ಕೃಷ್ಣಲೀಲಾ ಸಾಂಗತ್ಯ

ಅಂತಿಮವಾಗಿ ನಮ್ಮ ತನುಮನ ಧನವೆಲ್ಲವನ್ನೂ ತ್ಯಜಿಸಬೇಕೆಂಬುದು ಮನವರಿಕೆಯಾದಾಗ, ಒಬ್ಬ ವಿವೇಕಿ ಕೇಳುತ್ತಾನೆ – `ಮುಂದೇನು?’

ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘದ ಸಂಸ್ಥಾಪಕರು ಮತ್ತು ಆಚಾರ್ಯರಾದ
ಶ್ರೀ ಶ್ರೀಮದ್‌ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು
ಡಿಸೆಂಬರ್‌ 1973ರಲ್ಲಿ  ಲಾಸ್‌ ಏಂಜಲೀಸ್‌ನಲ್ಲಿ  ನೀಡಿದ ಉಪನ್ಯಾಸ

ನಿಶಮ್ಯ ಭಗವನ್ಮಾರ್ಗಂ ಸಂಸ್ಥಾಂ ಯದುಕುಲಸ್ಯ ಚ

ಸ್ವಃ ಪಥಾಯ ಮತಿಂ ಚಕ್ರೇ ನಿಭೃತಾತ್ಮಾ ಯುಧಿಷ್ಠಿರಃ

ಪರಮ ಪ್ರಭು ಶ್ರೀಕೃಷ್ಣನು ತನ್ನ ಧಾಮಕ್ಕೆ ಮರಳಿದುದನ್ನು ಕೇಳಿ, ಭೂಮಿಯಲ್ಲಿದ್ದ ಯದುವಂಶವೇ ಸಮಾಪ್ತಿಯಾದುದನ್ನು ಅರಿತು ಯುಧಿಷ್ಠಿರ ಮಹಾರಾಜನು ತಾನೂ ಭಗವದ್ಧಾಮಕ್ಕೆ ಮರಳಲು ನಿರ್ಧರಿಸಿದನು.

ಯುಧಿಷ್ಠಿರ ಮಹಾರಾಜನು ತೀರಾ ಅನುದ್ವಿಗ್ನನಾಗಿದ್ದನು. ಯುಧಿಷ್ಠಿರ ಅಧ್ಯಾತ್ಮದಲ್ಲಿ ಬಹಳಷ್ಟು ಮುನ್ನಡೆ ಸಾಧಿಸಿದ್ದನು. ಭಗವಾನ್‌ ಶ್ರೀಕೃಷ್ಣ ಪರಂಧಾಮವನ್ನೈದಿದ ವೃತ್ತಾಂತವನ್ನು, ಯಾದವರ ಆಂತರಿಕ ಕಲಹದಿಂದ, ಯದುವಂಶ ನಿರ್ನಾಮವಾದ ಸುದ್ದಿಯನ್ನೂ ಕೇಳಿ  `ನಾನು ಎಲ್ಲವನ್ನು ತೊರೆದು ಭಗವಂತನಿಗೆ ಸಂಪೂರ್ಣ ಶರಣಾಗಬೇಕು’ ಎಂದುಕೊಂಡನು.

ಆದುದರಿಂದ ಪ್ರತಿಯೊಬ್ಬನೂ ತನ್ನ ತನುವನ್ನೂ, ತನ್ನದೆಲ್ಲವನ್ನೂ ಅಂತಿಮವಾಗಿ ತ್ಯಜಿಸಬೇಕು. ಎಲ್ಲವನ್ನೂ ತೊರೆದು ಮುಂದೇನು? ಎಲ್ಲವನ್ನು ತೊರೆಯಬೇಕು; ದಿಟ. ಈಗಲ್ಲದಿದ್ದರೆ, ನಮ್ಮ ದೇಹಾವಸಾನ ಕಾಲದಲ್ಲಿ ತೊರೆಯಲೇಬೇಕು. ಶ್ರೀಕೃಷ್ಣ ಹೇಳುವಂತೆ (ಭಗವದ್ಗೀತೆ: 10.34),  ಮೃತ್ಯುಃ ಸರ್ವ ಹರಶ್ಚಾಹಂ `ನಾನೇ ಮೃತ್ಯು. ಎಲ್ಲವನ್ನೂ ಹಿಂತೆಗೆದುಕೊಳ್ಳುತ್ತೇನೆ’. ನಿಮ್ಮ ಆಸ್ತಿಪಾಸ್ತಿಯನ್ನು ನಿಮ್ಮಲ್ಲೆ ಉಳಿಸಿಕೊಳ್ಳಲು ಯತ್ನಿಸಬಹುದು. ಆದರೆ ಮರಣಕಾಲದಲ್ಲಿ ಅದೆಲ್ಲವನ್ನು ಮರಳಿಸಬೇಕಾಗುತ್ತದೆ. ಅವೆಲ್ಲವನ್ನೂ ಬಲಾತ್ಕಾರದಿಂದ ಕಸಿದುಕೊಳ್ಳಲಾಗುವುದು. ಪ್ರತಿಯೊಬ್ಬನೂ ಇದನ್ನು ಅರ್ಥಮಾಡಿಕೊಳ್ಳಬೇಕು.

