– ಗಾಯತ್ರಿ ದೇವಿ
ಕಲಿಯುಗದ ಅಂತ್ಯ ಮತ್ತು ಸತ್ಯಯುಗದ ಆರಂಭದ ಸಂಧಿಕಾಲದಲ್ಲಿ ಕಲ್ಕಿಯ ಅವತಾರವಾಗುತ್ತದೆ ಎಂದು ಭಾಗವತದಲ್ಲಿ ಭವಿಷ್ಯ ನುಡಿಯಲಾಗಿದೆ. ಅಂದರೆ ಕಲ್ಕಿಯು ಇನ್ನೂ ಅವತರಿಸಿಲ್ಲ, ಅದಕ್ಕೆ ಇನ್ನೂ 4,27,000 ವರ್ಷಗಳಷ್ಟು ಸಮಯವಿದೆ!
ದಶಾವತಾರದ ಹತ್ತನೆಯ ಅವತಾರವಾದ ಕಲ್ಕಿಯ ಆವಿರ್ಭಾವ ಕುರಿತು ಈಗ ಪ್ರಸ್ತಾಪಿಸಲು ಕಾರಣಗಳಿವೆ. ಕಲ್ಕಿಯ ಅವತಾರವಾಗಿದೆ, ದುಷ್ಟರಿಗೆ ಶಿಕ್ಷೆ ಕಾದಿದೆ ಎಂದು ಹೇಳುತ್ತಾ ಅನೇಕ ಜನರು ಸ್ವಯಂ ಘೋಷಿಸಿಕೊಂಡಿರುವುದೂ ಉಂಟು. ಕೆಲವು ವರ್ಷಗಳ ಹಿಂದೆ ಕಲ್ಕಿ ಭಗವಾನ್ ಹೆಸರು ಪ್ರಚಾರದಲ್ಲಿ ಇದ್ದುದನ್ನು ನೆನಪು ಮಾಡಿಕೊಳ್ಳಬಹುದು. ಮತ್ತು ಇದೀಗ ಕಲ್ಕಿ ಅವತಾರದ ಬಗೆಗೆ ಒಂದು ಬೃಹತ್ ಚಲನಚಿತ್ರವು ಎಲ್ಲರ ಗಮನ ಸೆಳೆಯುತ್ತಿದೆ.
ಈ ಚಿತ್ರವನ್ನು ಭವಿಷ್ಯ ಜಗತ್ತಿನ ಅದ್ಭುತ ಸ್ವರೂಪ ಎಂದು ರೂಪಿಸಲಾಗಿದೆ. ಕುರುಕ್ಷೇತ್ರ ಯುದ್ಧದ ಅನಂತರ ಕಲಿಯುಗದ ಪ್ರಾರಂಭ. ಆರು ಸಾವಿರ ವರ್ಷಗಳ ಅನಂತರ, ಅಂದರೆ 2898ರಲ್ಲಿ ಅದ್ಭುತ ಘಟನೆ ಸಂಭವಿಸುತ್ತದೆ ಎಂದು ಚಿತ್ರ ಸಾರುತ್ತದೆ. ಪ್ರಯೋಗಾಲಯದಲ್ಲಿ ಒಂದು ವಿಷಯವಾಗಿರುವ ಸಮ್-80ರ (ಮುಂದೆ ಸುಮತಿ) ಗರ್ಭದಲ್ಲಿರುವ ಮಗು ಕಲ್ಕಿಯನ್ನು ಕಾಪಾಡುವ ಧ್ಯೇಯ ಹೊಂದಿರುವ ಗುಂಪುಗಳ ಹೋರಾಟ ಈ ಚಿತ್ರದ ಕಥೆ.
