ಚುಂಚನಕಟ್ಟೆಯ ಕೋದಂಡರಾಮ ದೇವಾಲಯ

ಸುಂದರ ಪ್ರಕೃತಿ, ಸೊಗಸಾದ ಜಲಪಾತವಿರುವ ರಮ್ಯ ಮನೋಹರ ವಾತಾವರಣದಲ್ಲಿ ಶ್ರೀರಾಮನ ದಿವ್ಯ ಸನ್ನಿಧಾನ. ಇಂಥ ಒಂದು ಸುಂದರ ಸಂಗಮ, ಚುಂಚನಕಟ್ಟೆಯಲ್ಲಿದೆ. ಒಂದು ಕಡೆ ಆಹ್ಲಾದಕರ ವಿಹಾರ ಮತ್ತು ಪ್ರಶಾಂತತೆಗೆ ಪೂರಕವಾದ ಜಲಪಾತವಿದ್ದರೆ, ಸನಿಹದಲ್ಲೇ ದಿವ್ಯ ಭಕ್ತಿಭಾವವನ್ನು ಸುರಿಸುವ ಶ್ರೀ ಕೋದಂಡರಾಮ ದೇವಾಲಯವಿದ್ದು, ಇದೊಂದು ಸೊಗಸಾದ ಪ್ರವಾಸೀತಾಣವಾಗಿದೆ ಹಾಗೂ ದಿವ್ಯಕ್ಷೇತ್ರವೂ ಆಗಿದೆ.

ತಲಪುವುದು ಹೇಗೆ?

ಚುಂಚನಕಟ್ಟೆ ಜಲಪಾತ, ಚುಂಚನಕಟ್ಟೆ ಹಳ್ಳಿಯ ಬಳಿಯಿದ್ದು, ಮೈಸೂರು ಜಿಲ್ಲೆಯ ಏಕೈಕ ಜಲಪಾತವಾಗಿದೆ. ಕೃಷ್ಣರಾಜನಗರ ತಾಲ್ಲೂಕಿನಲ್ಲಿರುವ ಈ ಜಲಪಾತವು, ಮೈಸೂರು ಬಸ್‌ ನಿಲ್ದಾಣದಿಂದ ಸುಮಾರು ಐವತ್ತು ಕಿ.ಮೀ. ದೂರವೂ ಕೃಷ್ಣರಾಜನಗರದಿಂದ ಸುಮಾರು ಹದಿನೈದು ಕಿ.ಮೀ. ದೂರವೂ ಇದೆ. ಮೈಸೂರು-ಹಾಸನ ಹೆದ್ದಾರಿಯಲ್ಲಿ ಪ್ರಯಾಣ ಮಾಡುತ್ತಾ, ಕೃಷ್ಣರಾಜನಗರ ವೃತ್ತದ ಎಡಕ್ಕೆ ತಿರುಗಿ ಅನಂತರ ಬಲಕ್ಕೆ ತಿರುಗಿದರೆ, ಮಣ್ಣಿನ ರಸ್ತೆಯೊಂದು ಜಲಪಾತಕ್ಕೆ ದಾರಿಯಾಗುತ್ತದೆ. ಇಲ್ಲಿ ಕಾವೇರಿ ನದಿಯು 80 ಅಡಿ ಎತ್ತರದಿಂದ ಮೆಟ್ಟಿಲು ಮೆಟ್ಟಿಲಾಗಿ ಬಹಳ ಆಕರ್ಷಕವಾಗಿ ಧುಮುಕುತ್ತಾ ಸುಂದರವಾದ ಜಲಪಾತ ನಿರ್ಮಿಸಿದೆ. ಮುಂದೆ ಹರಿಯುತ್ತಾ, ಕಾವೇರಿಯು ಹೇಮಾವತಿ ಮತ್ತು ಲಕ್ಷ್ಮಣತೀರ್ಥ ನದಿಗಳೊಂದಿಗೆ ಕೂಡಿಕೊಳ್ಳುತ್ತದೆ. ಈ ಜಲಪಾತವು ಚಿಕ್ಕದಾಗಿದ್ದರೂ ಮೆಟ್ಟಿಲು ಮೆಟ್ಟಿಲಾಗಿ ಬಂಡೆಗಳ ಮೇಲಿಂದ ಧುಮುಕುತ್ತಾ ಬಹಳ ಮನಮೋಹಕವಾಗಿದೆ. ಸುತ್ತಲಿನ ಬಂಡೆಗಲ್ಲುಗಳ ರಚನೆಗಳೂ ಆಕರ್ಷಕವಾಗಿವೆ. ಮೇಲೆ ದುಂಡಾಕಾರದ ಕಟ್ಟೆಯ ಬಳಿ ನಿಂತು ನೋಡುತ್ತಾ ಜಲಪಾತದ ಸೌಂದರ್ಯ ಸವಿಯಬಹುದು. ಮೆಟ್ಟಿಲುಗಳ ಸಹಾಯದಿಂದ ಕೆಳಗಿಳಿದು ಜಲಪಾತದ ಬಳಿಗೂ ಹೋಗಿ ಬಂಡೆಗಳ ಮೇಲೆ ನಿಂತು ಇಲ್ಲವೇ ಕುಳಿತು ನೋಡಬಹುದು. ಮಳೆಗಾಲದಲ್ಲಿ ನೀರು ತುಂಬಿ ಭೋರ್ಗರೆದು ಹರಿಯುತ್ತಾ ಬಹಳ ಸುಂದರವಾಗಿ ಕಾಣುತ್ತದೆ.

