ಮಧ್ಯರಂಗ

ಆದಿ ರಂಗ, ಮಧ್ಯ ರಂಗ ಮತ್ತು ಅಂತ್ಯ ರಂಗ ಅತ್ಯಂತ ಪವಿತ್ರ ಸ್ಥಳಗಳು. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿಯು ಆದಿ ರಂಗ. ಅದೇ ಜಿಲ್ಲೆಯ ಶಿವನಸಮುದ್ರದ ಬಳಿ ಇರುವ ಶ್ರೀರಂಗನಾಥಸ್ವಾಮಿ ಮಧ್ಯ ರಂಗನೆಂದು ಪ್ರಸಿದ್ಧಿ. ತಮಿಳುನಾಡಿನ ಶ್ರೀರಂಗವು ಅಂತ್ಯ ರಂಗವಾಗಿದೆ. ಈ ಮೂರೂ ಸ್ಥಳಗಳಲ್ಲಿ ಇರುವ ರಂಗನಾಥಸ್ವಾಮಿ ದೇವಸ್ಥಾನಗಳು ಕಾವೇರಿ ನದಿಯಿಂದ ಸುತ್ತುವರಿಯಲ್ಲಪಟ್ಟಿವೆ. ಹೀಗಾಗಿ ಇವುಗಳನ್ನು ಮೊದಲನೆ, ಎರಡನೆ ಮತ್ತು ಮೂರನೆ ದ್ವೀಪಗಳೆನ್ನುತ್ತಾರೆ. ಮೂರು ರಂಗನ ದರ್ಶನವನ್ನು ಏಕದಿನದಲ್ಲಿ ಮಾಡಿದರೆ ಪುಣ್ಯ ಹೆಚ್ಚು .

ಸ್ಥಳ ಪುರಾಣ

ಕೃತಯುಗದ ಕಾಲದಲ್ಲಿಯೇ ಸ್ಥಾಪಿತಗೊಂಡ ದೇವಸ್ಥಾನವಿದು. ಭಕ್ತರ ಕಣ್ಮನ ಸೆಳೆಯುವುದರಿಂದ ಜಗನ್ಮೋಹನ ಶ್ರೀರಂಗನಾಥಸ್ವಾಮಿ ಎಂಬ ಹೆಸರು. ಶ್ರೀರಂಗನಾಥಸ್ವಾಮಿಗೆ ಹೂವಿನ ಹಾರದಂತೆ ಸುತ್ತುವರಿದು ಹರಿಯುತ್ತಿದ್ದ ಕಾವೇರಿ ನದಿಯ ಹರಿವಿಗೆ ಹೆಬ್ಬಂಡೆ ರೂಪದಲ್ಲಿ ರಾಕ್ಷಸ ಅಡ್ಡಿಯಾಗಿರುತ್ತಾನೆ. ಆಗ ಶಿವನು ರಾಕ್ಷಸನನ್ನು ಸಂಹಾರ ಮಾಡಿದಾಗ ಬಂಡೆ ಛಿದ್ರವಾಗುತ್ತದೆ, ಮತ್ತು ಕಾವೇರಿ ಸುಗಮವಾಗಿ ಹರಿಯಲು ಹಾದಿಯಾಗುತ್ತದೆ. ಹೀಗಾಗಿ ಇದು ಶಿವನ ಸಮುದ್ರ.

