ನಿತ್ಯಾನಂದ ಪ್ರಭು ಈ ಲೋಕವನ್ನು ತ್ಯಜಿಸಿದ ಮೇಲೆ ಅವರ ಪತ್ನಿ ಶ್ರೀಮತಿ ಜಾಹ್ನವಾ ದೇವಿ ಅವರು ಶ್ರೀ ಚೈತನ್ಯ ಮಹಾಪ್ರಭುಗಳ ಆಂದೋಲನದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು.
ಆಂಗ್ಲ ಮೂಲ : ಸತ್ಯರಾಜ ದಾಸ
“ಮಹಿಳೆಯು ಕೃಷ್ಣಪ್ರಜ್ಞೆಯಲ್ಲಿ ಪರಿಪೂರ್ಣವಾಗಿದ್ದರೆ (ಅವರು ಗುರುವಾಗಬಹುದು)… ಶ್ರೀ ನಿತ್ಯಾನಂದರ ಪತ್ನಿ ಶ್ರೀಮತಿ ಜಾಹ್ನವಾ ದೇವಿ ಅವರಂತೆ… ಅವರು ಆಚಾರ್ಯರು… ಅವರು ಇಡೀ ವೈಷ್ಣವ ಸಮುದಾಯದ ಚಾಲನಾಶಕ್ತಿಯಾಗಿದ್ದರು, ನಿಯಂತ್ರಣಶಕ್ತಿಯಾಗಿದ್ದರು.” – ಶ್ರೀಲ ಪ್ರಭುಪಾದ.
ಕೃಷ್ಣಪ್ರಜ್ಞೆ ಪರಂಪರೆಯು ಯಾವಾಗಲೂ ಪುರುಷರು ಮತ್ತು ಮಹಿಳೆಯರನ್ನು ಸಮಾನವಾಗಿಯೇ ಕಾಣುತ್ತಾ ಬಂದಿದೆ. ಕೃಷ್ಣಪ್ರಜ್ಞೆಯ ತತ್ತ್ವ ಏನೆಂದರೆ, ಎಲ್ಲ ಜೀವಿಗಳೂ ಆಧ್ಯಾತ್ಮಿಕ ಆತ್ಮಗಳು ಮತ್ತು ಆ ಮಟ್ಟದಲ್ಲಿ ನಮ್ಮ ನಡುವೆ ಯಾವ ಭೇದವೂ ಇಲ್ಲ. ಅದಕ್ಕಿಂತ ಹೆಚ್ಚಾಗಿ, ಶ್ರೀ ಚೈತನ್ಯ ಮಹಾಪ್ರಭುಗಳು ಸ್ಥಾಪಿಸಿದ ಗೌಡೀಯ ವೈಷ್ಣವ ಪರಂಪರೆಯ ಸರ್ವೋತ್ಕೃಷ್ಟ ಪರಮ ದೇವತೆ ಎಂದರೆ ಶ್ರೀಮತಿ ರಾಧಾರಾಣಿ. ಮತ್ತು ವ್ರಜದ ಗೋಪಾಲಕ ಮಹಿಳೆಯರಾದ ಗೋಪಿಯರು ಅತ್ಯಂತ ಶ್ರೇಷ್ಠ ಭಕ್ತರು. ಅವರ ಏಕಾಗ್ರ ಕೃಷ್ಣಪ್ರೇಮವು ಗೌಡೀಯ ವೈಷ್ಣವ ಪರಂಪರೆಯನ್ನು ಆಚರಿಸುವವರಿಗೆ ಮಾದರಿಯಾಗಿದೆ.
