ಕೃಷ್ಣಪ್ರಜ್ಞೆ – ಮಿಥ್ಯಾ ಸರಹದ್ದುಗಳ ಆಚೆಯ ಆನಂದ ಸ್ಥಿತಿ

ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘದ ಸಂಸ್ಥಾಪಕರು ಮತ್ತು ಆಚಾರ್ಯರಾದ
ಶ್ರೀ ಶ್ರೀಮದ್‌ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು, ಸಿಯಾಟ್ಲ್‌ನ ವಾಷಿಂಗ್‌ಟನ್‌ ವಿಶ್ವವಿದ್ಯಾನಿಲಯದಲ್ಲಿ 1968ರ ಅಕ್ಟೋಬರ್‌ ತಿಂಗಳಿನಲ್ಲಿ ನೀಡಿದ ಉಪನ್ಯಾಸ.

ಬ್ರಹ್ಮಭೂತಃ ಪ್ರಸನ್ನಾತ್ಮಾ ನ ಶೋಚತಿ ನ ಕಾಂಕ್ಷತಿ

ಸಮಃ ಸರ್ವೇಷು ಭೂತೇಷು ಮದ್ಭಕ್ತಿಂ ಲಭತೇ ಪರಾಮ್‌

“ಆಧ್ಯಾತ್ಮಿಕ ನೆಲೆಯಲ್ಲಿರುವವನು ಕೂಡಲೇ ಪರಬ್ರಹ್ಮನ ಸಾಕ್ಷಾತ್ಕಾರವನ್ನು ಪಡೆಯುತ್ತಾನೆ ಮತ್ತು ಸಂಪೂರ್ಣವಾಗಿ ಪ್ರಸನ್ನನಾಗುತ್ತಾನೆ. ಅವನು ಎಂದೂ ಶೋಕಿಸುವುದಿಲ್ಲ ಅಥವಾ ಏನನ್ನೂ ಬಯಸುವುದಿಲ್ಲ. ಅವನು ಎಲ್ಲ ಜೀವಿಗಳನ್ನೂ ಒಂದೇ ಸಮನಾಗಿ ಕಾಣುತ್ತಾನೆ. ಇಂತಹ ಸ್ಥಿತಿಯಲ್ಲಿ ಅವನು ನನ್ನ  (ಕೃಷ್ಣನ) ಪರಿಶುದ್ಧ ಭಕ್ತಿಸೇವೆಯನ್ನು ಪಡೆಯುತ್ತಾನೆ.”

(ಭಗವದ್ಗೀತೆ 18.54)

ಕೃಷ್ಣಪ್ರಜ್ಞೆಯು ಕೇವಲ ಸಂಪೂರ್ಣ ಆನಂದವಾಗಿದೆ. ಏಕೆಂದರೆ ವ್ಯಕ್ತಿಯೊಬ್ಬನು ಎಲ್ಲ ಐಹಿಕ ಯಾತನೆಗಳಿಂದ ಮುಕ್ತನಾದ ಬಳಿಕ ತಲಪುವ ಹಂತ ಅದು. ಇದನ್ನು ಬ್ರಹ್ಮಭೂತ ಸ್ಥಿತಿ ಎಂದು ಕರೆಯುತ್ತಾರೆ. ಅನೇಕ ವರ್ಷಗಳ ಕಾಲ ಸೆರೆಮನೆಯಲ್ಲಿ ನರಳುತ್ತಿದ್ದು ಇದ್ದಕ್ಕಿದ್ದಂತೆಯೇ ಬಿಡುಗಡೆಯಾದ ವ್ಯಕ್ತಿಯ ಅನುಭವದ ಹಾಗೆ ಅದು ಇರುತ್ತದೆ. ಅವನಿಗೆ ಎಷ್ಟೊಂದು ಸಂಭ್ರಮವಾಗಿರುತ್ತದೆ! ಅದೇ ರೀತಿಯಲ್ಲಿ ಬ್ರಹ್ಮಭೂತ ಸ್ಥಿತಿಯನ್ನು ಪಡೆದವನೂ ಕೂಡ ಕೂಡಲೇ ಆನಂದಪರವಶನಾಗುತ್ತಾನೆ.

ಆ ಆನಂದಮಯ ಸ್ಥಿತಿಯ ಸ್ವರೂಪವೇನು? ನ ಶೋಚತಿ ಅತ್ಯಂತ ದೊಡ್ಡ ನಷ್ಟ ಸಂಭವಿಸಿದರೂ ಅವನು ಶೋಕಿಸುವುದಿಲ್ಲ. ಮತ್ತು ನ ಕಾಂಕ್ಷತಿ ಅಪಾರ ಪ್ರಮಾಣದ ಲಾಭಕ್ಕಾಗಿ ಅವನು ಹಾತೊರೆಯುವುದಿಲ್ಲ. ಅಲ್ಲದೆ ಆ ಸ್ಥಿತಿಯಲ್ಲಿ ಅವನು ಎಲ್ಲ ಜೀವಿಗಳನ್ನೂ ಆಧ್ಯಾತ್ಮಿಕವಾದ ಗುರುತಿನ ಸಮಾನವಾದ ನೆಲೆಯಲ್ಲಿ ಕಾಣುತ್ತಾನೆ. ಬೇರೊಂದು ಕಡೆ ಭಗವದ್ಗೀತೆಯು ಹೇಳುತ್ತದೆ, ಪಂಡಿತಾಃ ಸಮದರ್ಶಿನಃ  “ಒಬ್ಬ ವ್ಯಕ್ತಿಯು ವಿದ್ವಾಂಸನಾಗಿದ್ದಾಗ ಪ್ರತಿಯೊಂದನ್ನೂ ಆಧ್ಯಾತ್ಮಿಕವಾದ ಗುರುತಿನ ಸಮಾನವಾದ ನೆಲೆಯಲ್ಲಿ ಕಾಣುತ್ತಾನೆ.” ಈ ಹಂತದಲ್ಲಿ ಕೃಷ್ಣಪ್ರಜ್ಞೆಯು ನಿಜವಾಗಿಯೂ ಪ್ರಾರಂಭವಾಗುತ್ತದೆ (ಮದ್ಭಕ್ತಿ ಲಭತೇ ಪರಾಮ್‌). ಆದುದರಿಂದ ಕೃಷ್ಣಪ್ರಜ್ಞೆ ಎನ್ನುವುದು ಮುಕ್ತ ಸ್ಥಿತಿಯಲ್ಲಿರುವ ಜೀವಿಯ ಚಟುವಟಿಕೆ.

ಐಹಿಕ ಯಾತನೆಗಳಿಂದ ಬಿಡುಗಡೆಯನ್ನು ಪಡೆಯಲು ಪ್ರತಿಯೊಬ್ಬನೂ ಪ್ರಯತ್ನ ಮಾಡುತ್ತಿದ್ದಾನೆ. ಬೌದ್ಧ ತತ್ತ್ವಜ್ಞಾನವನ್ನು ಅನುಸರಿಸುವವರು ನಿರ್ವಾಣವನ್ನು ಪಡೆಯುವ ಮೂಲಕ ಐಹಿಕ ಯಾತನೆಗಳಿಂದ ಬಿಡುಗಡೆಯನ್ನು ಪಡೆಯಲು ಪ್ರಯತ್ನಿಸುತ್ತಿದ್ದಾರೆ. ನಿರ್ವಾಣವೆಂದರೆ “ಪ್ರತಿಯೊಂದೂ ನಂದಿ ಹೋದ ಸ್ಥಿತಿ.” ಬೌದ್ಧರು ಪ್ರತಿಯೊಂದನ್ನೂ ಶೂನ್ಯವನ್ನಾಗಿ ಮಾಡಲು ಬಯಸುತ್ತಾರೆ. ಎಲ್ಲ ಐಹಿಕ ವೈವಿಧ್ಯಗಳನ್ನೂ ಶೂನ್ಯವನ್ನಾಗಿ ಮಾಡಲು ಅವರು ಬಯಸುತ್ತಾರೆ. ಅದು ಬೌದ್ಧ ಧರ್ಮದ ಸಾರಸಂಗ್ರಹ. ಮಾಯಾವಾದ ತತ್ತ್ವಜ್ಞಾನ ಕೂಡ ಹೆಚ್ಚು ಕಡಮೆ ಇದಕ್ಕೆ ಅನುರೂಪವಾಗಿದೆ. ಅದು ಬೌದ್ಧ ತತ್ತ್ವಜ್ಞಾನದ ಎರಡನೆಯ ಆವೃತ್ತಿ. ಬೌದ್ಧರು ಜೀವನವನ್ನು ತೊರೆದು ಎಲ್ಲವನ್ನೂ ಶೂನ್ಯ ಮಾಡಲು ಬಯಸುತ್ತಾರೆ. ಮಾಯಾವಾದಿ ತತ್ತ್ವಜ್ಞಾನಿಗಳು, “ಜೀವನವನ್ನು ಇಟ್ಟುಕೊಂಡು ಐಹಿಕ ವೈವಿಧ್ಯಗಳನ್ನು ಶೂನ್ಯ ಮಾಡಬೇಕು” ಎಂದು ಹೇಳುತ್ತಾರೆ. ಅದೇ ಅವರ ದೋಷ. ಎಲ್ಲಿ ಜೀವನವಿದೆಯೋ ಅಲ್ಲಿ ವೈವಿಧ್ಯವಿರಬೇಕು. ವೈವಿಧ್ಯವಿಲ್ಲದ ಜೀವನ ಸಾಧ್ಯವಿಲ್ಲ. ಇದು ಮಾಯಾವಾದ ತತ್ತ್ವಜ್ಞಾನದ ದೋಷ.

