ಮೇಲುಕೋಟೆ

ದಕ್ಷಿಣದಲ್ಲೇ ಏಕೆ ಭಾರತದಲ್ಲೇ ವಿರಾಜಿಸುವ ಪವಿತ್ರ ಕ್ಷೇತ್ರ ಮೇಲುಕೋಟೆ. ಇದು ಕಾವೇರಿ ನದಿಗೆ ಉತ್ತರದಲ್ಲಿ, ನಾರಾಯಣಗಿರಿಯ ಮೇಲೆ ವಿರಾಜಿಸುತ್ತಿದೆ. ಮೇಲುಕೋಟೆಯು ಸಮುದ್ರಮಟ್ಟಕ್ಕಿಂತ ಸುಮಾರು ೩ ಸಾವಿರ ಅಡಿಗಳ ಎತ್ತರದ ಬೆಟ್ಟದ ಮೇಲೆ ಒಳ್ಳೆಯ ಪ್ರಕೃತಿ ರಮ್ಯತೆಯಿಂದ ಕೂಡಿ ದಿನವೂ ಅಕ ಸಂಖ್ಯೆಯಲ್ಲಿ ಯಾತ್ರಾರ್ಥಿಗಳನ್ನು ಆಕರ್ಷಿಸುತ್ತಿದೆ. ಇಲ್ಲಿಯ ಆರಾಧ್ಯದೇವತೆ ಶ್ರೀ ಚೆಲುವನಾರಾಯಣ. ಕೃತಯುಗದಲ್ಲಿ  ವೇದಾದ್ರಿಯೆಂದೂ, ತ್ರೇತಾಯುಗದಲ್ಲಿ ನಾರಾಯಣಾದ್ರಿ ಎಂದೂ, ದ್ವಾಪರ ಯುಗದಲ್ಲಿ ಶ್ರೀಕೃಷ್ಣ ಬಲರಾಮರಿಂದ ಪೂಜೆಗೊಂಡು ಯಾದವಾದ್ರಿಯೆಂದೂ, ಕಲಿಯುಗದಲ್ಲಿ ಯತಿಶ್ರೇಷ್ಠರಾದ ಆಚಾರ್‍ಯ ರಾಮಾನುಜರಿಂದ ಜೀರ್ಣೋದ್ಧಾರಗೊಂಡ ಈ ಮೇಲುಕೋಟೆಯು ಯತಿಶೈಲವೆಂದೂ, ಎಲ್ಲಾ ಯುಗದಲ್ಲೂ ದಕ್ಷಿಣ ಬದರಿ ಕ್ಷೇತ್ರವೆಂದೂ ಪ್ರಸಿದ್ಧವಾಗಿದೆ. ಮೈಸೂರು-ನಾಗಮಂಗಲ ಮಾರ್ಗದಲ್ಲಿ ಜಕ್ಕನಹಳ್ಳಿಯಿಂದ ಪಶ್ಚಿಮಕ್ಕೆ ೭ ಕಿ.ಮೀ. ಅಂತರದಲ್ಲಿ ಈ ಕ್ಷೇತ್ರ ಸಿಗುತ್ತದೆ.

ಸ್ಥಳ ಪುರಾಣ :

ಆದಿಕಾಲದಲ್ಲಿ ಭಗವಂತನು ತನ್ನ ನಾಭಿ ಕಮಲದಲ್ಲಿ ಬ್ರಹ್ಮನನ್ನು ಸೃಷ್ಟಿಸಿ, ಅವನಿಗೆ ಸಕಲವೇದಗಳನ್ನೂ ಉಪದೇಶಿಸಿ, ಜಗತ್ಸೃಷ್ಟಿ ಮಾಡುವಂತೆ ಆಜ್ಞಾಪಿಸಿದನು.

ಭಗವಂತನ ಆಜ್ಞೆಯಂತೆ ಜಗತ್ಸೃಷ್ಟಿ ಮಾಡಲು ತೊಡಗಿದ ಬ್ರಹ್ಮನಿಗೆ ಜಗತ್ತನ್ನು ಹೇಗೆ ಸೃಷ್ಟಿ ಮಾಡಬೇಕೆಂದು ತಿಳಿಯದೆ ಕೊನೆಗೆ ಪರಮಾತ್ಮನನ್ನು ಧ್ಯಾನಿಸಿದನು.

ಆಗ ಪರಮಾತ್ಮನು ಪ್ರತ್ಯಕ್ಷನಾಗಿ ತನ್ನನ್ನು ಕುರಿತು ತಪಸ್ಸು ಮಾಡಲು ಕಾರಣವೇನೆಂದು ಕೇಳಿದನು:

ಆಗ ಬ್ರಹ್ಮನು, “ಸ್ವಾಮೀ, ನೀನೇನೋ ಜಗತ್ಸೃಷ್ಟಿ ಮಾಡೆಂದು ಆಜ್ಞಾಪಿಸಿದೆ. ಇದಕ್ಕೆ ಉಪಾಯವೊಂದನ್ನೂ ನಾನು ಕಾಣೆ. ಸೃಷ್ಟಿ ಸ್ಥಿತಿ ಸಂಹಾರಗಳೆಲ್ಲವೂ ನಿನ್ನ ಅನ. ನಿನ್ನ ಅನುಗ್ರಹವಿಲ್ಲದೆ ನನಗೆ ಸೃಷ್ಟಿಸುವ ಸಾಮರ್ಥ್ಯ ಎಲ್ಲಿಂದ ಬರುವುದು? ಇದಕ್ಕೆ ಮಾರ್ಗವನ್ನು ನೀನೇ ಉಪದೇಶಿಸಬೇಕು” ಎಂದು ಬೇಡಿದನು.

