ರಾಜೀವಲೋಚನ ಮಂದಿರ

ಛತ್ತೀಸಗಡದ ಆಕರ್ಷಕ ಬಿಂದು

ಛತ್ತೀಸ್‌ಗಡ ರಾಜ್ಯದ ರಾಯಪುರ ಜಿಲ್ಲೆಯ ರಾಜಿಮ್‌ ನಗರವು ದೇವಾಲಯಗಳ ಊರು. ತನ್ನ ಸಾಂಸ್ಕೃತಿಕ ಪರಂಪರೆ ಮತ್ತು ಭವ್ಯ ಮಂದಿರಗಳಿಗೆ ಪ್ರಸಿದ್ಧಿಯಾದ ರಾಜಿಮ್‌ ಅನ್ನು ಛತ್ತೀಸ್‌ಗಡದ ಪ್ರಯಾಗವೆನ್ನುತ್ತಾರೆ.  ಮಹಾನದಿ (ಚಿತ್ರೋಫಲ), ಪೈರಿ ಮತ್ತು ಸೊಂಡೂರ್‌ ನದಿಗಳ ತ್ರಿವೇಣಿ ಸಂಗಮವು ಪ್ರಯಾಗದಷ್ಟೇ ಪ್ರಮುಖ ಮತ್ತು ಪವಿತ್ರ ಎನಿಸಿಕೊಂಡಿದೆ. ಈ ನದಿಗಳ ಮತ್ತು ದೈವ ಕೃಪೆಯಿಂದ ರಾಜಿಮ್‌ ಪ್ರದೇಶವು ಆಧ್ಯಾತ್ಮಿಕ ಕೇಂದ್ರವಷ್ಟೇ ಅಲ್ಲ, ಪ್ರವಾಸಿಗರ ಆಕರ್ಷಕ ಸ್ಥಳವೂ ಆಗಿದೆ. ಇದರ ಪ್ರಾಚೀನ ಕಾಲದ ಉತ್ಕರ್ಷತೆಯನ್ನು ಬಣ್ಣಿಸುವಾಗ ಅಲ್ಲಿನ ಹಿರಿಯರು ರಾಮಾಯಣ ಕಾಲದಲ್ಲಿ ಇದು ಅನೇಕ ಋಷಿಗಳ ತಾಣವಾಗಿತ್ತು ಎಂದು ಹೇಳುವುದನ್ನು ಮರೆಯುವುದಿಲ್ಲ, ಬಹುಶಃ ಈ ಹಿನ್ನೆಲೆಯಿಂದಲೇ ಈ ದೇವಾಲಯ ನಗರಿಗೆ ವಿಶ್ವಾದ್ಯಂತದಿಂದ ಭಕ್ತರ ಮಹಾಪೂರವೇ ಹರಿದು ಬರುತ್ತದೆ.

ಇಲ್ಲಿ ಅನೇಕ ಮಂದಿರಗಳಿದ್ದರೂ ಮಹಾ ವಿಷ್ಣುವಿಗೆ ಅರ್ಪಿತವಾಗಿರುವ ಶ್ರೀರಾಜೀವಲೋಚನ ದೇವಸ್ಥಾನವು ರಾಜಿಮ್‌ ನಗರದ ಗರಿಮೆಯನ್ನು ಹೆಚ್ಚಿಸಿದೆ. ವಾರ್ಷಿಕ ರಾಜೀಲೋಚನ ಮಹೋತ್ಸವವು ಪ್ರತಿ ವರ್ಷ ದೇಶ ವಿದೇಶಗಳ ಭಕ್ತರನ್ನು ಹೆಚ್ಚು ಹೆಚ್ಚಾಗಿ ಆಕರ್ಷಿಸುತ್ತಿರುವುದೇ ಅದಕ್ಕೆ ಸಾಕ್ಷಿ. ಪ್ರತಿ ವರ್ಷ ಫೆಬ್ರವರಿ 16 ರಿಂದ ಮಾರ್ಚ್‌ 1 ರವರೆಗೆ ನಡೆಯುವ ಈ ಮಹಾ ಮೇಳದಲ್ಲಿ ಧಾರ್ಮಿಕ ವಿಧಿವಿಧಾನಗಳ ಜೊತೆಗೆ ನಡೆಯುವ ಸಂಗೀತ, ನೃತ್ಯದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಕಲಾವಿದರಿಗೆ ಪ್ರತಿಭೆ ತೋರಲು ಭವ್ಯ ವೇದಿಕೆಯಾಗಿವೆ. ಹಾಗೆಯೇ ಕಲಾ ರಸಿಕರಿಗೆ ರಸದೌತಣ ಉಣಬಡಿಸುತ್ತವೆ. ಶ್ರೀ ರಾಜೀವ ಲೋಚನನ ವೈಭವವನ್ನು ಸಾರುವ ಈ ಸಾಂಸ್ಕೃತಿಕ ಕಾರ್ಯಕ್ರಮಗಳು ರಾಜಿಮ್‌ ನಗರದ ಭವ್ಯ ಪರಂಪರೆಯನ್ನೂ ಬಿಂಬಿಸುತ್ತವೆ.

