ಕಳೆದ ನೂರು ವರ್ಷಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನವು ಅದ್ಭುತ ಪ್ರಗತಿಯನ್ನು ಸಾಧಿಸಿದೆ. ಅನೇಕ ವಿಷಯಗಳ ಕಾರ್ಯರೂಪವನ್ನು ಅರಿತುಕೊಳ್ಳುವುದು ಸಾಧ್ಯವಾಗಿದೆ. ಈ ಮೊದಲು ನಾವು ಪವಾಡ ಎಂದುಕೊಳ್ಳುತ್ತಿದ್ದ ವಸ್ತುಗಳ ಉತ್ಪಾದನೆ ಈಗ ಸಾಧ್ಯವಾಗಿದೆ.
ಇಷ್ಟೆಲ್ಲ ಯಶಸ್ವಿಯಾಗಿದೆ, ಒಂದಲ್ಲಾ ಒಂದು ದಿನ ವಿಜ್ಞಾನವು ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡಿ ವಿವರಿಸುತ್ತದೆ ಎಂದು ಜನರು ನಂಬಿದ್ದಾರೆ. ಆದರೆ ತಂತ್ರಜ್ಞಾನ ಲಾಭದ ಜೊತೆಗೆ ಅದು ಅನೇಕ ಹೊಸ ಸಮಸ್ಯೆಗಳನ್ನೂ ತಂದಿದೆ ಎನ್ನುವುದನ್ನು ನಿರ್ಲಕ್ಷಿಸಲಾಗಿದೆ. ಮುಖ್ಯವಾಗಿ ಸಾಮಾಜಿಕ ಮತ್ತು ಪರಿಸರ ಕುರಿತ ಸಮಸ್ಯೆಗಳು. ವಿಜ್ಞಾನದ ಕೊಡುಗೆಯು ಮಿಶ್ರ ರೀತಿಯದು.
ಖ್ಯಾತ ತತ್ತ್ವಜ್ಞಾನಿ ವಿಲ್ ಡುರಂತ್ ಬರೆಯುತ್ತಾರೆ, “(ವಿಜ್ಞಾನವು) ಬಿಡಿಯಾದ ಸಾವಿನ ಪ್ರಮಾಣವನ್ನು ಕಡಮೆ ಮಾಡುತ್ತದೆ. ಮತ್ತು ಯುದ್ಧದಲ್ಲಿ ನಮ್ಮನ್ನು ಬೃಹತ್ ಪ್ರಮಾಣದಲ್ಲಿ ಕೊಲ್ಲುತ್ತದೆ.”

ಸಾಧನಗಳು ಹೆಚ್ಚಾಗುತ್ತಿದ್ದರೂ ಬದುಕಿನ ಗುಣಮಟ್ಟವು ನಷ್ಟವಾಗುತ್ತಿದೆ ಎಂದು ಅನೇಕ ವ್ಯಾಖ್ಯಾನಕಾರರು ಗೋಳಾಡುತ್ತಾರೆ. ಜ್ಞಾನ ಮತ್ತು ಗಣಕ ಶಕ್ತಿಯು ವ್ಯಾಪಕವಾಗುತ್ತಿದ್ದರೂ ಭೂಮಿಯ ಮೇಲಿನ ಜೀವನವು ಉತ್ತಮವಾಗುವ ಬದಲು ಕುಸಿಯುತ್ತಿದೆಯೇ?
ವಿಜ್ಞಾನ ಮತ್ತು ತಂತ್ರಜ್ಞಾನ ಸೇರಿದಂತೆ ಲೌಕಿಕ ಮಾರ್ಗದ ಮೂಲಕ ಪರಿಪೂರ್ಣತೆಗಾಗಿ ಅನ್ವೇಷಿಸುವುದು ಕನಸು, ಎಂದಿಗೂ ಸಾಕಾರಗೊಳ್ಳುವುದಿಲ್ಲ ಎಂದು ಭಗವದ್ಗೀತೆಯು ಹೇಳುತ್ತದೆ. ಲೋಕವು ತಾತ್ಕಾಲಿಕ ಮತ್ತು ಸಂಕಷ್ಟದ್ದು ಎಂದು ಕೃಷ್ಣನು ಹೇಳಿದ್ದಾನೆ. ವಿಜ್ಞಾನವು ಒಪ್ಪಿಕೊಳ್ಳುತ್ತದೆಯೆ? ವಿಶ್ವವು ತಾತ್ಕಾಲಿಕ ಎನ್ನುವುದನ್ನು ವಿಜ್ಞಾನವು ಒಪ್ಪಿಕೊಂಡರೂ ವಿಜ್ಞಾನದ ಅಂತಿಮ ಗುರಿಯು ಎಲ್ಲ ಸಂಕಷ್ಟಗಳಿಂದ ಮುಕ್ತವಾಗುವುದು. ಅಂದರೆ ವಿಶ್ವದ ಸಂಪೂರ್ಣ ನಿಯಂತ್ರಣ. ಅದು ಸಾಧ್ಯವೇ? ಇಲ್ಲ ಎಂದು ಕೃಷ್ಣ ಹೇಳುತ್ತಾನೆ.
ಹಾಗಾದರೆ ಕೃಷ್ಣಭಕ್ತರು ತಂತ್ರಜ್ಞಾನವನ್ನು ತ್ಯಜಿಸಬೇಕೆ? ಖಂಡಿತ ಅಗತ್ಯವಿಲ್ಲ. ಶ್ರೀಲ ಪ್ರಭುಪಾದರು ಸರಳವಾದ ಕೃಷಿ ಬದುಕನ್ನು ಉತ್ತೇಜಿಸಿದರು. ತಂತ್ರಜ್ಞಾನವನ್ನು ತಿರಸ್ಕರಿಸಬೇಡಿ ಎಂದು ಹೇಳಿದ ಶ್ರೀಲ ಪ್ರಭುಪಾದರು, ಅದರ ಅತಿಯಾದ ಭರವಸೆಗಳನ್ನು ತಿರಸ್ಕರಿಸಿ ಎಂದು ಬೋಧಿಸಿದರು. ತಂತ್ರಜ್ಞಾನವನ್ನು ಕೃಷ್ಣನ ಸೇವೆಯಲ್ಲಿ ಬಳಸಬೇಕೆಂದು ಅವರು ಬಯಸಿದರು.