ಚತುರ್ಮುಖನ ಪ್ರಾರ್ಥನೆಯಂತೆ ಪರಮಾತ್ಮನು ಅವನಿಗೆ ಸರ್‍ವಮಂತ್ರಗಳಲ್ಲಿ ಶ್ರೇಷ್ಠವಾದ “ಅಷ್ಟಾಕ್ಷರ ಮಂತ್ರ”ವನ್ನು ಉಪದೇಶಿಸಿ ಈ ಮಂತ್ರದ ಪ್ರಭಾವದಿಂದ ನಿನಗೆ ಪ್ರಪಂಚವನ್ನು ಸೃಷ್ಟಿಸುವ ಶಕ್ತಿಯುಂಟಾಗುವುದು. ಈ ಮಂತ್ರವನ್ನು ಜಪಿಸಿದರೆ ನಾನೇ ಪ್ರತ್ಯಕ್ಷನಾಗುವೆನೆಂದು ಹೇಳಿ ಮಂತ್ರದ ಮಹಿಮೆಯನ್ನು ವಿವರಿಸಿ ಅಂತರ್ಧಾನನಾದನು.

ಪರಮಾತ್ಮನ ಅಪ್ಪಣೆಯಂತೆ ಚತುರ್ಮುಖನು ಅಷ್ಟಾಕ್ಷರ ಮಂತ್ರವನ್ನು ಜಪಿಸಲು ಕೋಟಿಸೂರ್‍ಯಸಮಪ್ರಭನಾಗಿ, ಅನಂತ ಗರುಡ ವಿಷ್ವಕ್ಸೇನ ಸಹಿತನಾಗಿ, ಶ್ರೀಮಹಾಲಕ್ಷ್ಮಿಯೊಡಗೂಡಿ, ಪಾಂಚಜನ್ಯ ಸುದರ್ಶನಾದಿ ಪಂಚಾಯುಧಧಾರಿಯಾಗಿ, ಸರ್‍ವಾಲಂಕಾರ ಭೂಷಿತನಾಗಿ ದೇವತಾ ಸಮೂಹದೊಡನೆ ಶ್ರೀಮನ್ನಾರಾಯಣನು ಪ್ರತ್ಯಕ್ಷನಾದನು.

ಬಲಗೈಯಲ್ಲಿ ಅಭಯಮುದ್ರೆಯನ್ನೂ, ಸೊಂಟದವರೆಗೆ ಬಗ್ಗಿದ ಎಡಗೈಯಲ್ಲಿ ಗದಾಯುಧವನ್ನೂ ಬಲಗೈಯಲ್ಲಿ ಚಕ್ರವನ್ನೂ, ಶಂಖವನ್ನೂ ಧರಿಸಿರುವ ನಾರಾಯಣ ಮೂರ್ತಿಯನ್ನು ಆನಂದಮಯ ವಿಮಾನ ಮಧ್ಯದಲ್ಲಿ ದರ್ಶನಮಾಡಿ ಆನಂದಭರಿತನಾದ ಚತುರ್ಮುಖನು ಪ್ರದಕ್ಷಿಣೆ ನಮಸ್ಕಾರಾದಿಗಳನ್ನು ಮಾಡಿ ಭಗವಂತನನ್ನು ನಾನಾ ವಿಧದಲ್ಲಿ ಸ್ತುತಿಸಿದನು.

ಹೀಗೆ ಬ್ರಹ್ಮನಿಂದ ಸ್ತುತಿಸಲ್ಪಟ್ಟ ನಾರಾಯಣನು, “ಚತುರ್ಮುಖ! ನೀನು ನನ್ನನ್ನು ಕುರಿತು ತಪಸ್ಸು ಮಾಡಿದೆ, ಇದರಿಂದ ನಾನು ಸಂತುಷ್ಟನಾಗಿರುವೆನು. ನಿನ್ನ ಈ ಸತ್ಯಲೋಕದಲ್ಲಿ ನನ್ನನ್ನು ಅನೇಕ ಯುಗ ಪರ್‍ಯಂತ ಆರಾಸು, ಮುಂದೆ ಒಂದು ಕಾಲದಲ್ಲಿ ನಾನು ಭೂಲೋಕದಲ್ಲಿ ಸಾನ್ನಿಧ್ಯ ಮಾಡುವೆ” ಎಂದು ಹೇಳಿದ. ಅದರಂತೆಯೇ ಅನೇಕ ಯುಗ ಪರ್‍ಯಂತ ಸತ್ಯ ಲೋಕದಲ್ಲಿ ಬ್ರಹ್ಮನಿಂದ ಆರಾಸಲ್ಪಡುತ್ತಿದ್ದನು.