ಅದು ಹೇಗಾದರೂ ಇರಲಿ, ಕಲ್ಕಿ ಅವತಾರ ಸಮೀಪಿಸುತ್ತಿದೆಯೇ ಎಂದು ಜನರು ಈಗ ಪುನಃ ಕೇಳುತ್ತಿದ್ದಾರೆ. ಹಾಗಾದರೆ ಕಲ್ಕಿಯ ಆಗಮನ ಯಾವಾಗ? ಅವನ ಅವತಾರ ಕಾಲದ ಬಗೆಗೆ ಚರ್ಚೆ ನಡೆದಿದೆ. ಆದರೆ ಇದನ್ನು ಕುರಿತು ಭಾಗವತದಲ್ಲಿ ಸ್ಪಷ್ಟವಾದ ಭವಿಷ್ಯವಾಣಿ ಇದೆ. ಕಲಿಯುಗದ ಕೊನೆ ಮತ್ತು ಸತ್ಯಯುಗದ ಆರಂಭದ ಸಂಧಿಕಾಲದಲ್ಲಿ ಕಲ್ಕಿಯ ಅವತಾರ ಎಂದು ಅದು ಹೇಳಿದೆ. ಸದ್ಯದ ಕಲಿಯುಗವು 4,32,000 ವರ್ಷಗಳ ಕಾಲಾವಧಿ ಉಳ್ಳದ್ದು. ಈ ಕಾಲಾವಧಿಯಲ್ಲಿ ಕುರುಕ್ಷೇತ್ರ ಮಹಾಯುದ್ಧದ ಅನಂತರ ಮತ್ತು ಪರೀಕ್ಷಿತ ಮಹಾರಾಜನ ಆಳ್ವಿಕೆಯ ಅನಂತರ ನಾವು ಕೇವಲ ಐದು ಸಾವಿರ ವರ್ಷಗಳನ್ನು ಮಾತ್ರ ಕಳೆದಿದ್ದೇವೆ. ಆದುದರಿಂದ ಕಲಿಯುಗಕ್ಕೆ ಇನ್ನೂ 4,27,000 ವರ್ಷಗಳ ಕಾಲಾವಧಿ ಬಾಕಿ ಇದೆ. ಅಂದರೆ ಭಾಗವತದಲ್ಲಿ ಹೇಳಿರುವಂತೆ ಇಷ್ಟು ವರ್ಷಗಳ ಅನಂತರ ಕಲ್ಕಿಯ ಅವತಾರ ಸಂಭವಿಸುವುದು. ಕಲ್ಕಿಯ ತಂದೆಯ ಹೆಸರು ವಿಷ್ಣುಯಶನೆಂದೂ ಅವನು ಒಬ್ಬ ವಿದ್ಯಾವಂತ ಬ್ರಾಹ್ಮಣನಾಗಿರುವನೆಂದು ಹೇಳಲಾಗಿದೆ. ಅಲ್ಲದೆ, ಶಂಭಲ ಎನ್ನುವ ಹಳ್ಳಿಯ ಹೆಸರನ್ನೂ ಪ್ರಸ್ತಾಪಿಸಲಾಗಿದೆ. ಅವನು ದೇವದತ್ತ ಎನ್ನುವ ಕುದುರೆಯನ್ನೇರಿ ಕೈಯಲ್ಲಿ ಖಡ್ಗ ಹಿಡಿದು ಲೋಕದಲ್ಲಿ ಸುತ್ತಾಡುತ್ತ ರಾಜವೇಷದಲ್ಲಿರುವ ಸಾವಿರಾರು ದುಷ್ಟರನ್ನು ಕೊಲ್ಲುತ್ತಾನೆ. ಆಗ ಹೊಸ ಸತ್ಯಯುಗದ ಕುರುಹುಗಳು ತೋರಲಾರಂಭಿಸುತ್ತವೆ.
ಅಷ್ಟು ವರ್ಷಗಳೇಕೆ? ಭೂಮಿಯಲ್ಲಿ ಪಾಪದ ಕೊಡ ಇನ್ನೂ ತುಂಬಿಲ್ಲ! ಕಳ್ಳತನ, ಕೊಲೆ, ಭ್ರಷ್ಟಾಚಾರ, ದ್ವೇಷ, ಅಸೂಯೆ, ಪರಸ್ಪರ ಕತ್ತಿ ಮಸೆಯುವುದು ಎಲ್ಲವೂ ನಡೆಯುತ್ತಲಿದೆ. ಅವು ಮಿತಿ ಮೀರಿದಾಗ, ಆಳರಸರೇ ದರೋಡೆಕಾರರ ಮಟ್ಟಕ್ಕೆ ಇಳಿದಾಗ ದುಷ್ಟರನ್ನು ಸಂಹರಿಸುವ ಉದ್ಧಾರಕನಾಗಿ ದೇವೋತ್ತಮ ಪರಮ ಪುರುಷನು ಕಲ್ಕಿಯ ಅವತಾರದಲ್ಲಿ ಬರುತ್ತಾನೆ.
ಅಂದರೆ ಈ ಕಲಿಯುಗದ ಅಂತ್ಯದ ವೇಳೆಗೆ ಕಲ್ಕಿಯು ಅವತರಿಸುತ್ತಾನೆ ಎಂದು ಧರ್ಮಗ್ರಂಥಗಳು ಸ್ಪಷ್ಟವಾಗಿ ತಿಳಿಸಿವೆ. ಕಲಿಯುಗದ ಅವಗುಣಗಳು ಸಹಿಸಲಾರದಷ್ಟು ಹಂತವನ್ನು ಏರಿದಾಗ, ಅಧರ್ಮಿಯರನ್ನು ನಾಶಪಡಿಸಲು ದೇವೋತ್ತಮ ಪರಮ ಪುರುಷನು ಕಲ್ಕಿಯ ರೂಪದಲ್ಲಿ ಅವತರಿಸುವನು ಎಂದು ಭಾಗವತದಲ್ಲಿ ಹೇಳಲಾಗಿದೆ. ಭಗವಂತನ ಅವತಾರದ ಬಗೆಗೆ ಊಹಪೋಹ ಮಾಡುವ ಬದಲು ಭಾಗವತದ ಭವಿಷ್ಯವಾಣಿಯನ್ನು ಅರ್ಥಮಾಡಿಕೊಳ್ಳುವುದು ಸೂಕ್ತ.