ಶ್ರೀ ರಾಮಚಂದ್ರನ ಲೀಲೆಗಳು!

ನೈಮಿಷಾರಣ್ಯದಲ್ಲಿ ಇನ್ನೊಂದು ಮುಂಜಾವು ಪ್ರಾರಂಭವಾಗಿತ್ತು. ಮುನಿವರ್ಯರೆಲ್ಲರೂ ಆಗಲೇ ಶ್ರೀಮದ್ಭಾಗವತ ಕಥಾ ಶ್ರವಣ ಮಾಡಲು ಬಂದು ನೆರೆದುಬಿಟ್ಟಿದ್ದರು. ಶೌನಕ ಮುನಿಗಳು ಎಲ್ಲರೊಂದಿಗೆ ಸ್ಪಂದಿಸುತ್ತ ಹಿಂದಿನ ಕಥೆಯನ್ನು ಮೆಲುಕು ಹಾಕುತ್ತ ಓಡಾಡುತ್ತಿದ್ದರು.

ಗುರುವರ್ಯರಾದ ಸೂತ ಮುನಿಗಳು ಆಗಮಿಸಿದರು. ಕೆಲ ನಿಮಿಷ ಎಲ್ಲ ಮುನಿಗಳೂ ಒಕ್ಕೊರಲಿನಿಂದ ವೇದ ಮಂತ್ರ ಭಾಗಗಳನ್ನು ಏರಿದ ದನಿಯಲ್ಲಿ ಪಠಿಸಿದರು. ಆ ಮಂತ್ರಘೋಷ ಸಾಗರದ ಅಲೆಗಳಂತೆ ಭೋರ್ಗರೆಯುತ್ತ ಮೇಲೆದ್ದು ಅರಣ್ಯದ ಬೃಹತ್‌ವೃಕ್ಷರಾಶಿಗಳ ನಡುವೆ ಹರಿದಾಡಿತು. ನಿದ್ರೆಯಿಂದ ಎಚ್ಚೆತ್ತ ಹಾಗೆ ಪ್ರಾಣಿ ಪಕ್ಷಿಗಳು ಬೆಚ್ಚಿ ಬಿದ್ದೆದ್ದು ತಮ್ಮ ಸಹಜ ಸ್ವರಗಳನ್ನು ಇದರೊಂದಿಗೆ ಬೆರೆಸಿದವು. ಇಡೀ ಅರಣ್ಯದಲ್ಲಿ ಒಂದು ಸುಸ್ವರ ಮೇಳ ಜಾಗೃತವಾದಂತಿತ್ತು.

ಸೂತ ಮುನಿಗಳು ಕಣ್ಣು ಮುಚ್ಚಿ ಧ್ಯಾನಾಸಕ್ತರಾಗಿ ಕುಳಿತುಕೊಂಡಿದ್ದರು. ಅವರ ಧಮನಿಗಳಲ್ಲೆಲ್ಲ ದೈವ ಮಂತ್ರಗಳ ಸುಸ್ವರ ಅಲ್ಲಿನ ಪ್ರಕ್ರಿಯೆಗಳೊಂದಿಗೆ ಬೆರೆತುಕೊಂಡು ಬಿಟ್ಟಂತಿತ್ತು.

ವೇದಘೋಷದ ಏರುದನಿ ಶಾಂತವಾಗಿ ಮೌನದ ಶಾಂತಿ ಆವರಿಸಿಕೊಂಡಾಗ ಸೂತ ಮುನಿಗಳು ತಮ್ಮ ಯೋಗಮುದ್ರೆಯಿಂದ ಹೊರಬಂದರು. ಆದರೂ ಅವರ ಕೃಶ ಶರೀರ ಆ ವೇದಮಂತ್ರ ಶಕ್ತಿಯ ಪ್ರಖರತೆಯಿಂದ ಮೃದುವಾಗಿ ಇನ್ನೂ ಕಂಪಿಸುತ್ತಿತ್ತು.

ಸೂತಮುನಿಗಳು ಮೆಲ್ಲನೆ ಹೇಳಿದರು-

`ಈ ದಿವಸ ನಾನು ನಿಮಗೆ ಹೇಳಬೇಕೆಂದಿರುವ ತ್ರೇತಾಯುಗದ ಪುಣ್ಯ ಪುರುಷ ಶ್ರೀರಾಮ ಚಂದ್ರನ ಕಥೆಗೆ ಪೂರ್ವಸಿದ್ಧತೆ ಎಂಬಂತೆ ಮಾನಸಿಕವಾಗಿ ವೇದಮಂತ್ರಗಳ ಪ್ರಬಲತೆ ನಮ್ಮೆಲ್ಲರ ಮನಸ್ಸುಗಳಲ್ಲಿ ತುಂಬಿಕೊಂಡಿದೆ. ಇಡೀ ಶರೀರ ಆ ಮಹನೀಯನ ಪುಣ್ಯ ಕಥೆಯ ಪವಿತ್ರ ಆಗುಹೋಗುಗಳನ್ನು ನೆನೆ ನೆನೆದು ಮೆಲ್ಲನೆ ಕಂಪಿಸುತ್ತಿದೆ. ಶ್ರೀ ರಾಮಚಂದ್ರ, ಸೀತಾ ಮಾತೆ, ಆಂಜನೇಯ ಇವರನ್ನೆಲ್ಲ ಭಕ್ತಿ ಭಾವದಿಂದ ಹೃದಯ ಸ್ಮರಿಸುತ್ತಿದೆ. ಇಂಥ ಕಥೆಯನ್ನು ಹೇಳುವ ಯೋಗ್ಯತೆ ಪಡೆದಿರುವ ಮತ್ತು ಕೇಳುವ ಪುಣ್ಯ ಪಡೆದಿರುವ ನಾವೆಲ್ಲರೂ ಧನ್ಯರು! ಇಂದು ನಮ್ಮ ಜೀವಗಳು ಮತ್ತು ಈ ಪುಣ್ಯಾರಣ್ಯದಲ್ಲಿರುವ ಪವಿತ್ರಾತ್ಮಗಳೆಲ್ಲವೂ ಪಾವನಗೊಂಡವು!’

ಅವರ ಮುಖದ ಮೇಲೊಂದು ಪ್ರಜ್ವಲತೆಯ ಬೆಳಕು. ಅವರ ಕಣ್ಣುಗಳಲ್ಲಿ ತೇವ. ಅವರ ತುಟಿಗಳ ಮೇಲೆ ತುಡಿತ. ಕೈ ಬೆರಳುಗಳಲ್ಲಿ ಮೃದು ಕಂಪನ.

ಸೂತ ಮುನಿಗಳು ಮುಂದುವರಿಸಿದರು.

`ಮನುಷ್ಯ ಜನ್ಮ ತುಂಬಾ ದೊಡ್ಡದು. ಎಲ್ಲ ಆದರ್ಶಗಳನ್ನೂ ಮಾನವ ಪಾಲಿಸಿ ತೋರಿಸಲು ಸಾಧ್ಯ. ಎಲ್ಲ ಸತ್ಯಸಂಧತೆಗಳನ್ನು ತನ್ನ ವ್ಯಕ್ತಿತ್ವದಲ್ಲಿ ಮೂಡಿಸಿಕೊಂಡು ಇಡೀ ಮಾನವ ಕುಲಕ್ಕೆ ಮಾದರಿಯಾಗಿ ಬಾಳಲು ಸಾಧ್ಯ. ಇವನ್ನೆಲ್ಲ ತನ್ನ ಬದುಕನ್ನೆ ಒಂದು ಉದಾಹರಣೆಯಾಗಿ ತೋರಿಸಿಕೊಟ್ಟವನು ಶ್ರೀರಾಮ. ಇಂಥ ವ್ಯಕ್ತಿತ್ವ ಬೇರೆಲ್ಲೂ ನಮಗೆ ನೋಡಲು ಸಿಗುವುದಿಲ್ಲ. ಎಲ್ಲ ಶ್ರೇಷ್ಠ ಗುಣಗಳ ಅದ್ಭುತ ಮೂರ್ತಿಯಾಗಿ ಅವನು ಕಂಗೊಳಿಸಿದ್ದಾನೆ. ಇಂಥ ಪಾವನ ಪುರುಷನ ಕಥೆಯನ್ನು ಪೂಜ್ಯ ಶ್ರೀ ವ್ಯಾಸದೇವರು ನಮ್ಮ ಮುಂದಿರಿಸಿ ನಮ್ಮ ಬದುಕನ್ನು ಕೃತಾರ್ಥವನ್ನಾಗಿಸಿದ್ದಾರೆ! ಶ್ರೀ ರಾಮಚಂದ್ರನು ಸಾಕ್ಷಾತ್‌ ದೇವೋತ್ತಮ ಪರಮ ಪುರುಷನೇ ಆಗಿದ್ದರೂ, ಇಡೀ ಬದುಕನ್ನು ಮಾನವತೆಯ ಚೌಕಟ್ಟಿನಲ್ಲಿಯೆ ಕಾಣಿಸಿದ್ದಾನೆ. ಎಲ್ಲ ಮಾನವರಿಗೂ ಮಾದರಿಯಾಗುವಂಥ ನೆಲದ ಮೇಲಿನ ಕಲ್ಯಾಣ ಗುಣಗಳನ್ನೇ ಪ್ರದರ್ಶಿಸಿದ್ದಾನೆ! ಇಂತಹವನ ಪುಣ್ಯ ಕಥೆಯನ್ನು ನಿಮಗಾಗಿ ಮತ್ತೊಮ್ಮೆ ಪಠಿಸುವುದು ನನ್ನ ಪಾಲಿನ ಸೌಭಾಗ್ಯವೆಂದೇ ಭಾವಿಸಿದ್ದೇನೆ!

