ಮಕರ ಸಂಕ್ರಾಂತಿ ಉತ್ಸವ

– ಗಾಯಿತ್ರಿ ದೇವಿ

ಸಂಕ್ರಾಂತಿಯು ಶುಭಸೂಚಕ ಮಂಗಳಕರವಾದ ಹಬ್ಬ. ಇದನ್ನು ಚಳಿಗಾಲದ ಅಂತ್ಯ ಮತ್ತು ಹೊಸ ಸುಗ್ಗಿಯ ಕಾಲದ ಆರಂಭವನ್ನು ಸೂಚಿಸುವ ಮಂಗಳಕರ ಹಂತದ ಶುರು ಎಂದೂ ಪರಿಗಣಿಸಲಾಗಿದೆ. ಇಲ್ಲಿ ಮಳೆಬೆಳೆಗೇ ಆದ್ಯತೆ. ಅದರಿಂದಲೇ ಸಡಗರ ಸಂಭ್ರಮ.

ಭಗವದ್ಗೀತೆಯಲ್ಲಿ ಕೃಷ್ಣನು ಹೇಳುತ್ತಾನೆ, (3.14)

ಅನ್ನಾದ್‌ ಭವಂತಿ ಭೂತಾನಿ ಪರ್ಜನ್ಯಾದನ್ನಸಮ್ಭವಃ ।
ಯಜ್ಞಾತ್‌ ಭವತಿ ಪರ್ಜನ್ಯೋ‌ ಯಜ್ಞಃ ಕರ್ಮಸಮುದ್ಭವಃ
।।

ಎಲ್ಲ ಜೀವಿಗಳೂ ಆಹಾರಧಾನ್ಯದಿಂದ ಬದುಕುತ್ತಾರೆ. ಧಾನ್ಯಗಳನ್ನು ಮಳೆಯು ಉತ್ಪತ್ತಿ ಮಾಡುತ್ತದೆ. ಯಜ್ಞದ ಆಚರಣೆಯಿಂದ ಮಳೆಯಾಗುತ್ತದೆ. ಯಜ್ಞವು ನಿಯತ ಕರ್ಮಗಳಿಂದ ಉದ್ಭವಿಸುತ್ತದೆ.

ಸಂಕ್ರಾಂತಿಯು ಸಮೃದ್ಧ ಬೆಳೆಯನ್ನು ಉತ್ಪಾದಿಸಲು ಮಳೆಯಂತಹ ಅಗತ್ಯಗಳನ್ನು ಅನುಗ್ರಹಿಸಿದ ಭಗವಂತನಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವ ಸಂದರ್ಭ. ಮಳೆ ಇಲ್ಲದೆ ಬೆಳೆ ಇಲ್ಲ. ಬೆಳೆ ಇಲ್ಲದೆ ಬದುಕಿಲ್ಲ. ಮಳೆ ಎಲ್ಲಿಂದ ಬರುತ್ತದೆ? ಭಗವಂತನ ಕೃಪೆಯಿಂದ ಮಳೆ ಬೆಳೆ ಸಾಧ್ಯವಾಗಿದೆ. ಭಗವದ್ಗೀತೆಯಲ್ಲಿ ಯಜ್ಞದ ಆಚರಣೆಯಿಂದ ಮಳೆಯಾಗುತ್ತದೆ ಎಂದು ಹೇಳಲಾಗಿದೆ. ಆದರೆ ಕಲಿಯುಗದಲ್ಲಿ ಯಜ್ಞದ ಆಚರಣೆ ಕಷ್ಟವಾದುದು. ಆದುದರಿಂದ ಶ್ರೀ ಚೈತನ್ಯ ಮಹಾಪ್ರಭುಗಳು ಹರೇ ಕೃಷ್ಣ ಮಹಾ ಮಂತ್ರವನ್ನು ಜಪಿಸುವಂತೆ ಜನರಿಗೆ ಬೋಧಿಸಿದರು. ಈ ಮಂತ್ರದ ಪಟನವು ಯಜ್ಞಕ್ಕೆ ಸಮನಾದುದು.

