ನೃಸಿಂಹಾವತಾರ

ಮಕ್ಕಳೇ,

ಹಿರಣ್ಯಾಕ್ಷ ಮತ್ತು ಹಿರಣ್ಯಕಶಿಪು ಎಂಬಿಬ್ಬರು ದೈತ್ಯರೂ ಕಶ್ಯಪ-ದಿತಿಯರ ಪುತ್ರರು. ಹಿರಣ್ಯಾಕ್ಷನನ್ನು ಭಗವಂತನು ವರಾಹಾವತಾರವನ್ನೆತ್ತಿ ಸಂಹರಿಸಿ ಪೃಥ್ವಿಯನ್ನು ಅದರ ಕಕ್ಷೆಯಲ್ಲಿ ಮರುಸ್ಥಾಪಿಸಿದನಲ್ಲವೇ? ಸಹೋದರನಾದ ಹಿರಣ್ಯಾಕ್ಷನ ಮರಣದಿಂದ ಹಿರಣ್ಯಕಶಿಪು ಬಹುವಾಗಿ ದುಃಖಿಸಿದ. ಭಗವದ್ವೇಷಿಯಾದ ಅವನು ಇದರಿಂದ ಬಹುವಾಗಿ ಯೋಚಿಸಿ ತನಗೆ ಮರಣವೇ ಬಾರದಂತೆ ವರವನ್ನು ಪಡೆಯಲು ನಿಶ್ಚಯಿಸಿ ಸೃಷ್ಟಿಕರ್ತನಾದ ಬ್ರಹ್ಮನನ್ನು ಕುರಿತು ಘೋರವಾದ ತಪಸ್ಸನ್ನು ಮಾಡಿದನು.

ಅವನ ತಪೋನಿಷ್ಠೆಯಿಂದ ಉಂಟಾದ ತಾಪವು ಇಡೀ ಭೌತಿಕ ಜಗತ್ತನ್ನೇ ವ್ಯಾಪಿಸಿತು. ಆ ತಾಪವನ್ನು ಸಹಿಸಲಾಗದ ದೇವತೆಗಳು ಪಿತಾಮಹನಾದ ಬ್ರಹ್ಮನ ಮೊರೆ ಹೋಗಿ ಪರಿಹಾರಕ್ಕಾಗಿ ಪ್ರಾರ್ಥಿಸಿದರು. ಬ್ರಹ್ಮದೇವನು ದೈತ್ಯನಾದ ಹಿರಣ್ಯಕಶಿಪುವಿನ ಬಳಿ ಪ್ರತ್ಯಕ್ಷನಾಗಿ ಅವನ ತಪಸ್ಸಿಗೆ ಕಾರಣವನ್ನು ಕೇಳಿದ. ಹಿರಣ್ಯಕಶಿಪು “ಬ್ರಹ್ಮದೇವ, ನಾನು ಚಿರಂಜೀವಿಯಾಗಬೇಕು. ಮರಣವು ನನ್ನ ಸನಿಹದಲ್ಲಿ ಸುಳಿಯದಂತೆ ವರವನ್ನು ದಯಪಾಲಿಸು” ಎಂದು ಬೇಡಿದನು.