`ಶ್ರೀ ರಾಮಚಂದ್ರನು ಪರಮ ಪವಿತ್ರ ಗಂಗೆಯನ್ನು ಭೂಲೋಕಕ್ಕೆ ಹರಿಸಿ ತಂದ ಭಗೀರಥನ ವಂಶದವನು. ಈ ಸೂರ್ಯವಂಶದ ಪುಣ್ಯಾತ್ಮನಾಗಿದ್ದ ಖಟ್ವಾಂಗ ಮಹಾರಾಜನ ಮರಿಮಗನ ಮಗ ದಶರಥ. ಅಯೋಧ್ಯಾಪತಿ ದಶರಥನೇ ಶ್ರೀ ರಾಮಚಂದ್ರನ ತಂದೆಯಾದ ಮಹಾಪುಣ್ಯವಂತ. ಈ ಪುಣ್ಯ ಪುರುಷನ ರಾಮಾಯಣ ಕಥೆಯನ್ನು ವಾಲ್ಮೀಕಿ ಮಹರ್ಷಿಗಳು ವಿಸ್ತಾರವಾಗಿ ವರ್ಣಿಸಿದ್ದಾರೆ. ಅದನ್ನು ಶುಕ ಮುನಿಗಳು ಅನಂತರ ವರ್ಣಿಸಿದ್ದಾರೆ. ಅದನ್ನೇ ಮತ್ತೊಮ್ಮೆ ನಿಮ್ಮೆಲ್ಲರ ಮುಂದಿಡುವ ಮಹಾಭಾಗ್ಯ ಇಂದು ನನ್ನದಾಗಿದೆ!’ – ಎಂದು ಹೇಳಿದ ಸೂತ ಮುನಿಗಳು ಶ್ರೀ ರಾಮಚಂದ್ರನ ಲೀಲೆಗಳನ್ನು ವರ್ಣಿಸುವ ಪುರಾಣ ಕಥೆಯನ್ನು ಹೇಳಲು ಪ್ರಾರಂಭಿಸಿದರು.

ಖಟ್ವಾಂಗ ಮಹಾರಾಜ ಮಹಾ ದೈವಭಕ್ತ. ತನ್ನ ಸಮಸ್ತ ಸಾಮ್ರಾಜ್ಯವನ್ನೂ ತ್ಯಜಿಸಿ ಭಗವನ್ನಾಮ ಸ್ಮರಣೆ ಮಾಡುತ್ತ ಬದುಕನ್ನು ಸವೆಸಿದವನು. ಭಗವಂತನಿಗೆ ಸೇವೆ ಸಲ್ಲಿಸುವುದರಿಂದುಂಟಾದ ಉನ್ನತ ಬುದ್ಧಿಯಿಂದ ತಮೋಗುಣ ಪೂರ್ಣವಾದ ಈ ದೇಹದ ಜೊತೆಗಿನ ಮಿಥ್ಯಾ ಸಂಬಂಧವನ್ನು ತೊರೆದವನು. ನಿರಂತರ ದಾಸನಾಗಿ ತನ್ನ ಮೂಲ ಸ್ಥಾನದಲ್ಲಿ ನಿಂತು ಭಗವತ್ಸೇವಾ ಕಾರ್ಯದಲ್ಲಿ ನಿರತನಾದವನು. `ವಾಸುದೇವಃ ಸರ್ವಂ ಇತಿ’ ಎಂದು ದೇವೋತ್ತಮ ಪರಮ ಪುರುಷನ ಸೇವೆಯಲ್ಲಿ ನಿರತನಾದವನು. ದೇವೋತ್ತಮ ಪರಮ ಪುರುಷನಲ್ಲಿ ತನ್ನ ಸಂಪೂರ್ಣ ಶರಣಾಗತಿಯ ಕಾರಣ ಪರಿಪೂರ್ಣತೆಯನ್ನು ಗಳಿಸಿದವನು. ಇಂತಹ ಮಹನೀಯನ ಸಾಲಿನಲ್ಲಿ ಶ್ರೀ ರಾಮಚಂದ್ರನಂತಹ ಒಬ್ಬ ಆದರ್ಶ ಪುರುಷ ಹುಟ್ಟಿದ್ದರಲ್ಲಿ ಆಶ್ಚರ್ಯವೇನಿದೆ?

ಖಟ್ವಾಂಗ ಮಹಾರಾಜನಿಗೆ ದೀರ್ಘಬಾಹು ಎನ್ನುವನೊಬ್ಬ ಮಗನಿದ್ದ. ಅವನ ಮಗನೇ ರಘು. ರಘುವಿನ ಮಗ ಅಜ. ಅಜನ ಮಗ ದಶರಥ. ರಾಮ ಲಕ್ಷ್ಮಣ, ಭರತ, ಶತ್ರುಘ್ನರ ತಂದೆಯಾಗುವ ಪುಣ್ಯ ಮಾಡಿದವನು.

ಸೂತ ಮುನಿಗಳು ಈ ಸಂದರ್ಭದಲ್ಲಿ ಒಂದು ಮಾತು ಹೇಳಿದರು.

`ಮುನಿವರ್ಯರೆ, ಪರೀಕ್ಷಿತ ರಾಜನಿಗೆ ಶ್ರೀಮದ್ಭಾಗವತದ ಕಥೆಯನ್ನು ಹೇಳುತ್ತಿದ್ದ ಶ್ರೀ ಶುಕದೇವ ಗೋಸ್ವಾಮಿಯವರ ವಂಶಾವಳಿಗಳ ವಿವರಗಳನ್ನು ತಿಳಿಸುವ ಸಂದರ್ಭದಲ್ಲಿ ಸೂರ್ಯವಂಶದ ಕುಡಿಗಳನ್ನು ವಿವರಿಸುತ್ತ ದಶರಥ ರಾಮನ ಕಥೆಯನ್ನು ಸಂಕ್ಷೇಪಗೊಳಿಸಿಯೇ ಹೇಳಿದರು. ವಾಲ್ಮೀಕಿ ಮಹರ್ಷಿಕೃತ ರಾಮಾಯಣ ಪುರಾಣವನ್ನು ಎಲ್ಲರೂ ಅನೇಕ ಸಲ ಶ್ರವಣ-ಮನನ ಮಾಡಿರುವುದರಿಂದ ಚುಟುಕಾಗಿ ಹೇಳಿ ಮುಗಿಸಿಬಿಡುತ್ತಾರೆ. ಆದರೆ ಅಲ್ಲಲ್ಲಿನ ಸಾರಗಳನ್ನು ಒತ್ತಿ ಹೇಳುತ್ತಾರೆ. ನಾನೂ ಸಹ ಈಗ ಅವರ ದಾರಿಯಲ್ಲೇ ನಡೆದು ನಿಮ್ಮೆಲ್ಲರಿಗೂ ಪರಿಚಿತವೇ ಆಗಿರುವ ರಾಮಾಯಣ ಕಥೆಯನ್ನು ಸಂಕ್ಷಿಪ್ತವಾಗಿ ಹೇಳುತ್ತೇನೆ.’

