ನಾರದ ಮುನಿಯ ಕಥೆ

ಪ್ರಿಯ ಪುಟಾಣಿ, ಕೈಯಲ್ಲಿ ಸದಾ ವೀಣೆ ಹಿಡಿದು ಶ್ರೀಮನ್ನಾರಾಯಣನ ನಾಮ ಸ್ಮರಿಸುತ್ತಾ ತ್ರಿಲೋಕ ಸಂಚಾರ ಮಾಡುವವರೇ ಶ್ರೀ ನಾರದ ಮುನಿಗಳು. ಜನಪ್ರಿಯ ಚಲನಚಿತ್ರ, ಧಾರಾವಾಹಿಗಳಲ್ಲಿ ಬಹುತೇಕ ವ್ಯಂಗ್ಯವಾಗಿ, ವಿದೂಷಕನ ಹಾಗೆ ತಪ್ಪಾಗಿ ಚಿತ್ರಿಸಲ್ಪಟ್ಟಿದ್ದರೂ, ನಾರದರು ಅಂಥವರಲ್ಲ. ಅವರು ಭಗವಂತನ ಶ್ರೇಷ್ಠ ಭಕ್ತರು, ಭಾಗವತೋತ್ತಮರು. ವೇದವ್ಯಾಸ, ಪ್ರಹ್ಲಾದ, ವಾಲ್ಮೀಕಿ, ಧ್ರುವ – ಇಂತಹ ದೊಡ್ಡ ಭಕ್ತರ ಗುರುಗಳು. ಈ ಮಹನೀಯರ ಕಥೆ ತುಂಬ ಚೆನ್ನಾಗಿದೆ, ಓದಿಕೋ…

ಒಂದಾನೊಂದು ಕಾಲದಲ್ಲಿ ಕೆಲಸದವಳು ಒಬ್ಬಳು ಎಲ್ಲೋ ವಾಸಿಸುತ್ತಿದ್ದಳು. ಅವಳಿಗೆ ಒಂದು ಪುಟ್ಟ ಮಗ. ಹುಡುಗ ನಿನ್ನ ವಯಸ್ಸಿನವನೇ, ಆದರೂ ನಿನ್ನ ತರಹ ತುಂಟನಲ್ಲ! ತುಂಬ ಒಳ್ಳೆಯವನು. ಬರೀ ಆಟದಲ್ಲಿ ಅವನು ಸಮಯ ವ್ಯರ್ಥ ಮಾಡುತ್ತಿರಲಿಲ್ಲ, ಸುಮ್ ಸುಮ್ಮನೆ ಹರಟುತ್ತಿರಲಿಲ್ಲ. ಶಿಸ್ತಿನ ಸಿಪಾಯಿಯ ಹಾಗೆ ಇದ್ದನು.

ಹೀಗಿರುವಾಗ, ಮಳೆಗಾಲದ ಒಂದು ದಿನ ಕೆಲವು ಸಾಧುಗಳು ಅಲ್ಲಿಗೆ ಬಂದರು. ಆ ಸಮಯದಲ್ಲಿ ಕಾಲು-ನಡಿಗೆಯಲ್ಲೇ ದೇಶ ಪರ್ಯಟನೆ ಮಾಡುತ್ತಿದ್ದ ಸಾಧು-ಸಂತರು, ಮಳೆಗಾಲದಲ್ಲಿ ಪ್ರವಾಸ ಕಷ್ಟವಾದ್ದರಿಂದ ಒಂದೇ ಕಡೆ ಇರುತ್ತಿದ್ದರು. ಹೀಗೆ, ಹುಡುಗನೂ, ಅವನ ತಾಯಿಯೂ ಆ ಸಂತರ ಸೇವೆ ಮಾಡಹತ್ತಿದರು.

