ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಕಾಗಿನೆಲೆಯು ಸುಪ್ರಸಿದ್ಧ ಶ್ರೀ ಲಕ್ಷ್ಮೀನರಸಿಂಹಾದಿಕೇಶವ ಮಂದಿರಗಳಿಂದ ಪುಣ್ಯ ಕ್ಷೇತ್ರವಾಗಿದೆ. ಅಂತೆಯೇ ಇದು ದಾಸ ಶ್ರೇಷ್ಠ ಕನಕದಾಸರ ಭೂಮಿಯೂ ಹೌದು. ಕಾಗಿನೆಲೆಯು ಪವಿತ್ರ ಸ್ಥಳವಾಗಿರುವುದರ ಜೊತೆಗೆ ಕರ್ನಾಟಕದ ಒಂದು ಪ್ರಸಿದ್ಧ ಪ್ರವಾಸಿ ತಾಣವೂ ಆಗಿದೆ. ನವರಾತ್ರಿ ಉತ್ಸವ ಹಾಗೂ ಕನಕ ಜಯಂತಿ ಪ್ರಮುಖ ಆಚರಣೆಗಳು.
ಕಾಗಿನೆಲೆಯಲ್ಲಿ ಶ್ರೀಲಕ್ಷ್ಮೀ, ಶ್ರೀನರಸಿಂಹ ದೇವಾಲಯಗಳು ಅತ್ಯಂತ ಪುರಾತನವಾದವು. ಇವು ಎರಡು ಪ್ರತ್ಯೇಕವಾಗಿದ್ದವು. ಕನಕದಾಸರು ಬಾಡದಿಂದ ತಂದ ಆದಿಕೇಶವ ಮೂರ್ತಿಯನ್ನು ಲಕ್ಷ್ಮೀ ಮಂದಿರದಲ್ಲಿರಿಸಿ, ಲಕ್ಷ್ಮೀ ಮೂರ್ತಿಯನ್ನು ನರಸಿಂಹನ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿದರು. ಈ ದೇವಾಲಯವನ್ನು ಅಭಿವೃದ್ಧಿಪಡಿಸಿದ ಕನಕದಾಸರು ತಮ್ಮ ಜೀವಿತದ ಕೊನೆಯ ಕಾಲವನ್ನು ಅಲ್ಲಿಯೇ ಕಳೆದು ಆದಿಕೇಶವನ ಸನ್ನಿಧಿಯಲ್ಲಿಯೇ ದೇಹತ್ಯಾಗ ಮಾಡಿದರು. ಶಿಥಿಲಾವಸ್ಥೆಗೊಂಡಿದ್ದ ದೇವಾಲಯವನ್ನು ಕಾಗಿನೆಲೆ ಅಬಿವೃದ್ಧಿ ಪ್ರಾಧಿಕಾರವು ಸುಂದರ ವಾಸ್ತು ವಿನ್ಯಾಸದಲ್ಲಿ ಪುನರ್‌ನಿರ್ಮಾಣ ಮಾಡಿದೆ.
ಕನಕದಾಸರ ಕುಲದೈವ ಚನ್ನಕೇಶವ. ಅವರ ಪದಗಳು ಅಂತ್ಯವಾಗುವುದು ಆದಿಕೇಶವ ಎಂದೇ.
