ಪರಮ ಕರುಣ – ಕರುಣಾ ಸಾಗರ
ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ
(ಇಸ್ಕಾನ್ ಸಂಸ್ಥಾಪನಾಚಾರ್ಯರು) ಅವರಿಗೆ ಅರ್ಪಣೆ.
ನಿತ್ಯಾನಂದಂ ಅಹಂ ವಂದೇ ಕರ್ಮೇ ಲಂಬಿತ ಮೌಕ್ತಿಕಂ
ಚೈತನ್ಯಾಗ್ರಜ ರೂಪೇಣ ಪವಿತ್ರೀಕೃತ ಭೂತಲಂ
ನಿತ್ಯಾನಂದ ಪ್ರಭು ಯಾರು?

ಯಾರ ಒಂದು ಕಿವಿಯಲ್ಲಿ ಮುತ್ತಿನ ಲೋಲಾಕು ತೂಗಾಡುತ್ತಿದೆಯೋ, ಯಾರು ಶ್ರೀ ಚೈತನ್ಯ ಮಹಾಪ್ರಭುಗಳ ಹಿರಿಯ ಸಹೋದರನೋ ಮತ್ತು ಯಾರು ಈ ಭೂಮಿಯ ಶುದ್ಧೀಕರಣನೋ ಆ ಶ್ರೀ ನಿತ್ಯಾನಂದ ಪ್ರಭುಗಳಿಗೆ ನಾನು ನಮಿಸುವೆ.
ಈ ಕಲಿಯುಗದಲ್ಲಿ ಯಾರು ಸಾಕಷ್ಟು ಬುದ್ಧಿಯನ್ನು ಪಡೆದುಕೊಂಡಿರುವರೋ ಅವರು ಸಂಕೀರ್ತನೆ ಯಜ್ಞವನ್ನು ಮಾಡುತ್ತ ಸಹವರ್ತಿಗಳ ಜೊತೆಗೂಡಿರುವ ಭಗವಂತನನ್ನು ಆರಾಧಿಸುವರು ಎಂದು ಭಾಗವತ ಪುರಾಣವು ಹೇಳುತ್ತದೆ.
ಧರ್ಮಗ್ರಂಥಗಳ ಪ್ರಕಾರ, ಭಾರತದ ಉಪಖಂಡದಾದ್ಯಂತ ಸಂಕೀರ್ತನಾ ಆಂದೋಲನವನ್ನು ಹರಡುವ ಯುಗ ಅವತಾರವೇ ಶ್ರೀ ಚೈತನ್ಯ ಮಹಾಪ್ರಭು.
ಅವರು ಗೋಪ್ಯವಾಗಿ, ರಾಧಾ ಮತ್ತು ಕೃಷ್ಣರ ಏಕರೂಪವಾಗಿ, ಅಧಿಕೃತವಾಗಿ ಪ್ರಕಟಗೊಂಡಿದ್ದಾರೆ. ಮೂಲ ದೇವೋತ್ತಮ ಪರಮ ಪುರುಷನು ತನ್ನ ಆಪ್ತ ಲಕ್ಷಣದಲ್ಲಿ ಕಾಣಿಸಿಕೊಂಡಿರುವುದು ಹಾಗೆ.
ಮಹಾಪ್ರಭು ಯಾವಾಗಲೂ ತಮ್ಮ ಪೂರ್ಣ ವಿಸ್ತರಣೆ (ನಿತ್ಯಾನಂದ ಪ್ರಭು), ತಮ್ಮ ಅವತಾರ (ಅದ್ವೈತ ಆಚಾರ್ಯ), ತಮ್ಮ ಆಂತರಿಕ ಶಕ್ತಿ (ಗದಾಧರ) ಮತ್ತು ತಮ್ಮ ಕನಿಷ್ಠ ಶಕ್ತಿ (ಶ್ರೀವಾಸ ಠಾಕುರ) ಗಳ ಜೊತೆಯಲ್ಲಿಯೇ ಇರುತ್ತಾರೆ.