ಭೂಲೋಕದಲ್ಲಿ  ತಿರುನಾರಾಯಣನ ಪ್ರತಿಷ್ಠಾಪನೆ

ಬಹುಕಾಲ ಹೀಗೆಯೇ ಕಳೆಯಿತು. ಕ್ಷೀರ ಸಾಗರದಲ್ಲಿ ವಾಸಿಸುತ್ತಿದ್ದ ಸನತ್ಕುಮಾರ ಮುನಿಯು ಸತ್ಯಲೋಕಕ್ಕೆ ಹೋಗಿದ್ದಾಗ ಸರ್ವಾಂಗ ಸುಂದರನಾದ ಶ್ರೀಮನ್ನಾರಾಯಣನ ಮೂರ್ತಿಯನ್ನು ದರ್ಶನ ಮಾಡಿ ಆನಂದಭರಿತನಾಗಿ ತಂದೆಯಾದ ಬ್ರಹ್ಮನನ್ನು ಕುರಿತು, “ತಂದೆಯೇ! ನಿನ್ನಿಂದ ಆರಾಸಲ್ಪಡುತ್ತಿರುವ ಈ ನಾರಾಯಣ ಮೂರ್ತಿಯನ್ನು ನನಗೆ ಕರುಣಿಸಿಕೊಡು. ಇಷ್ಟು ಕಾಲವೂ ನೀನು ಆರಾಸಿದ್ದೀಯೆ. ಇನ್ನು ಮುಂದೆ ನಾನು ಆರಾಸುವೆನು. ನೀನೇ ನನಗೆ ತಂದೆ ಹಾಗೂ ಗುರು ಮತ್ತು ಹಿತಚಿಂತಕನಾಗಿರುವೆ. ಆದುದರಿಂದ ಈ ಮೂರ್ತಿಯನ್ನು ನನಗೆ ಪೂಜಿಸಲು ಕೊಡು” ಎಂದು ಬೇಡಿದನು.

ತನ್ನ ಆರಾಧ್ಯ ದೇವತೆಯಾದ ನಾರಾಯಣನನ್ನು ಸನತ್ಕುಮಾರನಿಗೆ ಕೊಟ್ಟು, “ಅವನ ಅಗಲಿಕೆಯನ್ನು ಹೇಗೆ ಸಹಿಸುವುದು?” ಎಂದು ಬ್ರಹ್ಮನು ಚಿಂತಾಕ್ರಾಂತನಾದನು.

ಚತುರ್ಮುಖನ ದುಃಖವನ್ನು ನೋಡಿ ನಾರಾಯಣನು, “ಬ್ರಹ್ಮನೇ, ಇದಕ್ಕಾಗಿ ಏಕೆ ಚಿಂತಿಸುವೆ? ಆರಾಧನೆ ಮಾಡಲು ನಿನಗೆ ಬೇರೊಂದು ಅರ್ಚಾಮೂರ್ತಿಯನ್ನು ಕೊಡುವೆನು ನನ್ನನ್ನು ಸನತ್ಕುಮಾರನಿಗೆ ಕೊಡು. ನನ್ನನ್ನು ದರ್ಶನ ಮಾಡಬೇಕೆಂದು ಮುನಿಗಳು ಬಹುಕಾಲದಿಂದ ತಪಸ್ಸು ಮಾಡುತ್ತಿದ್ದಾರೆ. ಸನತ್ಕುಮಾರನು ನನ್ನನ್ನು ಭೂಲೋಕದಲ್ಲಿ “ಪದ್ಮಕೂಟ” ಪರ್ವತದಲ್ಲಿ (ಯದುಗಿರಿಯಲ್ಲಿ) ಪ್ರತಿಷ್ಠಾಪಿಸಲಿ! ಇದೋ, ತೆಗೆದುಕೋ!” ಎಂದು ಹೇಳಿ ತನ್ನ ಹೃದಯದಿಂದ ಉಂಟಾದ ಶ್ರೀ ಭೂ ಸಹಿತನಾದ ಉತ್ಸವ (ಚೆಲುವರಾಯ) ಮೂರ್ತಿಯನ್ನು ಬ್ರಹ್ಮನಿಗೆ ಕೊಟ್ಟನು.

ಭಗವಂತನು, “ಪರಮ ಪವಿತ್ರವಾದ  ಯದುಗಿರಿಯಲ್ಲಿ ಅನೇಕ ಕಾಲದಿಂದ ಋಷಿಗಳು ತಪಸ್ಸು ಮಾಡುತ್ತಾ ನಾರಾಯಣಮೂರ್ತಿಯ ಆಗಮನವನ್ನು ನಿರೀಕ್ಷಿಸುತ್ತಿದ್ದಾರೆ. ನಾರಾಯಣ ವಿಗ್ರಹವನ್ನು ಈ ಗಿರಿಧಾಮದಲ್ಲಿ ಪ್ರತಿಷ್ಠಾಪಿಸಿ ಆರಾಸು”  ಎಂದು ಹೇಳಿ ಮೂರ್ತಿಯನ್ನು ಸನತ್ಕುಮಾರನಿಗೆ ಕೊಟ್ಟನು.

ಅವನ ಆಜ್ಞೆಯಂತೆ ಸನತ್ಕುಮಾರನು ವಿಗ್ರಹವನ್ನು ತಂದು ಮೀನಮಾಸದ ಹಸ್ತ ನಕ್ಷತ್ರ ಪೂರ್ಣಿಮೆಯಂದು ಈ ಕ್ಷೇತ್ರದಲ್ಲಿ ಪ್ರತಿಷ್ಠಾಪಿಸಿದನು. ಇದರ ಜ್ಞಾಪಕಾರ್ಥವಾಗಿಯೇ ಈ ಕ್ಷೇತ್ರದಲ್ಲಿ ಶ್ರೀ ನಾರಾಯಣ ಸ್ವಾಮಿಯ ಜಯಂತಿಯನ್ನು ಮೀನ ಮಾಸ ಹಸ್ತ ನಕ್ಷತ್ರದಂದು ಗೊತ್ತು ಮಾಡಿದ್ದಾರೆ. ಅಂದು ಅವಭೃತ ಉತ್ಸವವಾಗುತ್ತದೆ.

