ಕೃಷ್ಣ, ನಮ್ಮ ಪ್ರೀತಿಯ ಚೋರ

ಕೃಷ್ಣನ ಅತ್ತೆ ಪ್ರಭಾವತಿ ಆಗಷ್ಟೇ ಮೊಸರಿನಿಂದ ಬೆಣ್ಣೆ ತೆಗೆದು  ಮಡಕೆಯಲ್ಲಿಟ್ಟು  ಸಾಮಾನು ಕೋಣೆಯಲ್ಲಿ ಭದ್ರ ಪಡಿಸಿದಳು. ಕೋಣೆಗೆ ಬೀಗ ಹಾಕಿ ಬೀಗದ ಕೈಯನ್ನು ಅಡುಗೆ ಮನೆಯ ಬಾಗಿಲಿನ ಹಿಂದೆ ಸಿಗಿಸಿದಳು. ಮಾರುಕಟ್ಟೆಗೆ ಹೋಗಲು ಸಿದ್ಧಳಾದಳು. ಆಗ ಮನೆಯ ಗೋಡೆಯಾಚೆ ಏನೋ ಸದ್ದಾಯಿತು. `ಕೃಷ್ಣ ಯಾವುದೇ ಗಳಿಗೆಯಲ್ಲಿ ಬಂದು ಬೆಣ್ಣೆ ಕದಿಯುತ್ತಾನೆ ಎಂಬ ಅನುಮಾನವಿದೆ. ಆದುದರಿಂದ ಅವನು ಗೋಡೆ ಹಿಂದೆ ಅವತಿಕೊಂಡಿದ್ದಾನೆಂದು ನಾನು ಕಲ್ಪಿಸಿಕೊಳ್ಳುತ್ತಿರುವೆ’ ಎಂದುಕೊಳ್ಳುತ್ತ ಅವಳು ಪೇಟೆಗೆ ಹೋದಳು.

ಅತ್ತೆ ಅತ್ತ ಹೋದಕೂಡಲೇ ಗೋಡೆಯಾಚೆ ಪುಟ್ಟಪುಟ್ಟ ಹೆಜ್ಜೆ ಧ್ವನಿ ಕೇಳಿಬಂದವು. ಕೃಷ್ಣ, ಬಲರಾಮ, ಮಧುಮಂಗಳ ಮತ್ತು ಸುಬಾಲ ಮನೆಯ ಹಿತ್ತಲಿನ ತೋಟದ ಮೂಲಕ ಕಳ್ಳ ಹೆಜ್ಜೆಯಲ್ಲಿ ಒಳಗೆ ಬಂದರು. ಓಡುತ್ತಲೇ ಸಾಮಾನು ಕೋಣೆಗೆ ಬಂದರು. ಅವರ ಮಂಗ ಮಿತ್ರ ದಧಿಲೋಬ ಅವರನ್ನು ಹಿಂಬಾಲಿಸಿತು. ಅದಕ್ಕೆ ಮಕ್ಕಳೊಂದಿಗೆ ಸಾಹಸ ಬಲು ಪ್ರಿಯ. ಅವರ ಆಟದಲ್ಲಿ ಅದಕ್ಕೆ ಪಾತ್ರವಂತೂ ಇದ್ದೇ ಇರುತ್ತಿತ್ತು! ಬೆಣ್ಣೆಯೂ ಸಿಗುತ್ತಿತ್ತಲ್ಲ!

ಬಲರಾಮ ಅಡುಗೆ ಮನೆ ಬಾಗಿಲು ತಳ್ಳಿ ಅದರ ಹಿಂದೆ ನೇತು ಹಾಕಿದ್ದ ಬೀಗದ ಕೈ ತೆಗೆದುಕೊಂಡ. ಹಿಂದೆ ಮುಂದೆ ನೋಡುತ್ತ ಮಕ್ಕಳು ಕಳ್ಳ ಹೆಜ್ಜೆ ಇಡುತ್ತ ಸಾಮಾನು ಕೋಣೆಗೆ ಬಂದು ಬಾಗಿಲು ತೆರೆದು ಒಳಹೋಗಿ ತತ್‌ಕ್ಷಣ ಬಾಗಿಲು ಹಾಕಿಕೊಂಡರು. ಸೂರ್ಯನ ಬೆಳಕಿನ ಕಿರಣ ಕೋಣೆ ತುಂಬೆಲ್ಲ ಪಸರಿಸಿತ್ತು. ಎಲ್ಲ ಸ್ಪಷ್ಟವಾಗಿ ಕಾಣುತ್ತಿತ್ತು. ಬೆಣ್ಣೆಯ ಮಡಕೆಗಳನ್ನು ಸಾಮಾನ್ಯವಾಗಿ ಇಡುವ ಸ್ಥಳಕ್ಕೆ ಹೋದರೆ ಮಕ್ಕಳಿಗೆ ಆಘಾತ ಕಾದಿತ್ತು. ಅಲ್ಲಿ ಬೆಣ್ಣೆಯ ಮಡಕೆ ಇರಲಿಲ್ಲ! ಇಡೀ ಕೋಣೆಯನ್ನು ಶೋಧಿಸಿದರೂ ಬೆಣ್ಣೆ ಸಿಗಲಿಲ್ಲ.

