ಕ್ಷತ್ರಿಯ ಕುಲನಾಶ, ರಾಜವಂಶಗಳು

ನೈಮಿಷಾರಣ್ಯದಲ್ಲಿ ಎಂದಿನಂತೆ ಶ್ರೀಮದ್ಭಾಗವತದ ಕಥಾಶ್ರವಣ ಮಾಡಲು ಅಪಾರ ಆಸಕ್ತಿ ಎದ್ದು ಕಾಣಿಸುತ್ತಿತ್ತು. ಮಹಾ ತಪಸ್ವಿಗಳಾದ ಸೂತಮುನಿಗಳು ಶ್ರೀ ವೇದವ್ಯಾಸ ವಿರಚಿತ ಆ ಮಹಾಪುರಾಣದ ಕತೆಯನ್ನು, ಪರೀಕ್ಷಿತ ರಾಜನಿಗೆ ಶುಕಮುನಿಗಳು ಹೇಳಿದ ರೀತಿಯಲ್ಲಿಯೆ ಹೇಳುತ್ತಿದ್ದರೂ, ನಡುನಡುವೆ ಅನೇಕ ಸಂದರ್ಭಗಳಲ್ಲಿ ಆಯಾ ಘಟನೆಗಳ ಆಳಕ್ಕಿಳಿದು ಅವುಗಳ ಒಳಾರ್ಥವನ್ನು ವಿವರಿಸುತ್ತಿದ್ದದ್ದು ಇಲ್ಲಿ ನೆರೆದಿದ್ದ ಋಷಿಗಳೆಲ್ಲರ ಗಮನ ಸೆಳೆದಿತ್ತು. ಘಟನೆಗಳ ಒಳಿತು-ಕೆಡುಕುಗಳನ್ನು ಕೆದಕುತ್ತ ಸೂತಮುನಿಗಳ ಆದರ್ಶ ಬದುಕಿನ ಮಹತ್ವವನ್ನು ಎತ್ತಿ ಹಿಡಿಯುತ್ತಿದ್ದದ್ದು ಎಲ್ಲರಿಗೂ ದಾರಿದೀಪವಾಗಿತ್ತು.

`ನೈಮಿಷಾರಣ್ಯದ ಮಹಾತಪಸ್ವಿಗಳೆ, ಶ್ರೀಮದ್ಭಾಗವತ ಕತೆಯ ಒಂದು ಅಪೂರ್ವ ಪಾತ್ರ-ಮಹಾನ್‌ ಶಕ್ತಿವಂತ ಪರಶುರಾಮ. ಅವನ ಸಾಹಸ ಬದುಕಿನ ವಿವರಗಳನ್ನು ಹದಿನಾರನೆಯ ಅಧ್ಯಾಯ ನೀಡುತ್ತದೆ. ಮತ್ತೆ ಈ ದಿವಸ ನಿಮಗೆ ಪರಶುರಾಮನನ್ನು ಕುರಿತ ಹದಿನಾರನೆಯ ಅಧ್ಯಾಯದೊಂದಿಗೆ, ಇನ್ನೊಬ್ಬ ಮಹಾನ್‌ ಶಕ್ತಿವಂತ ವಿಶ್ವಾಮಿತ್ರರ ವಂಶದ ಬಗ್ಗೆಯೂ ತಿಳಿಸಲಿದ್ದೇನೆ. ಶ್ರೀಮದ್ಭಾಗವತದ ಎಲ್ಲ ಪುಣ್ಯ ಕಥಾಭಾಗಗಳ ಹಾಗೆಯೇ ಇವೆರಡು ಅಧ್ಯಾಯಗಳೂ ನಮ್ಮ ಮನಸ್ಸನ್ನು ಸೆಳೆಯುವಂತಹುದಾಗಿವೆ. ನೆನ್ನೆಯ ಕಥಾಸಂದರ್ಭದಲ್ಲಿ, ಪರಶುರಾಮ ತನ್ನ ತಂದೆ ಜಮದಗ್ನಿಯ ಆಶ್ರಮದ ಮೇಲೆ ಧಾಳಿ ನಡೆಸಿ, ಗೋವು ಕಾಮಧೇನುವನ್ನು ಅಪಹರಿಸಿಕೊಂಡು ಹೋದ ಮಹಾರಾಜ ಕಾರ್ತವೀರ್ಯಾಜುನನನ್ನು ಸಂಹರಿಸಿ, ಕಾಮಧೇನುವನ್ನು ಹಿಂತಿರುಗಿ ತಂದ ವಿಷಯವನ್ನು ಕೇಳಿದ್ದಿರಿ. ಮಗನ ಈ ಕಾರ್ಯಕ್ಕೆ ಜಮದಗ್ನಿ ಮಹರ್ಷಿ ಸಂತೋಷವನ್ನೇನೂ ಪಡಲಿಲ್ಲ. ರಾಜ್ಯದ ದೊರೆ ಎಂದರೆ ದೇವರ ಹಾಗೆ, ಅವನ ಸಂಹಾರ ಮಹಾಪಾಪ. ಇದರ ಪ್ರಾಯಶ್ಚಿತ್ತಾರ್ಥ ಪರಶುರಾಮ ಪವಿತ್ರ ತೀರ್ಥಕ್ಷೇತ್ರಗಳ ಯಾತ್ರೆ ಕೈಗೊಳ್ಳಬೇಕು ಎಂದು ಆಜ್ಞಾಪಿಸುತ್ತಾನೆ. ಪರಶುರಾಮ ಇದನ್ನೊಪ್ಪಿಕೊಂಡು ಒಂದು ವರ್ಷ ಪೂರ್ತಿ ತೀರ್ಥಯಾತ್ರೆ ಮಾಡಿದ. ಅನಂತರ ತಂದೆಯ ನಿವಾಸಕ್ಕೆ ಹಿಂತಿರುಗಿದ. ಇದರ ಮುಂದಿನ ಭಾಗವನ್ನು ಈ ಸಂಚಿಕೆಯಲ್ಲಿ ವಿವರಿಸಲಾಗುವುದು.

ಜಮದಗ್ನಿಯ ಹೆಂಡತಿ, ಪರಶುರಾಮನ ತಾಯಿ ರೇಣುಕೆ. ಪತಿಭಕ್ತಿಪರಾಯಣೆಯಾಗಿ, ಆಶ್ರಮದ ಗೌರವಾನ್ವಿತ ಮಾತೃಶಕ್ತಿಯಾಗಿ ಕಂಗೊಳಿಸುತ್ತಿದ್ದಳು. ಅಂತಹಾ ಪತಿವ್ರತಾಶಿರೋಮಣಿಗೂ ವಿಧಿ ಪರೀಕ್ಷಾ ಸಂದರ್ಭವನ್ನು ತಂದೊಡ್ಡಿಬಿಟ್ಟದ್ದೊಂದು ದೊಡ್ಡ ವಿಪರ್ಯಾಸ.

ಒಂದು ಮುಂಜಾವು, ಎಂದಿನಂತೆ ಪೂಜಾಹ್ನಿಕಗಳಿಗೆ ನೀರು ತರಲು ರೇಣುಕೆ ಗಂಗಾನದಿ ತೀರಕ್ಕೆ ಹೋದಳು. ಮರಳಿನಲ್ಲಿ ಬಿಂದಿಗೆ ಮಾಡಿಕೊಂಡು ಗಂಗೆಯಲ್ಲಿಳಿದು ಮಿಂದು ಶುಚಿಯಾಗಿ ನೀರು ತುಂಬಿಕೊಳ್ಳಬೇಕು ಎಂದು ಸಿದ್ಧಳಾದಾಗ ಅವಳ ಚಿತ್ತ ಚಂಚಲವಾಗುವಂತಹ ಘಟನೆಯೊಂದು ಜರುಗಿತು.

ಅಲ್ಲಿಯೆ ಗಂಗಾನದಿ ದಡದಲ್ಲಿ ವಿಸ್ತಾರ ಮರಳಿನ ಮೇಲೆ ಅತಿ ಸುಂದರನಾಗಿದ್ದ ಗಂಧರ್ವ ರಾಜನೊಬ್ಬ, ಕಮಲದ ಹೂವುಗಳ ಮಾಲೆಯಿಂದ ಶೃಂಗರಿಸಿಕೊಂಡು, ಅಪ್ಸರ ಸ್ತ್ರೀಯರೊಂದಿಗೆ ಕ್ರೀಡಿಸುತ್ತಿದ್ದ. ಅದನ್ನು ನೋಡಿದಾಗ ಯಾವುದೊ ಸ್ವರ್ಗಲೋಕದ ಆಕರ್ಷಣೆ ಎಂಬಂತೆ ಅನ್ನಿಸುತ್ತಿತ್ತು.

ಮಹಾಪತಿವ್ರತೆ, ಕಟ್ಟುನಿಟ್ಟಿನ ಋಷಿಪತ್ನಿಯೂ ಆಗಿದ್ದ ರೇಣುಕೆಯ ಮನಸ್ಸು ಆ ದೃಶ್ಯದತ್ತ ಸಮ್ಮೋಹನದಂತೆ ಸೆಳೆಯಿತು. ಆ ಸುಂದರ ಗಂಡು-ಹೆಣ್ಣುಗಳ ಪ್ರಣಯದಾಟವನ್ನೆ ನೋಡುತ್ತ ನಿಂತು ಮೈಮರೆತಳು.

ಚಂಚಲತೆ ಆ ಮಹಾತಾಯಿಯ ಮನಸ್ಸಿನಲ್ಲಿ ಬಿತ್ತಿಹೋಯಿತು. ಕೆಲಕ್ಷಣಗಳು ಅವಳಿಗೆ ಬೇರೇನೂ ಬೇಕೆನಿಸಲಿಲ್ಲ. ಲೋಕವೇ ಮರೆತುಹೋಯಿತು. ಪತಿ ಜಮದಗ್ನಿಯ ಹೋಮದ ಸಮಯ ಮೀರುತ್ತಿರುವುದೂ ಅವಳಿಗೆ ಮರೆತುಹೋಯಿತು.

ಯಾವುದೊ ಕ್ಷಣದಲ್ಲಿ ಥಟ್ಟನೆ ಅವಳಿಗೆಚ್ಚರವಾದಾಗ ಸಮಯ ಮೀರಿಹೋಗಿತ್ತು. ಪರಿಸ್ಥಿತಿ ಕೈದಾಟಿಹೋಗಿತ್ತು. ಕೈಯಲ್ಲಿದ್ದ ಮರಳು ಬಿಂದಿಗೆಗೆ ನೀರನ್ನು ತುಂಬಲಿಲ್ಲ. ಆಗಲೇ ಅವಳಿಗೆ ತನ್ನ ತಪ್ಪಿನ ಅರಿವಾಯಿತು. ಪತಿದೇವರ ನಿಯಮಗಳ ನೆನಪು ಬಂದಿತು. ತನಗೆ ಖಂಡಿತ ಶಿಕ್ಷೆಯಾಗುತ್ತದೆ, ಪತಿಶಾಪದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿದು ಮೈನಡುಗಿತು.

ಆ ನಡುಕ, ಭಯ, ಪಾಪಪ್ರಜ್ಞೆಗಳ ಮುದ್ದೆಯಾಗಿ ರೇಣುಕೆ ತನ್ನ ಗಂಡನ ಮುಂದೆ ಖಾಲಿ ಬಿಂದಿಗೆಯೊಂದಿಗೆ ನಿಂತಳು.

ದೂರದೃಷ್ಟಿಯ ಮಹಾತ್ಮ ಜಮದಗ್ನಿ ಮಹರ್ಷಿಗೆ ಬೆಂಕಿಯಂತಹ ಕೋಪ ಬಂದಿತ್ತು. ಅದನ್ನು ಚಿಮ್ಮಿಸುತ್ತಲೇ ಹೇಳಿದ : `ಪಾಪಿ, ನೀನು ಮಾನಸಿಕ ವ್ಯಭಿಚಾರ ಮಾಡಿಬಿಟ್ಟಿದ್ದೀಯ. ನೀನಿನ್ನೂ ಈ ಆಶ್ರಮದಲ್ಲಿ ಮಾತ್ರವಲ್ಲ, ಈ ಲೋಕದಲ್ಲಿ ಇರಲೂ ಅನರ್ಹಳು! ನಿನ್ನ ಮುಖವನ್ನು ನೋಡುವುದಕ್ಕೂ ನನಗೆ ಅಸಹ್ಯವಾಗಿದೆ!’

ಪತಿದೇವನ ಮುಂದೆ ಅಸಹಾಯಕಳಾಗಿ ನಿಂತ ರೇಣುಕೆಗೆ ಬಾಯಿ ಕಟ್ಟಿ ಹೋಗಿತ್ತು. `ಹೀಗೇಕಾಯಿತು, ತಾನೇಕೆ ಹೀಗೆ ಮಾಡಿದೆ, ಪ್ರತಿದಿನವೂ ಸುತ್ತಮುತ್ತಲೂ ಹೀಗೆಲ್ಲ ಗಂಧರ್ವ ಪ್ರಣಯದಾಟಗಳು ನಡೆಯುತ್ತಿದ್ದರೂ, ಇಂದೇಕೆ ತಾನು ಚಾಂಚಲ್ಯಕ್ಕೆ ಒಳಗಾದೆ? ಇಷ್ಟು ಕಾಲ ಮಾನಸಿಕವಾಗಿ ಗಟ್ಟಿಯಾಗಿದ್ದವಳು, ಯಾವಾಗಲೂ ಒಂದು ಕ್ಷಣವೂ ಅತ್ತಿತ್ತ ಮನಸ್ಸನ್ನು ಹರಿಯಬಿಡದವಳು ಇಂದು ಅದರಿಂದ ಸರಿದಿದ್ದು ಏಕೆ?’ – ರೇಣುಕೆಯ ನೊಂದ ಹೃದಯ ಚಿಂತನೆಗಳ ಅಲೆಗಳಲ್ಲಿ ಮೇಲೇರಿ ಇಳಿಯುತ್ತಿತ್ತು. ನೋವು ಅವಳ ಹೃದಯದ ದಡಕ್ಕೆ ಬಂದು ಬಡಿಯುತ್ತಿತ್ತು. ಅವಳಿಗೆ ಹೀಗೂ ಅನ್ನಿಸಿತು : `ಇಷ್ಟು ಕಾಲದ ಕಟ್ಟುನಿಟ್ಟು ಈ ದಿವಸ ಬಿಡಿಸಿಕೊಳ್ಳಲು ಪ್ರಯತ್ನಿಸಿತೇ?’

ಕಾಲ ಮಿಂಚಿತ್ತು. ಪತಿಯಾಜ್ಞೆಗಾಗಿ ಕಾಯುತ್ತ, ಲೋಕದ ಅತಿ ಸಾಮಾನ್ಯ ಜನರಿಗಿಂತಲೂ ಸಾಮಾನ್ಯಳಾಗಿ, ಮಹಾಪರಾಧಿಯಾಗಿ ಆ ಮಹಾಪತಿವ್ರತೆ ನೆಲನೋಡುತ್ತ ನಿಂತಳು.

ಜಮದಗ್ನಿ ತನ್ನ ಮಕ್ಕಳನ್ನೆಲ್ಲ ಕರೆದು ಹೇಳಿದ :

`ನನ್ನ ಪ್ರಿಯ ಮಕ್ಕಳೆ, ಈ ದಿವಸ ನಿಮ್ಮ ತಾಯಿ ಮಾಡಬಾರದ, ಋಷಿಪತ್ನಿಗೆ, ಪತಿವ್ರತೆಗೆ ತಕ್ಕುದಲ್ಲದ ಒಂದು ಕೆಲಸವನ್ನು ಮಾಡಿ ನಿಮ್ಮ ಮುಂದೆ ಮಹಾಪರಾಧಿಯಾಗಿ ನಿಂತಿದ್ದಾಳೆ. ಏನಾಯಿತು, ಅವಳು ಮಾಡಿದ ತಪ್ಪೇನು ಎಂದೀಗ ನಿಮ್ಮ ಮುಂದೆ ನಾನೀಗ ಚರ್ಚಿಸಬಯಸುವುದಿಲ್ಲ. ಪತಿಯ ದೃಷ್ಟಿಯಲ್ಲಿ ಪಾತಕಿಯಾಗಿರುವ ಪತ್ನಿ ಈ ಭೂಮಿಯ ಮೇಲೆ ಬದುಕಿರಬಾರದು. ಇತರ ಪತ್ನಿಯರಿಗೆ, ಮಾತೆಯರಿಗೊಂದು ಮಾದರಿಯಾಗಬಾರದು. ಹೀಗೂ ಒಂದು ತಪ್ಪೆಸಗಿ ಶಿಕ್ಷೆಯಿಂದ ತಪ್ಪಿಸಿಕೊಳ್ಳಬಾರದು. ಆದ್ದರಿಂದ ಮಕ್ಕಳೆ, ನೀವೀಗ ನಿಮ್ಮ ಗುರು ಮತ್ತು ತಂದೆಯೂ ಆಗಿರುವ ನನ್ನದೊಂದು ಆಜ್ಞೆಯನ್ನು ಪಾಲಿಸಬೇಕು. ಈಗಿಂದೀಗಲೇ ಈಕೆಯ ಶಿರಚ್ಛೇದನ ಮಾಡಬೇಕು!’