ಉದಾಹರಣೆಗೆ ಒಬ್ಬ ರೋಗಿ ಬಹಳ ಕ್ಷೋಭೆಗೊಂಡಿದ್ದು ತನ್ನ ವೈದ್ಯನನ್ನು, “ದಯವಿಟ್ಟು ನನ್ನ ಕ್ಷೋಭೆಯನ್ನು ನಿಲ್ಲಿಸಿ. ನನ್ನನ್ನು ಸಾಯಿಸಿ! ನನ್ನನ್ನು ಸಾಯಿಸಿ!” ಎಂದು ಕೇಳುತ್ತಾನೆ. ಯಾತನೆಯನ್ನು ಅನುಭವಿಸುವವರು ಕೆಲವು ಸಲ ಹಾಗೆ ಕೇಳುತ್ತಾರೆ. “ನನಗೆ ಏನಾದರೂ ವಿಷ ಕೊಡಿ! ನನ್ನನ್ನು ಸಾಯಿಸಿ! ನಾನು ಈ ನೋವನ್ನು ತಾಳಲಾರೆ.”

ವೈದ್ಯ ಹೇಳುತ್ತಾನೆ, “ನಿನ್ನನ್ನು ಸಾಯಿಸಬೇಕಾದ ಅಗತ್ಯವಿಲ್ಲ. ನಾನು ನಿನಗೆ ಒಂದು ಉತ್ತಮವಾದ ಆರೋಗ್ಯಪೂರ್ಣವಾದ ಜೀವನವನ್ನು ಕೊಡುತ್ತೇನೆ.”

ಆದರೆ ರೋಗಿ ತಾಳ್ಮೆಗೆಟ್ಟಿದ್ದಾನೆ: “ಇಲ್ಲ, ನನಗೆ ತಡೆಯಲಾಗುವುದಿಲ್ಲ. ದಯವಿಟ್ಟು ನನ್ನನ್ನು ಸಾಯಿಸಿ!”

ಆದ್ದರಿಂದ ಬೌದ್ಧರು ಮತ್ತು ಮಾಯಾವಾದಿ ತತ್ತ್ವಜ್ಞಾನಿಗಳು ಹೀಗಿದ್ದಾರೆ. ಅವರು ಯೋಚಿಸುತ್ತಾರೆ, “ನಾನು ಸಾಯಬೇಕು. ನಾನು ಶೂನ್ಯವಾಗಬೇಕು.” ಅವರು ಐಹಿಕ ಯಾತನೆಗಳಿಂದ ಎಷ್ಟೊಂದು ಹತಾಶರಾಗಿದ್ದಾರೆಂದರೆ, ಎಷ್ಟೊಂದು ಕ್ಷೋಭೆಗೊಂಡಿದ್ದಾರೆಂದರೆ, ಅವರು ತಮ್ಮ ಜೀವನವನ್ನು ಶೂನ್ಯ ಮಾಡಿಕೊಳ್ಳಬೇಕೆಂದು ಬಯಸುತ್ತಾರೆ.

ಕೃಷ್ಣಪ್ರಜ್ಞೆಯು ಹಾಗಿಲ್ಲ. ಕೃಷ್ಣಪ್ರಜ್ಞೆಯು ನಿಮ್ಮನ್ನು ನಿಜವಾದ ಜೀವನಕ್ಕೆ ತರುತ್ತದೆ – ಅದು ಮುಕ್ತಸ್ಥಿತಿಯಲ್ಲಿರುವ ಭಕ್ತಿ ಚಟುವಟಿಕೆಯ ಜೀವನ.

ಆದರೆ ಅನೇಕ ವೇಳೆ ಕೃಷ್ಣಪ್ರಜ್ಞೆಯ ತತ್ತ್ವಜ್ಞಾನವನ್ನು ಅರ್ಥಮಾಡಿಕೊಳ್ಳುವುದು ಕಷ್ಟವೆಂದು ತೋರುತ್ತದೆ. ಏಕೆ? ಅದನ್ನು ಶ್ರೀಮದ್‌ ಭಾಗವತದಲ್ಲಿ (7.5.30) ವಿವರಿಸಲಾಗಿದೆ: ಮತಿರ್‌ ನ ಕೃಷ್ಣೇ ಪರತಃ ಸ್ವತೋ ವಾ ಮಿಥೋಽಭಿಪದ್ಯೇತ ಗೃಹ ವ್ರತಾನಾಮ್‌. ಗೃಹ ಎಂದರೆ ಮನೆ. ವ್ರತ ಎಂದರೆ ವ್ರತಾಚರಣೆ. ಆದ್ದರಿಂದ ಭಾಗವತವು ಹೇಳುತ್ತದೆ, “ಸುಖ ಸೌಕರ್ಯಗಳಿಂದ ಕೂಡಿದ ಗೃಹಸ್ಥ ಜೀವನವನ್ನು ನಡೆಸುವುದರಲ್ಲಿ ಅಮಿತ ಆಸಕ್ತಿಯನ್ನು ಹೊಂದಿರುವವನು ಕೃಷ್ಣಪ್ರಜ್ಞಾ ತತ್ತ್ವಜ್ಞಾನವನ್ನು ಅರ್ಥಮಾಡಿಕೊಳ್ಳಲಾರ.” ಎಲ್ಲೆಲ್ಲೂ ಶ್ರೀ ಸಾಮಾನ್ಯನು ದೈಹಿಕ ಸುಖ ಸೌಕರ್ಯಗಳನ್ನು ಗಳಿಸುವಲ್ಲಿ ಮಗ್ನನಾಗಿದ್ದಾನೆ – ಸೊಗಸಾದ ಪತ್ನಿ, ಸೊಗಸಾದ ಮನೆ, ಸೊಗಸಾದ ಉಳಿತಾಯ ಖಾತೆಯ ಹಣ. ಇವು ಅವನ ಆಶೋತ್ತರಗಳು, ಬೇರೇನೂ ಅಲ್ಲ.

ಮೊಟ್ಟ ಮೊದಲನೆಯದಾಗಿ ಒಬ್ಬ ವ್ಯಕ್ತಿಯು ತನ್ನ ದೇಹದಲ್ಲಿ ಆಸಕ್ತನಾಗಿದ್ದಾನೆ. ಗೃಹ ಎಂದರೆ ಮನೆ ಅಥವಾ ವಾಸಿಸುವ ಸ್ಥಳ. ನಾನು ಒಂದು ಆತ್ಮ, ಒಂದು ಜೀವಿ ಮತ್ತು ನನ್ನ ದೇಹವು ನನ್ನ ಮೊದಲನೆಯ ವಾಸಸ್ಥಳ. ದೇಹವು ಕೂಡ ಒಂದು ಗೃಹ. ಆದರೆ ನಾನು ಈ ದೇಹವಲ್ಲ. ನಾನು ಒಂದು ಮನೆಯಲ್ಲಿ ವಾಸ ಮಾಡುತ್ತಿರಬಹುದು, ಆದರೆ ನಾನೇ ಆ ಮನೆಯಲ್ಲ. ಅದೇ ರೀತಿಯಲ್ಲಿ ನಾನು ಒಂದು ದೇಹದಲ್ಲಿ ವಾಸ ಮಾಡುತ್ತಿದ್ದೇನೆ. ಆದರೆ ನಾನೇ ಈ ದೇಹವಲ್ಲ. ಈ ತಿಳಿವಳಿಕೆಯು ಆಧ್ಯಾತ್ಮಿಕ ಶಿಕ್ಷಣದ ಆರಂಭ. ವ್ಯಕ್ತಿಯು ತಾನು ತನ್ನ ದೇಹವಲ್ಲ – ತನ್ನ ದೇಹದಲ್ಲಿ ವಾಸಿಸುತ್ತಿರುವ ಚೇತನಾತ್ಮನೇ ತಾನು ಎಂದು ಅರ್ಥಮಾಡಿಕೊಳ್ಳುವ ಹೊರತು ಆಧ್ಯಾತ್ಮಿಕ ಶಿಕ್ಷಣವೆಂಬ ಪ್ರಶ್ನೆಯೇ ಏಳುವುದಿಲ್ಲ. ಏಕೆಂದರೆ ಅಂತಹ ಮನುಷ್ಯನು ಆಧ್ಯಾತ್ಮಿಕ ಮತ್ತು ಐಹಿಕಗಳ ನಡುವಣ ವ್ಯತ್ಯಾಸವೇನು ಎಂದು ತಿಳಿದಿರುವುದಿಲ್ಲ.

ಆದ್ದರಿಂದ, “ನಾನು ನನ್ನ ದೇಹ. ನಾನು ನನ್ನ ಮನೆಗೆ ಸೇರಿದವನು. ನಾನು ನನ್ನ ಸಮಾಜಕ್ಕೆ ಸೇರಿದವನು. ನಾನು ನನ್ನ ದೇಶಕ್ಕೆ ಸೇರಿದವನು. ನಾನು ನನ್ನ ಜಗತ್ತಿಗೆ ಸೇರಿದವನು. ನಾನು ನನ್ನ ಬ್ರಹ್ಮಾಂಡಕ್ಕೆ ಸೇರಿದವನು,” ಎಂದು ಯೋಚಿಸುವುದು ತಪ್ಪು ತಿಳಿವಳಿಕೆ. ಮನೆಯ ಕಲ್ಪನೆಯನ್ನು ನೀವು ವಿಸ್ತರಿಸಬಹುದು. ಆದರೆ ಅದೆಲ್ಲ ತಪ್ಪು ತಿಳಿವಳಿಕೆ. “ನನ್ನ ಜೀವನವು ನನ್ನ ದೇಶಕ್ಕೆ ಮುಡಿಪು” ಎಂದು ಹೇಳುವ ದೊಡ್ಡ ನೇತಾರ ನೀವಾಗಿರಬಹುದು. ಅಥವಾ ಒಬ್ಬ ಸಾಧಾರಣವಾದ ಶ್ರೀಸಾಮಾನ್ಯನಾಗಿದ್ದು, “ನನ್ನ ಜೀವನವು ನನ್ನ ಕುಟುಂಬಕ್ಕಾಗಿ” ಎಂದು ಹೇಳಬಹುದು. ಅಥವಾ ಒಬ್ಬ ಬಾಲಿಶವಾದ ವ್ಯಕ್ತಿಯ ಹಾಗೆ, “ನಾನು ನನ್ನ ದೇಹದಲ್ಲಿ ಮಾತ್ರ ಆಸಕ್ತನಾಗಿದ್ದೇನೆ” ಎಂದು ಹೇಳಬಹುದು. ಸ್ವಹಿತಾಸಕ್ತಿಯನ್ನು ದೇಹದ ಕ್ಷೇಮಾಭಿವೃದ್ಧಿಯಿಂದ ಕುಟುಂಬದ ಕ್ಷೇಮಾಭಿವೃದ್ಧಿಯಿಂದ ರಾಷ್ಟ್ರದ ಕ್ಷೇಮಾಭಿವೃದ್ಧಿಗೆ, ಅಥವಾ ರಾಷ್ಟ್ರದ ಕ್ಷೇಮಾಭಿವೃದ್ಧಿಯಿಂದ ಜಾಗತಿಕ ಭ್ರಾತೃತ್ವದ ಕಲ್ಪನೆಗೆ ನಾವು ವಿಸ್ತರಿಸಿದಾಗ ಜನರು ಬಹಳಷ್ಟು ಪ್ರಶಂಸಿಸುತ್ತಾರೆ. ಆದರೆ ಇವೆಲ್ಲ ನಕಲಿ ಕಲ್ಪನೆಗಳು, ತಪ್ಪು ಗ್ರಹಿಕೆಗಳು.

