ನಿಮ್ಮ ದೇಹದ ಬದಲಾವಣೆಯೊಂದಿಗೆ ಎಲ್ಲವೂ ಬದಲಾಗುತ್ತದೆ. ಅವರು `ನಮಗೆ ಮುಂದಿನ ಜನ್ಮವಿದೆ’ ಎಂದು ಯೋಚಿಸಲು ಭಯಪಡುತ್ತಾರೆ. ಆದುದರಿಂದ ಅವರು ನಿರಾಕರಿಸುತ್ತಾರೆ : `ಮುಂದಿನ ಜನ್ಮವಿಲ್ಲ. ಈ ಜನ್ಮವು (ಅನಂತರ) ಮುಗಿಯಿತು (ಎಲ್ಲವೂ).’ – ಮುಂಬೈ, ಡಿಸೆಂಬರ್‌ 18, 1974.

ಅದಕ್ಕೆ ಪ್ರತಿಯಾಗಿ, ಮಾನವ ಬದುಕು ಅರ್ಥದಮ್‌, ಅರ್ಥಪೂರ್ಣವಾದುದು ಎಂದು ಹೇಳಿದ ಬಾಲಕ, ಸಂತ ಪ್ರಹ್ಲಾದ ಮಹಾರಾಜನ ಬಗೆಗೆ ಶ್ರೀಲ ಪ್ರಭುಪಾದರು ಹೇಳುತ್ತಾರೆ.

ಬಂಡಾಯ ಮಕ್ಕಳಂತೆ

ಮಾನವರಾಗಿ ನಾವು ಚಿಂತನೆಯ ಉನ್ನತ ಲೋಕಗಳನ್ನು ಶೋಧಿಸಲು ಅಥವಾ ಪರಿಶೀಲಿಸಲೆಂದು ಇದ್ದೇವೆ ಎನ್ನುವುದನ್ನು ನಾವು ಶ್ರೀಲ ಪ್ರಭುಪಾದರು ಅಮೆರಿಕಕ್ಕೆ ತಂದ ಧರ್ಮ ಗ್ರಂಥಗಳಿಂದ ಅರಿಯುತ್ತೇವೆ. ಮತ್ತು ಬದುಕಿನ ಮೂಲಕ ಆತ್ಮದ ಪಯಣ ಮತ್ತು ಅದರ ಅಂತಿಮ ಗುರಿಯನ್ನು ಅರ್ಥಮಾಡಿಕೊಳ್ಳುವುದಾಗಿದೆ. ಆಧ್ಯಾತ್ಮಿಕ ಉದ್ದೇಶವು ಲೌಕಿಕ ಸಮತಲದ ಮೇಲಿನ ನಮ್ಮ ಪಯಣದ ಆಚೆಗೆ ವಿಸ್ತರಿಸುತ್ತದೆ. ಇದು ನಮ್ಮ ದಿವ್ಯ ಪ್ರಕೃತಿ, ಪರಮ ಪುರುಷ, ನಮ್ಮ ಪ್ರೀತಿಯ ತಂದೆಯೊಂದಿಗೆ ನಮ್ಮ ಸಂಪರ್ಕವನ್ನು ಒಳಗೊಂಡಿರುತ್ತದೆ. ಈ ಅಂಶವನ್ನು ಸ್ಪಷ್ಟಪಡಿಸಲು ಶ್ರೀಲ ಪ್ರಭುಪಾದರು ತನ್ನ ತಂದೆಯನ್ನು ಹುಡುಕುವ ಬಾಲಕನ ಉದಾಹರಣೆಯನ್ನು ಆಗಾಗ ನೀಡುತ್ತಿದ್ದರು. ಮಗುವಿನ ಭದ್ರತೆ ಮತ್ತು ಯೋಗಕ್ಷೇಮಕ್ಕಾಗಿ ನಾವು ಏನೇ ಲೌಕಿಕ ವ್ಯವಸ್ಥೆಯನ್ನು ಮಾಡಿದರೂ, ಲೌಕಿಕ ಸಂಪತ್ತುಗಳನ್ನು ಯಥೇಚ್ಛವಾಗಿ ನೀಡಿದರೂ ಅವನು ತನ್ನ ತಂದೆಯ ಜೊತೆ ಪುನರ್ಮಿಲನಗೊಂಡಾಗ ಮಾತ್ರ ಸಂತೋಷಪಡುವನು. ಅದೇ ರೀತಿ, ಈ ಲೋಕದ ತಾತ್ಕಾಲಿಕ ಆನಂದಗಳಲ್ಲಿ ನೆಮ್ಮದಿ ಕಂಡುಕೊಳ್ಳಲು ಯತ್ನಿಸುವ ನಾವು ನಮ್ಮ ಮೂಲ ತಂದೆ, ಕೃಷ್ಣನಿಂದ ಬೇರ್ಪಟ್ಟಿದ್ದೇವೆ. ನಾವು ಅವನನ್ನು ಕಂಡುಕೊಂಡಾಗ ಮತ್ತು ಪ್ರೀತಿಯಿಂದ ಅವನೊಂದಿಗೆ ಸಂಪರ್ಕ ಹೊಂದಿದಾಗ ಮಾತ್ರ ನಮಗೆ ಸಂಪೂರ್ಣ ತೃಪ್ತಿ ನೀಡುವ ಸುಖವನ್ನು ನಾವು ಅನುಭವಿಸುವುದು ಸಾಧ್ಯ.

