ಮಾಮಗಾಚ್ಚಿ

ಶ್ರೀ ವೃಂದಾವನ ದಾಸ ಠಾಕುರರು ವ್ಯಾಸರ ಅವತಾರ ಎಂದು ಪ್ರತೀತಿ.

ಶ್ರೀ ವೃಂದಾವನ ದಾಸ ಠಾಕುರರು ಶ್ರೀ ವೇದವ್ಯಾಸರ ಅವತಾರ. ವೇದಗಳಿಗೆ ಅಕ್ಷರ ರೂಪ ತಂದುಕೊಟ್ಟ ವ್ಯಾಸದೇವರು ಶ್ರೀಮದ್‌‍ ಭಾಗವತವನ್ನು ರಚಿಸಿದರು. ಅನಂತರ ಶ್ರೀ ವೃಂದಾವನ ದಾಸ ಠಾಕುರರಾಗಿ ಶ್ರೀ ವ್ಯಾಸದೇವರು ಶ್ರೀ ಚೈತನ್ಯ ಭಾಗವತವನ್ನು ಬರೆದರು. ಶ್ರೀ ಚೈತನ್ಯ ಭಾಗವತವು ನವದ್ವೀಪದಲ್ಲಿ, ಗೌರಹರಿಯಾಗಿ, ಶ್ರೀ ಕೃಷ್ಣನು ಆಡಿದ ಲೀಲೆಗಳನ್ನು ಅದ್ಭುತವಾಗಿ ವರ್ಣಿಸುತ್ತದೆ.

ಶ್ರೀ ವೃಂದಾವನ ದಾಸ ಠಾಕುರರು ತಮ್ಮ 16ನೆಯ ವಯಸ್ಸಿನಲ್ಲಿ ಶ್ರೀ ನಿತ್ಯಾನಂದರಿಂದ ದೀಕ್ಷೆ ಸ್ವೀಕರಿಸಿದರು. ಮತ್ತು ಅವರೊಂದಿಗೆ ಪ್ರವಾಸ ಮಾಡುತ್ತಾ ಬೋಧನೆ ಕಾಯಕದಲ್ಲಿ ತೊಡಗಿಕೊಂಡರು. ಭಾಗವತ ಮತ್ತು ಇತರ ಪುರಾಣಗಳಲ್ಲಿ ಶ್ರೀ ವ್ಯಾಸದೇವರು ಶ್ರೀ ಕೃಷ್ಣನ ಲೀಲೆಗಳನ್ನು ಹೇಳಿರುವಂತೆ, ಶ್ರೀ ವೃಂದಾವನ ದಾಸ ಠಾಕುರರು ಚೈತನ್ಯ ಭಾಗವತದಲ್ಲಿ ಚೈತನ್ಯ ಲೀಲೆಯನ್ನು ವರ್ಣಿಸಿದ್ದಾರೆ.

ಇಂತಹ ಅಪರೂಪದ ಆತ್ಮ ಶ್ರೀ ವೃಂದಾವನ ದಾಸ ಠಾಕುರರು ಜನಿಸಿದ್ದು ಮಾಮಗಾಚ್ಚಿಯಲ್ಲಿ. ಅದು ನವದ್ವೀಪ ಧಾಮದ ಶ್ರೀ ಮೋದ್ರುಮ ದ್ವೀಪದಲ್ಲಿದೆ. ಅವರ ತಾಯಿ ಶ್ರೀಮತಿ ನಾರಾಯಣಿ ದೇವಿ ಅವರು ಸಾಮಾನ್ಯರಲ್ಲ. ಅವರು ಶ್ರೇಷ್ಠ ದೈವಭಕ್ತರಾಗಿದ್ದರು. ಅವರ ಬಗೆಗೆ ಒಂದಷ್ಟು ಅರಿಯೋಣ.

