ಇರ್ಪು ಶ್ರೀ ರಾಮೇಶ್ವರ ದೇವಾಲಯ

ಹಸಿರು ಹಸಿರಾದ ನಿತ್ಯ ಹರಿದ್ವರ್ಣ ರಮ್ಯ ಕಾಡು… ಬಂಡೆಗಳ ಮಧ್ಯೆ ಹಾಲಿನ ಕೆನೆಯಂತೆ ಬಿಳುಪುಳ್ಳ, ಮೆಟ್ಟಿಲು ಮೆಟ್ಟಿಲಂತೆ ಧುಮುಕುವ ರಮ್ಯ ಮನೋಹರ ಜಲಪಾತ… ಶ್ರೀರಾಮ, ಲಕ್ಷ್ಮಣ, ಸೀತೆಯರು ಇಲ್ಲಿ ಸಂಚರಿಸಿದ್ದರೆಂಬ ಐತಿಹ್ಯ, ಅದರಿಂದ ಉಂಟಾಗಿರುವ ಪಾವಿತ್ರ್ಯ, ಶ್ರೀರಾಮನು ಸ್ಥಾಪಿಸಿದೆನ್ನಲಾದ ಶಿವಲಿಂಗವಿರುವ ಶ್ರೀರಾಮೇಶ್ವರ ದೇವಾಲಯ…  ಹೀಗೆ ಇರ್ಪು ಜಲಪಾತದ ಪ್ರದೇಶ, ಅತ್ಯಂತ ರಮಣೀಯವೂ ಪವಿತ್ರವೂ ಆಗಿದೆ. ಶ್ರೀರಾಮ, ಲಕ್ಷ್ಮಣ, ಸೀತೆಯರು ತಮ್ಮ ವನವಾಸ ಕಾಲದಲ್ಲಿ  ಕ್ರಮಿಸಿದರೆನ್ನಲಾದ ಅನೇಕ ಪುಣ್ಯಕ್ಷೇತ್ರಗಳಲ್ಲಿ ಇದೂ ಒಂದಾಗಿದೆ. ಅಂತೆಯೇ ಕರ್ನಾಟಕದ ಪ್ರಕೃತಿ ರಮ್ಯತಾಣಗಳಲ್ಲಿ ಇದೂ ಒಂದು.

ಹೇಗೆ ತಲಪುವುದು?

ಇರ್ಪು ಜಲಪಾತ, ಕೊಡಗು ಜಿಲ್ಲೆಯ ನಾಗರಹೊಳೆ ರಾಷ್ಟ್ರೀಯ ವನ್ಯಧಾಮದ ಬಳಿಯಿದೆ. ಮೈಸೂರಿನಲ್ಲಿ ಇಲ್ಲವೇ ಮಡಿಕೇರಿಯಲ್ಲಿ ಇಳಿದುಕೊಂಡು ಇಲ್ಲಿಗೆ ಹೋಗುವುದು ಉತ್ತಮ. ಮೈಸೂರಿನಿಂದ ಸುಮಾರು 90 ಕಿ.ಮಿ. ದೂರದಲ್ಲಿರುವ ನಾಗರಹೊಳೆಗೆ ಮೊದಲು ಹೋಗಿ, ಅಲ್ಲಿಂದ ಸುಮಾರು 30 ಕಿ.ಮೀ. ದೂರ, ಕುಟ್ಟ ಎಂಬ ಹಳ್ಳಿಯ ಮೂಲಕ ಸಾಗಿದರೆ ಇರ್ಪುವನ್ನು ತಲಪಬಹುದು. ಇಲ್ಲವೇ ಮಡಿಕೇರಿಯಿಂದ ಗೋಣಿಕೊಪ್ಪಲ್‌ ರಸ್ತೆಯಲ್ಲಿ ಸಾಗಿ ಪೊನ್ನಂಪೇಟೆ ತಲಪಿ ಶ್ರೀಮಂಗಲ ಎಂಬ ಸ್ಥಳದಿಂದ 2 ಕಿ.ಮೀ. ದೂರದಲ್ಲಿ ಇರ್ಪುವಿನ ಕಡೆ ತಿರುಗಿ ಈ ಸ್ಥಳವನ್ನು ತಲಪಬಹುದು. ಮಡಿಕೇರಿಯಿಂದ ಇದು 50 ಕಿ.ಮೀ. ದೂರವಾಗುತ್ತದೆ. ಬೆಂಗಳೂರಿನಿಂದ ಸುಮಾರು 300 ಕಿ.ಮೀ. ದೂರವಾಗುತ್ತದೆ.