ದಿಟವಾಗಿ, ತಮ್ಮ ಪುರುಷ ಸಹ ನಾಯಕರ ಮಧ್ಯೆ ಸಬಲವಾಗಿ ನಿಂತ ಮಹಿಳಾ ನಾಯಕರನ್ನು ಆರಂಭದ ಗೌಡೀಯ ವೈಷ್ಣವರು ಗುರುತಿಸಿದ್ದರು. ಪುರುಷರಿಗೆ ಹೋಲಿಸಿದರೆ ನಾಯಕಿಯರ ಸಂಖ್ಯೆ ಕಡಿಮೆಯಾಗಿತ್ತು. ಅವರಲ್ಲಿ ಜಾಹ್ನವಾ ದೇವಿ ಅವರು ಅತ್ಯಂತ ಪ್ರಮುಖರು. ಶ್ರೀ ಚೈತನ್ಯರ ಮುಖ್ಯ ಸಹವರ್ತಿ ನಿತ್ಯಾನಂದ ಪ್ರಭುಗಳ ಪತ್ನಿಯಾದ ಜಾಹ್ನವಾ ದೇವಿ 16ನೆಯ ಶತಮಾನದಲ್ಲಿ ಗೌಡೀಯ ವೈಷ್ಣವ ಪರಂಪರೆಯಲ್ಲಿ ಪ್ರಮುಖ ಗುರುವಾಗಿದ್ದರು. ಶ್ರೀಲ ಪ್ರಭುಪಾದರು ಟೊರಂಟೋ ವಿಶ್ವ ವಿದ್ಯಾಲಯದ ಧರ್ಮ ಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದ ದಿ. ಪ್ರೊ. ಜೋಸೆಫ್ ಟಿ. ಓ. ಕಾಮೆಲ್ ಅವರ ಬಳಿ ಸಂವಾದ ನಡೆಸಿದಾಗ ಇದನ್ನು ಸ್ಪಷ್ಟಪಡಿಸಿದ್ದರು. ಗುರುವಿನ ಅರ್ಹತೆ ಏನೆಂದರೆ, ಅವರು ಕೃಷ್ಣ ವಿಜ್ಞಾನದಲ್ಲಿ ಜ್ಞಾನ ಉಳ್ಳವರಾಗಿರಬೇಕು. ಆಗ ಸ್ತ್ರೀ ಅಥವಾ ಪುರುಷ ಗುರುವಾಗಬಹುದು. ಯೇಯಿ ಕೃಷ್ಣ ತತ್ತ್ವ ವೇತ್ತಾ, ಸೇಯಿ ʼಗುರುʼ ಹಯ,“… ಏನೇ ಆಗಿರಲಿ, ಅವನು ಕೃಷ್ಣ ವಿಜ್ಞಾನವನ್ನು ತಿಳಿದಿದ್ದರೆ ಗುರುವಾಗಬಲ್ಲ.” (ಚೈತನ್ಯ ಚರಿತಾಮೃತ ಮಧ್ಯ 8.128) ಭೌತಿಕ ಲೋಕದಲ್ಲಿ ಮಹಿಳೆಯು ಪ್ರಾಧ್ಯಪಕಿಯಾಗಬಾರದೆನ್ನುವ ನಿಷೇಧವಿದೆಯೇ? ಅರ್ಹಳಾಗಿದ್ದರೆ ಅವಳು ಪ್ರಾಧ್ಯಾಪಕಿಯಾಗಬಹುದು. ಅದರಲ್ಲಿ ತಪ್ಪೇನಿದೆ? ಅವಳಿಗೆ ಅರ್ಹತೆ ಇರಬೇಕಷ್ಟೆ. ಅದೇ ರೀತಿ ಮಹಿಳೆಯು ಕೃಷ್ಣಪ್ರಜ್ಞೆಯನ್ನು ಪರಿಪೂರ್ಣವಾಗಿ ಅರ್ಥ ಮಾಡಿಕೊಂಡರೆ ಅವಳು ಗುರುವಾಗಬಹುದು.”
ಜಾಹ್ನವಾ ದೇವಿ ಯಾರು?
16 ಮತ್ತು 17ನೆಯ ಶತಮಾನದ ಸಾಹಿತ್ಯದಲ್ಲಿ ಜಾಹ್ನವಾ ಅವರನ್ನು ಸಾಮಾನ್ಯವಾಗಿ ಈಶ್ವರನ ಸ್ತ್ರೀ ರೂಪ ಈಶ್ವರಿ ಎಂದು ಹೇಳಲಾಗಿದೆ. ಕೆಲವು ಬಾರಿ ಅವರು ಶ್ರೀಮತಿ ಮತ್ತು ಠಾಕುರಾಣಿ ಎಂದೂ ಪ್ರಸಿದ್ಧರು. ನಿತ್ಯಾನಂದ ಪ್ರಭುಗಳ (ನಿತ್ಯಾನಂದರು ಬಲರಾಮ) ಪತ್ನಿಯಾಗಿ ದಿವ್ಯ ಸ್ಥಾನವನ್ನು ಅವರು ಹೊಂದಿದ್ದರು ಎನ್ನುವುದನ್ನು ಮಾತ್ರವಲ್ಲ, ಅವರ ಕಾಲದ ಗೌಡೀಯರಲ್ಲಿ ಒಬ್ಬ ನಾಯಕರೆಂದು ಪರಿಗಣಿಸಲಾಗಿತ್ತೆನ್ನುವುದನ್ನೂ ಅದು ಸೂಚಿಸುತ್ತದೆ.