ಮಂದಿರ ವಿನ್ಯಾಸ

ಶ್ರೀರಾಜೀವಲೋಚನ ಮಂದಿರವನ್ನು  ಕ್ರಿ.ಶ. 8ನೇ ಶತಮಾನದಲ್ಲಿ ನಿರ್ಮಿಸಲಾಯಿತೆಂದು ಅನೇಕ ದಾಖಲೆಗಳು ಹೇಳುತ್ತವೆ. ಬಹುತೇಕ ಕಲ್ಲಿನಿಂದ ನಿರ್ಮಿಸಲಾಗಿರುವ ದೇವಸ್ಥಾನದ ಕಟ್ಟಡಕ್ಕೆ 12 ಸ್ತಂಭಗಳು ಆಧಾರ. ಈ ಕಂಭಗಳು ಅಪೂರ್ವ ಕೆತ್ತನೆಗಳಿಂದ ಅತ್ಯಂತ ಆಕರ್ಷಕವಾಗಿವೆ. ಇವುಗಳಲ್ಲಿ ಪುರಾಣದ ವಿವಿಧ ದೇವರ ಸ್ವರೂಪಗಳನ್ನು ಕೆತ್ತಲಾಗಿದೆ. ಮಂದಿರದ ಪ್ರಾಂಗಣದ ನಾಲ್ಕು ದಿಕ್ಕಿನಲ್ಲಿ ವಿಷ್ಣುವಿನ ಅವತಾರಗಳಾದ ವಾಮನ, ವರಾಹ, ನೃಸಿಂಹ ಹಾಗೂ ಬದರಿನಾರಾಯಣರ ದೇವಾಲಯಗಳಿವೆ. ಈ ಮಂದಿರಗಳಲ್ಲಿನ ಸುಂದರ ಮೂರ್ತಿಗಳನ್ನು ನೋಡುವುದೇ ಪರಮಾನಂದ. ಶ್ರೀರಾಜೀವಲೋಚನ ದೇವಾಲಯದ ಗರ್ಭಗುಡಿಯಲ್ಲಿ ಮೂಲ ದೇವರ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಸುಂದರವಾದ ಕಪ್ಪು ಶಿಲೆಯ ಈ ವಿಷ್ಣು ಮೂರ್ತಿ ಚತುರ್ಭುಜದ್ದಾಗಿದೆ. ಅವನ ಕೈಗಳಲ್ಲಿ ಶಂಖ, ಚಕ್ರ, ಗದೆ ಮತ್ತು ಕಮಲ ಪುಷ್ಪವಿದೆ. ಇಲ್ಲಿನ ಪೂಜೆಯ  ವಿಧಾನವೂ ವಿಶಿಷ್ಟವಾಗಿದೆ. ಬದುಕಿನ ವಿವಿಧ ಹಂತಗಳನ್ನು ಸೂಚಿಸುವಂತೆ ಭಿನ್ನ ವಸ್ತ್ರಗಳ ಅಲಂಕಾರವು ವಿವಿಧ ಕಾಲದಲ್ಲಿ ನಡೆಯುತ್ತದೆ. ಪ್ರಾತಃಕಾಲದಲ್ಲಿ ಬಾಲರೂಪ, ಸಂಜೆ ವಯಸ್ಕರೂಪ ಮತ್ತು ರಾತ್ರಿ ವೃದ್ಧಾವಸ್ಥೆಯ ರೂಪದಲ್ಲಿ ಭಗವಂತನಿಗೆ ಅಲಂಕಾರ ಮಾಡಲಾಗುತ್ತದೆ. ರಾಜೀವಲೋಚನನ ಜೊತೆಗೆ ಲಕ್ಷ್ಮೀ ಮತ್ತು ಭೂದೇವಿ ಏಕ ಶಿಲೆಯ ಮೇಲೆ ಸುಶೋಭಿತರಾಗಿದ್ದಾರೆ. ಇಲ್ಲಿ ದಿನಕ್ಕೆ ನಾಲ್ಕು ಬಾರಿ ಆರತಿ. ಮತ್ತೊಂದು ವಿಶೇಷವೆಂದರೆ ಇಲ್ಲಿನ ಪೂಜಾರಿಗಳು ಕ್ಷತ್ರಿಯರು. ಇದು ದೇಶದ ಬೇರೆ ದೇವಸ್ಥಾನಗಳಿಗಿಂತ ಭಿನ್ನ.