ಬಹಳ ಹಿಂದೆ ದೇವರಾಜನಾದ ದೇವೇಂದ್ರನಿಗೆ ಕಾರಣಾಂತರಗಳಿಂದ ಶಾಪವಾಗಿರುತ್ತದೆ. ಅದರ ವಿಮೋಚನೆಗಾಗಿ ಈ ಸ್ಥಳದಲ್ಲಿ ಶ್ರೀ ವಿಷ್ಣುವಿನ ಶೇಷಶಯನ ರೂಪವನ್ನು ಭೂಲೋಕದ ಭಕ್ತರೂ ಕಾಣುವಂತೆ ಶ್ರೀರಂಗನಾಥನ ಸಾಲಿಗ್ರಾಮ ಶಿಲೆಯ ವಿಗ್ರಹವನ್ನು ಸ್ಥಾಪಿಸಲು ಸಪ್ತರ್ಷಿಗಳು ಸೂಚಿಸುತ್ತಾರೆ. ಅದರಂತೆ ಇಂದ್ರನು ಶ್ರೀರಂಗನಾಥಸ್ವಾಮಿಯನ್ನು ಪ್ರತಿಷ್ಠಾಪಿಸುತ್ತಾನೆ. ಸಪ್ತರ್ಷಿಗಳು ಭರಚುಕ್ಕಿಯಲ್ಲಿರುವ ಕಾವೇರಿ ಜಲದಲ್ಲಿ ಪ್ರತಿ ದಿನ ಸಂಧ್ಯಾ ಸಮಯದಲ್ಲಿ ಪವಿತ್ರ ಸ್ನಾನ ಮತ್ತು ಸಂಧ್ಯಾವಂದಾನಾದಿ ವಿಧಿ ಗಳನ್ನು ಈಗಲೂ ಪೂರೈಸಿಕೊಳ್ಳುತ್ತಾರೆ ಎಂಬ ನಂಬಿಕೆ ಇದೆ. ಹೀಗಾಗಿ ಈ ಸ್ಥಳವು ಸಪ್ತರ್ಷಿ ಕ್ಷೇತ್ರ ಎಂದೂ ಪ್ರಸಿದ್ಧಿ ಪಡೆದಿದೆ.
ಸರ್ಪಲೋಕದ ಒಡೆಯ ತಕ್ಷಕನು ಇಲ್ಲಿ ಕ್ಷೇತ್ರಪಾಲಕ. ದೇವಸ್ಥಾನದ ಒಳಗಡೆ ಎಡಭಾಗದಲ್ಲಿರುವ ಮೊದಲನೇ ವಿಗ್ರಹವೇ ತಕ್ಷಕನದು. ಶ್ರೀ ರಂಗನಾಥಸ್ವಾಮಿಯ ವಿಗ್ರಹದಿಂದ 60 ಅಡಿಗಳ ಕೆಳಗೆ ಬಹಳ ವರ್ಷಗಳ ಹಿಂದೆ ಋಷಿಗಳು `ಅಮೃತಕುಂಭ’ ವನ್ನು ಸ್ಥಾಪಿಸಿದ್ದಾರೆ; ಪ್ರಳಯದ ನಂತರದಲ್ಲಿ ಈ ಕುಂಭವು ಇಡೀ ಜಗತ್ತನ್ನು ಪುನಶ್ಚೇತನಗೊಳಿಸುತ್ತದೆ ಎಂದು ಹೇಳಲಾಗಿದೆ. ಈಗ ಕುಂಭವು ಅಗಸ್ತ್ಯರ ಪತ್ನಿ ಲೋಪಮುದ್ರಾದೇವಿ, ದುರ್ಗಾದೇವಿ ಮತ್ತು ಆಂಜನೇಯಸ್ವಾಮಿ ಅವರುಗಳಿಂದ ಸಂರಕ್ಷಿಸಲ್ಪಟ್ಟಿದೆ. ಈ ದೇವಾಲಯದ ಇತಿಹಾಸದ ವಿವರಗಳನ್ನು ಬೆಂಗಳೂರಿನ ಹಲಸೂರಿನ ಸುಪ್ರಸಿದ್ಧ ಶ್ರೀ ಸೋಮೇಶ್ವರ ದೇವಸ್ಥಾನದ ಶಿಲಾ ಶಾಸನದಲ್ಲಿ ಕಾಣಬಹುದು.

ತಲಪುವುದು ಹೇಗೆ?

ಮಧ್ಯರಂಗವು ಬೆಂಗಳೂರಿನಿಂದ ಸುಮಾರು 140 ಕಿ.ಮೀ. ದೂರದಲ್ಲಿದೆ. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಮದ್ದೂರು ತಲಪಿದ ಮೇಲೆ ಎಡಕ್ಕೆ ತಿರುಗಿ ಮದ್ದೂರು-ಕೊಳ್ಳೇಗಾಲ ರಸ್ತೆ ಸೇರುವುದು. ಮಳವಳ್ಳಿ ಮುಖಾಂತರ ಹೋಗಿ ಸತ್ತೇಗಾಲದಲ್ಲಿ ಎಡಕ್ಕೆ ತಿರುಗಿದರೆ ದೇವಸ್ಥಾನ ಸಿಗುತ್ತದೆ.

ಈ ಲೇಖನ ಶೇರ್ ಮಾಡಿ