ಸ್ಥಳ ಪುರಾಣ:

ಈ ಜಲಪಾತದ ಶಬ್ದವನ್ನು `ಸೀತೆ ಮೊರೆವು’ ಎಂಬ ಹೆಸರಿನಿಂದ ಕರೆಯುತ್ತಾರೆ. ಇಲ್ಲಿಗೆ ಶ್ರೀರಾಮ, ಸೀತೆ, ಲಕ್ಷ್ಮಣರು ವನವಾಸ ಕಾಲದಲ್ಲಿ ಬಂದಿದ್ದರಂತೆ. ಆಗ ಸೀತೆಗೆ ಈ ಜಲಪಾತದಲ್ಲಿ ಸ್ನಾನ ಮಾಡುವುದು ಇಷ್ಟವಾಗಿ ಅವಳು  ಸ್ನಾನಕ್ಕೆ ಹೋಗುವಾಗ ಮಾತನಾಡುತ್ತಿರಲು, ಅವಳ ಮಾತಿನ ಶಬ್ದ ಜಲಪಾತದ ಸದ್ದನ್ನೂ ಮೀರಿ ಕೇಳಿಸುತ್ತಿತ್ತು. ಆಗ ರಾಮನು ಲಕ್ಷ್ಮಣನಿಗೆ, “ಅದೋ! ಸೀತೆಯ ಮೊರೆವು!” ಎಂದನು. ಅಂದಿನಿಂದ ಈ ಜಲಪಾತದ ಜೋರಾದ ಶಬ್ದವನ್ನು `ಸೀತೆ ಮೊರೆವು’ (ಮೊರೆವು = ಜೋರಾದ ಶಬ್ದ) ಎಂದು ಕರೆಯುತ್ತಾರೆ. ಆದರೆ ಒಂದು ವಿಸ್ಮಯವೆಂದರೆ ಹೊರಗೆ ದೂರದವರೆಗೂ ಜಲಪಾತದ ಜೋರಾದ ಶಬ್ದ ಕೇಳುತ್ತಿದ್ದರೂ, ಸನಿಹದಲ್ಲೇ ಇರುವ ದೇವಾಲಯದ ಗರ್ಭಗುಡಿಯಲ್ಲಿ ಈ ಶಬ್ದ ಒಂದಿಷ್ಟೂ ಕೇಳುವುದಿಲ್ಲ! ಇದಕ್ಕೆ ಕಾರಣ ಹೀಗೆ ಹೇಳುತ್ತಾರೆ. ಸೀತಾರಾಮ ಲಕ್ಷ್ಮಣರು ಇಲ್ಲಿ ನೆಲೆಸುವಾಗ, ಜಲಪಾತದ ಶಬ್ದ ಬಹಳ ಜೋರಾಗಿದ್ದು ಅವಳಿಗೆ ತೊಂದರೆಯಾಗುವುದೆಂದು ಸೀತೆ ರಾಮನಿಗೆ ಹೇಳಿದಳಂತೆ. ಆಗ ರಾಮನು ಅವಳಿಗೆ, ತನ್ನ ಎಡಕ್ಕಿರುವ ಬದಲು ಬಲಕ್ಕೆ ಬಂದರೆ ಶಬ್ದ ಕೇಳುವುದಿಲ್ಲ ಎಂದು ಹೇಳಲು ಅವಳು ಹಾಗೆಯೇ ಮಾಡಿದಳಂತೆ. ಹಾಗಾಗಿ ಇಲ್ಲಿ ಒಂದಿಷ್ಟೂ ಶಬ್ದ ಕೇಳುವುದಿಲ್ಲ. ಸೀತಾರಾಮರ ವಿಗ್ರಹಗಳನ್ನು ನೋಡಿದರೆ, ಸಾಮಾನ್ಯವಾಗಿ ರಾಮನ ಎಡಕ್ಕಿರುವ ಸೀತೆ ಇಲ್ಲಿ ಅವನ ಬಲಕ್ಕಿರುವುದು ಕಾಣುತ್ತದೆ. ಇನ್ನೊಂದು ಕಾರಣವನ್ನೂ ಕೆಲವರು ವಿವರಿಸುತ್ತಾರೆ. ಸೀತೆಯ ಜೋರಾದ ಮಾತನ್ನು ಕೇಳಿದ ರಾಮನು, ಸ್ತ್ರೀಯರು ಅಷ್ಟೊಂದು ಜೋರಾಗಿ ಮಾತನಾಡಬಾರದು ಎಂದನಂತೆ. ಕಾವೇರಿಯೂ ಸ್ತ್ರೀಯಾದುದರಿಂದ ಶ್ರೀರಾಮನ ಗರ್ಭಗುಡಿಯಲ್ಲಿ ತನ್ನ ಶಬ್ದ ಕೇಳಿಸದಂತೆ ಹರಿಯುತ್ತಾಳಂತೆ.