ಒಂದಷ್ಟು ಹಿನ್ನೆಲೆ. ಸೂರ್ಯದಾಸ ಸರಖೇಲ ಮತ್ತು ಅವರ ನಾಲ್ವರು ಸಹೋದರರು ಶ್ರೀ ಚೈತನ್ಯ ಮತ್ತು ನಿತ್ಯಾನಂದರ ಶ್ರೇಷ್ಠ ಭಕ್ತರಾಗಿದ್ದರು. ಅವರು ನವದ್ವೀಪಕ್ಕೆ ಸಮೀಪದ ಸಾಲಿಗ್ರಾಮದಲ್ಲಿ ವಾಸವಾಗಿದ್ದರೂ ಅನಂತರದಲ್ಲಿ ಅಂಬಿಕಾ ಕಾಲ್ನಾಕ್ಕೆ ಸ್ಥಳಾಂತರಗೊಂಡಿದ್ದರು. ಸೂರ್ಯದಾಸರು ಆ ಕಾಲದ ಮುಸ್ಲಿಂ ಸರಕಾರದಲ್ಲಿ ಕೆಲಸ ಮಾಡುತ್ತಿದ್ದರು. ಅವರ ಪತ್ನಿ ಭದ್ರಾವತಿ. ಈ ದಂಪತಿಗೆ ಇಬ್ಬರು ಪುತ್ರಿಯರು. ಅವರಿಗೆ ವಸುಧಾ ಮತ್ತು ಜಾಹ್ನವಾ ಎಂದು ನಾಮಕರಣ ಮಾಡಲಾಗಿತ್ತು. ಜಾಹ್ನವಾ ಕಿರಿಯ ಪುತ್ರಿ. ಗೌರ ಗಣೋದ್ದೇಶ ದೀಪಿಕಾದ ಪ್ರಕಾರ, ಈ ಹಿಂದಿನ ಅವತಾರದಲ್ಲಿ ಅವರಿಬ್ಬರೂ ಬಲರಾಮನ ಪತ್ನಿಯರಾಗಿದ್ದ ವಾರುಣಿ ಮತ್ತು ರೇವತಿ. ಅದೇ ಪುಸ್ತಕವು ವಸುಧಾ ಮತ್ತು ಜಾಹ್ನವಾ ಅವರು ರಾಧಾರಾಣಿಯ ತಂಗಿ ಅನಘಾ ಮಂಜರಿಯ ಅವತಾರವೆಂದು ತಿಳಿಸಿದೆ. ಅವರಿಬ್ಬರೂ ಶ್ರೀ ಬಲರಾಮನ ಶಾಶ್ವತ ಶಕ್ತಿಗಳಾಗಿರುವುದರಿಂದ ಅವರು ಚೈತನ್ಯ ಲೀಲದಲ್ಲಿ ನಿತ್ಯಾನಂದ ಪ್ರಭುಗಳ ಪತ್ನಿಯರಾದರು. ಜಾಹ್ನವಾ ಅವರಿಗೆ ಮಕ್ಕಳಿರಲಿಲ್ಲ, ಆದರೆ ವಸುಧಾ ಇಬ್ಬರು ಮಕ್ಕಳಿಗೆ ಜನ್ಮ ನೀಡಿದರು. ಅವರ ಮಗಳು ಗಂಗಾ, ಗಂಗಾ ನದಿಯ ಸಾಕಾರವಾಗಿದ್ದಳು. ವಸುಧಾಳ ಪುತ್ರ ವೀರಭದ್ರನು ಕ್ಷೀರೋದಕಶಾಯಿ ವಿಷ್ಣುವಿನ ಅವತಾರವೆಂದು ಗೌರ ಗಣೋದ್ದೇಶಕದಲ್ಲಿ ಹೇಳಲಾಗಿದೆ. ವಸುಧಾ ಅಕಾಲಿಕವಾಗಿ ಈ ಲೋಕ ತ್ಯಜಿಸಿದರು. ಮಕ್ಕಳನ್ನು ಜಾಹ್ನವಾ ಬೆಳೆಸಿದರು.