ಅವಿವೇಕಿಯಾದವನು ಯೋಚಿಸುತ್ತಾನೆ – “ನನ್ನ ಕುಟುಂಬ, ನನ್ನ ದೇಶ, ನನ್ನ ಸಮಾಜ, ನನ್ನ ಬ್ಯಾಂಕ್‌ ಬಾಕಿ ಹಣ, ನನ್ನ ಗಗನಚುಂಬಿ ಕಟ್ಟಡ, ನನ್ನ ಕಾರು – ಎಲ್ಲವೂ ನನ್ನನ್ನು ಉಳಿಸಿಕೊಳ್ಳುತ್ತವೆ.” ಆದರೆ ಇದು ಅಸಾಧ್ಯ. ಶ್ರೀಮದ್ಭಾಗವತದಲ್ಲಿ ಹೇಳಿರುವಂತೆ (2.1.4), ತೇಷಾಂ ಪ್ರಮತ್ತೋ ನಿಧನಮ್‌  ಪಶ್ಯಮ್‌ ಅಪಿ ನ ಪಶ್ಯತಿ ತಾವು ಗಳಿಸಿದುದೆಲ್ಲವೂ ತಮ್ಮ ನಿಧನದನಂತರ ಹಿಂದೆ ಉಳಿಯುವುವೆಂಬುದನ್ನು ಆ ಹುಚ್ಚರು ಅರಿಯರು. ಅದು ಅವರೊಟ್ಟಿಗೆ ಇರದು. ನೀವು ಪರಾಜಿತರಾಗುವಿರಿ. ನಿಮ್ಮ ದೇಹ ಸೋಲನ್ನಪ್ಪುತ್ತದೆ. ಎಲ್ಲವೂ ಕಳೆದು ಹೋಗುತ್ತದೆ.

ದೇಹ, ಮಡದಿ, ನೆಂಟರು, ಮಕ್ಕಳು – ಇವೆಲ್ಲವೂ ತಾತ್ಕಾಲಿಕ, ನಶ್ವರ. ನಾನು ಶಾಶ್ವತ. ಜನರು, ಯೋಚಿಸಲಾರರು `ನಾನು ಅವಿನಾಶಿ, ಆದರೂ ತಾತ್ಪೂರ್ತಿಕ ಕಾರ್ಯಗಳಲ್ಲಿ ಮಗ್ನ, ಹೀಗಾಗಿ ನನ್ನ ಶಾಶ್ವತ ವ್ಯವಹಾರವೇನು?’ ಈ ಪ್ರಶ್ನೆಯನ್ನು ಕೇಳರು, ಮೂರ್ಖರು, ಮೂಢರು.

ನಾನು ಶಿಶುವಾಗಿ, ಬಾಲಕನಾಗಿ, ಯುವಕನಾಗಿ ಎಲ್ಲ ಅವಸ್ಥೆಗಳನ್ನು ಅನುಭವಿಸಿದ್ದೇನೆ. ಈಗ ನನ್ನ ಶೈಶವ ದೇಹ, ಬಾಲ್ಯದ ಶರೀರ, ಯುವಕಾಯ ಎಲ್ಲವೂ ಹೋಗಿವೆ. ಪ್ರಸ್ತುತದಲ್ಲಿ ನನ್ನದೊಂದು ವಿಭಿನ್ನ ದೇಹವಿದೆ. ಆದರೆ ನನಗೆ ಶೈಶಾವಸ್ಥೆಯಲ್ಲೊಂದು ದೇಹವಿತ್ತು, ಬಾಲ್ಯಾವಸ್ಥೆಯಲ್ಲಿ ದೇಹವೊಂದಿತ್ತು ಮತ್ತು ಪ್ರೌಢಾವಸ್ಥೆಯ ಕಾಯವೊಂದಿತ್ತು ಎಂಬ ಅರಿವಿದೆ. ಹಾಗಾಗಿ, ನಾನು ಶಾಶ್ವತವೆಂದೇ ತೀರ್ಮಾನ. ಈ ದೇಹ ನಶ್ವರ. ಇದು ಅತಿ ಸರಳ, ಜನರು ಇದನ್ನು ಏಕೆ ಅರ್ಥಮಾಡಿಕೊಳ್ಳರು? ಭಗವದ್ಗೀತೆಯಲ್ಲಿ (2.17) ಶ್ರೀಕೃಷ್ಣ ಹೇಳುತ್ತಾನೆ, ಅವಿನಾಶಿ ತು ತದ್‌ವಿದ್ಧಿಯೇನ ಸರ್ವಂ ಇದಂ ತತಮ್‌, ಮತ್ತು ಅಂತವಂತ ಇಮೇ ದೇಹಾಃ ಈ ದೇಹವು `ಅಂತವತ್‌’ – ನಶ್ವರ. ಒಂದು ದಿನ ಅದು ಅಂತ್ಯಗೊಳ್ಳುತ್ತದೆ. ಆದರೆ ಅದರ ಸುತ್ತಲ ಆವರಣಕ್ಕೆ ವಿನಾಶವಿಲ್ಲ. ಅದು ಯಾವುದು? ಪ್ರಜ್ಞೆ. ದೇಹಾದ್ಯಂತ ಪ್ರಜ್ಞೆ ಆವರಿಸಿದೆ. ಅದು ಶಾಶ್ವತವೆನ್ನುತ್ತಾನೆ ಶ್ರೀಕೃಷ್ಣ.