ಆಗ ಕೃಷ್ಣನ ಕೈಮೇಲೆ ಬಿತ್ತು, ಬೆಣ್ಣೆ! ತಲೆ ಎತ್ತಿ ನೋಡಿದರೆ, ಬೆಣ್ಣೆಯ ಮಡಕೆಗಳನ್ನು ತೂಗುಹಾಕಿರುವುದು ಕಂಡಿತು. ಕೃಷ್ಣನ ಕಳ್ಳ ಬುದ್ಧಿ ಗೊತ್ತಿದ್ದ ಪ್ರಭಾವತಿ ಬೆಣ್ಣೆ ಮಡಕೆಯನ್ನು ಎತ್ತರದಲ್ಲಿ ತೂಗು ಹಾಕಿದ್ದಳು, ಆ ಎತ್ತರಕ್ಕೆ ಕೃಷ್ಣ ಹತ್ತಲಾರನೆಂಬ ನಂಬಿಕೆಯಿಂದ. ಆದರೆ ಎಷ್ಟೇ ಎತ್ತರದಲ್ಲಿರಲಿ ಬೆಣ್ಣೆಯನ್ನು ಪಡೆಯಲೇಬೇಕೆಂಬ ದೃಢ ಸಂಕಲ್ಪ ಮಾಡಿದ್ದ ಕೃಷ್ಣ ಮತ್ತು ಮಿತ್ರರು, ಉಪಾಯ ಮಾಡತೊಡಗಿದರು. ಅಲ್ಲಿದ್ದ ಡಬ್ಬಗಳನ್ನು ಒಂದರಮೇಲೊಂದರಂತೆ ಇಟ್ಟರೂ ಅಷ್ಟು ಮೇಲೇರಲಾಗಲಿಲ್ಲ.

ಕೃಷ್ಣನಿಗೆ ಭರ್ಜರಿ ಉಪಾಯ ಹೊಳೆದು ಬಿಟ್ಟಿತ್ತು. ಮಧುಮಂಗಳ ಬಗ್ಗಿರುವಂತೆ ಮಾಡಿ ಅವನ ಮೇಲೆ ನಿಲ್ಲುವಂತೆ  ಬಲರಾಮನಿಗೆ ಹೇಳಿದ. ಸುಬಲನು ಬಲರಾಮನ ಮೇಲೆ ನಿಂತ. ಈ ಪಿರಿಮಿಡ್‌ ಏರಿದ ಕೃಷ್ಣ ತನ್ನ ಕೈ ಬೆಣ್ಣೆ ಮಡಕೆ ಮುಟ್ಟುವುದನ್ನು ಖಚಿತಪಡಿಸಿಕೊಂಡ. ಕೆಳಗಿದ್ದ ದಧಿಲೋಬ ಕೃಷ್ಣ ಒಂದಾದರೊಂದಂತೆ ನೀಡಿದ ಬೆಣ್ಣೆ ಮಡಕೆಯನ್ನು ಪಡೆದು ಕೆಳಗೆ ಇಡತೊಡಗಿತು. ಅವರ ಸಾಹಸದ ಮುಖ್ಯ ಘಟ್ಟ ಬಂದಿತು. ಅವರೆಲ್ಲ ನೆಲದ ಮೇಲೆ ಆರಾಮವಾಗಿ ಕೂತರು. ಮಡಕೆಯೊಳಗೆ ಕೈಹಾಕಿ ಅತ್ಯಂತ ರುಚಿಯಾದ ಬೆಣ್ಣೆಯನ್ನು ಮೆಲ್ಲತೊಡಗಿದರು. ಕೈತುಂಬಾ ಬೆಣ್ಣೆ ತೆಗೆದುಕೊಂಡು ಬಾಯಿಗಿಟ್ಟುಕೊಳ್ಳುತ್ತಿದ್ದ ಈ ನವನೀತ ಚೋರರಿಗೆ ಸಮಯದ ಪರಿವೇ ಇರಲಿಲ್ಲ. ಹೊಟ್ಟೆ ತುಂಬುವಷ್ಟು ತಿಂದರು.