ಅಲ್ಲಿಗೆ ಬಂದ ಸಂತರು ಕೃಷ್ಣನಾಮ ಜಪದಲ್ಲಿ, ಕೃಷ್ಣಕಥೆ ಚರ್ಚೆಯಲ್ಲಿ, ಭಜನೆ-ಕೀರ್ತನೆಗಳಲ್ಲಿ ತೊಡಗಿರುತ್ತಿದ್ದರು; ಮತ್ತು ಪುಟ್ಟ ಬಾಲಕನು ಅವರು ಹೇಳಿದ ಹಾಗೆ ಚಿಕ್ಕ-ಪುಟ್ಟ ಸೇವೆ ಮಾಡುತ್ತಿದ್ದನು. ಒಮ್ಮೆ ಹುಡುಗನಿಗೆ ಈ ಭಕ್ತರ ಮಹಾಪ್ರಸಾದ ಆಸ್ವಾದಿಸುವ ಆಸೆಯಾಯಿತು. ಸಾಧುಗಳ ಅನುಮತಿ ಕೋರಿ ಪ್ರಸಾದ ತಿಂದನು. ಆಗ ತತ್‌ಕ್ಷಣ ಬಾಲಕನ ಪಾಪವೆಲ್ಲ ಪರಿಹಾರವಾಗಿ ಪರಿಶುದ್ಧನಾದನು. ಅಂದಿನಿಂದ ಕೃಷ್ಣನ ಬಗ್ಗೆ ಕೇಳುವುದೆಂದರೆ ಅವನಿಗೆ ಪಂಚಪ್ರಾಣ!

ಹೀಗೆ, ಮಳೆಗಾಲದ ನಾಲ್ಕು ತಿಂಗಳು ಕಳೆದವು ಮತ್ತು ಆ ಸಾಧುಗಳು ಪ್ರವಾಸ ಮುಂದುವರಿಸಿ ಹೊರಟುಹೋದರು. ಬಾಲಕನು ಅವರನ್ನು ತುಂಬ ನೆಚ್ಚಿಕೊಂಡಿದ್ದನು ಮತ್ತು ಅವರಲ್ಲಿ ಬಹಳ ಶ್ರದ್ಧೆ ಇಟ್ಟಿದ್ದನು. ಅವರು ಬೋಧಿಸಿದ್ದೆಲ್ಲ ಅವನಿಗೆ ಮರೆಯಲಾಗಲೇ ಇಲ್ಲ.

ತನ್ನ ಪ್ರೀತಿಯ ತಾಯಿಯ ಜೊತೆ ಸ್ವಲ್ಪ ದಿನಗಳು ಕಳೆದವು. ಒಂದು ಸಂಜೆ ಹುಡುಗನ ತಾಯಿಯು ಹಸುವಿನ ಹಾಲು ಕರೆಯಲು ಹೋಗುತ್ತಿದ್ದಾಗ ಅವಳಿಗೆ ಹಾವು ಕಚ್ಚಿತು. ಪಾಪ ಅವಳು ಸತ್ತೇಹೋದಳು.

ಇದೂ ದೇವರ ಕೃಪೆಯೇ ಎಂದು ಭಾವಿಸಿದ ಹುಡುಗನು ಮನೆ ಬಿಟ್ಟು ಉತ್ತರ ದಿಕ್ಕಿನಲ್ಲಿ ನಡೆದ. ಅನೇಕ ಬೆಟ್ಟ-ಗುಡ್ಡಗಳನ್ನು, ದಟ್ಟ ಅರಣ್ಯಗಳನ್ನು, ಹಳ್ಳಿ-ನಗರಗಳನ್ನು ದಾಟಿ ಹೋದ. ಬಹಳ ಹೊತ್ತು ಹೀಗೆ ನಡೆದಾಗ ದಣಿವಾಯಿತಲ್ಲದೆ, ಹಸಿವು-ಬಾಯಾರಿಕೆ ಕಾಡಿದವು. ಒಂದು ಸರೋವರ ಕಂಡಾಗ ಸ್ನಾನ ಮಾಡಿದ, ತಣ್ಣನೆಯ ನೀರು ಕುಡಿದ. ಮುಂದುವರಿದು ನಿರ್ಜನ ಕಾಡಲ್ಲಿದ್ದ ಮರವೊಂದರ ಕೆಳಗೆ ಕುಳಿತ, ಪರಮಾತ್ಮನನ್ನು ಕುರಿತು ಧ್ಯಾನಿಸಿದ.

ಪ್ರೀತಿಯಿಂದ ಧ್ಯಾನಿಸತೊಡಗಿದ ಕೂಡಲೇ ಪರಮಾತ್ಮನು ಪ್ರತ್ಯಕ್ಷನಾದ! ಬಾಲಕನು ಆನಂದ ಸಾಗರದಲ್ಲಿ ಎಷ್ಟು ಮುಳುಗಿಹೋದನೆಂದರೆ ಅವನಿಗೆ ತನ್ನನ್ನೂ, ದೇವರನ್ನೂ ಕಾಣದಾಯಿತು. ಆಗ ಪರಮಾತ್ಮನ ದರ್ಶನ ಮರೆಯಾಯಿತು. ಬಾಲಕನು ಮತ್ತೆ ಧ್ಯಾನಸ್ಥನಾಗಿ ಕುಳಿತು ದೇವರನ್ನು ನೋಡಲು ಎಷ್ಟು ಪ್ರಯತ್ನಿಸಿದರೂ ಅವನು ಬರಲಿಲ್ಲ.

