ಜೀವನ್ಮುಕ್ತ, ಮುಕ್ತಾತ್ಮ ಮತ್ತು ಯೋಗಿ

ಕಪಿಲದೇವನು ಅತ್ಯಂತ ಪ್ರಗತಿಹೊಂದಿದ ಯೋಗಿಯನ್ನು ಕುರಿತು ಹೇಳುತ್ತಾನೆ. ಅವನು ಅತ್ಯುನ್ನತ ಆಧ್ಯಾತ್ಮಿಕ ಸಾಕ್ಷಾತ್ಕಾರವನ್ನು ಹೊಂದಿರುತ್ತಾನೆ. ಆದರೂ ಇದೇ ಭೌತಿಕ ಜಗತ್ತಿನಲ್ಲಿ ಬದುಕಿರುತ್ತಾನೆ. ಅವನನ್ನು ಜೀವನ್ ಮುಕ್ತ ಎನ್ನುತ್ತಾರೆ. ಅವನು ಐಹಿಕವಾಗಿ ಮುಕ್ತ, ಆದರೆ ಇಲ್ಲಿಯೇ, ನಮ್ಮೊಂದಿಗೆ ವಾಸಿಸುತ್ತಿರುತ್ತಾನೆ. ಅಂತಹ ಯೋಗಿಯ, ಜೀವನ್ ಮುಕ್ತನ ಚಿಂತನೆಗಳೇನು? ಅವನ ಯೋಚನೆಗಳೇನು? ಆಧ್ಯಾತ್ಮಿಕ ಜ್ಞಾನದ ಬಗೆಗೆ ಅವನ ಗ್ರಹಿಕೆ ಏನು? ಮತ್ತು ನಿಜವಾದ ಜ್ಞಾನದ ಸ್ಥಿತಿ ಏನು? ನಾವೂ ಅದನ್ನು ಪಡೆಯುವುದು ಹೇಗೆ?

ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನವನ್ನು ಈ ಲೇಖನದಲ್ಲಿ ಮಾಡಲಾಗಿದೆ.

ಭಾಗವತದ ಈ ಶ್ಲೋಕದಲ್ಲಿ (3.28.39) ಒಬ್ಬ ಸಾಮಾನ್ಯ ವ್ಯಕ್ತಿಯ ಜೀವನ ಗ್ರಹಿಕೆಯನ್ನೂ ಮತ್ತು ಒಬ್ಬ ಮುಕ್ತಾತ್ಮನ ಗ್ರಹಿಕೆಯ ನಡುವಣ ವ್ಯತ್ಯಾಸವನ್ನು ಹೇಳಲಾಗಿದೆ. ಸಂಸಾರ ಮತ್ತು ಕುಟುಂಬದ ಅಭಿಮಾನದಿಂದ ವ್ಯಕ್ತಿಯು ತನ್ನ ಮಗನನ್ನು ಮತ್ತು ಸಂಪತ್ತನ್ನು ತನ್ನದೇ ಎಂದು ಭಾವಿಸುತ್ತಾನೆ. ಮತ್ತೊಂದು