`ದೇವೋತ್ತಮ ಪರಮ ಪುರುಷನು ಎಲ್ಲ ದೇವತೆಗಳಿಂದ ಪ್ರಾರ್ಥಿತನಾಗಿ ತನ್ನ ವಿಸ್ತರಣೆಯೊಂದಿಗೆ ಮತ್ತು ಆ ವಿಸ್ತರಣೆಯ ವಿಸ್ತರಣೆಗಳೊಂದಿಗೆ ಸಾಕ್ಷಾತ್ತಾಗಿ ಕಾಣಿಸಿಕೊಂಡನು. ರಾಮ, ಲಕ್ಷ್ಮಣ, ಭರತ, ಶತ್ರುಘ್ನ ಎನ್ನುವ ಪುಣ್ಯ ನಾಮಗಳನ್ನು ಧರಿಸಿ, ದಶರಥ ರಾಜನ ನಾಲ್ಕು ಮಕ್ಕಳಾಗಿ ಅವತರಿಸಿದನು. ಅದ್ವೈತಂ ಅಚ್ಯುತಂ ಅನಾದಿಂ ಅನಂತ ರೂಪಂ ಎನ್ನುವ ಹಾಗೆ ಜಗತ್ಕಲ್ಯಾಣಕ್ಕಾಗಿ ಅವನು ನಾನಾ ರೂಪಗಳಲ್ಲಿ ಕಾಣಿಸಿಕೊಂಡಿದ್ದಾನೆ. ಇಂತಹ ಶ್ರೀರಾಮಚಂದ್ರ ರೂಪಿ ದೇವೋತ್ತಮ ಪರಮ ಪುರುಷನ ವಿವಿಧ ಲೀಲೆಗಳನ್ನು ನಾನೀಗ ಬಣ್ಣಿಸುತ್ತೇನೆ! ದಶರಥನ ಮಗನಾಗಿ ಹುಟ್ಟುವುದರಿಂದ ಹಿಡಿದು, ವಿಶ್ವಾಮಿತ್ರರ ಜೊತೆಗೆ ಹೋದದ್ದು, ಸೀತಾ ಕಲ್ಯಾಣ, ತಂದೆಗಾಗಿ ಸಿಂಹಾಸನ ತ್ಯಾಗ, ಅರಣ್ಯ ವಾಸ, ಪತ್ನಿ ವಿರಹ, ವಾನರರ ಸಹವಾಸ, ಲಂಕಾಧಿಪತಿಯ ನಾಶ, ಸೀತಾ ಪರಿಗ್ರಹಣ, ಅಯೋಧ್ಯೆಗೆ ಹಿಂತಿರುಗಿ ಪಟ್ಟಾಭಿಷೇಕ – ಹೀಗೆ ಎಲ್ಲವೂ ಅವನ ಲೀಲೆಗಳು. ಆದರೆ ಅವನು ಎಲ್ಲಿಯೂ ದೇವೋತ್ತಮ ಪರಮ ಪುರುಷನಾಗಿ ನಡೆದುಕೊಳ್ಳಲಿಲ್ಲ. ಹುಲುಮಾನವನಾಗಿಯೇ ನಡೆದುಕೊಂಡು ಮಾನವ ಜನ್ಮದಲ್ಲಿ ಸತ್ಯ ಪರಿಪಾಲನೆ, ಏಕಪತ್ನೀ ವ್ರತ, ಮಾತಾಪಿತ ಭಕ್ತಿ, ಪ್ರಜಾ ದೂಷಣೆಗೆ ತಲೆಬಾಗುವಿಕೆ ಎಂದು ಎಲ್ಲವನ್ನೂ ಪುಟವಿಟ್ಟ ಚಿನ್ನದಂತೆ ಮಾಡಿತೋರಿಸಿ, ಯುಗಯುಗಗಳ ಮಾನವ ಕುಲಕ್ಕೆ ದಾರಿದೀಪವಾಗಿದ್ದಾನೆ. ಇಂತಹ ಶ್ರೀರಾಮ ಲೀಲೆಗಳನ್ನು ನಾನು ಶ್ರೀ ಶುಕಮುನಿಗಳು ವರ್ಣಿಸಿದ ಹಾಗೆಯೇ ವರ್ಣಿಸುತ್ತೇನೆ!’

ಸೂತ ಮುನಿಗಳು ಶ್ರೀರಾಮನ ಲೀಲೆಗಳನ್ನು ವರ್ಣಿಸತೊಡಗಿದರು.

ದೈವಾನುಗ್ರಹದಿಂದ ನಾಲ್ಕು ಮಕ್ಕಳನ್ನು ಪಡೆದ ದಶರಥನಿಗೆ ಸಂತೋಷ ಹೇಳತೀರದು. ತನ್ನ ಜನ್ಮ ಸಾರ್ಥಕವಾಯಿತು, ಸೂರ್ಯವಂಶದ ಉದ್ಧಾರವಾಯಿತು ಎಂದೆಲ್ಲ ಅಂದುಕೊಂಡ. ಈ ಅತಿ ಸಂತೋಷದಲ್ಲಿದ್ದಾಗಲೇ ವಿಶ್ವಾಮಿತ್ರ ಮಹರ್ಷಿಗಳ ಆಗಮನವಾಯಿತು. ರಾಜಗುರು ವಸಿಷ್ಠರೊಂದಿಗೆ ನಿಂತು ಅವರನ್ನು ಉಪಚರಿಸಿದ.

ವಿಶ್ವಾಮಿತ್ರರು ಪ್ರಸನ್ನರಾಗಿ ಹೇಳಿದರು :

`ರಾಜನ್‌, ನಿನ್ನನ್ನು ನಿನ್ನ ಪತ್ನಿಯರನ್ನು ನಿನ್ನ ಮಕ್ಕಳನ್ನು ನೋಡಿದಾಗ ಬಹಳ ಸಂತೋಷವಾಗುತ್ತದೆ. ಇಂದ್ರ ಲೋಕವನ್ನು ಮೀರಿಸುವಂತಹ ಸಂಭ್ರಮ ಇಲ್ಲಿ ಎದ್ದು ಕಾಣುತ್ತಿದೆ. ಇದನ್ನು ಕಣ್ಣಾರೆ ಕಾಣುವ ಭಾಗ್ಯ ನನ್ನದೂ ಆಗಿದೆ. ರಾಜನ್‌, ನಿನ್ನ ಮಕ್ಕಳು ಈಗ ದೊಡ್ಡ ಹುಡುಗರಾಗಿದ್ದಾರೆ. ಬಿಲ್ಲು ವಿದ್ಯೆಯಲ್ಲಿ ಪಾರಂಗತರಾಗಿದ್ದಾರೆ. ರಾಮ ಲಕ್ಷ್ಮಣರಿಬ್ಬರನ್ನು ನನ್ನೊಂದಿಗೆ ಕಳುಹಿಸಿಕೊಡು. ಅರಣ್ಯದಲ್ಲಿ ಯಜ್ಞಯಾಗಾದಿಗಳು `ಲೋಪವಿಲ್ಲದೆ ನೆರವೇರಲು ಇವರಿಬ್ಬರ ಸಹಾಯ ಬೇಕು. ಮತ್ತೆ ನನ್ನೊಂದಿಗಿನ ಈ ಒಡನಾಟದಿಂದ ಇವರಿಬ್ಬರಿಗೂ ಲೋಕಾನುಭವವೂ ಆಗುತ್ತದೆ!’

ದಶರಥನಿಗೆ ಆಘಾತವಾಯಿತು. `ಇನ್ನೂ ಹಸುಗೂಸುಗಳು. ಅವರು ಬೇಡ. ನಿಮ್ಮ ಸಹಾಯಕ್ಕೆ ನಾನು ಬರುತ್ತೇನೆ!’ ಎಂದ. ಆ ಕ್ಷಣವೇ ವಿಶ್ವಾಮಿತ್ರರ ಕಣ್ಣುಗಳು ಕೆಂಪಾದುದನ್ನು ನೋಡಿ ಗುರು ವಸಿಷ್ಟರು ಹೇಳಿದರು : `ರಾಜನ್‌, ರಾಮಲಕ್ಷ್ಮಣರ ಒಳಿತಿಗಾಗಿಯೇ ವಿಶ್ವಾಮಿತ್ರರು ಅವರನ್ನು ಕರೆಯುತ್ತಿದ್ದಾರೆ. ಅವರು ಎಲ್ಲವನ್ನೂ ಬಲ್ಲವರು. ನಿರಾಕರಿಸಿದೆ ಕಳುಹಿಸಿಕೊಡು!’

ರಾಮಲಕ್ಷ್ಮಣರಿಗೆ ಅರಣ್ಯವಾಸದ ಮೊದಲ ಅನುಭವ. ಆ ಕಿರಿಯರಿಬ್ಬರೂ ಸಂತೋಷ ಉತ್ಸಾಹಗಳಿಂದ ಆ ಮಹಾನ್‌ಮುನಿಗಳ ಹಿಂದೆ ನಡೆದರು. ರಾಕ್ಷಸವಧೆ, ಅಹಲ್ಯಾಶಾಪ ವಿಮೋಚನೆ ಆಯಿತು. ವಿಶ್ವಾಮಿತ್ರರು ಬದುಕಿನ ರಹಸ್ಯಗಳನ್ನು ತಿಳಿಸಿದರು. ಆಯುಧಗಳ ಉಪಯೋಗಗಳ ಬಗ್ಗೆ ತಿಳಿಸಿಕೊಟ್ಟರು. ಮತ್ತೆ ಮಿಥಿಲಾ ನಗರಕ್ಕೆ ಕರೆದೊಯ್ದು ಸೀತಾಸ್ವಯಂವರ ಸಭಾಂಗಣವನ್ನಲಂಕರಿಸಿದರು. ಅನೇಕ ವೀರರ ನಡುವೆ ಶ್ರೀ ರಾಮ ಶಿವಧನುಸ್ಸನ್ನು ಮುರಿದ, ಸೀತೆಯನ್ನು ಪಾಣಿಗ್ರಹಣ ಮಾಡಿಕೊಂಡ. ಅಯೋಧ್ಯೆಗೆ ಹಿಂತಿರುಗಿದಾಗ, ಭೂಲೋಕದ ಎಲ್ಲ ಕ್ಷತ್ರಿಯರನ್ನೂ ನಾಶ ಮಾಡುವುದಾಗಿ ಪ್ರತಿಜ್ಞೆ ಮಾಡಿದ್ದ ಪರಶುರಾಮ ಎದುರಾದ. ಶ್ರೀ ರಾಮ ಅವನ ತೇಜಸ್ಸನ್ನೆಲ್ಲ ಸೆಳೆದುಬಿಟ್ಟ.

ಅಯೋಧ್ಯೆಯಲ್ಲಿ ಇದ್ದಕ್ಕಿದ್ದ ಹಾಗೆಯೇ ದೊಡ್ಡ ಸಂಭ್ರಮ. ದಶರಥ ಮಹಾರಾಜ ಎಲ್ಲರೊಂದಿಗೂ ಸಂತೋಷದಿಂದ ಮಾತನಾಡುತ್ತ, ಎಲ್ಲೆಲ್ಲೂ ಓಡಾಡುತ್ತಿದ್ದ. ಶ್ರೀ ರಾಮನಿಗೆ ಪಟ್ಟಾಭಿಷೇಕ ಮಾಡಲು ಅವನು ನಿರ್ಧರಿಸಿದ್ದ. ಅವನ ಹೆಂಡತಿತ್ರಯರು ಸಂತೋಷದಿಂದ ಒಪ್ಪಿದ್ದರು.