ಮಕ್ಕಳು ದಿಗ್ಭ್ರಮೆಗೊಂಡು ನಿಂತರು. ಪ್ರೀತಿಯ ತಾಯಿಯ ಮುಖ ನೋಡುತ್ತ ನಡುಗಿದರು. ಹಿರಿಯ ಮಗ ಕೇಳಿದ : `ಗೌರವಾನ್ವಿತ ತಂದೆಯೆ, ಈಕೆ ಮಾಡಿರುವ ತಪ್ಪೇನು? ಶಿರಚ್ಛೇದನದ ಶಿಕ್ಷೆ ನೀಡುವಂತದ್ದು ಏನು ಮಾಡಿದಳು? ಇದನ್ನು ನಾವು ತಿಳಿಯಬೇಡವೇ? ತಿಳಿದರೂ ನವಮಾಸಗಳು ಹೊತ್ತು ಹೆತ್ತು ಬೆಳೆಸಿದ ತಾಯಿದೇವಿಯನ್ನೇ ಕೊಲ್ಲಲು ನಮ್ಮಿಂದಾದೀತೆ? ನೀವೇಕೆ ಇಷ್ಟು ಕಠಿಣವಾದ ಆಜ್ಞೆಯನ್ನು ನಮ್ಮಗಳ ಮೇಲೆ ಹೇರುತ್ತಿದ್ದೀರಿ?’

ಜಮದಗ್ನಿ ಋಷಿಯ ಕೋಪ ತಾರಕಕ್ಕೇರಿತು. ಅವನು ಮುಗಿಲು ಮುಟ್ಟುವಂತೆ ಅಬ್ಬರಿಸಿದ : `ಛೀ, ಛೀ, ಎಂತಹ ಮಕ್ಕಳು ನೀವು? ಗುರುವಾಜ್ಞೆಯನ್ನು ತಂದೆಯ ಮಾತನ್ನು ಪಾಲಿಸದ ಅಪವಿತ್ರರು. ನೀವುಗಳೆಲ್ಲ ನನ್ನ ಮಕ್ಕಳು ಎಂದು ಹೇಳಲೂ ನನಗೆ ಅವಮಾನವೆನಿಸುತ್ತದೆ! ನಿಮ್ಮ ತಾಯಿಯ ಹಾಗೆ ನಿಮಗೂ ಬದುಕುವ ಅರ್ಹತೆಯಿಲ್ಲ!’

ಹೀಗೆ ಹೇಳಿದ ಜಮದಗ್ನಿ ಕಿರಿಮಗ ಪರಶುರಾಮನನ್ನು ನೋಡಿ ಹೇಳಿದ : `ನಿನ್ನನ್ನು ನನ್ನ ಮಗನೆಂದುಕೊಂಡಿದ್ದೇನೆ. ನನ್ನ ಹೃದಯದ ಭಾಗವೆಂದುಕೊಂಡಿದ್ದೇನೆ. ನನ್ನ ಕಳಕಳಿ, ಕೋಪ, ನೋವು, ಅವಮಾನ ನಿನಗೆ ಅರ್ಥವಾಗುತ್ತದೆ ಎಂದಾದರೆ ಕೂಡಲೇ, ಈ ಆಶ್ರಮದ ನಿಯಮಗಳನ್ನು ಮೀರಿದ ನಿನ್ನ ತಾಯಿಯನ್ನು, ನನ್ನ ಮಾತು ಮೀರಿದ ನಿನ್ನ ಅಣ್ಣಂದಿರನ್ನು ಕೂಡಲೇ ಕತ್ತರಿಸು!’

ತಂದೆಯ ಮಹಾನ್‌ ತಪಶ್ಯಕ್ತಿಯ ಅರಿವಿದ್ದ ಪರಶುರಾಮ ಒಂದು ಕ್ಷಣವೂ ತಡಮಾಡಲಿಲ್ಲ. ಕೂಡಲೇ ತನ್ನ ಗಂಡುಗೊಡಲಿಯನ್ನು ಝಳಪಿಸಿ ತಾಯಿಯನ್ನು ಮತ್ತು ಅಣ್ಣಂದಿರನ್ನೂ ಸಂಹರಿಸಿಬಿಟ್ಟು, ತಂದೆಯ ಮುಂದೆ ತಲೆಬಾಗಿ ನಿಂತ. ಅವನ ಕೊಡಲಿಯ ಹರಿತವಾದ ಭಾಗವೆಲ್ಲ ರಕ್ತಸಿಕ್ತವಾಗಿತ್ತು.

ಜಮದಗ್ನಿಗೆ ಕೋಪವೆಲ್ಲ ಇಳಿದು ಅಪಾರ ಸಂತೋಷವಾಯಿತು. ಕೂಡಲೇ ಅವನು ಹೆಮ್ಮೆಯಿಂದ ತನ್ನ ಸುಪುತ್ರ ಪರಶುರಾಮನನ್ನು ಬರಸೆಳೆದು ಅಪ್ಪಿಕೊಂಡು ಮೈ ತಡವಿದನು. ತನ್ನ ಪ್ರೀತಿಯ ಪುತ್ರನ ಕಣ್ಣಂಚುಗಳಲ್ಲಿ ಕಿರುನೀರು ಚಿಮ್ಮಿರುವುದು ಅವನಿಗೆ ಕಾಣಿಸಿತು. ಅವನಿಗರ್ಥವಾಯಿತು. ಕೂಡಲೇ ಪರಶುರಾಮನಿಗೆ ಹೇಳಿದ : `ಭಲೇ, ಭಲೇ, ಪರಶುರಾಮ. ನೀನು ನಿಜವಾಗಲೂ ಆದರ್ಶ ಪುತ್ರ, ಆದರ್ಶ ಪುರುಷ, ತಿಳಿವಳಿಕೆಯುಳ್ಳವ, ನೀನು ತಾಯಿ-ಸೋದರರನ್ನು ಸಂಹರಿಸುವಂತಹ ನನ್ನಾಜ್ಞೆಯನ್ನು ಏಕೆ ಪಾಲಿಸಿದೆ ಮತ್ತು ಈಗ ನಿನ್ನ ಮನಸ್ಸಿನಲ್ಲಿ ಏನಾಗುತ್ತಿದೆ ಎನ್ನುವುದೆಲ್ಲ ನನಗರ್ಥವಾಗಿದೆ. ಮಗೂ, ನಿನ್ನ ನೋವು ಖಂಡಿತ ನನ್ನ ನೋವೂ ಆಗಿದೆ. ನಿನ್ನ ನಡವಳಿಕೆಯಿಂದ ನಾನು ಪ್ರಸನ್ನನಾಗಿದ್ದೇನೆ. ನಿನಗೇನು ಬೇಕು ಕೇಳು ಪರಶುರಾಮ, ಕೊಡುತ್ತೇನೆ!’

ಹೀಗೊಂದು ಸಂದರ್ಭ ಬರುತ್ತದೆಂದು ತಿಳಿದಿದ್ದ ಪರಶುರಾಮ ಕೂಡಲೇ ಹೇಳಿದ : `ನನ್ನ ತಾಯಿ ಮತ್ತು ಅಣ್ಣಂದಿರು ಬದುಕಲಿ; ನಾನು ಅವರನ್ನು ಕೊಂದಿದ್ದು ಅವರಿಗೆ ನೆನಪಾಗದಿರಲಿ. ಇದೇ ನಾನು ಕೇಳುವ ವರ!’ ತಂದೆ ಕೂಡಲೇ ಹೇಳಿದರು : `ತಥಾಸ್ತು!’