ರೀತಿಯ ಜನರಿದ್ದಾರೆ. ಅವರು ತಮ್ಮ ಸಂಸಾರ ಮತ್ತು ಸಂಪತ್ತು ತಮ್ಮಿಂದ ಬೇರೆ ಹಾಗೂ ಈ ಶರೀರವೂ ಕೂಡ ತಮ್ಮಿಂದ ಬೇರೆ ಎಂದು ಗ್ರಹಿಸಿಕೊಳ್ಳುತ್ತಾರೆ. ಇವರನ್ನು ಮುಕ್ತಾತ್ಮರೆಂದು ಹೇಳುತ್ತೇವೆ. ನಾನು ಈ ದೇಹವಲ್ಲ, ನಾನು ಬೇರೆ ಎಂದು ಅರಿತುಕೊಳ್ಳುವುದೇ ನಿಜವಾದ ಜ್ಞಾನ. ಯಾರು ಈ ಭೌತಿಕ ಲೋಕದ ಜಂಜಾಟದಿಂದ ಮುಕ್ತರಾಗಿ ಭಗವದ್ಧಾಮಕ್ಕೆ ಮರಳಿ ಹೋಗಲು ನಿಜವಾಗಿಯೂ ಬಯಸುವರೋ ಅವರೇ ಒಬ್ಬ ಯೋಗಿ ಎಂದು ಭಾಗವತವು ವಿವರಿಸುತ್ತದೆ. ಇದನ್ನು ಗ್ರಹಿಸಿಕೊಂಡವರು ವಿಮೋಚನೆಯನ್ನು ಪಡೆಯುತ್ತಾರೆ. ನಾನೇ ಈ ದೇಹ, ಅದಕ್ಕೇ ಎಲ್ಲ ಮರ್ಯಾದೆ ಎಂದು ಅಭಿಮಾನಪಡುವ ವ್ಯಕ್ತಿಯು ಮತ್ತೆ ಮತ್ತೆ ಈ ಜಂಜಾಟದ ಲೋಕದಲ್ಲಿ ಹುಟ್ಟುತ್ತಲೇ ಇರುತ್ತಾನೆ ಎಂದೂ ಹೇಳಲಾಗಿದೆ. ನಾನು ಈ ದೇಹವಲ್ಲ ಎನ್ನುವ ಅದ್ಭುತ ಕಲ್ಪನೆಯನ್ನು ಶ್ರೀಲ ಪ್ರಭುಪಾದರು ಜನನ ಮರಣಗಳಾಚೆಗೆ ಪುಸ್ತಕದ ಮೊದಲನೆಯ ಅಧ್ಯಾಯದಲ್ಲಿಯೇ ವಿವರಿಸಿದ್ದಾರೆ. ವಾಸ್ತವವಾಗಿ ಶ್ರೀಲ ಪ್ರಭುಪಾದರು ಹೇಳಿರುವ ಈ ಎಲ್ಲ ಕಲ್ಪನೆಗಳೂ ಮತ್ತು ಮಾತುಗಳನ್ನು ನಾವು ಒಂದಲ್ಲ ಒಂದು ವೈದಿಕ ಸಾಹಿತ್ಯದಲ್ಲಿ ಕಾಣಬಹುದಾಗಿದೆ.