ದೇವಾಲಯ ಮತ್ತು ಜಲಪಾತ

ಇರ್ಪು ಜಲಪಾತವಿರುವ ಬೆಟ್ಟದ ಸಾಲಿನ ಪ್ರದೇಶವನ್ನು ಬ್ರಹ್ಮಗಿರಿ ಎನ್ನುತ್ತಾರೆ. ಇದು ಕರ್ನಾಟಕ ಮತ್ತು ಕೇರಳಗಳ ನಡುವಿನ ಗಡಿಯಂತಿದೆ. ಬ್ರಹ್ಮಗಿರಿ ಬೆಟ್ಟಗಳಲ್ಲಿ ಉದಿಸುವ ಲಕ್ಷ್ಮಣತೀರ್ಥ ನದಿಯೇ 170 ಅಡಿಗಳಿಂದ ಇರ್ಪು ಜಲಪಾತವಾಗಿ ಧುಮುಕಿ ಮುಂದೆ ಹರಿಯುತ್ತಾ ರಾಮತೀರ್ಥ ನದಿಯನ್ನು ಸೇರಿ ಅನಂತರ ಕಾವೇರಿ ನದಿಯನ್ನು ಕೂಡಿಕೊಳ್ಳುತ್ತದೆ.

ಇರ್ಪು ಸ್ಥಳವನ್ನು ತಲಪಿದ ಕೂಡಲೇ ಮೊದಲು ನಮಗೆ ಎದುರಾಗುವುದೇ ಇರ್ಪು ರಾಮೇಶ್ವರ ದೇವಾಲಯ. ಇದು ಕೇರಳೀಯ ಮಾದರಿಯಲ್ಲಿದ್ದು, ಪುಟ್ಟ ಶಿಖರವನ್ನೂ ದುಂಡಾದ ಗರ್ಭಗೃಹವನ್ನೂ ಹೊಂದಿದೆ. ಗರ್ಭಗೃಹದಲ್ಲಿ ಶ್ರೀರಾಮನು ಸ್ಥಾಪಿಸಿದ್ದೆನ್ನಲಾದ ಶಿವಲಿಂಗವಿದ್ದು, ಬದಿಗಳಲ್ಲಿ ಗಂಧರ್ವ, ಭೈರವ, ಮಹಾದೇವ, ಗಣಪತಿ, ಮತ್ತು ಪಾರ್ವತಿದೇವಿಯರ ಪುಟ್ಟ ಗುಡಿಗಳಿವೆ. ಎದುರಿಗೆ ಒಂದು ಅಶೋಕವೃಕ್ಷವೂ ಇದೆ. ದೇವಾಲಯದ ಹೊರಗೆ ಪವಿತ್ರವಾದ ಅಶ್ವತ್ಥ ವೃಕ್ಷವಿದೆ. ದೇವಾಲಯದ ಸಂದರ್ಶನದ ಬಳಿಕ, ಮೆಟ್ಟಿಲುಗಳನ್ನು ಹತ್ತುತ್ತಾ, ಬಹಳ ರಮ್ಯವಾದ ಪ್ರಕೃತಿಸೌಂದರ್ಯವಿರುವ ಕಾಡಿನ ಮೂಲಕ ಸಾಗಬೇಕಾಗುತ್ತದೆ. ದಾರಿಯಲ್ಲಿ, ನದಿಯ ಮೇಲೆ ತೂಗುಸೇತುವೆಯೊಂದರ ಮೇಲೆಯೂ ನಡೆದು ಹೋಗಬೇಕಾಗುತ್ತದೆ. ಇಲ್ಲಿನ ಹಸಿರು ಪ್ರಕೃತಿ, ಮೈನವಿರೇಳಿಸುತ್ತದೆ. ಮುಂದೆ ಸಾಗಿದರೆ ಕಾಣುತ್ತದೆ ಹಾಲ್ಬಿಳುಪಿನ ಇರ್ಪು ಜಲಪಾತ. ಮೆಟ್ಟಿಲು ಮೆಟ್ಟಿಲಂತೆ ಧುಮುಕುತ್ತಾ ಕೊನೆಗೆ ಎರಡು ಕವಲುಗಳಾಗಿ ಬಂಡೆಗಳ ಮಧ್ಯೆ ಹರಿಯುವ ಈ ಜಲಪಾತದ ಸೌಂದರ್ಯ ಕಣ್ಮನ ಸೂರೆಗೊಳ್ಳುತ್ತದೆ.

ಜಲಪಾತದ ತುದಿಯಿಂದ ಮುಂದಕ್ಕೆ ಹೋದರೆ ಲಕ್ಷ್ಮಣತೀರ್ಥದ ಉಗಮವಿರುವ ಬ್ರಹ್ಮಗಿರಿ ಬೆಟ್ಟ ಹಾಗೂ ಅರಣ್ಯಧಾಮಗಳಿಗೆ ಹೋಗಬಹುದು. ಆದರೆ ಇಲ್ಲಿಗೆ ಹೋಗಲು, ಶ್ರೀಮಂಗಲದ ಅರಣ್ಯ ಇಲಾಖೆಯಲ್ಲಿ ಅರಣ್ಯಾಧಿಕಾರಿಗಳ ಲಿಖಿತರೂಪದ ಒಪ್ಪಿಗೆ ಪಡೆಯಬೇಕು. ಮೇಲೆ ನಾರಿಮಲೈ ಎಂಬ ಬೆಟ್ಟದ ಬಳಿ ಇಳಿದುಕೊಳ್ಳಲು ತಂಗುದಾಣವಿದೆ.