‘ರಾಮಪ್ರಿಯ’ ಚೆಲುವರಾಯ

ರಾಮನು ರಾವಣನನ್ನು ಕೊಂದು ಸೀತಾಸಮೇತನಾಗಿ ಲಂಕೆಯಲ್ಲಿ ವಿಭೀಷಣನಿಗೆ ಪಟ್ಟವನ್ನು ಕಟ್ಟಿ, ಅಯೋಧ್ಯೆಗೆ ಹಿಂತಿರುಗಿ ಪಟ್ಟಾಭಿಷಿಕ್ತನಾದನು. ಪರಮಭಾಗವತ್ತೋಮನಾದ ವಿಭೀಷಣನಿಗೆ ತನ್ನ ಆರಾಧ್ಯದೇವತೆಯಾದ ಶ್ರೀರಂಗನಾಥನನ್ನು ಕುಲಧನವನ್ನಾಗಿ ಕೊಟ್ಟನು.

ಶ್ರೀ ರಂಗನಾಥನನ್ನು ವಿಭೀಷಣನಿಗೆ ಕೊಟ್ಟ ಅನಂತರ ತನಗೆ ಆರಾಧನೆಗೆ ವಿಗ್ರಹವಿಲ್ಲವಲ್ಲಾ ಎಂದು ಯೋಚಿಸುತ್ತಿರುವಾಗ ಬ್ರಹ್ಮನು ಪ್ರತ್ಯಕ್ಷನಾಗಿ ಹಿಂದೆ ತನಗೆ ನಾರಾಯಣ ಹೃದಯದಿಂದ ಎತ್ತಿ ಕೊಟ್ಟ ಉತ್ಸವ ಮೂರ್ತಿ ಚೆಲುವರಾಯಸ್ವಾಮಿಯನ್ನು ಶ್ರೀದೇವಿ ಭೂದೇವಿಯರೊಡನೆ ಶ್ರೀರಾಮನಿಗೆ ಒಪ್ಪಿಸಿದನು. ಶ್ರೀರಾಮನೂ ಮೂರ್ತಿಯನ್ನು ಆರಾಸುತ್ತಿದ್ದನು. ಆದುದರಿಂದಲೇ ಈ ಮೂರ್ತಿಗೆ “ರಾಮಪ್ರಿಯ” ಎಂದು ಹೆಸರಾಯಿತು. ಮತ್ತೆ ಕಾಲಕ್ರಮದಲ್ಲಿ ರಾಮನ ಪುತ್ರನಾದ ಕುಶಮಹಾರಾಜನೂ ಆರಾಸುತ್ತಿದ್ದನು.

ಶ್ರೀಕೃಷ್ಣನಿಂದ ಚೆಲುವರಾಯ ಉತ್ಸವ ಮೂರ್ತಿಯ ಪೂಜೆ

ಕುಶನು ತನ್ನ ಮಗಳಾದ ಕನಕಮಾಲಿನಿಯನ್ನು ಯದುವಂಶದ ಯದುಶೇಖರ ಮಹಾರಾಜನಿಗೆ ವಿವಾಹ ಮಾಡಿಕೊಟ್ಟು, ಈ ರಾಮಪ್ರಿಯ ಮೂರ್ತಿಯನ್ನು ಮಗಳಿಗೆ ಬಳುವಳಿಯಾಗಿ ಕೊಟ್ಟನು. ಹೀಗೆ ಸೂರ್‍ಯವಂಶಿಯನಾದ ಶ್ರೀರಾಮನ ಆರಾಧ್ಯದೇವತೆ ಶ್ರೀ ಚೆಲುವರಾಯ ಮೂರ್ತಿಯು ಯದುವಂಶದ ರಾಜರಿಂದಲೂ ಆರಾಸಲ್ಪಡುತ್ತಿದ್ದಿತು. ಅನಂತರ ಕ್ರಮವಾಗಿ ಶ್ರೀಕೃಷ್ಣನೂ ಈ ಮೂರ್ತಿಯನ್ನೇ ಪೂಜಿಸುತ್ತಿದ್ದನು.

ವೈರಮುಡಿ

ಒಂದು ಕಾಲದಲ್ಲಿ ಕ್ಷೀರಾಬ್ಧಿನಾಥನು ತಲೆಯಲ್ಲಿ ಧರಿಸಿದ್ದ ವಜ್ರಕಿರೀಟವನ್ನು ವಿರೋಚನನೆಂಬ ರಾಕ್ಷಸನು ಅಪಹರಿಸಿಕೊಂಡು ಹೋದನು. ವಿನತಾಸುತನಾದ ಗರುಡನು ರಾಕ್ಷಸನೊಡನೆ ಹೋರಾಡಿ, ವಜ್ರ ಕಿರೀಟವನ್ನು ತಂದು ಶ್ರೀಕೃಷ್ಣನಿಗೆ ಒಪ್ಪಿಸಿದನು. ಕೃಷ್ಣನು ಆ ಕಿರೀಟವನ್ನು ತನ್ನಲ್ಲಿದ್ದ ಚಲುವರಾಯ ಮೂರ್ತಿಗೆ ಧರಿಸಿ ವೈರಮುಡಿ ಉತ್ಸವವನ್ನು ವೈಭವದಿಂದ ನಡೆಸಿದನು. ಇದನ್ನೇ ಇಂದೂ ನಾವು ಬ್ರಹ್ಮೋತ್ಸವದ ನಾಲ್ಕನೆಯ ದಿನದಂದು ದರ್ಶನ ಮಾಡುತ್ತಿದ್ದೇವೆ.