ಇದನ್ನು ಇನ್ನಷ್ಟು ವಿವರವಾಗಿ ನೋಡೋಣ.


ಅಭಿಮಾನ


ನಾವು ಈ ದೇಹ, ಮಡದಿ, ಮಕ್ಕಳು ಮತ್ತು ಸಂಪತ್ತಿನ ಬಗೆಗೆ ಅಭಿಮಾನವನ್ನು ಬೆಳೆಸಿಕೊಳ್ಳುತ್ತೇವೆ. ನಮ್ಮ ಇಡೀ ಜೀವನವನ್ನು ಈ ದೇಹದಲ್ಲಿ ಕಳೆದಿರುತ್ತವೆ. ಅದರ ಬಗೆಗೆ ಅಕ್ಕರೆ ಸಹಜವೇ. ಒಂದು ಮನೆಯಲ್ಲಿ ಹೆಚ್ಚು ಸಮಯ ವಾಸಿಸುವುದರಿಂದ ನಾವು ಮನೆಯ ಬಗೆಗೆ ಅಭಿಮಾನವನ್ನು ಬೆಳೆಸಿಕೊಳ್ಳುತ್ತೇವೆ ಅಲ್ಲವೇ? ಅದೇ ರೀತಿಯಲ್ಲಿ ನಾವು ನಮ್ಮ ಈ ದೇಹದಲ್ಲಿ ವಾಸಿಸುತ್ತಿರುವುದರಿಂದ ಅದರ ಬಗೆಗೆ ವಾತ್ಸಲ್ಯವನ್ನು ಬೆಳೆಸಿಕೊಂಡಿರುತ್ತೇವೆ. ನಾನು ಈ ದೇಹವಲ್ಲ, ನಾನು ಬೇರೆ ಎನ್ನುವುದನ್ನು ಅರ್ಥಮಾಡಿಕೊಂಡಾಗ ನಮಗೆ ಈ ಅಭಿಮಾನ ಹುಸಿ ಎನ್ನುವುದು ತಿಳಿಯುತ್ತದೆ. ಅದೇ ಜ್ಞಾನದ ಸ್ಥಿತಿ. ನಾವು ಯಾರು? ನಾವು ಈ ಲೋಕಕ್ಕೆ ಬಂದಿದ್ದೇವೆ, ಇಲ್ಲಿನ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದೇವೆ. ಇದೆಲ್ಲಾ ನಮ್ಮ ಸ್ವಯಂ ಬಗೆಗೆ ಹೇಳುತ್ತದೆ. ನಮ್ಮ ಸ್ವಯಂ ಕುರಿತ ಕಲ್ಪನೆಗಳೇನು? ಅದನ್ನು ಅರಿಯುವ ಪ್ರಯತ್ನವೇ ಆತ್ಮಬುದ್ಧಿ. ಈ ದೇಹವು ಕಫ, ಪಿತ್ಥ ಮತ್ತು ವಾಯುಗಳೆಂಬ ಮೂರು ಭೌತಿಕ ವಸ್ತುಗಳಿಂದ ಮಾಡಲ್ಪಟ್ಟಿದೆ ಎಂದು ಭಾಗವತವು ಹೇಳಿದೆ. ಇದು ನಮ್ಮ ಸ್ವಯಂ, ನಾನು ಏನು ಎನ್ನುವುದರ ಕಲ್ಪನೆಯ ಪ್ರಜ್ಞೆ. ಅದನ್ನು ಅರಿಯುವುದೇ ಆತ್ಮಬುದ್ಧಿ. ಇದೇ ಒಬ್ಬ ಯೋಗಿಯ ಲಕ್ಷಣ. ನಾನು ಈ ದೇಹವಲ್ಲ, ನಾನು ಅದಕ್ಕಿಂತ ಬೇರೆ ಎಂದು ಅರ್ಥಮಾಡಿಕೊಳ್ಳುವ, ಅನುಭವಿಸುವ ಮತ್ತು ಸಾಕ್ಷಾತ್ಕಾರ ಮಾಡಿಕೊಂಡವನೇ ಯೋಗಿ. ಇದನ್ನು ದಿವ್ಯ ಜ್ಞಾನ ಎನ್ನುತ್ತೇವೆ. ಈ ಜ್ಞಾನವು ನಮ್ಮನ್ನು ಸ್ವಯಂನ ವಾಸ್ತವತೆಯ ಬಗೆಗೆ ಎಚ್ಚರಿಸುತ್ತದೆ. ನಾನು ಈ ದೇಹದಿಂದ ಬೇರೆ ಎನ್ನುವ ಅರಿವನ್ನು ಉಂಟು ಮಾಡುವುದೇ ಪ್ರತಿಬುದ್ಧಿ. ಇದನ್ನು ಅರಿಯದೆ ನಿದ್ರೆಯಲ್ಲಿರುವುದೇ ಅಪ್ರತಿಬುದ್ಧಿ. ಅಂದರೆ ಜ್ಞಾನದ ಅರಿವಿಲ್ಲದೆ ನಿದ್ರಾವಸ್ತೆಯಲ್ಲಿರುವುದು. ಅದು ಹೇಗೆಂದರೆ,