ಶ್ರೀಮತಿ ನಾರಾಯಣಿ ದೇವಿ ಅವರು ಶ್ರೀವಾಸ ಠಾಕುರರ ಸೋದರನ ಮಗಳು. ಶ್ರೀ ಚೈತನ್ಯ ಮಹಾಪ್ರಭುಗಳು ತಮ್ಮ ನಿಜವಾದ ಪರಿಚಯವನ್ನು ಶ್ರೀವಾಸ ಪಂಡಿತರ ಮನೆಯಲ್ಲಿ ಪ್ರಕಟಿಸಿದಾಗ ನಾರಾಯಣಿ ಕೇವಲ ನಾಲ್ಕು ವರ್ಷದವಳಾಗಿದ್ದಳು. ಮಹಾಪ್ರಭು ನಾರಾಯಣಿ ದೇವಿಗೆ ಕೃಷ್ಣನ ಹೆಸರನ್ನು ಜಪಿಸಲು ಹೇಳಿದರು. ಬಾಲಕಿಯಾಗಿದ್ದರೂ ನಾರಾಯಣಿ ದೇವಿ “ಓ ಕೃಷ್ಣ!” ಎಂದು ಜಪಿಸುತ್ತ ಭಾವಾವೇಶಕ್ಕೆ ಒಳಗಾದಳು ಮತ್ತು ದೈವಪ್ರೇಮದಿಂದ ಆನಂದಬಾಷ್ಪ ಹರಿಸುತ್ತ ನೆಲದ ಮೇಲೆ ಕುಸಿದಳು.

ನಾರಾಯಣಿ ದೇವಿ ಏನೂ ಬಾರದ, ಮುಗ್ಧ ಬಾಲಕಿಯಾಗಿದ್ದರೂ ಶ್ರೀ ಚೈತನ್ಯರ ಕೃಪೆಗೆ ಪಾತ್ರಳಾಗಿದ್ದಳು. ಅವಳಿಗೆ ಮಹಾಪ್ರಭುಗಳ ಉಳಿಕೆ ಪ್ರಸಾದ ಲಭ್ಯವಾಗಿತ್ತು. ದಿಟವಾಗಿ, ಮಹಾಪ್ರಭುಗಳ ಕೃಪೆಯಿಂದ ಮಾತ್ರ. ವೃಂದಾವನ ದಾಸ ಠಾಕುರರು ನಾರಾಯಣಿ ದೇವಿ ಅವರ ಗರ್ಭದಲ್ಲಿ ಜನಿಸಿದರು. ಶ್ರೀ ಗೌರಾಂಗ ಮತ್ತು ಶ್ರೀ ನಿತ್ಯಾನಂದರು ವೃಂದಾವನ ದಾಸ ಠಾಕುರರರಿಗೆ ಜೀವಾಳವಾಗಿದ್ದರು.

ಮಹಾಪ್ರಭುಗಳ ಕೃಪೆ : ಮಹಾಪ್ರಭುಗಳು ನಾರಾಯಣಿ ದೇವಿ ಅವರಿಗೆ ಕೃಷ್ಣಪ್ರೇಮ ನೀಡಿದಾಗ ಅವರು ಕೇವಲ ನಾಲ್ಕು ವರ್ಷದ ಬಾಲಕಿ ಎಂದು ಈಗಾಗಲೇ ಹೇಳಲಾಗಿದೆ. ಅವರು ಶ್ರೀವಾಸ ಪಂಡಿತರ ಮನೆಯಲ್ಲಿ ವಾಸಿಸುತ್ತಿದ್ದರು. ಮಹಾಪ್ರಭುಗಳು ಅಲ್ಲಿಗೆ ಬಂದಾಗ ತಮ್ಮ ನಿಜವಾದ ಪರಿಚಯವನ್ನು ಪ್ರಕಟಿಸಿದರು. ಆಗ ಅವರು ನಾರಾಯಣಿಗೆ “ಹರೇ ಕೃಷ್ಣ ಮಂತ್ರವನ್ನು ಜಪಿಸು. ಆನಂದಬಾಷ್ಪ ಹರಿಸು!” ಎಂದರು. ಅಲೌಕಿಕ ಭಾವಾವೇಶಕ್ಕೆ ಒಳಗಾದ ನಾರಾಯಣಿ ದೇವಿ “ಕೃಷ್ಣ! ಕೃಷ್ಣ!” ಎಂದು ಜಪಿಸಲಾರಂಭಿಸಿದರು.