ಮಹಾಪ್ರಭು ಮತ್ತು ಸಂಕ್ರಾಂತಿ

ಅಂದಹಾಗೆ ಸಂಕ್ರಾಂತಿಗೂ ಶ್ರೀ ಚೈತನ್ಯ ಮಹಾಪ್ರಭುಗಳಿಗೂ ಸಂಬಂಧವಿದೆ ಎಂದರೆ ಆಶ್ಚರ್ಯವೇ? ಮಹಾಪ್ರಭುಗಳು ಸಂನ್ಯಾಸಾಶ್ರಮವನ್ನು ಸ್ವೀಕರಿಸಿದ್ದು ಇದೇ ದಿನದಂದು (ಸಂಕ್ರಾಂತಿಯಂದು). ಈ ಕಲಿಯುಗದಲ್ಲಿ ಭಕ್ತಿಸೇವೆಯ ಪಥವನ್ನು ಬೋಧಿಸಲು ಮತ್ತು ಪ್ರಚುರಪಡಿಸಲು ಹಾಗೂ ಪತಿತ ಆತ್ಮಗಳನ್ನು ವಿಮೋಚನೆಗೊಳಿಸಲು ಶ್ರೀ ಚೈತನ್ಯರು ಸಂನ್ಯಾಸಾಶ್ರಮವನ್ನು ಸ್ವೀಕರಿಸಿದರು.

ಬನ್ನಿ, ನೋಡೋಣ ಸಂಕ್ರಾಂತಿಯ ಇತರ ವೈಶಿಷ್ಟ್ಯಗಳನ್ನು. . . .

ಎಳ್ಳು, ಬೆಲ್ಲ, ಗಾಳಿಪಟ

ಸಂಕ್ರಾಂತಿಯು ಎಳ್ಳು, ಬೆಲ್ಲದ ಹಬ್ಬ. ಗಾಳಿಪಟವನ್ನು ಹಾರಿಸುವ ಸಮಯ. ಜನರೆಲ್ಲರೂ ಗಾಳಿಪಟ ಹಾರಿಸಲು ತಮ್ಮ ಮನೆಗಳ ಮೇಲೇರುತ್ತಾರೆ. ಅಕ್ಕಪಕ್ಕದವರೊಂದಿಗೆ ಕುಶಲದಿಂದ ಮಾತನಾಡುತ್ತ ಗಾಳಿಪಟ ಹಾರಿಸುತ್ತಾರೆ. ಸ್ನೇಹದ ಸ್ಪರ್ಧೆಯೂ ಇರುತ್ತದೆ. ಹರ್ಷೋದ್ಗಾರ‌ ಮಾಡುತ್ತಾರೆ. ಸ್ವಾದಿಷ್ಟವಾದ ಎಳ್ಳು ಬೆಲ್ಲದ ಲಡ್ಡು ಅಥವಾ ಚಿಕ್ಕಿಯನ್ನು ವಿನಿಮಯಮಾಡಿಕೊಳ್ಳುತ್ತಾರೆ. ಗಮನಿಸಿ, ಇವೆಲ್ಲಾ ನಡೆಯುವುದು ನಿಮ್ಮ ಮನೆಯ ಮಾಳಿಗೆಯ ಮೇಲೆ, ಅಕ್ಕಪಕ್ಕದ ಮನೆಯವರ ಜೊತೆಯಲ್ಲಿ!

ಈ ಆನಂದಸಾಗರದ ಜೊತೆಗೆ ಒಂದಷ್ಟು ಇತಿಹಾಸ ಮತ್ತು ಧಾರ್ಮಿಕ‌ ಅಂಶಗಳು. ಎಳ್ಳು, ಬೆಲ್ಲದ ವಿನಿಮಯ, ಎತ್ತುಗಳನ್ನು ಕಿಚ್ಚಿನ ಮಧ್ಯೆ ಹಾರಿಸುವುದು, ಗೋ ಪೂಜೆ, ಗಾಳಿಪಟ ಹಾರಿಸುವುದು ಹೀಗೆ ನಾನಾ ಸಡಗರ. ಹೀಗಾಗಿ ಇದನ್ನು ಒಂದು ಸಾಂಸ್ಕೃತಿಕ, ಸಾಮಾಜಿಕ ಆಚರಣೆ ಎನ್ನಬಹುದು.

