ಕಲ್ಲಹಳ್ಳಿ ಚಿಕ್ಕ ತಿರುಪತಿ – ವಸಿಷ್ಠ ಮಹರ್ಷಿ ಕ್ಷೇತ್ರ

ಬೆಂಗಳೂರಿನಿಂದ ಸುಮಾರು 55 ಕಿ.ಮೀ. ದೂರದಲ್ಲಿ ಬೆಂಗಳೂರು-ಕನಕಪುರ ರಾಜ್ಯ ಹೆದ್ದಾರಿಯ ಮಾರ್ಗವಾಗಿ ಕಲ್ಲಹಳ್ಳಿ ಸೇರಬಹುದು. ಕನಕಪುರ ಸೇರುವುದಕ್ಕೆ ಒಂದು ಕಿ.ಮೀ. ಮುಂಚೆಯೇ `ಕಲ್ಲಹಳ್ಳಿ ಚಿಕ್ಕ ತಿರುಪತಿ – ವಸಿಷ್ಠ ಮಹರ್ಷಿಕ್ಷೇತ್ರ’ ಎಂಬ ನಾಮಫಲಕ ಕಾಣಿಸುತ್ತದೆ. ಇಲ್ಲಿ ತಿರುಗಿ ಸುಮಾರು ಮುಕ್ಕಾಲು ಕಿ.ಮೀ. ಹೋದರೆ ಕಲ್ಲಹಳ್ಳಿ ಸಿಗುತ್ತದೆ. ಕಲ್ಲಹಳ್ಳಿಗೆ ಮೈಸೂರಿನಿಂದ ಮಳವಳ್ಳಿ ಮಾರ್ಗ ಹಾಗೂ ರಾಮನಗರ ಮಾರ್ಗದಿಂದಲೂ ಬರಬಹುದು. ಕನಕಪುರ ಬಸ್‌ನಿಲ್ದಾಣದಲ್ಲಿ ಇಳಿದರೆ, ಕಲ್ಲಹಳ್ಳಿಗೆ ಹೋಗಲು ಆಟೋರಿಕ್ಷಾಗಳು ಸಿಗುತ್ತವೆ.

ಶ್ರೀಕ್ಷೇತ್ರ ಕಲ್ಲಹಳ್ಳಿಯು  ಬೆಟ್ಟಗಳ ಮನೋಹರವಾದ ತಾಣವಾಗಿ, ತುಂಬಿದ ವನಸಿರಿಗಳಿಂದ ಕೂಡಿದ ಪ್ರದೇಶವಾಗಿದೆ. ಪೂರ್ವಕ್ಕೆ ಬಿಳಿಕಲ್‌ ಬೆಟ್ಟ ಹಾಗೂ ಬಿಳಿಗಿರಿ ರಂಗನ ಬೆಟ್ಟ; ಪಶ್ಚಿಮಕ್ಕೆ ಬಾಣಂತಿ ಮಾರಿ ಬೆಟ್ಟ; ದಕ್ಷಿಣಕ್ಕೆ ಕಬ್ಬಾಳು ದುರ್ಗ; ಉತ್ತರಕ್ಕೆ ರಾಮದೇವರ ಬೆಟ್ಟ – ಹೀಗೆ ಬೆಟ್ಟಗಳಿಂದ ಸುತ್ತುವರಿದು ಕಣ್ಮನಗಳನ್ನು ತಣಿಸುವ ಪ್ರಕೃತಿಯ ಸೊಬಗು, ಕ್ಷೇತ್ರವನ್ನು ಸಂದರ್ಶಿಸುವವರ ಮನಸ್ಸನ್ನು ಸೂರೆಗೊಳ್ಳುತ್ತದೆ. ಅರ್ಕಾವತಿ ನದಿಯು ಕ್ಷೇತ್ರದ ಹತ್ತಿರದಲ್ಲಿಯೇ ಹರಿಯುತ್ತದೆ. ಪಕ್ಕದ ಗುಡ್ಡೆಕಲ್ಲು ಪ್ರದೇಶವು ಶ್ರೀ ತುಳಸಿ ಗಿಡಗಳಿಂದ ಆವೃತವಾಗಿದೆ.