ಬಂಡಾಯದ ಮಗುವೊಂದು ಸ್ವಾರ್ಥದಿಂದ, ಲೌಕಿಕ ಲಾಭಕ್ಕಾಗಿ ತನ್ನ ಶ್ರೀಮಂತ ತಂದೆಯ ಬಳಿಗೆ ಹಿಂದಿರುಗಬಹುದು. ಆದರೂ ತಂದೆಯು ಅವನನ್ನು ಬರಮಾಡಿಕೊಳ್ಳುತ್ತಾನೆ, ಕಾಳಜಿ ವಹಿಸುತ್ತಾನೆ ಮತ್ತು ಅವನ ಹಿಂದಿನ ಅಪರಾಧಗಳನ್ನು ಮನ್ನಿಸುತ್ತಾನೆ. ಮಗುವು ನಿಷ್ಠೆಯಿಂದ ಇದ್ದರೆ ಅಂತಿಮವಾಗಿ ಅವನು ಅಪಾರವಾದ ಪಿತ್ರಾರ್ಜಿತ ಆಸ್ತಿಯನ್ನು ಪಡೆಯುತ್ತಾನೆ. ಅದೇ ರೀತಿ, ಕೃಷ್ಣನನ್ನು ನಿರ್ಲಕ್ಷಿಸಿರುವುದರಿಂದ ನಾವು ಅವನಿಂದ ಬೇರ್ಪಟ್ಟಿದ್ದೇವೆ ಮತ್ತು ಅದು ನಮಗೆ ವಸತಿಹೀನ (ನೆಲೆ ಇಲ್ಲದಂತೆ) ಮಾಡಿದೆ. ನಾವು ನಮ್ಮ ದುರದೃಷ್ಟವನ್ನು ಅರಿತುಕೊಂಡಾಗ ಮತ್ತು ಸ್ವಾರ್ಥ ಆಶಯಗಳಿದ್ದರೂ ಕೃಷ್ಣನ ಬಳಿಗೆ ಹಿಂದಿರುಗಿದರೆ ಅವನು ನಮ್ಮನ್ನು ಸ್ವಾಗತಿಸುತ್ತಾನೆ ಮತ್ತು ನಮ್ಮ ಅಪ್ರಾಮಾಣಿಕತೆಗಾಗಿ ನಮ್ಮನ್ನು ಮನ್ನಿಸುತ್ತಾನೆ. ನಾವು ಅವನೊಂದಿಗಿನ ಪ್ರೀತಿಯನ್ನು ಪುನರ್‌ ಸ್ಥಾಪಿಸಿದರೆ ಮತ್ತು ಅವನು ನಮ್ಮನ್ನು ಪ್ರೀತಿಸುವಂತೆ ನಾವೂ ಅವನನ್ನು ಬೇಷರತ್ತಾಗಿ ಪ್ರೀತಿಸಿದರೆ, ಅವನ ಆದೇಶ ಮತ್ತು ಮಾರ್ಗದರ್ಶನವನ್ನು ಅನುಸರಿಸಿದರೆ ಅವನು ಸಂತುಷ್ಟನಾಗುತ್ತಾನೆ ಮತ್ತು ಅಂತಿಮವಾಗಿ ಅವನ ಆಧ್ಯಾತ್ಮಿಕ ಲೋಕಕ್ಕೆ ಹಿಂದಿರುಗುವ ಉತ್ತರಾಧಿಕಾರವನ್ನು ನಮಗೆ ನೀಡುತ್ತಾನೆ.