ಇರ್ಪು ಜಲಪಾತಕ್ಕೆ ಹೋಗಲು ಬಸ್ಸುಗಳ ಸೌಕರ್ಯ ಅಷ್ಟಾಗಿ ಇಲ್ಲ. ಆದ್ದರಿಂದ ಸ್ವಂತ ಇಲ್ಲವೇ ಖಾಸಗಿ ವಾಹನದಲ್ಲಿ ಹೋಗುವುದು ಒಳ್ಳೆಯದು.

ಸ್ಥಳ ಪುರಾಣ

ಸ್ಥಳಪುರಾಣದ ಪ್ರಕಾರ, ಬ್ರಹ್ಮನು ಇಲ್ಲಿನ ಬೆಟ್ಟದ ಸಾಲಿನಲ್ಲಿ ತಪಸ್ಸು ಮಾಡಿದ್ದರಿಂದ ಈ ಬೆಟ್ಟದ ಸಾಲಿಗೆ ಬ್ರಹ್ಮಗಿರಿ ಎಂಬ ಹೆಸರು ಬಂದಿತು. ರಾಮಲಕ್ಷ್ಮಣರು ಸೀತೆಯನ್ನು ಹುಡುಕುತ್ತಾ ಲಂಕೆಗೆ ಹೋಗುತ್ತಾ ಈ ಬ್ರಹ್ಮಗಿರಿ ಬೆಟ್ಟಗಳ ಮೂಲಕ ಸಾಗುತ್ತಿದ್ದಾಗ, ಲಕ್ಷ್ಮಣನಿಗೆ ಇದ್ದಕ್ಕಿದ್ದಂತೆ ರಾಮನ ಮೇಲೆ ಕಾರಣವಿಲ್ಲದೇ ಕೋಪ ಬಂದು ತಾನು ಅವನೊಂದಿಗೆ ಇನ್ನು ಬರುವುದಿಲ್ಲವೆಂದನಂತೆ. ಆದರೆ ಅವನು ಸ್ವಲ್ಪ ಹಿಂದೆ ಹೋದ ಕೂಡಲೇ ಶಾಂತನಾದ.  ಆದರೆ ಲಕ್ಷ್ಮಣನಿಗೆ ತಾನು ಮಾಡಿದ್ದು ತಪ್ಪೆನಿಸಿ, ಅವನು ಪಶ್ಚಾತ್ತಾಪಪಡುತ್ತಾ ರಾಮನ ವಿವರಣೆಯಿಂದ ಸಮಾಧಾನ ಹೊಂದದೇ ಆಗ್ನೇಯಾಸ್ತ್ರದಿಂದ ಅಗ್ನಿಯನ್ನು ಉತ್ಪತ್ತಿ ಮಾಡಿ ಅದರಲ್ಲಿ ಪ್ರವೇಶಿಸಲು ಮುಂದಾದ. ಆಗ ರಾಮನು ವಾರುಣಾಸ್ತ್ರದಿಂದ ನೀರನ್ನು ಉತ್ಪತ್ತಿ ಮಾಡಿ ಅಗ್ನಿಯನ್ನು ಆರಿಸಿ ಲಕ್ಷ್ಮಣನನ್ನು ಸಮಾಧಾನಪಡಿಸಿದ.  ಈ ನೀರಿಗೆ ಪಾಪಗಳನ್ನು ತೊಳೆಯುವ ಶಕ್ತಿಯನ್ನು ಕರುಣಿಸಿದ. ಈ ನೀರೇ ಲಕ್ಷ್ಮಣತೀರ್ಥ ನದಿಯಾಗಿ ಹರಿಯಿತು. ಇನ್ನೊಂದು ಹೇಳಿಕೆಯ ಪ್ರಕಾರ, ಲಕ್ಷ್ಮಣನ ಪಶ್ಚಾತ್ತಾಪದ ಕಣ್ಣೀರು ಹೀಗೆ ಲಕ್ಷ್ಮಣತೀರ್ಥ ನದಿಯಾಗಿ ಹರಿಯಿತು. ಈ ನದಿಯು ಆ ಸ್ಥಳವನ್ನು ಪವಿತ್ರಗೊಳಿಸಿತು.