ಆದುದರಿಂದ ನಮ್ಮ ಪ್ರಜ್ಞೆ ಶಾಶ್ವತ (ಅಪಾರ್ಥಿವ) ದೊಡನೆ ಲೀನವಾಗಿದೆಯೋ ಭೌತಿಕ ಶರೀರದೊಡನೆ (ಮರ್ತ್ಯ/ಪಾರ್ಥಿವ) ಅಂತರ್ಗತವಾಗಿದೆಯೋ ಎಂಬುದನ್ನು ತಿಳಿಯಬೇಕು. `ಇದು ನನ್ನ ದೇಶ’, `ಇದು ನನ್ನ ದೇಹ,’ `ಇದು ನನ್ನ ಸಂಸಾರ’, `ಇದು ನನ್ನ ಸಮುದಾಯ’, `ಇದು ನನ್ನ ರಾಷ್ಟ್ರ’, ಎಂಬ  ಚಿಂತನೆಯಲ್ಲೇ ನಾನು ಮಗ್ನನಾಗಿದ್ದರೆ ಅದು ಭೌತಿಕ ಪ್ರಜ್ಞೆ (ಮರ್ತ್ಯ ಪ್ರಜ್ಞೆ). `ಕೃಷ್ಣ ನನ್ನವ, ನಾನು ಕೃಷ್ಣನವ’ ಎಂದು ಆಲೋಚಿಸುವುದೇ ಶಾಶ್ವತ ಪ್ರಜ್ಞೆ (ಸನಾತನ ಪ್ರಜ್ಞೆ). ಈ ಬಗೆಯ ಪ್ರಜ್ಞಾಸ್ತರಕ್ಕೇರಿದರೆ, ಅದು ಕೃಷ್ಣಪ್ರಜ್ಞೆ ಎನಿಸಿಕೊಳ್ಳುತ್ತದೆ. ನೀವು ಕ್ಷೇಮ.

ಎಲ್ಲಿಯವರೆಗೆ ಇಂತಹ ಅಶಾಶ್ವತ ಪ್ರಜ್ಞೆಯಲ್ಲಿ ಮುಳುಗಿರುತ್ತೇವೆಯೋ, ಅಲ್ಲಿಯವರೆಗೆ ನಮ್ಮ ಬುದ್ಧಿ ಚಂಚಲ. ಈಗ ನಾನೊಂದನ್ನು ಅಂಗೀಕರಿಸಬಹುದು. ಮರುಕ್ಷಣ ಅದನ್ನೆ ತಿರಸ್ಕರಿಸಬಹುದು. ಬುದ್ಧಿಯ ಸ್ವೀಕಾರ ಮತ್ತು ತಿರಸ್ಕಾರಕ್ಕೆ ಅನುಗುಣವಾಗಿದೆ ಈ ದೇಹದ ರಚನೆ. ಇಲ್ಲವಾದಲ್ಲಿ ನಿಮ್ಮಲ್ಲಿ ಯಾಕೆ ಬಗೆಬಗೆಯ ದೇಹಗಳಿರುತ್ತವೆ? ಇಲ್ಲಿ ಹಲವಾರು ಬಾಲಕ ಬಾಲಕಿಯರು, ಸ್ತ್ರೀ ಪುರುಷರು ಕುಳಿತಿದ್ದಾರೆ. ಯಾರೊಬ್ಬರ ದೇಹವೂ ಮತ್ತೊಬ್ಬರ ದೇಹದಂತಿಲ್ಲ; ಇಲ್ಲ. ನಿಮ್ಮೆಲ್ಲರ ಬುದ್ಧಿ ವಿಭಿನ್ನ. ಹಾಗಾಗಿ ನಿಮ್ಮ ಶರೀರಗಳು ವಿಭಿನ್ನ. ಇದನ್ನು ಅರಿಯಬೇಕು.

ಪ್ರಸ್ತುತದಲ್ಲಿ ಯುಧಿಷ್ಠಿರ ಮಹಾರಾಜನ ಬಗ್ಗೆ ಹೀಗೆ ಹೇಳಿದೆ: ಸ್ವಃ ಪಥಾಯ ಮತಿಮ್‌ ಚಕ್ರೇ `ಅವನು ಮರಳಿ ಭಗವದ್ಧಾಮಕ್ಕೆ ಹೋಗಲು ತೀರ್ಮಾನಿಸಿದ’ ಅಥವಾ ಅದಕ್ಕೆ ಪರ್ಯಾಯವಾಗಿ ಹೇಳಬೇಕೆಂದರೆ ಅವನು ಧ್ಯಾನಮಗ್ನನಾದ. `ನಾನು ಯಾರು? ಎಲ್ಲಿಂದ ಬಂದೆ? ನಾನು ಶಾಶ್ವತನಾದರೆ ನನ್ನ ಶರೀರವೇಕೆ ನಶ್ವರ? ನನ್ನ ಶರೀರವೂ ಶಾಶ್ವತವೆ ಆಗಿದ್ದರೆ ನಾನು ಪರಮಸುಖಿಯಾಗಿರುತ್ತಿದ್ದೆ, ಆದರೆ ಅದು ಅಸಾಧ್ಯ. ನಾನು ಸಾಯಲು ಬಯಸುವುದಿಲ್ಲ. ನನ್ನ ದೇಹ ಅದಮ್ಯ. ಅದು ನನ್ನ ಅಭಿಲಾಷೆ. ಹಾಗಾಗಿ ನಾನು ಪರಂಧಾಮಕ್ಕೆ ಹೋಗಿ ಶಾಶ್ವತನಾಗುತ್ತೇನೆ. ಆಧ್ಯಾತ್ಮಿಕ ಶರೀರವನ್ನು ಹೊಂದುತ್ತೇನೆ’ ದುರದೃಷ್ಟವಶಾತ್‌ ಇಂದು ಯಾರೂ ಈ ವಿಷಯ ಕುರಿತಂತೆ ಆಲೋಚನಾಮಗ್ನರಾಗಿಲ್ಲ. ಕೆಲವು ಅರ್ಥಹೀನವಾದ ನಿರಾಕಾರ ಧ್ಯಾನವನ್ನು  ಕಲಿತಿದ್ದಾರೆ.

