ಕೂರ್ಮಾವತಾರ

ಮಕ್ಕಳೇ,

ಭಗವಂತನ ದಶಾವತಾರಗಳಲ್ಲಿ ಎರಡನೆಯದಾದ ಕೂರ್ಮಾವತಾರದ ರೋಚಕ ಕಥೆಯನ್ನು ತಿಳಿಯೋಣ.

ಬಹಳ ಹಿಂದಿನ ಮಾತು. ದಾಯಾದಿಗಳಾದ ದೇವ-ದಾನವರಿಗೆ ತಮ್ಮ ತಮ್ಮಲ್ಲೇ ವೈರವುಂಟಾಯಿತು. ಅದರಿಂದಾಗಿ ಎರಡೂ ಗುಂಪುಗಳ ನಡುವೆ ಆಗಾಗ ಯುದ್ಧವು ಸಂಭವಿಸುತ್ತಿತ್ತು. ದೈವ ವಿರೋಧಿಗಳಾದ ದಾನವರ ಕಿರುಕುಳ ದೇವತೆಗಳಿಗೆ ಹೆಚ್ಚಾಯಿತು. ಒಮ್ಮೆ ನಡೆದ ಭೀಕರ ಕಾಳಗದಲ್ಲಿ ದೇವತೆಗಳು ಅತಿಯಾದ ಸಾವು ನೋವುಗಳನ್ನು ಅನುಭವಿಸಿ ದಿಕ್ಕುಗಾಣದೆ ಬ್ರಹ್ಮನ ಬಳಿಗೆ ಹೋಗಿ ತಮ್ಮ ಅಳಲನ್ನು ಹೇಳಿಕೊಂಡರು. ಅವನ ಸಲಹೆಯಂತೆ ಎಲ್ಲ ದೇವತೆಗಳೂ ಭಗವಂತನಾದ ವಿಷ್ಣುವಿನ ಬಳಿ ಸಾರಿ ಅವನಿಗೆ ಶರಣಾಗಿ ಪ್ರಾರ್ಥಿಸತೊಡಗಿದರು. ಅವರ ಪ್ರಾರ್ಥನೆಯಂತೆ ಪ್ರಸನ್ನನಾದ ಭಗವಂತನು ದಾನವರ ರಾಜನಾದ ಬಲಿಚಕ್ರವರ್ತಿಯೊಂದಿಗೆ ಸಂಧಾನ ಮಾಡಿಕೊಂಡು ಸಮುದ್ರ ಮಂಥನ ಮಾಡಿದಲ್ಲಿ ಅಮೃತ ಲಭಿಸುವುದೆಂದೂ ಅದನ್ನು ಸೇವಿಸುವುದರಿಂದ ಅಮರರಾಗಬಹುದೆಂದೂ ಭಗವಂತನು ದೇವತೆಗಳಿಗೆ ತಿಳಿಸಿದನು.

ಭಗವಂತನ ಸಲಹೆಯಂತೆ ದೇವತೆಗಳು ದಾನವರ ರಾಜನಾದ ಬಲಿಯನ್ನು ಮುಖಂಡನೆಂದು ಒಪ್ಪಿಕೊಂಡು ಮಂದರ ಪರ್ವತವನ್ನು ಕಡೆಗೋಲನ್ನಾಗಿಯೂ ವಾಸುಕಿ ಎಂಬ ಸರ್ಪವನ್ನು ಹಗ್ಗವನ್ನಾಗಿಯೂ ಬಳಸಿಕೊಂಡು ಅಮೃತಕ್ಕಾಗಿ ಸಮುದ್ರ ಮಂಥನ ಕಾರ್ಯವನ್ನು ಪ್ರಾರಂಭಿಸಿದರು. ಆದರೆ ಸಮುದ್ರವನ್ನು ಕಡೆಯುತ್ತಿದ್ದಂತೆ ಮಂದರ ಪರ್ವತವು ಆಳವರಿಯದ ಆ ಸಮುದ್ರದಲ್ಲಿ ಮುಳುಗತೊಡಗಿತು. ನಿರಾಶೆಗೊಂಡ ಎಲ್ಲರನ್ನು ಸಂತೈಸಿದ ಭಗವಂತನು ಆಮೆಯ ರೂಪವನ್ನು ಧರಿಸಿ ಸಮುದ್ರದ ಆಳಕ್ಕೆ ಹೋಗಿ ಮಂದರಾಚಲವನ್ನು ತನ್ನ ಬೆನ್ನಿನ ಮೇಲೆ ಎತ್ತಿ ಹಿಡಿದನು.

