ಮಾಯಾ ಎಂದರೆ…

ಶ್ರೀ ಶ್ರೀಮದ್‌ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ಮತ್ತು ಅವರ ಕೆಲವು ಶಿಷ್ಯರ ನಡುವೆ ಪ್ಯಾರಿಸ್‌ನ ಟುಯಿಲೆರಿ ಉದ್ಯಾನದಲ್ಲಿ, 1974 ರ ಜೂನ್‌ನಲ್ಲಿ ನಡೆದ ಸಂವಾದ.

ಶ್ರೀಲ ಪ್ರಭುಪಾದ : ನೀವು ಗ್ರಹಿಸಿರುವಂತೆ  ಮಾಯಾ ಶಬ್ದದ ಅರ್ಥ ಏನಿರಬೇಕು ?

ಭಕ್ತ : ಕೃಷ್ಣನೊಂದಿಗೆ ಅದರ ಸಂಬಂಧ ಏನೆಂಬುದನ್ನು ನೋಡದೆ ಯಾವುದರ ಮೇಲೋ ಮೌಲ್ಯ ಇಡುವುದು.

ಶ್ರೀಲ ಪ್ರಭುಪಾದ : ಹೌದು. ಶ್ರೀಮದ್‌ ಭಾಗವತದಲ್ಲಿ ಮಾಯೆಯನ್ನು ತುಂಬ ಚೆನ್ನಾಗಿ ವಿವರಿಸಲಾಗಿದೆ (2.9.34),

ಋತೇ ಅರ್ಥಂ ಯತ್‌ ಪ್ರತೀಯೇತ ನ ಪ್ರತೀಯೇತ ಚಾತ್ಮನಿ

ತದ್‌ ವಿದ್ಯಾದ್‌ ಆತ್ಮನೋ ಮಾಯಾಂ ಯಥಾಭಾಸೋ ಯಥಾ ತಮಃ

ಕೃಷ್ಣನೊಂದಿಗೆ ಸಂಪರ್ಕ ಕಳೆದುಕೊಂಡಂತೆ ಯಾವುದನ್ನಾದರೂ ನೋಡುವುದು ಮಾಯಾ ಅಥವಾ ಭ್ರಮೆ.  ಏಕೆಂದರೆ ನಾವು ಪ್ರತಿಬಿಂಬವನ್ನೇ ಹೆಚ್ಚು ಮುಖ್ಯವೆಂದು ಭಾವಿಸಿ ಮೂಲ ವಾಸ್ತವವನ್ನು ಮರೆಯುತ್ತಿದ್ದೇವೆ. ಉದಾಹರಣೆಗೆ, ನೀರಿನಲ್ಲಿ ಸೂರ್ಯನ ಪ್ರತಿಬಿಂಬ ಮತ್ತು ಅದು ಗೋಡೆಯ ಮೇಲೆ ಪ್ರಕಾಶಿಸುತ್ತದೆ.  ಗೋಡೆಯ ಮೇಲಿನ ಬೆಳಕನ್ನು ನಾವು ಮುಖ್ಯವೆಂದು ಪರಿಗಣಿಸಿ ಮೂಲ, ವಾಸ್ತವ ಸೂರ್ಯನನ್ನೇ ಮರೆತರೆ ಅದು ಮಾಯಾ.