ಸ್ಥಳ ಪುರಾಣ
ಮೊದಲು ಇದು ಕಾಗಿನೆಲ್ಲಿ ಎಂದಾಗಿತ್ತು. ಒಂದು ಬಂಗಾರದ ಕಾಗೆ ಇಲ್ಲಿನ ಗುಡ್ಡದಿಂದ ನೆಲ್ಲಿಕಾಯನ್ನು ಕಚ್ಚಿಕೊಂಡು ಬಂದು ತಿನ್ನುತ್ತಾ ಇತ್ತು. ಆಗ ಇಲ್ಲಿನ ಜನರೆಲ್ಲ ಅದನ್ನು ನೋಡಿ ಹಿಡಿಯಲು ಹೋದರು. ಆಗ ಅದು ಒಂದು ಗುಹೆಯೊಳಗೆ ಹೋಯಿತು. ಅದನ್ನು ಹಿಂಬಾಲಿಸಿ ಹೋದಾಗ ಅಲ್ಲಿ ಲಕ್ಷ್ಮೀ ಮತ್ತು ನರಸಿಂಹ ಉದ್ಭವ ಮೂರ್ತಿಗಳು ಸಿಕ್ಕಿದವು. ವಿಗ್ರಹಗಳನ್ನು ತಂದು ಪ್ರತಿಷ್ಠಾಪಿಸಲಾಯಿತು. ಆಗ ಇದು ಕಾಗಿನೆಲ್ಲಿ ಎಂಬ ಹೆಸರು ಪಡೆದಿತ್ತು. ಬಾಡದ ಕನಕದಾಸರಿಗೆ ಕನಸಿನಲ್ಲಿ ಬಂದ ಉದ್ಭವ ಮೂರ್ತಿ ಆದಿಕೇಶವನು ಕಾಗಿನೆಲೆಯಲ್ಲಿ ಪ್ರತಿಷ್ಠಾಪನೆ ಮಾಡು ಎಂದು ಹೇಳಿದಾಗ ಕನಕದಾಸರು ಇಲ್ಲಿಗೆ ತಂದು ಪ್ರತಿಷ್ಠಾಪಿಸಿದರು. ಅಂದಿನಿಂದ `ಕಾಗಿನೆಲೆ’ಯಾಯಿತು. ಸುಮಾರು 530 ವರ್ಷಗಳ ಹಿಂದೆ ವಿಜಯನಗರ ಸಾಮ್ರಾಜ್ಯದ ರಾಜರ ನೆರವಿನಿಂದ ಈ ದೇವಾಲಯ ನಿರ್ಮಿಸಲಾಗಿದೆ ಎಂದು ಸ್ಥಳ ಪುರಾಣವನ್ನು ಅರ್ಚಕರು ಹೇಳುತ್ತಾರೆ.
ಶ್ರೇಷ್ಠ ಭಕ್ತ ಕನಕದಾಸ
ಕನಕದಾಸರು ದಾಸ ಸಾಹಿತ್ಯದಲ್ಲಿಯೇ ವಿಶಿಷ್ಟ ವ್ಯಕ್ತಿತ್ವವುಳ್ಳವರು. ಈಗಿನ ಹಾವೇರಿ ಜಿಲ್ಲೆಯ ಬಂಕಾಪುರ ಪ್ರದೇಶವನ್ನಾಳುತ್ತಿದ್ದ ಬಾಡ ಗ್ರಾಮದ ಕುರುಬ ಜನಾಂಗದ ಬೀರಪ್ಪನೆಂಬಾತನ ಪತ್ನಿ ಬಚ್ಚಮ್ಮ. ಈ ದಂಪತಿಯ ಪುತ್ರನೇ ತಿಮ್ಮಪ್ಪ. ತಂದೆಯ ಅಕಾಲ ಮೃತ್ಯುವಿನಿಂದ ಕಿರಿಯ ವಯಸ್ಸಿನಲ್ಲಿಯೇ ತಿಮ್ಮಪ್ಪ ನಾಯಕನಾದ. ಒಮ್ಮೆ ಭೂಮಿಯನ್ನು ಅಗೆಯಿಸುತ್ತಿರುವಾಗ ಅಪಾರ ನಿಧಿ ದೊರೆಯಿತು. ಅದನ್ನು ತನ್ನ ವಿಲಾಸಿ ಜೀವನಕ್ಕೆ ಬಳಸಿಕೊಳ್ಳದೆ, ಪ್ರಜೆಗಳ ಹಿತರಕ್ಷಣೆ ಹಾಗೂ ಧಾರ್ಮಿಕ ಕಾರ್ಯಗಳಿಗಾಗಿ ಬಳಿಸಿ ಜನರಿಂದ ಕನಕನಾಯಕನೆಂಬ ಪ್ರಶಂಸೆಗೆ ಪಾತ್ರನಾದ.