ಆದರೆ ವಿಧಿ ರೂಪದಲ್ಲಿ ಮಂಥರೆ ಎನ್ನುವ ಹೆಂಗಸೊಬ್ಬಳು ನಿಮಿತ್ತಳಾಗಿ ಮುಂದೆ ಬಂದಳು. ಕೈಕೇಯಿ ಮನದಲ್ಲಿ ವಿಷ ಬೀಜ ಬಿತ್ತಿದ್ದಳು.

`ಇದೇನಿದು ಕೈಕೇಯಿ, ಈವರೆಗೆ ನೀನು ಲೆಕ್ಕಕ್ಕಿಲ್ಲದ ಹೆಂಡತಿಯಾಗಿ ಇದ್ದದ್ದಾಯಿತು. ಇನ್ನು ಮೇಲೆ ಲೆಕ್ಕಕ್ಕಿಲ್ಲದ ರಾಜಮಾತೆ ಆಗಿರಬೇಕು ಎಂದಿದ್ದೀಯಾ? ನಿನ್ನ ಬುದ್ಧಿವಂತಿಕೆಗೆ ಏನು ಬಂತು ಕೇಡುಗಾಲ? ಹೀಗೇಕೆ ನಿನಗೆ ಮಂಕು ಕವಿದಿದೆ? ಯಾರೋ ಪಟ್ಟಾಭಿಷೇಕ ಮಾಡಿಕೊಳ್ಳುತ್ತಾರೆ ಎಂದರೆ ನೀನೇಕೆ ಹೀಗೆ ಬಿದ್ದು ಬಿದ್ದು ಕುಣಿದಾಡುತ್ತಿರುವೆ? ಎಂದು ಮಂಥರೆ, ಕೈಕೇಯಿಯ ಕಿವಿಯೂದಿದಳು.

ಕೈಕೇಯಿ ಸಂತೋಷ – ಸಂಭ್ರಮಗಳಿಂದಲೇ ಹೇಳಿದಳು:

`ಏಯ್‌ ದಾಸಿ, ಏನಿದು ನಿನ್ನ ಅಧಿಕಪ್ರಸಂಗತನ? ಯಾರೊಂದಿಗೆ ಮಾತನಾಡುತ್ತಿರುವೆ ಗೊತ್ತೆ? ಪಟ್ಟಾಭಿಷೇಕ ಯಾರಿಗೋ ಅಲ್ಲ, ನನ್ನ ಮಗ ಶ್ರೀರಾಮನಿಗೆ !

ಮಂಥರೆ ಕಾಡು ಹಂದಿ ಗುರುಗುಟ್ಟುವ ರೀತಿಯಲ್ಲಿ ಜೋರಾಗಿ ನಕ್ಕಳು. ಅವಳ ಕರ್ಕಶ ನಗುವಿನ ದನಿಯಲ್ಲಿ ಯಾವುದೋ ಆಕ್ರೋಶ, ಮತ್ಸರ ತುಂಬಿಕೊಂಡಂತಿತ್ತು. ಅವಳು ಮುಖವನ್ನು ಕಠಿಣಗೊಳಿಸುತ್ತ ಕೇಳಿದಳು : `ಏನು, ಶ್ರೀ ರಾಮ ನಿನ್ನ ಮಗನೇ? ಹಾಗಾದರೆ ಭರತ ಯಾರ ಮಗ? ಅಹಲ್ಯೆಯ ಮಗನೇ? ತನ್ನ ಮಗನ ಮೇಲೆಯೇ ಪ್ರೀತಿ ವಿಶ್ವಾಸ ಇರದ ಏಕಮಾತ್ರ ತಾಯಿ ಭೂಲೋಕದಲ್ಲಿ ನೀನೊಬ್ಬಳೇ ಇರಬೇಕು!’

ಹಗಲಿನ ಬೆಳಕು ಕಳೆದು ಮುಸ್ಸಂಜೆಯ ರಂಗು ಅಳಿದು ಕತ್ತಲಾಗುವವರೆಗೂ ಅವರಿಬ್ಬರ ಮಾತು-ಚರ್ಚೆ ನಡೆಯಿತು. ಅದರ ಫಲಶ್ರುತಿ : ಶ್ರೀ ರಾಮ, ಸೀತಾ ಲಕ್ಷ್ಮಣರೊಂದಿಗೆ ಅರಣ್ಯ ಸೇರಿದ. ದಶರಥನು ದೇವೋತ್ತಮ ಪರಮ ಪುರುಷನ ದಿವ್ಯಧಾಮ ಸೇರಿದ.

ಅರಣ್ಯವಾಸ ಸುಖವಾಸವೇನೂ ಆಗಿರಲಿಲ್ಲ. ಮುಳ್ಳು ಕಲ್ಲುಗಳ ಹಾದಿ ಸವೆಸುವುದೇ ಆಯಿತು. ಜೊತೆಗೆ ದಾನವರ ದೌರ್ಜನ್ಯ ಬೇರೆ. ವನವಾಸ ಸರಳವಾಗಿರದೆ ಬಿಲ್ಲು ಬಾಣಗಳ ಉಪಯೋಗಕ್ಕೂ ಅಂಗಳವಾಯಿತು. ಆಗಲೇ ಶೂರ್ಪನಖಿ ಎನ್ನುವ ರಾಕ್ಷಸಿ ಶ್ರೀ ರಾಮನನ್ನು ಮೋಹಿಸಿ ಬಂದು ಕಿವಿಮೂಗುಗಳ ಛೇದ ಮಾಡಿಸಿಕೊಂಡು, ಸೀತಾಪಹರಣಕ್ಕೆ ನಿಮಿತ್ತಳಾದಳು.

ಹತ್ತು ತಲೆ ರಾವಣೇಶ್ವರ ಲಂಕಾಧಿಪತಿಯ ಸೋದರಿಯಾದ ಅವಳು ಅಣ್ಣನ ಕಿವಿ ಚುಚ್ಚಿ ತಲೆ ಕೆಡಿಸಿದಳು: `ಅಣ್ಣಾ, ಕಾಡಿನಲ್ಲೊಬ್ಬಳು ಸುರಲೋಕ ಸುಂದರಿ ಇದ್ದಾಳೆ. ಅವಳು ನಿನಗೆ ಸೇರಬೇಕಾದವಳು. ಅವಳನ್ನು ಜಟಾಧಾರಿ ಯುವಕರು ಕಾಯುತ್ತಿದ್ದಾರೆ. ಅವಳನ್ನು ನಿನಗಾಗಿ ಕೇಳಿದಾಗ ನೋಡು ನನಗೆ ಏನು ಅವಸ್ಥೆ ಮಾಡಿದ್ದಾರೆ?’

ರಾವಣನಿಗೆ ತಂಗಿಯ ಅವಸ್ಥೆಯನ್ನು ಗಮನಿಸುವುದು ಮುಖ್ಯವಾಗಲಿಲ್ಲ. ಸೀತೆಯ ಅಂದಚಂದಗಳ ವರ್ಣನೆ ಅವನ ಮನಸ್ಸನ್ನು ಅಲ್ಲೋಲ ಕಲ್ಲೋಲ ಮಾಡಿತ್ತು. ಮಾರೀಚ ರಾಕ್ಷಸನನ್ನು ಬಂಗಾರದ ಜಿಂಕೆಯಾಗಿಸಿ ಶ್ರೀ ರಾಮ ಸೀತೆ ಲಕ್ಷ್ಮಣರ ಮುಂದೆ ಓಡಾಡುವಂತೆ ಮಾಡಿದ. ಸೀತೆಯನ್ನು ಆ ಮೃಗ ಆಕರ್ಷಿಸಿ `ಅದು ನನಗೆ ಬೇಕು’ ಎಂದಾಗ ಶ್ರೀರಾಮ ಅದರ ಹಿಂದೆ ಹೋಗಲೇಬೇಕಾಯಿತು. ಅದು ಕೈಗೆ ಸಿಕ್ಕದಾದಾಗ ಬಾಣ ಹೂಡಿ ಸಾಯಿಸಿದಾಗ, ಮಾರೀಚ ಕೂಡಲೇ ರಾಮನ ದನಿಯಲ್ಲಿ `ಓ ಲಕ್ಷ್ಮಣಾ, ಸೀತೆ…’ ಎಂದು ಕೂಗಿ ಕಣ್ಣು ಮುಚ್ಚಿದ. ಸೀತೆ ಚಿಂತಿಸುತ್ತ ಲಕ್ಷ್ಮಣನನ್ನು ರಾಮನನ್ನು ಹುಡುಕಿಕೊಂಡು ಬರಲು ಕಳುಹಿಸಿದಾಗ, ರಾವಣ ಬಂದು ಸೀತೆಯನ್ನು ಅಪಹರಿಸಿಬಿಟ್ಟ.

ಶ್ರೀ ರಾಮ-ಲಕ್ಷ್ಮಣ ಪರ್ಣಕುಟಿಗೆ ಹಿಂತಿರುಗಿದಾಗ ಅದು ಬರಿದಾಗಿತ್ತು. ದಾರಿಯಲ್ಲಿ ಸಾಯುತ್ತ ಬಿದ್ದಿದ್ದ ಜಟಾಯು ಪಕ್ಷಿಯಿಂದ ರಾವಣ ಸೀತೆಯನ್ನು ಅಪಹರಿಸಿಕೊಂಡು ಹೋಗಿರುವುದು ತಿಳಿಯಿತು.