ನಿದ್ದೆಯಿಂದ ಎದ್ದವರಂತೆ ತಾಯಿ ಮತ್ತು ಅಣ್ಣಂದಿರು ಎಚ್ಚೆತ್ತು ನಿಲ್ಲುವುದನ್ನು ನೋಡಿದ ಪರಶುರಾಮನಿಗೆ ತುಂಬ ಸಂತೋಷವಾಯಿತು. ಪರಶುರಾಮ ತಂದೆಗೆ ದೀರ್ಘದಂಡ ನಮಸ್ಕಾರ ಮಾಡಿ ಹೇಳಿದ : `ಪೂಜ್ಯ ತಂದೆಯೆ, ನಾನು ನನ್ನ ಮನಸ್ಸಮಾಧಾನಕ್ಕಾಗಿ ಒಂದಿಷ್ಟು ಕಾಲ ಅಲ್ಲಲ್ಲಿ ಸುತ್ತಿ ಬರುತ್ತೇನೆ! ನನ್ನೊಂದಿಗೆ ನನ್ನ ಸೋದರರೂ ಇರುತ್ತಾರೆ!’ – ತನ್ನ ತಾಯಿ ರೇಣುಕೆ ತಂದೆ ಜಮದಗ್ನಿ ಹಿಂದಿನದನ್ನು ಮರೆತು ಏಕಾಂತದಲ್ಲಿ ಸಂತೋಷವಾಗಿರಲಿ ಎಂದು ಅವನ ಹೃದಯಾಂತರಾಳದಲ್ಲಿ ಒಂದು ಅನಿಸಿಕೆ ಉಂಟಾಯಿತೇನೊ?

ತಂದೆ ತಾಯಿ ಒಪ್ಪಿದಾಗ, ಅವರಿಗೆ ನಮಸ್ಕರಿಸಿ ಸೋದರರೆಲ್ಲರೂ ಆಶ್ರಮದಿಂದ ದೂರ ಹೋದರು. ಇವರನ್ನು ಹೀಗೆ ವಿಧಿಯೇ ಕಳುಹಿಸಿತೇನೊ! ಮುಂದಿನ ದಿನಗಳಲ್ಲಿ ಆಶ್ರಮ ದೊಡ್ಡದೊಂದು ದುರಂತವನ್ನು ಕಂಡಿತು!

ಪರಶುರಾಮನಿಂದ ಕೊನೆಯುಸಿರೆಳೆದಿದ್ದ ಕಾರ್ತವೀರ್ಯಾಜುನನ ಮಕ್ಕಳು ಇಂತಹುದೇ ಒಂದು ಸುಸಂದರ್ಭಕ್ಕಾಗಿ ಕಾಯುತ್ತಿದ್ದರು. ತನ್ನ ತಂದೆಯನ್ನು ಕೊಂದ ಪರಶುರಾಮನ ತಂದೆಯನ್ನು ತಾವೂ ಕೊಲ್ಲಬೇಕು! ತಡಮಾಡದೆ ಅವರು ಜಮದಗ್ನಿಯ ಆಶ್ರಮಕ್ಕೆ ಬಂದರು.

ಜಮದಗ್ನಿ ಮಹರ್ಷಿ ದೇವೋತ್ತಮ ಪರಮ ಪುರುಷನನ್ನು ಧ್ಯಾನಿಸುತ್ತ ತಪೋನಿಷ್ಠೆಯಲ್ಲಿದ್ದ. ಕಾರ್ತವೀಯಾರ್ಜುನನ ಪುತ್ರರು ಪಾಪಪುಣ್ಯಗಳ ಚಿಂತೆ ಮಾಡಲಿಲ್ಲ. ಋಷಿ ಹತ್ಯೆಯ ಪಾಪಕ್ಕೆ ಬೆದರಲಿಲ್ಲ. ಜಮದಗ್ನಿಯನ್ನು ಕಂಡಕೂಡಲೇ ಮುನ್ನುಗ್ಗಿದರು.

ಇದನ್ನು ಕಂಡ ರೇಣುಕೆ ಓಡಿಬಂದಳು. ಸೆರಗೊಡ್ಡಿ ಬೇಡಿಕೊಂಡಳು.

`ನನ್ನ  ಪತಿದೇವರು ಧ್ಯಾನದಲ್ಲಿ ಮೈಮರೆತಿದ್ದಾರೆ. ಎಚ್ಚರದಲ್ಲಿ ಇದ್ದಿದ್ದರೆ ನೀವೆಲ್ಲ ಅವರ ಹತ್ತಿರ ಸುಳಿಯಲೂ ಸಾಧ್ಯವಾಗುತ್ತಿರಲಿಲ್ಲ. ಅವರ ನೋಟದಿಂದಲೇ ಭಸ್ಮವಾಗುತ್ತಿದ್ದಿರಿ. ಈಗ ಅವರನ್ನು ನೀವು ಏನೂ ಮಾಡಬಾರದು…

– ಎಂದು ಎಷ್ಟು ಗೋಗರೆದರೂ ಅವರು ಬಿಡಲಿಲ್ಲ. ಕೂಡಲೇ ಜಮದಗ್ನಿಯ ತಲೆಯನ್ನು ಕತ್ತರಿಸಿ ತೆಗೆದುಕೊಂಡು ಹೊರಟುಹೋದರು.

ರೇಣುಕೆಗೆ ದಿಗ್ಭ್ರಮೆಯಾಯಿತು. ಏನು ಮಾಡಬೇಕೆಂದು ತೋರದ ಅಸಹಾಯಕತೆ ಆವರಿಸಿಕೊಂಡಿತು. ಮಕ್ಕಳೂ ಇಲ್ಲಿಲ್ಲ, ಯಾರಿಗೆ ಹೇಳುವುದು, ಯಾರ ಸಹಾಯ ಬೇಡುವುದು?

ಅವಳಿಗೆ ದಿಕ್ಕು ತೋರಲಿಲ್ಲ. ಆದರೆ ಅವಳ ಬಾಯಿಯಿಂದೊಂದು ಆರ್ತನಾದ ಹೊರಹೊಮ್ಮಿತು!’ `ರಾಮ, ರಾಮ, ಪರಶುರಾಮಾ…!’

ಪರಶುರಾಮ ಮತ್ತು ಸೋದರರು ಎಲ್ಲಿಯೊ ದೂರದಲ್ಲಿದ್ದರೂ, ತಾಯಿಯ ಆಕ್ರಂದನ ವಾಯುವೇಗದಲ್ಲಿ ಅವರನ್ನು ಬಂದು ತಲುಪಿತು. ಆಶ್ರಮದಲ್ಲಿ ಏನೊ ಆಗಬಾರದ್ದು ಆಗಿದೆ ಎಂದು ಅವರಿಗೆ ತಿಳಿಯಿತು.

ಕೂಡಲೇ ಆಶ್ರಮದತ್ತ ಧಾವಿಸಿದರು.

ಆಶ್ರಮದಲ್ಲಿ ನಡೆದ ದುರಂತ, ಮಾತೆಯ ಆಕ್ರಂದನ ಅವರ ಎದೆಗೆ ರಾಚಿತು. ಶಿರವಿಲ್ಲದ ತಂದೆಯ ದೇಹಭಾಗ ನೋಡಿ ದುಃಖ, ಕ್ರೋಧ, ಜುಗುಪ್ಸೆ, ವ್ಯಥೆ, ಶೋಕಗಳಿಂದ ದಿಗ್ಭ್ರಾಂತರಾಗಿ ಜಮದಗ್ನಿ ಸುತರು ದುಃಖಿಸಿದರು. ರೇಣುಕೆ ಓಡಿಬಂದು ಪರಶುರಾಮನನ್ನು ಬಿಗಿದಪ್ಪಿಕೊಂಡಳು. ಪರಶುರಾಮ ಉಸಿರು ರಭಸದಿಂದ ಏರಿಳಿಯುತ್ತಿರುವುದು ಅವಳಿಗೆ ಅನುಭವವಾಯಿತು.

ಆ ಕ್ಷಣವೇ ಪರಶುರಾಮ ನಿರ್ಧರಿಸಿಬಿಟ್ಟಿದ್ದ!

`ಅತ್ಯಂತ ಸಾತ್ವಿಕರು, ಮಹಾತಪಸ್ವಿಗಳು, ದೇವಾದಿದೇವರಿಂದ ಗೌರವಾನ್ವಿತರು ಆದ ನನ್ನ ತಂದೆಯ ಶಿರಚ್ಛೇದನ ಮಾಡಿದ ಮಹಾರಾಜ ಕಾರ್ಯವೀರ್ಯಾರ್ಜುನನ ವಂಶವನ್ನು ನಿರ್ವಂಶ ಮಾಡಬೇಕು. ಹೀಗೆಲ್ಲ ತಪಸ್ವಿಗಳನ್ನು ಕಾಡುವ ಕ್ಷತ್ರಿಯ ಕುಲವನ್ನೇ ನಿರ್ಮೂಲ ಮಾಡಬೇಕು!’