ವೀರಭದ್ರನು ಆಧ್ಯಾತ್ಮಿಕ ಗುರುವನ್ನು ಹುಡುಕುತ್ತಾ ಶ್ರೀ ಅದ್ವೈತರ ಪತ್ನಿ ಸೀತಾ ಠಾಕುರಾಣಿ ಅವರನ್ನು ಕೇಳಿದನೆಂದು ಪ್ರೇಮ ವಿಲಾಸ ಮತ್ತು ನಿತ್ಯಾನಂದ ವಂಶ ವಿಸ್ತಾರಗಳೆರಡೂ ಹೇಳುತ್ತವೆ. ಮಹಾಪ್ರಭು, ನಿತ್ಯಾನಂದ ಪ್ರಭು, ಗದಾಧರ ಮತ್ತು ಶ್ರೀವಾಸ ಠಾಕುರ ಅವರುಗಳೊಂದಿಗೆ ಶ್ರೀ ಅದ್ವೈತರು ಪಂಚ ತತ್ತ್ವದ ಸದಸ್ಯರಾಗಿದ್ದರು. ಅವರು ತಮ್ಮ ಮನೆಗೆ ಸಮೀಪದಲ್ಲಿಯೇ ಗುರುವನ್ನು ಕಾಣಬೇಕೆಂದು ಸೀತಾ ಠಾಕುರಾಣಿ ಅವರು ಹೇಳಿದಾಗ ವೀರಭದ್ರನಿಗೆ ಅದು ತನ್ನ ತಾಯಿಯೇ ಎನ್ನುವುದು ಅರ್ಥವಾಯಿತು. ತನಗೆ ದೀಕ್ಷೆ ನೀಡಬೇಕೆಂದು ಅವನು ತನ್ನ ತಾಯಿಯನ್ನೇ ಕೇಳಿದನು. ಮುಂದೆ ವೀರಭದ್ರನು ಗೌಡೀಯ ವೈಷ್ಣವ ಸಮುದಾಯದಲ್ಲಿ ಪ್ರಮುಖ ನಾಯಕನಾಗಿ ಬೆಳೆದನು.
ಜಾಹ್ನವಾ ದೇವಿಗೆ ವೀರಭದ್ರ ಮಾತ್ರ ಮುಖ್ಯ ಶಿಷ್ಯನಾಗಿರಲಿಲ್ಲ. ಅವರಿಗೆ ಅನೇಕ ಅನುಯಾಯಿಗಳಿದ್ದರು ಮತ್ತು ಅವರು ದೀಕ್ಷೆಯನ್ನು ಪಡೆದುಕೊಂಡು ಬಂಗಾಳದ ವೈಷ್ಣವರ ನಾಯಕತ್ವವನ್ನು ವಹಿಸಿಕೊಳ್ಳುತ್ತಿದ್ದರು. ಅವರಲ್ಲಿ ವಂಶಿವದನ ಠಾಕುರರ ಮೊಮ್ಮಗ ರಾಮಚಂದ್ರ ಗೋಸ್ವಾಮಿ ಪ್ರಮುಖರು. ಮಹಾಪ್ರಭುಗಳು ಈ ಲೋಕವನ್ನು ತ್ಯಜಿಸಿದ ಮೇಲೆ ಅವರ ತಾಯಿ ಶಚಿದೇವಿ ಮತ್ತು ಪತ್ನಿ ವಿಷ್ಣುಪ್ರಿಯಾ ದೇವಿ ಅವರುಗಳ ರಕ್ಷಣೆಯನ್ನು ಇದೇ ವಂಶಿವದನ ಠಾಕುರರು ನಿರ್ವಹಿಸಿದ್ದರು.