ಸ್ವಪ್ನಲೋಕ ಸೃಷ್ಟಿ


ನಾವು ಮಲಗಿದ್ದಾಗ ಅನೇಕ ಕನಸುಗಳನ್ನು ಕಾಣುತ್ತೇವೆ. ಭಿನ್ನವಾದ ಜಗತ್ತಿನಲ್ಲಿ ಇರುತ್ತೇವೆ. ಅದು ಸ್ವಪ್ನ ಲೋಕ. ಅದೇ ರೀತಿ ಈ ಐಹಿಕ ಲೋಕದಲ್ಲಿಯೂ ನಾವು ತಿಳುವಳಿಕೆ ಇಲ್ಲದೆ ಕನಸಿನ ಲೋಕವನ್ನು ಸೃಷ್ಟಿಸಿಕೊಳ್ಳುತ್ತೇವೆ. ನಾವು ಈ ಜಗತ್ತಿನಲ್ಲಿ ಗುರುತುಗಳನ್ನು, ಸಂದರ್ಭಗಳನ್ನು, ಬಾಂಧವ್ಯಗಳನ್ನು, ಭಾವನೆಗಳನ್ನು ಸೃಷ್ಟಿಸಿಕೊಳ್ಳುತ್ತೇವೆ. ಮತ್ತು ಈ ಲೋಕದ ಸುಖ ಮತ್ತು ನೋವುಗಳೊಂದಿಗೆ ಗುರುತಿಸಿಕೊಳ್ಳುತ್ತೇವೆ. ವಾಸ್ತವವಾಗಿ ನಾವು ಇವುಗಳಿಗಿಂತ ಭಿನ್ನ. ವಾಸ್ತವವಾಗಿ ನಾವು ಆಧ್ಯಾತ್ಮಿಕ ಆತ್ಮ. ಆದರೂ ಬೇರೆಯದನ್ನೇ ಗುರುತಿಸಿಕೊಳ್ಳುತ್ತೇವೆ. ಏಕೆಂದರೆ ನಾವು ನಿದ್ರಿಸುತ್ತಿರುತ್ತೇವೆ ಮತ್ತು ಕನಸು ಕಾಣುತ್ತಿರುತ್ತೇವೆ. ಮುಂದುವರಿದ ಯೋಗಿಯು ಸದಾ ಎಚ್ಚರದಿಂದ ಇರುತ್ತಾನೆ. ಇಂತಹ ನಿದ್ರವಾಸ್ಥೆಯಲ್ಲಿ ಇರುವುದಿಲ್ಲ. ನಾನು ಈ ಲೋಕಕ್ಕಿಂತ ಭಿನ್ನ, ಇಲ್ಲಿ ನಾನು ಏನನ್ನೂ ಗುರುತಿಸಿಕೊಲ್ಳುವುದಿಲ್ಲ ಎನ್ನುವುದು ಅವನ ಗ್ರಹಿಕೆ. ಅದು ಯೋಗಿಯು ಬೆಳೆಸಿಕೊಳ್ಳುವ ಪ್ರಜ್ಞೆ. ತಾನು ಏನು, ಯಾರು ಎನ್ನುವುದರ ವಾಸ್ತವಿಕತೆಯನ್ನು ಅರಿಯುವ ಜಾಗೃತಾವಸ್ಥೆಯಲ್ಲಿರುವ ಸ್ಥಿತಿ. ಇದನ್ನು ಪ್ರತಿಬುದ್ಧಿ ಎನ್ನುತ್ತಾರೆ. ಆದರೆ ನಿದ್ರಾವಸ್ಥೆಯಲ್ಲಿ ಇರುವವನು ಲೌಕಿಕ ಲೋಕದಲ್ಲಿಯೂ ಕನಸಿನ ಲೋಕವನ್ನು ಕಾಣುತ್ತಾನೆ. ಅದು ವಾಸ್ತವ ಅಲ್ಲ, ಅದು ಬರೀ ಛಾಯೆ ಎಂದಾದರೂ ಅವನು ಲೌಕಿಕ ಲೋಕದಲ್ಲಿ ಇರುವುದೆಲ್ಲವೂ ವಾಸ್ತವ ಎಂದು ಭಾವಿಸುತ್ತಾನೆ. ಇದನ್ನು ಗಮನಿಸಿ — ಸಾವು ಸಂಭವಿಸಿದ ಕೂಡಲೇ ಈ ಭೌತಿಕ ಲೋಕದ ಸಂಪರ್ಕ ಕಡಿದು ಹೋಗುತ್ತದೆ. ಕೆಲವು ಸಮಯ ನಮ್ಮ ಸುತ್ತಮುತ್ತ ಇರುವವರು ತಮ್ಮವರ ಸಾವಿಗೆ ಅಳುತ್ತಾರೆ. ಅನಂತರ ಕ್ರಮೇಣ ಆ ದೇಹವಿದ್ದ ವ್ಯಕ್ತಿಯನ್ನು ಮರೆಯುತ್ತಾರೆ. ಅದು ವಾಸ್ತವ. ಆದರೆ ನಾವು ಈ ಲೋಕದಲ್ಲಿದ್ದಾಗ, ನಾವು ಈ ಶರೀರ, ಕುಟುಂಬ ಮತ್ತು ಸಮಾಜದೊಂದಿಗೆ ಸಂಪರ್ಕವಿದೆ ಎಂದು ಭಾವಿಸುತ್ತೇವೆ. ಇದು ಪ್ರತಿಬುದ್ಧಿ, ನಿದ್ರಾವಸ್ಥೆ.