ಶ್ರೀ ರಾಮನ ದುಃಖದ ಕಟ್ಟೆಯೊಡೆಯಿತು. ಸೀತೆಗಾಗಿ ಪರಿತಪಿಸಿದ. ಸೀತೆಯ ನೆನಪಿನ ವಿರಹ ತಾಳಲಾರದೆ ಹೃದಯ ಹಿಂಡಿದಂತಾಗಿ ಹೋದ. ಮುಂದೆ ಏನು, ಹೇಗೆ ಎನ್ನುವುದು ತಿಳಿಯದೆ ಸುಮ್ಮನೆ ಕಾಡಿನಲ್ಲಿ ಅಲೆದಾಡುವುದಾಯಿತು.

ಸುಗ್ರೀವ, ಹನುಮಂತ, ಜಾಂಬವಂತ, ಅಂಗದ ಮೊದಲಾದವರ ಭೇಟಿ, ಸ್ನೇಹ, ವಿಶ್ವಾಸ-ಗೌರವ ದೊರೆತಾಗ ಶ್ರೀ ರಾಮನ ವಿರಹ ವೇದನೆ ಒಂದಿಷ್ಟು ಕಡಿಮೆಯಾಗಿತ್ತು. ಸೀತೆಯನ್ನು ಹೇಗಾದರೂ ಹುಡುಕಿ ಕರೆತರಬಹುದು ಎನ್ನುವ ನೆಮ್ಮದಿ ಮೂಡತೊಡಗಿತ್ತು. ತನ್ನ ಅಣ್ಣ ವಾಲಿಯಿಂದಲೇ ದೇಶಾಂತರನಾಗಿದ್ದ ಸುಗ್ರೀವನಿಗೆ ಮತ್ತೆ ಸಿಂಹಾಸನ ದೊರಕಿಸಿಕೊಡಲು ಶ್ರೀರಾಮ ವಾಲಿಯನ್ನು ಕೊಲ್ಲಬೇಕಾಯಿತು. ಸುಗ್ರೀವನಿಗೆ ಸಮಾಧಾನ ಆದ ಕೂಡಲೇ ಸೀತೆಯನ್ನು ಹುಡುಕುವ ಕೆಲಸ ಪ್ರಾರಂಭವಾಯಿತು.

ವಾನರ ಸೈನ್ಯ ಸುತ್ತಮುತ್ತ ಎಲ್ಲ ಕಡೆಯೂ ಸುತ್ತಿ ಬಂದಿತು. ರಾವಣ ಸಮುದ್ರದ ಆಚೆಯ ಲಂಕಾ ಪಟ್ಟಣದಲ್ಲಿದ್ದಾನೆಂದು ತಿಳಿಯಿತು. `ಯಾರಾದರೂ ಹೋಗಿ ಆ ಪಟ್ಟಣ ಎಷ್ಟು ದೂರ ಇದೆ, ಅಲ್ಲಿಗೆ ಹೋಗುವ ದಾರಿ ಹೇಗಿದೆ? ಅಲ್ಲಿನ ಶಕ್ತಿ ಎಂತಿದೆ? ಎಂದೆಲ್ಲ ತಿಳಿದುಕೊಂಡು ಬರಬೇಕು. ಯಾರು ಹೋಗುತ್ತೀರಿ?’ ಎಂದು ಹಿರಿಯ ವಾನರನಿಂದ ಸೂಚನೆ ಬಂದಾಗ, ಎಲ್ಲರೂ ಹನುಮಂತನ ಹೆಸರನ್ನು ಸೂಚಿಸಿದ್ದರು. ಹನುಮಂತ ಒಂದೇ ಸಲಕ್ಕೆ ತಲೆಯಾಡಿಸಿಬಿಟ್ಟ. `ಖಂಡಿತ ನನ್ನಿಂದ ಸಾಧ್ಯವಿಲ್ಲ. ನಾನೆಂದರೇನು, ಈ ಸಪ್ತ ಸಮುದ್ರವನ್ನು ದಾಟುವುದೆಂದರೇನು. ನಾನು ಪ್ರಯತ್ನಿಸಲಾರೆ!’ ಎಂದು ಬಿಟ್ಟ. ಶ್ರೀ ರಾಮ ಹನುಮಂತನ ಮೈತಡವಿ ಹೇಳಿದ : `ಪ್ರಿಯ ಹನುಮಂತ, ಈ ಕೆಲಸ ನಿನ್ನಿಂದಲ್ಲದೆ ಬೇರೆ ಯಾರಿಂದಲೂ ಸಾಧ್ಯವಿಲ್ಲ. ನಿನ್ನ ಶಕ್ತಿ ಎಷ್ಟಿದೆ ಎಂದು ನೀನೇ ಯೋಚಿಸಿಕೊಂಡು ನೋಡು. ನೀನು ಖಂಡಿತವಾಗಲೂ ಸಮುದ್ರ ಹಾರಿ, ಹಿಂತಿರುಗಿ ಬರುವೆ!’

ಹನುಮಂತನಿಗೆ ಅಷ್ಟು ಸಾಕಾಗಿತ್ತು. ಸಮುದ್ರದ ಮುಂದೆ ನಿಂತು ತನ್ನ ಶಕ್ತಿಯನ್ನೆಲ್ಲ ಕೇಂದ್ರೀಕರಿಸಿಕೊಂಡು ದೇಹವನ್ನು ಹಿಗ್ಗಿಸಿದ. ಭೂಮ್ಯಾಕಾಶಗಳನ್ನು ಎಟುಕಿಸುವಂತೆ ಅವನ ದೇಹ ಹಿಗ್ಗಿತು. ವಾನರರೆಲ್ಲರ ಜಯಘೋಷದ ನಡುವೆ ಹನುಮಂತ ಲಂಕೆಗೆ ಹಾರಿದ. ಸಪ್ತ ಸಮುದ್ರ ದಾಟಿ ಲಂಕೆಗೆ ಬಂದು ರಾವಣನ ಪ್ರಪಂಚವನ್ನು ಹತ್ತಿರದಿಂದ ಗಮನಿಸಿದ. ರಾವಣನನ್ನು ಭೇಟಿ ಮಾಡಿದ. ಲಂಕಾದಹನ ಮಾಡಿದ. ಸೀತಾಮಾತೆಯನ್ನು ಕಂಡು ಮಾತನಾಡಿಸಿದ. ರಾವಣನ ಲಂಕೆ, ಸೀತಾಮಾತೆ ಇರುವ ಸ್ಥಳದ ಗುರುತು ಹಿಡಿದು ಬಂದ ಹನುಮಂತನನ್ನು ಶ್ರೀರಾಮ ಪ್ರೀತಿಯಿಂದ ಆಲಂಗಿಸಿದ.

ಶ್ರೀ ರಾಮ ಲಕ್ಷ್ಮಣರೊಂದಿಗೆ ವಾನರ ಸೈನ್ಯ ಲಂಕೆಗೆ ಹೊರಟಿತು. ಇವರೆಲ್ಲ ಮುಂದುವರಿಯಲು ವಿಶಾಲವಾದ ಸಮುದ್ರ ಎದುರಾಗಿತ್ತು. ಮುಂದೆ ನಡೆಯಲು ಸಮುದ್ರ ದಾರಿ ತೋರದಿದ್ದಾಗ ಶ್ರೀರಾಮ ಕೋಪಗೊಂಡಾಗ, ಸಮುದ್ರ ರಾಜನೇ ಬಂದು ಕ್ಷಮೆ ಕೇಳಿ ದಾರಿ ತೋರಿದ. `ದೇವೋತ್ತಮ ಪರಮ ಪುರುಷನೇ, ನಿನಗೆ ಹೋಗಲು ದಾರಿ ತೋರಿದ್ದೇನೆ. ಅದರ ಮೇಲೊಂದು ಸೇತುವೆಯನ್ನು ನಿರ್ಮಿಸು. ಲಂಕೆಗೆ ಹೋಗಬಹುದು!’ ಎಂದ.

ವಾನರ ಸೈನ್ಯ ಸೇತುವೆ ನಿರ್ಮಿಸಿತು. ಬಲಶಾಲಿ ಕೈಗಳಿಂದ ಬಂಡೆಗಳನ್ನು, ಮಹಾವೃಕ್ಷಗಳನ್ನು, ಇತರ ವನಸ್ಪತಿಗಳನ್ನು ತುಂಬಿಕೊಂಡಿದ್ದ ಪರ್ವತ ಶಿಖರಗಳನ್ನು ಎತ್ತಿ
ತಂದು ಸಮುದ್ರವನ್ನು ತುಂಬಿದವು. ರಾಮ ಲಕ್ಷ್ಮಣರು ವಾನರರೊಂದಿಗೆ ಲಂಕೆಗೆ ಧಾವಿಸಿದರು. ರಾವಣನ ಚಿಂತೆಗಳು ಪ್ರಾರಂಭವಾದವು. ರಾವಣನ ಸಾತ್ವಿಕ ಸೋದರ ವಿಭೀಷಣ ಬಂದು ರಾಮನನ್ನು ಸೇರಿಕೊಂಡ.