ಕೃಷ್ಣಪ್ರೇಮವು ಹೇಗೆ ನಮ್ಮಲ್ಲಿ ಅಂತರ್ಗತವಾಗಿದೆ ಎನ್ನುವುದನ್ನು ಶ್ರೀಲ ಪ್ರಭುಪಾದರು ಸ್ಪಷ್ಟಪಡಿಸಿದ್ದಾರೆ. ನಾವು ಕೃಷ್ಣನ ವಿಭಿನ್ನಾಂಶ. ನಾವು ಅತ್ಯಲ್ಪರು ಮತ್ತು ಅವನು ಅನಂತನಾದರೂ ನಾವು ನಮ್ಮ ಅಸ್ತಿತ್ವದ ಮೂಲನಾದ ಕೃಷ್ಣನಿಂದ ಬೇರ್ಪಡುವುದು ಸಾಧ್ಯವಿಲ್ಲ. ಹೇಗೆ ಸೂರ್ಯ ಕಿರಣವು ಪ್ರಜ್ವಲಿಸುವ ಸೂರ್ಯನಿಂದ ಬೇರ್ಪಡುವುದು ಸಾಧ್ಯವಿಲ್ಲವೋ ಹಾಗೇ. ಅವನ ಸೇವಕನಾಗಿ ನಮ್ಮ ಸ್ಥಾನವು ನಮ್ಮ  ಕಾಂತಿಯನ್ನು ಹೆಚ್ಚಿಸುತ್ತದೆ ಮತ್ತು ನಾವು ಅವನಿಂದ ವಿಮುಖರಾದರೆ, ನಾವು ಅತೃಪ್ತ ಮತ್ತು ಅಪೂರ್ಣ ಭಾವನೆಯನ್ನು ಹೊಂದುತ್ತೇವೆ.

ನಾವು ವಿಸ್ಮೃತಿಯಿಂದ ನರಳುತ್ತಿರುವ ರೋಗಿಗಳಂತೆ ಎಂದು ಶ್ರೀಲ ಪ್ರಭುಪಾದರು ವಿವರಿಸುತ್ತಾರೆ.  ಕೃಷ್ಣನ ಪವಿತ್ರ ನಾಮಗಳನ್ನು ಜಪಿಸುವುದರಿಂದ ನಾವು ಕೃಷ್ಣನೊಂದಿಗಿನ ನಮ್ಮ ಬಾಂಧವ್ಯದ ಮರೆವನ್ನು ಗುಣಪಡಿಸಿಕೊಳ್ಳಬಹುದು ಮತ್ತು ಅವನನ್ನು ಕುರಿತ ನಮ್ಮ ಪ್ರೀತಿಯನ್ನು ಮುಚ್ಚಿರುವ ಅನಗತ್ಯ ಧೂಳಿನ ಛಾಯೆಯನ್ನು ನಮ್ಮ ಹೃದಯದಿಂದ ತೊಡೆದುಹಾಕಬಹುದು. ಕೃಷ್ಣನ ಭವ್ಯ ನಾಮಗಳನ್ನು ಜಪಿಸುವ ಮೂಲಕ ನಾವು ನಮ್ಮ ಮನಸ್ಸು ಮತ್ತು ಪ್ರಜ್ಞೆಯನ್ನು ಶುದ್ಧಗೊಳಿಸಿದಾಗ, ನಾವು ಯಾರು ಮತ್ತು ನಾವು ಎಲ್ಲಿಗೆ ಸೇರಿದ್ದೇವೆ ಎನ್ನುವುದನ್ನು ಅರಿತುಕೊಳ್ಳುತ್ತೇವೆ. ನಾವು ನಮ್ಮ ಆಧ್ಯಾತ್ಮಿಕ ಯಾತ್ರೆಯನ್ನು ತ್ವರಿತಗೊಳಿಸುತ್ತೇವೆ.