ಭೌತಿಕ ಜಗತ್ತಿನಲ್ಲಿ ಜನ್ಮ ತಳೆದವರೆಲ್ಲರಿಗೂ ಮರಣವು ತಪ್ಪದೆಂದೂ ಜೀವಿಗಳ ಸೃಷ್ಟಿಕರ್ತನಾದ ತಾನೂ ಸಹಾ ಕೋಟ್ಯಂತರ ವರ್ಷಗಳ ಅನಂತರ ಅಂತ್ಯವಾಗಲೇಬೇಕೆಂಬುದನ್ನು ತಿಳಿಸಿದ ಬ್ರಹ್ಮದೇವನು ಚಿರಂಜೀವಿಯಾಗುವಂತಹ ವರವನ್ನು ನೀಡುವ ವಿಷಯದಲ್ಲಿ ತನ್ನ ಅಸಹಾಯಕತೆಯನ್ನು ವ್ಯಕ್ತಪಡಿಸಿದನು. ಆಗ ಹಿರಣ್ಯಕಶಿಪುವು ಪ್ರಭುವೇ ಭೂಲೋಕದಲ್ಲಿ ಅಥವಾ ನೀರಿನಲ್ಲಿ ಹುಟ್ಟಿದ ಯಾರೂ ನನ್ನನ್ನು ಕೊಲ್ಲಬಾರದು, ಯಾವ ಆಯುಧವೂ ನನ್ನ ಮರಣಕ್ಕೆ ಕಾರಣವಾಗಬಾರದು. ಮನುಷ್ಯನಿಂದಾಗಲೀ, ದೇವತೆಯಿಂದಾಗಲೀ ನನಗೆ ಮರಣವು ಸಂಭವಿಸಬಾರದು, ಹಗಲು ವೇಳೆಯಲ್ಲಾಗಲೀ, ರಾತ್ರಿವೇಳೆಯಲ್ಲಾಗಲೀ ನಾನು ಸಾಯಬಾರದು. ಯಾವುದೇ ಮನೆಯ ಹೊರಗಾಗಲೀ, ಒಳಗಾಗಲೀ ನನ್ನ ಮೃತ್ಯು ಸಂಭವಿಸದಿರಲಿ. ನಾನು ಏನೇ ಬಯಸಿದರೂ ಅದು ನನ್ನ ಎದುರಿಗೆ ಬರಬೇಕು ಎಂಬ ವರವನ್ನು ನೀಡುವಂತೆ ಬೇಡಿದನು.

ಹಿರಣ್ಯಕಶಿಪುವಿನ ಬೇಡಿಕೆಯು ನಿಜಕ್ಕೂ ವಿಚಿತ್ರವಾಗಿತ್ತು. ಆದರೂ ಬ್ರಹ್ಮದೇವನು ನಸುನಕ್ಕು `ತಥಾಸ್ತು’ ಎಂದು ಹೇಳಿ ಬ್ರಹ್ಮಲೋಕಕ್ಕೆ ಹಿಂದಿರುಗಿದನು. ಸಂತೃಪ್ತನಾದ ಹಿರಣ್ಯಕಶಿಪು ತನ್ನ ತಪಸ್ಸನ್ನು ಕೊನೆಗಾಣಿಸಿದನು.

ತಾನು ಪಡೆದ ವರದಿಂದ ವಿವೇಕಹೀನನಾದ ಹಿರಣ್ಯಕಶಿಪು ತನಗೆ ಭಗವಂತನ ಮೇಲಿದ್ದ ದ್ವೇಷವನ್ನು ಮತ್ತೂ ಹೆಚ್ಚಿಸಿಕೊಂಡು ಮೂರು ಲೋಕಗಳಲ್ಲಿಯೂ ತನ್ನ ಮೂಲಕ ತನ್ನ ಸಹೋದರನಾದ ಹಿರಣ್ಯಾಕ್ಷನ ಮರಣಕ್ಕೆ ಪ್ರತೀಕಾರವನ್ನು ತೀರಿಸಿಕೊಳ್ಳುವುದು ಅವನ ಉದ್ದೇಶವಾಗಿತ್ತು.

ಹೀಗಿರಲು, ಹಿರಣ್ಯಕಶಿಪುವಿನ ಪತ್ನಿ ಕಯಾದು ಒಂದು ಗಂಡು ಮಗುವಿಗೆ ಜನ್ಮವಿತ್ತಳು. ಹಿರಣ್ಯಕಶಿಪು ಅಕ್ಕರೆಯಿಂದ ಆ ಮಗುವಿಗೆ ಪ್ರಹ್ಲಾದ ಎಂದು ನಾಮಕರಣವನ್ನು ಮಾಡಿದನು. ಸೂಕ್ತ ವಯಸ್ಸಿನಲ್ಲಿ ಪ್ರಹ್ಲಾದನನ್ನು ವಿದ್ಯಾಭ್ಯಾಸಕ್ಕಾಗಿ ಗುರುಕುಲಕ್ಕೆ ಕಳುಹಿಸಿದನು.