ವಾನರ ಸೈನ್ಯ ಲಂಕೆಯ ಮುಖ್ಯ ಸ್ಥಳಗಳನ್ನೆಲ್ಲಾ ಧ್ವಂಸ ಮಾಡಿದವು. ಕೋಪಗೊಂಡ ರಾವಣ ತನ್ನ ರಾಕ್ಷಸ ವೀರರಾದ ನಿಕುಂಭ, ಕುಂಭ, ಧೂಮ್ರಾಕ್ಷ, ದುರ್ಮುಕ, ಸುರಾಂತಕ, ನರಾಂತಕ ಮೊದಲಾದವರನ್ನು ಯುದ್ಧಕ್ಕೆ ಕಳುಹಿಸಿದ. ಇವರೆಲ್ಲರೂ ನಾಶವಾದ ಮೇಲೆ ಪ್ರೀತಿಯ ಮಗ ಇಂದ್ರಜಿತುವನ್ನು ಕಳುಹಿಸಿದ. ಪ್ರಹಸ್ತ, ಅತಿಕಾಯ, ವಿಕಂಪನರಾದ ಮೇಲೆ, ರಾವಣನ ತಮ್ಮ ಕುಂಭಕರ್ಣ ಬಂದು ವಾನರ ಸೈನ್ಯವನ್ನು ಹೊಸಕಿ ಹಾಕತೊಡಗಿದ. ಆದರೆ, ರಾಮಲಕ್ಷ್ಮಣರ ಬಾಣಗಳ ಮುಂದೆ ಇವರುಗಳು ನಿಲ್ಲಲಾಗಲಿಲ್ಲ.

ಕೊನೆಗೆ ರಾವಣನೇ ಅಲಂಕೃತ ರಥದಲ್ಲಿ ಕುಳಿತು ಯುದ್ಧಕ್ಕೆ ಬಂದ.

ತನ್ನ ಪ್ರೀತಿ ಪಾತ್ರಳನ್ನು ಅಪಹರಿಸಿ ತನ್ನ ಹೃದಯದಲ್ಲಿ ವಿರಹದ, ಸಂಕಟದ ಅಲೆಗಳನ್ನೆಬ್ಬಿಸಿದ್ದ ಈ ಮಹಾ ರಾಕ್ಷಸನನ್ನು ನೋಡಿದ ಕೂಡಲೇ ಶ್ರೀ ರಾಮನಿಗೆ ಕೋಪ ಉಕ್ಕಿ ಬಂದಿತು. ಕೋಪದ ಮಾತುಗಳು ಹರಿದು ಬಂದವು.

ಶ್ರೀ ರಾಮ ಹೇಳಿದ –

`ಎಲೈ ರಾಕ್ಷಸನೆ, ನರಭಕ್ಷಕರಲ್ಲಿ ಅತ್ಯಂತ ಅನಾಗರಿಕನಾಗಿರುವ ನೀನು, ನಾಯಿಯು ಯಜಮಾನನಿಲ್ಲದಿದ್ದಾಗ ಅಡುಗೆ ಮನೆಗೆ ನುಗ್ಗಿ ತಿನಿಸುಗಳನ್ನು ಕದ್ದು ಓಡುವ ಕೆಲಸ ಮಾಡಿದ್ದೀಯ. ನಾನಿಲ್ಲದಿದ್ದಾಗ ನನ್ನ ಧರ್ಮಪತ್ನಿಯನ್ನು ಅಪಹರಿಸಿದ್ದೀಯ. ಪಾಪಿ. ನಿನಗೆ ಯಾವ ದಂಡನೆ ಕೊಟ್ಟರೂ ಸಾಲದು. ಅಸಹ್ಯನೂ ಪಾಪಯುಕ್ತನೂ ಲಜ್ಜಾಹೀನನೂ ಆಗಿರುವ ನಿನ್ನನ್ನು ನಾನೀಗ ಶಿಕ್ಷಿಸುವ ಕಾಲ ಸನ್ನಿಹಿತವಾಗಿದೆ!’

ರಾಮ ರಾವಣರ ಯುದ್ಧ ಜರುಗಿತು. ಕೊನೆಗೆ ರಾವಣನ ಅಂತ್ಯ ಸಮೀಪಿಸಿತು. ಶ್ರೀ ರಾಮ ಒಂದು ಮಹಾನ್‌ ಆಯುಧವನ್ನು ಮಂತ್ರಿಸಿ ಬಿಲ್ಲಿಗೆ ಹೂಡಿ ರಾವಣನ ಎದೆಗೆ ಗುರಿಯಿಟ್ಟ. ಅದು ಅವನೆದೆ ಸೀಳಿತು. ರಾವಣ ತನ್ನ ಹತ್ತು ಬಾಯಿಗಳಿಂದಲೂ ರಕ್ತ ಕಾರುತ್ತ ನೆಲಕ್ಕುರುಳಿದ. ತನ್ನ ಸಮಾನರಿಲ್ಲ ಎಂದು ಗರ್ವದಿಂದ ಮೆರೆದಿದ್ದವನು ಇಂದು ನೆಲಕಚ್ಚಿದ್ದ.

ರಾವಣ ನಾಶ, ಲಂಕಾ ಸೆರೆಗಳಿಂದ ಇಡೀ ಲಂಕಾನಗರ ರೋಧಿಸಿತು. ಸಾವಿಗೀಡಾದ ಬಂಧು ಬಾಂಧವರಿಗಾಗಿ ಕಣ್ಣೀರಿಟ್ಟಿತು. ಎಲ್ಲರೂ ರಾವಣನನ್ನು ಶಪಿಸಿದರು. ಒಂದು ಹೆಣ್ಣಿನ ಆಸೆಗಾಗಿ ಇಡೀ ಕುಲವನ್ನೇ ನಾಶಮಾಡಿದ ದುಷ್ಟ ಎಂದು ಜರಿದರು. ಸ್ತ್ರೀಯರು ತಮ್ಮ ಪತಿಯ, ಮಕ್ಕಳ ಶವಗಳನ್ನು ಎದೆಗೆ ಆನಿಸಿಕೊಂಡು ಗೋಳಾಡಿದರು.

`ಇನ್ನೊಬ್ಬನ ಹೆಂಡತಿಯನ್ನು ತನ್ನ ತಾಯಿಯೆಂದೂ, ಇನ್ನೊಬ್ಬನ ಒಡವೆಗಳನ್ನು ಮಣ್ಣಿನ ಮುದ್ದೆಯೆಂದು ಭಾವಿಸುವವನು ಮತ್ತು ಇತರ ಸಕಲ ಜೀವಿಗಳನ್ನು ತನ್ನ ಹಾಗೆಯೇ ಕಾಣತಕ್ಕವನೇ ನಿಜವಾದ ಮಾನವ!’ ಎಂದು ಲಂಕೆಯ ಹಿರಿಯರು ಮಾತನಾಡಿಕೊಂಡರು.

ಸೂತ ಮುನಿಗಳು ಹೇಳಿದರು –

`ದಿಢೀರನೆ ಇಡೀ ಲಂಕೆಗೆ ಜ್ಞಾನೋದಯವಾದಂತಿತ್ತು. ಸೀತಾಮಾತೆಯಂತಹ ಪತಿವ್ರತಾ ಶಿರೋಮಣಿಯನ್ನು ಅಪಹರಿಸಿ ತಂದಾಗ ಎಲ್ಲರ ಬಾಯಿಗಳು ಮುಚ್ಚಿಹೋಗಿದ್ದಿತು. ರಾಕ್ಷಸ ಗುಣದ ಕಾರಣವೊ, ರಾವಣನ ಭಯವೊ ಅಂತೂ ಎಲ್ಲರೂ ಸುಮ್ಮನಿದ್ದುಬಿಟ್ಟಿದ್ದರು. ಈಗ ಲಂಕೇಶ್ವರನ ನಾಶ ಆದ ಮೇಲೆ ಎಲ್ಲರ ಬಾಯಿಯ ಬೀಗವೂ ತೆರೆದಂತಾಗಿತ್ತು. ನ್ಯಾಯ-ಅನ್ಯಾಯಗಳ ವಿಶ್ಲೇಷಣೆಗಳು ಧಾರಾಳವಾಗಿ ಎಲ್ಲೆಲ್ಲೂ ತೇಲಿ ಬಂದಿತು. ಆದರೆ, ಅಷ್ಟು ಮಾತುಗಳಿಗೂ ಸಮಯ ತಡವಾಗಿ ಹೋಗಿತ್ತು. ರಾಕ್ಷಸ ವೀರರ ವಧೆಯಾಗಿತ್ತು. ಸುಂದರ ಸ್ತ್ರೀಯರು ವಿಧವೆಯರಾಗಿದ್ದರು. ರಾಜಮನೆತನ ನಿರ್ನಾಮವಾಗಿತ್ತು. ಆಗ ಶ್ರೀರಾಮನೇ ವಿಭೀಷಣನಿಗೆ ಹೇಳಿ ಎಲ್ಲರಿಗೂ ಸಮಾಧಾನ ಹೇಳಿಸಿ, ಬಂಧುಗಳೆಲ್ಲರ ಅಂತ್ಯಕ್ರಿಯೆಗೆ ದಾರಿ ಮಾಡಿಸಿದನು!’