ದಿಢೀರನೆ ಬಾಗಿಲು ತೆರೆಯಿತು. ಅಲ್ಲಿ ನಿಂತಿದ್ದರು, ಪ್ರಭಾವತಿ ಕೋಪ ದೃಷ್ಟಿ ಬೀರುತ್ತ. ಸಿಟ್ಟಿನಿಂದ ನಡುಗುತ್ತಿದ್ದ ಅವಳಿಗೆ `ಕೃಷ್ಣ!’ ಎಂದಷ್ಟೇ ಹೇಳುವುದು ಸಾಧ್ಯವಾಯಿತು. ಕೃಷ್ಣನ ಕೈಯನ್ನು ದರದರನೆ ಎಳೆದು ಮನೆಯತ್ತ  ಧಾವಿಸಿದಳು. ಪ್ರಭಾವತಿ, ಕೃಷ್ಣ ಬಂದಾಗ ಯಶೋದ ಮನೆ ಅಂಗಳದಲ್ಲಿ ಹಕ್ಕಿಗಳಿಗೆ ಕಾಳು ಹಾಕುತ್ತಿದ್ದಳು.

`ಓ! ಪ್ರಭಾವತಿ, ಬಾ ಕುಳಿತುಕೊ.’ ಎಂದು ಯಶೋದ ಸ್ವಾಗತಿಸಿದಳು.

`ಈ ಬಾರಿ ನಾನೇ ಅವನನ್ನು ಕರೆತಂದಿರುವೆ ! ನಮ್ಮ ಮನೆಯಿಂದ ಬೆಣ್ಣೆ ಕದಿಯುತ್ತಿದ್ದುದು ಇವನೇ ಎಂದು ನಾನು ನಿನಗೆ ಹೇಳುತ್ತಿರಲಿಲ್ಲವೇ?  ಇಂದು ಮಾಲು ಸಮೇತ ಹಿಡಿದಿರುವೆ. ನೋಡಿಲ್ಲಿ!’ ಎಂದು ಪ್ರಭಾವತಿ ಕೋಪದಿಂದಲೇ ಯಶೋದೆಗೆ ಹೇಳಿದಳು.

ಯಶೋದೆ ಅಚ್ಚರಿಯಿಂದ ಉತ್ತರಿಸಿದಳು : `ಯಾರನ್ನು ಕರೆತಂದಿರುವೆ? ಇವನು ನಿಮ್ಮ ಮನೆಯಿಂದ ಬೆಣ್ಣೆ ಕದ್ದನೇ?’

`ಕೃಷ್ಣನನ್ನು ! ಯಶೋದ,  ನಿನ್ನ ತುಂಟಮಗನ ಆಟ ಮಿತಿ ಮೀರಿದೆ!’ ಎಂದು ಪ್ರಭಾವತಿ ನುಡಿದಳು.

`ಅರೇ, ಪ್ರಭಾವತಿ, ನಿನಗೆ ಸುಸ್ತಾಗಿರಬೇಕು. ನಿನ್ನ ಜೊತೆ ಇರುವುದು ಕೃಷ್ಣ ಅಲ್ಲ! ‘  ಎಂದು ಅವಳು ಗೋಪಿಯತ್ತ ಸಹಾನುಭೂತಿ ದೃಷ್ಟಿ ಬೀರಿದಳು.

ಪ್ರಭಾವತಿ ಪ್ರತಿವಾದಿಸಿದಳು. `ಏನು ಹೇಳುತ್ತಿರುವೆ? ಕೃಷ್ಣ ಅಲ್ಲವೇ?’ ಅನಂತರ ತಿರುಗಿ ನೋಡಿ `ಚಂದ್ರ, ನನ್ನ ಮಗ!  ಆದರೆ ನನ್ನ ಜೊತೆ ಕೃಷ್ಣನನ್ನು ಕರೆತಂದದ್ದು ನನಗೆ ಚೆನ್ನಾಗಿ ಗೊತ್ತು!’ ಎಂದಳು.

ಅಮ್ಮನತ್ತ ನೋಡಿದ ಚಂದ್ರ, `ಅಮ್ಮಾ, ಇದು ನಾನೇ, ನಿನ್ನ ಮಗ!’ ಎಂದ.

