ಉದ್ಯೋಗ ಹಾಗೂ ಸಂಸ್ಕೃತಿ

ಉದ್ಯೋಗ ಎಂದರೆ ಜೀವಿಕಾವೃತ್ತಿ. ವೈದಿಕ ಪರಂಪರೆಯ ಪ್ರಕಾರ ಜೀವಿಕಾವೃತ್ತಿಗೆ ಅನೇಕ ಮುಖಗಳಿವೆ. ಜನರ ಗುಣ ಹಾಗೂ ವೃತ್ತಿಗಳನ್ನು ಆಧಾರವಾಗಿಟ್ಟುಕೊಂಡು ಮಾಡಲಾಗಿರುವ ನಾಲ್ಕು ವರ್ಗಗಳು ಹೀಗಿವೆ: ಬ್ರಾಹ್ಮಣರು (ಬುದ್ಧಿ ಜೀವಿಗಳು ಹಾಗೂ ಶಿಕ್ಷಕರ ವೃತ್ತಿಯವರು), ಕ್ಷತ್ರಿಯರು (ಯುದ್ಧ ಪಟುಗಳು ಹಾಗೂ ರಾಜನೀತಿ ನಿಪುಣರು), ವೈಶ್ಯರು (ರೈತರು ಹಾಗೂ ವ್ಯಾಪಾರಿಗಳು) ಮತ್ತು ಶೂದ್ರರು (ದುಡಿಮೆಗಾರರು). ಉದ್ಯೋಗದಲ್ಲಿ ನೆಲೆಸುವ ಮೊದಲು ಯಾವ ಯಾವ ಬಗೆಯ ವೃತ್ತಿಗಳಿವೆ ಮತ್ತು ಯಾರು ಯಾರು ಯಾವ ಯಾವ ಬಗೆಯ ಕೆಲಸಗಳನ್ನು ಮಾಡಬಲ್ಲರು ಎಂಬುದನ್ನು ವ್ಯಕ್ತಿಯು ತಿಳಿದುಕೊಳ್ಳಬೇಕು. ಜನರ ಕಾರ್ಯ ಸಾಮರ್ಥ್ಯವು ವಿವಿಧ ಬಗೆಯದಾಗಿರುತ್ತದೆ ಮತ್ತು ಕಾರ್ಯಗಳಲ್ಲೂ ವೈವಿಧ್ಯವಿರುತ್ತದೆ. ಆದರೆ ಇಂದು ನಿರ್ಮಿಸಿಬಿಟ್ಟಿರುವ ಸಮಾಜದಲ್ಲಿ ಎಲ್ಲರೂ ಎಲ್ಲರ ಕಾರ್ಯಗಳನ್ನು ಮಾಡಲು ಮುಂದಾಗುತ್ತಾರೆ. ಇದು ವೈಜ್ಞಾನಿಕವಾದ ವಿಧಾನವಲ್ಲ.