ಕತ್ತಲೆಯು ಅಂತ್ಯಗೊಂಡು ಬೆಳಕಿನ ಹೊಸ ಆರಂಭದ ಸಂಕೇತ ಸಂಕ್ರಾಂತಿ. ಆದುದರಿಂದ ಸೂರ್ಯದೇವನಿಗೆ ಅರ್ಪಿಸಲಾಗಿದೆ. ಖಗೋಳ ವಿಜ್ಞಾನ ರೀತ್ಯಾ ಸೂರ್ಯನು‌ ತನ್ನ ಪಥವನ್ನು ದಕ್ಷಿಣದಿಂದ ಉತ್ತರ ದಿಕ್ಕಿಗೆ ಬದಲಿಸುತ್ತಾನೆ. ಸೂರ್ಯನು‌ ದಕ್ಷಿಣ ಪಥದಲ್ಲಿದ್ದಾಗ ಬೆಳಕು ಕಡಮೆ ಮತ್ತು ಪ್ರತಿಕೂಲ ಹವಾಮಾನದಿಂದಾಗಿ ಬೆಳೆಗೆ ಅಡಚಣೆ. ಪಥ ಬದಲಾವಣೆಯು ಸುಖ ಸಂತೋಷವನ್ನು ಉಂಟು ಮಾಡುವುದರಿಂದ ಇದನ್ನು ಉತ್ತರಾಯಣ ಪುಣ್ಯಕಾಲ ಎನ್ನುತ್ತಾರೆ. ಹಾಗೆ ಪಥವನ್ನು ಬದಲಿಸುವ ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಆದುದರಿಂದ ಇದು ಮಕರ ಸಂಕ್ರಾಂತಿ.

ಇದು ರೈತರು ಕಷ್ಟಪಟ್ಟು ಬೆಳೆದ ಬೆಳೆ ಕೈಗೆ ಬರುವ ಸಮಯ. ಭಾರತದ ಬಹುತೇಕ ಭಾಗಗಳಲ್ಲಿ ಧಾನ್ಯಗಳನ್ನು ವಿವಿಧ ರೀತಿಯಲ್ಲಿ ಆರಾಧಿಸುವ ಮೂಲಕ ಈ ಸಂಭ್ರಮವನ್ನು ಆಚರಿಸಲಾಗುತ್ತದೆ. ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ‌ ಸಂಕ್ರಾಂತಿ, ತಮಿಳುನಾಡಿನಲ್ಲಿ ಪೊಂಗಲ್, ಗುಜರಾತ್‌ನಲ್ಲಿ ಉತ್ತರಾಯಣ, ಪಂಜಾಬಿನ ಲೊಹ್ರಿ, ಅಸ್ಸಾಂನಲ್ಲಿ ಬಿಹು, ಪಶ್ಚಿಮ ಬಂಗಾಳದಲ್ಲಿ ಪವುಶ್‌ ಸಂಕ್ರಾಂತಿ. ಇವೆಲ್ಲವೂ ಸುಗ್ಗಿಯ ಉತ್ಸವಗಳಾಗಿದ್ದು ಕಾಲದ ಪಲ್ಲಟವನ್ನು ತೋರುತ್ತವೆ. ಇದು ವಸಂತ ಋತುವಿನ ಆಗಮನದ ಸೂಚನೆಯೂ ಹೌದು.

1) ಸಂಕ್ರಾಂತಿ ಆರಂಭವಾದಾಗಿನಿಂದ ಆರು ತಿಂಗಳು ಉತ್ತರಾಯಣ. ಈ ಸಮಯದಲ್ಲಿ ಮರಣಹೊಂದಿದವರು ಸ್ವರ್ಗಕ್ಕೆ ಹೋಗುತ್ತಾರೆ ಎನ್ನುವ ನಂಬಿಕೆ. ಮಹಾಭಾರತ ಕಥೆಯಲ್ಲಿ ಭೀಷ್ಮದೇವ ಅನೇಕ ದಿನಗಳವರೆಗೆ ಶರಶ್ಯಯೆಯಲ್ಲಿ ಮಲಗಿದ್ದರು ಮತ್ತು ದೇಹ ತ್ಯಜಿಸಲು ಉತ್ತರಾಯಣಕ್ಕಾಗಿ ಕಾದಿದ್ದರು ಎನ್ನುವ ಉಲ್ಲೇಖವಿದೆ. ಜ್ಯೋತಿಷ್ಯದ ಪ್ರಕಾರ ಮಕರ ಸಂಕ್ರಾಂತಿಯಂದು ಸೂರ್ಯನು ಮಕರ ರಾಶಿ ಪ್ರವೇಶಿಸುತ್ತಾನೆ. ಮಕರ ರಾಶಿಯ ಅಧಿಪತಿ ಶನಿ, ಸೂರ್ಯದೇವನ ಪುತ್ರ. ಸೂರ್ಯನು ತನ್ನ ಪುತ್ರನ ಜೊತೆಯಲ್ಲಿ ಇರುತ್ತಾನೆ. ಇದು ಸಂತಸದ ಸಮಯ ಎನ್ನುವ ನಂಬಿಕೆ.

