ಸಮೃದ್ಧ ಬೆಳೆ ನೀಡುವ ಭೂ ಮಾತೆಗೆ ಅದನ್ನು ಭಗವಂತನಿಗೆ ಅರ್ಪಿಸಬೇಕೆನ್ನುವ ತವಕ. ಅದಕ್ಕಾಗಿ ನಾವು ಏನು ಮಾಡಬೇಕು?
ಶ್ರೀಮದ್ ಭಾಗವತದಲ್ಲಿ (4.19.8) ಶ್ರೀಲ ಪ್ರಭುಪಾದರು ಬರೆಯುತ್ತಾರೆ, “ಭೂಮಿಯ ಮಣ್ಣು ಒಂದೇ ಆದರೂ ಬೇರೆ ಬೇರೆ ಬಗೆಯ ಬೀಜಗಳಿಂದಾಗಿ ಬೇರೆ ಬೇರೆ ರುಚಿಗಳು ಹುಟ್ಟುತ್ತವೆ.”

ಒಂದೇ ನೆಲದ ಮೇಲೆ, ಅಕ್ಕಪಕ್ಕದಲ್ಲಿ ಎರಡು ಗಿಡಗಳು ಬೆಳೆಯುತ್ತವೆ ಎಂದುಕೊಳ್ಳಿ. ಒಂದು ಗಿಡವು ಸಿಹಿಯಾದ ಫಲವನ್ನು ನೀಡುತ್ತದೆ, ಮತ್ತೊಂದು ಖಾರವಾದ ಮೆಣಸಿನಕಾಯಿಯನ್ನು ನೀಡುತ್ತದೆ. ಇದು ಎಂತಹ ಅದ್ಭುತ ಪವಾಡ! ಪವಾಡವೋ ಪ್ರಕೃತಿಯ ವೈಭವವೋ? ಅವೆರಡೂ ಗಿಡಗಳು ಭೂಮಿ ತಾಯಿಯಿಂದ ಒಂದೇ ಸಂಪನ್ಮೂಲವನ್ನು ಬಳಸಿಕೊಂಡರೂ ಅವು ಆ ಸಂಪನ್ಮೂಲಗಳಿಗೆ ಭಿನ್ನವಾದ ಅರ್ಥವನ್ನು ನೀಡುತ್ತಿವೆಯೋ ಎಂದೆನ್ನಿಸುತ್ತದೆ. ಇದಕ್ಕೊಂದು ಹೋಲಿಕೆಯನ್ನು ನೀಡಬಹುದು. ಇಬ್ಬರು ಕಲಾವಿದರ ಕೈಗೆ ಬಣ್ಣಗಳ ಪೆಟ್ಟಿಗೆಯನ್ನು ನೀಡಿ, ಅವರಲ್ಲಿ ಒಬ್ಬರು ಭಾವಚಿತ್ರವನ್ನು ಚಿತ್ರಿಸಿದರೆ ಮತ್ತೊಬ್ಬರು ಸಮೃದ್ಧ ಭೂ ದೃಶ್ಯವನ್ನು ಚಿತ್ರಿಸಿರುತ್ತಾರೆ.

ಭೂಮಿ ತಾಯಿಗೆ ಆಧ್ಯಾತ್ಮಿಕ ತೃಪ್ತಿ ಉಂಟಾಗುವುದು ಯಾವಾಗ? ತಾನು ಬೆಳೆದ ಹಣ್ಣು, ಧಾನ್ಯ ಮತ್ತು ತರಕಾರಿಗಳನ್ನು ಭಗವಂತನಿಗೆ ಸಮರ್ಪಿಸಿದಾಗ ಭೂಮಾತೆಗೆ ಸಂತೋಷವಾಗುತ್ತದೆ. ಅದರ ವಿರುದ್ಧವಾದುದೂ ನಿಜ. ಅಂದರೆ ಅವಳ ಉತ್ಪನ್ನವನ್ನು ಸ್ವಾರ್ಥಕ್ಕೆ ಬಳಸಿದರೆ? ಪಾಪಿಯಾದ ರಾಜ ವೇಣನ ಆಡಳಿತ ಕಾಲದಲ್ಲಿ ಜನರು ಯಾವುದೇ ಉತ್ಪನ್ನಗಳನ್ನು ಭಗವಾನ್ ಶ್ರೀ ಕೃಷ್ಣನಿಗೆ ಸಮರ್ಪಿಸಲಿಲ್ಲ. ಸಹಜವಾಗಿ ಭೂಮಾತೆ ಸಿಟ್ಟಾದಳು. ಅವಳು ಆಹಾರ ಧಾನ್ಯಗಳನ್ನು ಉತ್ಪಾದಿಸುವುದನ್ನೇ ನಿಲ್ಲಿಸಿಬಿಟ್ಟಳು. (ಭಾಗವತದ 4ನೆಯ ಸ್ಕಂಧದಲ್ಲಿ ವಿವರಿಸಲಾಗಿದೆ.) ಇದಕ್ಕೊಂದು ಉದಾಹರಣೆಯನ್ನು ನೀಡೋಣ.