ಮನುಷ್ಯನ ಶರೀರವು ತಲೆ, ಬಾಹುಗಳು, ಹೊಟ್ಟೆ, ಕಾಲುಗಳು ಇತ್ಯಾದಿ ಭಾಗಗಳಿಂದ ಸುಸೂತ್ರವಾಗಿ ಕಾರ್ಯನಿರ್ವಹಿಸುವಂತೆ ಮಾನವ ಸಮಾಜವು ಕೂಡ ನಾಲ್ಕು ವರ್ಣಗಳಿಂದ ರೂಪಿತಗೊಂಡಿದೆ. ಬ್ರಾಹ್ಮಣರು ಶಿರದ ಭಾಗವನ್ನೂ, ಕ್ಷತ್ರಿಯರು ಬಾಹುಗಳನ್ನೂ, ವೈಶ್ಯರು ಉದರದ ಭಾಗವನ್ನು ಶೂದ್ರರು ಕಾಲುಗಳ ಭಾಗವನ್ನೂ ಪ್ರತಿನಿಧಿಸುತ್ತಾರೆ. ಜೀವಿಕಾವೃತ್ತಿಗಳನ್ನು ಕೂಡ ಹೀಗೆಯೇ ವೈಜ್ಞಾನಿಕವಾಗಿ ವಿಂಗಡಿಸಬೇಕು. ಶಿರದ ಭಾಗವು ಬಹು ಮುಖ್ಯವಾದುದು. ಏಕೆಂದರೆ ಶಿರವಿಲ್ಲದೆ ದೇಹದ ಯಾವುದೇ ಇತರ ಭಾಗಗಳು ಇದ್ದರೂ ಇಲ್ಲದಂತೆ ಅವು ಯಾವ ಪ್ರಯೋಜನಕ್ಕೂ ಬರುವುದಿಲ್ಲ.  ಹಾಗೆಯೇ ಒಂದು ಸಂಸ್ಕೃತಿಯ ಉಳಿವಿಗಾಗಿ ಬುದ್ಧಿವಂತರು, ಯೋಗ್ಯತೆಯುಳ್ಳ ಒಂದು ವರ್ಗವಿರಲೇಬೇಕು. ಅವರಲ್ಲಿ ಶಾಂತಿ, ಸಂಯಮ, ತಪಸ್ಸು, ಶುದ್ಧತೆ, ಜ್ಞಾನ, ವಿವೇಕ, ಪ್ರಾಮಾಣಿಕತೆ, ಧಾರ್ಮಿಕ ಮನಸ್ಸು ಇವು ಮೈಗೂಡಿರಬೇಕು. ಇಂತಹವರನ್ನು ಬ್ರಾಹ್ಮಣರು ಎಂದು ಕರೆಯುತ್ತಾರೆ. ಈ ಸಮಾಜದಲ್ಲಿ ಯಾವುದೇ ಗೊಂದಲ. ಪ್ರಕ್ಷುಬ್ಧತೆಗಳು ಬಾರದಂತೆ ಇವರು ಕಾಪಾಡಿಕೊಂಡು ಹೋಗುತ್ತಾರೆ. ಸಂಸ್ಕೃತಿ ಎಂದರೆ ಬದುಕಿನ ಗುರಿಯನ್ನು ಅರಿಯುವುದೇ ಆಗಿದೆ. ಬದುಕಿನ ಗುರಿಯನ್ನು ತಿಳಿದುಕೊಳ್ಳದ ವ್ಯಕ್ತಿಯು ಚುಕ್ಕಾಣಿಯಿಲ್ಲದ ಹಡಗಿನಂತೆ, ಆದರೆ ಈ ಹೊತ್ತು ನಾವು ಬದುಕಿನ ಗುರಿಯನ್ನು ಕಾಣುತ್ತಿಲ್ಲ. ಕಾರಣ ನಿಜವಾದ ಸಂಸ್ಕೃತಿಯ ರಕ್ಷಕರಿಲ್ಲದಿರುವುದು, ಮಾರ್ಗದರ್ಶನ ಮಾಡುವರಿಲ್ಲದಿರುವುದಾಗಿದೆ. ಅವ್ಯವಸ್ಥೆಯ ಪರಿಸರದಲ್ಲಿ ನಾವು ಯಾವುದೇ ವ್ಯವಹಾರ ಮಾಡಿದರೂ ಅದು ಸರಿಯಾಗಿರುವುದಿಲ್ಲ. ಕ್ಷತ್ರಿಯನಾದ ಅರ್ಜುನನು ಶ್ರೀಕೃಷ್ಣನನ್ನು ತನ್ನ ಗುರುವೆಂದು ಸ್ವೀಕರಿಸಿ ಅವನಿಂದ ಮಹತ್ತಾದ ಮಾರ್ಗದರ್ಶನ ಪಡೆದು ತನ್ನ ಕ್ಷಾತ್ರ ಧರ್ಮವನ್ನು ಪರಿಪಾಲಿಸಿದನು.

ಹೀಗೆ ಪ್ರತಿಯೊಬ್ಬ ವ್ಯಕ್ತಿಯು ತನ್ನ ವರ್ಣಾಶ್ರಮ ಧರ್ಮದ ಕರ್ತವ್ಯಗಳನ್ನು, ನಿಯತ ನಿತ್ಯ ಕರ್ಮಗಳನ್ನು ಮಾಡಿದಾಗ ಚತುರ್ವರ್ಣಗಳನ್ನು ಸೃಷ್ಟಿಸಿದ ಆ ಪರಮ ಪ್ರಭು ಸುಪ್ರೀತನಾಗುತ್ತಾನೆ. ನಾವು ಒಂದು ರಾಜ್ಯದಲ್ಲಿರುವಾಗ ಆ ರಾಜ್ಯ ಸರ್ಕಾರದ ನಿಯಮಗಳನ್ನು ಪಾಲಿಸಬೇಕು ಮತ್ತು ಸರಕಾರಕ್ಕೆ ಸಂತೋಷಪಡಿಸಬೇಕು. ಆದರೆ ನಿಯಮಗಳನ್ನು ಮುರಿದು ಗೊಂದಲ ಸೃಷ್ಟಿಸಿದರೆ ಕೆಟ್ಟ ವ್ಯಕ್ತಿಗಳಾಗಿ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಇದರಂತೆಯೇ ಪರಮ ಪ್ರಭುವಿನ ನಿಯಮಿತ ತತ್ತ್ವವಾಗಿದೆ.

ನಾವು ಯಾವುದೇ ವರ್ಣದರಾಗಿರಬಹುದು ಅಥವಾ ಯಾವುದೇ ವೃತ್ತಿಯನ್ನು ಅವಲಂಬಿಸಿರಬಹುದು ಆದರೆ ಅದು ಅಷ್ಟು ಮುಖ್ಯವಲ್ಲ. ನಾವು ನಮ್ಮ ವೃತ್ತಿಯಲ್ಲಿ ಸಾರ್ಥಕತೆಯನ್ನು ಬಯಸುವವರಾದರೆ ಆ ಪರಮ ಪುರುಷನನ್ನು ಸಂತೋಷಪಡಿಸಲು ಪ್ರಯತ್ನಿಸಬೇಕು. ಹಾಗೆ ಮಾಡದಿದ್ದಲ್ಲಿ ಅದು ಕೇವಲ ವ್ಯರ್ಥಕಾಲಹರಣ ಅಷ್ಟೆ.