ಯಾದವಾದ್ರಿಗೆ ಆಗಮನ

ಒಂದು ಸಮಯದಲ್ಲಿ ಬಲರಾಮನು ತೀರ್ಥಯಾತ್ರೆ ಮಾಡುತ್ತಾ ಈ ಯದುಗಿರಿಗೆ ಬಂದು ಶ್ರೀಮನ್ನಾರಾಯಣನನ್ನು ಸಂದರ್ಶಿಸಿ ಆಶ್ಚರ್‍ಯಚಕಿತನಾಗಿ ಸ್ವಾಮಿಯನ್ನು ಆರಾಸುತ್ತಾ ಆನಂದಪರವಶನಾಗಿ ತಿರುನಾರಾಯಣನನ್ನು ಸ್ತುತಿಸಿದನು.

ಬಲರಾಮನ ಸ್ತುತಿಯಿಂದ ಹೃಷ್ಟನಾದ ನಾರಾಯಣನು, “ಬಲಭದ್ರ! ನೀನು ನನ್ನನ್ನು ಚೆನ್ನಾಗಿ ಆರಾಸಿರುವೆ. ಕೃಷ್ಣನ ಮನೆಯಲ್ಲಿ ರಾಮಪ್ರಿಯ ಮೂರ್ತಿಯು ಶ್ರೀ ಭೂ ಸಮೇತನಾಗಿ ಪೂಜಿಸಲ್ಪಡುತ್ತಿವೆ. ಈ ಮೂರ್ತಿಯನ್ನು ತಂದು ಇಲ್ಲಿ ಉತ್ಸವಮೂರ್ತಿಯನ್ನಾಗಿ ಸ್ಥಾಪಿಸು. ಇದರಿಂದ ನನಗೆ ತೃಪ್ತಿಯಾಗುವುದು” ಎಂದು ಹೇಳಿದನು. ಸ್ವಾಮಿಯ ಅಪ್ಪಣೆಯನ್ನು ಶಿರಸಾವಹಿಸಿ ಬಲದೇವನು ಹಿಂದಿರುಗಿ ತಮ್ಮನಾದ ಕೃಷ್ಣನಿಗೆ ವೃತ್ತಾಂತವನ್ನೆಲ್ಲಾ ವಿವರಿಸಿದನು. ಶ್ರೀಕೃಷ್ಣನೂ ಈ ವಿಷಯವನ್ನು ಕೇಳಿ ಆಶ್ಚರ್‍ಯಚಕಿತನಾದನು. ಅನಂತರ ಕೃಷ್ಣ ಬಲರಾಮರಿಬ್ಬರೂ ಚೆಲುವರಾಯ ಮೂರ್ತಿಯನ್ನು ಶ್ರೀ ಭೂದೇವಿಯರೊಡನೆ ಪಲ್ಲಕ್ಕಿಯಲ್ಲಿ ತಂದು ಮೀನ ಮಾಸ ಚಿತ್ತಾ ನಕ್ಷತ್ರದಂದು ಸನ್ನಿಯಲ್ಲಿ ಪ್ರತಿಷ್ಠಾಪಿಸಿದರು.

ಯತಿಶೈಲ

ಮೇಲೆ ಹೇಳಿದ ವೃತ್ತಾಂತಗಳೆಲ್ಲವೂ ಕೃತ,ತ್ರೇತಾ ಮತ್ತು ದ್ವಾಪರ ಯುಗಕ್ಕೆ ಸಂಬಂಸಿದವು. ಮೂರು ಯುಗಗಳು ಕಳೆದು ನಾಲ್ಕನೆಯ ಕಲಿಯುಗ ಬಂದಿತು. ಅನೇಕ ರಾಜ ಮಹಾರಾಜರೂ, ಭಕ್ತಾಗ್ರಣಿಗಳೂ ಇಲ್ಲಿ ಭಗವದಾರಾಧನೆ ಮಾಡುತ್ತಿದ್ದರು. ಒಂದು ಕಾಲದಲ್ಲಿ ಊರೆಲ್ಲವೂ ಪಾಳು ಬಿದ್ದು ವಾಸಕ್ಕೆ ಅವಕಾಶವಿಲ್ಲದಿರಲು ಶ್ರೀನಾರಾಯಣಮೂರ್ತಿಯ ಮೇಲೆ ದೊಡ್ಡ ಹುತ್ತವೇ ಬೆಳೆಯಿತು. ನಿತ್ಯಾರಾಧನೆಗೆ ಅವಕಾಶವಿರಲಿಲ್ಲ.