ಸ್ಥಳ ಪುರಾಣ

ಶ್ರೀರಾಜೀವಲೋಚನ ಮಂದಿರದ ಬಗೆಗೆ ಸ್ವಾರಸ್ಯವಾದ ಕತೆ ಇದೆ. ಇದಕ್ಕೆ ಎರಡು ಕಥನ ರೂಪಗಳಿವೆ. ಒಂದು ಪುರಾಣ ಕತೆಯ ಪ್ರಕಾರ ತೈಲ ಮಾರುವ ಮಹಿಳೆಯೊಬ್ಬಳಿಂದ ಈ ಊರಿಗೆ ರಾಜಿಮ್‌ ಎಂದು ಹೆಸರಾಯಿತು. ಅದನ್ನು ಕುರಿತ ಪ್ರಸಂಗ ಇಂತಿದೆ: ರಾಜಿಮ್‌ ಎಂಬ ಎಣ್ಣೆ ಮಾರುವವಳು ಒಂದು ದಿನ ಬಂಡೆಯೊಂದನ್ನು ಎಡವಿ ಬಿದ್ದಳು. ಆಗ ಅವಳ ತಲೆಯ ಮೇಲಿದ್ದ ಎಣ್ಣೆ ಪಾತ್ರೆಯು ಕೆಳಗೆ ಬಿದ್ದು ತೈಲವೆಲ್ಲ ಚೆಲ್ಲಿ ಹೋಯಿತು. ಮನೆಯಲ್ಲಿ ಗಂಡ ಮತ್ತು ಅತ್ತೆಯ ಬೈಗುಳ ನೆನಪಿಸಿಕೊಂಡೇ ಅವಳು ನಡುಗಿ ಹೋದಳು. ಅವಳಿಗೆ ದಿಕ್ಕು ತೋಚಲಿಲ್ಲ. ಆದರೆ ಅವಳು ದೈವ ಭಕ್ತೆಯಾಗಿದ್ದಳು. ತಾನು ಎಡವಿದ ಬಂಡೆಯ ಮೇಲೆ ಎಣ್ಣೆ ಪಾತ್ರೆಯನ್ನು ಇಟ್ಟು ಭಗವಂತನನ್ನು ಪ್ರಾರ್ಥಿಸಿದಳು. ತನಗೆ ಎಣ್ಣೆ ನೀಡದಿದ್ದರೂ ಬೇಡ, ಆದರೆ ಅತ್ತೆ ಮತ್ತು ಗಂಡನ ಶಿಕ್ಷೆ ತಪ್ಪಿಸು ಎಂದು ಬೇಡಿಕೊಂಡಳು. ಅನಂತರ ಎಣ್ಣೆ ಪಾತ್ರೆಯನ್ನು ಕೈಗೆತ್ತಿಕೊಂಡಳು. ಅದರಲ್ಲಿ ಭರ್ತಿ ಎಣ್ಣೆ ತುಂಬಿತ್ತು. ಭಗವಂತನ ಕೃಪೆಯಿಂದ ಅವಳು ತನ್ನ ಸಂಕಷ್ಟದಿಂದ ಪಾರಾದಳು. ಮನೆಗೆ ಹಿಂತಿರುಗುವಾಗ ಎಣ್ಣೆ ಮಾರಾಟ ಮಾಡುತ್ತಾ ಸಾಗಿದಳು. ಆದರೆ ಅದೊಂದು ಅಕ್ಷಯ  ಪಾತ್ರೆಯಾಗಿತ್ತು. ಮನೆಯಲ್ಲಿ ವಿಷಯ ತಿಳಿಸಿದಾಗ ಎಲ್ಲರಿಗೂ ಅಚ್ಚರಿ. ಮರುದಿನ ಆ ಬಂಡೆಯ ಬಳಿಗೆ ಅವಳ ಮನೆಯವರೆಲ್ಲಾ ಹೋದರು ಬಂಡೆ ಎತ್ತಿ ಮನೆಗೆ ಒಯ್ಯುವ ಉದ್ದೇಶ ಅವರದು. ಬಂಡೆ ಎತ್ತಿದಾಗ, ಅದರ ಕೆಳಗೆ ಚತುರ್ಭುಜ ಮಹಾ ವಿಷ್ಣುವಿನ ಶ್ಯಾಮ ವರ್ಣದ ಮೂರ್ತಿ ಕಂಡಿತು. ದೈವ ಭಕ್ತರಾದ ಅವರ ಆನಂದಕ್ಕೆ ಪಾರವೇ ಇಲ್ಲ. ಭಗವಂತನ ಮೂರ್ತಿಯನ್ನು ಮನೆಗೆ ತಂದು ಪೂಜಿಸತೊಡಗಿದರು. ಅದೇ ಸಂದರ್ಭದಲ್ಲಿ ರಾಜಾ ಜಗತ್‌ಪಾಲನಿಗೆ ಕನಸಿನಲ್ಲಿ ಭಗವಂತನು ಬಂದು ತನಗೆ ಮಂದಿರ ನಿರ್ಮಿಸುವಂತೆ ಆದೇಶಿಸಿದ. ರಾಜನಿಗೆ ಮಂದಿರ ನಿರ್ಮಾಣ ಕಷ್ಟವೆನಿಸಲಿಲ್ಲ. ಪ್ರತಿಷ್ಠಾಪನೆ ಮೂರ್ತಿ ಬಗೆಗೇ ಚಿಂತೆಯಾಯಿತು. ಆಗ ತೈಲ ಮಾರುವವರ ಕುಟುಂಬಕ್ಕೆ ಮೂರ್ತಿ ಸಿಕ್ಕ ವಿಷಯ ಅವನಿಗೆ ತಿಳಿಯಿತು. ಅವನು ಅವರಿಂದ ಕಷ್ಟಪಟ್ಟು ಮೂರ್ತಿ ಪಡೆದು ಪ್ರತಿಷ್ಠಾಪನೆ ಕಾರ್ಯ ನೆರವೇರಿಸಿದ. ಮಂದಿರಕ್ಕೆ ರಾಜಿಮ್‌ ಹೆಸರಿಡಬೇಕೆಂದು ಆ ತೈಲ ಕುಟುಂಬ ಒತ್ತಾಯಿಸಿತ್ತು. ಹೀಗಾಗಿ ರಾಜಿಮ್‌ ಎಂದು ಕರೆಯಲಾಯಿತು ಮುಂದೆ ಅದು ರಾಜೀವಲೋಚನ ಎಂದಾಯಿತು.

ಮತ್ತೊಂದು ಕಥನವೂ ತೈಲ ಮಾರುವವಳ ಸುತ್ತಲೇ ತಿರುಗಿದೆ. ಇವಳು ವಿಷ್ಣುವಿನ ಪರಮ ಭಕ್ತೆ. ಅವಳಿಗೆ ಮಂದಿರ ನಿರ್ಮಿಸಬೇಕೆಂದು ಆಸೆ. ಆದರೆ ಕೆಳ ಜಾತಿಯವಳಾದ ತಾನು ದೇವಸ್ಥಾನ ಕಟ್ಟಿಸಿದರೆ ಯಾರೂ ಬರುವುದಿಲ್ಲ ಎಂಬ ಅಳುಕು. ಆದರೆ ವಿಷ್ಣುವೇ ಅವಳಿಗೆ ಆಶ್ವಾಸನೆ ನೀಡಿದನಂತೆ. ರಾಜಿಮ್‌ನ ಈ ಮಂದಿರಗಳ ಸಂಕೀರ್ಣದಲ್ಲಿ ಅವಳ ಹೆಸರಿನ ಮಂದಿರವೇ ಮೊದಲನೆಯದಾಗಲಿ. ಹೆಚ್ಚು ಭಕ್ತರನ್ನು ಸೆಳೆಯುವ ರಾಜೀವಲೋಚನ ಮಂದಿರಕ್ಕೆ ಬರುವವರು ಅವಳ ಮಂದಿರವನ್ನು ಹಾದು ಹೋಗಲೇಬೇಕೆಂದು ವಿಷ್ಣು ಸೂಚಿಸಿದ.