ಧ್ರುವನ ಉದಾಹರಣೆ

ಐಹಿಕ ಲೋಕದ ತನ್ನ ತಂದೆಯ ಸ್ವೀಕಾರ ಮತ್ತು ಒಲವನ್ನು ಪಡೆಯಲು ಪ್ರಯತ್ನಿಸುತ್ತಿದ್ದ ರಾಜಕುಮಾರ ಧ್ರುವನಿಗೆ ಶಾಶ್ವತ ಲೋಕದ ತಂದೆಯ ದರ್ಶನ ಲಭಿಸಿದ ಕಥೆಯನ್ನು ಭಾಗವತವು ಹೇಳುತ್ತದೆ. ಐದು ವರ್ಷದ ಬಾಲಕ ಧ್ರುವನು ತನ್ನ ತಂದೆಯ ತೊಡೆಯ ಮೇಲೆ ಕೂರಲು ಪ್ರಯತ್ನಿಸುತ್ತಿದ್ದಾಗ ಅವನ ಮಲ ತಾಯಿಯು ಅವನನ್ನು ಅವಮಾನಿಸುತ್ತಾಳೆ. ಇದರಿಂದ ಬಾಲಕ ಕೆರಳುತ್ತಾನೆ. ಅವನ ತಂದೆ ಅವನ ಮಲ ಸೋದರ ಮತ್ತು ಮಲ ತಾಯಿಗೆ ಹೆಚ್ಚು ಪ್ರೀತಿ ತೋರಿದಾಗ ಧ್ರುವ ಇನ್ನಷ್ಟು ಕೆರಳುತ್ತಾನೆ. ಪ್ರತೀಕಾರ ಮತ್ತು ಲೌಕಿಕ ಯಶಸ್ಸಿನ ಉದ್ದೇಶದಿಂದ ಅವನು ತನ್ನ ತಾಯಿಯ ಸಲಹೆಯಂತೆ ವಿಷ್ಣುವನ್ನು ಹುಡುಕಲು ನಿರ್ಧರಿಸುತ್ತಾನೆ. ಅವನಿಗೆ ತನ್ನ ಬದುಕಿನ ಅರ್ಥ ಮತ್ತು ಉದ್ದೇಶ ಸ್ಪಷ್ಟವಾಗುತ್ತದೆ. ವಿಶ್ವದ ಸೃಷ್ಟಿಕರ್ತ ಬ್ರಹ್ಮನಿಗಿಂತ ಉನ್ನತ ಸ್ಥಾನ ಪಡೆಯಲು ಅವನು ಅಪೇಕ್ಷಿಸುತ್ತಾನೆ.

ತಾಯಿಯ ಆಶೀರ್ವಾದ ಪಡೆದು ಹೊರಟ ಧ್ರುವನು ನಾರದ ಮುನಿಗಳನ್ನು ಭೇಟಿ ಮಾಡಿದ. ಅವರು ಅವನ ಗುರುವಾದರು. ಅವನ ಅಪೇಕ್ಷೆಗಳೆಲ್ಲ ಈಡೇರಿಕೆಯಾಗುವಂತೆ ದೇವೋತ್ತಮನನ್ನು ಆನಂದಪಡಿಸಲು ಅವರು ಸೂಚಿಸಿದರು. ಧ್ರುವನ ನೋವು ಲೌಕಿಕ ಒಲವು ಮತ್ತು ಭ್ರಮೆಗಳಿಂದ ಮೂಡಿಬಂದಿದೆ ಎನ್ನುವುದು ನಾರದ ಮುನಿಗಳಿಗೆ ಅರ್ಥವಾಯಿತು. ಭಕ್ತಿಯಿಂದ ಮತ್ತು ದೇವರ ದಿವ್ಯ ರೂಪದ ಬಗೆಗೆ ಧ್ಯಾನಿಸಿ ಸೇವೆಯನ್ನು ಮಾಡಲು ಅವರು ಸಲಹೆ ಮಾಡಿದರು.

ಉಪವಾಸ ಮತ್ತು ಕಠಿಣ ವ್ರತಗಳನ್ನು ಕೈಗೊಂಡು ಧ್ರುವನು ತನ್ನ ಗುರುಗಳ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದನು. ಭಗವಂತನ ಪ್ರೀತಿಯನ್ನು ಪಡೆಯುವ ಅವನ ದೃಢ ಸಂಕಲ್ಪ ಎಷ್ಟು ತೀವ್ರವಾಗಿತ್ತೆಂದರೆ ಆರು ತಿಂಗಳ ಅಂತ್ಯದಲ್ಲಿ ಶ್ರೀ ವಿಷ್ಣುವು ಪ್ರತ್ಯಕ್ಷನಾಗಿ ಅವನನ್ನು ಧ್ರುವ ನಕ್ಷತ್ರದ ರಾಜನನ್ನಾಗಿ ಮಾಡಿದನು. ಅದು ಬೇರೆ ಯಾವುದೇ ಗ್ರಹದ ಭವ್ಯತೆ ಮತ್ತು ವೈಭವವನ್ನು ಮೀರುತ್ತದೆ.

ತನ್ನ ಪ್ರೀತಿಯ ಭಗವಂತನನ್ನು ಮುಖಾಮುಖಿ ನೋಡಲು ದ್ರುವನಿಗೆ ತುಂಬ ಸಂತೋಷವಾಯಿತು. ಆದರೆ ಅವನು ಲಜ್ಜಿತನಾದ.