ಶ್ರೀರಂಗಕ್ಷೇತ್ರದಲ್ಲಿ ವಾಸಿಸುತ್ತಿದ್ದ  ಆಚಾರ್ಯ ರಾಮಾನುಜರಿಗೆ ಚೋಳರಾಜನ ಬಾಧೆ ಅಕವಾಯಿತು. ಶೈವ, ವೈಷ್ಣವ ಕಲಹ, ಉಲ್ಬಣ ಸ್ಥಿತಿಗೆ ಬಂದಾಗ ರಾಮಾನುಜರು ಶ್ರೀರಂಗವನ್ನು ಬಲಾತ್ಕಾರವಾಗಿ ಬಿಡಬೇಕಾಗಿ ಬಂದಿತು. ನಮ್ಮಗಳ ಪುಣ್ಯವಿಶೇಷದಿಂದ ಅವರು ಈ ಕ್ಷೇತ್ರಕ್ಕೆ ಬರುವಂತಾಯಿತು. ಸತ್ಯಮಂಗಲದ ಮಾರ್ಗವಾಗಿ ತೊಂಡನೂರಿಗೆ ಆಚಾರ್‍ಯರು ಬಂದರು. ಅಲ್ಲಿ ಆದಿಶೇಷಾವತಾರ ಮಾಡಿ ಸಾವಿರ ಬಾಯಿಗಳಿಂದಲೂ ಏಕಕಾಲದಲ್ಲಿ ಸಾವಿರಾರು ಮಂದಿ ಜೈನರೊಡನೆ ವಾದಮಾಡಿ ಅವರೆಲ್ಲರನ್ನೂ ಜಯಿಸಿದರು. ಜೈನರಾಜನಾದ ಬಿಟ್ಟಿದೇವನ ಮಗಳಿಗೆ ಹಿಡಿದಿದ್ದ ಪಿಶಾಚಿಯನ್ನು ಬಿಡಿಸಿದರು. ಇವರ ಪ್ರಭಾವಕ್ಕೊಳಗಾದ ಜೈನರಾಜ ಬಿಟ್ಟಿದೇವ ವೈಷ್ಣವನಾಗಿ ‘ವಿಷ್ಣುವರ್ಧನ’ನಾದನು.

ರಾಮಾನುಜರಿಗೆ ಒಂದು ದಿನ ಸ್ವಪ್ನದಲ್ಲಿ ಶ್ರೀನಾರಾಯಣಸ್ವಾಮಿಯ ದರ್ಶನವಾಯಿತು. ಶ್ರೀ ಯಾದವಾದ್ರಿಗೆ ಬಂದು ತನ್ನನ್ನು ಜೀರ್ಣೋದ್ಧಾರ ಮಾಡಬೇಕೆಂದು (ಹುತ್ತವನ್ನು ಕರಗಿಸಿ ಪ್ರಕಾಶಪಡಿಸಬೇಕೆಂದು)ಸ್ವಾಮಿಯ ಆಜ್ಞೆಯಾಯಿತು. ಮರುದಿನವೇ ರಾಜನಿಗೆ ಹೇಳಿ ಅವನ ಸಹಾಯದಿಂದಲೇ ತೊಂಡನೂರಿನಿಂದ ಮೇಲುಕೋಟೆಗೆ ರಸ್ತೆಯನ್ನು ಮಾಡಿಸಿ, ಬಹುಧಾನ್ಯ ಸಂವತ್ಸರ ಮಕರ ಮಾಸ ಪುನರ್ವಸು ನಕ್ಷತ್ರದಂದು ತುಳಸೀವನದ ನಡುವೆ ಇದ್ದ ಹುತ್ತವನ್ನು ಕರಗಿಸಿ, ಒಳಗೆ ಮರೆಯಾಗಿದ್ದ ನಾರಾಯಣಮೂರ್ತಿಯನ್ನು ಪ್ರಕಾಶಪಡಿಸಿ, ತಾವೇ ೩ ದಿನ ಆರಾಧನೆ ಮಾಡಿದರು. ನಂತರ ಶ್ರೀರಂಗ ಕ್ಷೇತ್ರದಿಂದ ಅರ್ಚಕರನ್ನು ಕರೆಸಿ ಶ್ರೀ ಪಾಂಚರಾತ್ರಾಗಮದ ಈಶ್ವರ ಸಂಹಿತೆಯಲ್ಲಿ ಹೇಳಿರುವ ರೀತಿಯಲ್ಲಿ ನಿತ್ಯೋತ್ಸವಾದಿ ಸಕಲ ಉತ್ಸವಗಳಿಗೂ ವ್ಯವಸ್ಥೆ ಮಾಡಿದರು.

ದೆಹಲಿಯಿಂದ ‘ರಾಮಪ್ರಿಯ’ ಚೆಲುವರಾಯನ ಪುನರಾಗಮನ

ರಾಮಾನುಜರು ಇಲ್ಲಿಗೆ ಬರುವುದಕ್ಕೆ ಮೊದಲೇ ಮಹಮದೀಯ ದೊರೆಗಳನೇಕರು ಈ ಪ್ರಾಂತ್ಯದಲ್ಲಿ ಕೊಳ್ಳೆ ಹೊಡೆಯುತ್ತಿದ್ದು ಇಲ್ಲಿನ ರಾಮಪ್ರಿಯ ಚೆಲುವರಾಯ ಮೂರ್ತಿಯನ್ನು ಅಪಹರಿಸಿಕೊಂಡು ಹೋಗಿದ್ದರು. ಹೀಗೆ ಈ ಮೂರ್ತಿ ದೆಹಲಿಯಲ್ಲಿ ಮುಸಲ್ಮಾನ ಅರಸನ ಅರಮನೆಯನ್ನು ಸೇರಿತ್ತು. ರಾಜನ ಮಗಳು ಈ ವಿಗ್ರಹವನ್ನು ಅಂತಃಪುರದಲ್ಲಿಟ್ಟುಕೊಂಡು  ಆಡುತ್ತಿದ್ದಳು.