ಪರಶುರಾಮ ಹೇಳಿದ :

`ಮಹಾತಾಯಿ ಅಳಬೇಡ, ನಿನಗೆ ಎಷ್ಟು ದುಃಖವಾಗಿದೆಯೆಂದು ನನಗೆ ಗೊತ್ತು. ಸಂಕಟಗಳು ಒಂದಾದಮೇಲೊಂದು ನಿನ್ನನ್ನು ಆಕ್ರಮಿಸಿಕೊಳ್ಳುತ್ತಿವೆ. ಅಮ್ಮ, ನಿನ್ನ ಹೃದಯದ ನೋವನ್ನು, ದಳ್ಳುರಿಯನ್ನು ಸ್ವಲ್ಪವಾದರೂ ಕುಗ್ಗಿಸುತ್ತೇನೆ. ಪ್ರಿಯ ಸೋದರರೆ, ತಂದೆಯವರ ದೇಹ ಕೆಡದಂತೆ ಕಾಪಾಡಿ. ನಾನು ಅವರ ಶಿರದೊಂದಿಗೆ ಬರುತ್ತೇನೆ!’

ಪರಶುರಾಮ ಗಂಡುಗೊಡಲಿಯನ್ನು ಹೆಗಲಿಗೇರಿಸಿ ನೆಟ್ಟಗೆ ಮುನ್ನಡೆದಾಗ, ಅವನ ಶರೀರ ನೆಲ-ಆಕಾಶವನ್ನು ಆವರಿಸಿಕೊಂಡಿರುವಂತೆ ಆಶ್ರಮವಾಸಿಗಳಿಗೆಲ್ಲ ಕಂಡಿತು.

ಪರಶುರಾಮ ಭೂಮಂಡಲವನ್ನು ಪ್ರದಕ್ಷಿಣೆ ಮಾಡಿದ. ದಾರಿಗೆ ಎದುರಾದ ಕ್ಷತ್ರಿಯರನ್ನು ಒಬ್ಬೊಬ್ಬರನ್ನಾಗಿ ಕೊಚ್ಚಿಹಾಕಿದ. ಮತ್ತೆ ಮಾಹಿಷ್ಮತಿ ನಗರಕ್ಕೆ ಹೋಗಿ, ಕಾರ್ತವೀರ್ಯಾರ್ಜುನನ ಮಕ್ಕಳೆಲ್ಲರ ತಲೆಗಳನ್ನು ಕತ್ತರಿಸಿ ಹಾಕಿ ಬೆಟ್ಟದಂತೆ ರಾಶಿ ಮಾಡಿದ. ಈ ಮಕ್ಕಳ ದೇಹದಿಂದ ಹೊರಹರಿದ ರಕ್ತ ಆ ಊರಿನಲ್ಲಿ ಭಯಂಕರ ರಕ್ತ ನದಿಯನ್ನೇ ಸೃಷ್ಟಿಮಾಡಿತು. ಕ್ಷತ್ರಿಯರೆಲ್ಲ ಬೆದರಿದರು.

ಪರಶುರಾಮ ಇಪ್ಪತ್ತೊಂದು ಸಲ ಭೂಪ್ರದಕ್ಷಿಣೆ ಮಾಡಿ ಎಲ್ಲ ಕ್ಷತ್ರಿಯರನ್ನೂ ಕೊಂದುಹಾಕಿದನು. ಸಮಂತ ಪಂಚಕವೆಂಬ ಪ್ರದೇಶದಲ್ಲಿ ರಕ್ತ ತುಂಬಿದ ಒಂಬತ್ತು ಸರೋವರಗಳನ್ನು ಸೃಷ್ಟಿಸಿದನು.

ಅನಂತರ ಪರಶುರಾಮ ತನ್ನ ತಂದೆಯ ತಲೆಯನ್ನು ಆಶ್ರಮಕ್ಕೆ ತಂದು ದೇಹಕ್ಕೆ ಜೋಡಿಸಿದನು. ಅದನ್ನು ದರ್ಭೆಯ ಮೇಲಿಟ್ಟನು. ಯಜ್ಞದ ಮೂಲಕ ಭಗವಾನ್‌ ವಾಸುದೇವನನ್ನು ಪೂಜಿಸತೊಡಗಿದನು. ವಾಸುದೇವನು ಎಲ್ಲ ದೇವತೆಗಳ ಹಾಗೂ ಪ್ರತಿಯೊಂದು ಜೀವಿಯ ಸರ್ವವ್ಯಾಪಕ ಪರಮಾತ್ಮನಾಗಿದ್ದಾನೆ ಎನ್ನುವುದು ಅವನಿಗೆ ಗೊತ್ತಿತ್ತು.

ಯಜ್ಞವನ್ನು ಪೂರ್ಣಗೊಳಿಸಿದ ಮೇಲೆ ಪರಶುರಾಮ ಪೂರ್ವ ದಿಕ್ಕನ್ನು ಹೋತೃವಿಗೆ ಕಾಣಿಕೆಯಾಗಿ ಕೊಟ್ಟನು. ದಕ್ಷಿಣವನ್ನು ಬ್ರಹ್ಮನಿಗೂ, ಪಶ್ಚಿಮವನ್ನು ಅಧ್ವರ್ಯುವಿಗೂ, ಉತ್ತರವನ್ನು ಉದ್ಗಾತೃವಿಗೂ ನೀಡಿದನು. ಈಶಾನ್ಯ, ಆಗ್ನೇಯ, ವಾಯುವ್ಯ, ನೈರುತ್ಯ ಉಪದಿಕ್ಕುಗಳನ್ನು ಇತರ ಪುರೋಹಿತರುಗಳಿಗೆ ಕೊಟ್ಟನು. ಮಧ್ಯಭಾಗವನ್ನು ಕಶ್ಯಪನಿಗೂ, ಆರ್ಯಾವರ್ತವನ್ನು ಉಪದ್ರಷ್ಟೃವಿಗೂ ನೀಡಿದನು. ಇನ್ನುಳಿದೆಲ್ಲವನ್ನೂ ಸದಸ್ಯ ಪುರೋಹಿತರಿಗೆ ಹಂಚಿದನು.

ಯಜ್ಞದ ಆಚರಣೆಗಳೆಲ್ಲ ಮುಗಿದ ಮೇಲೆ, ಪರಶುರಾಮ ಅವಭೃಥ ಸ್ನಾನವನ್ನು ಮಾಡಿದನು. ಸರಸ್ವತೀ ಮಹಾನದಿಯ ತೀರದಲ್ಲಿ ನಿಂತು ಸಕಲ ಪಾಪಗಳನ್ನೂ ತೊಳೆದುಕೊಂಡನು. ಇಂತೆಲ್ಲ ಆದಾಗ ಪರಶುರಾಮನು ಮೋಡವಿಲ್ಲದ ಆಕಾಶದಲ್ಲಿ ಬೆಳಗುವ ಸೂರ್ಯನಂತೆ ತೋರಿದನು.

ಉಪನ್ಯಾಸವನ್ನು ಕೆಲಕ್ಷಣ ತಡೆದು ಸೂತಮುನಿಗಳು ಹೇಳಿದರು :