ಗೃಹವನ್ನು ನೀವು ಎಷ್ಟರಮಟ್ಟಿಗೆ ವಿಸ್ತರಿಸಿದರೂ ದೋಷವು ಉಳಿದೇ ತೀರುತ್ತದೆ. ಉದಾಹರಣೆಗೆ, ಅಮೆರಿಕದಲ್ಲಿ ರಾಷ್ಟ್ರೀಯವಾದಿಗಳೆಂದು ಹೇಳಿಕೊಳ್ಳುವವರು ಮಾನವ ಜೀವಿಗಳ ಸರಹದ್ದಿನೊಳಗೇ ಬಂಧಿತರಾಗಿದ್ದಾರೆ: ಅವರು ತಮ್ಮ ಪ್ರೀತಿಯನ್ನು ಇತರ ಜೀವಿಗಳಿಗೆ ವಿಸ್ತರಿಸುವುದಿಲ್ಲ. ಅಮೆರಿಕದಲ್ಲಿರುವ ಮಾನವ ಜೀವಿಗಳಿಗೆ ರಕ್ಷಣೆಯನ್ನು ಕೊಡಬೇಕು. ಆದರೆ ಇತರೆ ಜೀವಿಗಳಿಗೆ ರಕ್ಷಣೆಯ ಅಗತ್ಯವಿಲ್ಲ ಎಂದು ಅವರು ನಂಬುತ್ತಾರೆ. ಏಕೆ? ಅಮೆರಿಕದಲ್ಲಿರುವ ಹಸುಗಳು ಮತ್ತು ಇತರ ಪ್ರಾಣಿಗಳೂ ಕೂಡ ರಾಷ್ಟ್ರದ ಪ್ರಜೆಗಳೇ; ಅವುಗಳನ್ನು ಕೂಡ ರಕ್ಷಿಸಬೇಕು. ಆದರೆ ರಾಷ್ಟ್ರೀಯವಾದಿಗಳಿಗೆ ಅಂತಹ ವಿಚಾರವಿಲ್ಲ. ಏಕೆಂದರೆ ರಾಷ್ಟ್ರೀಯತಾವಾದ ಮತ್ತು ಅಂತಹ ಎಲ್ಲ ವಿಚಾರಗಳು ದೋಷಪೂರ್ಣ ಮತ್ತು ಪರಿಮಿತ.

ಆದ್ದರಿಂದ ಭಾಗವತವು ಹೇಳುವುದೇನೆಂದರೆ ವ್ಯಕ್ತಿಯು ಜೀವನದ ಪರಿಮಿತ ಕಲ್ಪನೆಯ ಸರಹದ್ದಿನೊಳಗೇ ತನ್ನನ್ನು ಇರಿಸಿಕೊಳ್ಳಲು ಎಲ್ಲಿಯವರೆಗೆ ಆಸಕ್ತನಾಗಿರುತ್ತಾನೆಯೋ ಅಲ್ಲಿಯವರೆಗೆ ಕೃಷ್ಣಪ್ರಜ್ಞೆ ಅಥವಾ ದೈವಪ್ರಜ್ಞೆಯನ್ನು ಅವನು ಅರ್ಥಮಾಡಿಕೊಳ್ಳಲಾರ. ಮತಿರ್‌ ನ ಕೃಷ್ಣೇ ಪರತಃ ಸ್ವತೋ ವಾ. ಸ್ವತಃ ಎಂದರೆ “ವ್ಯಕ್ತಿಯ ವೈಯಕ್ತಿಕ ಮಾನಸಿಕ ಊಹಾಪೋಹದಿಂದ” ಎಂದು ಅರ್ಥ. ಅನೇಕ ತತ್ತ್ವಜ್ಞಾನಿಗಳು ಮಾನಸಿಕ ಊಹಾಪೋಹದಿಂದ ಪರಮ ಸತ್ಯವನ್ನು ತಲಪುತ್ತೇವೆಂದು ಯೋಚಿಸುತ್ತಿದ್ದಾರೆ. ಪರತಃ ಎಂದರೆ “ಪ್ರಮಾಣಗಳಿಂದ” – ಗುರುಗಳು, ಧರ್ಮಗ್ರಂಥಗಳು ಅಥವಾ ಜ್ಞಾನದ ಇತರ ಪ್ರಮಾಣಿತ ಆಕರಗಳಿಂದ ಗುರುಗಳಿಂದ ಜ್ಞಾನವನ್ನು ಸ್ವೀಕರಿಸುವುದೇ ನಮ್ಮ ಸೂತ್ರ. ಒಂದು ಪಕ್ಷ, “ನಾನು ಅಮೆರಿಕನ್‌, ಹಿಂದೂ ಆಗಿರುವ ಗುರುವೊಬ್ಬರಿಂದ ನಾನೇಕೆ ಶ್ರವಣ ಮಾಡಬೇಕು?” ಎಂದು ಯಾರಾದರೂ ಚಿಂತಿಸಿದರೆ, ಅಂತಹ ವ್ಯಕ್ತಿಯು ಕೃಷ್ಣಪ್ರಜ್ಞೆಯ ಬೋಧನೆಗಳನ್ನು ಅರ್ಥಮಾಡಿಕೊಳ್ಳಲು ಸಮರ್ಥನಾಗುವುದಿಲ್ಲ. ಆದ್ದರಿಂದ ಯಾರು ಗೃಹ ವ್ರತಾನಾಮ್‌ ಆಗಿರುವರೋ ಅವರು ಜೀವನದ ಒಂದು ಪರಿಮಿತ ಗ್ರಹಿಕೆಯಲ್ಲಿ ಉಳಿಯಲು ನಿರ್ಧರಿಸಿದ್ದಾರೆ. ಅವರು ಸ್ವಂತ ಮಾನಸಿಕ ಪ್ರಯತ್ನಗಳಿಂದಾಗಲಿ ಅಥವಾ ಪ್ರಮಾಣಗಳಿಂದ ಸಹಾಯವನ್ನು ಪಡೆಯುವುದರಿಂದಾಗಲಿ ಕೃಷ್ಣ ಪ್ರಜ್ಞೆಯನ್ನು ಅರ್ಥಮಾಡಿಕೊಳ್ಳಲಾರರು.

ಮುಂದೆ ಭಾಗವತವು ಮಿಥಃ ಎಂಬ ಶಬ್ದವನ್ನು ಬಳಸುತ್ತದೆ, ಅದರ ಅರ್ಥವೂ ಮಹಾ ಸಮುದಾಯದಲ್ಲಿ ಪಾಲ್ಗೊಳ್ಳುವುದು. ಇದಕ್ಕೆ ಉತ್ತಮ ಉದಾಹರಣೆಯೆಂದರೆ ವಿಶ್ವಸಂಸ್ಥೆ. ಕಳೆದ ಇಪ್ಪತ್ತು, ಇಪ್ಪತ್ತೈದು ವರ್ಷಗಳಿಂದ ವಿಶ್ವ ಸಂಸ್ಥೆಯು ಜಗತ್ತಿನಲ್ಲಿ ಶಾಂತಿಯನ್ನು ಸ್ಥಾಪಿಸಲು ಪ್ರಯತ್ನಿಸುತ್ತಾ ಇದೆ. ಹಾಗಾದರೆ ಅದು ಏಕೆ ಸಾಧ್ಯವಾಗುತ್ತಿಲ್ಲ? ಏಕೆಂದರೆ ವಿಶ್ವಸಂಸ್ಥೆಯಲ್ಲಿರುವ ಪ್ರತಿನಿಧಿಗಳು ಜೀವನದ ಪರಿಮಿತ ಗ್ರಹಿಕೆಯನ್ನು ಹೊಂದಿದ್ದಾರೆ. ಅವರು ಹೀಗೆ ಯೋಚಿಸುತ್ತಾರೆ, “ನಾನೇ ನನ್ನ ದೇಹ. ಅದು ಇಂತಹ ಒಂದು ದೇಶದಲ್ಲಿ ಜನ್ಮ ತಳೆದಿದೆ.” ಇದರಲ್ಲಿ ಮೂಲ ತತ್ತ್ವವೇ ತಪ್ಪಾಗಿದೆ, ಜೀವನದ ಗ್ರಹಿಕೆಯೇ ತಪ್ಪಾಗಿದೆ. ಆದ್ದರಿಂದ ಜಗತ್ತಿನಲ್ಲಿ ಶಾಂತಿಯನ್ನು ಸ್ಥಾಪಿಸುವ ಕಾರ್ಯದಲ್ಲಿ ವಿಶ್ವಸಂಸ್ಥೆಯು ವಿಫಲವಾಗಿದೆ.