ಅವನು ನಮ್ರತೆಯಿಂದ ನುಡಿದ, “ಓ ನನ್ನ ದೇವರೇ, ಭವ್ಯವಾದ ಲೌಕಿಕ ಸ್ಥಾನವನ್ನು ಅಪೇಕ್ಷಿಸುತ್ತಿದ್ದುದರಿಂದ ನಾನು ಕಠಿಣವಾದ ತಪಸ್ಸು ಮತ್ತು ವ್ರತಗಳನ್ನು ಕೈಗೊಂಡೆ. ಶ್ರೇಷ್ಠ ದೇವತೆಗಳು, ಸಂತರು ಮತ್ತು ರಾಜರೂ ಪಡೆಯುವುದು ಕಷ್ಟವಾದ ನಿನ್ನನ್ನು ಈಗ ನಾನು ಪಡೆದುಕೊಂಡಿರುವೆ. ನಾನು ಗಾಜಿನ ಚೂರಿಗಾಗಿ ಹುಡುಕುತ್ತಿದ್ದೆ. ಆದರೆ ಅದಕ್ಕೆ ಬದಲಿಗೆ, ನಾನು ಅತ್ಯಂತ ಅಮೂಲ್ಯವಾದ ರತ್ನವನ್ನು ಕಂಡೆ. ಆದುದರಿಂದ ನಾನು ಎಷ್ಟು ತೃಪ್ತನಾಗಿರುವೆ ಎಂದರೆ ನಿನ್ನ ಬಳಿ ಯಾವುದೇ ವರವನ್ನು ಕೇಳುವ ಇಚ್ಛೆ ನನಗಿಲ್ಲ.” (ಹರಿ ಭಕ್ತಿ ಸುಧೋದಯ 7.28)

ಶ್ರೀಲ ಪ್ರಭುಪಾದರ ಯಶಸ್ಸು

ನಾರದ ಮುನಿಗಳು ಹೇಗೆ ಧ್ರುವನಿಗೆ ಮಾರ್ಗದರ್ಶನ ನೀಡಿದರೋ ಅದೇ ರೀತಿ ಶ್ರೀಲ ಪ್ರಭುಪಾದರು ಜನರು ಭಗವಂತನ ಸೇವೆ ಕೈಗೊಳ್ಳುವಂತೆ ಪ್ರೇರೇಪಿಸಿದರು. ಈ ರೀತಿ ಅವರ ಅತೃಪ್ತ ಹೃದಯಗಳಿಗೆ ಪರಿಹಾರ ನೀಡಿದರು. ಲೌಕಿಕ ಅಪೇಕ್ಷೆಗಳಿಂದ ತುಂಬಿತ್ತೋ, ಕೇವಲ ಕುತೂಹಲವೋ ಅಥವಾ ನಿಜವಾದ ಆಧ್ಯಾತ್ಮಿಕ ಬೆಳವಣಿಗೆಯನ್ನು ಹುಡುಕುವುದೋ ಯಾವುದೇ ಆಗಿರಲಿ, ಕೃಷ್ಣಪ್ರೇಮವನ್ನು ಪುನಶ್ಚೇತನಗೊಳಿಸುವ ಭಕ್ತಿ ಯೋಗ ಆಚರಣೆಯು ಅವರಿಗೆ ಶಾಶ್ವತ ಸುಖ ಮತ್ತು ತೃಪ್ತಿಯನ್ನು ನೀಡಿತು. ಗಂಭೀರವಾಗಿ ಆಚರಿಸುತ್ತಿದ್ದವರು ತಮ್ಮ ಕೆಟ್ಟ ಹವ್ಯಾಸ ಮತ್ತು ಚಟಗಳನ್ನು ತೊರೆಯುವುದು ಸಾಧ್ಯವಾಯಿತು. ಅಮೂಲ್ಯವಾದ ರತ್ನವನ್ನು ಪಡೆದ ಮೇಲೆ ಅವರು ಚೂರಾದ ಗಾಜಿನ ಆಕರ್ಷಣೆಯನ್ನು ಕಳೆದುಕೊಂಡರು.

