ಕೃಷ್ಣ ಕಾಳ್ಗಿಚ್ಚು ನುಂಗಿದ್ದು

ದಿಢೀರನೆ ಕಾಡ್ಗಿಚ್ಚು ಎಲ್ಲ ಕಡೆಯಿಂದಲೂ ಕಾಣಿಸಿಕೊಂಡು ಅರಣ್ಯ ಜೀವಗಳ ನಾಶದ ಬೆದರಿಕೆ ಒಡ್ಡಿತು. ಗಾಳಿಯು ಬೆಂಕಿಯನ್ನು ಮುಂದಕ್ಕೆ ಹರಡುವಂತೆ ಮಾಡಿತು ಮತ್ತು ಎಲ್ಲ ದಿಕ್ಕಿನಲ್ಲಿಯೂ ಭಯಂಕರ ಕಿಡಿ. ನಿಜಕ್ಕೂ, ಈ ಭಯಾನಕ ಬೆಂಕಿಯು ತನ್ನ ಕೆನ್ನಾಲಗೆಯನ್ನು ಸಕಲ ಚರಾಚರ ಜೀವಿಗಳತ್ತ ಚಾಚಿತು.

ಎಲ್ಲ ದಿಕ್ಕಿನಿಂದಲೂ ತಮ್ಮ ಮೇಲೆ ದಾಳಿ ನಡೆಸುತ್ತಿದ್ದ ಕಾಡ್ಗಿಚ್ಚನ್ನು ನೋಡಿ ಹಸುಗಳು ಮತ್ತು ಗೋಪಾಲ ಬಾಲಕರು ಭಯಭೀತರಾದರು. ಬಾಲಕರು ಅನಂತರ ಕೃಷ್ಣ ಮತ್ತು ಬಲರಾಮರ ಆಶ್ರಯ ಕೋರಿದರು. “ಓ, ಕೃಷ್ಣ, ಕೃಷ್ಣ! ಅತ್ಯಂತ ಶಕ್ತಿಶಾಲಿ! ಓ ರಾಮ! ಎಂದೂ ವೈಫಲ್ಯವಾಗದ ಪರಾಕ್ರಮಿ! ಕಾಡ್ಗಿಚ್ಚಿನಿಂದ ಇನ್ನೇನು ಸುಟ್ಟುಹೋಗಲಿರುವ ನಿಮ್ಮ ಈ ಭಕ್ತರನ್ನು ಕಾಪಾಡಿ. ನಾವು ನಿಮ್ಮ ಆಶ್ರಯ ಕೋರಿ ಬಂದಿದ್ದೇವೆ.”

ತನ್ನ ಮಿತ್ರರ ಕರುಣಾಜನಕ ಮಾತುಗಳನ್ನು ಕೇಳಿ ಕೃಷ್ಣನೆಂದ, “ಸುಮ್ಮನೆ ನಿಮ್ಮ ಕಣ್ಣುಗಳನ್ನು ಮುಚ್ಚಿಕೊಳ್ಳಿ. ಭಯಪಡಬೇಡಿ.” ಬಾಲಕರು ತತ್‌ಕ್ಷಣ ತಮ್ಮ ತಮ್ಮ ಕಣ್ಣುಗಳನ್ನು ಮುಚ್ಚಿಕೊಂಡರು. ಎಲ್ಲ ಯೋಗಶಕ್ತಿಯ ಒಡೆಯನಾದ ಕೃಷ್ಣನು ತನ್ನ ಬಾಯಿ ತೆರೆದು ಆ ಭಯಂಕರ ಬೆಂಕಿಯನ್ನು ನುಂಗಿದ ಮತ್ತು ತನ್ನ ಮಿತ್ರರನ್ನು ಅಪಾಯದಿಂದ ಪಾರು ಮಾಡಿದ. ಗೋಪಾಲ ಬಾಲಕರು ತಮ್ಮ ಕಣ್ಣುಗಳನ್ನು ತೆರೆದು ಚಕಿತಗೊಂಡರು. ತಾವು ಮತ್ತು ಹಸುಗಳು ಪಾರಾಗಿದ್ದುದಲ್ಲದೆ ತಮ್ಮನ್ನು ಭಾಂಡೀರ ವನದ ಬಳಿಗೆ ವಾಪಸು ಕರೆತಂದಿರುವುದನ್ನು ಅವರು ಕಂಡರು. ಭಗವಂತನ ಆಂತರಿಕ ಶಕ್ತಿಯಿಂದ ಸೃಷ್ಟಿಗೊಂಡ ಅದ್ಭುತ ಶಕ್ತಿಯಿಂದ ತಮ್ಮನ್ನು ಕಾಪಾಡಿರುವುದನ್ನು ಕಂಡ ಕೂಡಲೇ ಅವರು ಕೃಷ್ಣನು ದೇವತೆ ಇರಬಹುದೆಂದು ಯೋಚಿಸಲಾರಂಭಿಸಿದರು.

ಈ ಲೇಖನ ಶೇರ್ ಮಾಡಿ