ಪ್ರಭಾವತಿಗೆ ನಂಬಲೇ ಆಗಲಿಲ್ಲ.  `ಕೃಷ್ಣ ತನ್ನ ಮಿತ್ರರ ಜೊತೆ ನಮ್ಮ ಮನೆ ಸಾಮಾನು ಕೋಣೆಯಲ್ಲಿ ಬೆಣ್ಣೆ ತಿನ್ನುತ್ತಿದ್ದುದನ್ನು ನೋಡಿದೆ. ಅವನ ಕೈಹಿಡಿದು ರಸ್ತೆಯಲ್ಲಿ ಬಂದೆ. ನಿನ್ನ ಮನೆಗೆ ಅವನೊಂದಿಗೆ ಬಂದದ್ದೂ ನಿಜ..’

`ಓ! ಬಾ, ಸ್ವಲ್ಪ ವಿಶ್ರಾಂತಿ ತೆಗೆದುಕೋ. ದಣಿದಿರುವೆ, ತಣ್ಣಗೆ ಏನಾದರೂ ಕೊಡುವೆ.’ ಎಂದ ಯಶೋದ, ಚಂದ್ರನತ್ತ ತಿರುಗಿ `ಅಮ್ಮನ ಜೊತೆ ಹೀಗೆ ಆಡಬೇಡ, ಮತ್ತೆ!’ ಎಂದಳು.

ಪ್ರಭಾವತಿಗೆ ಗೊಂದಲ. ತತ್‌ಕ್ಷಣ ಚಂದ್ರನ ಕೈ ಹಿಡಿದು ಯಶೋದೆಯ ಅಂಗಳದಿಂದ ಹೊರನಡೆದಳು, ತನ್ನಲ್ಲೇ ಏನೋ ಮಾತನಾಡುತ್ತ.

`ಅಮ್ಮಾ, ಆ ತುಂಟ ಕೃಷ್ಣ… ನಿನಗೆ ನಿನ್ನ ಮಗ ಖಂಡಿತ ಗೊತ್ತಿರಬೇಕಲ್ಲವೇ? ‘ ಎಂದು ಚಂದ್ರ ನುಡಿದ.

ಮಗನಿಗೆ ಉತ್ತರಿಸಲು ಅವಳು ತಿರುಗಿ ನೋಡಿದಳು. ಅಲ್ಲಿ ಮಗ ಚಂದ್ರ ಇರಲಿಲ್ಲ, ಕೃಷ್ಣ ಇದ್ದ! `ಕೃಷ್ಣ ಏನಿದು? ಯಶೋದೆ ಮನೆಯಿಂದ ಚಂದ್ರ ನನ್ನ ಜೊತೆ ಹೊರಟ ಎಂದುಕೊಂಡೆ! ‘

ಕಿಲಕಿಲನೆ ನಕ್ಕ ಕೃಷ್ಣ. `ಅಮ್ಮಾ , ಪ್ರಭಾವತಿ ನೀನು ಎಚ್ಚರದಿಂದಿರಬೇಕು.’

ಅವಳಿಗೆ ಏನೂ ಅರ್ಥವಾಗಲಿಲ್ಲ. ಇನ್ನಷ್ಟು ಗೊಂದಲ.`ಕೃಷ್ಣ, ಹೀಗೆ ಯಾಕೆ ಮಾಡುವೆ?’ ಎಂದಳು.

ಕೃಷ್ಣನೆಂದ : `ಅಮ್ಮಾ, ನಿನ್ನ ಮನೆಯಿಂದ ಬೆಣ್ಣೆ ಏಕೆ ಕದ್ದೆನೆಂದರೆ ಇಡೀ ವೃಂದಾವನದಲ್ಲಿ ನೀನು ಕಡೆದ ಬೆಣ್ಣೆ ಅತಿ ರುಚಿ. ಇದಕ್ಕಾಗಿ ಶಿಕ್ಷೆ ನೀಡಲೇಬೇಕೆಂದು ನಿನಗೆ ಮನಸಾದರೆ, ಎಂದೋ ಒಂದು ದಿನ ನೀನು ನಿನ್ನ ಗಂಡನನ್ನು ಕೈಹಿಡಿದು ನನ್ನ ಅಮ್ಮನ ಬಳಿಗೆ ಒಯ್ದುದನ್ನು ನೋಡಬೇಕಾಗಬಹುದು. ಅದೆಷ್ಟು ತಮಾಷೆಯಾದೀತು, ಅಲ್ಲವೇ!’

ಈ ಲೇಖನ ಶೇರ್ ಮಾಡಿ