ಈಗ, ಬದುಕಿನ ನಿಕೃಷ್ಟ ಗ್ರಹಿಕೆಯಲ್ಲಿ ಜನರು ಏಕೆ ಪರಿಮಿತರಾಗಿದ್ದಾರೆ? ಭಾಗವತವು ಹೇಳುತ್ತದೆ, ಅದಾಂತ ಗೋಭಿಃ. ಜೀವನದ ಪರಿಮಿತ ಕಲ್ಪನೆಯು ಕಡಿವಾಣವಿಲ್ಲದ ಇಂದ್ರಿಯಗಳಿಂದ ಸಂಭವಿಸುತ್ತದೆ. ಆದ್ದರಿಂದ ಒಬ್ಬ ವ್ಯಕ್ತಿಯು ವಿಶ್ವಸಂಸ್ಥೆಯ ಅಧಿವೇಶನಕ್ಕೆ ಹೋಗುತ್ತಾನಾದರೂ ಅಲ್ಲಿ ತನ್ನ ಗುರುತನ್ನು ಅಮೆರಿಕನ್‌ ಅಥವಾ ಜರ್ಮನ್‌ ಅಥವಾ ರಷ್ಯನ್‌ ಅಥವಾ ಇಂಡಿಯನ್‌ ಎಂದು ಇರಿಸಿಕೊಳ್ಳುತ್ತಾನೆ, ಮತ್ತು ಅವನು ಯೋಚಿಸುತ್ತಾನೆ, “ನನ್ನ ದೇಶವು ಇಂತಿಂಥ ಕಾರಣಗಳಿಂದ ಸಂತುಷ್ಟವಾಗುವುದು.” ಭಾರತೀಯನು ಹೀಗೆ ಯೋಚಿಸುತ್ತಿದ್ದಾನೆ, ಅಮೆರಿಕನ್‌ ಹೀಗೆ ಯೋಚಿಸುತ್ತಿದ್ದಾನೆ, ರಷ್ಯನ್‌ ಹೀಗೆ ಯೋಚಿಸುತ್ತಿದ್ದಾನೆ. ಆದರೆ ಅವರು ಜೀವನದ ಪರಿಮಿತ ಗ್ರಹಿಕೆಯಲ್ಲಿಯೇ ತಮ್ಮನ್ನು ಇರಿಸಿಕೊಂಡರೆ, ಯಾವ ಪ್ರಯೋಜನವನ್ನು ಪಡೆಯುತ್ತಾರೆ? ಅವರು ಸುಮ್ಮನೆ ಮಾತನಾಡುತ್ತಾರೆ ಮತ್ತು ತಮ್ಮ ಸಮಯವನ್ನು ವ್ಯರ್ಥಗೊಳಿಸುತ್ತಾರೆ. ಅಷ್ಟೆ. ವ್ಯಕ್ತಿಯು ಜೀವನದ ಈ ಪರಿಮಿತ ಗ್ರಹಿಕೆಯಿಂದ ಆಚೆ ಹೋದಾಗ ಮತ್ತು ಬ್ರಹ್ಮ ಭೂತ ಹಂತವನ್ನು ತಲಪಿದಾಗ ಮಾತ್ರ ನಿಜವಾದ ಶಾಂತಿಯನ್ನು ಪಡೆಯುತ್ತಾನೆ.

ಮುಂದೆ ಭಾಗವತವು ಅನಿಯಂತ್ರಿತ ಇಂದ್ರಿಯಗಳುಳ್ಳ ವ್ಯಕ್ತಿಯ ಸ್ಥಾನವನ್ನು ವರ್ಣಿಸುತ್ತದೆ: ಪುನಃ ಪುನಃ ಚರ್ವಿತ ಚರ್ವಣಾನಾಮ್‌. ಚರ್ವಿತ ಚರ್ವಣ ಎಂದರೆ  “ಅಗಿದಿದ್ದನ್ನೇ ಅಗಿಯುವುದು” ಉದಾಹರಣೆಗೆ, ಏನಾದರೊಂದನ್ನು ಅಗಿದು ರಸ್ತೆಯಲ್ಲಿ ಬಿಸಾಕಿದ್ದರೆ, ಇನ್ನೊಬ್ಬನು ಬಂದು ಅದೇ ಬಿಸಾಕಿದ ವಸ್ತುವನ್ನು ಎತ್ತಿಕೊಂಡು ಮತ್ತೆ ಅಗಿದರೆ, ಅದರಿಂದ ಅವನಿಗೆ ಏನೂ ರಸ ದೊರೆಯುವುದಿಲ್ಲ.  ಅದೇ ರೀತಿಯಲ್ಲಿ, ನಾವು ಈ ಐಹಿಕ ಜಗತ್ತಿನಲ್ಲಿ ನಮ್ಮ ಇಂದ್ರಿಯಗಳ ಉಪಭೋಗಕ್ಕಾಗಿ ಮತ್ತೆ ಮತ್ತೆ ಪ್ರಯತ್ನಿಸುತ್ತಿದ್ದರೆ, ನಮ್ಮ ಪ್ರಯತ್ನಗಳೆಲ್ಲ ಹತಾಶೆಯಲ್ಲಿಯೇ ಕೊನೆಗೊಳ್ಳುತ್ತವೆ.

ನಾವು ಅನೇಕ ಯೋಜನೆಗಳನ್ನು ಮಾಡಬಹುದು. ಆದರೆ ನಮ್ಮ ಯೋಜನೆಗಳೆಲ್ಲ ಇಂದ್ರಿಯ ತುಷ್ಟಿಯ ನೆಲೆಯಲ್ಲಿ ಇರುವುದರಿಂದ, ನಮ್ಮ ಇಡೀ ಅಸ್ತಿತ್ವವೇ ಪ್ರಾಣಿ ಜೀವನದ ನಾಲ್ಕು ಚಟುವಟಿಕೆಗಳಿಗೆ ಸೀಮಿತವಾಗಿವೆ: ತಿನ್ನುವುದು, ನಿದ್ರಿಸುವುದು, ಕೂಡುವುದು ಮತ್ತು ರಕ್ಷಿಸಿಕೊಳ್ಳುವುದು. ಅಷ್ಟೆ. ಪ್ರಾಣಿಗಳು ಮತ್ತು ಮನುಷ್ಯರಲ್ಲಿ ಈ ನಾಲ್ಕು ಚಟುವಟಿಕೆಗಳು ಉಭಯ ಸಾಮಾನ್ಯವಾಗಿವೆ. ಮನುಷ್ಯನಿಗಿರುವ ಏಕಮಾತ್ರ ಹೆಚ್ಚುವರಿ ಅರ್ಹತೆಯೆಂದರೆ ಅವನು ಕೃಷ್ಣ ಅಥವಾ ದೇವರನ್ನು ಅರ್ಥಮಾಡಿಕೊಳ್ಳಬಲ್ಲ. ಅದು ಅವನ ವಿಶೇಷ ಅರ್ಹತೆ. ಆದರೆ ಜನರು ಇಂದ್ರಿಯ ತುಷ್ಟಿಯ ಪರಿಮಿತಿಗಳೊಳಗೇ ತಮ್ಮನ್ನು ಇರಿಸಿಕೊಳ್ಳುವುದರಿಂದ, ಮತ್ತೆ ಮತ್ತೆ ತಿನ್ನುವುದು, ನಿದ್ರಿಸುವುದು, ಕೂಡುವುದು ಮತ್ತು ರಕ್ಷಿಸಿಕೊಳ್ಳುವುದು ಎಂಬ ನೆಲೆಗೇ ಮತ್ತೆ ಮತ್ತೆ ಬರುತ್ತಾರೆ. ಆದ್ದರಿಂದ ಅವರು ಕೃಷ್ಣಪ್ರಜ್ಞೆ ಇಲ್ಲದೆ ಉಳಿದುಬಿಡುತ್ತಾರೆ.

ಆದ್ದರಿಂದ, ಕೃಷ್ಣಪ್ರಜ್ಞಾವಂತರಾಗುವ ರಹಸ್ಯವೇನೆಂದರೆ, ನಾವು ನಮ್ಮನ್ನು ಸಂಕುಚಿತವಾದ ಬದುಕಿನ ಗ್ರಹಿಕೆಗೆ ಪರಿಮಿತಿಗೊಳಿಸಿಕೊಳ್ಳಬಾರದು. ಅದು ಹೇಗೆ ಸಾಧ್ಯವಾಗುತ್ತದೆ? ನಾವು ಅರ್ಥಮಾಡಿಕೊಳ್ಳಬೇಕು, “ನಾನು ಕೃಷ್ಣ ಅಥವಾ ದೇವರ ಶಾಶ್ವತ ದಾಸ.” ಅದು ಕೃಷ್ಣ ಪ್ರಜ್ಞೆ.