ಆದುದರಿಂದ, ಈಗ ಯುಧಿಷ್ಠಿರ ಮಹಾರಾಜ ವಿರಮಿಸುತ್ತಾನೆ. ಅವನು ತನ್ನ ಸಾಮ್ರಾಜ್ಯವನ್ನು ತ್ಯಜಿಸುತ್ತಾನೆ. ಇದು ವೈದಿಕ ವ್ಯವಸ್ಥೆ. ನೀವು ಎಷ್ಟೇ ಸಿರಿವಂತರಾಗಿರಿ, ಎಷ್ಟೇ ಅಭ್ಯುದಯವನ್ನು ಹೊಂದಿರಿ, ನಿಮ್ಮ ಕುಟುಂಬಕ್ಕೋ ಅಥವಾ ರಾಷ್ಟ್ರಕ್ಕೋ ಎಷ್ಟೇ ಬದ್ಧರಾಗಿರಿ – `ಇವೆಲ್ಲ ನಶ್ವರ, ನಾನು ಶಾಶ್ವತ. ಹಾಗಾಗಿ ನನ್ನ ಸನಾತನ ಕರ್ತವ್ಯವೇನು? ಕ್ರಿಯೆಯೇನು? ನನ್ನ ಚಿರಂತನ ನೆಲೆ ಯಾವುದು, ಎಲ್ಲಿದೆ?’ ಇದು ನಿಜವಾದ ಧ್ಯಾನ, ಇದುವೇ ಕೃಷ್ಣಪ್ರಜ್ಞೆ.

ಕೃಷ್ಣಪ್ರಜ್ಞಾ ಆಂದೋಳನವೆಂಬುದು ಕೇವಲ ಮನರಂಜನೆಗಾಗಿ ರೂಪುಗೊಂಡುದಲ್ಲ; ಅಲ್ಲ, ಅದೊಂದು ಗಂಭೀರವಾಗಿ ಪರಿಭಾವಿಸಬೇಕಾದ ವಿಜ್ಞಾನ. ಜನರು ಒಂದು ಸ್ಥಿರವಾದ ನೆಲೆಯ ಹುಡುಕಾಟದಲ್ಲಿ ತೊಡಗಿದ್ದಾರೆ. ಈ ಜಗತ್ತಿನಲ್ಲಿ ಒಂದು ಶಾಶ್ವತ ನೆಲೆಯ ಅನ್ವೇಷಣೆಯಲ್ಲಿ ತೊಡಗಿದ್ದಾರೆ. ಸಾಯುವುದು ಯಾರಿಗೂ ಬೇಕಿಲ್ಲ. ಆದರೆ ಎಲ್ಲರೂ ಸಾಯಲೇಬೇಕು. ಸಾವಿಲ್ಲದ ಮನೆಯೊಂದಿದ್ದರೆ ನೀವು ಅದರ ಹುಡುಕಾಟದಲ್ಲಿ ತೊಡಗುವುದಿಲ್ಲವೇಕೆ? ಇದು ಬುದ್ಧಿವಂತಿಕೆ.

ಭಗವದ್ಗೀತೆಯಲ್ಲಿ (8.16) ಶ್ರೀಕೃಷ್ಣ ಶಾಶ್ವತತ್ತ್ವದ ಬಗ್ಗೆ ಮಾಹಿತಿ ಕೊಡುತ್ತಾನೆ.

ಆಬ್ರಹ್ಮ ಭುವನಾಲ್ಲೋಕಾಃ ಪುನರಾವರ್ತಿನೋಽರ್ಜುನ

ಮಾಮುಪೇತ್ಯ ತು ಕೌಂತೇಯ ಪುನರ್ಜನ್ಮ ನ ವಿದ್ಯತೇ

ಬ್ರಹ್ಮಾಂಡದ ಶೃಂಗದಲ್ಲಿ ಬ್ರಹ್ಮಲೋಕವಿದೆ. ಅಲ್ಲಿಗೆ ನೀವು ತಲಪಿದರೆ ಅಲ್ಲಿಯ ಜೀವಿಗಳ ಜೀವಾವಧಿಯನ್ನು ಲೆಕ್ಕ ಹಾಕಲೂ ನಿಮಗೆ ಸಾಧ್ಯವಿಲ್ಲ. ಅವರ ದಿನವೇ ಬೇರೆ, ನಮ್ಮ ದಿನವೇ ಬೇರೆ. ಅವರ ಒಂದು ದಿನವು ನಮ್ಮ 860 ಕೋಟಿ ವರ್ಷಗಳಿಗೆ ಸಮಾನ ಮತ್ತು ಅವರು ಇಂತಹ ದಿನಗಳಿಂದ ಕೂಡಿದ 100 ವರ್ಷ ಬಾಳುತ್ತಾರೆ. ಆದರೂ ನೀವು ಬ್ರಹ್ಮಲೋಕಕ್ಕೆ ಹೋದರೆ, ಅಥವಾ ಬೇರಾವುದೇ ಲೋಕಕ್ಕೆ ಹೋದರೂ ಸಾವು ಸುನಿಶ್ಚಿತ.