(ಶ್ರೀಲ ಪ್ರಭುಪಾದರು ಸಮೀಪದ ಕಟ್ಟಡದತ್ತ ಕೈತೋರಿ) ಈ ಕಟ್ಟಡಗಳನ್ನು ಕೃಷ್ಣನ ಬಗೆಗೆ ಯೋಚಿಸದೆಯೇ ನಿರ್ಮಿಸಲಾಗಿದೆ. ಆದರೆ ಜನರು ಅದನ್ನು ಬಹಳ ಉತ್ಸಾಹದಿಂದ ಪರಿಗಣಿಸಿದ್ದಾರೆ. ಈಗ ಉಳಿದಿರುವುದೆಲ್ಲ ಭಗ್ನಾವಶೇಷ. ಆದುದರಿಂದ, ಈ ಕಟ್ಟಡಗಳ ನಿರ್ಮಾಣಕ್ಕೆ ವಿನಿಯೋಗಿಸಿದ ಶಕ್ತಿಯು ಮಾಯಾ ಮತ್ತು ಈ ಅವಶೇಷಗಳನ್ನು ನೋಡಲು ಬರುವ ಜನರ ಉತ್ಸಾಹ ಕೂಡ ಮಾಯಾ. ಇವೆಲ್ಲ ಮಾಯಾ, ಭ್ರಮೆಯ ವಿಸ್ತರಣೆ.

ಭಕ್ತ : ಕಟ್ಟಡದ ವಾಸ್ತುಶಿಲ್ಪ ಕೌಶಲವನ್ನು ನೀವು ಮೆಚ್ಚಲಿಲ್ಲ ಎಂದು ಪ್ಯಾರಿಸ್‌ ಜನರು ದೂರಬಹುದು.

ಶ್ರೀಲ ಪ್ರಭುಪಾದ : ಹಾಗೇನಿಲ್ಲ. ನಾವು ಖಂಡಿತ ವಾಸ್ತುಶಿಲ್ಪಿಯ ಜಾಣ್ಮೆಯನ್ನು ಮೆಚ್ಚುತ್ತೇವೆ. ಆದರೆ, ದೊಡ್ಡ ಕಟ್ಟಡ ನಿರ್ಮಿಸುವಾಗ ನೀವು ಕೃಷ್ಣನನ್ನು ಮರೆತರೆ ಅದು ಮಾಯಾ. ಇಲ್ಲವಾದರೆ ಅದು ವಾಸ್ತವ. ಪ್ಯಾರಿಸ್‌ನ ಜನರು ಈ ಕಟ್ಟಡಗಳಲ್ಲಿ ಕೃಷ್ಣನ ಮೂರ್ತಿಯೊಂದನ್ನು ಇಟ್ಟಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ! ಜನರು ಪ್ರತಿ ದಿನ ಜಪಿಸುತ್ತ, ನರ್ತಿಸುತ್ತ ಮತ್ತು ಪ್ರಸಾದ ಸ್ವೀಕರಿಸುತ್ತಿದ್ದರೆ ಅದ್ಭುತವಾಗಿರುತ್ತಿತ್ತು. ಆಗ  ಮಾಯಾ ಇರುತ್ತಿರಲಿಲ್ಲ. ಈ ಕಟ್ಟಡಗಳು ಕೃಷ್ಣನನ್ನು ಪೂಜಿಸುವ ಜನರಿಗೆ ನೆಲೆಯಾಗಬೇಕಾಗಿತ್ತು. ಅದಕ್ಕೆ ಬದಲಾಗಿ ಅವರು ಮೂಳೆಗಳನ್ನು, ಕೆಲವು ಸತ್ತ ಮೂಳೆಗಳನ್ನು ಪೂಜಿಸುತ್ತಿದ್ದಾರೆ.

ಭಕ್ತ : ಎಲ್ಲವೂ ಕೃಷ್ಣನಿಗೆ ಸೇರಿದ್ದು ಎಂದು ಜನರಿಗೆ ಮನವರಿಕೆ ಮಾಡಿಕೊಡಬೇಕಾಗಿದೆ.

ಶ್ರೀಲ ಪ್ರಭುಪಾದ : ಎಲ್ಲವೂ ಕೃಷ್ಣನಿಗೇ ಸೇರಿದ್ದು ಎಂಬುದು ವಾಸ್ತವ. ಅವರಿಗೇಕೆ ಅರ್ಥವಾಗುವುದಿಲ್ಲ?