ಈಗ ಯಾರಾದರೊಬ್ಬರು ಪ್ರಶ್ನಿಸಬಹುದು, “ಕೃಷ್ಣನನ್ನು ಅರ್ಥಮಾಡಿಕೊಳ್ಳುವುದು ಜೀವನದ ಗುರಿಯಾಗಿದ್ದರೆ, ಜನರು ಏಕೆ ಇಂದ್ರಿಯ ತುಷ್ಟಿಯ ಮಿತಿಯೊಳಗೆ ತಮ್ಮನ್ನು ಇರಿಸಿಕೊಳ್ಳುತ್ತಾರೆ?” ಈ ಪ್ರಶ್ನೆಗೆ ಶ್ರೀಮದ್‌ ಭಾಗವತದಲ್ಲಿ ಉತ್ತರಿಸಲಾಗಿದೆ (7.5.31): ನ ತೇ ವಿಧುಃ ಸ್ವಾರ್ಥಗತಿಂ ಹಿ ವಿಷ್ಣುಂ ದುರಾಶಯಾ ಯೇ ಬಹಿರರ್ಥ ಮಾನಿನಃ. ಇದು ಒಂದು ಬಹಳ ಮುಖ್ಯವಾದ ಶ್ಲೋಕ. ವಿಷ್ಣು ಅಥವಾ ಕೃಷ್ಣನೇ ತಮ್ಮ ಜೀವನದ ಆತ್ಯಂತಿಕ ಗುರಿ ಎನ್ನುವುದನ್ನು ಮೂರ್ಖರು ಅರಿತಿರುವುದಿಲ್ಲ ಎಂದು ಅದು ಹೇಳುತ್ತದೆ. ಏಕೆಂದರೆ ಅವರು ಐಹಿಕ ಪ್ರಕೃತಿಯನ್ನು ಉಪಭೋಗಿಸುವ ಪ್ರಜ್ಞೆಯ ಬಲೆಗೆ ಬಿದ್ದಿದ್ದಾರೆ. ಪ್ರತಿಯೊಬ್ಬನೂ ಸ್ವಹಿತಾಸಕ್ತಿಯನ್ನು ನೋಡಿಕೊಳ್ಳುವುದರಲ್ಲಿಯೇ ಕಾತರನಾಗಿದ್ದಾನೆ. ಆದರೆ ಮೂರ್ಖರಿಗೆ ಅವರ ನಿಜವಾದ ಸ್ವಹಿತಾಸಕ್ತಿ ಏನು ಎಂದು ತಿಳಿಯದು. ಅವರು ಹೀಗೆ ಯೋಚಿಸುತ್ತಿದ್ದಾರೆ, “ಜೀವನದ ಐಹಿಕ ಮಾರ್ಗದಲ್ಲಿ ಕಷ್ಟಪಟ್ಟು ಕೆಲಸ ಮಾಡುವುದು ನನಗೆ ಆತ್ಯಂತಿಕ ಆನಂದ, ಆತ್ಯಂತಿಕ ತೃಪ್ತಿಯನ್ನು ಕೊಡುತ್ತದೆ. ಅದೇ ನನ್ನ ಆತ್ಯಂತಿಕ ಗುರಿ.” ವಿಜ್ಞಾನಿ, ರಾಜಕಾರಣಿ ಹೀಗೆ ಪ್ರತಿಯೊಬ್ಬರೂ ಆತ್ಯಂತಿಕ ತೃಪ್ತಿಯನ್ನು ಗಳಿಸಲು ತನ್ನದೇ ಆದ ಯೋಜನೆಯನ್ನು ಮಾಡುತ್ತಿದ್ದಾರೆ. ಆ ಯೋಜನೆಯನ್ನು ಅವರು ಹೇಗೆ ಈಡೇರಿಸಿಕೊಳ್ಳುತ್ತಾರೆ? ಕೃಷ್ಣನ ಬಾಹ್ಯ ಶಕ್ತಿಯಾದ ಪ್ರಕೃತಿಯನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ (ಬಹಿರರ್ಥ ಮಾನಿನಃ)

ನಾವು ಕೃಷ್ಣಪ್ರಜ್ಞೆಯನ್ನು ಬೋಧಿಸುತ್ತಿದ್ದೇವೆ, ಆದರೆ ಬಹುಪಾಲು ಜನರಿಗೆ ಅದರಲ್ಲಿ ಆಸಕ್ತಿಯಿಲ್ಲ. ಹೊಸ ಬಗೆಯ ತಂತ್ರಜ್ಞಾನದಲ್ಲಿ ನಾನೊಬ್ಬ ತಜ್ಞನಾಗಿದ್ದಿದ್ದರೆ ಅಥವಾ ವಿದ್ಯುನ್ಮಾನದಲ್ಲಿನ ಸುಧಾರಣೆಯೊಂದನ್ನು ಬೋಧಿಸಬಲ್ಲವನಾಗಿದ್ದಿದ್ದರೆ, ನನ್ನ ಮಾತುಗಳನ್ನು ಕೇಳಲು ಸಾವಿರಾರು ಜನರು ಧಾವಿಸಿ ಬರುತ್ತಿದ್ದರು. ಬಾಹ್ಯ ಶಕ್ತಿಯ ಘಟಕಗಳನ್ನು ಕುರಿತು ನಾನು ವ್ಯವಹರಿಸುತ್ತಿರಬಹುದಾದ ಕಾರಣದಿಂದ ಜನರು ಹೀಗೆ ಯೋಚಿಸಬಹುದು, “ಈ ತಾಂತ್ರಿಕ ಜ್ಞಾನವು ನನಗೆ ಸಂತೋಷವನ್ನು ನೀಡುತ್ತದೆ.” ಅದು ದುರಾಶಯಾ, ಒಂದು ನಿಷ್ಪ್ರಯೋಜಕವಾದ ಆಸೆ. ಈ ಬಗೆಯ ಐಹಿಕ ಪ್ರಗತಿಯು ನಿಷ್ಪ್ರಯೋಜಕ ಎಂದು ಭಾಗವತವು ಹೇಳುತ್ತದೆ. ಅದು ನಿಮಗೆ ಯಾವ ವಿಧವಾದ ಸಂತೋಷವನ್ನೂ ನೀಡುವುದಿಲ್ಲ. ಆದರೆ ಅದು ನೀಡುತ್ತದೆಂದು ಜನರು ಮೂರ್ಖತನದಿಂದ ಹಾರೈಸುತ್ತಿದ್ದಾರೆ.

ಈಗ ಭಾಗವತವು ಹೇಳುತ್ತದೆ, ಅಂಧಾ ಯಥಾಂಧೈರ್‌ ಉಪನೀಯ ಮಾನಾಃ ಇದರ ಅರ್ಥವೇನೆಂದರೆ ಐಹಿಕ ಪ್ರಗತಿಯ ಮೂಲಕ ಸಂತೋಷಕ್ಕಾಗಿ ಆಶಿಸುವ ಜನರು ಆಧ್ಯಾತ್ಮಿಕವಾಗಿ ಕುರುಡರಾಗಿದ್ದಾರೆ. ಅವರಿಗೆ ಜೀವನದ ಗುರಿ ಏನೆಂದು ಗೊತ್ತಿಲ್ಲ. ಅವರ ನಾಯಕರಿಗೆ ಕೂಡ ಜೀವನದ ಗುರಿ ಏನೆಂದು ಗೊತ್ತಿಲ್ಲ. ಯಾವುದೋ ಒಬ್ಬ ರಾಜಕಾರಣಿಯನ್ನು ಬದಲಾಯಿಸುವ ಮೂಲಕ ಏನೋ ಹೊಸದು ಸಂಭವಿಸುತ್ತದೆ ಮತ್ತು ನಾವು ಸುಖವಾಗಿರುತ್ತೇವೆ ಎಂದು ಜನರು ಯೋಚಿಸುತ್ತಿದ್ದಾರೆ. ಈಗ ಒಂದು ಜಾಹೀರಾತು ಕಾಣುತ್ತಿದೆ:

“ಅಮೆರಿಕಕ್ಕೆ ಈಗ ನಿಕ್ಸನ್‌ ಅಗತ್ಯವಿದೆ.” ಜನರು ಯೋಚಿಸುತ್ತಿದ್ದಾರೆ,” ಜಾನ್ಸನ್‌ ಬದಲು ನಿಕ್ಸನ್‌ ಅಧ್ಯಕ್ಷರಾದರೆ ನಾವು ಸಂತೋಷವಾಗಿರುತ್ತೇವೆ.” (ನಗು). ಆದರೆ ಈ ಜಾನ್ಸನ್‌ ಮತ್ತು ನಿಕ್ಸನ್‌ ಯಾವ ಮೂಲದಿಂದ ಬಂದಿದ್ದಾರೆ? ಅವರ ಸರಬರಾಜಿನ ಮೂಲ ಒಂದೇ. ಹೀಗೆ ಸರಬರಾಜಿನ ಮೂಲವು ಒಂದೇ ಆಗಿರುವಾಗ ನಿಕ್ಸನ್‌ ಬದಲು ಜಾನ್ಸನ್‌ ಅಥವಾ ಜಾನ್ಸನ್‌ ಬದಲು ನಿಕ್ಸನ್‌ ಎಂದು ಬದಲಾಯಿಸುವುದರ ಪ್ರಯೋಜನವೇನು?

ನಾಯಕರು ಆಧ್ಯಾತ್ಮಿಕವಾಗಿ ಕುರುಡರಾಗಿದ್ದಾರೆ: ಅವರಿಗೆ ಜೀವನದ ಅಂತಿಮ ಗುರಿಯೇ ಗೊತ್ತಿಲ್ಲ. ಜನರು ಕುರುಡರಾಗಿದ್ದು ಅವರ ನಾಯಕರೂ ಕುರುಡರಾಗಿದ್ದರೆ ಅದರ ಫಲಿತಾಂಶ ಏನಾಗುತ್ತದೆ? ಒಬ್ಬ ಕುರುಡನು ಇತರ ನೂರು ಜನ ಕುರುಡರನ್ನು ರಸ್ತೆ ದಾಟಿಸಿದರೆ ಖಂಡಿತವಾಗಿಯೂ ಏನಾದರೊಂದು ಅಪಘಾತವಾಗುತ್ತದೆ. ಆದರೆ ನಾಯಕನು ನೋಡಬಲ್ಲವನಾಗಿದ್ದರೆ ನೂರಾರು, ಸಾವಿರಾರು ಜನರನ್ನು ಸುರಕ್ಷಿತವಾಗಿ ಮುನ್ನಡೆಸಬಲ್ಲ.