ಒಮ್ಮೆ ಯುದ್ಧ ಭೂಮಿಯಲ್ಲಿ ಬಲವಾಗಿ ಗಾಯಗೊಂಡು ಮರಣಾವಸ್ಥೆಯಲ್ಲಿದ್ದಾಗ ಯಾವುದೋ ಶಕ್ತಿ ಶುಶ್ರೂಷೆಯನ್ನು ಮಾಡಿದಂತಾಗಿ, “ಕನಕಾ ಇನ್ನಾದರೂ ನನ್ನ ದಾಸನಾಗು” ಎಂದು ಅಶರೀರವಾಣಿ ಆಯಿತು. ಅಂದಿನಿಂದ ಕನಕನಾಯಕ ಕನಕದಾಸರಾದರು. ಕನಕರು ತಿರುಪತಿ ತಿಮ್ಮಪ್ಪನ ದರ್ಶನ ಪಡೆದು, ತಿರುಮಲೆ ತಾತಾಚಾರ್ಯರನ್ನು ಭೇಟಿ ಮಾಡಿದರು. ಅನಂತರ ಹಂಪಿಯಲ್ಲಿ ವ್ಯಾಸರಾಯರ ದರ್ಶನ ಮಾಡಿ ಗೌರವ ಸಲ್ಲಿಸಿದರು. ಅವರ ಬಳಿ ಇದ್ದಾಗಲೇ ಪುರಂದರದಾಸರ ಭೇಟಿಯಾಯಿತು. ಕನಕದಾಸರು ರಾಮಾನುಜೀಯ ಮತ್ತು ಮಧ್ವರ – ಎರಡೂ ತತ್ತ್ವಗಳಿಂದ ಪ್ರಭಾವಿತರಾದರು. ಕನಕದಾಸರು ಮೋಹನ ತರಂಗಿಣಿ, ನಳಚರಿತ್ರೆ, ರಾಮಧಾನ್ಯ ಚರಿತೆ, ಹರಿಭಕ್ತಿಸಾರ, ನೃಸಿಂಹಸ್ತವ ಕಾವ್ಯಗಳನ್ನು ಹಾಗೂ ಕೀರ್ತನೆ, ಉಗಾಭೋಗಗಳನ್ನು ರಚಿಸಿದರು.
ಪ್ರವಾಸಿ ತಾಣ
ಐತಿಹಾಸಿಕ ಮತ್ತು ಧಾರ್ಮಿಕ ಪರಂಪರೆ ಉಳ್ಳ ಕಾಗಿನೆಲೆಯನ್ನು ಅಂತಾರಾಷ್ಟ್ರೀಯ ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಅದಕ್ಕಾಗಿ ಸರಕಾರವು ಒಂದು ಪ್ರಾಧಿಕಾರವನ್ನೂ ರಚಿಸಿದೆ.
ಇಲ್ಲಿನ ಕೆಲವು ಆಕರ್ಷಣೆಗಳು
ಅಪೂರ್ವ ಪುಸ್ತಕ ಭಂಡಾರ : ಇಲ್ಲಿ ಕನಕ ಸಾಹಿತ್ಯ ಮತ್ತು ಭಕ್ತಿಪಂಥದ ವಿವಿಧ ಭಾಷಿಕ ಸಾಹಿತ್ಯ ಕೃತಿಗಳ ಬೃಹತ್ ಪುಸ್ತಕ ಭಂಡಾರ ಸ್ಥಾಪಿಸಲಾಗಿದ್ದು, ವಿವಿಧ ವಿಶ್ವವಿದ್ಯಾಲಯಗಳಿಂದ ಸಂಶೋಧನಾಸಕ್ತ ವಿದ್ಯಾರ್ಥಿಗಳು ಕಾಗಿನೆಲೆಗೆ ಬರುತ್ತಾರೆ.