2) ಒಂದು ದಂತ ಕಥೆ : ಸಂಕ್ರಾಂತಿ ಎನ್ನುವ ದೇವತೆಯು ಶಂಕರಾಸೂರ ಎಂಬ ರಾಕ್ಷಸನನ್ನು ಕೊಂದಳು. ಆದುದರಿಂದ ಇದನ್ನು ಸಂಕ್ರಾಂತಿ ಎನ್ನುತ್ತಾರೆ.
ಇನ್ನೊಂದು ಕಥೆಯ ಪ್ರಕಾರ, ದೇವತೆಗಳು ಭೂಮಿಗೆ ಬಂದು ಗಂಗಾ ಸ್ನಾನ ಮಾಡುತ್ತಾರೆ. ಆದುದರಿಂದ ಭಕ್ತರು ಪವಿತ್ರ ನದಿಗಳಲ್ಲಿ ಪುಣ್ಯ ಸ್ನಾನಕ್ಕಾಗಿ ಹಾತೊರೆಯುತ್ತಾರೆ. ವಾಸ್ತವವಾಗಿ ದೈಹಿಕ ಮತ್ತು ಮಾನಸಿಕ ಕಲ್ಮಶಗಳನ್ನು ತೊಡೆದುಹಾಕುವುದೇ ಪವಿತ್ರ ಸ್ನಾನದ ಉದ್ದೇಶ.

3) ಗಾಳಿಪಟವನ್ನು ಹಾರಿಸುವ ಆಚರಣೆಯ ಹಿಂದೆ ವೈಜ್ಞಾನಿಕ ಕಾರಣಗಳಿವೆ. ಸೂರ್ಯನ ಆರಂಭಿಕ ಕಿರಣಗಳು ವಿಟಮಿನ್‌ ‘ಡಿ’ ಗೆ ಮೂಲ, ದೇಹಕ್ಕೆ ಅಗತ್ಯ. ಸಾಮೂಹಿಕವಾಗಿ ಪಟ ಹಾರಿಸುವುದರಿಂದ ಹಬ್ಬದ ಉತ್ಸಾಹವು ಇಮ್ಮಡಿಯಾಗುತ್ತದೆ. ಆಕಾಶದಲ್ಲಿ ಪಟಗಳದೇ ಸಾಮ್ರಾಜ್ಯವಾದರೆ, ಭೂಮಿಯಲ್ಲಿ ಬಣ್ಣದ ರಂಗೋಲಿಯದೇ ಪಾರುಪತ್ಯ. ಗಾಳಿಪಟವು ಮಾನವ ಮತ್ತು ಭಗವಂತನ ನಡುವಣ ಶಾಶ್ವತ ಪ್ರೀತಿಯ ಬಂಧನದ ಸಂಕೇತವೆಂದೂ ಹೇಳಲಾಗುತ್ತದೆ.

4) ಈ ಹಬ್ಬದ ಸಂದರ್ಭದಲ್ಲಿ ಜನರು ಅಸಹಾಯಕರಿಗೆ, ನಿರಾಶ್ರಿತರಿಗೆ ಆಹಾರ ಸೇರಿದಂತೆ ಇತರ ವಸ್ತುಗಳನ್ನು ದಾನ ಮಾಡುತ್ತಾರೆ. ಶೀತ ಗಾಳಿಯಿಂದ ರಕ್ಷಿಸಿಕೊಳ್ಳಲು ಜನರಿಗೆ ಕಂಬಳಿಯನ್ನು ದಾನ ಮಾಡುವ ಪದ್ಧತಿಯೂ ಇದೆ. ಈ ಆಚರಣೆಯು ಹಂಚಿಕೊಳ್ಳುವ, ಕಾಳಜಿ ತೋರುವ ಅಭ್ಯಾಸವನ್ನೂ ಉತ್ತೇಜಿಸುತ್ತದೆ.

ಎಳ್ಳು ಬೆಲ್ಲ ಮತ್ತು ಆರೋಗ್ಯ ಭಾಗ್ಯ

ಸಂಕ್ರಾಂತಿಯಲ್ಲಿ ಎಳ್ಳು ಬೆಲ್ಲವನ್ನು ಮಂಗಳಕರವೆಂದು ಪರಿಗಣಿಸಲಾಗಿದೆ. ಇವೆರಡನ್ನೂ ಬಳಸಿ ವೈವಿಧ್ಯಮಯವಾದ ಸಿಹಿ ತಿನಿಸುಗಳನ್ನು ತಯಾರಿಸಿ ಬಂಧು ಮಿತ್ರರೊಂದಿಗೆ ಹಂಚಿಕೊಳ್ಳಲಾಗುತ್ತದೆ. ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತನ್ನಾಡು ಎಂದು ಹೇಳುವುದೂ ಉಂಟು.