ಈ ಸೊಬಗಿನ ಬೀಡಿನಲ್ಲಿ, ನೆಲಸಿರುವ ನಯನ ಮನೋಹರವಾದ ಶ್ರೀ ಶ್ರೀನಿವಾಸನು ಗದಾಹಸ್ತಧಾರಿ. ಅನುಗ್ರಹ ಪೂರ್ವಕವಾದ ದಿವ್ಯದೃಷ್ಟಿ, ಮುಗುಳ್ನಗೆಯಿಂದ ಕೂಡಿದ ಮುದ್ದಾದ ತುಟಿಗಳು, ಸೂಕ್ಷ್ಮವಾದ ನಾಸಿಕ, ಅಲೌಕಿಕ ತೇಜಸ್ಸಿನಿಂದ ಕೂಡಿದ ಮುಖಮಂಡಲ, ಸುಂದರವಾದ ಕರ್ಣಕುಂಡಲಗಳು, ದಿವ್ಯವಾದ ಕಿರೀಟ, ಕೌಸ್ತುಭಹಾರಾದಿಗಳಿಂದ ಹಾಗೂ ಯಜ್ಞೋಪವೀತದಿಂದ ಅಲಂಕೃತವಾದ ವಕ್ಷ ಸ್ಥಳ, ಮನೋಹರವಾದ ಕಟಿಭಾಗ ಪಾಂಚಜನ್ಯ, ಗದೆ, ದಿವ್ಯಾಯುಧಗಳಿಂದ ಕೂಡಿದ್ದಾನೆ. ಮೂಲ ವಿಗ್ರಹದ ವಕ್ಷ ಸ್ಥಳದ ಬಲಭಾಗದಲ್ಲಿ ಎರಡು ಅಂಗುಲ ಪ್ರಮಾಣದಲ್ಲಿ ಪದ್ಮ ಹಸ್ತಧಾರಿಯಾಗಿರುವ ಅಮ್ಮನವರು ಇದ್ದಾರೆ. ಹೀಗೆ ಶ್ರೀನಿವಾಸನದು ದಿವ್ಯ ಮಂಗಳ ವಿಗ್ರಹ.

ತಿರುಮಲೆಯ ಶ್ರೀ ವೇಂಕಟೇಶ್ವರನು ಕಟಿಹಸ್ತಧಾರಿ.  ಹಾಗೆಯೇ ಬಿಳಿಗಿರಿರಂಗನ ಬೆಟ್ಟದಲ್ಲಿರುವ ಮೂರ್ತಿಯೂ ಕಟಿಹಸ್ತಧಾರಿ. ಇವೆರಡು ಕ್ಷೇತ್ರಗಳ ಮಧ್ಯದಲ್ಲಿರುವ ಕಲ್ಲಹಳ್ಳಿ ಶ್ರೀನಿವಾಸನು ಗದಾಹಸ್ತಧಾರಿ. ಆ ಮೂರು ಕ್ಷೇತ್ರಗಳೂ ಶ್ರೀ ವಸಿಷ್ಠ ಮಹರ್ಷಿಗಳ ತಪಸ್ಸಿನಿಂದ ಪವಿತ್ರವಾದ ಪುಣ್ಯಕ್ಷೇತ್ರಗಳು.