ಆದುದರಿಂದ ವಿವೇಕಿ ಕೇಳುತ್ತಾನೆ, `ನಾನು ಶಾಶ್ವತ ಎಂದಾದರೆ, ನಾನೇಕೆ ಸಾವನ್ನು ಸ್ವೀಕರಿಸಲಿ?’ ಸಾವಿಲ್ಲದ ತಾಣವೊಂದಿದೆಯೆ, ಅದರ ಬಗ್ಗೆ ಭಗವದ್ಗೀತೆಯಲ್ಲಿ (8.16) ಶ್ರೀಕೃಷ್ಣ ಮಾಹಿತಿ ಕೊಡುತ್ತಾನೆ; ಮಾಮುಪೇತ್ಯ ತು ಕೌಂತೇಯ ಪುನರ್ಜನ್ಮ  ನ ವಿದ್ಯತೇ `ನೀನು ನನ್ನ ಧಾಮಕ್ಕೆ ಬಂದರೆ ಮತ್ತೆ ಮರ್ತ್ಯಲೋಕಕ್ಕೆ ಹಿಂದಿರುಗುವ ಅಗತ್ಯವಿಲ್ಲ. ಮತ್ತು (ಗೀ: 15.6) ಹೀಗೆನ್ನುತ್ತಾನೆ, ಯದ್ಗತ್ವಾ ನ  ನಿವರ್ತಂತೇ ತದ್ಧಾಮ ಪರಮಂ ಮಮ “ಅದು ನನ್ನ ಸರ್ವೋಚ್ಚ ನೆಲೆ. ಅಲ್ಲಿ ಸೇರಿದವ ಮರಳಿ ಬರಲಾರ.” ಇದನ್ನೆ ನಾವು ಬಯಸುವುದು. ಮತ್ತೊಂದೆಡೆ (ಗೀ: 4.9) ಶ್ರೀಕೃಷ್ಣ ಹೀಗೆ ಹೇಳುತ್ತಾನೆ, ತ್ಯಕ್ತ್ವಾ ದೇಹಂ ಪುನರ್ಜನ್ಮ ನೈತಿ ಮಾಮ್‌ ಏತಿ ಸೋಽರ್ಜುನ “ಎಲೈ ಅರ್ಜುನನೆ, ಈ ದೇಹವನ್ನು ತ್ಯಜಿಸಿ, ಯಾರು ನನ್ನನ್ನು ಅರಿಯುವನೋ, ಆತ ಮತ್ತೆ ತನ್ನ ಐಹಿಕ ತಾಯಿಯ ಗರ್ಭ ಸೇರಲಾರ.” ಮತ್ತೆ ಅವನೆಲ್ಲಿ ಹೋದಾನು? ಮಾಮ್‌ ಏತಿ “ನನ್ನಲ್ಲಿಗೆ ಬರುತ್ತಾನೆ.” ನಿಮ್ಮ ಕೃಷ್ಣಪ್ರಜ್ಞೆ ಪರಿಪೂರ್ಣವಾಗಿದ್ದರೆ, ನಿಮ್ಮ ಮರಣಾನಂತರ ಕೂಡಲೇ ಶ್ರೀಕೃಷ್ಣನು ಈ ಮರ್ತ್ಯಲೋಕದೊಳಗೆ ತನ್ನ ಲೀಲೆಗಳನ್ನು ಅನುಭವಿಸುತ್ತಿರುವೆಡೆಗೆ ನಿಮ್ಮನ್ನು ಕಳುಹಿಸಲಾಗುವುದೆಂದು ಸನಾತನ ಗೋಸ್ವಾಮಿಯವರು ತಮ್ಮ ಬೃಹತ್‌ ಭಾಗವತಾಮೃತದಲ್ಲಿ ತಿಳಿಸಿದ್ದಾರೆ. ಸೂರ್ಯೋದಯ ಮತ್ತು ಸೂರ್ಯಾಸ್ತದಂತೆ ಶ್ರೀಕೃಷ್ಣ ಈ ಭೌತಿಕ ವಿಶ್ವದೊಳಗೆ ಬೇರೆ ಬೇರೆ ಗ್ರಹಗಳಲ್ಲಿ ಲೀಲಾ ವಿಹಾರದಲ್ಲಿ ತೊಡಗಿರುತ್ತಾನೆ. ಇದು ಅವನ ಕಾರ್ಯಾಚರಣೆಯ ಮತ್ತೊಂದು ಮಗ್ಗಲು. ಏಕೆಂದರೆ ಅವನು ಪತಿತರನ್ನು ಉದ್ಧರಿಸಬಯಸುತ್ತಾನೆ. ಅಂತಹ ಅನೇಕಾನೇಕ ಜೀವಗಳು ಈ ಭೌತಿಕ ಪ್ರಪಂಚದಲ್ಲಿವೆ. ಅವನು ಎಲ್ಲೆಡೆ ಸಂಚರಿಸುತ್ತಾನೆ. ಅವನು ಭಗವದ್ಗೀತೆಯಲ್ಲಿ  ಹೇಳಿರುವಂತೆ –

ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ

ಅಭ್ಯುತ್ಥಾನಮ್‌ ಅಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್‌

“ಯಾವಾಗೆಲ್ಲ ಧರ್ಮಕ್ಕೆ ಚ್ಯುತಿ ಒದಗುತ್ತದೆ (ಸನಾತನತೆಯ ಅರಿವಿನಲ್ಲಿ ತೊಡಕಿರುತ್ತದೆ) ಆಗೆಲ್ಲ ವಾಸ್ತವ ಧರ್ಮವಾವುದೆಂದು ತಿಳಿಸಿಕೊಡಲು ನಾನು ಅವತರಿಸುತ್ತೇನೆ.”

ಹೀಗಾಗಿ, ಈ ಭೌತಿಕ ಜಗತ್ತಿನಲ್ಲಿ ಕೃಷ್ಣ ಎಲ್ಲೋ ಒಂದೆಡೆ ಧರ್ಮಬೋಧನೆಯಲ್ಲಿ ತೊಡಗಿರುತ್ತಾನೆ. ಈ ಬ್ರಹ್ಮಾಂಡದಲ್ಲಿ ಅನೇಕಾನೇಕ ವಿಶ್ವಗಳಿವೆ. ಕೃಷ್ಣ ಅವುಗಳಲ್ಲಿ ಯಾವುದೋ ಒಂದರಲ್ಲಿ ಕಾಣಿಸಿಕೊಳ್ಳುತ್ತಾನೆ. ಈ ವಿಶ್ವದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯಂದು ಕಾಣಿಸಿಕೊಂಡ. ಅನಂತರ ಕೂಡಲೆ ಮತ್ತೊಂದು ವಿಶ್ವದಲ್ಲಿ ಜನ್ಮ ಎತ್ತಿದ. ಅವನ ಜನನ ಅಲ್ಲಿ ಜನ್ಮಾಷ್ಟಮಿಯಂದೆ ಸಂಭವಿಸಿತು. ಹಾಗಾಗಿ ಕೃಷ್ಣನ ಲೀಲೆಗಳನ್ನು `ನಿತ್ಯಲೀಲಾ’ ಎಂದು ಕರೆಯಲಾಗಿತ್ತು. ಇದರರ್ಥ ಜನ್ಮಾಷ್ಟಮಿ ನಿರುಪಾಧಿಕವಾಗಿ ಸಾಗುತ್ತಲೇ ಇರುತ್ತದೆ. ಅವನ ಗೋವರ್ಧನ ಲೀಲೆ ನಡೆಯುತ್ತಲೇ ಇರುತ್ತದೆ. ಈ ವಿಶ್ವದಲ್ಲಿ ಅವನು ನಡೆಸಿದ ಲೀಲಾವಿನೋದಗಳೆಲ್ಲ ಮತ್ತೊಂದು ವಿಶ್ವದಲ್ಲಿ ನಡೆಯುತ್ತಲೇ ಇರುತ್ತವೆ.

ಈಗ ಏಳೂವರೆ ಘಂಟೆ, ಇನ್ನೆಲ್ಲೋ ಒಂದೆಡೆ ಆರೂವರೆಯಾಗಿರುತ್ತದೆ. ಇದರರ್ಥ, ಸಮಯ ಒಂದೆಡೆ ಆರೂವರೆಯಾಗಿದ್ದರೆ, ಅದರ ಪುನರಾವರ್ತನೆಯಾಗಬಾರದು ಎಂದಲ್ಲ. ಬೇರೆಲ್ಲೋ ಅದೇ ಸಮಯ ಹುಟ್ಟಿರುತ್ತದೆ. ಅಂತೆಯೇ ಇಲ್ಲಿ ಜನ್ಮಾಷ್ಟಮಿ ಆಗಿಬಿಟ್ಟರೆ ಅಲ್ಲಿಗೆ ಮುಗಿಯಿತು ಎಂದಲ್ಲ. ಇದೇ ಕೃಷ್ಣಲೀಲೆ.