ಶ್ರೀ ರಾಮನಿಗೂ ಮನಸ್ಸು ಭಾರವಾಗಿತ್ತು. ಅನಗತ್ಯವಾಗಿ ಯುದ್ಧ ಎದುರಾಗಿತ್ತು. ಪಿತೃವಾಕ್ಯ ಪರಿಪಾಲನೆಗಾಗಿ ವನವಾಸದ ಸರಳ ಜೀವನವನ್ನು ಆಯ್ದುಕೊಂಡಿದ್ದ ಅವನ ಮೈಮೇಲೆ ಯುದ್ಧ ಬಂದೆರಗಿತ್ತು. ಅಸಂಖ್ಯಾತ ಜೀವಗಳನ್ನು ಬಲಿ ತೆಗೆದುಕೊಳ್ಳುವುದಾಯಿತು. ಪತಿವ್ರತೆಯರ ಮಾಂಗಲ್ಯ ಭಂಗವಾಗಿತ್ತು. ಶಿಶುಗಳು ಅನಾಥರಾಗಿದ್ದರು. ವಾನರ ಸ್ನೇಹ, ಸುಗ್ರೀವ ಸಖ್ಯ, ಹನುಮಂತ ಭಕ್ತಿ, ವಿಭೀಷಣ ನಿಷ್ಠೆ ಎಂದೆಲ್ಲ ಲಾಭವಾಗಿದ್ದರೂ ಲಂಕಾ ಯುದ್ಧ ನುಂಗಲಾರದ ತುತ್ತಾಗಿಯೇ ಉಳಿಯಿತು. ವೀರ ಕ್ಷತ್ರಿಯನಿಗೆ ಯುದ್ಧವೆನ್ನುವುದು ಬದುಕಿನ ಒಂದು ಅಂಗವೇ ಆದರೂ, ಈ ಯುದ್ಧ ಸಾವು ನೋವು ನಡೆದ ನಿಮಿತ್ತ ಅವನ ಮನಸ್ಸನ್ನು ಕಾಡಿತ್ತು.

ಶ್ರೀರಾಮ ಅಶೋಕವನದಲ್ಲಿ ಸೊರಗಿ ಮುದುರಿ ಕುಳಿತಿದ್ದ ಸೀತೆಯನ್ನು ಕಂಡ. ಪ್ರಿಯಕರನನ್ನು ನೋಡಿದ ಕೂಡಲೇ ಅವಳ ಮುಖ ಕಮಲ ಅರಳಿತು.

ವಿಭೀಷಣನಿಗೆ ಪಟ್ಟಾಭಿಷೇಕ ಮಾಡಿ ಪುಷ್ಪಕ ವಿಮಾನದಲ್ಲಿ ಎಲ್ಲರೊಂದಿಗೆ ಅಯೋಧ್ಯೆಗೆ ಶ್ರೀರಾಮ ಹಿಂತಿರುಗಿದಾಗ ದೇವತೆಗಳು ಗಗನದಿಂದ ಪುಷ್ಪವೃಷ್ಟಿ ಮಾಡಿದರು.

ಅಣ್ಣ ಶ್ರೀರಾಮನಿಲ್ಲದ ಅಯೋಧ್ಯೆಯನ್ನು ಭರತ ರಾಮ ಪಾದುಕೆಗಳನ್ನಿಟ್ಟು ಆಳುತ್ತಿದ್ದ. ಸಂನ್ಯಾಸಿ ಬದುಕು ಸಾಗಿಸುತ್ತ ಅಣ್ಣನಿಗಾಗಿ ಕಾಯುತ್ತಿದ್ದ. ಅಣ್ಣ ಹಿಂತಿರುಗಿ ಬರುತ್ತಿರುವುದು ತಿಳಿದ ಕೂಡಲೇ ಪಾದುಕೆಗಳನ್ನು ತಲೆಯ ಮೇಲೆ ಇಟ್ಟುಕೊಂಡು ಹೊರಟ. ಇಡೀ ಊರು ಅವನ ಹಿಂದೆ ನಡೆಯಿತು. ಹರ್ಷೋನ್ಮಾದಗಳು, ಆನಂದ ಭಾಷ್ಪಗಳು ಎಲ್ಲೆಲ್ಲೂ ಕಾಣುತ್ತಿದ್ದವು. ಅಣ್ಣನನ್ನು ನೋಡಿದ ಕೂಡಲೇ ಕಣ್ಣೀರು ಸುರಿಸುತ್ತ ಭರತ ಓಡಿಬಂದು ಅವನ ಪಾದಗಳಿಗೆರಗಿದ. ಪಾದುಕೆಗಳನ್ನು ಅಣ್ಣನ ಮುಂದಿಟ್ಟು ಅಣ್ಣನನ್ನೇ ನೋಡುತ್ತ ನಿಂತುಕೊಂಡ.

ಶ್ರೀರಾಮನ ಕಣ್ಣುಗಳೂ ನೀರಾಡಿದ್ದವು. ಭರತನನ್ನು ಬಿಗಿಯಾಗಿ ಅಪ್ಪಿಕೊಂಡ. `ಪ್ರಿಯ ಭರತ, ಎಂತಹ ಮಹಾನುಭಾವನಪ್ಪ ನೀನು, ನಿನ್ನಂತಹ ಸೋದರ ಇರುವುದು ನನ್ನ ಸುಕೃತ. ನಿನ್ನನ್ನು ಎಂದಿಗೆ ನೋಡುತ್ತೇನೋ ಎಂದು ನನ್ನ ಮನಸ್ಸೂ ಚಡಪಡಿಸುತ್ತಿತ್ತು. ಇಂದು ಆ ಸಂದರ್ಭ ಬಂದಿದೆ! ಚೆನ್ನಾಗಿದ್ದೀಯಾ ಮಗು, ನಿನ್ನ ನನ್ನ ತಾಯಿ ಕೈಕೇಯಿ ಮಾತೆ ಸೌಖ್ಯವಾಗಿದ್ದಾಳಾ? ಸೋದರ ಶತ್ರುಘ್ನ ಆರಾಮವೇ?’ ಎಂದೆಲ್ಲ ವಿಚಾರಿಸತೊಡಗಿದ.

ಭರತನಿಗೆ ಮಾತುಗಳೇ ಹೊರಡಲಿಲ್ಲ. ಹೊರಟಿದ್ದು ಬರೀ ಕಣ್ಣೀರು ಮಾತ್ರ!

ಮಹಾನ್‌ ಸಂಭ್ರಮ, ಉತ್ಸಾಹ, ಉತ್ಸವಗಳ ನಡುವೆ ಶ್ರೀರಾಮಚಂದ್ರ ಅಯೋಧ್ಯಾ ನಗರವನ್ನು ಪ್ರವೇಶಿಸಿದ. ತಾನು ಹುಟ್ಟಿ ಬೆಳೆದ ನಾಡಿನ ಒಂದೊಂದು ಅಂಗುಲದ ಮೇಲೂ ಹೂ ಹೆಜ್ಜೆಯಿಡುತ್ತ ಮುನ್ನಡೆದ. ಎಲ್ಲೆಲ್ಲೂ ನೆರೆದಿದ್ದ, ಜಯಕಾರ ಮಾಡುತ್ತಿದ್ದ ಅಯೋಧ್ಯಾ ವಾಸಿಗಳಿಗೆ ಕೈಮುಗಿದು ವಂದಿಸಿದ. ಅರಮನೆಯೊಳಗೆ ನಡೆದು ತಾಯಿಯಂದಿರಿಗೆಲ್ಲ ನಮಸ್ಕಾರ ಮಾಡಿದ. ಮುದುರಿ ನಿಂತಿದ್ದ ಕಿರಿತಾಯಿ ಕೈಕೇಯಿ ಹತ್ತಿರ ಪಾದಕ್ಕೆರಗಿದ. ಅನಂತರ ಕೌಸಲ್ಯೆ-ಸುಮಿತ್ರೆಯರ ಪಾದಕ್ಕೆರಗಿದ.

ಮುಂದಿನ ಅನೇಕ ದಿನಗಳು ಒಬ್ಬರನ್ನೊಬ್ಬರು ಬಿಟ್ಟಿರದೆ ಬರೀ ಮಾತುಗಳನ್ನೆ ಆಡುತ್ತಿರುವುದಾಯಿತು. ಬಹುಕಾಲದ ವಿಯೋಗ ದುಃಖ ಶಮನವಾಯಿತು.

ದುಃಖ ಶಮನವಾಗುತ್ತಿದ್ದಂತೆಯೆ ಮುಂದಿನ ದಿವಸಗಳಲ್ಲಿ ಅಯೋಧ್ಯೆ ಸಂತಸದ ಸಂಭ್ರಮವನ್ನು ಕಾಣಿಸತೊಡಗಿತು. ಅರಮನೆಯಲ್ಲಿ ಪಟ್ಟಾಭಿಷೇಕೋತ್ಸವ ಕಾರ್ಯಕ್ರಮಗಳು ಪ್ರಾರಂಭವಾದವು. ಕುಲ ಗುರು ವಸಿಷ್ಟರ ನೇತೃತ್ವದಲ್ಲಿ ಕೆಲಸಗಳು ನಡೆದವು. ಶ್ರೀ ರಾಮಚಂದ್ರನ ಉದ್ದ ಜಟೆಗಳನ್ನು ತೆಗೆಸಿದರು. ಸ್ವಚ್ಛ ಕೇಶಮುಂಡನವಾಯಿತು. ಚತುಸ್ಸಮುದ್ರ ಜಲಗಳಿಂದ ಮತ್ತು ಇತರ ದ್ರವ್ಯಗಳಿಂದ ಅಭಿಷೇಕೋತ್ಸವವನ್ನು ನೆರವೇರಿಸಿದರು. ಸೊಗಸಾದ ಉಡುಪು ಧರಿಸಿ ಪುಷ್ಪ ಮಾಲೆಗಳು ಆಭರಣಗಳು ಮೊದಲಾದವುಗಳಿಂದ ಅಲಂಕೃತನಾಗಿ ಶ್ರೀರಾಮ ಶೋಭಿಸಿದನು. ಸೀತೆ, ಲಕ್ಷ್ಮಣ, ಭರತ, ಶತ್ರುಘ್ನರೂ ಸಾಲಂಕೃತರಾದರು.