ಸ್ಥಳ ಪುರಾಣ

ಬ್ರಹ್ಮಪುತ್ರರಾದ ವಸಿಷ್ಠ ಮಹಾಮುನಿಗಳು ವೇದವೇದಾಂಗ ತತ್ತ್ವಜ್ಞನಾಗಿ ವಂಶೋದ್ಧಾರ ಮಾಡುವ ಪುತ್ರನು ಬೇಕೆಂದು ಬಯಸಿ ವೆಂಕಟಾದ್ರಿಯನ್ನು ಸೇರಿ ಶ್ರೀ ವೆಂಕಟೇಶ್ವರನನ್ನು ಉದ್ದೇಶಿಸಿ ಪಂಚಾಗ್ನಿ ಮಧ್ಯದಲ್ಲಿ ನೂರು ವರ್ಷಗಳ ಕಾಲ ತಪಸ್ಸು ಮಾಡಿ ಪೂಜಿಸಿದರು. ಇವರ ತಪಸ್ಸಿಗೆ ಮೆಚ್ಚಿ ಶ್ರೀ ವೆಂಕಟೇಶ್ವರನು, “ವೆಂಕಟಾದ್ರಿಗೆ ಆಗ್ನೇಯ ದಿಕ್ಕಿನಲ್ಲಿ ಯಾದವಗಿರಿಗೆ ಐದು ಗಾವುದ ದೂರದಲ್ಲಿ ಕಾವೇರಿ ನದಿಗೆ ಒಂದು ಗಾವುದ ದೂರದಲ್ಲಿರುವ ಶ್ವೇತಾದ್ರಿ ಬೆಟ್ಟಕ್ಕೆ ಹೋಗಿ, ಅಲ್ಲಿ ತಪಸ್ಸು ಆಚರಿಸು. ಅಲ್ಲಿ ನಿನಗೆ ಪ್ರತ್ಯಕ್ಷನಾಗುತ್ತೇನೆ” ಎಂದು ಹೇಳಿ, ಅಂತರ್ಧಾನನಾದನು.

ಆದೇಶದಂತೆ, ವಸಿಷ್ಠ ಮಹರ್ಷಿಗಳು ಪ್ರಯಾಣ ಮಾಡುತ್ತಿರಲು, ಶ್ವೇತಾದ್ರಿಯನ್ನು ತಲಪುವ ಮೊದಲೇ, ಈಗ ಶ್ರೀಕ್ಷೇತ್ರ ಕಲ್ಲಹಳ್ಳಿ ಎಂದು ಕರೆಯಲ್ಪಡುತ್ತಿರುವ, ಹಿಂದೆ ನದಿ ಕೊಳಗಳಿಂದಲೂ, ಕಮಲ ಪುಷ್ಪಗಳ ಪರಿಮಳದೊಂದಿಗೂ ಕೂಡಿದ, ದಟ್ಟವಾದ ಈ ಅರಣ್ಯ ಪ್ರದೇಶವು, ಮಹರ್ಷಿಗಳ ಅಂತಃಪ್ರೇರಣೆಯಿಂದ ಅವರ ತಪೋಭೂಮಿ ಆಯಿತು. ಈ ಪ್ರದೇಶದಲ್ಲಿ ಅರುಂಧತಿ ಸಮೇತರಾಗಿ ವಸಿಷ್ಠ ಮುನಿಗಳು ಆಶ್ರಮವಾಸಿಗಳಾಗಿ, ಶ್ರೀ ಅಷ್ಟಾಕ್ಷರ ಮಹಾಮಂತ್ರ ಹಾಗೂ ದ್ವಾದಶಾಕ್ಷರ ಮಹಾಮಂತ್ರಗಳನ್ನು ಜಪಿಸಿ ಅನೇಕ  ವರ್ಷಗಳ ಕಾಲ ತಪಸ್ಸನ್ನು ಆಚರಿಸಿದರು. ಈ ತಪಃ ಪ್ರಭಾವದಿಂದ ಈ ಪ್ರದೇಶವೆಲ್ಲಾ `ನಾರಾಯಣ’ ನಾಮ ಸ್ಮರಣೆಯಿಂದ ಸ್ಪಂದಿಸುತ್ತಿತ್ತು. ಶ್ರೀ ಶ್ರೀನಿವಾಸನು ಗದಾಹಸ್ತಧಾರಿಯಾಗಿ ಮಹರ್ಷಿಗಳಿಗೆ ಪ್ರತ್ಯಕ್ಷನಾಗಿ, ವಂಶೋದ್ಧಾರಕನಾದ ಮಗನನ್ನು ಅನುಗ್ರಹಿಸುವುದಾಗಿ ವರವನ್ನಿತ್ತು,