ಭಕ್ತ : `ಎಲ್ಲವೂ ಕೃಷ್ಣನಿಗೆ ಸೇರಿದ್ದು’ ಎಂದು ನಾವು ಹೇಳಿದರೆ, ಅವರು, `ನಮಗೆ ಕೃಷ್ಣ ಗೊತ್ತಿಲ್ಲ’ ಎನ್ನುತ್ತಾರೆ.

ಶ್ರೀಲ ಪ್ರಭುಪಾದ : ಅದು ಅಜ್ಞಾನ. ಎಲ್ಲವೂ ಕೃಷ್ಣ್ಣನಿಗೆ ಸೇರಿದ್ದೆಂದು ನಿಮಗೆ ಗೊತ್ತಿಲ್ಲದಿರಬಹುದು. ಆದರೆ ನೀವಲ್ಲದೆ ಇನ್ಯಾರಿಗೋ ಸೇರಿದ್ದೆಂದು ಗೊತ್ತಿರಬೇಕು. ಅವನನ್ನು ಕೃಷ್ಣ ಎಂದು ಕರೆಯಬಹುದು ಅಥವಾ ಬೇರೆ ಏನಾದರೂ ಕರೆಯಬಹುದು, ಅದು ಮುಖ್ಯವಲ್ಲ. ಆದರೆ ಯಾವುದೂ ನಿಮಗೆ ಸೇರಿದ್ದಲ್ಲ. ಅದನ್ನು ನೀವು ಅದು ಹೇಗೆ ನಿರಾಕರಿಸುವಿರಿ? ನಾನು ಪ್ಯಾರಿಸ್‌ಗೆ ಬಂದು ಒಂದು ವಾರ ಇದ್ದುಬಿಟ್ಟರೆ ಪ್ಯಾರಿಸ್‌ ನನ್ನದಾಗುತ್ತದೆಯೇ? ಅದೇ ರೀತಿ ನೀವು ತಾಯಿಯ ಗರ್ಭದಿಂದ ಹೊರಬಂದು ಈ ಜಗತ್ತಿನಲ್ಲಿ 80 ವರ್ಷ ಬದುಕಿರಬಹುದು. ಹಾಗೆಂದರೆ, ಈ ಪ್ರಪಂಚ ನಿಮಗೆ ಸೇರಿದ್ದೆ?

ಆದುದರಿಂದ, ಇದು ಫ್ರಾನ್ಸ್‌, ಇದು ಯೂರೋಪ್‌, ಇದು ಅಮೆರಿಕ, ಇದು ನನ್ನ ದೇಶ ಎಂದೆಲ್ಲಾ ಏಕೆ ಹೇಳಿಕೊಳ್ಳುತ್ತೀರಾ? ನೀವು ಹುಟ್ಟುವ ಮುನ್ನ ಈ ನೆಲ ಇಲ್ಲಿತ್ತು. ನೀವು ಹೋದ ಮೇಲೂ ಅದು ಇಲ್ಲೇ ಇರುತ್ತದೆ. ಆದುದರಿಂದ ಅದು ನಿಮಗೆ ಸೇರಿದ್ದೆಂದು ಹೇಗೆ ಹೇಳುತ್ತೀರಾ? ಏನು ಉತ್ತರ?

ಭಕ್ತ : ಭೂಮಿಯನ್ನು ಯಾರು ಸೃಷ್ಟಿಸಿದರೋ ಅವರಿಗೆ ಸೇರಿದ್ದು.

ಶ್ರೀಲ ಪ್ರಭುಪಾದ : ಯಾರು ಸೃಷ್ಟಿಸಿದರು?

ಭಕ್ತ : ಪ್ರಕೃತಿ

ಶ್ರೀಲ ಪ್ರಭುಪಾದ : ಪ್ರಕೃತಿ ಎಂದರೇನು?