ಇತ್ತ ರಾಮಾನುಜರು ಉತ್ಸವಮೂರ್ತಿಯಿಲ್ಲದೆ ಚಿಂತಿಸುತ್ತಿರುವಲ್ಲಿ ಸ್ವಪ್ನದಲ್ಲಿ ಸ್ವಾಮಿಯ ಆಜ್ಞೆಯಾಯಿತು. ತಾನು ದೆಹಲಿಯ ಅರಸರ ಮಗಳ ಅಂತಃಪುರದಲ್ಲಿರುವುದಾಗಿಯೂ ಅಲ್ಲಿಂದ ತಂದು ಇಲ್ಲಿ ತನ್ನನ್ನು ಸ್ಥಾಪಿಸಬೇಕೆಂದೂ ಭಗವಂತನು ನುಡಿದನು. ಕೂಡಲೇ ರಾಮಾನುಜರು ದೆಹಲಿಗೆ ಹೋಗಿ ಅರಸನನ್ನು ಕೇಳಲು ತನ್ನಲ್ಲಿರುವ ವಿಗ್ರಹಗಳನ್ನು ತೋರಿಸಿ ಆಚಾರ್‍ಯರಿಗೆ ಬೇಕಾದ ವಿಗ್ರಹವನ್ನು ಆರಿಸಿಕೊಳ್ಳುವಂತೆ ಆಜ್ಞೆಯಿತ್ತನು. ರಾಜಕುಮಾರಿಯ ಅಂತಃಪುರದಲ್ಲಿರುವುದಾಗಿ ತಿಳಿಯಿತು.

ಆಗ ಶ್ರೀ ರಾಮಾನುಜರು “ಎನ್ ಶೆಲ್ವಪಿಳ್ಳೆಯೇ ವಾರಾಯ್” (ನನ್ನ ಚೆಲುವರಾಯನೇ ಬಾ) ಎಂದು ಕರೆದರು. ತಂದೆಯ ಕರೆಗೆ ಓಗೊಟ್ಟು ಮಗುವು ಬರುವಂತೆ ಚೆಲುವರಾಯಸ್ವಾಮಿಯು ದಿವ್ಯಾಲಂಕಾರಾಲಂಕೃತನಾಗಿ ಒಬ್ಬ ಬಾಲಕನಂತೆ ಪುಟ್ಟ ಪುಟ್ಟ ಹೆಜ್ಜೆಯಿಡುತ್ತಾ ಬಂದು ರಾಮಾನುಜರ ಮಡಿಯಲ್ಲಿ ಕುಳಿತು ಕೊಂಡನು! ಈ ಸನ್ನಿವೇಶವನ್ನು ಕಂಡ ಮುಸಲ್ಮಾನ ದೊರೆ ತನ್ನನ್ನು ತಾನೇ ಮರೆತು ರಾಮಾನುಜರ ಪ್ರಭಾವವನ್ನು ಕಂಡು ಆಶ್ಚರ್‍ಯ ಚಕಿತನಾದನು. ರಾಜಕುಮಾರಿಯು ವಿಯಿಲ್ಲದೆ ಮೂರ್ತಿಯನ್ನು ಕೊಡಲೊಪ್ಪಿ ತಾನೂ ಜೊತೆಯಲ್ಲಿಯೇ ಹೊರಡಲು ತೀರ್ಮಾನಿಸಿದಳು.

ಆಚಾರ್‍ಯರು ಬಹಳ ಸಂತೋಷದಿಂದ ಚೆಲುವರಾಯ ಮೂರ್ತಿಯನ್ನು ಕುಂಭಮಾಸ ಜ್ಯೇಷ್ಠಾ ನಕ್ಷತ್ರ ದಿವಸ ಇಲ್ಲಿ ಪ್ರತಿಷ್ಠಾಪಿಸಿ ಉತ್ಸವಗಳನ್ನು ನಡೆಸಿದರು.