ಅನಂತರ ನಡೆದ ಸಮುದ್ರ ಮಂಥನದಲ್ಲಿ ಮೊದಲಿಗೆ ಸಮುದ್ರದಿಂದ ಕಾಲಕೂಟ ವಿಷ ಉಕ್ಕಿತು. ಸರ್ವರ ಒಳಿತಿಗಾಗಿ ಶಿವನು ಆ ವಿಷವನ್ನು ಸೇವಿಸಿ ತನ್ನ ಗಂಟಲಿನಲ್ಲಿಯೇ ಉಳಿಸಿಕೊಂಡು ನೀಲಕಂಠನಾದನು. ಸಮುದ್ರ ಮಂಥನದ ಕಾರ್ಯದಲ್ಲಿ ಅನಂತರ ಬಂದದ್ದು ಸುರಭಿ ಎಂಬ ಹಸು. ಯಜ್ಞ ಕಾರ್ಯಗಳಿಗೆ ಅಗತ್ಯವಾದ ಸಕಲವನ್ನು ನೀಡುವ ಶಕ್ತಿ ಹೊಂದಿದ್ದು ಅದನ್ನು ಮಹರ್ಷಿಗಳ ವಶಕ್ಕೆ ನೀಡಲಾಯ್ತು. ಮುಂದುವರಿದ ಸಮುದ್ರಮಂಥನ ಕಾರ್ಯದಲ್ಲಿ ಸಾಗರದಾಳದಿಂದ ಉದ್ಭವಿಸಿದ ಚಂದ್ರನಷ್ಟು ಬೆಳ್ಳಗಿನ ಉಚ್ಟೈಶ್ರವಸ್‌ ಎಂಬ ಅಶ್ವವನ್ನು ಬಲಿ ಮಹಾರಾಜನೂ ಅನಂತರ ಲಭಿಸಿದ ಐರಾವತ ಹಾಗೂ ಇತರ ಎಂಟು ಆನೆಗಳನ್ನು ಇಂದ್ರನೂ ಪಡೆದರು. ಅವುಗಳ ಅನಂತರ ಲಭ್ಯವಾದ ಕೌಸ್ತುಭ ಎಂಬ ಮಣಿಯು ಮಹಾವಿಷ್ಣುವಿನ ವಕ್ಷಸ್ಥಳವನ್ನು ಅಲಂಕರಿಸಿತು. ಆದರೂ ಅವರು ನಿರೀಕ್ಷಿಸಿದ್ದಂತೆ ಅಮೃತ ಮಾತ್ರ ಇನ್ನೂ ಉದ್ಭವವಾಗಿರಲಿಲ್ಲ.