ಗೌಡೀಯ ಪರಂಪರೆಗೆ ಜಾಹ್ನವಾ ಅವರ ಕೊಡುಗೆ ಅಪಾರ. ಮುಖ್ಯವಾಗಿ, ಆಗಿನ್ನೂ ಶೈಶವ ಸ್ಥಿತಿಯಲ್ಲಿದ್ದ ಚೈತನ್ಯ ವೈಷ್ಣವ ಸಿದ್ಧಾಂತದ ಸಂಘಟನೆ ಮತ್ತು ವ್ಯವಸ್ಥೀಕರಣ. ಆ ಕಾಲದಲ್ಲಿ, ಅನೇಕ ಅಪ್ರಸ್ತುತ ಬೋಧನೆಗಳು ಆರು ಗೋಸ್ವಾಮಿಗಳ ಪರಿಶುದ್ಧ ಸಂದೇಶವನ್ನು ದುರ್ಬಲಗೊಳಿಸುವ ಬೆದರಿಕೆಯನ್ನು ಒಡ್ಡಿದ್ದವು. ಆದರೆ ವಿಭಿನ್ನಾಂಶಗಳನ್ನು ಗೋಸ್ವಾಮಿಗಳ ಪರಿಶುದ್ಧ ಬೋಧನೆಗಳಲ್ಲಿ ಅಡಕ ಮಾಡುವಲ್ಲಿ ಜಾಹ್ನವಾ ದೇವಿ ಯಶಸ್ವಿಯಾದರು. 1570 ಅಥವಾ 1580ರ ಅವಧಿಯ ಖೇತೂರಿ ಉತ್ಸವದಲ್ಲಿ ಇದು ನಡೆಯಿತು. ಈ ಲೋಕದಲ್ಲಿ ಮಹಾಪ್ರಭುಗಳ ಅವತಾರವನ್ನು ಕೊಂಡಾಡುವ ಮೊದಲ ಪ್ರಮುಖ ಉತ್ಸವ ಅದಾಗಿತ್ತು. ಆ ಕಾಲದ ಪ್ರಮುಖ ವೈಷ್ಣವ ನಾಯಕರು ಪಾಲ್ಗೊಂಡಿದ್ದ ಒಂದು ದೊಡ್ಡ ವಿಶ್ವವ್ಯಾಪಿ ಮಂಡಳಿ ಅದಾಗಿತ್ತು. ನರೋತ್ತಮ ದಾಸ ಠಾಕುರ, ಶ್ರೀನಿವಾಸ ಆಚಾರ್ಯ ಮತ್ತು ಶ್ಯಾಮಾನಂದ ಪ್ರಭು ಮತ್ತಿತರ ಪ್ರಮುಖರು ಇದರಲ್ಲಿ ಭಾಗವಹಿಸಿದ್ದರು. ಅಲ್ಲಿ ಜಾಹ್ನವಾ ಅವರನ್ನು ಗೌರವ ಅತಿಥಿ ಎಂದು ಮಾತ್ರವಲ್ಲ, ಉತ್ಸವದ ಪ್ರಮುಖ ಮಾರ್ಗದರ್ಶಕರೆಂದೂ ಪರಿಭಾವಿಸಲಾಯಿತು. ಎಲ್ಲರೂ ತಮ್ಮ ಗೌರವವನ್ನು ಸೂಚಿಸಿದರು. ಅವರ ಪಾಂಡಿತ್ಯ, ಆಧ್ಯಾತ್ಮಿಕ ಶ್ರೇಷ್ಠತೆ ಮತ್ತು ಸಹಜ ವೈಷ್ಣವ ಗುಣಗಳನ್ನು ಕಂಡು ಎಲ್ಲರೂ ನಿಬ್ಬೆರಗಾದರು.