ಭಗವಂತನು ಅವತಾರ ಮಾಡಿದಾಗಲೆಲ್ಲ ಈ ಐದು ಲಕ್ಷಣಗಳೊಂದಿಗೆ ಅವತರಿಸುತ್ತಾನೆ.
ನಿತ್ಯಾನಂದ ಪ್ರಭುಗಳ ದಯೆ ಇಲ್ಲದೆ ಮಹಾಪ್ರಭುಗಳನ್ನು ಅರ್ಥ ಮಾಡಿಕೊಳ್ಳುವುದು ಸಾಧ್ಯವಿಲ್ಲ ಅಥವಾ ಮಹಾಪ್ರಭುಗಳ ಬಳಿಗೆ ಹೋಗುವುದೂ ಸಾಧ್ಯವಿಲ್ಲ. ನಿತ್ಯಾನಂದ ಪ್ರಭುಗಳು ಈ ವಿಶ್ವದ ಪ್ರಧಾನ ಗುರುಗಳು. ಅವರು ಮಹಾಪ್ರಭು ಮತ್ತು ಭಕ್ತರ ನಡುವೆ ಮಧ್ಯವರ್ತಿಯಾಗಿ ಸೇವೆ ಸಲ್ಲಿಸುವವರು.
ಶ್ರೀ ಕೃಷ್ಣನಿಗೆ ಬಲರಾಮನು ಎರಡನೆಯ ಶರೀರ ಇದ್ದಂತೆ ಮಹಾಪ್ರಭುಗಳಿಗೆ ನಿತ್ಯಾನಂದರಾಮನು ಎರಡನೆಯ ದೇಹ. ಭಗವಂತನ ಇತರ ಎಲ್ಲ ರೂಪಗಳು ಮತ್ತು ವಿಸ್ತರಣೆಗಳು ಈ ಎರಡನೆಯ ದೇಹದಿಂದಲೇ ಹೊರಹೊಮ್ಮುತ್ತವೆ.
ನಿತ್ಯಾನಂದ ಪ್ರಭು ಮೂಲ ಸಂಕರ್ಷಣ, ಆದಿಪುರುಷ, ಚತುರ್ವ್ಯೂಹ. ಗರ್ಭೋದಕಶಾಯಿ ವಿಷ್ಣು, ಕ್ಷೀರೋದಕಶಾಯಿ ವಿಷ್ಣು ಮತ್ತು ಲಕ್ಷ್ಮಣ. ಅವರು ಇಡೀ ಪರವ್ಯೂಮ, ವೈಕುಂಠ ಮತ್ತು ಕೃಷ್ಣಲೋಕ – ಇವು ಆಧ್ಯಾತ್ಮಿಕ ಲೋಕದ ನಿಜ ತತ್ತ್ವ, ತಿರುಳು!

ನಿತ್ಯಾನಂದ ಪ್ರಭುಗಳು ಮಹಾಪ್ರಭುಗಳಿಗಿಂತ ಒಂದು ದಶಕಕ್ಕೂ ಹೆಚ್ಚು ಹಿರಿಯರು. ನಿತ್ಯಾನಂದರು ಗಾಭೀರ್ಯರು. ಮತ್ತು ಪ್ರೇಮದಿಂದ ಅಮಲೇರಿಸುವಂತಿರುವ ಅವರ ನೇತ್ರಗಳು ಗುನುಗುವ ಹಕ್ಕಿಗಳು ಥಟ್ಟನೆ ತೀವ್ರವಾಗಿ ಹಾರಾಡುವಂತೆ ಅವರ ರೆಪ್ಪೆಗಳ ಕೆಳಗೆ ತೀಕ್ಷ್ಣವಾಗಿ ಹೊರಳುತ್ತವೆ.
ಬಲರಾಮನಂತೆ ಶ್ವೇತವರ್ಣದವರಾದರೂ ಅವರು ವಿಷ್ಣುವಿನ ಕೆಲವು ರೂಪಗಳೊಂದಿಗೆ ಗುರುತಿಸಿಕೊಳ್ಳಲು ಕೆಲವು ಬಾರಿ ಹೊಳೆಯುವ ಕಪ್ಪು ವರ್ಣವನ್ನೂ ಹೊಂದುತ್ತಾರೆ.