ಶ್ರೀ ರಾಮ ಭರತನಿಂದ ಸಿಂಹಾಸನವನ್ನು ಸ್ವೀಕರಿಸಿದನು. ಸೀತಾ, ಲಕ್ಷ್ಮಣ, ಭರತ, ಶತ್ರುಘ್ನ, ಸುಗ್ರೀವ, ಹನುಮಂತ, ವಿಭೀಷಣ ಆದಿಯಾಗಿ ಎಲ್ಲ ವಾನರ ವೀರರ ಸಮ್ಮುಖದಲ್ಲಿ ಶ್ರೀ ರಾಮನಿಗೆ ರಾಜ ಪಟ್ಟಾಭಿಷೇಕವಾಗಿ, ಸಿಂಹಾಸನದ ಮೇಲೆ ಅವನು ವಿರಾಜಿಸಿದನು.

ಶ್ರೀ ರಾಮಚಂದ್ರ ಸಿಂಹಾಸನವನ್ನೇರಿ ಅಯೋಧ್ಯೆಯ ಆಡಳಿತ ಚುಕ್ಕಾಣಿಯನ್ನು ಹಿಡಿದಾಗ, ಅವನಿಗೆದುರು ಭರತನ ಸಂಪೂರ್ಣ ಶರಣಾಗತಿ ಮತ್ತು ಸಮರ್ಪಣಾ ಮನೋಭಾವ ನಿಚ್ಚಳವಾಗಿ ಕಂಡಿತ್ತು. ಚಕ್ರವರ್ತಿಯೊಬ್ಬನು ಹೇಗೆ ಅತಿ ಸರಳವಾಗಿದ್ದು, ಚಕ್ರವರ್ತಿಯೂ ಆಗಿರಬಹುದು ಎನ್ನುವುದನ್ನು ಭರತ ಮಾಡಿತೋರಿಸಿದ್ದ. ಭರತನ ಈ ಅದ್ಭುತ ನಡವಳಿಕೆ ಶ್ರೀ ರಾಮಚಂದ್ರನಿಗೆ ಅತ್ಯಂತ ಪ್ರಿಯವಾಯಿತು.

ಪ್ರಿಯ ಭರತ, ನೀನು ನಿಜವಾದ ರಾಜರ್ಷಿ. ನಿನ್ನಂತಹವನು ನನ್ನ ಒಡ ಹುಟ್ಟಿದವನು ಎನ್ನುವುದೇ ನನಗೊಂದು ಅಭಿಮಾನದ ವಿಷಯ. ಪ್ರಿಯ ಸೋದರ, ಇನ್ನು ನಾವೆಲ್ಲ ಕ್ಷತ್ರಿಯರಾಗಿ, ಚಕ್ರವರ್ತಿಗಳಾಗಿ, ಪ್ರಜಾಪರಿಪಾಲಕರಾಗಿ, ಸದ್ಗೃಹಸ್ಥರಾಗಿ ನಮ್ಮ ನಮ್ಮ ಕರ್ತವ್ಯಗಳನ್ನು ಪರಿಪಾಲಿಸೋಣ. ನಿನ್ನನ್ನು ಈ ಸಾಲಂಕೃತ ದಿರಸುಗಳಲ್ಲಿ ನೋಡಲು ನನಗೆಷ್ಟು ಸಂತೋಷವಾಗುತ್ತಿದೆ ಗೊತ್ತೆ?’ ಎನ್ನುತ್ತ ಶ್ರೀ ರಾಮಚಂದ್ರ ತನ್ನ ಪ್ರಿಯ ಸೋದರನನ್ನು ಬಿಗಿದಪ್ಪಿಕೊಂಡ. ಪಕ್ಕದಲ್ಲೇ ಇದ್ದ ಲಕ್ಷ್ಮಣನನ್ನು ಬರಸೆಳೆದು ಅಪ್ಪಿಕೊಂಡು, `ಇವನು ಇನ್ನೊಬ್ಬ ಮಹಾನುಭಾವ, ನಿನಗೆ ತಕ್ಕ ಸೋದರ!’ ಎಂದು ಹೇಳಿದ.

ಅಯೋಧ್ಯೆಗೆ ಸಂತೋಷ-ಸಂಭ್ರಮ ಹಿಂತಿರುಗಿತ್ತು. ಅರಮನೆಯ ಅಂಗುಲ ಅಂಗುಲವೂ ಅದೇ ಸಂತೋಷ-ಸಂಭ್ರಮಗಳಲ್ಲಿ ತೇಲಾಡುತ್ತಿತ್ತು. ಈ ಸುಖ ಇಡೀ ನಾಡಲ್ಲಿ ಪಸರಿಸಿತ್ತು.

ಸೀತೆಗೆ ಕೊನೆಗೂ ಸುಖದ ಕ್ಷಣಗಳು ಹಿಂತಿರುಗಿದ್ದವು. ಮದುವೆ ಆದ ಕೂಡಲೇ ವನವಾಸ, ವನವಾಸದಲ್ಲೆ ಸೆರೆವಾಸ, ವಿರಹದ ದುಃಖ, ಅನಿಶ್ಚಿತತೆ. ಎಲ್ಲವೂ ಥಟ್ಟನೆ ಕರಗಿ ಹೋಗಿತ್ತು. ಮತ್ತೆ ಪ್ರಿಯಕರನ ಸಹವಾಸ, ಬಂಧು ಬಳಗದವರೊಂದಿಗೆ ಸಂಭ್ರಮ, ಹಿರಿಯರ ಪ್ರೀತಿ, ಪ್ರಜೆಗಳ ಗೌರವ ದೊರಕಿತ್ತು. ಮುಂದೇನಾಗುತ್ತದೊ ಎಂಬಂತೆ ಅವಳು ತನ್ನ ಸಮಸ್ತ ಪ್ರೀತಿಯನ್ನೂ ಶ್ರೀ ರಾಮಚಂದ್ರನಿಗೆ ಒಪ್ಪಿಸಿಬಿಟ್ಟಳು.

ಸೂತಮುನಿಗಳು ಕೊನೆ ಮಾತು ಎಂಬಂತೆ ಹೇಳಿದರು:

`ಶ್ರೀ ರಾಮಚಂದ್ರ ದಯಾಳು, ಸತ್ಯಸಂಧ, ಪ್ರಜಾ ಪರಿಪಾಲಕ, ಮಾನವತಾವಾದಿ, ಆದರ್ಶ ಪುರುಷ, ರಾಜ್ಯವನ್ನು, ಪ್ರಜೆಗಳನ್ನು ಅತಿ ಶ್ರದ್ಧೆ, ಗೌರವ, ಕರ್ತವ್ಯ ನಿಷ್ಠೆಗಳಿಂದ ಆಳಿದ. ತನ್ನ ರಾಜ್ಯದಲ್ಲಿ ಸಕಲ ಜೀವಿಗಳಿಗೂ ಜೀವನಾವಶ್ಯಕಗಳನ್ನು ಒದಗಿಸುವುದರಲ್ಲಿ ಸಫಲನಾದ. ಪ್ರತಿಯೊಬ್ಬ ಪ್ರಜೆಯೂ ಸಂತೃಪ್ತನಾಗಿದ್ದ. ಧರ್ಮ ನಿಷ್ಟನಾಗಿದ್ದ. ಪರಿಪೂರ್ಣ ಸುಖಿಯಾಗಿದ್ದ. ಶ್ರೀ ರಾಮಚಂದ್ರನನ್ನು ತಂದೆಯೆಂಬಂತೆ ನೋಡಿದ. ಶ್ರೀ ರಾಮಚಂದ್ರನಂತೂ ಎಂದಿಗೂ ಕೋಪವನ್ನು ಪ್ರದರ್ಶಿಸಲಿಲ್ಲ. ತನ್ನ ವೈಯಕ್ತಿಕ ಆಚರಣೆಗಳ ಮೂಲಕ ಸಾಮಾನ್ಯರಿಗೂ ಶಿಕ್ಷಣ ನೀಡಿದ. ಅವನ ಆಳ್ವಿಕೆ ರಾಮರಾಜ್ಯವೆಂದು ಪ್ರಸಿದ್ಧವಾಯಿತು. ರಾಮರಾಜ್ಯವೆಂದರೆ ಸುಭಿಕ್ಷವಾದ, ಸುಂದರವಾದ, ಸುಖಮಯವಾದ, ಸುಬುದ್ಧಿ ಜನರ ಪ್ರದೇಶ. ಶ್ರೀ ರಾಮಚಂದ್ರ ಈ ಕೀರ್ತಿಗೆ ಭಾಜನನಾದ!

ಈ ಲೇಖನ ಶೇರ್ ಮಾಡಿ