ಆದರೆ ಅಶರೀರವಾಣಿ ಮೊಳಗಿತು – “ಓ ನಾರದ, ಈ ಜೀವಮಾನದಲ್ಲಿ ಮತ್ತೆ ನೀನು ನನ್ನ ದರ್ಶನ ಪಡೆಯಲಾರೆ ಎಂದು ಹೇಳಲು ನನಗೆ ಖೇದವಾಗುತ್ತದೆ. ಭಕ್ತಿಸೇವೆಯಲ್ಲಿ ಅಪರಿಪೂರ್ಣರೂ, ಭೌತಿಕ ಕಲ್ಮಷಗಳಿಂದ ಸಂಪೂರ್ಣ ಮುಕ್ತಿ ಹೊಂದದವರೂ ನನ್ನನ್ನು ಕಾಣಲಾರರು. ನನ್ನ ಮೇಲೆ ನಿನ್ನ ಆಸೆಯನ್ನು ಹೆಚ್ಚಿಸಲು ಮಾತ್ರ ಒಮ್ಮೆ ದರ್ಶನ ನೀಡಿದ್ದೇನೆ. ನನ್ನ ಕೃಪೆಯಿಂದ ಅನಂತ ಕಾಲದವರೆಗೂ ನನ್ನ ಸ್ಮರಣೆಯು ನಿನ್ನಲ್ಲಿ ಮುಂದುವರಿಯಲಿ.” ದೇವರಿಗೆ ಕೃತಜ್ಞತೆಯಿಂದ ಬಾಲಕ ತಲೆಬಾಗಿಸಿ ನಮಸ್ಕರಿಸಿದ.

ಇದಾದ ಮೇಲೆ ಬಾಲಕನು ಹರಿನಾಮ ಸ್ಮರಣೆ, ಹರಿ ಗುಣಗಾನ ಮಾಡುತ್ತ ಭೂಮಿಯ ಮೇಲೆ ಎಲ್ಲೆಡೆ ಸಂಚರಿಸತೊಡಗಿದ. ಪರಿಪೂರ್ಣವಾಗಿ ಕೃಷ್ಣನ ಧ್ಯಾನದಲ್ಲಿ ಮಗ್ನನಾಗಿ ಶುದ್ಧನಾದ. ಕಾಲಕ್ರಮದಲ್ಲಿ ದೇಹತ್ಯಾಗ ಮಾಡಿದ ಮೇಲೆ, ಅಲೌಕಿಕ ದೇಹವೊಂದು ಸಿಕ್ಕಿ ನಾರದ ಮುನಿಯಾದ.

ಬ್ರಹ್ಮನ ಕಲ್ಪಾಂತ್ಯದಲ್ಲಿ, ಅಂದರೆ ರಾತ್ರಿಯಲ್ಲಿ, ಎಲ್ಲದರ ಜೊತೆ ನಾರದರೂ ವಿಷ್ಣುವಿನ ದೇಹ ಪ್ರವೇಶಿಸಿದರು. ೪೩೦ ಕೋಟಿ ವರ್ಷಗಳ ಅನಂತರ ಬ್ರಹ್ಮನಿಗೆ ಹಗಲಾಗಿ ಅವನು ಮತ್ತೆ ಸೃಷ್ಟಿಸಲಾರಂಭಿಸಿದಾಗ, ನಾರದರು ಪ್ರಭುವಿನ ದೇಹದಿಂದ ಹೊರಬಂದರು. ಅಂದಿನಿಂದ ಇಂದಿನವರೆಗೆ ಸ್ವಲ್ಪವೂ ನಿರ್ಬಂಧವಿಲ್ಲದೆ ಎಲ್ಲೆಡೆ ಭಗವಂತನ ಗುಣಗಾನ ಮಾಡುತ್ತಾ, ಭಕ್ತಿಸೇವೆಯನ್ನು ಪ್ರಸರಿಸುತ್ತಾ ಸಂಚರಿಸುತ್ತಿದ್ದಾರೆ ಶ್ರೀ ನಾರದ ಮುನಿ.

ಈ ಲೇಖನ ಶೇರ್ ಮಾಡಿ

ಹೊಸ ಪೋಸ್ಟ್‌ಗಳು