ನಾವು ದೇವೋತ್ತಮ ಶ್ರೀಕೃಷ್ಣನಿಗಾಗಿ ಕಾರ್ಯಮಾಡಬೇಕು. ಹಾಗೆ ಮಾಡದಿದ್ದಲ್ಲಿ ಕರ್ಮಫಲಗಳು ನಮ್ಮನ್ನು ಕಟ್ಟಿಹಾಕುತ್ತವೆ. ನಾವು ಕರ್ಮಬಂಧನದಲ್ಲಿರುವಷ್ಟು ಕಾಲವೂ ಒಂದು ದೇಹವನ್ನು ಬಿಟ್ಟು ಇನ್ನೊಂದು ದೇಹವನ್ನು ಪ್ರವೇಶಿಸುತ್ತಲೇ ಇರಬೇಕು. ಇದೇ ಜನ್ಮಾಂತರ. ಆದುದರಿಂದ ನಾವು ಜೀವಿಕಾ ವ್ಯತ್ತಿಯನ್ನು ಮಾಡುತ್ತಲೇ ಆಧ್ಯಾತ್ಮಿಕ ಬದುಕನ್ನು ಸಹ ರೂಢಿಸಿಕೊಳ್ಳಬೇಕು.

ಈ ಸಾಂಸ್ಕೃತಿಕ ಬದುಕು ಮತ್ತು ಆಧ್ಯಾತ್ಮಿಕ ಬದುಕಿನ ಉದ್ದೇಶ ಸಾಧನೆಗಾಗಿ ಕೃಷ್ಣ ಪ್ರಜ್ಞಾ ಆಂದೋಲನವು ಪ್ರಸಾರ ಕಾರ್ಯ ಕೈಗೊಂಡಿದೆ. ಇಲ್ಲಿ ನಿಮ್ಮ ವೃತ್ತಿಗಳನ್ನು ತ್ಯಾಗ ಮಾಡಿ ಸಂನ್ಯಾಸ ಜೀವನಕ್ಕೆ ಬರಬೇಕೆಂದು ಅದು ಹೇಳುತ್ತಿಲ್ಲ. ವ್ಯಕ್ತಿಯು ಬದುಕಿರುವ ತನಕ ಒಂದು ಜೀವಿಕಾವೃತ್ತಿಯನ್ನು ಮಾಡುತ್ತಿರಲೇಬೇಕಾಗುತ್ತದೆ. ಆದರೆ ಅದೇ ಹೊತ್ತಿನಲ್ಲಿ ದೈವ ಪ್ರಜ್ಞೆಯನ್ನು ಮರೆಯಬಾರದು ತಮ್ಮ ಬದುಕಿಗೆ ಪರಿಪೂರ್ಣತೆ ತಂದುಕೊಳ್ಳಲಿಕ್ಕಾಗಿ ಜ್ಞಾನಾರ್ಜನೆ ಮಾಡಬೇಕು. ಕೃಷ್ಣನನ್ನು ಅರ್ಥಮಾಡಿಕೊಳ್ಳುವುದೇ ಈ ಜ್ಞಾನಾರ್ಜನೆ ಅದೇ ಪರಿಪೂರ್ಣತೆ ಅದೇ ಶ್ರೇಷ್ಠ ಮಾನವ ಸಂಸ್ಕೃತಿ. ಯಾರೂ ತಮ್ಮ ತಮ್ಮ ವೃತ್ತಿಗಳನ್ನು ಬಿಡಬೇಡಿ. ನಿಮ್ಮ ವೃತ್ತಿಗಳು ಮುಂದುವರಿಯಲಿ. ಆದರೆ ಕೃಷ್ಣ ವಿಷಯವಾಗಿ ಶ್ರವಣ ಮಾಡಿ. ಭಕ್ತಿ ಸೇವೆಯ ಮೂಲಕ ದೇವೋತ್ತಮ ಪರಮ ಪುರುಷನನ್ನು ಅರ್ಥಮಾಡಿಕೊಳ್ಳಿ. ಈ ಜ್ಞಾನವನ್ನು ವೃದ್ಧಿ ಪಡಿಸಿಕೊಳ್ಳುತ್ತಲೇ ನೀವು ವೃತ್ತಿಯಲ್ಲಿ ಮುಂದುವರಿದರೆ ಬದುಕು ಸಾರ್ಥಕತೆಯನ್ನು ಪಡೆಯುತ್ತದೆ.

ಈ ಲೇಖನ ಶೇರ್ ಮಾಡಿ