ಗದ್ದುಗೆ ಮಂದಿರ : ಕನಕದಾಸರು ತಮ್ಮ ಜೀವಿತದ ಕೊನೆಯ ದಿನಗಳನ್ನು ಕಾಗಿನೆಲೆ ಆದಿಕೇಶವನ ಸನ್ನಿಧಿಯಲ್ಲಿ ಕಳೆದು, ಅಲ್ಲಿಯೇ ದೇಹ ತ್ಯಾಗ ಮಾಡಿದರು. ಭಕ್ತರು ದೊಡ್ಡಕೆರೆಯ ಪಕ್ಕದಲ್ಲಿ ಕನಕದಾಸರ ಗದ್ದುಗೆ ನಿರ್ಮಿಸಿದರು. 1982ರಲ್ಲಿ ಬೆಂಗಳೂರಿನ ಕಾಳಿದಾಸ ಗೆಳೆಯರ ಬಳಗವು ಚಿಕ್ಕದಾದ ದೇವಾಲಯ ನಿರ್ಮಿಸಿ, ಕನಕದಾಸರ ಮೂರ್ತಿ ಪ್ರತಿಷ್ಠಾಪಿಸಿತು. ಅಭಿವೃದ್ಧಿ ಪ್ರಾಕಾರವು ವಿಜಯನಗರ ಶೈಲಿಯ ಸುಂದರವಾದ ಕನಕ ಗದ್ದುಗೆ ಮಂದಿರವನ್ನು ನಿರ್ಮಿಸಿದೆ.
ಶ್ರೀಕ್ಷೇತ್ರ ಕಾಗಿನೆಲೆಗೆ, ಕನಕಗುರುಪೀಠಕ್ಕೆ ಬರುವ ಭಕ್ತರಿಗೆ, ಪ್ರವಾಸಿಗರಿಗಾಗಿ ಸುಸಜ್ಜಿತವಾದ ಕನಕ ಯಾತ್ರಿನಿವಾಸ ಸೌಲಭ್ಯ ಇಲ್ಲಿದೆ.
ಪರಿಸರ ಸ್ನೇಹಿ ಉದ್ಯಾನ : ಪ್ರಾಕಾರದ ಅಧೀನಕ್ಕೊಳಪಟ್ಟ ಒಟ್ಟು 138 ಎಕರೆ ಪ್ರದೇಶದಲ್ಲಿ ಹಚ್ಚ ಹಸಿರಿನಿಂದ ಕಂಗೊಳಿಸುವ `ಕನಕ ಪರಿಸರ ಸ್ನೇಹಿ ಉದ್ಯಾನ’ ವನ್ನು ರೂಪಿಸಲಾಗಿದೆ. 30 ಎಕರೆ ಪ್ರದೇಶದಲ್ಲಿ ಹುಲ್ಲಿನ ಹಾಸು (ಲಾನ್), ವಿವಿಧ ಬಗೆಯ ಆಲಂಕಾರಿಕ ಹೂಗಳಿಂದ ಕಂಗೊಳಿಸುತ್ತಿರುವ ಸಸ್ಯರಾಶಿ, ಔಷಧ ವನ, ದೈವೀವನಗಳಲ್ಲದೆ ಮಕ್ಕಳಿಗೆ ಆಟವಾಡಲು ವಿವಿಧ ಬಗೆಯ ಆಟಿಕೆ ಪರಿಕರಗಳನ್ನು ಸ್ಥಾಪಿಸಲಾಗಿದೆ. ಉದ್ಯಾನಕ್ಕೆ ಹೊಂದಿಕೊಂಡಂತೆ 238 ಎಕರೆ ವಿಸ್ತೀರ್ಣದ ಕನಕ ಸರೋವರ (ದೊಡ್ಡ ಕೆರೆ) ಮೈದುಂಬಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.
