– ಪತಿತಪಾವನ ದಾಸ
ಲೇಖನ ಕೇಳಿ
ಸುವಾಸಿತ ಮರವು ತನ್ನ ಕಂಪನ್ನು ಇಡೀ ವನದಲ್ಲಿ ಹರಡುವಂತೆ, ಒಬ್ಬ ಸದ್ಗುಣಿಯಾದ ಪುತ್ರನು ಇಡೀ ಕುಟುಂಬವನ್ನು ಕೀರ್ತಿಗೊಳಿಸುವನು. ಆದರೆ ಒಂದು ಒಣಗಿದ ಮರವು ಬೆಂಕಿಯಿಂದ ಹೊತ್ತಿ ಉರಿದರೆ, ಅದು ಇಡೀ ವನವನ್ನೇ ದಹಿಸುತ್ತದೆ. ಹಾಗೆಯೇ ಒಬ್ಬ ಮೂರ್ಖ ಮಗನು ಇಡೀ ಕುಟುಂಬವನ್ನೇ ನಾಶಪಡಿಸುತ್ತಾನೆ.
ಚಾಣಕ್ಯನ ಈ ನುಡಿಮುತ್ತುಗಳು ನೆನಪಾಗಲು ಇತ್ತೀಚಿನ ಎರಡು ಪ್ರತ್ಯೇಕ ಘಟನೆಗಳೇ ಕಾರಣ. ಶ್ರೀಮಂತ ಪೋಷಕರಿಗೆ ಜನಿಸಿದ ಪುಂಡ, ಅಶಿಸ್ತಿನ ಪುತ್ರರ ಅಮಾನುಷ ವರ್ತನೆಯು ಕುಟುಂಬಕ್ಕೆ ಎಂತಹ ಅಪಕೀರ್ತಿಯನ್ನು ತಂದುಕೊಡುತ್ತದೆ ಎನ್ನುವುದಕ್ಕೆ ಸಾಕ್ಷಿ. ಹದಿಹರೆಯದವನು ಕುಡಿತದ ಅಮಲಿನಲ್ಲಿ ಕಾರು ಓಡಿಸಿ ಮುಗ್ಧರ ಸಾವಿಗೆ ಕಾರಣವಾದ ಪ್ರಕರಣ ಒಂದು. ಮತ್ತೊಂದು ಕಾನೂನು ನಿರೂಪಕನ ವೇಷಧಾರಿ ಕಾಮ ಪಿಪಾಸಿಯ ಕೃತ್ಯ. ನಿಜ, ಇವೆರಡೂ ಪ್ರಕರಣಗಳ ಬಗೆಗೆ ಈ ದೇಶದ ಕಾನೂನು ಕ್ರಮಗಳನ್ನು ಕೈಗೊಳ್ಳುತ್ತದೆ. ಆದರೆ ಇಂತಹ ಕುಪುತ್ರರ ಪೋಷಕರೇ ತಮ್ಮ ಮಕ್ಕಳನ್ನು ಅಕ್ರಮ ಮಾರ್ಗಗಳ ಮೂಲಕ ಕಾನೂನು ಕ್ರಮಗಳಿಂದ ರಕ್ಷಸಲು ಪ್ರಯತ್ನಿಸುತ್ತಾ ಸ್ವತಃ ಕಾನೂನಿನ ತೊಡಕಿಗೆ ಸಿಕ್ಕಿಕೊಳ್ಳುತ್ತಿರುವುದು ವಿಪರ್ಯಾಸ.