ವೃಂದಾವನದಲ್ಲಿ
ಖೇತೂರಿ ಉತ್ಸವದ ಅನಂತರ ಗೋಸ್ವಾಮಿಗಳೊಂದಿಗೆ ಸಮಾಲೋಚಿಸಲು ಜಾಹ್ನವಾ ವೃಂದಾವನಕ್ಕೆ ಹೋದರು. ವೃಂದಾವನಕ್ಕೆ ಬಂದ ಕೂಡಲೇ ಅವರು ಗೋಸ್ವಾಮಿಗಳ ಬಳಿ ಅಧ್ಯಯನ ನಡೆಸಿದರು. ಅತ್ಯಂತ ಪ್ರಗತಿ ಹೊಂದಿದ ವೈಷ್ಣವರೂ ಕೂಡ ಅವರ ಆಧ್ಯಾತ್ಮಿಕ ಆಚರಣೆಯಲ್ಲಿನ ಪರಮ ಅಧಿಕೃತೆಯನ್ನು ಒಪ್ಪಿಕೊಂಡರು.
ರಾಧಾಕುಂಡದಲ್ಲಿ ಅವರು ಸ್ನಾನ ಮಾಡುತ್ತಿದ್ದ ಸ್ಥಳವು ಜಾಹ್ನವಾ ಘಟ್ಟ ಎಂದು ಪ್ರಸಿದ್ಧವಾಗಿದೆ ಮತ್ತು ಅವರು ಆಸೀನರಾಗುತ್ತಿದ್ದ ಸ್ಥಳದಲ್ಲಿ ಸಣ್ಣ ಪೂಜಾ ಸ್ಥಳವನ್ನು ಅವರಿಗೆ ಗೌರವ ಸೂಚಿಸಲು ಜಾಹ್ನವಾ ಮಾ ಬೈಠಕ ಎಂದು ಕರೆಯಲಾಗಿದೆ. ಪರಿಕ್ರಮ ಮಾಡುವವರು ಇಂದಿಗೂ ಕೂಡ ಈ ಪವಿತ್ರ ಸ್ಥಳಕ್ಕೆ ಭೇಟಿ ನೀಡುತ್ತಾರೆ.
ವೃಂದಾವನದಲ್ಲಿ ಅವರ ಲೀಲೆಗಳು ಅವರ ದಿವ್ಯ ಸ್ಥಾನವನ್ನು ಇನ್ನಷ್ಟು ದೃಢಪಡಿಸಿತು. ಪವಿತ್ರ ಭೂಮಿಯಲ್ಲಿ ಅವರ ವಾಸವನ್ನು ಕುರಿತಂತೆ ಧರ್ಮಗ್ರಂಥಗಳು ದೀರ್ಘವಾಗಿ ಪ್ರಸ್ತಾಪಿಸಿವೆ. ಒಂದೆರಡು ವರ್ಣಮಯ ಘಟನೆಗಳು ಅವರ ಚಟುವಟಿಕೆಗಳನ್ನು ಬಿಂಬಿಸುತ್ತವೆ. ಒಂದು ದಿನ ರಾಧಾ ಕುಂಡದಲ್ಲಿದ್ದಾಗ ಜಾಹ್ನವಾ ಅವರಿಗೆ ಕೃಷ್ಣನ ಕೊಳಲಿನ ಮಾಧುರ್ಯ ಧ್ವನಿ ಕೇಳಿಸಿತು. ಚಕಿತಗೊಂಡ ಅವರು ಧ್ವನಿ ಎಲ್ಲಿಂದ ಬರುತ್ತಿದೆ ಎಂದು ಅರಿಯಲು ಅತ್ತಿತ್ತ ನೋಡಿದರು. ಅವರಿಗೆ ತಮ್ಮ ಕಣ್ಣನ್ನೇ ನಂಬಲಾಗಲಿಲ್ಲ . . . ಅಲ್ಲಿ, ಕದಂಬ ವೃಕ್ಷದ ಅಡಿಯಲ್ಲಿ, ಕೃಷ್ಣನು ತ್ರಿಭಂಗ ರೂಪದಲ್ಲಿ ವೇಣುವಾದನದಲ್ಲಿ ತಲ್ಲೀನನಾಗಿದ್ದನು ಮತ್ತು ಅವನ ಸುತ್ತ ರಾಧಾರಾಣಿ ಮತ್ತು ಗೋಪಿಯರಿದ್ದರು. ಜಾಹ್ನವಾ ಅವರಿಗೆ ದಿವ್ಯಾನಂದದ ಅನುಭವವಾಯಿತು.