ದೇವ ದಾನವರ ಎರಡೂ ಗುಂಪುಗಳೂ ಸಮುದ್ರ ಮಂಥನದ ಈ ಕಾರ್ಯದಲ್ಲಿ ಬಹುವಾಗಿ ದಣಿದಿದ್ದರು. ಆಗ ಭಗವಂತನು ಸಹಸ್ರಬಾಹುವಾಗಿ ಸ್ವತಃ ಎರಡೂ ಕಡೆಯಿಂದ ಕಡೆಯಲು ಪ್ರಾರಂಭಿಸಿ ಸಮುದ್ರ ಮಂಥನ ಕಾರ್ಯಕ್ಕೆ ಸಹಕರಿಸಿದನು. ಆಗ ಬಂದದ್ದು ಪಾರಿಜಾತ ಪುಷ್ಪ ಮತ್ತು ಅನಂತರ ಉದಯಿಸಿದ್ದು ಅಪ್ಸರೆಯರು.  ಪಾರಿಜಾತ ಪುಷ್ಪವು ದೇವಲೋಕವನ್ನು ಅಲಂಕರಿಸಿದರೆ ಅದರೊಂದಿಗೆ ಬಂದ ಅಪ್ಸರೆಯರು ಸ್ವರ್ಗಲೋಕದ ನಿವಾಸಿಗಳಾದರು. ಅನಂತರ ಉದ್ಭವಿಸಿದ್ದು ರಮಾ ಅಥವಾ ಲಕ್ಷ್ಮಿ: ಅಮೃತ ಶಿಲೆಯ ಪರ್ವತವನ್ನು ಬೆಳಗುವ ಮಿಂಚನ್ನೂ ಮೀರಿಸುವ ವಿದ್ಯುತ್ತಿನಂತಿರುವ ಅವಳನ್ನು ಶ್ರೀ ಹರಿಯು ವರಿಸಿದನು. ಇದಾದ ಮೇಲೆ ಹೊರಬಂದದ್ದು ವಾರುಣಿ ಎಂಬ ಕಮಲಲೋಚನೆ. ಮದ್ಯಪಾನಿಗಳನ್ನು ನಿಯಂತ್ರಿಸುವ ಇವಳು ಬಲಿಮಹಾರಾಜನ ನೇತೃತ್ವದಲ್ಲಿ ದಾನವರ ವಶವಾದಳು. ಅನಂತರ ಸಮುದ್ರ ಮಂಥನ ಕಾರ್ಯವನ್ನು ದೇವ ದಾನವರು ಮುಂದುವರೆಸಿದರು. ಆಗ ಮಹಾ ಘಟನೆಯೊಂದು ನಡೆಯಿತು. ಸಮುದ್ರ ಮಧ್ಯೆಯಿಂದೊಬ್ಬ ಮಹಾ ಪುರುಷನು ಮೇಲೆದ್ದನು. ಅವನೇ ಧನ್ವಂತರಿ. ಅವನ ಕೈಯಲ್ಲಿ ಅಮೃತ ಕಲಶವಿತ್ತು. ಅಲ್ಲಿಗೆ ಸಮುದ್ರ ಮಂಥನ ಕಾರ್ಯವು ಪೂರ್ಣಗೊಂಡಿತು.

ಹೀಗೆ ದೇವದಾನವರು ಅಮೃತಕ್ಕಾಗಿ ನಡೆಸಿದ ಸಮುದ್ರ ಮಂಥನದಂತಹ ಮಹಾ ಸಾಹಸದ ಕಾರ್ಯದುದ್ದಕ್ಕೂ ಕೂರ್ಮದ ರೂಪದಲ್ಲಿ ಮಂದರ ಪರ್ವತವನ್ನು ತನ್ನ ಬೆನ್ನಿನ ಮೇಲೆ ಹೊತ್ತು ಸಹಕರಿಸಿದ ಭಗವಂತನನ್ನು ಅಂದಿನಿಂದ ಮಹಾಕೂರ್ಮ ಎಂಬ ನಾಮಾಂಕಿತದಿಂದ ಸಕಲ ಭಕ್ತ ವರ್ಗವೂ ಸ್ತುತಿಸಿತು ಎಂಬಲ್ಲಿಗೆ ಭಗವಂತನ ದಶಾವತಾರಗಳಲ್ಲಿ ಎರಡನೆಯದಾದ `ಕೂರ್ಮಾವತಾರ’ ದ ಕಥೆಯು ಮುಕ್ತಾಯವಾಯಿತು.

ಭಕ್ತರೆಲ್ಲರ ಪರಮ ಹಿತೈಷಿಯಾಗಿರುವ ಕೂರ್ಮರೂಪಿ ಭಗವಂತನಿಗೆ ಎಲ್ಲರೂ ನಮಸ್ಕರಿಸೋಣ. ಹರೇಕೃಷ್ಣ.

ಈ ಲೇಖನ ಶೇರ್ ಮಾಡಿ