ಈಗ ಭಾಗವತವು ವಿವರಿಸುತ್ತದೆ, ತೇಽಪೀಶ ತಂತ್ರ್ಯಾಮ್‌ ಉರು ದಾಮ್ನಿ ಬದ್ಧಾಃ “ಕುರುಡು ನಾಯಕರು ಮತ್ತು ಕುರುಡು ಅನುಯಾಯಿಗಳು ಇಬ್ಬರನ್ನೂ ಐಹಿಕ ಪ್ರಕೃತಿಯೆಂಬ ಭದ್ರವಾದ ಹಗ್ಗಗಳಿಂದ ಬಹಳ ಬಿಗಿಯಾಗಿ ಕಟ್ಟಲಾಗಿದೆ.” ನಾಯಕರು ಭರವಸೆ ಕೊಡುತ್ತಾರೆ, “ನನ್ನ ಪ್ರೀತಿಯ ನಾಗರಿಕರೆ, ನನ್ನ ಪ್ರೀತಿಯ ದೇಶಬಾಂಧವರೆ, ಪ್ರಸ್ತುತ ಕಾಲಘಟ್ಟದಲ್ಲಿ ದೇಶಕ್ಕೆ ನನ್ನ ಅಗತ್ಯವಿದೆ. ನೀವು ನಿಮ್ಮ ಮತವನ್ನು ನನಗೆ ಕೊಟ್ಟರೆ, ನಾನು ನಿಮಗೆ ಎಲ್ಲ ಸೌಕರ್ಯಗಳನ್ನು, ಎಲ್ಲ ಪರಿಹಾರಗಳನ್ನು ನೀಡುತ್ತೇನೆ.” ಆದರೆ ಈ ಎಲ್ಲ ನಾಯಕರನ್ನೂ ದೇವರ ನಿಯಮಗಳು ಮತ್ತು ಪ್ರಕೃತಿಯ ನಿಯಮಗಳು ಬಿಗಿಯಾಗಿ ಬಂಧಿಸಿವೆ. ಕಂಡಿರಾ? ನಿಮ್ಮ ಕೈಕಾಲುಗಳನ್ನು ಬಿಗಿಯಾಗಿ ಕಟ್ಟಿಹಾಕಿದ್ದರೆ ನೀವು ಹೇಗೆ ತಾನೆ ಕೆಲಸ ಮಾಡಬಲ್ಲಿರಿ? ನಾಯಕರು ಪ್ರಕೃತಿಯ ಕಟ್ಟುನಿಟ್ಟಾದ ನಿಯಮಗಳ ನಿಯಂತ್ರಣದಲ್ಲಿದ್ದಾರೆ ಎನ್ನುವುದು ಅವರಿಗೇ ತಿಳಿದಿಲ್ಲ. ಉದಾಹರಣೆಗೆ ಒಂದು ಭಯಂಕರವಾದ ಭೂಕಂಪ ಸಂಭವಿಸಿತೆಂದುಕೊಳ್ಳಿ ಅಥವಾ ಅಟ್ಲಾಂಟಿಕ್‌ ಸಾಗರ ಮತ್ತು ಪೆಸಿಫಿಕ್‌ ಸಾಗರ ಪರಸ್ಪರ ಬೆರೆತು ಹೋದವೆಂದುಕೊಳ್ಳಿ (ವಿಜ್ಞಾನಿಗಳು ಹೀಗಾಗಬಹುದೆಂದು ಸೂಚಿಸಿದ್ದಾರೆ). ಆಗ ನೀವು ಪ್ರಕೃತಿಯ ನಿಯಮಗಳನ್ನು ಹೇಗೆ ನಿಯಂತ್ರಿಸಬಲ್ಲಿರಿ? ನಿಮ್ಮ ಕೈಕಾಲುಗಳನ್ನು ಪ್ರಕೃತಿಯ ನಿಯಮಗಳು ಬಿಗಿಯಾಗಿ ಕಟ್ಟಿಹಾಕಿವೆ. ಅದನ್ನು ನೀವು ತಡೆಯಲಾರಿರಿ. ಎಂದ ಮೇಲೆ ಪ್ರಕೃತಿಯ ನಿಯಮಗಳಿಂದ ಅತ್ಯಂತ ಬಿಗಿಯಾಗಿ ಬಂಧಿತರಾಗಿರುವ ಕುರುಡು ನಾಯಕರು ಅಂತಿಮ ಗುರಿಗೆ ಜನರನ್ನು ಹೇಗೆ ಮುನ್ನಡೆಸಬಲ್ಲರು? ಜೀವನದ ಅಂತಿಮ ಗುರಿಯೆಂದರೆ ದೇವರು ಅಥವಾ ಕೃಷ್ಣ. ಆದರೆ ಈ ನಾಯಕರು ಈ ಐಹಿಕ ಪ್ರಕೃತಿಯ ಹೊಳಪನ್ನು ಕಂಡು ಮರುಳಾಗಿದ್ದಾರೆ. ಆದ್ದರಿಂದ ಅವರು ನಮ್ಮನ್ನು ಕೃಷ್ಣನೆಡೆಗೆ ಮುನ್ನಡೆಸಲಾರರು.

ಹಾಗಾದರೆ ನಮ್ಮ ಸಮಸ್ಯೆಗೆ ಪರಿಹಾರವೇನು? ಮಾನಸಿಕ ಊಹಾಪೋಹ, ಸಮುದಾಯ ಸಭೆಗಳು, ಅಥವಾ ಅಧಿಕೃತ ಆಕರಗಳಿಂದ ಜ್ಞಾನವನ್ನು ಪಡೆಯುವುದು ಇವುಗಳಿಂದ ಕೃಷ್ಣಪ್ರಜ್ಞೆಯನ್ನು ಪಡೆಯಲು ಸಾಧ್ಯವಾಗುವುದಿಲ್ಲ ಎಂದರೆ, ಅದನ್ನು ಪಡೆಯುವುದು ಹೇಗೆ? ಜೀವನದ ಗುರಿಯನ್ನು ತಲಪುವುದು ಹೇಗೆ?

ಶ್ರೀಮದ್‌ ಭಾಗವತವು (7.5.32) ಈ ಪ್ರಶ್ನೆಗೆ ಉತ್ತರಿಸುತ್ತದೆ:

ನೈಷಾಂ ಮತಿಸ್ತಾವದ್‌ ಉರುಕ್ರಮಾಂಘ್ರಿಂ

          ಸ್ಪೃಶತಿ ಅನರ್ಥಾಪಗಮೋ ಯದ್‌ ಅರ್ಥಃ

ಮಹೀಯಸಾಂ ಪಾದರಜೋಽಭಿಷೇಕಂ

          ನಿಷ್ಕಿಂಚನಾನಾಂ ನ ವೃಣೀತ ಯಾವತ್‌

ಎಲ್ಲ ಐಹಿಕ ಹಾತೊರೆತಗಳನ್ನೂ ತ್ಯಾಗಮಾಡಿ (ನಿಷ್ಕಿಂಚನಾನಾಂ) ಕೃಷ್ಣನಿಗಾಗಿ ತನ್ನ ಜೀವನವನ್ನು ಸಂಪೂರ್ಣವಾಗಿ ಮುಡಿಪಾಗಿಟ್ಟ  (ಮಹೀಯಸಾಂ) ವ್ಯಕ್ತಿಯ ಪಾದಕಮಲಗಳ ಧೂಳನ್ನು ಸ್ಪರ್ಶಿಸುವ ಅವಕಾಶ ಸಿಗುವವರೆಗೂ ಒಬ್ಬ  ವ್ಯಕ್ತಿಯು ಕೃಷ್ಣನ ಪಾದಕಮಲಗಳಲ್ಲಿ ತನ್ನ ಮನಸ್ಸನ್ನು ಕೇಂದ್ರೀಕರಿಸಲಾರ. ಒಬ್ಬ ವ್ಯಕ್ತಿಗೆ ಅಂತಹ ಪುರುಷನ ಸಂಪರ್ಕ ಬಂದಾಗ, ಅವನ ಅನುಗ್ರಹದಿಂದ ಕೃಷ್ಣಪ್ರಜ್ಞೆಯನ್ನು ಪಡೆಯಬಹುದು – ಬೇರೆ ಇನ್ನು ಯಾವುದೇ ವಿಧಾನದಿಂದ ಸಾಧ್ಯವಿಲ್ಲ. ವ್ಯಕ್ತಿಯು ಸದ್ಗುರುವನ್ನು ಸಮೀಪಿಸಬೇಕು. ಅವರ ಕೃಪೆಯಿಂದ, ಅವರ ಅನುಗ್ರಹದಿಂದ ಕೃಷ್ಣಪ್ರಜ್ಞೆಯನ್ನು ಪಡೆಯಬಹುದು. ಮತ್ತು ಅವನು ಕೃಷ್ಣಪ್ರಜ್ಞೆಗೆ ದೀಕ್ಷೆಯನ್ನು ಪಡೆಯುತ್ತಿದ್ದಂತೆಯೇ ಆಧ್ಯಾತ್ಮಿಕ ಸಂತೃಪ್ತಿಯನ್ನು ಪರಿಭಾವಿಸುತ್ತಾನೆ. ಐಹಿಕ ಸಂಕೋಲೆಗಳಿಂದ ಅವನ ಬಿಡುಗಡೆಯು ಪ್ರಾರಂಭವಾಗುತ್ತದೆ. ಆಮೇಲೆ ಅವನು ಮತ್ತಷ್ಟು ಮತ್ತಷ್ಟು ಪ್ರಗತಿಯನ್ನು ಸಾಧಿಸುತ್ತಿದ್ದಂತೆ ಅವನ ಜೀವನವು ಮಹೋನ್ನತವಾಗುತ್ತದೆ.