ಆದುದರಿಂದ ನೀವು ಕೃಷ್ಣಪ್ರಜ್ಞೆಯಲ್ಲಿ ಸಂಪೂರ್ಣರಾಗಿದ್ದರೆ ನಿಮಗೆ ಐಹಿಕ ಲಾಲಸೆಗಳಿರುವುದಿಲ್ಲ. ಕೃಷ್ಣನನ್ನು ಸೇವಿಸುವುದೇ ನಿಮ್ಮ ಆಸೆಯಾಗಿರಬೇಕಷ್ಟೆ. ಅದು ಪರಿಪೂರ್ಣತೆ. ಎಲ್ಲಿಯವರೆಗೆ ನಿಮಗೆ ಐಹಿಕ ಆಕಾಂಕ್ಷೆಗಳು ಕಿಂಚಿತ್ತಾದರೂ ಇರುತ್ತವೆ, ಅಲ್ಲಿಯವರೆಗೆ ನಿಮಗೆ ಪುನರ್ಜನ್ಮವಿದ್ದೇ ಇದೆ. ನಿಮ್ಮ ಆಕಾಂಕ್ಷೆಗೆ ಅನುಗುಣವಾಗಿ ಶ್ರೀಕೃಷ್ಣ ನಿಮಗೆ ಸೌಲಭ್ಯವನ್ನು ಕಲ್ಪಿಸುತ್ತಾನೆ. ನಮ್ಮ ಚಿಂತನೆಗನುಗುಣವಾಗಿ ನಮ್ಮ ಮುಂದಿನ ಜನ್ಮದ ಶರೀರ ರೂಪುಗೊಳ್ಳುತ್ತದೆ. ನಮ್ಮ ಐಹಿಕ ಆಸಕ್ತಿಗಳು ಅನೇಕ. ಮರಣಕ್ಕೆ ಕ್ಷಣಗಣನೆ ನಡೆದಾಗ, ನಿಮ್ಮ ಭಾವನೆಗಳು, ಆಸೆ ಅಭಿಲಾಷೆ ದಟ್ಟೈಸಿದಂತೆ ಪುನರ್ಜನ್ಮದಲ್ಲಿ ಅವು ಸಾಕಾರಗೊಳ್ಳುತ್ತವೆ. ಆದುದರಿಂದ ನೀವು ಕೃಷ್ಣನನ್ನೇ ಧ್ಯಾನಿಸುತ್ತಿದ್ದರೆ, ಕೃಷ್ಣನ ಬಳಿ ಸಾರುವಂತಹ ಶರೀರವನ್ನು ಹೊಂದುತ್ತೀರಿ. ಇದು ವಸ್ತುಶಃ ವೈಜ್ಞಾನಿಕ ಹಾಗೂ ಪ್ರಾಯೋಗಿಕ ತತ್ತ್ವ.

ಶ್ರೀಕೃಷ್ಣನ ಲೋಕ ತಲಪಿದಾಗ ನೀವು ಆತನೊಡನೆ ಮಾತನಾಡಬಹುದು. ಖುದ್ದಾಗಿ ಅವನ ಜೊತೆಗೂಡಿ ಆಟವಾಡಬಹುದು. ಅವನೊಡನೆ ನರ್ತಿಸಬಹುದು. ರಾಸನೃತ್ಯದ ಒಂದು ಚಿತ್ರ ಇಲ್ಲಿದೆ. ಆದುದರಿಂದ ಪ್ರತಿಯೊಬ್ಬನಿಗೂ ಈ ಅವಕಾಶವುಂಟು. ಶ್ರೀಕೃಷ್ಣ ಇಲ್ಲಿಗೆ ಬಂದಾಗ, ವೃಂದಾವನದಲ್ಲಿ ಅವನನ್ನು ಕೂಡಿ ಬದುಕುವ ಬಾಳು ಎಷ್ಟೊಂದು ಹರ್ಷದಾಯಕ ಎಂಬುದನ್ನು ತೋರಿಸಿಕೊಡುತ್ತಾನೆ. ಆನಂದಮಯ್ಯೋಽಭ್ಯಾಸಾತ್‌. ವೃಂದಾವನ ಜೀವನದಲ್ಲಿ ಪ್ರತಿಯೊಬ್ಬನೂ ಸಂತಸದಿಂದ ಇರುತ್ತಾನೆ. ಪಕ್ಷಿಗಳು, ತರುಗಳು, ಜಲ, ಭೂ, ಪಶುಗಳು, ಕರುಗಳು, ಗೋವಳರು, ಗೋವಳತಿಯರು – ಪ್ರತಿಯೊಬ್ಬರೂ ಕೃಷ್ಣನನ್ನು ಪ್ರೀತಿಸುತ್ತಲೆ ಮುದಗೊಳ್ಳುತ್ತಾರೆ. ಬರೆ ಕೃಷ್ಣಪ್ರೇಮದಿಂದಲೆ.

ಆದುದರಿಂದ ಕೃಷ್ಣ ತನ್ನ ಲೀಲೆಗಳನ್ನು ಇಲ್ಲಿ ಪ್ರಕಟಿಸಿದಾಗ ಅವನು ಕರೆಕೊಡುತ್ತಾನೆ : “ನೀವೇಕೆ ಈ ಐಹಿಕ ಲೋಕದಲ್ಲಿ ಕೊಳೆಯುತ್ತಿರುವಿರಿ? ನನ್ನಲ್ಲಿಗೆ ಬನ್ನಿ. ನಿರಂತರ ಸುಖ ಜೀವನವನ್ನು ಅನುಭವಿಸಿ.” ಅದು ಅವನ ವೃತ್ತಿ. ಆತ ಕರುಣಾಳು.