ವಿಧಿಯ ಲೀಲೆಯನ್ನು ಯಾರೂ ಅರಿಯಲಾರರು. ಇಷ್ಟಕ್ಕೂ ಭಗವದ್ವೇಷಿಗಳ ಸಂತಾನವು ಭಗವದ್ವೇಷವನ್ನು ಹೊಂದಿರಬೇಕೆಂಬ ನಿಯಮವಿಲ್ಲವಲ್ಲ, ಹಾಗಾಗಿ ಪ್ರಹ್ಲಾದನು ಜನ್ಮತಃ ಭಗವದ್ಭಕ್ತನಾಗಿದ್ದನು. ಗುರುಕುಲದಲ್ಲಿ ಅವನ ಭಗವತ್ಪ್ರೇಮವು ವಾಸ್ತವವಾಗಿ ನೂರ್ಮಡಿಯಾಗಿತ್ತು.

ಗುರುಕುಲದಿಂದ ಹಿಂತಿರುಗಿದ ಪ್ರಹ್ಲಾದನನ್ನು ಹಿರಣ್ಯಕಶಿಪುವು `ಮಗು! ಗುರುಕುಲದಲ್ಲಿ ನೀನೇನು ಕಲಿತೆ’ ಎಂದು ಪ್ರಶ್ನಿಸಿದನು. ಪ್ರಹ್ಲಾದನು ವಿನಯದಿಂದ ಕೈಜೋಡಿಸಿ, `ಆಪ್ಪಾ! ನವವಿಧ ಭಕ್ತಿಯಿಂದ ಹರಿಯನ್ನು ಸೇವಿಸುವುದು ಎಲ್ಲಕ್ಕಿಂತಲೂ ಮಿಗಿಲಾದ ಕರ್ತವ್ಯವಾಗಿದೆ. ಭಗವಂತನ ನಾಮಸ್ಮರಣೆಗಿಂತ ಉತ್ತಮವಾದದ್ದು ಬೇರೇನೂ ಇಲ್ಲ’ ಎಂದನು. ಈ ಉತ್ತರವು ಹಿರಣ್ಯಕಶಿಪುವಿನ ಮೇಲೆ ಬರಸಿಡಿಲು ಎರಗಿದಂತಾಗಿತ್ತು. ಕೆಂಡಾಮಂಡಲನಾದ ಅವನು ವಿವೇಚನಾಹೀನನಾದನು. ಮಗನು ಬೆಳೆಸಿಕೊಂಡಿದ್ದ ಹರಿಭಕ್ತಿಯನ್ನು ಹೋಗಲಾಡಿಸುವ ಪ್ರಯತ್ನದಲ್ಲಿ ವಿಫಲನಾದ ಅವನು ಕೊನೆಗೆ ಮಗನಾದ ಪ್ರಹ್ಲಾದನಿಗೇ ಮರಣ ಶಿಕ್ಷೆಯನ್ನು ವಿಧಿಸಲು ನಿರ್ಧರಿಸಿದನು.