ಕೃಷ್ಣಪ್ರಜ್ಞೆಯ ಪ್ರಪ್ರಥಮ ಪ್ರಯೋಜನವೆಂದರೆ, ವ್ಯಕ್ತಿಯು ಕೃಷ್ಣನ ಸಂಪರ್ಕಕ್ಕೆ ಬರುತ್ತಿದ್ದಂತೆಯೇ, ಕೂಡಲೇ ಐಹಿಕ ಅಸ್ತಿತ್ವದ ಎಲ್ಲ ಅನಾರೋಗ್ಯಕರವಾದ ಚಟುವಟಿಕೆಗಳನ್ನೂ ತೊರೆಯುತ್ತಾನೆ. ದಿಟದಲ್ಲಿ, ಯಾರಾದರೊಬ್ಬರು ಕೃಷ್ಣನ ಸಂಪರ್ಕದಲ್ಲಿದ್ದರೆ, ಪಾಪಪೂರಿತ ಚಟುವಟಿಕೆಗಳಿಂದ ಅವರು ಹೇಗೆ ಮುಕ್ತರಾಗಿದ್ದಾರೆ ಎನ್ನುವುದನ್ನು ನಾವು ಪರೀಕ್ಷಿಸಿ ನೋಡಬಹುದು. ಉದಾಹರಣೆಗೆ, ನಮ್ಮ ವಿದ್ಯಾರ್ಥಿಗಳನ್ನು ತೆಗೆದುಕೊಳ್ಳಿ. ಅವರು ಕೃಷ್ಣಪ್ರಜ್ಞೆಗೆ ದೀಕ್ಷೆಯನ್ನು ಪಡೆಯುತ್ತಿದ್ದಂತೆಯೇ, ಕೂಡಲೇ ಅನೇಕ ಪಾಪಪೂರ್ಣವಾದ ಚಟುವಟಿಕೆಗಳನ್ನು ತೊರೆದುಬಿಡುತ್ತಾರೆ. ಪಾಪಪೂರ್ಣ ಜೀವನದ ಮೂಲಭೂತ ಚಟುವಟಿಕೆಗಳೆಂದರೆ, ನ್ಯಾಯಬಾಹಿರ ಕಾಮ, ಮಾದಕವಸ್ತುಗಳ ಸೇವನೆ, ಮಾಂಸಭಕ್ಷಣೆ ಮತ್ತು ಜೂಜಾಟ. ಜನರಿಗೆ, ಅದರಲ್ಲೂ ವಿಶೇಷವಾಗಿ ಪಾಶ್ಚಾತ್ಯ ದೇಶಗಳಲ್ಲಿ, ಈ ಎಲ್ಲ ಹವ್ಯಾಸಗಳನ್ನು ತೊರೆಯುವುದು ಬಹಳ ಕಷ್ಟ. ಆದರೆ ನನ್ನ ಶಿಷ್ಯರು ಅವುಗಳನ್ನು ಬಹಳ ಸುಲಭವಾಗಿ ತೊರೆಯುತ್ತಾರೆ.

1935ರಲ್ಲಿ ನನ್ನ ದೈವ ಸೋದರರಲ್ಲೊಬ್ಬರು ಲಂಡನ್ನಿಗೆ ಹೋಗಿ ಜೆಟ್‌ಲ್ಯಾಂಡ್‌ನ ಮಾರ್ಕ್ವಿಸ್‌ನನ್ನು ಭೇಟಿಯಾದರು. ಅವರು ಸ್ಕಾಟ್ಲೆಂಡಿನ ವ್ಯಕ್ತಿ. ಅವರಿಗೆ ಭಾರತೀಯ ತತ್ತ್ವಜ್ಞಾನದಲ್ಲಿ ಬಹಳ ಆಸಕ್ತಿ ಇತ್ತು.  ಅವರು ನನ್ನ ದೈವ ಸೋದರರನ್ನು ಕೇಳಿದರು: “ಸ್ವಾಮೀಜಿ, ನೀವು ನನ್ನನ್ನು ಬ್ರಾಹ್ಮಣನನ್ನಾಗಿ ಮಾಡಬಲ್ಲಿರಾ?”

ಸ್ವಾಮೀಜಿ ಹೇಳಿದರು, “ಏಕಾಗಬಾರದು? ನಾವು ನಿಮ್ಮನ್ನು ಒಬ್ಬ ಬ್ರಾಹ್ಮಣನನ್ನಾಗಿ ಮಾಡಬಲ್ಲೆವು. ಆದರೆ ನೀವು ನಾಲ್ಕು ನಿಮಯಗಳನ್ನು ಪಾಲಿಸಬೇಕು. ನೀವು ನ್ಯಾಯಬಾಹಿರ ಕಾಮ, ಮಾದಕ ವಸ್ತುಗಳ ಸೇವನೆ, ಮಾಂಸಭಕ್ಷಣೆ ಮತ್ತು ಜೂಜಾಡುವುದನ್ನು ತೊರೆಯಬೇಕು. ಆಗ ನೀವು ಒಬ್ಬ ಬ್ರಾಹ್ಮಣರಾಗಬಹುದು.”

“ಓಹ್‌, ಅದು ಅಸಾಧ್ಯ.”

ನೋಡಿದಿರಾ? ಜೆಟ್‌ಲ್ಯಾಂಡ್‌ನ ಮಾರ್ಕ್ವಿಸ್‌ ಒಬ್ಬರು ಮಹಾಪುರುಷನಾಗಿದ್ದರು. ಅವರಿಗೆ ತತ್ತ್ವಶಾಸ್ತ್ರದಲ್ಲಿ ಆಸಕ್ತಿ ಇತ್ತು. ಸರ್ಕಾರದಲ್ಲಿ ಅವರಿಗೆ ಉನ್ನತ ಸ್ಥಾನಮಾನವಿತ್ತು. ಅವರು ಜವಾಬ್ದಾರಿಯುತ ವ್ಯಕ್ತಿಯಾಗಿದ್ದರು. ಆದರೂ ಕೂಡ ಈ ನಾಲ್ಕು ಪಾಪಪೂರ್ಣವಾದ ಚಟುವಟಿಕೆಗಳನ್ನು ಬಿಡಲು ಅವರು ಸಾರಾಸಗಟಾಗಿ ನಿರಾಕರಿಸಿದರು. ಆದರೆ ಕೃಷ್ಣಪ್ರಜ್ಞೆಗೆ ಬರುತ್ತಿರುವ ನೂರಾರು ಜನ ನಮ್ಮ ಶಿಷ್ಯರು, ತರುಣ ತರುಣಿಯರು ಬಹಳ ಸುಲಭವಾಗಿ ಈ ಹವ್ಯಾಸಗಳನ್ನು ತೊರೆಯುತ್ತಿದ್ದಾರೆ. ಅವರಿಗೆ ಅದರಿಂದ ಅನನುಕೂಲವಾಗಿದೆ ಎಂಬ ಭಾವನೆಯೇನು ಬರುತ್ತಿಲ್ಲ. ಇದು ಕೃಷ್ಣಪ್ರಜ್ಞೆಯ ಪ್ರಪ್ರಥಮ ಪ್ರಯೋಜನ : ಪ್ರಾರಂಭದಲ್ಲಿಯೇ ವ್ಯಕ್ತಿಯು ಎಲ್ಲ ಬಗೆಯ ಪಾಪಪೂರ್ಣ ಕೃತ್ಯಗಳಿಂದ ವಿಮೋಚನೆಯನ್ನು ಪಡೆಯುತ್ತಾನೆ.

ನಮ್ಮ ಶಿಷ್ಯರು ಈ ಸಂಗತಿಗಳನ್ನು ಬಿಡುವುದು ಸಾಧ್ಯವಾದದ್ದಾದರೂ ಹೇಗೆ? ಏಕೆಂದರೆ ಅವರಿಗೆ ಕೃಷ್ಣಪ್ರಜ್ಞೆಯಲ್ಲಿ ಆಧ್ಯಾತ್ಮಿಕ ಸಂತೃಪ್ತಿಯ ಭಾವನೆಯುಂಟಾಗುತ್ತಿದೆ. ನಮ್ಮ ಶಿಷ್ಯರು ದೇವರ  ಮುಂದೆ ಕುಳಿತು ಇಪ್ಪತ್ತನಾಲ್ಕು ಗಂಟೆಗಳ ಕಾಲ ಹರೇಕೃಷ್ಣ ಮಂತ್ರವನ್ನು ಸಂಕೀರ್ತನೆ ಮಾಡಬಲ್ಲರು. ಬೇರೆ ಯಾವುದೇ ಯೋಗ ಸಂಘದಿಂದ ಯಾವುದೇ ವಿದ್ಯಾರ್ಥಿಯನ್ನು ಕರೆದುಕೊಂಡು ಬಂದು ಐದು ಗಂಟೆಗಳ ಕಾಲ ಕುಳಿತುಕೊಳ್ಳಲು ಹೇಳಿ. ಅವನು ವಿಫಲನಾಗುತ್ತಾನೆ, ಚಡಪಡಿಸುತ್ತಾನೆ. ಈ ಯೋಗ ಸಂಘಗಳೆಂದು ಹೇಳಿಕೊಳ್ಳುವವರು ತಮ್ಮ ವಿದ್ಯಾರ್ಥಿಗಳಿಗೆ ಯಾವುದೋ ಒಂದು ವಿಧ್ಯುಕ್ತವಾದ ಧ್ಯಾನವಿಧಾನವನ್ನು ಸುಮ್ಮನೆ ಬೋಧಿಸುತ್ತಾರೆ: ಹದಿನೈದು ನಿಮಿಷಗಳಿಂದ ಅರ್ಧಗಂಟೆಯ ಕಾಲ ಕಣ್ಣುಗಳನ್ನು ಮುಚ್ಚಿ ಏನನ್ನೋ ಮಣಮಣಿಸುವುದು. ಆದರೆ ನಮ್ಮ ವಿದ್ಯಾರ್ಥಿಗಳು ಕೃಷ್ಣಪ್ರಜ್ಞೆಯಲ್ಲಿ ಇಪ್ಪತ್ತನಾಲ್ಕು ಗಂಟೆಗಳ ಕಾಲವೂ ತೊಡಗಿಕೊಂಡಿರುತ್ತಾರೆ. ಅವರಿಗೆ ಹೇಗನ್ನಿಸುತ್ತಿದೆ ಎಂದು ಯಾರು ಬೇಕಾದರೂ ಬಂದು ವಿಚಾರಿಸಬಹುದು. ಯಾವುದೋ ಒಂದು ಆಧ್ಯಾತ್ಮಿಕ ಸಂತೃಪ್ತಿ ಇಲ್ಲದಿದ್ದರೆ ಅವರು ಹೇಗೆ ಎಲ್ಲವನ್ನೂ ತೊರೆದು ಕೇವಲ ಕೃಷ್ಣನ ಸೇವೆಯಲ್ಲಿ ಮಗ್ನರಾಗುತ್ತಿದ್ದರು?