ಪ್ರಾಚೀನ ಕಾಲದಲ್ಲಿ ದುಷ್ಟ ಕಂಸನು ತನ್ನ ಜೀವವನ್ನು ಕಾಪಾಡಿಕೊಳ್ಳಲು ತನ್ನ ತಂದೆ ಮತ್ತು ಸೋದರಿಯನ್ನೇ ಸೆರೆಮನೆಗೆ ತಳ್ಳಿದ. ನಮ್ಮ ಈ ಆಧುನಿಕ ಕಂಸರು ತಮ್ಮ ಪಾಪ ಕೃತ್ಯಗಳಿಂದ ತಮ್ಮ ಕುಟುಂಬ ಸದಸ್ಯರನ್ನು ಜೈಲಿಗೆ ಅಟ್ಟುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಶ್ರೀ ಕೃಷ್ಣನಂತಹ ನಾಯಕರುಗಳು ನಮ್ಮ ಮುಂದೆ ಇದ್ದಾರೆ. ಅವನು ತನ್ನ ಮಾತಾಪಿತೃಗಳನ್ನು ಅಕ್ರಮ ಸೆರೆಮನೆ ವಾಸದಿಂದ ಬಿಡುಗಡೆ ಮಾಡಿ ಸುಪುತ್ರನಾಗಿದ್ದಾನೆ. ಹನುಮಾನ್ ಸೀತೆಯನ್ನು ರಾಕ್ಷಸ ರಾವಣನಿಂದ ರಕ್ಷಿಸಲು ನೆರವಾದನು. ಇವೆಲ್ಲಾ ಸಕಾರಾತ್ಮಕ ನಿದರ್ಶನಗಳು.
ಪುರಾತನ ಕಾಲದಲ್ಲಿ ಒಬ್ಬ ಕಂಸ, ಒಬ್ಬ ರಾವಣ ಇದ್ದರು. ಈಗ? ನೋಟ ಹರಿಸಿದರೆ ಕಂಸ, ರಾವಣರ ಮುಖಗಳನ್ನೇ ಹೆಚ್ಚಾಗಿ ಕಾಣಬಹುದು. ಪೋಷಕರನ್ನು ದೂಷಿಸೋಣವೇ? ಖಂಡಿತ. ಅದರ ಜೊತೆಗೆ ಶೈಕ್ಷಣಿಕ ಪದ್ಧತಿ, ಸಾಮಾಜಿಕ ಮತ್ತು ಇತರ ಮಾಧ್ಯಮಗಳು, ಒಟ್ಟಾರೆ ಸಮಾಜವನ್ನೇ ದೂಷಿಸಬೇಕಾಗುತ್ತದೆ. ಧಾರ್ಮಿಕ ಗ್ರಂಥಗಳ ಆದೇಶದಂತೆ ತಮ್ಮ ಪುತ್ರ ಅಥವಾ ಶಿಷ್ಯ ಅಥವಾ ಬಂಧುವನ್ನು ಹುಟ್ಟು ಸಾವಿನ ಚಕ್ರದಿಂದ ಕಾಪಾಡಲು ಸಾಧ್ಯವಾಗದವರು ತಂದೆ, ತಾಯಿ ಅಥವಾ ಶಿಕ್ಷಕ ಅಥವಾ ಬಂಧುವಾಗಬಾರದು. ಆದರೆ ಈ ಪುರಾತನ ಸಂಸ್ಕೃತಿಯನ್ನು ಆಧುನಿಕ ಭಾರತವು ಹೆಚ್ಚೂಕಮ್ಮಿ ಮರೆತುಬಿಟ್ಟಿದೆ. ಬದಲಿಗೆ ಪಶ್ವಿಮದ ಆಧ್ಯಾತ್ಮಿಕ – ರಹಿತ ನಾಗರಿಕತೆಯನ್ನು ಅನುಸರಿಸಲು ಪ್ರಯತ್ನಿಸುತ್ತಿದೆ. ಆದರೆ ಲೌಕಿಕ ದೃಷ್ಟಿಕೋನವು ಸಮಾಜಕ್ಕೆ ಎಂದಿಗೂ ನೆರವಾಗದು. ಇದು ಪಶ್ಚಿಮದಲ್ಲಿ ಈಗಾಗಲೇ ಸಾಬೀತಾಗಿದೆ. ಇದೀಗ ಭಾರತದಲ್ಲಿಯೂ ಕೂಡ.