ಭಕ್ತ : ಹಿಂದೆ ಕಾರ್ಯ ನಿರ್ವಹಿಸುತ್ತಿರುವ ಜೀವ ಶಕ್ತಿ-

ಶ್ರೀಲ ಪ್ರಭುಪಾದ : ಪ್ರಕೃತಿಯು ಕೃಷ್ಣನ ಶಕ್ತಿ. (ಮಯಾಧ್ಯಕ್ಷೇಣ ಪ್ರಕೃತಿಃ ಸೂಯತೇ ಸ-ಚರಾಚರಂ). ಆದುದರಿಂದ ಎಲ್ಲವೂ ಕೃಷ್ಣನಿಂದ ಸೃಷ್ಟಿಸಲ್ಲಟ್ಟಿದೆ ಮತ್ತು ಎಲ್ಲವೂ ಅವನಿಗೆ ಸೇರಿದ್ದು.

ಭಕ್ತ :  ಶ್ರೀಲ ಪ್ರಭುಪಾದ, ನಾವು ವಾಸ್ತವವಾಗಿ ಪುಟ್ಟ ಆತ್ಮಗಳು ಎಂದು ಧರ್ಮ ಗ್ರಂಥಗಳು ನಮಗೆ ಬೋಧಿಸುತ್ತವೆ. ಅದು ಕೂದಲಿನ ತುದಿಯ ಹತ್ತು ಸಾವಿರದ ಒಂದನೇ ಭಾಗದಷ್ಟು ಪುಟ್ಟದೆಂದು ಹೇಳಲಾಗಿದೆ. ಆದರೂ ನಾವು ಎಷ್ಟು ಅಹಂನಿಂದ ಉಬ್ಬಿಹೋಗುತ್ತೇವೆಯೆಂದರೆ, `ನಾನು ದೇವರು’ ಅಥವಾ `ನಾನು ಲೌಕಿಕ ಪ್ರಕೃತಿಯ ನಿಯಂತ್ರಕ’ ಎಂದು ಯೋಚಿಸುತ್ತೇವೆ. ಈ ಭ್ರಮೆ ಹೇಗೆ ಸಾಧ್ಯ?

ಶ್ರೀಲ ಪ್ರಭುಪಾದ : ಏಕೆಂದರೆ ನೀವು ದೇಹಾತ್ಮ ಬದುಕಿನಲ್ಲಿದ್ದೀರ. ನೀವು ಪುಟ್ಟ ಆತ್ಮ, ಪ್ರಜ್ಞಾವಂತ ವಸ್ತು ಎಂಬುದು ನಿಮಗೆ ಗೊತ್ತಿಲ್ಲ. `ನಾನು ದೊಡ್ಡ ದೇಹದವ’ ಎಂದು ನೀವು ಯೋಚಿಸುತ್ತಿದ್ದೀರ. ನಾಯಿಯೊಂದು ಯೋಚಿಸುವುದಿಲ್ಲವೇ, `ನಾನು ಪ್ರಬಲ ಬುಲ್‌ಡಾಗ್‌’ ಎನ್ನುವುದಿಲ್ಲವೇ, ಹಾಗೆ. ಅದೇ ಭ್ರಮೆ.

ಭಕ್ತ :  ಆದರೆ ಅವನು ಭಗವಂತನಿಂದ ಸ್ವತಂತ್ರವಾಗಿ ನಿರ್ವಹಿಸುತ್ತಿದ್ದಾನೆಂದು ಲೌಕಿಕರು ಹೇಳುತ್ತಾರೆ.