“ಈ ರೂಪದಲ್ಲಿ ನೀನು ನನ್ನನ್ನು ಆರಾಧಿಸು. ಅನೇಕ ವರ್ಷಗಳು ತಪಸ್ಸನ್ನು ಆಚರಿಸುತ್ತಾ ಇರು. ಅನಂತರ ಸತ್ತ್ವಮಯ ಪೂರ್ಣವಾದ ಈ ಶ್ರೀವಿಗ್ರಹವನ್ನು ಆಶ್ರಮದ ಸಮೀಪದಲ್ಲಿರುವ ಸರೋವರದಲ್ಲಿ ಜಲಾವಾಸದಲ್ಲಿಟ್ಟು, ಆಗ್ನೇಯ ದಿಕ್ಕಿಗೆ ಪ್ರಯಾಣ ಬೆಳೆಸು. ಹಿಂದೆ ನಿನಗೆ ತಿಳಿಸಿದಂತೆ, ಶ್ವೇತಾದ್ರಿ ಬೆಟ್ಟದಲ್ಲಿ ಅಷ್ಟಾಕ್ಷರ ಮಹಾಮಂತ್ರದಿಂದ ತಪಸ್ಸನ್ನು ಆಚರಿಸು, ನಿನಗೆ ಕಟಿಹಸ್ತ ಶ್ರೀನಿವಾಸನಾಗಿ ದರ್ಶನ ಕೊಡುತ್ತೇನೆ. ಅಲ್ಲಿ ಅನಂತರ ನನ್ನನ್ನು ಪ್ರತಿಷ್ಠಾಪಿಸು. ಈ ಎರಡು ಕ್ಷೇತ್ರಗಳ ಯಾತ್ರೆ ಮಾಡಿದರೆ, ತಿರುಪತಿ ಕ್ಷೇತ್ರಕ್ಕೆ ಯಾತ್ರೆ ಮಾಡುವುದರ ಫಲವನ್ನೇ ಅನುಗ್ರಹಿಸುವೆನು” ಎಂದು ಅಪ್ಪಣೆ ಕೊಡಿಸಿದನು.

ವಸಿಷ್ಠ ಮಹರ್ಷಿಗಳು, ಶ್ವೇತಾದ್ರಿ ಬೆಟ್ಟಕ್ಕೆ ತೆರಳಿ, ತಪಸ್ಸು ಮಾಡಿ, ಅನುಗ್ರಹಿತರಾಗಿ ಸ್ವಾಮಿಯನ್ನು ಪ್ರತಿಷ್ಠೆ ಮಾಡಿದರು. (ಈ ಶ್ವೇತಾದ್ರಿಯೇ ಈಗ ಬಿಳಿಗಿರಿ ರಂಗನ ಬೆಟ್ಟವೆಂದು ಪ್ರಸಿದ್ಧವಾಗಿದೆ). ಹೀಗೆ ವಸಿಷ್ಠ ಮಹರ್ಷಿಗಳು ಭಗವದನುಗ್ರಹದಿಂದ ಪುತ್ರಲಾಭಾದಿ ಸಿದ್ಧಿ ಪಡೆದು, ದಕ್ಷಿಣ ಭಾರತದ ಅನೇಕ ಕ್ಷೇತ್ರಗಳಲ್ಲಿ ಶ್ರೀ ಶ್ರೀನಿವಾಸನ ಶ್ರೀವಿಗ್ರಹಗಳು ಪ್ರತಿಷ್ಠಿತವಾಗಲು ಕಾರಣಭೂತರಾದರು.

ನೂರೆಂಟು ತಿರುಪತಿ ಕ್ಷೇತ್ರಗಳಲ್ಲಿ ಕಲ್ಲಹಳ್ಳಿಯು ಒಂದಾಗಿ, ಚಿಕ್ಕ ತಿರುಪತಿ ಎಂದು ಪ್ರಸಿದ್ಧವಾಗಿ, ಯಾತ್ರಾ ಸ್ಥಳವಾಗಿದೆ.