ಪ್ರಹ್ಲಾದನನ್ನು ಕೊಲ್ಲಲು ಹಿರಣ್ಯಕಶಿಪು ಹುಡುಕದ ಮಾರ್ಗಗಳಿಲ್ಲ. ವಿಷ ಉಣಿಸಿದನು, ಪರ್ವತದಿಂದ ತಳ್ಳಿಸಿದನು, ಕೈಕಾಲು ಕಟ್ಟಿ ಸಮುದ್ರಕ್ಕೆ ಎಸೆಯಲಾಯ್ತು, ಬೆಂಕಿಯಿಂದ ಸುಟ್ಟಿದ್ದೂ ಆಯ್ತು. ಆದರೂ ಪ್ರಹ್ಲಾದನು ಮರಣಿಸಲಿಲ್ಲ. ಭಗವಂತನ ನಿರಂತರವಾದ ನಾಮಸ್ಮರಣೆಯೇ ಅವನನ್ನು ಕಾಪಾಡಿತ್ತು. ದೈತ್ಯ ಹಿರಣ್ಯಕಶಿಪು ವಿವೇಕಶೂನ್ಯನಾಗಿದ್ದನು. ಭಾರೀ ಸಿಟ್ಟುಗೊಂಡ ಅವನು `ನಿನ್ನ ಆ ಹರಿಯನ್ನು ತೋರಿಸು’ ಎಂದು ಪ್ರಹ್ಲಾದನಿಗೆ ಸವಾಲೆಸೆದ. ಪ್ರಹ್ಲಾದನು ಮಾತ್ರ `ತಂದೆಯೇ ಭಗವಂತನು ಸರ್ವಾಂತರ್ಯ್ಮಿಯಾಗಿದ್ದಾನೆ. ಅವನಿಲ್ಲದ ಸ್ಥಳವೇ ಇಲ್ಲ. ಪ್ರತಿಯೊಂದು ಕಡೆಯೂ ಅವನನ್ನು ನೋಡಬಹುದು’ ಎಂದು ತಾಳ್ಮೆಯಿಂದ ಉತ್ತರಿಸಿದನು.

ಸಿಟ್ಟಿನಿಂದ ಕೆಂಡಾಮಂಡಲನಾಗಿದ್ದ ಹಿರಣ್ಯಕಶಿಪು ಪ್ರಹ್ಲಾದನ ಶಾಂತ ರೀತಿಯ ಆ ಉತ್ತರದಿಂದ ರೋಸಿಹೋದನು. ತನ್ನ ಅರಮನೆಯ ಒಂದು ಕಂಬವನ್ನು ತೋರಿಸುತ್ತಾ,  `ಈ ಸ್ತಂಭದಲ್ಲಿಯೂ ಇರುವನೇ ನಿನ್ನ ಭಗವಂತ. ಇದ್ದರೆ ನನ್ನ ಎದುರಿಗೆ ಬರಲಿ. ಅವನನ್ನಿಂದು ಮುಗಿಸಿಯೇ ಬಿಡುತ್ತೇನೆ’ ಎಂದು ಕ್ರೋಧದಿಂದ ಹೇಳುತ್ತಾ ತನ್ನ ಅರಮನೆಯಲ್ಲಿನ ಆ ಕಂಭವನ್ನು ತನ್ನ ಕೈಲಿದ್ದ ಖಡ್ಗದಿಂದ ಜೋರಾಗಿ ಥಳಿಸಿದನು.