ಶ್ರೀಲ ಪ್ರಭುಪಾದ : ಅವನು ದೇವರಿಂದ ಅದು ಹೇಗೆ ಸ್ವತಂತ್ರ? ಯೂರೋಪನ್ನೇ ಗೆಲ್ಲಬೇಕೆಂಬ ತನ್ನ ಗುರಿಯನ್ನು ಸಾಧಿಸಲು ನೆಪೋಲಿಯನ್‌ ಬಯಸಿದ್ದ. ಆದರೆ ಅವನನ್ನು ಅವನ ಸ್ಥಾನದಿಂದ ಕಿತ್ತೊಗೆಯಲಾಯಿತು. ಅವನೆಷ್ಟು ಪ್ರಬಲನಾಗಿದ್ದ, ಆದರೆ ಅವನ ಗುರಿ ಮುಟ್ಟಲು ಅವನಿಗೆ ಅವಕಾಶ ಕೊಡಲಿಲ್ಲ.  ತಾನು ಭಗವಂತನಿಂದ ಸ್ವತಂತ್ರ ಎಂದು ಅವನು ಅದ್ಹೇಗೆ ಯೋಚಿಸಿದ? ಅದು ಮೂರ್ಖತನ. ಅವನನ್ನು ಯಾವಾಗಲಾದರೂ ದೇಹದಿಂದ ಹೊರಹಾಕುವುದಿದ್ದರೂ ಅವನು `ನಾನು ಸ್ವತಂತ್ರ’ ಎಂದು ಯೋಚಿಸುತ್ತಿದ್ದ. ಸ್ವಾತಂತ್ರ್ಯ ಎಲ್ಲಿತ್ತು? ಅವನು ಅಹಂನಿಂದ ಉಬ್ಬಿಹೋಗಿದ್ದ. ಆ ರೀತಿ ಹೊರದೂಡಿದ ಮೇಲೆ ಅವನು ನಾಯಿ, ಬೆಕ್ಕಿನ ದೇಹ ಪಡೆದಿದ್ದರೆ ಅವನ ಹಿಂದಿನ ಕರ್ಮಗಳ ಲಾಭವಾದರೂ ಏನು? ಭಗವದ್ಗೀತೆಯಲ್ಲಿ ಕೃಷ್ಣ ಹೇಳುತ್ತಾನೆ, `ಎಲ್ಲವೂ ಪ್ರಕೃತಿ ನಿಯಮದಂತೆ ನಡೆಯುತ್ತಿದೆ.’ ಆದರೆ ನಾವು, ಸ್ವತಂತ್ರರೆಂದು ಯೋಚಿಸುವ ಮೂರ್ಖರು.

ಭಕ್ತ : ಶ್ರೀಲ ಪ್ರಭುಪಾದ, ಸಾಯುವ ಸಮಯದಲ್ಲಿ ನಾವು ಏನೇನು ಯೋಚಿಸುತ್ತೇವೆಯೋ ಅದು  ಮುಂದಿನ ಜನ್ಮವನ್ನು ನಿರ್ಧರಿಸುತ್ತದೆ ಎಂದು ಕೃಷ್ಣನು ಭಗವದ್ಗೀತೆಯಲ್ಲಿ ಹೇಳಿದ್ದಾನೆ. ಆದುದರಿಂದ ವ್ಯಕ್ತಿಯು ತನ್ನ ಮನಸ್ಸಿನಲ್ಲಿ ಯಾವ ಭಾವವನ್ನು ತುಂಬಿಕೊಂಡಿರುವನೋ ಅದು ಅವನ ಮುಂದಿನ ಜನ್ಮ ಅಥವಾ ಅವನು ಪಡೆಯಬಹುದಾದ ದೇಹದ ಮೇಲೆ ಪ್ರಭಾವ ಬೀರುತ್ತದೆಯೇ?

ಶ್ರೀಲ ಪ್ರಭುಪಾದ : ಹೌದು.

ಭಕ್ತ : ಮತ್ತು ಭಕ್ತನು ಮನಸ್ಸಿನಲ್ಲಿ ಯಾವುದೇ ಭಾವವನ್ನು ತುಂಬಿಕೊಂಡಿಲ್ಲದಿದ್ದರೆ?