ಶ್ರೀನರಸಿಂಹಸ್ವಾಮಿ ದೇವಾಲಯ

ಪುರಾತನ ಕಾಲದಲ್ಲಿ ವಿಷ್ಣುಭಕ್ತನಾದ ಪ್ರಹ್ಲಾದನು ಶ್ರೀನೃಸಿಂಹನನ್ನು ಪ್ರತ್ಯಕ್ಷದಲ್ಲಿ ಸಂದರ್ಶಿಸಿದನಾದರೂ, ಅರ್ಚಾಮೂರ್ತಿಯನ್ನು ಪ್ರತಿಷ್ಠಾಪಿಸಿ ನಿತ್ಯಾರಾಧನೆ ಮಾಡಬೇಕೆಂದು ಬಯಸಿ, ಅದಕ್ಕೆ ಸರಿಯಾದ ಸ್ಥಳವನ್ನು ಹುಡುಕುತ್ತಾ ಈ ಯಾದವಗಿರಿಗೆ ಬಂದು, ಇಲ್ಲಿನ ಪ್ರಕೃತಿ ಸೌಂದರ್‍ಯವನ್ನು ಕಂಡು ಆನಂದಿಸಿ, ಇದಕ್ಕಿಂತ ಉತ್ತಮವಾದ ಸ್ಥಳ ಬೇರೊಂದಿಲ್ಲವೆಂದು ನಿರ್ಣಯಿಸಿ, ಕಲ್ಯಾಣಿಯಲ್ಲಿ ಸ್ನಾನಮಾಡಿ, ಊರ್ಧ್ವಪುಂಡ್ರ ನಾಮವನ್ನು ಧರಿಸಿ ಪಕ್ಕದಲ್ಲಿರುವ ಬೆಟ್ಟದ ಮೇಲೆ ನಿಯಮಪೂರ್‍ವಕವಾಗಿ ಧ್ಯಾನಿಸಲು ಶ್ರೀ ನೃಸಿಂಹಸ್ವಾಮಿ ಪ್ರತ್ಯಕ್ಷನಾದನು.

ಶ್ರೀ ನರಸಿಂಹಸ್ವಾಮಿಯು, “ಪ್ರಹ್ಲಾದ, ನಿನ್ನ ಅಚಲವಾದ ಭಕ್ತಿಯಿಂದಲೂ, ತಪಸ್ಸಿನಿಂದಲೂ ನಾನು ಸಂತುಷ್ಟನಾಗಿರುವೆನು. ನಿನಗೆ ಬೇಕಾದ ವರವನ್ನು ಕೇಳು ಕೊಡುವೆನು” ಎಂದನು.

ಆಗ ಪ್ರಹ್ಲಾದನು ಕೈಜೋಡಿಸಿ – “ಸ್ವಾಮಿ ನೀನೇ ನನಗೆ ತಾಯಿ, ತಂದೆ, ಗುರು, ಬಂಧು, ಮಿತ್ರ, ವಿದ್ಯಾ, ಧನ ಎಲ್ಲವೂ ಆಗಿರುವೆ. ನೀನಲ್ಲದೆ ಮತ್ತಾರೂ ನನಗೆ ಹಿತವಿಲ್ಲ. ನಿನ್ನನ್ನಗಲಿ ಒಂದು ಕ್ಷಣ ಮಾತ್ರವೂ ಬದುಕಲಾರೆ. ಆದುದರಿಂದ ನಿರಂತರವಾಗಿ ನಿನ್ನ ಪಾದಸೇವೆ ಮಾಡುವ ಸೌಭಾಗ್ಯವೊಂದನ್ನು ಕರುಣಿಸಿದರೆ ಸಾಕು. ಅದರಿಂದಲೇ ನಾನು ಧನ್ಯನಾಗುವೆನು. ಇದಕ್ಕಿಂತ ಬೇರಾವ ಆಸೆಯೂ ನನಗಿಲ್ಲ. ಈ ಪರ್‍ವತದಲ್ಲಿ ನೀನು ನಿತ್ಯವಾಸ ಮಾಡುತ್ತಿದ್ದು ಭಕ್ತರೆಲ್ಲರ ಅಭೀಷ್ಟವೆಲ್ಲವನ್ನೂ ನೆರವೇರಿಸಿಕೊಡಬೇಕು” ಎಂದು ಪ್ರಾರ್ಥಿಸಿದನು. ಆರ್ತತ್ರಾಣ ಪರಾಯಣನಾದ ಶ್ರೀ ನೃಸಿಂಹನು ಪ್ರಹ್ಲಾದನ ಪ್ರಾರ್ಥನೆಯಂತೆ ಅವನನ್ನೂ ಇತರ ಭಕ್ತರನ್ನೂ ಅನುಗ್ರಹಿಸಲೆಂದೇ ಈ ಬೆಟ್ಟದ ಮೇಲೆ ನೆಲೆಸಿರುವನು. ಯಾರು ಈ ಯಾದವಾದ್ರಿಗೆ ಬಂದು ಶ್ರೀ ನಾರಾಯಣಮೂರ್ತಿಯನ್ನೂ ರಾಮಪ್ರಿಯ ಚೆಲುವರಾಯನನ್ನೂ ನೃಸಿಂಹಸ್ವಾಮಿಯನ್ನೂ ದರ್ಶನ ಮಾಡುವರೋ, ಪೂಜಿಸುವರೋ, ಸೇವೆಯನ್ನು ಮಾಡುವರೋ, ಪ್ರದಕ್ಷಿಣ ನಮಸ್ಕಾರಗಳನ್ನು ಮಾಡುವರೋ, ಅರ್ಚನೆ, ಅಭಿಷೇಕ ಮೊದಲಾದ ಕೈಂಕರ್‍ಯಗಳನ್ನು ಮಾಡುವರೋ ಅವರಿಗೆ ಭಗವಂತನು ಒಲಿದು ಅವರ ಸಕಲ ಅಭೀಷ್ಟವನ್ನೂ ಪೂರ್ತಿಮಾಡುತ್ತಾನೆ.

ಈ ಲೇಖನ ಶೇರ್ ಮಾಡಿ

ಹೊಸ ಪೋಸ್ಟ್‌ಗಳು