ದೇವಸ್ಥಾನ ನಿರ್ಮಾಣ:

ಕಲ್ಲಹಳ್ಳಿ ಪ್ರದೇಶ ಹಿಂದೆ ಚನ್ನಪಟ್ಟಣದ ನಾಯಕರ ಆಳ್ವಿಕೆಗೆ ಒಳಪಟ್ಟಿತ್ತು ಎಂದು ತಿಳಿದು ಬರುತ್ತದೆ. ಈ ಪ್ರಾಂತ್ಯದಲ್ಲಿ ಆಳುತ್ತಿದ್ದ ಆಳರಸರ ಕನಸಿನಲ್ಲಿ ಸ್ವಾಮಿಯಿಂದ ಈ ರೀತಿ ಅಪ್ಪಣೆ ಆಯ್ತು,

“ವಸಿಷ್ಠ ಮಹರ್ಷಿಗಳಿಂದ ಪೂಜಿಸಲ್ಪಡುತ್ತಿದ್ದ ನನ್ನ ಮೂರ್ತಿ, ಬನ್ನಿ ಕೊಡಲು ಗ್ರಾಮದ ಬಳಿ ಇರುವ ಸರೋವರದಲ್ಲಿ ಜಲಾವಾಸದಲ್ಲಿದೆ. ನೀನು ನನ್ನನ್ನು ಗಾಡಿಯಲ್ಲಿ ಬಿಜಯ ಮಾಡಿಸಿಕೊಂಡು ಹೋಗಿ, ಗಾಡಿಯ ಅಚ್ಚು ಎಲ್ಲಿ ಮುರಿಯುತ್ತದೆಯೋ, ಅದೇ ನಾನು ನೆಲಸಲು ಪವಿತ್ರ ಸ್ಥಳವಾಗಿರುವುದರಿಂದ, ನನ್ನನ್ನು ಈ ಸ್ಥಳದಲ್ಲಿ ಪ್ರತಿಷ್ಠಾಪಿಸು. ಸರೋವರವನ್ನು ಗುರುತಿಸಲು ಅರಮನೆಯಿಂದ ನಾನು ಜಲಾವಾಸದಲ್ಲಿರುವ ಸರೋವರದವರೆಗೂ ಶ್ರೀ ತುಳಸಿಗಳು ದಾರಿಯುದ್ದಕ್ಕೂ ಕಾಣಬರುತ್ತದೆ.”

ಸ್ವಾಮಿಯು ಕನಸಿನಲ್ಲಿ ತಿಳಿಸಿದಂತೆಯೇ ಶ್ರೀ ತುಳಸಿಗಳನ್ನು ಅನುಸರಿಸಿ ಶ್ರೀ ಶ್ರೀನಿವಾಸನ ವಿಗ್ರಹವು ಇರುವ ಸರೋವರವನ್ನು ತಲಪಿ, ಅಲ್ಲಿ ಭಕ್ತಿ ಶ್ರದ್ಧೆಗಳಿಂದ ಪೂಜಿಸಿ, ಪ್ರಾರ್ಥಿಸಲಾಗಿ, ಸ್ವಾಮಿಯು ಭಕ್ತರ ಪೂಜಾದಿಗಳಿಂದ ಸಂತುಷ್ಟನಾಗಿ ನೀರಿನ ಮಟ್ಟಕ್ಕೆ ಬಂದು ದರ್ಶನವಿತ್ತನು. ನೆರೆದ ಭಕ್ತವೃಂದ ಪುಲಕಿತರಾಗಿ, ಗೋವಿಂದ ನಾಮಸ್ಮರಣೆಯಿಂದ ಶ್ರೀ ವಿಗ್ರಹವನ್ನು ಗಾಡಿಗೆ ಬಿಜಯ ಮಾಡಿಸಿದರು. ವೇದೋಪನಿಷತ್ತು ಪಾರಾಯಣ, ಭಜನೆ, ವಾದ್ಯಗಳು, ರಾಜಮರ್ಯಾದೆಯ ಸಂಕೇತಗಳಿಂದ ಕೂಡಿದ ಸ್ವಾಮಿಯ ಬಿಜಯ ಮಾಡುತ್ತಿದ್ದಾಗ, ಗಾಡಿಯ ಅಚ್ಚು ಈಗ ಸ್ವಾಮಿಯು ನೆಲೆಸಿರುವ ಸ್ಥಳದಲ್ಲಿ ಮುರಿದು ಬಿದ್ದಿತು. ಈ ಸ್ಥಳದಲ್ಲೇ ಶ್ರೀ ವಿಗ್ರಹವನ್ನು ಶುಭ ಮಹೂರ್ತದಲ್ಲಿ ಪ್ರತಿಷ್ಠೆ ಮಾಡಿದರು.