ಸಮೀಪದ ಇತರೆ ಪ್ರಮುಖ ಮಂದಿರಗಳೂ ಕೂಡ ಭಕ್ತರನ್ನು ಆಕರ್ಷಿಸುತ್ತಿವೆ.
ಶ್ರೀ ಆಂಜನೇಯ ದೇವಸ್ಥಾನ : ಕಾಗಿನೆಲೆಯಿಂದ 3 ಕಿ.ಮೀ. ದೂರದಲ್ಲಿರುವ ದಾಸನಕೊಪ್ಪ ಗ್ರಾಮವು ಆನೆಗೊಂದಿ ಅರಸರಿಂದ ಕನಕದಾಸರಿಗೆ ಉಡುಗೊರೆಯಾಗಿ ಬಂದ ಪ್ರದೇಶ. ಅಲ್ಲಿನ ಜಮೀನಿನಿಂದ ಬಂದ ಆದಾಯದಲ್ಲಿ ಆದಿಕೇಶವ ಉತ್ಸವ ಇನ್ನಿತರೆ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿತ್ತು. ಕನಕದಾಸರು ಪೂಜಿಸುತ್ತಿದ್ದ ಆಂಜನೇಯ ದೇವಸ್ಥಾನ ಈ ಗ್ರಾಮದಲ್ಲಿದೆ.
ತಿಮ್ಮಕೇಶವ ದೇವಸ್ಥಾನ : ಈ ಮಂದಿರವು ಕಾಗಿನೆಲೆಯಿಂದ 5 ಕಿ.ಮೀ.ದೂರದಲ್ಲಿರುವ ಕುಮ್ಮೂರು ಗ್ರಾಮದ ಗುಡ್ಡದ ಮೇಲಿದೆ. ಕನಕದಾಸರು ಗುಡ್ಡದ ಮೇಲೊಂದು ದೇವಸ್ಥಾನ ನಿರ್ಮಾಣ ಮಾಡಿ ತಿಮ್ಮಪ್ಪನನ್ನು ಪೂಜಿಸುತ್ತಿದ್ದರು. ಈ ದೇವಸ್ಥಾನದಲ್ಲಿ ಸುಂದರವಾದ ಉದ್ಭವ ಮೂರ್ತಿ ಇದೆ. ಇದೇ ಪರಿಸರದಲ್ಲಿ ಕನಕದಾಸರ ಹೂದೋಟ, ಕನಕನಾಯಕನ ಕಾಲುವೆಗಳಿವೆ.
ಹೂದೋಟದ ತಿಮ್ಮಪ್ಪ : ಕದರಮಂಡಲಗಿ ಹೊರವಲಯದಲ್ಲಿ ಈ ದೇವಸ್ಥಾನವಿದೆ. ತಿರುಪತಿ ತಿಮ್ಮಪ್ಪನ ಸ್ಮರಣೆಯಲ್ಲಿಯೇ ಸದಾ ಕಾಲಕಳೆಯುತ್ತಿದ್ದ ಕನಕದಾಸರಿಗೆ ಕನಸಿನಲ್ಲಿ ಕಾಣಿಸಿಕೊಂಡ ತಿಮ್ಮಪ್ಪ `ವಯಸ್ಸಾಯಿತೆಂದು ಕಳವಳಪಡದಿರು ಕನಕ, ಹೂದೋಟದ ತಿಮ್ಮಪ್ಪನಲ್ಲಿಯೇ ನಿನಗೆ ದರುಶನ ನೀಡುವೆ’ ಎಂದನಂತೆ. ಆಗ ಕನಕದಾಸರು ಹೂದೋಟದಲ್ಲಿಯೇ ತಮ್ಮ ಪ್ರೀತಿಯ ಭಗವಂತನ ದರ್ಶನ ಪಡೆದರಂತೆ.