ಗೌರಹರಿ ಯಾವಾಗಲೂ ನಾರಾಯಣಿ ದೇವಿಗೆ ವಿಶೇಷ ಗಮನ ಕೊಡುತ್ತಿದ್ದರು. ಅವರಿಗೆ ಎಲೆ ಅಡಕೆಯನ್ನೂ ನೀಡುತ್ತಿದ್ದರು. ಮಹಾಪ್ರಭು ಮಾಯಾಪುರವನ್ನು ಬಿಟ್ಟು ಹೊರಟ ಮೇಲೆ ನಾರಾಯಣಿಗೆ ಮದುವೆಯಾಯಿತು ಮತ್ತು ಅವರು ಬೇರೊಂದು ಗ್ರಾಮಕ್ಕೆ ತೆರಳಿದರು. ಅವರು ಗರ್ಭವತಿಯಾಗಿದ್ದಾಗಲೇ ಅವರ ಪತಿ ದಿಢೀರನೆ ಸಾವಿಗೀಡಾದರು. ಆಗ ಶ್ರೀವಾಸ ಪಂಡಿತರ ಪತ್ನಿ ಮಾಲಿನಿ ದೇವಿ ಅವರು ನಾರಾಯಣಿಯನ್ನು ಕರೆದುಕೊಂಡು ಬಂದು ತಮ್ಮ ತವರು ಮನೆ ಮಾಮಗಾಚ್ಚಿಯಲ್ಲಿ ತಮ್ಮ ಬಳಿಯೇ ಇಟ್ಟುಕೊಂಡರು. ಹೀಗೆ ವೃಂದಾವನ ದಾಸ ಠಾಕುರರು ತಮ್ಮ ತಂದೆಯನ್ನೇ ನೋಡಿರಲಿಲ್ಲ. ತಾಯಿಯೇ ಸರ್ವಸ್ವ ಮತ್ತು ಮುಂದೆ ಶ್ರೀ ನಿತ್ಯಾನಂದ ಪ್ರಭುಗಳ ಶಿಷ್ಯರಾಗಿ ಅವರೊಂದಿಗೆ ನಡೆದುಬಿಟ್ಟರು.