ಸಂಪರ್ಕ ಮುಕ್ತ


ಜೀವನ್ ಮುಕ್ತ, ಯೋಗಿಯು ಹೇಗೆ ಬದುಕುತ್ತಾನೆ? ಅವನು ತನ್ನೊಂದಿಗೆ ಬಂದ ತನ್ನ ಉಳಿದ ಕರ್ಮಗಳನ್ನು ವ್ಯಯಿಸುತ್ತಿರುತ್ತಾನೆ ಎಂದು ಶ್ರೀಲ ಪ್ರಭುಪಾದರು ಹೇಳುತ್ತಾರೆ. ಇದನ್ನು ಅವರು ಒಂದು ಫ್ಯಾನ್ಗೆ ಸಂಪರ್ಕಿಸುತ್ತಾರೆ. ಇದು ಪ್ಲಗ್ನಿಂದ ಸಂಪರ್ಕ ಕಡಿದಿರುವ ಫ್ಯಾನ್. ಸಂಪರ್ಕ ಕಡಿತವಾದ ಮೇಲೆ ಕೂಡ ಅದರ ಪಂಖಗಳು ಕೆಲ ಸಮಯ ಸುತ್ತುತ್ತಿರುತ್ತವೆ. ಅದು ವಿದ್ಯುತ್ ಸಂಪರ್ಕದಿಂದ ಅಲ್ಲ, ಸಂಪರ್ಕ ಕಡಿತದಿಂದ. ಅದೇ ರೀತಿ ಜೀವನ ಮುಕ್ತಿಯ ಚಟುವಟಿಕೆಗಳೂ ಕೂಡ. ಅವನು ಉಳಿಕೆ ಕರ್ಮಗಳನ್ನು ಪೂರೈಸಿ ಹೊಸ ಕರ್ಮಗಳನ್ನು ಮಾಡದಿದ್ದಾಗ ಅವನು ಸಂಪರ್ಕ ಕಡಿದುಕೊಳ್ಳುತ್ತಾನೆ.

ಈ ಸಂಪರ್ಕ ಕಡಿತ ವಿಷಯವನ್ನು ಶ್ರೀಲ ಪ್ರಭುಪಾದರು ದೀಕ್ಷೆಗೆ ಸಂಬಂಧವನ್ನು ಕಲ್ಪಿಸುತ್ತಾರೆ. ಹೇಗೆ? ದೀಕ್ಷೆಯ ಸಮಯದಲ್ಲಿ ಸಂಪರ್ಕವನ್ನು ಕಡಿಯುತ್ತೇವೆ. ಇದರಿಂದ ಒಂದು ಮುಖ್ಯವಾದ ಪ್ರಶ್ನೆ ಎದುರಾಗುತ್ತದೆ. ತಾನು ಈ ದೇಹವಲ್ಲ, ಈ ಶರೀರದೊಂದಿಗೆ ಸಂಪರ್ಕವನ್ನು ಹೊಂದಿಲ್ಲ ಎಂದು ಅರ್ಥಮಾಡಿಕೊಂಡ ಯೋಗಿಯ ಉನ್ನತ ಹಂತವೇ? ಅದು ಪರಿಪೂರ್ಣ ಆಧ್ಯಾತ್ಮಿಕ ಜ್ಞಾನದ ಪ್ರಾಥಮಿಕ ಹಂತ. ದೀಕ್ಷೆ ಎಂದರೆ, ದೀಕ್ಷೆ ನೀಡಿದಾಗ, ನೀವು ಆರಂಭಿಸಿದಾಗ, ಅದು ಆ ಭಾವನೆಯನ್ನು ನೀಡುತ್ತದೆ. ದೀಕ್ಷೆಯ ಅರ್ಥವೇನು? ದೀಕ್ಷೆಯ ಸಮಯದಲ್ಲಿ ಭಕ್ತನು ಆತ್ಮಸಮರ್ಪಣದ ಸಂಕಲ್ಪವನ್ನು ಮಾಡುತ್ತಾನೆ. ಅಂತಹ ಭಕ್ತನು ಅಲೌಕಿಕ ನೌಕೆಯಲ್ಲಿ ಇದ್ದಾನೆಂದು ಭಗವಂತನು ಭಾವಿಸುತ್ತಾನೆ. ಆದುದರಿಂದ ದೀಕ್ಷೆಯಿಂದ ನಿರೀಕ್ಷಿಸುವುದು ಆತ್ಮಸಮರ್ಪಣವನ್ನು. ಅದು ಐದು, ಹತ್ತು ವರ್ಷಗಳಲ್ಲಿ ಬರುವುದಲ್ಲ, ಎಷ್ಟೋ ಜನ್ಮಗಳೇ ಬೇಕಾಗಬಹುದು ಎಂದು ಶ್ರೀಲ ಪ್ರಭುಪಾದರು ಹೇಳುತ್ತಾರೆ. ಒಂದು ಕ್ಷಣದಲ್ಲಿ ಬರುವುದು ಸಾಧ್ಯ ಎಂದೂ ಅವರು ಹೇಳುತ್ತಾರೆ. ಅದೊಂದು ವಿಧಾನವೆಂದು ಅವರು ವಿವರಿಸುತ್ತಾರೆ.