ತಾಯಿಯು ಮಗುವಿನ ಕೈಗೆ ಹಣ ಅಥವಾ ಹೂವನ್ನು ಕೊಡುತ್ತಾಳೆ. ಮಂದಿರದಲ್ಲಿ ದೇವರಿಗೆ ಸಮರ್ಪಿಸು ಎಂದು ಹೇಳುತ್ತಾಳೆ. ಮಗುವು ಹೂವನ್ನು ಕೊಳ್ಳುತ್ತದೆ ಮತ್ತು ಅದನ್ನು ಮಂದಿರದಲ್ಲಿ ಅರ್ಪಿಸುತ್ತದೆ. ದೇವರಿಗೆ ಸಮರ್ಪಿಸಲಾಯಿತೆಂದು ತಾಯಿಗಂತೂ ತೃಪ್ತಿ, ಅಮ್ಮನಿಗೆ ಖುಷಿಯಾಯಿತೆಂದು ಮಗುವಿಗೆ ಸಂತೋಷ. ಆದರೆ ಮಗುವು ಹೂವನ್ನು ಹಾಳುಮಾಡಿದರೆ ಅಥವಾ ಹಣವನ್ನು ಚಾಕೊಲೆಟ್ ಕೊಳ್ಳಲು ಬಳಸಿದರೆ ತಾಯಿಗೆ ಬೇಸರ. ಆಗ ಅವಳು ದೇವರಿಗೆ ಅರ್ಪಿಸಲೆಂದು ಮಗುವಿನ ಕೈಗೆ ಏನನ್ನೂ ಕೊಡುವುದಿಲ್ಲ. ಹಣ ನೀಡುವುದನ್ನೇ ನಿಲ್ಲಿಸಿಬಿಡುತ್ತಾಳೆ. ಆಗ ತಾಯಿ ಮತ್ತು ಮಗೂ ಇಬ್ಬರಿಗೂ ಸಮಾಧಾನ ಇರುವುದಿಲ್ಲ.

ತನ್ನ ಮಕ್ಕಳಿಗೆ, ಅಂದರೆ ಪ್ರಜೆಗಳಿಗೆ ನೆರವಾಗಬೇಕೆನ್ನುವುದು ಭೂ ತಾಯಿಯ ಇಚ್ಛೆ. ಆದರೆ ಆ ಜನರಿಗೆ ಕೃಷ್ಣಸೇವೆಯಲ್ಲಿ ಆಸಕ್ತಿ ಇಲ್ಲದಿದ್ದರೆ ಅವಳಿಗೆ ಬೇಸರ, ನಿರುತ್ಸಾಹ. ಒಮ್ಮೆ ಶ್ರೀಲ ಪ್ರಭುಪಾದರು ಬರೆದದ್ದು ಅಕ್ಷರಶಃ ಸತ್ಯ. ಏನದು? “ತನ್ನ ಕರುವು ಇಲ್ಲದಿದ್ದರೆ ಗೋವು ಸಾಕಷ್ಟು ಹಾಲನ್ನು ನೀಡುವುದಿಲ್ಲ. ಅದೇ ರೀತಿ ಕೃಷ್ಣಪ್ರಜ್ಞೆ ಉಳ್ಳ ಜನರ ಬಗೆಗೆ ವಾತ್ಸಲ್ಯ ಭಾವನೆ ಇಲ್ಲದಿದ್ದರೆ ಭೂಮಿ ತಾಯಿಯು ಸಾಕಷ್ಟು ಅಗತ್ಯ ಧಾನ್ಯಗಳನ್ನು ಬೆಳೆಯುವುದಿಲ್ಲ.”