ಎಳ್ಳು ದೇಹವನ್ನು ಬೆಚ್ಚಗಿಡುತ್ತದೆ. ಪ್ರೋಟಿನ್‌, ಕ್ಯಾಲ್ಸಿಯಂ, ಕಬ್ಬಿಣ ಮತ್ತು ಮೆಗ್ನೀಸಿಯಂ ಅಧಿಕವಾಗಿರುವ ಎಳ್ಳು ಮೂಳೆಯನ್ನು ಬಲಪಡಿಸುತ್ತದೆ, ಕೂದಲಿನ ಗುಣಮಟ್ಟವನ್ನು ಹೆಚ್ಚಿಸುತ್ತದೆ, ಮತ್ತು ಚರ್ಮವನ್ನು‌ ಆರೋಗ್ಯವಾಗಿಡುತ್ತದೆ. ಬೆಲ್ಲವು ಜೀರ್ಣ‌ ಕ್ರಿಯೆಯನ್ನು ಸುಗಮಗೊಳಿಸುತ್ತದೆ. ಎಳ್ಳು ಮತ್ತು ಬೆಲ್ಲದ ಸಮ್ಮಿಶ್ರಣವು ರೋಗ ನಿರೋಧಕ ಶಕ್ತಿಯನ್ನು ಉತ್ತೇಜಿಸುತ್ತದೆ.

ಸಂಕ್ರಾಂತಿ ಆಚರಣೆಯಲ್ಲಿ ಅಲ್ಪಸ್ವಲ್ಪ ವ್ಯತ್ಯಾಸ ಕಾಣಬಹುದು. ಆದರೆ ಎಳ್ಳು ಮತ್ತು ಬೆಲ್ಲದ ತಿನಿಸುಗಳು ಹೆಚ್ಚೂಕಮ್ಮಿ ಒಂದೇ ತೆರನಾಗಿದೆ. ಅದು ಮಹಾರಾಷ್ಟ್ರದ ತಿಲ್ಚಾ ಲಡ್ಡು, ಬಂಗಾಳದ ಪತಿಶಪ್ತ, ಪಂಜಾಬಿನ ತಿಲ ರೇವಡಿಶ್‌, ಕರ್ನಾಟಕದ ಎಳ್ಳು ಬೆಲ್ಲ ಇರಬಹುದು. ಸಮಾನತೆಯ ಪ್ರತೀಕ!

ಎಳ್ಳು ಮತ್ತು ಬೆಲ್ಲ ಹೆಚ್ಚು ಸಮಯ ಬಾಳುವಂತಹುದು ಮತ್ತು ಅದರಿಂದ ಮಾಡಿದ ತಿನಿಸನ್ನು ಸಾಕಷ್ಟು ಕಾಲ ಕಾಪಾಡಬಹುದು. ಹೀಗಾಗಿ ಅದರ ಲಡ್ಡು, ಚಿಕ್ಕಿಯನ್ನು ಡಬ್ಬಗಳಲ್ಲಿ ತುಂಬಿಡುತ್ತಾರೆ!

ಪುರಾಣದ ಪ್ರಕಾರ, ಯಮರಾಜನು ಎಳ್ಳನ್ನು ಅನುಗ್ರಹಿಸಿದನು, ಆದುದರಿಂದ ಅದನ್ನು ಅಮರತ್ವದ ಸಂಕೇತವೆಂದು ಪರಿಗಣಿಸಲಾಗಿದೆ. ವಿಷ್ಣುವಿನ ಬೆವರಿನ ಹನಿಯು ಭೂಮಿಯ ಮೇಲೆ ತೊಟ್ಟಿಕ್ಕಿದಾಗ, ಎಳ್ಳಿನ ಬೀಜವು ಉತ್ಪತ್ತಿಯಾಯಿತೆಂದು ಹೇಳಲಾಗಿದೆ
ಆದುದರಿಂದ ಸಾಂಸ್ಕೃತಿಕ, ಸಾಮಾಜಿಕ ಮತ್ತು ಧಾರ್ಮಿಕ‌ ಮಹತ್ವವನ್ನು ಹೊಂದಿರುವ ಮಕರ ಸಂಕ್ರಾಂತಿಯಂದು ಪೊಂಗಲ್ ಮಾಡಿ ಭಗವಂತನಿಗೆ ಅರ್ಪಿಸಿ. ಗಾಳಿಪಟ ಹಾರಿಸಿ ಮತ್ತು ಎಳ್ಳು ಬೆಲ್ಲವನ್ನು ಹಂಚಿ, ಸೇವಿಸಿ.

ಶುಭ ಸಂಕ್ರಾಂತಿ!

ಈ ಲೇಖನ ಶೇರ್ ಮಾಡಿ