ಶ್ರೀ ಸ್ವಾಮಿಯವರ ಪ್ರತಿಷ್ಠಾನಂತರ, ಕೂಡಲೆ ಗರ್ಭಗುಡಿ ಹಾಗೂ ಸುಖನಾಸಿ ನಿರ್ಮಾಣವಾಯ್ತು. ಮುಂದೆ ದೇವಾಲಯದ ಅಭಿವೃದ್ಧಿ ಕಾರ್ಯಗಳು ನಡೆದು ಕಾಲಾನುಕ್ರಮದಲ್ಲಿ ಪ್ರಾಕಾರ ಹಾಗೂ ಮಂಟಪಗಳು ಆದವು.

ದೇವಾಲಯವು ಊರಿನ ಮಧ್ಯಭಾಗದಲ್ಲಿ ಪೂರ್ವಾಭಿಮುಖವಾಗಿ ಇದೆ. ಎರಡು ಗೋಪುರಗಳು ಇವೆ. ದೇವಸ್ಥಾನದ ಮಹಾದ್ವಾರವು ಗೋಪುರವನ್ನು ಹೊಂದಿದೆ. ಗರ್ಭಗುಡಿಯ ಮೇಲೆ ಒಳಗಿನ ಗೋಪುರ ಇದೆ. ಇದೇ `ಆನಂದ ನಿಲಯ’. ತಿರುಮಲೆ ವೆಂಕಟೇಶ್ವರಸ್ವಾಮಿ ಗುಡಿಯಲ್ಲಿರುವ ಗೋಪುರದ ಮಾದರಿಯಲ್ಲಿಯೇ ಇದೆ. ವಿಶಾಲವಾದ ಪ್ರಾಕಾರ ಹೊಂದಿದೆ. ದೇವಸ್ಥಾನ, ಮೂರು ಭಾಗಗಳ ಆವರಣದಿಂದ ಕೂಡಿದೆ. ಮುಂಭಾಗದಲ್ಲಿ ಕಲ್ಯಾಣ ಮಂಟಪ ಹಾಗೂ ಐದು ಮಂಟಪಗಳು ದೇವರ ಉತ್ಸವಾದಿ ಕಾರ್ಯಗಳಲ್ಲಿ ಉಪಯೋಗಿಸಲು ನಿರ್ಮಿತವಾಗಿದೆ.

ಈ ಕ್ಷೇತ್ರದ ಒಂದು ವಿಶೇಷ ಅಂದರೆ ಸುಖನಾಸಿಯಲ್ಲಿ ಗರ್ಭಗುಡಿಯ ಬಾಗಿಲಿನ ಬಲಭಾಗಕ್ಕೆ ಶ್ರೀ ಆದಿಶೇಷನ ವಿಗ್ರಹ ಇದೆ. ಇದನ್ನು ನೋಡಿದರೆ ತ್ರೇತಾಯುಗದಲ್ಲಿ ಶ್ರೀರಾಮಾವತಾರದ ಕಾಲದಲ್ಲಿ ಶ್ರೀರಾಮರಿಗೆ ಲಕ್ಷ್ಮಣ ಸ್ವಾಮಿಯು ಅಹರ್ನಿಶಿ ಸೇವೆ ಮಾಡಿದ್ದು ಸ್ಮರಣೆಗೆ ಬರುತ್ತದೆ.

ಪರಮ ಸುಂದರವಾದ ಪಂಚಲೋಹದಿಂದ ಮಾಡಿದ ಉತ್ಸವ ಮೂರ್ತಿಗಳು ಇವೆ. ಸುಮಾರು ಒಂದೂವರೆ ಅಡಿ ಎತ್ತರದ ಸ್ವಾಮಿಯ ಮೂರ್ತಿಯ ಅಕ್ಕಪಕ್ಕದಲ್ಲಿ ಶ್ರೀದೇವಿ, ಭೂದೇವಿ ಮೂರ್ತಿಗಳು ಇವೆ.