ಶ್ರೀ ಕೃಷ್ಣದಾಸ ಕವಿರಾಜ ಗೋಸ್ವಾಮಿ ಅವರು ಚೈತನ್ಯ ಚರಿತಾಮೃತದಲ್ಲಿ (ಆದಿ 8.33-42) ಶ್ರೀ ವೃಂದಾವನ ದಾಸ ಠಾಕುರರಿಗೆ ಹೀಗೆ ತಮ್ಮ ಕೃತಜ್ಞತೆಯನ್ನು ಅರ್ಪಿಸಿದ್ದಾರೆ,
“ಚೈತನ್ಯ ಭಾಗವತವನ್ನು ಶ್ರವಣ ಮಾಡುವುದರಿಂದ ಎಲ್ಲ ಅಮಂಗಳವೂ ನಾಶವಾಗುತ್ತವೆ. ಚೈತನ್ಯ ಭಾಗವತವನ್ನು ಓದುವುದರಿಂದ ಶ್ರೀ ಚೈತನ್ಯರ ಮತ್ತು ಶ್ರೀ ನಿತ್ಯಾನಂದರ ಮಹಿಮೆಯನ್ನು ಅರ್ಥಮಾಡಿಕೊಳ್ಳುವುದು ಸಾಧ್ಯವಾಗುತ್ತದೆ. ಆಗ ಅವನು ಜ್ಞಾನದ ಅತ್ಯುನ್ನತ ಪರಿಪೂರ್ಣತೆಯನ್ನು ಪಡೆಯಬಹುದು – ಕೃಷ್ಣನ ಪರಿಶುದ್ಧ ಪ್ರೇಮ. ಇಂತಹ ಅದ್ಭುತ ಗ್ರಂಥವನ್ನು ಸಾಮಾನ್ಯ ಜೀವಿಯು ರಚಿಸುವುದು ಸಾಧ್ಯವಿಲ್ಲವಾದುದರಿಂದ, ಶ್ರೀ ಚೈತನ್ಯ ಮಹಾಪ್ರಭುಗಳೇ ಶ್ರೀ ವೃಂದಾವನ ದಾಸ ಠಾಕುರರ ಬಾಯಿಂದ ಇದನ್ನು ಹೇಳಿಸಿರುವಂತಿದೆ. ಶ್ರೀ ವೃಂದಾವನ ದಾಸ ಠಾಕುರರ ಚರಣ ಕಮಲಗಳಿಗೆ ನಾನು ಕೋಟಿ ಕೋಟಿ ನಮಸ್ಕಾರಗಳನ್ನು ಅರ್ಪಿಸುತ್ತೇನೆ. ಇಂತಹ ಅಮೂಲ್ಯ ಗ್ರಂಥವನ್ನು ರಚಿಸುವ ಮೂಲಕ ಅವರು ಅಸಂಖ್ಯ ಜೀವಿಗಳನ್ನು ಮುಕ್ತಗೊಳಿಸಿದ್ದಾರೆ.”

ವೃಂದಾವನ ಧಾಮದ 64 ಸಮಾಧಿ ಪ್ರದೇಶದಲ್ಲಿ ಶ್ರೀ ವೃಂದಾವನ ದಾಸ ಠಾಕುರರ ಸಮಾಧಿಯೂ ಇದೆ.

ಮಾಮಗಾಚ್ಚಿಗೆ ಹೋಗುವುದು ಹೇಗೆ?

1) ನವದ್ವೀಪ ಮಂಡಲ ಪರಿಕ್ರಮ ಮಾಡುವಾಗ ಮಾಮಗಾಚ್ಚಿ ಕೂಡ ಒಂದು ನಿಲುಗಡೆ ಸ್ಥಳ. ಪ್ರತಿ ವರ್ಷ ಶ್ರೀಧಾಮ ಮಾಯಾಪುರದಲ್ಲಿ ಗೌರ ಪೂರ್ಣಿಮಾ ಉತ್ಸವವನ್ನು ರೂಪಿಸಲಾಗುತ್ತದೆ. ಅದಕ್ಕೆ 10 ದಿನ ಮುನ್ನ ಗೌರ ಮಂಡಲ ಪರಿಕ್ರಮವನ್ನು ವ್ಯವಸ್ಥೆಗೊಳಿಸಲಾಗುವುದು. ಪರಿಕ್ರಮದಲ್ಲಿ ಪಾಲ್ಗೊಂಡು ಹೋಗಬಹುದು.

2) ನವದ್ವೀಪ ಘಟ್ಟದಿಂದ ಕೂಡ ಹೋಗಬಹುದು. ಆಟೋದಲ್ಲಿ ಹೋದರೆ ಸುಮಾರು 45 ನಿಮಿಷಗಳು ಬೇಕಾಗುತ್ತದೆ. ಮಾಯಾಪುರ ಪ್ರವಾಸಿ ಕಚೇರಿಯನ್ನು ಸಂಪರ್ಕಿಸಿದರೆ ಪ್ರವಾಸವನ್ನು ವ್ಯವಸ್ಥೆ ಮಾಡಿಕೊಡುವರು.

ಈ ಲೇಖನ ಶೇರ್ ಮಾಡಿ