ಈಗ, ಯಾರಾದರೊಬ್ಬರು ಕೇಳಬಹುದು, “ಒಂದು ಪಕ್ಷ ಒಬ್ಬ ವ್ಯಕ್ತಿಯು ಭಾವಪರವಶನಾಗಿ ಕೃಷ್ಣಪ್ರಜ್ಞೆಯನ್ನು ಸ್ವೀಕರಿಸುತ್ತಾನೆ, ಆದರೆ ಆ ಪ್ರಕ್ರಿಯೆಯನ್ನು ಅವರು ಪೂರ್ಣಗೊಳಿಸಲಾಗುವುದಿಲ್ಲ. ಆಗ ಅವನ ಗತಿ ಏನು?” ಈ ಪ್ರಶ್ನೆಗೆ ಕೂಡ ಶ್ರೀಮದ್‌ ಭಾಗವತದಲ್ಲಿ ಉತ್ತರಿಸಲಾಗಿದೆ (1.5.17):

ತ್ಯಕ್ತ್ವಾ ಸ್ವಧರ್ಮಂ ಚರಣಾಂಬುಜಂ ಹರೇಃ

          ಭಜನ್ನ್‌ ಅಪಕ್ವೋಽಥ ಪತೇತ್‌ ತತೋ ಯದಿ

ಯಾತ್ರ ಕ್ವ ವಾಭದ್ರಮ್‌ ಅಭೂದ್‌ ಅಮುಷ್ಯ ಕಿಂ

          ಕೋ ವಾರ್ಥ ಆಪ್ತೋಽಭಜತಾಂ ಸ್ವಧರ್ಮತಃ

ಸ್ವಧರ್ಮ ಎಂಬ ಶಬ್ದಕ್ಕೆ “ನಿರ್ದಿಷ್ಟವಾದ ಕರ್ತವ್ಯ” ಎಂದು ಅರ್ಥ. ಪ್ರತಿಯೊಬ್ಬನಿಗೂ ಒಂದು ನಿರ್ದಿಷ್ಟವಾದ ಕರ್ತವ್ಯ ಅಥವಾ ವೃತ್ತಿ ಇರುತ್ತದೆ. ಹೀಗೆ ಯಾರಾದರೊಬ್ಬರು ತಮ್ಮ ನಿರ್ದಿಷ್ಟವಾದ ಕರ್ತವ್ಯವನ್ನು ತೊರೆದು ಕೃಷ್ಣಪ್ರಜ್ಞೆಯನ್ನು ಆಚರಿಸಲು ಪ್ರಾರಂಭಿಸಬಹುದು. ನನ್ನ ಎಲ್ಲ ವಿದ್ಯಾರ್ಥಿಗಳೂ ಬೇರೆ ಯಾವುದರಲ್ಲೋ ಮಗ್ನರಾಗಿದ್ದವರು, ಆದರೆ ಇದ್ದಕ್ಕಿದ್ದಂತೆಯೇ ಅದನ್ನು ತೊರೆದು ಕೃಷ್ಣಪ್ರಜ್ಞಾ ಆಂದೋಲನವನ್ನು ಸೇರಿಕೊಂಡರು. ಹೀಗೆ ಯಾರು ಬೇಕಾದರೂ ಇದನ್ನು ಮಾಡಬಹುದು. ಕೃಷ್ಣಪ್ರಜ್ಞೆಯನ್ನು ಕುರಿತು ಕೆಲವು ಉಪನ್ಯಾಸಗಳನ್ನು ಕೇಳಿದ ಮೇಲೆ ಯಾರಾದರೊಬ್ಬರು ಹೀಗೆ ನಿರ್ಧರಿಸಬಹುದು, “ನಾನು ಈಗ ಕೃಷ್ಣಪ್ರಜ್ಞೆಯನ್ನು ಪ್ರಾರಂಭಿಸುವೆ.” ಅವರು ತಮ್ಮ ವೃತ್ತಿಯನ್ನು ತೊರೆದು ಹರೇಕೃಷ್ಣ ಜಪವನ್ನು ಪ್ರಾರಂಭಿಸುತ್ತಾರೆ ಮತ್ತು ಇತರ ಭಕ್ತಿತತ್ತ್ವಗಳನ್ನು ಅನುಸರಿಸಲು ತೊಡಗುತ್ತಾರೆ. ಆದರೆ ಇದ್ದಕ್ಕಿದ್ದಂತೆಯೇ ಅವರು ಅವುಗಳನ್ನು ತೊರೆಯುತ್ತಾರೆ. ಯಾವುದೋ ಕಾರಣದಿಂದ, ಯಾವುದೋ ದುರದೃಷ್ಟಕರ ಸನ್ನಿವೇಶದಿಂದ ಕೃಷ್ಣಪ್ರಜ್ಞೆಯನ್ನು ಅವರು ಚೆನ್ನಾಗಿ ಮುಂದುವರಿಸಲಾಗುವುದಿಲ್ಲ. ಅದನ್ನು ಬಿಟ್ಟು ಬಿಡುತ್ತಾರೆ. ಭಾಗವತವು ಹೇಳುವುದೇನೆಂದರೆ ಒಬ್ಬ ವ್ಯಕ್ತಿಯು ಅಪಕ್ವತೆಯಿಂದಾಗಿ ಕೃಷ್ಣಪ್ರಜ್ಞೆಯನ್ನು ಕೈಬಿಟ್ಟರೂ ಕೂಡ ಅದರಿಂದ ಏನೂ ನಷ್ಟವಿಲ್ಲ. ಏಕೆಂದರೆ ಅವನು ಮುಂದಿನ ಜನ್ಮದಲ್ಲಿ ಮತ್ತೆ ಕೈಗೆತ್ತಿಕೊಳ್ಳುತ್ತಾನೆ.

ಆದರೆ ಭಾಗವತವು ಮತ್ತೆ ಹೀಗೆ ಹೇಳುತ್ತದೆ, ಕೋ ವಾರ್ಥ ಆಪ್ತೋಽಭಜತಾಂ ಸ್ವಧರ್ಮತಃ “ವ್ಯಕ್ತಿಯೊಬ್ಬನು ಕೃಷ್ಣಪ್ರಜ್ಞೆಯಿಲ್ಲದೆ ತನ್ನ ವೃತ್ತಿ ಕರ್ತವ್ಯದಲ್ಲಿ ಒಂದೇ ಸಮನೆ ನಿರತನಾಗಿದ್ದರೆ ಏನು ಪ್ರಯೋಜನ?” ಅವನು ಕೇವಲ ನಷ್ಟಿಪ. ಏಕೆಂದರೆ ಅವನಿಗೆ ತನ್ನ ಜೀವನದ ಗುರಿ ಏನೆಂದು ಗೊತ್ತಿಲ್ಲ. ಆದರೆ ಒಬ್ಬ ವ್ಯಕ್ತಿಯು ಕೇವಲ ಕೆಲವು ದಿನಗಳ ಕಾಲ ಕೃಷ್ಣಪ್ರಜ್ಞೆಯನ್ನು ಸ್ವೀಕರಿಸಿದರೂ, ಕೃಷ್ಣಪ್ರಜ್ಞೆಯ ಚುಚ್ಚುಮದ್ದು ಅವನಿಗೆ ದೊರೆತರೆ, ಮುಂದಿನ ಜನ್ಮದಲ್ಲಿ ಅವನು ಅದನ್ನು ಮತ್ತೆ ಕೈಗೆತ್ತಿಕೊಳ್ಳುತ್ತಾನೆ. ಆದ್ದರಿಂದ ಅವನಿಗೆ ನಷ್ಟವೇನಿಲ್ಲ. ಆ ಒಂದು ಚುಚ್ಚುಮದ್ದು ಅವನನ್ನು ಒಂದು ದಿನ ಕೃಷ್ಣಪ್ರಜ್ಞೆಯಲ್ಲಿ ಪರಿಪೂರ್ಣನನ್ನಾಗಿ ಮಾಡುತ್ತದೆ. ಅವನು ಭಗವದ್ಧಾಮಕ್ಕೆ ಹಿಂತಿರುಗುವುದು ಖಚಿತ.

ಆದ್ದರಿಂದ ಕೃಷ್ಣಪ್ರಜ್ಞೆಯ ಕಾರ್ಯವನ್ನು ಮುಂದುವರಿಸಿ, ಮತ್ತು ಸಾಧ್ಯವಾದ ಮಟ್ಟಿಗೂ ಕೃಷ್ಣಪ್ರಜ್ಞೆಯನ್ನು ಪ್ರಸಾರ ಮಾಡಿ. ನಿಮ್ಮ ಪ್ರಯತ್ನಗಳು ವ್ಯರ್ಥವಾಗುವುದಿಲ್ಲ ಎಂಬ ಬಗೆಗೆ ಭರವಸೆಯನ್ನಿಡಿ. ಅವು ಎಂದೂ ವ್ಯರ್ಥವಾಗುವುದಿಲ್ಲ. ಕೃಷ್ಣನು ನಿಮಗೆ ಧಾರಾಳವಾಗಿ ಪ್ರತಿಫಲವನ್ನು ಕೊಡುತ್ತಾನೆ.

ವಂದನೆಗಳು.

ಈ ಲೇಖನ ಶೇರ್ ಮಾಡಿ