ಶ್ರೀಲ ಪ್ರಭುಪಾದ : ಇಲ್ಲ. ಜೀವಿಯ ಇದೇ ಬದುಕಿನ ಯೋಚನೆಗಳು ಸಾವಿನ ಸಮಯದಲ್ಲಿನ ಅವನ ಯೋಚನೆಗಳ ಮೇಲೆ ಪ್ರಭಾವ ಬೀರುತ್ತವೆ. ಪ್ರತಿ ವ್ಯಕ್ತಿಯಲ್ಲಿಯೂ ಭಾವಗಳು ಇದ್ದೇ ಇರುತ್ತವೆ. ಅವು ಕೃಷ್ಣನ ಬಗೆಗೆ ಇರಬಹುದು. ಇಲ್ಲವೆ ಬೇರೆ ವಿಷಯಗಳ ಬಗೆಗೆ ಇರಬಹುದು. ಕೃಷ್ಣನ ಧ್ಯಾನದಲ್ಲಿರುವವನು ಸದಾ ಕೃಷ್ಣನ ಬಗೆಗೆ ಯೋಚಿಸುತ್ತಿರುತ್ತಾನೆ. ಉದಾಹರಣೆಗೆ, ಈ ಸುಂದರ ಉದ್ಯಾನದಂತಹದನ್ನು ನಿರ್ಮಿಸುವ ಮನಸ್ಸು ನಮಗಿರಬಹುದು. ನಮ್ಮಲ್ಲಿ ಕ್ರಿಯಾಶೀಲ ಶಕ್ತಿಯೂ ಇದೆ. ಆದುದರಿಂದ ಸಲಹೆ ಇದು – ನಿರ್ಬಂಧಃ ಕೃಷ್ಣ ಸಂಬಂಧೇ : `ಕೃಷ್ಣನಿಗಾಗಿ ನಿರ್ಮಿಸು.’ ಭಾರತದಲ್ಲಿ ಜನರು ಕೋಟೆಯಂತಹ ದೊಡ್ಡ ಕಟ್ಟಡಗಳನ್ನು ನಿರ್ಮಿಸಿದ್ದಾರೆ.

ಆದರೆ ಅವು ಕೃಷ್ಣನನ್ನು ಪೂಜಿಸುವ ಮಂದಿರಗಳು. ಈ ಉದ್ಯಾನವನ್ನು ನಿರ್ಮಿಸಿದವರು ತಮ್ಮ ಶಕ್ತಿಯನ್ನು ಕೃಷ್ಣನೊಂದಿಗಿನ ಸಂಬಂಧಕ್ಕೆ ವ್ಯಯಿಸಿ ಸೃಷ್ಟಿಸಿದ್ದರೆ, ಅವರು ಪರಿಶುದ್ಧಗೊಳ್ಳುತ್ತಿದ್ದರು. ಆದರೆ ಈ ಉದ್ಯಾನವು ಇಂದ್ರಿಯ ತೃಪ್ತಿಗಾಗಿ ಇರುವುದರಿಂದ, ಇದನ್ನು ನಿರ್ಮಿಸಿದ ಜನರು ಪ್ರಕೃತಿ ನಿಯಮಕ್ಕೆ ಒಳಪಟ್ಟವರಾಗಿದ್ದರೆಂದು ನಮಗೆ ಗೊತ್ತು. ಆದುದರಿಂದ ಅವರು ತಮ್ಮ ಲೌಕಿಕ ಅಪವಿತ್ರತೆಯನ್ನು ಹೆಚ್ಚಿಸಿಕೊಂಡರು. ನೀವು ಹಲವಾರು ವಸ್ತುಗಳನ್ನು ಸೃಷ್ಟಿಸಬಹುದು, ಆದರೆ ನೀವು ಲೌಕಿಕ ಪ್ರಕೃತಿಯ ಸ್ವಭಾವಗಳಿಂದ ಕಲುಷಿತಗೊಂಡರೆ ಮತ್ತು ನಾಯಿ, ಬೆಕ್ಕಿನ ದೇಹ ಸ್ವೀಕರಿಸಿದರೆ, ಏನು ಪ್ರಯೋಜನ?

ಈ ಲೇಖನ ಶೇರ್ ಮಾಡಿ