ಧ್ವಜ ಸ್ತಂಭದಿಂದ ಪ್ರದಕ್ಷಿಣೆಗಾಗಿ ಹೊರಟರೆ, ಪಾಕಶಾಲೆ, ಪವಿತ್ರ ತೀರ್ಥಬಾವಿ, ಮಂಟಪಸಾಲು, ಬೃಂದಾವನ, ಸಂಜೀವಿನಿ ಸಂಜೀವರಾಯನ ಸನ್ನಿಧಿ ಹಾಗೂ ಯಾಗಶಾಲೆಗಳನ್ನು ಕಾಣಬಹುದು.

ಕಲ್ಲಹಳ್ಳಿ ಎಂಬ ಹೆಸರಿನ ಹಿನ್ನೆಲೆ

ತೇರು ಮೇಲಿರುವ ಸ್ವಾಮಿಗೆ ಮಹಾಮಂಗಳಾರತಿ ನಡೆಯುವಾಗ ಭಕ್ತಜನಸ್ತೋಮದ `ಗೋವಿಂದ’ ಎಂಬ ಕೂಗು ತಿರುಪತಿ ತಿಮ್ಮಪ್ಪನಿಗೆ ಮುಟ್ಟಿ, ಶ್ರೀ ವೆಂಕಟೇಶ್ವರನು, ಒಂದು ಮುಹೂರ್ತ ಕಾಲ ತಿರುಮಲೆಯನ್ನು ತೊರೆದು `ಚೋರನಂತೆ’ ಕಲ್ಲಹಳ್ಳಿಯ ಶ್ರೀನಿವಾಸನಲ್ಲಿ ಸೇರುವನಂತೆ. ಹೀಗೆ ಮುಹೂರ್ತ ಕಾಲದಲ್ಲಿ ತಿರುಮಲೆಯನ್ನು ಬಿಟ್ಟು ಬರುವ ಸ್ಮರಣೆಗಾಗಿ ಈ ಊರಿಗೆ `ಚೋರಪುರಿ’ ಎಂದು ಹೆಸರು ಬಂದಿತು. ಚೋರಪುರಿ ಕನ್ನಡದಲ್ಲಿ ಕಳ್ಳಹಳ್ಳಿ ಆಯಿತು.

ಅರ್ಚಕರ ಅನುವಂಶೀಯತೆ

ಶ್ರೀ ವಿಗ್ರಹವನ್ನು ಪ್ರತಿಷ್ಠಾಪಿಸಲಾದ ಅನಂತರ ಸ್ವಾಮಿಯ ದೈನಂದಿನ ಕೈಂಕರ್ಯಗಳನ್ನು ನಡೆಸಲು, ದಕ್ಷರು, ಯೋಗ್ಯರು ಹಾಗೂ ಅನುಷ್ಠಾನಪರರೂ ಬೇಕೆಂದು ಯೋಚಿಸುತ್ತಿರುವಲ್ಲಿ, ಮೇಲುಕೋಟೆ ಕಡೆಯಿಂದ ಈ ಗ್ರಾಮದ ಕಡೆ ಬರುತ್ತಿರುವ ದಂಪತಿಯನ್ನು ಕರೆತನ್ನಿ ಎಂದು ಸ್ವಾಮಿಯಿಂದ ಪ್ರೇರಣೆ ಆಯಿತು. ಈ ಸೂಚನೆಯಂತೆ ತೇಜಸ್ವಿಗಳಾದ ದಂಪತಿ ಬರುತ್ತಿರುವುದು ಗೋಚರವಾಗಿ, ಶ್ರೀ ಶ್ರೀನಿವಾಸನ ಅಪ್ಪಣೆಯನ್ನು ಅವರಿಗೆ ತಿಳಿಸಲಾಯಿತು. ಭಟ್ಟಾಚಾರ್ಯರು ಸಂತೋಷದಿಂದ ಒಪ್ಪಿ ಪೂಜಾಕೈಂಕರ್ಯಗಳನ್ನು ಕೈಗೊಂಡು ಇಲ್ಲೇ ನೆಲೆಸಿದರು. ಇವರ ವಂಶಸ್ಥರೇ ಈಗಲೂ ಸ್ವಾಮಿಯ ಅರ್ಚನೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ.

ಈ ಲೇಖನ ಶೇರ್ ಮಾಡಿ