ಈ ಕತೆಗಳು ಭಿನ್ನವಾಗಿದ್ದರೂ ತೈಲ ಮಾರಾಟಗಾರಳ ಸುತ್ತ ಹೆಣೆದಿರುವುದು ಸ್ಪಷ್ಟ. ಇದಕ್ಕೆ ಐತಿಹಾಸಿಕ ಪುರಾವೆಗಳಿಲ್ಲದಿದ್ದರೂ ತೇಲಿನ್‌ ಮಂದಿರವಂತೂ ಅಲ್ಲಿದೆ. ಮತ್ತೊಂದು ದಾಖಲೆಯಂತೆ ರಾಜೀವ ನಯನ ಎಂಬ ರಾಜ ಈ ಮಂದಿರವನ್ನು ನಿರ್ಮಿಸಿದ್ದರಿಂದ ಈ ಹೆಸರು ಬಂದಿತಂತೆ. ಯಾವುದು ಹೇಗೇ ಇರಲಿ, ಇಲ್ಲಿ ಕಾಣುವ ದೇವಸ್ಥಾನಗಳಲ್ಲಿ ಶ್ರೀರಾಜೀವಲೋಚನ ಮಂದಿರವೇ ಅತ್ಯಂತ ಪ್ರಾಚೀನ ಎಂಬುವುದು ಸ್ಪಷ್ಟವಾಗಿದೆ.

ಶ್ರೀ ರಾಜೀವಲೋಚನ ಸಮುಚ್ಚಯದಲ್ಲಿ ಅನೇಕ ಮಂದಿರಗಳಿವೆ. ಅವುಗಳಲ್ಲಿ ಜಗನ್ನಾಥ ದೇವಾಲಯ ಮುಖ್ಯವಾದುದು. ರಾಜೀವಲೋಚನ ಮಂದಿರದ ಉತ್ತರ ಭಾಗದಲ್ಲಿ  ನಿರ್ಮಿಸಿರುವ ನೃಸಿಂಹ ದೇವಸ್ಥಾನದ ಬಳಿ ಶ್ರೀಜಗನ್ನಾಥ ಮಂದಿರವಿದೆ. ಇದನ್ನು 14ನೇ ಶತಮಾನದಲ್ಲಿ ನಿರ್ಮಿಸಲಾಯಿತಂತೆ. ಪುರಿ ಜಗನ್ನಾಥ ದೇವಸ್ಥಾನಕ್ಕೂ ರಾಜೀವಲೋಚನ ಮಂದಿರಕ್ಕೂ ಅವಿನಾಭಾವ ಸಂಬಂಧ. ಜಗನ್ನಾಥ ಪುರಿಯ ಧಾರ್ಮಿಕ ಭಾವನೆಗಳು ಇಲ್ಲಿ ಗಾಢ ಪ್ರಭಾವ ಬೀರಿವೆ. ಅಲ್ಲದೆ, ರಾಜಿಮ್‌ ತೀರ್ಥವಿಲ್ಲದಿದ್ದರೆ ಜಗನ್ನಾಥ ಪುರಿಯ ರಥಯಾತ್ರೆ ಅಪೂರ್ಣ ಎನಿಸಿಕೊಳ್ಳುತ್ತದೆ.