ದೀಕ್ಷೆಯಿಂದ ದ್ವಿಜನ್ಮವು ಲಭಿಸುತ್ತದೆ. ಅಂದರೆ ಎರಡನೆಯ ಜನ್ಮ. ಇದು ಹೊಸ ಜೀವನ, ಹೊಸ ನಾಮಕರಣ, ಹೊಸ ಜೀವನವೆಂದರೆ ಆತ್ಮಸಮರ್ಪಣೆ. ಆತ್ಮಸಮರ್ಪಣೆ ಎಂದರೇನು? ನನ್ನ ಚಿಂತನೆ ಮತ್ತು ಅಪೇಕ್ಷೆಗಳು ಸ್ವತಂತ್ರವಲ್ಲ. ಅದು ಕೃಷ್ಣನ ಅಪೇಕ್ಷೆಯಂತೆ ಇರುತ್ತದೆ. ಒಬ್ಬ ಭಕ್ತನು ಸದಾ ಕೃಷ್ಣನನ್ನು ಕುರಿತು ಯೋಚಿಸುತ್ತಾನೆ. ಅದೇ ಆತ್ಮಸಮರ್ಪಣೆಯ ಜೀವ, ಸಾರ. ಅದನ್ನೇ ಪ್ರಗತಿಹೊಂದಿದ ಯೋಗಿಯು ತೋರುವುದು. ಲೌಕಿಕ ಬಿರುಗಾಳಿಗೆ ಕಿಂಚಿತ್ತೂ ಅಲುಗಾಡದೆ ಭಗವಂತನಿಗೆ ಶರಣಾಗುವುದೇ ಆತ್ಮಸಮರ್ಪಣೆ. ನಾನು ಈ ದೇಹವಲ್ಲ, ನಾನು ಆದ್ಯಾತ್ಮಿಕ ಆತ್ಮ ಎಂದು ಅರಿತು ಕೃಷ್ಣನಿಗೆ ಸಮರ್ಪಿಸಿಕೊಳ್ಳುವವನೇ ಯೋಗಿ, ಜೀವನ್ ಮುಕ್ತ.

ಹಾಗಾಗಬೇಕೆಂದರೆ, ನಾವು ಕೃಷ್ಣನ ಅಪೇಕ್ಷೆ, ಬಯಕೆಯಂತೆ ಕ್ರಿಯಾಶೀಲವಾಗಿರಬೇಕು. ಆಗ ನಮಗೆ ಶಾಶ್ವತವಾದ ಭಗವದ್ಧಾಮಕ್ಕೆ ದಾರಿ ಕಾಣುತ್ತದೆ. ಯೋಚಿಸಿ ನೋಡಿ.

ಈ ಲೇಖನ ಶೇರ್ ಮಾಡಿ