ಮತ್ತೊಂದು ಸಂದರ್ಭದಲ್ಲಿ, ಜಾಹ್ನವಾ ಅವರು ಯಮುನಾ ತಟದಲ್ಲಿನ ರಾಮ ಘಟಕ್ಕೆ ಬಂದರು. ಬಲರಾಮನು ತನ್ನ ಸಹವರ್ತಿಗಳೊಂದಿಗೆ ರಾಸ ನೃತ್ಯವನ್ನು ಆನಂದಿಸಿದ್ದ ಸ್ಥಳ. ಆ ಪ್ರದೇಶವನ್ನು ನೋಡಿ ಅವರ ದಿವ್ಯಾನಂದವು ಸಾವಿರಪಟ್ಟು ಹೆಚ್ಚಾಯಿತು. ಇದಕ್ಕೆ ಕಾರಣ ಉಂಟು. ನಿತ್ಯಾನಂದ ರಾಮ (ಬಲರಾಮ) ಅವರ ಚಿರಂತನ ಪತಿ. ಸಹಜವಾಗಿ ರಾಮ ಘಟ ಸ್ಥಳವು ಬಲರಾಮನನ್ನು (ನಿತ್ಯಾನಂದ ಪ್ರಭು) ಕುರಿತ ಅವರ ಪ್ರೇಮವನ್ನು ಹೆಚ್ಚಿಸಿತು.
ಬಂಗಾಳದ ಇತಿಹಾಸಕಾರರ ಪ್ರಕಾರ, ನೊದಲ ಬಾರಿ ಜಾಹ್ನವಾ ಅವರು ವೃಂದಾವನಕ್ಕೆ ಹೋದಾಗ ಅವರು ಸನಾತನ, ರೂಪ ಗೋಸ್ವಾಮಿ ಅವರುಗಳ ಉಪನ್ಯಾಸಗಳನ್ನು ಕೇಳಿದರು ಮತ್ತು ಇತರ ಗೋಸ್ವಾಮಿಗಳನ್ನೂ ಭೇಟಿ ಮಾಡಿದರು. ಬಹುಶಃ ಅವರು ಎರಡು ಬಾರಿ ವೃಂದಾವನಕ್ಕೆ ಹೋದರು. ಅವರಲ್ಲಿನ ವಿಶೇಷವೆಂದರೆ ಅವರು ಬಂಗಾಳ ಮತ್ತು ವೃಂದಾವನದ ವೈಷ್ಣವರ ನಡುವೆ ಸಂಪರ್ಕವನ್ನು ಸ್ಥಾಪಿಸಿದರು ಮತ್ತು ಪಶ್ಚಿಮ ಬಂಗಾಳದಲ್ಲಿ ಹಂಚಿಹೋಗಿದ್ದ ಬಂಗಾಳಿ ಉಪ ವರ್ಗಗಳನ್ನು ಒಂದುಗೂಡಿಸಲು ಅವಿರತ ಶ್ರಮಿಸಿದರು.
ಮಹತ್ವ ಪಾತ್ರ
ಬೇರೆ ಮಾತಿನಲ್ಲಿ ಹೇಳುವುದಾದರೆ, ಐತಿಹಾಸಿಕ ದೃಷ್ಟಿಕೋನದಲ್ಲಿ ಜಾಹ್ನವಾ ಅವರು ಗೌಡೀಯ ವೈಷ್ಣವ ಸಂಪ್ರದಾಯದ ಆರಂಭ ಕಾಲದಲ್ಲಿ ಅತ್ಯಂತ ಪ್ರಮುಖರಲ್ಲಿ ಒಬ್ಬರಾಗಿದ್ದರು. ಗೌಡೀಯ ಸಂಪ್ರದಾಯದ ಮಾತೃಭೂಮಿ ಬಂಗಾಳದಲ್ಲಿ ಆರು ಗೋಸ್ವಾಮಿಗಳ ಬೋಧನೆಗಳಿಗೆ ಪ್ರಾಮುಖ್ಯ ನೀಡಿದವರಲ್ಲಿ ಅವರೇ ಮೊದಲಿಗರು. ವೃಂದಾವನದಲ್ಲಿ ಗೋಸ್ವಾಮಿಗಳೊಂದಿಗೆ ಅಧ್ಯಯನ ನಡೆಸಲು ಶ್ರೀನಿವಾಸ ಆಚಾರ್ಯ ಅವರಿಗೆ ಪ್ರೋತ್ಸಾಹ ನೀಡಿದವರೂ ಅವರೇ. ಬಂಗಾಳದ ವೈಷ್ಣವರು ಧರ್ಮಗ್ರಂಥಗಳ ಜ್ಞಾನವನ್ನು ಪಡೆದುಕೊಳ್ಳಲು ನೆರವಾಗಲು ಗೋಸ್ವಾಮಿಗಳ ಗ್ರಂಥಗಳೊಂದಿಗೆ ಬಂಗಾಳಕ್ಕೆ ಹಿಂದಿರುಗಲು ಶ್ರೀನಿವಾಸ, ನರೋತ್ತಮ ಮತ್ತು ಶ್ಯಾಮಾನಂದ ಅವರನ್ನು ಉತ್ತೇಜಿಸಿದವರೂ ಅವರೇ. ಖೇತೂರಿಯಲ್ಲಿ ಆಂದೋಲನದ ಮೊದಲ ವಿಶ್ವವ್ಯಾಪಿ ಸಮಾವೇಶದ ಸಂಘಟನೆಯಲ್ಲಿ ಅವರ ಪಾತ್ರ ಮಹತ್ವ.
ಇಷ್ಟೆಲ್ಲಾ ಇದ್ದರೂ, ಜಾಹ್ನವಾ ಅವರ ಹೆಸರನ್ನು ಯಾವಾಗಲೂ ವೃಂದಾವನದ ಜೊತೆಗೇ ಸಂಬಂಧವನ್ನು ಕಲ್ಪಿಸಲಾಗುತ್ತದೆ. ಗೌಡೀಯ ಸಂಪ್ರದಾಯದಲ್ಲಿ ಕೃಷ್ಣನ ಅತ್ಯಂತ ಮಹತ್ವದ, ಗಹನವಾದ ರೂಪವೆಂದು ಪರಿಗಣಿಸಲಾದ ರಾಧಾ ಗೋಪಿನಾಥ ವಿಗ್ರಹಗಳ ಜೊತೆ ಅವರಿಗಿದ್ದ ಬಾಂಧವ್ಯವೇ ಅದಕ್ಕೆ ಕಾರಣ. ಇಂದಿಗೂ ಕೂಡ ಅವರ ವಿಗ್ರಹ ರೂಪವು ವೃಂದಾವನ ಮತ್ತು ಜೈಪುರಗಳಲ್ಲಿ ರಾಧಾ ಗೋಪಿನಾಥರ ವಿಗ್ರಹಗಳ ಜೊತೆಗಿದೆ. ವೃಂದಾವನದಲ್ಲಿ ಅವರು ರಾಧಾ ಗೋಪಿನಾಥರ ಜೊತೆಗಿದ್ದಾರೆ ಎಂದರೆ ಅವರು ಅಲ್ಲಿ ಅತ್ಯಂತ ಪ್ರೀತಿಪಾತ್ರರು ಎನ್ನುವುದು ಮಾತ್ರವಲ್ಲ, ಈಗಾಗಲೇ ಹೇಳಿರುವಂತೆ ಅವರು ರಾಧಿಕಾಳ ಸೋದರಿ ಅನಘ ಮಂಜರಿ ಎನ್ನುವುದೂ ಆಗಿದೆ. ಜಾಹ್ನವಾ ಮತ್ತು ಅವರ ಆತ್ಮ ಸಮ ಅನಘ ಮಂಜರಿ ಅವರುಗಳನ್ನು ಮಾಧುರ್ಯ ರಸದ ಸಂಕೇತವೆಂದು ಪರಿಗಣಿಸಲಾಗಿದೆ. ಅಥವಾ ಆಧ್ಯಾತ್ಮಿಕ ವೇದಿಕೆಯ ಮೇಲೆ ಪ್ರೇಮವೆಂದು ಭಾವಿಸಲಾಗಿದೆ. ಆ ಪ್ರೀತಿಯನ್ನು ಸ್ವೀಕರಿಸಲು ರಾಧಾ ಗೋಪಿನಾಥರೇ ಅತ್ಯಂತ ಅನುರೂಪರಾದವರು.