ಕೃಷ್ಣನಲ್ಲಿಗೆ ಹಿಂದಿರುಗುವ ತಮ್ಮ ದಾರಿಯನ್ನು ಕಂಡುಕೊಳ್ಳುವ ಸಾಮಾನ್ಯ ಉದ್ದೇಶದಿಂದ ಎಲ್ಲ ರೀತಿಯ ಜನರನ್ನು ಒಗ್ಗೂಡಿಸುವಲ್ಲಿ ಶ್ರೀಲ ಪ್ರಭುಪಾದರು ಯಶಸ್ವಿಯಾದರು. ಜನರನ್ನು ಅವರ ಮರೆವಿನಂತಹ ಸ್ಥಿತಿಯಿಂದ ಎಚ್ಚರಿಸಲು ಶ್ರೀಲ ಪ್ರಭುಪಾದರ ನಿಸ್ವಾರ್ಥ ಕ್ರಮಗಳು ಮತ್ತು ತ್ಯಾಗವು ಕೃಷ್ಣನನ್ನು ಕುರಿತ ಅವರ ಶುದ್ಧ ಪ್ರೇಮದಿಂದ ಹೊಮ್ಮಿತೆನ್ನುವುದು ಸ್ಪಷ್ಟ.

ದಾರಿ ತಪ್ಪಿದ ಆತ್ಮಗಳನ್ನು ಸನ್ಮಾರ್ಗಕ್ಕೆ ತರುವ ಶ್ರೀಲ ಪ್ರಭುಪಾದರ ಧ್ಯೇಯವು ಅವರು ತಮ್ಮ ಗುರು ಶ್ರೀಲ ಭಕ್ತಸಿದ್ಧಾಂತ ಸರಸ್ವತೀ ಅವರನ್ನು ಭೇಟಿ ಮಾಡಿದಾಗಲೇ ಆರಂಭವಾಯಿತು. ಇದು ಅವರು ಅಮೆರಿಕ ಯಾತ್ರೆಯನ್ನು ಕೈಗೊಳ್ಳಲು ನಿರ್ಧರಿಸುವ ಮುನ್ನ. ಅವರ ಗುರುಗಳು ಬದುಕಿನ ಮೂಲಭೂತ ಉದ್ದೇಶವನ್ನು ಅವರಿಗೆ ಮನವರಿಕೆ ಮಾಡಿಕೊಟ್ಟರು ಮತ್ತು ಇದನ್ನು ಇತರರೊಂದಿಗೆ ಹಂಚಿಕೊಳ್ಳಬೇಕೆಂದು ಆದೇಶಿಸಿದರು. ಈ ಆದೇಶವನ್ನು ಪಾಲಿಸುವುದು ಶ್ರೀಲ ಪ್ರಭುಪಾದರ ಜೀವಮಾನ ಕಾರ್ಯ ಮತ್ತು ಉದ್ದೇಶವಾಯಿತು. ಕಾಲಾತೀತ ವೈದಿಕ ಜ್ಞಾನವನ್ನು ಹರಡುವ ಮೂಲಕ ತಮ್ಮ ಗುರುವನ್ನು ತೃಪ್ತಿ ಪಡಿಸುವ ಅವರ ಹೋರಾಟದಲ್ಲಿ ‘ಬ್ಯಾಕ್‌ ಟು ಗಾಡ್‌ಹೆಡ್‌’ ಪತ್ರಿಕೆಯನ್ನು ಪ್ರಕಟಿಸುವ ಅವರ ಪ್ರಯತ್ನವು ಒಂದು ಉದಾಹರಣೆ. ಅವರಲ್ಲಿ ಸಂಪನ್ಮೂಲಗಳಿರಲಿಲ್ಲ, ಹಣವಿರಲಿಲ್ಲ, ಪತ್ರಿಕೆಗೆ ಬರೆಯುವವರಿರಲಿಲ್ಲ.  1944ರಲ್ಲಿಯೇ ಕೋಲ್ಕತ್ತದಲ್ಲಿ ಅವರು ಏಕಾಂಗಿಯಾಗಿ ಲೇಖನಗಳನ್ನು ಬರೆದರು, ಅವುಗಳ ಬೆರಳಚ್ಚು ಮಾಡಿದರು, ಮುದ್ರಣಕ್ಕಾಗಿ ಹಣ ಸಂಗ್ರಹಿಸಿದರು ಮತ್ತು ಸಮರ ಕಾಲದಲ್ಲಿ ಅಭಾವವಾಗಿದ್ದ ಮುದ್ರಣ ಕಾಗದವನ್ನು ಪಡೆದರು. ಮುದ್ರಣ ಕಾರ್ಯದಲ್ಲಿ ನಿಗಾ ವಹಿಸಿದರು ಮತ್ತು ಕೋಲ್ಕತ್ತಾವು ಸಮರ ವಲಯದ ಮಧ್ಯದಲ್ಲಿದ್ದಾಗ ಪತ್ರಿಕೆಯನ್ನು ಹಂಚುವ ಕೆಲಸವನ್ನೂ ಮಾಡಿದರು.