`ನನ್ನ ಆತ್ಮೀಯ ಮುನಿಗಳೆ, ಕರ್ಮಬಂಧನಃ ಎಂಬುದು ಒಂದಾದ ಮೇಲೊಂದು ಐಹಿಕ ದೇಹವನ್ನು ತಳೆಯುವ ಪುನರಾವರ್ತನೆಯನ್ನು ಸಂಕೇತಿಸುತ್ತದೆ. ಈ ಜನ್ಮ, ಮರಣಗಳ ಪುನರಾವರ್ತನೆಯಲ್ಲಿ ಜೀವನದ ಎಲ್ಲ ಸಮಸ್ಯೆಗಳೂ ಅಡಕವಾಗಿವೆ. ಆದ್ದರಿಂದ ಭಗವಾನ್‌ ವಿಷ್ಣುವಿನ ತೃಪ್ತಿಗೋಸ್ಕರ ಯಜ್ಞವನ್ನು ಆಚರಿಸುವುದಕ್ಕಾಗಿ, ಕರ್ಮ ಮಾಡುವುದು ಅನಿವಾರ್ಯವಾಗಿದೆ. ಪರಶುರಾಮನು ಭಗವಂತನ ಅವತಾರವೇ ಆಗಿದ್ದರೂ, ಪಾಪ ಕಾರ್ಯಗಳಿಗೆ ಹೊಣೆಯಾಗಬೇಕಾಯಿತು. ಈ ಲೌಕಿಕ ಪ್ರಪಂಚದಲ್ಲಿ ಯಾರೇ ಆಗಲಿ, ಎಷ್ಟೇ ಜಾಗೃತನಾಗಿದ್ದರೂ, ಯಾವುದೊ ಒಂದು ಪಾಪಕಾರ್ಯವನ್ನು ಮಾಡಿಬಿಡುವಂತಾಗುತ್ತದೆ. ಇದನ್ನೆಲ್ಲ ಅರಿತ ಪರಶುರಾಮನು ವಿಷ್ಣುವನ್ನು ಪ್ರಾರ್ಥಿಸುವ ಯಜ್ಞವನ್ನಾಚರಿಸಿದನು. ಅವನ ಯಜ್ಞ ಮಹಾತ್ಮೆಯಿಂದ ಜಮದಗ್ನಿಯ ಕರ್ಮ ಪರಿಹಾರವಾಯಿತು. ಅವನು ಸಕಲ ಸ್ಮೃತಿಯನ್ನೂ ಪಡೆದನು. ಸಪ್ತರ್ಷಿ ಮಂಡಲದ ಏಳು ಋಷಿಗಳಲ್ಲಿ ಒಬ್ಬನಾದನು. ಹೇ, ನೈಮಿಷಾರಣ್ಯದ ತಪಸ್ವಿಗಳೆ, ಪರಶುರಾಮನು ಪ್ರಾಜ್ಞ ಬ್ರಾಹ್ಮಣನಾಗಿ ಇಂದಿಗೂ ಮಹೇಂದ್ರ ಪರ್ವತ ಪ್ರದೇಶದಲ್ಲಿ ಬದುಕಿದ್ದಾನೆ. ಆತನು ತನ್ನ ಸಕಲ ಆಯುಧಗಳನ್ನೂ ತ್ಯಜಿಸಿ ಪರಿಪೂರ್ಣನಾಗಿ ತೃಪ್ತನಾಗಿದ್ದಾನೆ. ಸಿದ್ಧ, ಚಾರಣ, ಗಂಧರ್ವರು ಅವನ ಉನ್ನತ ಚಾರಿತ್ರ್ಯವನ್ನೂ, ಕಾರ್ಯಗಳನ್ನೂ ಹಾಡಿ ಹೊಗಳಿ ಸದಾ ಆರಾಧಿಸುತ್ತಾರೆ!’

ಪರಶುರಾಮನ ಯೋಧಾವತಾರ ಮತ್ತು ಕ್ಷತ್ರಿಯ ಕುಲನಾಶದ ವಿವರಗಳನ್ನೆಲ್ಲ ಹೇಳಿದ ಸೂತಮುನಿಗಳು – `ಪರಶುರಾಮನ ಚರಿತೆಯನ್ನು ಈವರೆಗೆ ಕೇಳಿದಿರಿ. ಮುಂದಿನ ಭಾಗದಲ್ಲಿ ವಿಶ್ವಾಮಿತ್ರ ಮಹರ್ಷಿಯ ವಿಷಯ ಬರುತ್ತದೆ. ಪರಶುರಾಮ ಮತ್ತು ವಿಶ್ವಾಮಿತ್ರರ ಬದುಕಿನಲ್ಲಿ ವಿಚಿತ್ರವಾಗಿ ಕಾಣುವ ಅಂಶಗಳಿವೆ. ಹುಟ್ಟು ಬ್ರಾಹ್ಮಣನಾದ ಪರಶುರಾಮ ಆಯುಧ ಹಿಡಿದು ಕ್ಷತ್ರಿಯನಾದ. ಮತ್ತೆ ಬ್ರಾಹ್ಮಣನಾಗಿ ಮಹೇಂದ್ರ ಪರ್ವತವನ್ನು ಸೇರಿದನು. ಮೊದಲು ಕ್ಷತ್ರಿಯನಾಗಿದ್ದ ವಿಶ್ವಾಮಿತ್ರ ಅನಂತರ ಬ್ರಹ್ಮರ್ಷಿಯಾದ. ಬ್ರಾಹ್ಮಣ ಪದವಿ ಪಡೆದ. ಇಂತಹ ವಿಶ್ವಾಮಿತ್ರನ ಬದುಕಿನ ಕೆಲ ಸನ್ನಿವೇಶಗಳು ಈಗ ನೀವು ಕೇಳಲಿದ್ದೀರಿ!’ ಎಂದು ಹೇಳಿದರು.

ಪುರೂರವ-ಊರ್ವಶಿ ಸಂತತಿಯವರಲ್ಲೊಬ್ಬನಾದ ಕುಶಾಂಬು ಮಗನೆ ಗಾಧಿ. ಇವನ ಮಗಳೇ ಋಚಿಕ ಮುನಿಯನ್ನು ಮದುವೆಯಾಗಿ ಜಮದಗ್ನಿಯನ್ನು ಪಡೆದ ಸತ್ಯವತಿ. ಈ ಗಾಧಿ ಮಹಾರಾಜನ ಮಗನೇ ವಿಶ್ವಾಮಿತ್ರ ಮಹಾರಾಜ. ಬ್ರಹ್ಮರ್ಷಿಯಿಂದಲೇ ಬ್ರಹ್ಮರ್ಷಿ ಎಂದು ಕರೆಸಿಕೊಳ್ಳಬೇಕೆಂದು ಹಠತೊಟ್ಟು ಮಹಾತಪಸ್ವಿಯಾಗಿ ಪರಿವರ್ತನೆಗೊಂಡ ಮಹಾನುಭಾವ.

ವಿಶ್ವಾಮಿತ್ರನಿಗೆ ನೂರಾಒಂದು ಜನ ಮಕ್ಕಳಿದ್ದರು.

ಹರಿಶ್ಚಂದ್ರ ಮಹಾರಾಜನ ಯಜ್ಞವೊಂದರಲ್ಲಿ ಮನುಷ್ಯ ಪಶುವಾಗಿ ಬಲಿಕೊಡಲು ಬಡ ಬ್ರಾಹ್ಮಣ ದಂಪತಿಯ ನಡುಮಗ ಶುನಃಶೇಫನನ್ನು ವಿಶ್ವಾಮಿತ್ರ ಕೊಂಡು ತಂದಿದ್ದ. ಹರಿಶ್ಚಂದ್ರ ತನ್ನ ಮಗ ರೋಹಿತನನ್ನು ಯಜ್ಞದಲ್ಲಿ ಬಲಿಕೊಡಬೇಕಾಗಿತ್ತು. ವಿಶ್ವಾಮಿತ್ರನ ಹೇಳಿಕೆಯಂತೆ ಅದೇ ವಯಸ್ಸಿನ ಬೇರೊಬ್ಬನಾಗಿ ಶುನಃಶೇಫನನ್ನು ಸಿದ್ಧಪಡಿಸಿದ್ದರು.

ಯಜ್ಞ ಸಮಯದಲ್ಲಿ ಬಲಿಕೊಡುವ ಸಂದರ್ಭ ಬಂದಾಗ ಶುನಃಶೇಫ ನೋವಿನಿಂದ ದೇವತೆಗಳನ್ನು ಪ್ರಾರ್ಥಿಸಿದನು. `ಹೇ, ಯಜ್ಞ ದೇವತೆಗಳೆ, ಬರೀ ಬಡ ಕುಟುಂಬದ ಅಸಹಾಯಕ ತಂದೆ-ತಾಯಿಗಳ ಮಗನಾಗಿ ಹುಟ್ಟಿದ್ದರಿಂದ ನಾನು ಬಲಿಪಶುವಾಗಬೇಕೆ? ಚಕ್ರವರ್ತಿಯ ಮಗನಾಗಿ ಹುಟ್ಟಿದ್ದರಿಂದ ರೋಹಿತ ಪಾರಾಗಬೇಕೆ? ಇದು ಎಂತಹ ಅನ್ಯಾಯ? ಸಂಬಂಧವೇ ಇಲ್ಲದ ನನ್ನನ್ನು ಹಣಕೊಟ್ಟು ಕೊಂಡು ತಂದು ಬದಲಿ ವ್ಯವಸ್ಥೆ ಮಾಡುತ್ತಿದ್ದಾರಲ್ಲ, ಇದು ನ್ಯಾಯವೆ? ನನ್ನನ್ನು ಕಾಪಾಡಿ!’

ಶುನಶೇಫ ಆಧ್ಯಾತ್ಮಿಕವಾಗಿ ತುಂಬ ಬೆಳೆದಿದ್ದ. ಮುನ್ನಡೆದಿದ್ದ.