ಈ ಭೌತಿಕ ಪ್ರಪಂಚದಲ್ಲಿ ಸುಖಾನುಭವವೆಂದರೇನು? ಕಾಮರತಿಯೇ ಪರಾಕಾಷ್ಠೆ. ಅದು ಒಳ್ಳೆಯ ಸುಖಾನುಭವವಲ್ಲ. ಆದರೆ ಅದು ಒಳ್ಳೆಯದು ಎಂದು ಜನರು ಅಂಗೀಕರಿಸಿದ್ದಾರೆ. ಪ್ರಹ್ಲಾದ ಮಹಾರಾಜ ಹೇಳುವಂತೆ (ಭಾಗವತ: 7.9.45) ಯನ್‌ ಮೈಥುನಾದಿ ಗೃಹಮೇಧಿ ಸುಖಂ ಹಿ ತುಚ್ಛಮ್‌ “ಲೈಂಗಿಕ ಸುಖ ನಿಕೃಷ್ಟ” ಆದರೆ ಭೌತಿಕ ಜೀವನಕ್ಕೆ ಅಂಟಿಕೊಂಡವರಿಗೆ ಲೈಂಗಿಕ ಸುಖ ಜೀವನವೆ ಪರಮೋತ್ಕೃಷ್ಟ . ಅವರ ಜೀವನಾಡಿ. ಅದಕ್ಕಿಂತಲೂ ಉತ್ತಮ ಶಾಶ್ವತ ಸುಖ ಇದೆಯೆಂಬುದು ಅವರ ತಿಳಿವಳಿಕೆಗೆ ಬಂದಿಲ್ಲ. ಅದು ಅವರಿಗೆ ತಿಳಿಯದು.

ಹೀಗಾಗಿ ಕೃಷ್ಣಪ್ರಜ್ಞಾ ಆಂದೋಳನದ ಅಗತ್ಯ ಬಹಳಷ್ಟಿದೆ. ತನ್ಮೂಲಕ ಭಗವಾನ್‌ ಮಾರ್ಗ, ಎಂದರೆ ದೇವರ ದಾರಿಯನ್ನು ಜನರು ಅರ್ಥಮಾಡಿಕೊಳ್ಳಬಹುದು. ದೇವರೆಂದರೇನು ಎಂಬುದು ದುರಾತ್ಮರಿಗೆ ತಿಳಿಯದು. ಭಗವತ್‌ ಸ್ವರೂಪವನ್ನು ಅರಿಯರು. ಈ ಕೃಷ್ಣಪ್ರಜ್ಞಾ ಪ್ರಚಾರವನ್ನು ಅವರು ಒಪ್ಪಿಕೊಳ್ಳುವುದಿಲ್ಲ. ನಾವು ಬಹಿರಂಗವಾಗಿ ಉದ್ಘೋಷಿಸುತ್ತಿದ್ದೇವೆ – “ಇಗೋ ಇಲ್ಲಿದ್ದಾನೆ ದೇವರು. ಇದುವೆ ಭಗವತ್‌ ಸ್ವರೂಪ. ಅವನು ಅತಿ ಸುಂದರ. ಅವನ ವಿಳಾಸ ಕೃಷ್ಣಲೋಕ. ನೀವು  ಭಕ್ತಿಸೇವೆಯ ಮುಖೇನ ಅಲ್ಲಿಗೆ ತಲಪಬಹುದು.”

ಜನರು “ಇಲ್ಲ ನನಗೆ ಬೇಡ” ಎಂದಾರು. “ಎಂದ ಮೇಲೆ ನಿನಗೇನು ಬೇಕು?”

“ನಾನೊಂದು ಹಂದಿಯಾಗಬೇಕು” “ಆಗ ನೀನೇನನ್ನು ಭಕ್ಷಿಸುವೆ?”

“ಅಮೇಧ್ಯವನ್ನು ಅಷ್ಟೆ” “ಕೃಷ್ಣ ಪ್ರಸಾದ ಬೇಡವೆ?”

ಹಾಗಾದರೆ ನೀನೇನು ಮಾಡಲಾದೀತು? ನಾವು ಪ್ರಸಾದವನ್ನು ಹಂಚುತ್ತಿದ್ದೇವೆ. ಆದರೆ ಯಾವುದೋ ಹೊಲಸು ತಿನಿಸನ್ನು ಹೋಟೆಲ್‌ಗಳಲ್ಲಿ ತಿನ್ನಲು ಹೊರಟಿದ್ದಾರೆ. ನೋಡಿ! ಇದು ದುರದೃಷ್ಟಕರ. ಲೌಕಿಕರು ಈ ಕಾಲದಲ್ಲಿ ಅತಿ ದುರದೃಷ್ಟಶಾಲಿಗಳು ಅವರು ಹತ್ತು ಹಲವು ತಪ್ಪು ಮಾಹಿತಿಗಳನ್ನು ಒಪ್ಪಿಕೊಳ್ಳುತ್ತಾರೆ. ಹೀಗಾಗಿ ನಾವೊಂದು ಜವಾಬ್ದಾರಿಯುತ ಕರ್ತವ್ಯವನ್ನು ನಿರ್ವಹಿಸಬೇಕಾಗಿದೆ. ಪ್ರಚಾರ ನಡೆಸಬೇಕು. ಮುಂಚೂಣಿಯಲ್ಲಿ ನಿಂತು ಪ್ರಾರ್ಥಿಸಬೇಕು. ದಯಮಾಡಿ ಈ ದೇಗುಲಕ್ಕೆ ಬಂದು, ಜ್ಞಾನ ಪ್ರಾಪ್ತರಾಗಿ.”

ಧನ್ಯವಾದಗಳು.

ಈ ಲೇಖನ ಶೇರ್ ಮಾಡಿ