ಅನಂತರದ ವರ್ಷಗಳಲ್ಲಿ ಶ್ರೀಲ ಪ್ರಭುಪಾದರು ಪತ್ರಿಕೆಯ ಪ್ರಕಟನೆಯನ್ನು ಮುಂದುವರಿಸಿದರು ಮತ್ತು ದಿಲ್ಲಿಯ ಸುಡು ಬೇಸಗೆಯಲ್ಲಿ ಪತ್ರಿಕೆಯನ್ನು ವಿತರಿಸುವಾಗ ತಾಪಾಘಾತಕ್ಕೆ (ಬಿಸಿಲಿನ ಹೊಡೆತ) ಕೂಡ ಒಳಗಾಗಿದ್ದರು. ಪ್ರತಿಕೂಲದ ಮಧ್ಯೆ ಅವರ ದೃಢ ನಿಷ್ಠೆಗೆ ಇರುವ ಕಾರಣವು ಅವರು ಪತ್ರಿಕೆಗೆ ನೀಡಿದ ಶೀರ್ಷಿಕೆಯಲ್ಲಿಯೇ ಇದೆ : ‘ಬ್ಯಾಕ್‌ ಟು ಗಾಡ್‌ಹೆಡ್‌’. ಭಗವಂತನಲ್ಲಿಗೆ, ನಮ್ಮ ಶಾಶ್ವತ ಗೃಹಕ್ಕೆ ಹಿಂದಿರುಗುವ ಬದುಕಿನ ಮೂಲಭೂತ ಅಥವಾ ಅಂತಿಮ ಉದ್ದೇಶವನ್ನು ಹೊರಗೆಡಹುವ ತುರ್ತು ಅಗತ್ಯವಿದೆ ಎಂದು ಅವರು ಭಾವಿಸಿದರು. ಭಗವಂತನತ್ತ ತಿರುಗುವುದೇ ಮಾನವ ಅಸ್ತಿತ್ವದ ಏಕೈಕ ಉದ್ದೇಶ ಎಂದು ಅವರು ಒತ್ತಿ ಹೇಳಿದರು. ಪತ್ರಿಕೆಯ ಮುಖ ಪುಟಕ್ಕೆ ಅವರು ಆಯ್ಕೆ ಮಾಡಿದ ಧ್ಯೇಯ ವಾಕ್ಯವು `ಗಾಡ್‌ಹೆಡ್‌’ ಪ್ರಜ್ಞೆಯ ಒಂದು ಸ್ಥಿತಿ ಕೂಡ ಎನ್ನುವುದನ್ನು ಸೂಚಿಸುತ್ತದೆ : ಕೃಷ್ಣ ತಾನು ಸೂರ್ಯನಂತೆ, ಮಾಯೆ ಅಂಧಕಾರ; ಕೃಷ್ಣ ನೆಲೆ ನಿಂತಂತೆ, ಮಾಯೆಗೆಲ್ಲಿ ಅಧಿಕಾರ.