ಕೃಷ್ಟಪ್ರಜ್ಞೆ ಆಂದೋಲನವು ಇಂದು ಹೆಚ್ಚು ಹೆಚ್ಚು ಜನರನ್ನು ತಲಪಲು ನೆರವಾಗಿದೆ. ಕೃಷ್ಣಪ್ರೇಮವನ್ನು ವರ್ಣಿಸುವ, ಕೃಷ್ಣಕಥೆಗಳನ್ನು ಕುರಿತ ಸಂದೇಶಗಳು ಈಗ ಎಲ್ಲಡೆ ಪ್ರಸಾರವಾಗುತ್ತಿದೆ. ಜನರು ಅದರಿಂದ ಆಕರ್ಷಿತರಾಗುತ್ತಿದ್ದಾರೆ. ಇಸ್ಕಾನ್ ಕಾರ್ಯಕ್ರಮಗಳನ್ನು ನೇರ ಪ್ರಸಾರ ಮಾಡುವ ವ್ಯವಸ್ಥೆಯೂ ಜನಪ್ರಿಯವಾಗುತ್ತಿದೆ. ಇವೆಲ್ಲಾ ಸಾಮಾನ್ಯ ಸಾಧನೆಗಳಲ್ಲ. ತಂತ್ರಜ್ಞಾನದ ಸದುಪಯೋಗ.
ಆದರೂ ಭೌತಿಕ ಲೋಕದಲ್ಲಿ ಸಂಕಷ್ಟವು ಬದುಕಿನ ಒಂದು ಭಾಗ ಎನ್ನುವ ಕೃಷ್ಣನ ಮಾತನ್ನು ನಾವು ಸ್ವೀಕರಿಸಬೇಕು. ನಮಗೆ ಕಾಯಿಲೆ ಬರುತ್ತದೆ, ನಾವು ವೃದ್ಧರಾಗುತ್ತೇವೆ ಮತ್ತು ಸಾಯುತ್ತೇವೆ. ತಂತ್ರಜ್ಞಾನದಿಂದ ಭೂಲೋಕದಲ್ಲಿ ಸ್ವರ್ಗವನ್ನು ನಿರ್ಮಿಸಲು ಎಷ್ಟಾದರೂ ಪ್ರಯತ್ನ ಮಾಡಿ, ಅದು ಯಶಸ್ವಿಯಾಗುವುದಿಲ್ಲ.

ಪ್ರಕೃತಿಯ ವಿರುದ್ಧದ ಹೋರಾಟದಿಂದ ಜಯ ಸಾಧ್ಯವಿಲ್ಲ. ಪ್ರಕೃತಿಯ ಸೃಷ್ಟಿಕರ್ತ ಭಗವಂತನಿಗೆ ಶರಣಾಗುವುದರಿಂದ ಮಾತ್ರ ಜಯ ಸಾಧ್ಯ. ಅಂದರೆ ನಮ್ಮನ್ನು, ಆತ್ಮವನ್ನು ಸಹಜವಾಗಿ ಪರಮಾತ್ಮನಿಗೆ ಅಧೀನವಾಗುವಂತೆ ಮಾಡುವುದು. ಅದೇ ಆತ್ಮಸಾಕ್ಷಾತ್ಕಾರ. ಶರಣಾದ ಭಕ್ತನು ಕೃಷ್ಣನ ಭಕ್ತಿಯಲ್ಲಿ ವರ್ಧಿಸುತ್ತಾನೆ. ಮತ್ತೊಂದು ಕಡೆ, ಲೌಕಿಕನು ಸದಾ ಸೋಲುವ ಹೋರಾಟದಲ್ಲಿ ತೊಡಗಿರುತ್ತಾನೆ. ಇದು ಪ್ರಕೃತಿ ನಿಯಮ!