ಹೀಗಾಗಿ ದೇವತೆಗಳು ಅವನನ್ನು ರಕ್ಷಿಸಿದರು. ಅವನನ್ನು ಹೆತ್ತವರಿಂದ ತಪ್ಪಿಸಿ ತಂದ ತಪ್ಪಿಗೆ ವಿಶ್ವಾಮಿತ್ರ ಅವನನ್ನು ತನ್ನ ಮಗನಾಗಿ ದತ್ತು ತೆಗೆದುಕೊಂಡ. ಅಲ್ಲದೆ, ಇವನನ್ನು ಹಿರಿಯಣ್ಣನೆಂದು ಸ್ವೀಕರಿಸುವಂತೆ ತನ್ನ ನೂರೊಂದು ಮಕ್ಕಳಿಗೂ ಹೇಳಿದ. ಅವರ್ಯಾರು ಅದಕ್ಕೆ ಒಪ್ಪಲಿಲ್ಲ : `ನಮ್ಮ ಒಡಹುಟ್ಟಿದವನಾಗದ ಯಾವೊನೊ ಒಬ್ಬನನ್ನು ನಮಗಿಂತಲೂ ಹೆಚ್ಚಿನ ಸ್ಥಾನಮಾನ ಕೊಟ್ಟು ಅಣ್ಣನೆಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ, ಇದು ನಮಗಾಗುತ್ತಿರುವ ಅನ್ಯಾಯ!’ – ಎಂದು ಬಿಟ್ಟರು.

ವಿಶ್ವಾಮಿತ್ರ ಕೋಪದಿಂದ ಸಿಡಿದೆದ್ದ : `ತಂದೆ ಮಾತು ಕೇಳದ ದುರ್ಜನರಾದ ನೀವೆಲ್ಲ ವೈದಿಕ ಸಂಸ್ಕೃತಿಯ ವಿರೋಧಿಗಳಾದ ಮ್ಲೇಚ್ಛರಾಗಿ ಹೋಗಿ!’ – ಎಂದು ವಿಶ್ವಾಮಿತ್ರ ಶಪಿಸಿದ.

ತಂದೆ ಮಾತು ಕೇಳದ ಅರ್ಧ ಮಂದಿ ಮಕ್ಕಳಿಗೆ ಶಾಪ ತಗುಲಿತು. ಉಳಿದರ್ಧ ಮಂದಿ ಮಕ್ಕಳು ಶಾಪಕ್ಕೆ ಬೆದರಿ ತಂದೆ ಮಾತಿಗೆ ಒಪ್ಪಿದರು.

ಹೀಗೆ ಶುನಃಶೇಫ ವಿಶ್ವಾಮಿತ್ರನ ಹಿರಿಯ ಮಗನಾದ. ಗಾಯ ವಂಶಜನೆಂದೂ, ದೇವರಾತನೆಂದೂ ಪ್ರಖ್ಯಾತನಾದ.

ಸೂತಮುನಿಗಳು ಹೇಳಿದರು :

`ಪ್ರಿಯ ಮುನಿಗಳೆ, ಪರಶುರಾಮ, ವಿಶ್ವಾಮಿತ್ರರು ಕ್ಷತ್ರಿಯರೂ ಆಗಿ ಋಷಿಗಳೂ ಆದರು. ಅವರ ವಂಶ ವಿಧವಿಧವಾಗಿ ಕವಲೊಡೆದು ಮುಂದುವರಿಯಿತು. ಪುರೂರವ-ಊರ್ವಶಿ ದಂಪತಿಯ ಜ್ಯೇಷ್ಠಪುತ್ರನಾಗಿ ಜನಿಸಿದ ಆಯುವಿಗೆ, ನಹುಷ, ಕ್ಷತ್ರವೃದ್ಧ, ರಜೀ, ರಾಭ ಮತ್ತು ಅನೇನಾ ಎನ್ನುವ ಐವರು ಮಹಾಬಲಶಾಲಿಗಳಾದ ಮಕ್ಕಳು ಹುಟ್ಟಿದರು. ಕೃತವೃದ್ಧನಿಗೆ ಸುಹೋತ್ರನೆಂಬ ಮಗ, ಅವನಿಗೆ ಕಾಶ್ಯ, ಕುಶ, ಗೃತ್ಸಮದ ಎನ್ನುವ ಮೂವರು ಮಕ್ಕಳು. ಗೃತ್ಸಮನಿಗೆ ಶುನಕ ಮಗ. ಶುನಕನಿಂದ ಶೌನಕರು ಜನಿಸಿದರು. ನಿಮಗೆಲ್ಲ ಗೊತ್ತಿರುವ ಹಾಗೆ, ಈಗ ನಮ್ಮೊಂದಿಗಿರುವ ಶೌನಕ ಋಷಿಗಳು ಋಗ್ವೇದದಲ್ಲಿ ಪರಿಣತರು. ಇಂತಹ ಪರಿಣತರಲ್ಲಿ ಅತ್ಯುತ್ತಮರು! ಇವರಿಗೆ ನಮ್ಮೆಲ್ಲರ ಗೌರವಗಳನ್ನು, ಮೆಚ್ಚುಗೆಯನ್ನು ಸಲ್ಲಿಸೋಣ!’

ನೈಮಿಷಾರಣ್ಯದ ಮುನಿಗಳೆಲ್ಲರೂ ಮುಂದೆ ಕುಳಿತಿದ್ದ ಶೌನಕ ಮುನಿಗಳನ್ನು ಗೌರವದಿಂದ ನೋಡಿ ನಮಿಸಿದರು. ಶೌನಕರು ಸಂಕೋಚದಿಂದ ತಲೆಬಾಗಿದರು.

ಸೂತಮುನಿಗಳು ಮುಂದುವರಿಸಿದರು :

`ಕಾಶ್ಯನ ಮಗ ಕಾಶಿ. ಅವನ ಮಗ ರಾಷ್ಟ್ರ. ಇವನ ಮಗ ದೀರ್ಘತಮ. ಇವನಿಗೆ ಧನ್ವಂತರಿ ಎಂಬ ಮಗ ಹುಟ್ಟಿದ. ಅವನೇ ಆಯುರ್ವೇದದ ಪ್ರವರ್ತಕ ಮತ್ತು ಯಜ್ಞದ ಫಲಗಳ ಅನುಭೋಕ್ತೃವಾದ ಭಗವಾನ್‌ ವಾಸುದೇವನ ಅವತಾರ. ಪ್ರಿಯ ಮುನಿಗಳೆ, ಇಂತಹ ಮಹನೀಯ ಧನ್ವಂತರಿಯ ನಾಮಸ್ಮರಣೆ ಮಾಡುವವನ ರೋಗಗಳು ದೂರವಾಗುವುವು. ಮತ್ತೆ, ಧನ್ವಂತರಿಯ ಮಗ ಕೇತುಮಾನ್‌. ಅವನ ಮಗ ಭೀಮರಥ. ಇವನ ಮಗ ದಿವೋದಾಸ. ಇವನ ಮಗ ದ್ಯುಮಾನ್‌. ಇವನಿಗೆ ಪ್ರತರ್ದನ ಎಂದೂ ಹೆಸರಿದೆ. ಇವನಿಗೆ ಶತ್ರುಜಿತ್‌, ವತ್ಸ, ಋತಧ್ವಜ, ಕುವಲಯಾಶ್ವ ಎನ್ನುವ ಬೇರೆ ಬೇರೆ ಹೆಸರುಗಳೂ ಇವೆ. ಇವನಿಗೆ ಅಲರ್ಕ ಮತ್ತು ಇತರ ಮಕ್ಕಳು ಹುಟ್ಟಿದರು. ಅಲರ್ಕನ ವಿಷಯದಲ್ಲಿ ಒಂದು ವಿಶೇಷವಿದೆ. ಪರೀಕ್ಷಿತ ರಾಜನಿಗೆ ಈ ವಿಷಯವನ್ನು ಬಹಳ ಸಂತೋಷದಿಂದ ಶುಕಮುನಿಗಳು ಹೇಳುತ್ತಾರೆ. ಅಲರ್ಕ ಈ ಭೂಮಂಡಲವನ್ನು ಅರವತ್ತಾರು ಸಾವಿರ ವರ್ಷಗಳ ಕಾಲ ಆಳಿದ. ಶುಕರು ಹೇಳುತ್ತಾರೆ – ಹೇ, ಪರೀಕ್ಷಿತ ರಾಜನ್‌, ಇವನನ್ನು ಬಿಟ್ಟು ಬೇರೆ ಯಾರೂ ತರುಣರಾಗಿ ಇಷ್ಟೊಂದು ಸಾವಿರ ವರ್ಷಗಳು ಆಳ್ವಿಕೆ ನಡೆಸಲಿಲ್ಲ. ಅಲರ್ಕನಿಗೆ ಸಂತತಿ ಎನ್ನುವ ಮಗ. ಇವನಿಗೆ ಸುನೀಥ. ಇವನಿಗೆ ನಿಕೇತನ. ಇವನಿಗೆ ಧರ್ಮಕೇತು. ಇವನ ಮಗ ಸತ್ಯಕೇತು. ಸತ್ಯಕೇತುವಿಗೆ ಧೃಷ್ಟಕೇತು, ಇವನ ಮಗ ಸುಕುಮಾರ, ಈ ಸುಕುಮಾರನದ್ದೂ ಒಂದು ವಿಶೇಷವಿದೆ. ಇವನು ಇಡೀ ಜಗತ್ತಿನ ಚಕ್ರವರ್ತಿಯಾಗಿದ್ದನು. ಇವನ ಮಗ ವೀತಿಹೋತ್ರ, ಇವನ ಮಗ ಭರ್ಗ, ಇವನಿಂದ ಭಾರ್ಗಭೂಮಿಯೂ ಜನಿಸಿದರು. ಪ್ರಿಯ ಮುನಿಗಳೇ, ಈ ರಾಜರುಗಳೆಲ್ಲರೂ ಕಾಶಿಯ ವಂಶಜರು. ಅವರನ್ನು ಕ್ಷತ್ರವೃದ್ಧನ ವಂಶಜರೆಂದೂ ಕರೆಯಬಹುದು. ಕ್ಷತ್ರವೃದ್ಧನ ಸೋದರ ರಾಭನ ಮಗ ರಭಸ. ಇವನ ಮಗ ಗಂಭೀರ. ಇವನ ಮಗ ಅಕ್ರಿಯ.