ಅವರ ವದನವು ಅಸಂಖ್ಯ ಚಂದ್ರರಿಗಿಂತ ಹೆಚ್ಚು ಸುಂದರ. ತಾಂಬೂಲವನ್ನು ಅಗೆಯುವುದರಿಂದ ಅವರ ಹಲ್ಲುಗಳು ಹೊಳೆಯುವ ಕೆಂಪು ವರ್ಣ. ಅವರ ಅಮೃತದ ಒಂದು ಹನಿಯನ್ನಾದರೂ ಪಡೆಯುವ ಕಾತರದಿಂದ ಅವರ ಪಾದಗಳ ಅಡಿಯಲ್ಲಿ ಜೇನು ನೊಣಗಳು ಭಾವಾವೇಶದಿಂದ ನರ್ತಿಸುತ್ತವೆ. ಅದೇ ಕಾಲುಗಳು ಕಿಣಿಕಿಣಿ ಶಬ್ದ ಮಾಡುವ ಗೆಜ್ಜೆಗಳಿಂದ ಅಲಂಕೃತಗೊಂಡಿದೆ. ಅವರ ಕಿವಿಯನ್ನು ಅಲಂಕರಿಸಿರುವ ಚಿನ್ನದ ಆಭರಣ, ತೋಳ್ಬಂದಿ ಮತ್ತು ಬಳೆಗಳು ಸುಂದರ ಗೆಜ್ಜೆಗಳಿಗೆ ಪೂರಕವಾಗಿವೆ. ವನ್ಯ ಅವಧೂತನಂತೆ ಅವರದು ನಿರಾತಂಕ ಮನಸ್ಥಿತಿ. ಅವರ ಮುಂದಿನ ಹೆಜ್ಜೆ ಏನೆನ್ನುವುದು ಯಾರಿಗೂ ತಿಳಿಯದು.
ನಿತಾಯ್ ಬಾಲ್ಯ
ಅವರನ್ನು ನಿತಾಯ್ ಎಂದು ಕರೆಯಲಾಗುತ್ತಿತ್ತು. ಬಾಲ್ಯದಿಂದಲೂ ಅವರಿಗೆ ಸ್ನೇಹಿತರ ಆಪ್ತ ಬಳಗವಿತ್ತು. ಅವರೆಲ್ಲರೂ ಜೊತೆಗೂಡಿ ಶ್ರೀ ಕೃಷ್ಣನ ಲೀಲಗಳನ್ನು ಅನುಕರಿಸುತ್ತಿದ್ದರು. ಎಲ್ಲ ಮಕ್ಕಳೂ ಮಾಡುವಂತೆ ಈ ಹುಡುಗರೂ ಕೃಷ್ಣ ಲೀಲೆಯಲ್ಲಿ ಸಂಪೂರ್ಣವಾಗಿ ತಲ್ಲೀನರಾಗಿ ನಲಿಯುತ್ತಿದ್ದರು. ನವಿರಾಗಿ ನೇಯ್ದ ಇಂತಹ ಕಥೆಗಳನ್ನು ಕುರಿತು ಪ್ರತಿ ದಿನ ಪ್ರದರ್ಶಿಸುತ್ತ ಮಕ್ಕಳು ನಿತಾಯ್‌ನನ್ನು ತಮ್ಮ ಸಹಜ ನಾಯಕ ಮತ್ತು ಮಿತ್ರನನ್ನಾಗಿ ಪ್ರೀತಿಸತೊಡಗಿದರು. ಅವರಲ್ಲಿ ನಿತಾಯ್ ಅತ್ಯಂತ ಕಲ್ಪನಾಶೀಲನಾಗಿದ್ದನು. ಅವನು ಅವರಿಗೆ ರಾಕ್ಷಸನ ವೇಷಭೂಷಣವನ್ನು ತೊಡಿಸಿದಾಗ ಅವರು ನಕ್ಕು ನಲಿಯುತ್ತಿದ್ದರು. ಕೆಲವು ಬಾರಿ ನಿತಾಯ್ ಆಟಿಕೆಗಳಲ್ಲಿ ಅಸುರರನ್ನು ರೂಪಿಸುತ್ತಿದ್ದನು. ಅವುಗಳಿಗೆ ಬಕಾಸುರ, ಅಘಾಸುರ ಎಂದೆಲ್ಲ ಹೆಸರಿಟ್ಟು ಕರೆಯುತ್ತಿದ್ದನು. ಅಷ್ಟೇ ಅಲ್ಲ, ಅವುಗಳೊಂದಿಗೆ ಯುದ್ಧ ಮಾಡುವಂತೆ ನಟಿಸುತ್ತ ಅವಗಳ ಸಂಹಾರ ಮಾಡುತ್ತಿದ್ದನು.