ಆದುದರಿಂದ ಆಧ್ಯಾತ್ಮಿಕ ಪುನರುಜ್ಜೀವವೇ ಈಗಿನ ಅಗತ್ಯವಾಗಿದೆ. ಅದುವೇ ಹರೇ ಕೃಷ್ಣ ಆಂದೋಲನದ ಧ್ಯೇಯವಾಗಿದೆ. ಭೋಗದ ಈ ಲೌಕಿಕ ಲೋಕದಲ್ಲಿ ಹರೇ ಕೃಷ್ಣ ಆಂದೋಲನವು ಮರಳುಗಾಡಿನಲ್ಲಿ ಜಲಮೂಲ ಸಿಕ್ಕಂತೆ. ಯಾವುದೇ ನಿಷ್ಪಕ್ಷಪಾತ ವ್ಯಕ್ತಿಯು ಈ ಆಂದೋಲನದ ಯುವಜನರು ಮತ್ತು ಜಗತ್ತಿನ ಇತರ ಯುವಜನರ ನಡುವಣ ವ್ಯತ್ಯಾಸವನ್ನು ಸ್ಪಷ್ಟವಾಗಿ ಕಾಣಬಹುದು.
ಈ ಆಧುನಿಕ ಪರಿಸ್ಥಿತಿಗೆ ಚಿಕಿತ್ಸೆ ಇಲ್ಲವೇ? ಖಂಡಿತ ಉಂಟು. ಶ್ರೀಮದ್ ಭಾಗವತದ ಶ್ರವಣ ಮತ್ತು ಹರೇ ಕೃಷ್ಣ ಮಹಾ ಮಂತ್ರದ ಪಠಣವು ಅತ್ಯುತ್ತಮ ವಿಧಾನವಾಗಿವೆ. ಆದುದರಿಂದ ಈ ಲೋಕದ ಎಲ್ಲ ಶೈಕ್ಷಣಿಕ ಸಂಸ್ಥೆಗಳಲ್ಲಿ ಈ ಭಾಗವತ ಧರ್ಮವನ್ನು ಬೋಧಿಸಿದರೆ ಎಲ್ಲರಿಗೂ ಒಳಿತಾಗುತ್ತದೆ. ದುಃಖಕರವೆಂದರೆ, ಕೃಷ್ಣಪ್ರಜ್ಞೆ ವಿಜ್ಞಾನವನ್ನು ಬಿಟ್ಟು ಜ್ಞಾನದ ಉಳಿದೆಲ್ಲ ವಿಭಾಗಗಳನ್ನು ವಿಶ್ವವಿದ್ಯಾಲಯಗಳಲ್ಲಿ ಬೋಧಿಸಲಾಗುತ್ತಿದೆ.
ಆದುದರಿಂದ ವಿಶ್ವದ ಸರ್ಕಾರಗಳು ಮತ್ತು ಚಿಂತಕರು ಕೃಷ್ಣಪ್ರಜ್ಞೆ ಆಂದೋಲನದತ್ತ ಗಮನ ಹರಿಸಲು ಇದು ಸಕಾಲವಾಗಿದೆ. ಇಲ್ಲವಾದರೆ ಅಯೋಗ್ಯ ತಂದೆಯರ ಅಯೋಗ್ಯ ಪುತ್ರರು ಜಗತ್ತನ್ನು ಭಸ್ಮಮಾಡಿಬಿಡುತ್ತಾರೆ. ಅಮಾಯಕ ಕುಟುಂಬಗಳನ್ನು ನಾಶಮಾಡುತ್ತಾರೆ.
ಜಪಿಸಿ…
ಹರೇ ಕೃಷ್ಣ ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ ಹರೇ
ಹರೇ ರಾಮ ಹರೇ ರಾಮ, ರಾಮ ರಾಮ ಹರೇ ಹರೇ
…ಮತ್ತು ಸುಖವಾಗಿರಿ.