ಜಲಪಾತವು ತುಂಬಿ ಹರಿಯುವಾಗ, ನೀರಿನಲ್ಲಿ ಅರಿಷಿಣ ಬಣ್ಣದ ಛಾಯೆಯಿರುವುದನ್ನು ಕಾಣಬಹುದು. ಇದಕ್ಕೆ ಕಾರಣ ಸೀತೆಯು ಅರಿಷಿಣ ಮತ್ತು ಸೀಗೆಕಾಯಿಪುಡಿಯನ್ನು ಬಳಸಿ ಸ್ನಾನ ಮಾಡಿದುದು ಎಂದು ಹೇಳುತ್ತಾರೆ. ಸೀತೆಯ ಸ್ನಾನಕ್ಕೆ ಸಹಾಯವಾಗಲೆಂದು ಲಕ್ಷ್ಮಣನು ಒಂದು ಬಂಡೆಗೆ ಬಾಣ ಹೊಡೆದು ಅದರಿಂದ ಅರಿಷಿಣದ ನೀರು, ಎಣ್ಣೆ ಮತ್ತು ಸೀಗೆಕಾಯಿ ಮಿಶ್ರಿತ ನೀರಿನ ಮೂರು ಝರಿಗಳು ಬರುವಂತೆ ಮಾಡಿ ಅವು ಜಲಪಾತದೊಂದಿಗೆ ಬೆರೆತು ಅರಿಷಿಣದ ಬಣ್ಣವುಂಟಾಗಿದೆ ಎಂಬ ಕಥೆಯೂ ಇದೆ.

ಶ್ರೀರಾಮ, ಸೀತೆ ಲಕ್ಷ್ಮಣರು ಇಲ್ಲಿಗೆ ಬಂದಿದ್ದರೆಂಬ ಸ್ಥಳ ಪುರಾಣದ ಕಥೆಗೆ ಅನುಗುಣವಾಗಿ, ಜಲಪಾತದ ಸನಿಹವೇ ಬಲಗಡೆಯಲ್ಲಿ ಎತ್ತರವಾದ ಗುಡ್ಡವೊಂದರ ಮೇಲೆ ಪ್ರಾಚೀನವಾದ ಕೋದಂಡರಾಮ ದೇವಾಲಯವಿದೆ. ಈ ದೇವಾಲಯದ ದೊಡ್ಡ ಪ್ರಾಕಾರವನ್ನು ಮೈಸೂರು ಅರಸರಾಗಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರು ಕಟ್ಟಿಸಿದರು. ಕೆಳಗೆ ಒಂದು ಪುಟ್ಟ ಹನುಮಂತನ ದೇವಾಲಯವಿದೆ. ಇದನ್ನು ಸಂದರ್ಶಿಸಿ ಮೂವತ್ತು ಮೆಟ್ಟಿಲುಗಳನ್ನು ಹತ್ತಿ ದೇವಾಲಯಕ್ಕೆ ಹೋಗಬೇಕು. ದೇವಾಲಯದ ಗರ್ಭಗುಡಿಯಲ್ಲಿ ಶ್ರೀರಾಮ, ಸೀತೆ, ಲಕ್ಷ್ಮಣರ ಸುಂದರವಾದ ವಿಗ್ರಹಗಳಿವೆ. ರಾಮಲಕ್ಷ್ಮಣರ ಕೈಗಳಲ್ಲಿ ಧನುರ್ಬಾಣಗಳಿವೆ.

ಈ ಸ್ಥಳಕ್ಕೆ `ಚುಂಚನಕಟ್ಟೆ’ ಎಂಬ ಹೆಸರು ಬರಲು `ಚುಂಚ’ನೆಂಬ ಒಬ್ಬ ಬೇಡ ಕಾರಣನೆಂಬ ಕಥೆಯಿದೆ.  ಅವನು ತಪಸ್ಸು ಮಾಡಿದಾಗ, ಸೀತಾರಾಮಲಕ್ಷ್ಮಣರು ಅವನಿಗೆ ಒಲಿದು ಇಲ್ಲಿಯೇ ನೆಲೆ ನಿಂತರೆಂದು ಹೇಳುತ್ತಾರೆ.

ಹೀಗೆ ಸೀತಾಮಾತೆಯ ಸ್ನಾನದಿಂದ ಪವಿತ್ರವಾಗಿರುವ ಸುಂದರ ಜಲಪಾತವೂ, ಸೀತಾರಾಮಲಕ್ಷ್ಮಣರ ಸುಂದರ ಮೂರ್ತಿಗಳನ್ನುಳ್ಳ ಪ್ರಾಚೀನ ದೇವಾಲಯವೂ ಇರುವ ಈ ಸ್ಥಳ, ಒಂದು ದಿನದ ಪ್ರವಾಸಕ್ಕೆ ಬಹಳ ಪ್ರಶಸ್ತವಾಗಿದೆ.

ಈ ಲೇಖನ ಶೇರ್ ಮಾಡಿ