ರಾಮಲಕ್ಷ್ಮಣರು ಸೀತೆಯೊಂದಿಗೆ ಲಂಕೆಯಿಂದ ಹಿಂದಿರುಗುವಾಗ, ಶ್ರೀರಾಮನಿಗೆ ಈ ಸ್ಥಳದಲ್ಲಿ ಒಂದು ಶಿವಲಿಂಗವನ್ನು ಪ್ರತಿಷ್ಠಾಪಿಸಬೇಕೆನಿಸಿತು. ಆಗ ಅವನು ಹನುಮಂತನಿಗೆ ಕಾಶಿಯಿಂದ ಒಂದು ಶಿವಲಿಂಗವನ್ನು ತರಲು ಹೇಳಿದ. ಆದರೆ ಹನುಮಂತನು ಹೋಗಿ ಲಿಂಗವನ್ನು ತರಲು ತಡಮಾಡಲು, ಶ್ರೀರಾಮನು ಒಂದು ಮರಳಿನ ಲಿಂಗವನ್ನೇ ಇಲ್ಲಿ ಪ್ರತಿಷ್ಠಾಪಿಸ ಹೊರಟ. ಆಗ ಹನುಮಂತನೂ ಲಿಂಗವನ್ನು ತಂದ. ರಾಮನು ಆಗಲೇ ಲಿಂಗವೊಂದನ್ನು ಪ್ರತಿಷ್ಠಾಪಿಸುತ್ತಿರುವುದನ್ನು ಕಂಡು ಕೋಪಗೊಂಡು, ತಾನು ತಂದ ಲಿಂಗಕ್ಕೆ ಸ್ಥಳವೆಲ್ಲಿ ಎಂದನು. ಆಗ ರಾಮನು ಅವನನ್ನು ಸಮಾಧಾನಪಡಿಸಿ ಒಂದು ಬಾಣವನ್ನು ಬಿಟ್ಟು ಅದು ನೆಲೆಯಾದ ಸ್ಥಳದಲ್ಲಿ ಆ ಕಾಶಿಯ ಲಿಂಗವನ್ನು ಪ್ರತಿಷ್ಠಾಪಿಸಬೇಕೆಂದೂ ತನ್ನ ಲಿಂಗಕ್ಕಿಂತ ಅವನ ಲಿಂಗವೇ ಹೆಚ್ಚು ಮಹತ್ವವುಳ್ಳದಾಗುವುದೆಂದೂ ಹೇಳಿದ. ಆ ಬಾಣವು ಪೆರಮಾಡವೆಂಬ ಸ್ಥಳದಲ್ಲಿ ಬೀಳಲು, ಹನುಮಂತನು ತಾನು ತಂದ ಶಿವಲಿಂಗವನ್ನು ಅಲ್ಲಿ ಪ್ರತಿಷ್ಠಾಪಿಸಿದ. ಪೆರಮಾಡವು ಇರ್ಪುವಿನಿಂದ 8 ಕಿ.ಮೀ. ದೂರದಲ್ಲಿದ್ದು ಇಲ್ಲಿಯೂ ಒಂದು ಶಿವಾಲಯವಿದೆ. ಶಿವರಾತ್ರಿಯ ಸಮಯದಲ್ಲಿ, ಇರ್ಪು ರಾಮೇಶ್ವರನಿಗೆ ಪೂಜೆ ಆರಂಭಿಸುವ ಒಂದು ದಿನ ಮೊದಲು ಈ ಶಿವಾಲಯದ ಶಿವಲಿಂಗಕ್ಕೆ ಪೂಜೆ ಮಾಡುತ್ತಾರೆ. ಹೀಗೆ ಶ್ರೀರಾಮನು ಹೇಳಿದಂತೆ ಹನುಮಂತನ ಲಿಂಗಕ್ಕೆ ಹೆಚ್ಚಿನ ಪ್ರಾಶಸ್ತ್ಯ ಕೊಡುತ್ತಾರೆ.

ಇರ್ಪು ಒಂದು ಸುಂದರ ಪ್ರವಾಸೀ ತಾಣವೂ ಹೌದು, ಒಂದು ಪುಣ್ಯಕ್ಷೇತ್ರವೂ ಹೌದು. ಶಿವರಾತ್ರಿಯ ಸಮಯದಲ್ಲಿ ಈ ಸ್ಥಳ ಭಕ್ತರಿಂದ ತುಂಬಿ ಹೋಗುತ್ತದೆ. ಮೈಸೂರು ಇಲ್ಲವೇ ಮಡಿಕೇರಿಯಿಂದ ಒಂದು ದಿನದ ಪ್ರವಾಸಕ್ಕೆ ಈ ಸ್ಥಳ ಬಹಳ ಪ್ರಶಸ್ತವಾಗಿದೆ.

ಈ ಲೇಖನ ಶೇರ್ ಮಾಡಿ