ಸರ್ವಾಂತರ್ಯಾಮಿಯಾದ ಭಗವಂತನು ಒಡನೆಯೇ ಆ ಕಂಬದಿಂದ ಪ್ರಕಟಗೊಂಡನು. ಅವನು ಪ್ರಕಟಗೊಂಡ ರೂಪವು ವಿಚಿತ್ರವಾಗಿತ್ತು. ಮಾನವಾತಾರಿಯಾಗಿದ್ದ ಶ್ರೀಹರಿಯು ಉಗ್ರವಾದ ಸಿಂಹದ ಮುಖವನ್ನು ಹೊಂದಿದ್ದನು. ಅವನ ಕೈಗಳು ಚೂಪಾದ ಉಗುರುಗಳನ್ನು ಹೊಂದಿದ್ದವು. ಆ ದೈತ್ಯಾಕಾರದ ಅರ್ಧಮನುಷ್ಯ, ಅರ್ಧ ಸಿಂಹದ ಆಕೃತಿಯು ಮಿಂಚಿನ ವೇಗದಲ್ಲಿ ಹಿರಣ್ಯಕಶಿಪುವಿನ ಮೇಲೆ ಆಕ್ರಮಣ ಮಾಡಿ ಅವನನ್ನು ನೆಲಕ್ಕೆ ಕೆಡವಿತು. ಸಾವರಿಸಿಕೊಂಡು ಎದ್ದ ಹಿರಣ್ಯಕಶಿಪು ನರಸಿಂಹದೇವನೊಂದಿಗೆ ತನ್ನ ಅಗಾಧ ಶಕ್ತಿಯೊಂದಿಗೆ ಸೆಣಸಿದ, ನರಸಿಂಹ ರೂಪಿಯಾದ ಭಗವಂತನು ಹಿರಣ್ಯಕಶಿಪುವನ್ನು ಬಿಗಿಯಾಗಿ ಹಿಡಿದು ಅನಾಯಾಸವಾಗಿ ಹೊತ್ತುಕೊಂಡು ಅರಮನೆಯ ಸಭಾಮಂಟಪದ ಹೊಸ್ತಿಲ ಮೇಲೆ ಕುಳಿತು ಅವನನ್ನು ತನ್ನ ತೊಡೆಯಮೇಲೆ ಮಲಗಿಸಿಕೊಂಡು ತೀಕ್ಷ್ಣವಾದ ಉಗುರುಗಳಿಂದ ಅವನ ಹೊಟ್ಟೆಯನ್ನು ಬಗೆದ. ಹಿರಣ್ಯಕಶಿಪುವಿನ ಚೀತ್ಕಾರ ದಿಕ್ಕು ದಿಕ್ಕುಗಳಲ್ಲೂ ವ್ಯಾಪಿಸಿತು. ಬ್ರಹ್ಮನಿಂದ ಪಡೆದಿದ್ದ ವರಗಳೆಲ್ಲವೂ ನಿಷ್ಫಲವಾಗಿದ್ದವು. ಕೊನೆಗೂ ಆ ದಿನದ ಸಂಧ್ಯಾಕಾಲದಲ್ಲಿ ಅವನಿಗೆ ಮರಣವುಂಟಾಗಿತ್ತು.

ಹಿರಣ್ಯಕಶಿಪುವಿನ ಸಂಹಾರದಿಂದ ಲೋಕಕಲ್ಯಾಣ ಉಂಟಾಯಿತು. ಬ್ರಹ್ಮನೇ ಮೊದಲಾದ ದೇವತೆಗಳು ಭಗವಂತನಿಗೆ ತಮ್ಮ ಸ್ತುತಿಗಳನ್ನು ಅರ್ಪಿಸಿದರು. ಅವನ ಮೇಲೆ ಪುಷ್ಪಧಾರೆಗೈದರು. ತನ್ನನ್ನು  ಭಕ್ತಿಯಿಂದ ಸ್ತುತಿಸುತ್ತಿದ್ದ ಪ್ರಹ್ಲಾದನನ್ನು ನೃಸಿಂಹದೇವನು ವಾತ್ಸಲ್ಯದಿಂದ `ನಿನ್ನಂತಹ ಶುದ್ಧ ಭಕ್ತನಿಗೆ ಜನ್ಮ ನೀಡುವ ಕುಟುಂಬದವರೆಲ್ಲರೂ ಜನನ ಮರಣಗಳ ಚಕ್ರದಿಂದ ಮುಕ್ತರಾಗುತ್ತಾರೆ’ ಎಂದು ವರವನ್ನು ದಯಪಾಲಿಸಿದನು.

ಭಕ್ತಿಯ ಪ್ರಭಾವವನ್ನು ತಿಳಿದಿರಲ್ಲಾ ಮಕ್ಕಳೇ! ಹರಿನಾಮ ಸಂಕೀರ್ತನೆಯ ಮೂಲಕ ನಾವೆಲ್ಲರೂ ಹರಿಭಕ್ತರಾಗಿ ಜನನ ಮರಣಗಳ ಚಕ್ರದಿಂದ ಮುಕ್ತಿ ಹೊಂದುವ ಸಾಧನೆಯನ್ನು ಮಾಡೋಣವೇ?    

ಈ ಲೇಖನ ಶೇರ್ ಮಾಡಿ