ಬದುಕಿನ ಮೂಲಭೂತ ಉದ್ದೇಶ ಮತ್ತು ಜಯಶೀಲರಾಗುವುದು ಹೇಗೆ ಎನ್ನುವ ಬಗೆಗೆ ಕೃಷ್ಣನು ತನ್ನ ಭಕ್ತರಾದ ಪಾಂಡವರಿಗೆ ಸ್ವತಃ ಮಾರ್ಗದರ್ಶನ ನೀಡಿದನು. ಅವರು ಪ್ರಬಲ ಕ್ಷತ್ರಿಯರಾಗಿದ್ದರು. ಶ್ರೇಷ್ಠ ಯೋಧರಾಗಿದ್ದರು. ಲೌಕಿಕ ಮತ್ತು ಆಧ್ಯಾತ್ಮಿಕ ಜ್ಞಾನದಲ್ಲಿ ಹೆಚ್ಚಿನ ಅರ್ಹತೆ ಹೊಂದಿದ್ದರು. ಆದರೆ ಸಮರ ಭೂಮಿಯಲ್ಲಿ ತನ್ನ ಕರ್ತವ್ಯವನ್ನು ನಿರ್ವಹಿಸಿ ಪ್ರಪಂಚವನ್ನು ಅನ್ಯಾಯ ಮುಕ್ತಗೊಳಿಸಬೇಕಾದ ಸಮಯದಲ್ಲಿ ಅರ್ಜುನನು ವಿಮುಖನಾಗುತ್ತಾನೆ ಮತ್ತು ಗೊಂದಲಕ್ಕೆ ಒಳಗಾಗುತ್ತಾನೆ. ಕೃಷ್ಣನು ಬದುಕಿನ ಉದ್ದೇಶದ ಬಗೆಗೆ ಸಲಹೆ ನೀಡುತ್ತ ಅರ್ಜುನನ ಅಜ್ಞಾನವನ್ನು ತೊಲಗಿಸುತ್ತಾನೆ. ಭಗವಂತನ ಬಗೆಗೆ ಪೂರ್ಣ ಪ್ರಜ್ಞೆಯೊಂದಿಗೆ ಕರ್ತವ್ಯವನ್ನು ನಿರ್ವಹಿಸುವ ಅಗತ್ಯವನ್ನೂ ಕೃಷ್ಣನು ವಿವರಿಸುತ್ತಾನೆ. ನಾವು ನಮ್ಮ ಕರ್ತವ್ಯಗಳು, ಪ್ರತಿಭೆಗಳು, ಸಂಪತ್ತು ಅಥವಾ ಸ್ವಾಧೀನಗಳನ್ನು ಬಿಟ್ಟುಬಿಡಬಾರದು. ಆದರೆ ಅವುಗಳನ್ನು ಅವನ ಆನಂದಕ್ಕೆ ಬಳಸುವ ಮೂಲಕ ಅವುಗಳಿಗೆ ನಿಜವಾದ ಅರ್ಥವನ್ನು ನೀಡಬೇಕು ಎಂದು ಕೃಷ್ಣನು ವಿವರಿಸುತ್ತಾನೆ. ಈ ರೀತಿ ನಾವು ಪ್ರೀತಿಯ ಸೇವೆಯಿಂದ ಸದಾ ಅವನೊಂದಿಗೆ ಸಂಪರ್ಕದಲ್ಲಿರುತ್ತೇವೆ. ಕೃಷ್ಣನು ಅರ್ಜುನನಿಗೆ ಆಶ್ವಾಸನೆ ನೀಡುತ್ತಾನೆ, “ಯಾರು ನನ್ನನ್ನು ಎಲ್ಲೆಲ್ಲಿಯೂ ಕಾಣುವನೋ ಮತ್ತು ನನ್ನಲ್ಲಿ ಎಲ್ಲವನ್ನೂ ಕಾಣುತ್ತಾನೋ ಅವನು ನನ್ನನ್ನು ಎಂದಿಗೂ ಕಳೆದುಕೊಳ್ಳುವುದಿಲ್ಲ. ನಾನು ಅವನನ್ನು ಎಂದಿಗೂ ಕಳೆದುಕೊಳ್ಳುವುದಿಲ್ಲ.” (ಭಗವದ್ಗೀತೆ 6.30)

ಬದುಕಿನ ಪಯಣದಲ್ಲಿ, ನಾವು ವೈವಿಧ್ಯಮಯ ಕೆಲಸಗಳನ್ನು ಪೂರೈಸುತ್ತ ಅಥವಾ ಬೇರೆ ಬೇರೆ ಚಟುವಟಿಕೆಗಳಲ್ಲಿ ತೊಡಗುತ್ತ ಅರ್ಥವನ್ನು ಹುಡುಕಬಹುದು. ವಿಕ್ಟರ್‌ ಫ್ರಾಂಕಲ್‌ ಸೂಚಿಸಿದಂತೆ ಅವುಗಳಿಗೆ ಅರ್ಥವನ್ನು ನೀಡುತ್ತ ಸವಾಲುಗಳನ್ನು ಎದುರಿಸಬಹುದು. ಆದರೆ ನಾವು ಬದುಕಿನ ಮೂಲಭೂತ ಅರ್ಥ, ಉದ್ದೇಶವನ್ನು ನಿರ್ಲಕ್ಷಿಸಬಾರದು. ನಮ್ಮ ಶಾಶ್ವತ ತಂದೆಯಿಂದ ಬೇರ್ಪಟ್ಟ ದಾರಿ ತಪ್ಪಿದ ಮಕ್ಕಳಂತೆ ನಾವು ನಮ್ಮ ನ್ಯಾಯಯುಕ್ತವಾದ ಉತ್ತರಾಧಿಕಾರವನ್ನು ತಿರಸ್ಕರಿಸುವುದು ಮೂರ್ಖತನ.

ಈ ಲೇಖನ ಶೇರ್ ಮಾಡಿ