ಆಚರಣೆಗಳು

ದೇವಾಲಯಗಳೆಂದರೆ ಉತ್ಸವಗಳ ಆಚರಣೆ. ಇಲ್ಲಿಯೂ ಕೂಡ ವರ್ಷದಲ್ಲಿ ಅನೇಕ ಹಬ್ಬ, ಉತ್ಸವಗಳನ್ನು ಆಚರಿಸಲಾಗುತ್ತದೆ. ಅವುಗಳಲ್ಲಿ ಪ್ರಮುಖವಾದುವೆಂದರೆ ರಾಮೋತ್ಸವ, ಅಕ್ಷಯತೃತೀಯ, ಜಗನ್ನಾಥನ ನೇತ್ರೋತ್ಸವ ಮತ್ತು ರಥಯಾತ್ರೆ, ಶ್ರಾವಣಿ ಪೂಜೆ, ಶ್ರಾವಣಿ ಝೂಲ, ರಕ್ಷಾಬಂಧನ, ಜನ್ಮಾಷ್ಟಮಿ, ವಿಜಯದಶಮಿ, ಶರದ್‌ಪೂರ್ಣಿಮೆ, ದೀಪಾವಳಿ ಲಕ್ಷ್ಮೀ ಪೂಜೆ, ಅನ್ನ ಕೂಟ, ತುಳಸಿಪೂಜೆ, ಮಕರ ಸಂಕ್ರಾಂತಿ ಮುಂತಾದವು. ಶ್ರಾವಣಿ ಝೂಲಾವು ವ್ರಜದಲ್ಲಿ ಆಚರಿಸುವ ಝೂಲಾ ಉತ್ಸವದಂತೆಯೆ ಪ್ರಸಿದ್ಧವಾಗಿದೆ. ಶ್ರಾವಣ ಶುಕ್ಲ ತೃತೀಯದಿಂದ ಏಕಾದಶಿವರೆಗೆ 9 ದಿನ ಶ್ರೀರಾಧಾ ಕೃಷ್ಣರ ಝೂಲಾ ಉತ್ಸವ ನಡೆಯುತ್ತದೆ. ಉಯ್ಯಾಲೆಯಲ್ಲಿ ಶ್ರೀರಾಧಾಕೃಷ್ಣರನ್ನು ತೂಗಲಾಗುವುದು. ಅದೇ ರೀತಿ ಜನ್ಮಾಷ್ಟಮಿಯಂದು ರಾತ್ರಿ 12 ಗಂಟೆಗೆ ವಿಶೇಷ ಪೂಜೆ ಏರ್ಪಡಿಸಲಾಗುತ್ತದೆ. ಭಾದ್ರಪದ ಶುಕ್ಲ ಏಕಾದಶಿಯಂದು ರಾಧಾ ಕೃಷ್ಣರಿಗೆ ನಗರದಲ್ಲಿ ಯಾತ್ರೆ ಮತ್ತು ನದಿಯಲ್ಲಿ ದೋಣಿಯಿಂದ ಜಲವಿಹಾರ. ಈ ಮನಮೋಹಕ ದೃಶ್ಯ ಅವರ್ಣನೀಯ. ಮಾಘ ಪೂರ್ಣಿಮ ಮೇಳಾವಂತೂ ಜಗತ್‌ ಪ್ರಸಿದ್ಧಿ ಪಡೆದಿದೆ.

ಸಂರಕ್ಷಣೆ

ಶ್ರೀರಾಜೀವಲೋಚನ ಮಂದಿರ ಟ್ರಸ್ಟ್‌ ಮಂದಿರದ ಆಡಳಿತ ನಿರ್ವಹಣೆಯ ಹೊಣೆ ಹೊತ್ತಿದೆ. ಮಂದಿರ ಪರಿಸರವು ಭಾರತೀಯ ಪುರಾತತ್ತ್ವ ಸರ್ವೇಕ್ಷಣಾ ಇಲಾಖೆಯ ಮೂಲಕ ಪೂರ್ಣವಾಗಿ ಸಂರಕ್ಷಿತ ಕ್ಷೇತ್ರವಾಗಿದೆ.

ಹೋಗುವುದು ಹೇಗೆ

ರಾಯಪುರದಿಂದ 45 ಕಿ.ಮೀ. ದೂರದಲ್ಲಿದೆ. ಶ್ರೀ ರಾಜೀವಲೋಚನ ಮಂದಿರ ಇರುವ ರಾಜಿಮ್‌ನಗರ, ರಾಯಪುರದಿಂದ ಸುಮಾರು ಒಂದು ತಾಸಿನಲ್ಲಿ ರಾಜಿಮ್‌ ತಲಪಬಹುದು.

ರಾಯಪುರದಿಂದ ರಾಷ್ಟ್ರೀಯ ಹೆದ್ದಾರಿ 43 ರಲ್ಲಿ ಅಬಾರ್‌ಪುರಕ್ಕೆ ಹೋಗಬಹುದು. ಅಲ್ಲಿ ಎಡಕ್ಕೆ ಹೋದರೆ ಸಣ್ಣ ರಸ್ತೆ ಸಿಗುತ್ತದೆ. ಆದರೆ ಅಲ್ಲಿ ವಾಹನ ಸಂಚಾರ ಸಾಧ್ಯ. ಅದು ರಾಜಿಮ್‌ಗೆ ನಿಮ್ಮನ್ನು ಒಯ್ಯುತ್ತದೆ.

ಈ ಲೇಖನ ಶೇರ್ ಮಾಡಿ