`ಅಕ್ರಿಯನ ಮಗನಿಗೆ ಬ್ರಹ್ಮವಿತ್‌ ಎಂದು ಹೆಸರಾಯಿತು. ರಾಭನ ಸೋದರ ಅನೇನಾನಿಗೆ ಶುದ್ಧ ಎನ್ನುವ ಮಗ. ಇವನ ಮಗ ಶುಚಿ. ಇವನ ಮಗ ಧರ್ಮಸಾರಥಿ. ಇವನನ್ನು ಚಿತ್ರಕೃತ್‌ ಎಂದೂ ಕರೆಯಲಾಗಿದೆ. ಇವನಿಗೆ ಶಾಂತರಜ ಎನ್ನುವ ಮಗ. ಇವನು ಆತ್ಮಸಾಕ್ಷಾತ್ಕಾರ ಪಡೆದವನು ಎನ್ನುವ ಹೆಗ್ಗಳಿಕೆ ಗಳಿಸಿಕೊಂಡವನು. ಎಲ್ಲ ಬಗೆಯ ವೈದಿಕ ಆಚರಣೆಗಳನ್ನು ಅನುಷ್ಠಾನ ಮಾಡಿದವನು. ಇಂತಾಗಿ ಇವನು ಸಂತಾನವನ್ನು ಮುಂದುವರಿಸಲಿಲ್ಲ. ರಾಭನ ಇನ್ನೊಬ್ಬ ಸೋದರ ರಜೀಗೆ ಐದುನೂರು ಜನ ಮಕ್ಕಳಿದ್ದರು. ಎಲ್ಲರೂ ಬಹಳ ಶಕ್ತಿ ಸಂಪನ್ನರಾಗಿದ್ದರು. ದೇವೇಂದ್ರ ದೈತ್ಯರೊಂದಿಗೆ ಯುದ್ಧಮಾಡಿ ಸ್ವರ್ಗರಾಜ್ಯವನ್ನೇ ಕಳೆದುಕೊಂಡಾಗ ರಜೀ ದಾನವರೊಂದಿಗೆ ಯುದ್ಧ ಮಾಡಿ ಸ್ವರ್ಗರಾಜ್ಯವನ್ನು ದೇವೇಂದ್ರನಿಗೆ ಮರಳಿ ತಂದುಕೊಟ್ಟನು. ಆದರೆ, ಪ್ರಹ್ಲಾದನಂತಹ ದೈತ್ಯನಿಗೆ ಹೆದರಿ ದೇವೇಂದ್ರ ಸ್ವರ್ಗ ರಾಜ್ಯವನ್ನು ರಜೀಗೇ ಕೊಟ್ಟುಬಿಟ್ಟನು. ರಜೀಯ ಮರಣಾನಂತರ ರಜೀಯ ಮಕ್ಕಳು, ಯಜ್ಞಾಚರಣೆಗಳಲ್ಲಿ ಇಂದ್ರನ ಹವಿರ್ಭಾಗವನ್ನು ಮರಳಿ ಕೊಡಲು ಒಪ್ಪಿಕೊಂಡಿದ್ದರೂ, ಸ್ವರ್ಗರಾಜ್ಯವನ್ನು ಹಿಂತಿರುಗಿಸಲಿಲ್ಲ. ಅದನ್ನವರು ಪಿತ್ರಾರ್ಜಿತ ಸ್ವತ್ತು ಎಂದು ಭಾವಿಸಿಕೊಂಡಿದ್ದರು.

`ಇಂದ್ರನಿಗೆ ಆ ಸಮಯದಲ್ಲಿ ದೇವಗುರು ಬೃಹಸ್ಪತಿಯ ನೆರವು ದೊರಕಿತು. ಬೃಹಸ್ಪತಿ ಅಗ್ನಿಯಲ್ಲಿ ಆಹುತಿಗಳನ್ನು ಸಮರ್ಪಿಸಿದನು. ರಜೀಯಾನ ಮಕ್ಕಳು ನೈತಿಕ ತತ್ವಗಳಿಂದಾಗಿ ಪತಿತರೆನಿಸಿಕೊಂಡರು. ಅವರನ್ನು ನಾಶಪಡಿಸುವುದು ದೇವೇಂದ್ರನಿಗೆ ಸುಲಭವಾಯಿತು. ಕ್ಷತ್ರವೃದ್ಧನ ಮೊಮ್ಮಗನಾದ ಕುಶನಿಂದ ಪ್ರತಿ ಎನ್ನುವ ಮಗ ಹುಟ್ಟಿದನು. ಇವನ ಮಗ ಸಂಜಯ. ಇವನ ಮಗ ಜಯ. ಇವನಿಗೆ ಕೃತ, ಇವನಿಂದ ಹರ್ಯಬಲ ಹುಟ್ಟಿದರು. ಇವನಿಗೆ ಸಹದೇವನೆಂಬ ಮಗ. ಇವನ ಮಗ ಹೀನ ಎಂಬ ಹೆಸರಿನವ. ಇವನ ಮಗ ಜಯಸೇನ. ಇವನ ಮಗ ಸಂಕೃತಿ. ಇವನ ಮಗ ಜಯ – ಬಹಳ ಬಲಶಾಲಿ ಮತ್ತು ಪರಿಣತ ಯೋಧ!’

ಕೆಲಕ್ಷಣಗಳ ವಿಶ್ರಾಂತಿಯ ತರುವಾಯ ಸೂತಮುನಿಗಳು ಹೇಳಿದರು : `ಇಲ್ಲಿಗೆ 17ನೆಯ ಕಥಾಭಾಗ ಮುಗಿಯುತ್ತದೆ. ಮುಂದಿನ ಸಂಚಿಕೆಯಲ್ಲಿ ನಹುಷನ ವಂಶವನ್ನು ವರ್ಣಿಸಲಾಗುವುದು. ಇಲ್ಲಿ ಯಯಾತಿ-ದೇವಯಾನಿ-ಶರ್ಮಿಷ್ಠೆ ಅವನ ವಿಷಯ ಬರುತ್ತದೆ. ತುಂಬ ಸ್ವಾರಸ್ಯವಾದ ಮತ್ತೆ ಚಿಂತನೆಗೆ ವಸ್ತುವಾಗುವಂತಹ ಆಗುಹೋಗುಗಳನ್ನಿಲ್ಲಿ ಕಾಣುತ್ತೇವೆ. ಬಿಡಿಸಿಕೊಳ್ಳದ ಮೋಹ ಏನೇನು ಮಾಡಿಸುತ್ತದೆ, ಸ್ವಾರ್ಥವನ್ನು ಹೇಗೆ ಪ್ರಚೋದಿಸುತ್ತದೆ ಎಂದೆಲ್ಲ ಕಾಣಿಸುವ ಅಧ್ಯಾಯ ಮುಂದಿನದು.

ಈ ಲೇಖನ ಶೇರ್ ಮಾಡಿ