ಒಂದು ಮಾದರಿಯಾದ ಕೃಷ್ಣಪ್ರಜ್ಞೆ ಗ್ರಾಮವನ್ನು ಗಮನಿಸೋಣ. ಅಲ್ಲಿ ಕೃಷಿ ವಿಧಾನವು ಪರಿಪೂರ್ಣ. ಭಕ್ತರು ಕೀರ್ತನೆಯನ್ನು ಹಾಡುತ್ತ ಮತ್ತು ನರ್ತಿಸುತ್ತ ಕೃಷ್ಣಪ್ರೇಮವನ್ನು ವ್ಯಕ್ತಪಡಿಸುತ್ತಾರೆ. ಕೃಷಿ ಕಾರ್ಯವನ್ನು ಮಾಡುತ್ತಾರೆ. ಇದು ಭೂಮಿ ತಾಯಿಯ ವಾತ್ಸಲ್ಯವನ್ನು ಉತ್ತೇಜಿಸುತ್ತದೆ. ಅವಳು ಸಂತೋಷದಿಂದ ಸಮೃದ್ಧವಾಗಿ ಬೆಳೆ ಮತ್ತು ಹುಲ್ಲನ್ನು ಉತ್ಪಾದಿಸುತ್ತಾಳೆ. ಗೋವುಗಳು ಮತ್ತು ಎತ್ತುಗಳು ಹುಲುಸಾಗಿ ಬೆಳೆದ ಹುಲ್ಲನ್ನು ಮೇಯುತ್ತವೆ. ಗೋವುಗಳು ಸಮೃದ್ಧವಾಗಿ ಹಾಲನ್ನು ನೀಡುತ್ತವೆ. ಬೆಳೆಯೂ ಅಪಾರವಾಗಿರುತ್ತದೆ. ತೋಟ ಮತ್ತು ಹೊಲದಲ್ಲಿನ ಗಿಡಗಳು ಆರೋಗ್ಯಪೂರ್ಣವಾಗಿರುತ್ತವೆ ಮತ್ತು ಹೆಚ್ಚು ಉತ್ಪಾದನೆಯನ್ನೂ ನೀಡುತ್ತವೆ.

ಉತ್ತಮ ಬೆಳೆಯಾಗುತ್ತದೆ. ಭಕ್ತರು ಆಹಾರ ಪದಾರ್ಥಗಳೆಲ್ಲವನ್ನೂ ಸಂಗ್ರಹಿಸುತ್ತಾರೆ ಮತ್ತು ದೇವರಿಗೆ ಅರ್ಪಿಸಲು ರುಚಿಕರವಾದ ಖಾದ್ಯಗಳನ್ನು ತಯಾರಿಸುತ್ತಾರೆ. ಈ ರೀತಿ ಭೂಮಿತಾಯಿಯ ಸಮರ್ಪಣೆಯನ್ನು ಪರಿಪೂರ್ಣವಾಗಿ ಉಪಯೋಗಿಸಲಾಗುತ್ತದೆ. ಭೂಮಿತಾಯಿ, ಮರಗಿಡಗಳು, ಭಕ್ತರು, ಗೋವು, ಎತ್ತುಗಳು ಹೀಗೆ ಎಲ್ಲ ಜೀವಿಗಳೂ ಸಂತೃಪ್ತರಾಗುತ್ತಾರೆ ಮತ್ತು ಆಧ್ಯಾತ್ಮಿಕ ಆನಂದವನ್ನು ಪಡೆಯುತ್ತಾರೆ. ಅಷ್ಟೇ ಅಲ್ಲ, ಕೃಷ್ಣನಿಗೆ ಅರ್ಪಿಸಿದ ನೈವೇದ್ಯವನ್ನು ಸ್ವೀಕರಿಸುವ ಜನರೂ ಆಧ್ಯಾತ್ಮಿಕ ಆನಂದವನ್ನು ಅನುಭವಿಸುತ್ತಾರೆ.