ಕೃಷ್ಣನು ತನ್ನ ಲೀಲೆಯಲ್ಲಿ ಮಾಡಿದಂತೆ ನಿತಾಯ್ ಕೆಲವು ಬಾರಿ ಸ್ಥಳೀಯ ಗೌಳಿಗನ ಬಳಿಯಿಂದ ಬೆಣ್ಣೆ ಮತ್ತು ಮೊಸರನ್ನು ಕದಿಯುತ್ತಿದ್ದನು ಮತ್ತು ತನ್ನ ಮಿತ್ರರು ಅದನ್ನು ನೋಡುವಂತೆ ಮಾಡುತ್ತಿದ್ದನು. ಇಷ್ಟಾದರೂ ಹಾಲಿನವನು ದೂರುತ್ತಿರಲಿಲ್ಲ. ಬದಲಿಗೆ ಅವನು ನಿತಾಯ್ ಮತ್ತು ಅವನ ಮಿತ್ರಗಣ ಬರುವುದೆಂದು ನಿರೀಕ್ಷಿಸುತ್ತ ಹೆಚ್ಚುವರಿ ಹಾಲು ಉತ್ಪನ್ನವನ್ನು ತೆಗೆದಿರಿಸುವ ಸಹವರ್ತಿಯಾಗಿದ್ದನು.
ಏಕಚಕ್ರಾದ ನಿವಾಸಿಗಳೆಲ್ಲರೂ ನಿತಾಯ್‌ನನ್ನು ತುಂಬಾ ಪ್ರೀತಿಸುತ್ತಿದ್ದರು. ಅವರು ಈ ಅಪೂರ್ವ ಬಾಲಕನ ಮೋಹಕ್ಕೊಳಪಟ್ಟರು ಮತ್ತು ಅವನನ್ನು ತಮ್ಮವನೆಂಬಂತೆ ಪ್ರೀತಿಸುತ್ತಿದ್ದರು.

ಒಂದು ದಿನ ಒಬ್ಬ ಬಾಲಕನು ಅಕ್ರೂರನ ವೇಷ ಹಾಕಿಕೊಂಡನು. ಅನಂತರ ಕಂಸನ ಆದೇಶದಂತೆ ಕೃಷ್ಣ ಮತ್ತು ಬಲರಾಮರನ್ನು ವೃಂದಾವನದಿಂದ ಹೊರಗೆ ಕರೆದುಕೊಂಡು ಹೋದನು. ಗೋಪಿಯರೊಂದಗಿನ ಅಗಲಿಕೆಯ ದುಃಖದಿಂದ ನಿತಾಯ್ ಕಣ್ಣೀರಿಟ್ಟನು. ಅವನು ಕಣ್ಣೀರಧಾರೆ ಹರಿಸಿದನು. ಅವನ ನಟನೆ ಎಷ್ಟು ಕರಾರುವಾಕ್ಕಾಗಿ ಇತ್ತೆಂದರೆ ಅದನ್ನು ನೋಡುತ್ತಿದ್ದವರಿಗೆ ಅವನು ನಟಿಸುತ್ತಿರುವನೋ ಅಥವಾ ತನ್ನ ಪಾತ್ರವನ್ನು ಸ್ವತಃ ಅನುಭವಿಸುತ್ತಿರುವನೋ ಎನ್ನುವ ಪ್ರಶ್ನೆ ಮೂಡಿತು. ಕೃಷ್ಣ, ಬಲರಾಮ ಅಥವಾ ಭಗವಂತನ ಇನ್ನಾವುದೇ ಅವತಾರದ ಪಾತ್ರಗಳಲ್ಲಿಯೂ ಕೂಡ ನಿತಾಯ್ ಅಪ್ರತಿಮ ಅಭಿನಯ ತೋರುತ್ತಿದ್ದ. ಅವನ ಅತ್ಯಂತ ಪ್ರೀತಿಯ ಪಾತ್ರವೆಂದರೆ ಶ್ರೀರಾಮನ ಸೋದರ ಲಕ್ಷ್ಮಣನ ಪಾತ್ರ. ಲಕ್ಷ್ಮಣನ ವೇಷದಲ್ಲಿ ನಿತಾಯ್ ಅತ್ಯಂತ ಭಾವೋದ್ರೇಕದಿಂದ ಮಾತನಾಡುತ್ತಿದ್ದನು. ವಾಸ್ತವವಾಗಿ ನಿತ್ಯಾನಂದರು ಬಲರಾಮನಾಗಿದ್ದರಿಂದ ರಾಮನ ತಮ್ಮ ಲಕ್ಷ್ಮಣನ ವಿವಿಧ ಮನಸ್ಥಿತಿಯನ್ನು ಅವರು ಅನುಭವಿಸಿ ತೋರುತ್ತಿದ್ದರು. ಅವರು ತಮ್ಮ ಪಾತ್ರಗಳಲ್ಲಿ ಎಷ್ಟು ತಲ್ಲೀನರಾಗುತ್ತಿದ್ದರೆಂದರೆ ಅನೇಕ ಬಾರಿ ಸೂಕ್ತವಾದ ಸಂಭಾಷಣೆಯನ್ನು ಸೇರಿಸಿ ಹೇಳುತ್ತಿದ್ದರು. ಇವರ ನಾಟಕ ಅಭಿನಯದಲ್ಲಿ ಏನೋ ಅತೀಂದ್ರಿಯ ಶಕ್ತಿ ಅಡಗಿದೆ ಎಂದು ಜನರು ಭಾವಿಸುತ್ತಿದ್ದರು. ನಿತ್ಯಾನಂದರ ನಟನೆಯು ನಾಟಕದೊಳಗಿನ ನಾಟಕವೆನ್ನುವುದು ಕೆಲವರಿಗಂತೂ ತಿಳಿದಿತ್ತು. ಆ ಆಂತರಿಕ ನಾಟಕವು ನೈಜ ಬದುಕಿನ ಅಭಿವ್ಯಕ್ತಿಯಾಗಿತ್ತು – ಅದುವೇ ಭಗವಂತನ ಲೀಲೆ.
ತಮ್ಮ ಲೀಲೆಯ ಮೊದಲ 12 ವರ್ಷಗಳ ಕಾಲ ನಿತ್ಯಾನಂದ ಪ್ರಭು ಏಕಚಕ್ರಾದಲ್ಲಿ ನೆಲೆಸಿದ್ದರು ಮತ್ತು ತಮ್ಮ ನೆರೆಯವರೊಂದಿಗೆ ಅತ್ಯಂತ ಪ್ರೀತಿಪ್ರೇಮದ ಲೀಲೆಗಳನ್ನು ಹಂಚಿಕೊಂಡರು.
ಸಂನ್ಯಾಸಿಯ ಆಗಮನ
ಆದರೆ, ಅವರ 13ನೆಯ ವರ್ಷಕ್ಕೆ ಸ್ವಲ್ಪ ಮುನ್ನ, ಒಬ್ಬ ಪ್ರವಾಸಿ ಬೈರಾಗಿ ನಿತ್ಯಾನಂದರ ಮನೆಗೆ ಬಂದರು. ಅವರು ಸಂತ ಲಕ್ಷ್ಮೀಪತಿ ತೀರ್ಥ ಎಂದು ಕೆಲವರು ಹೇಳುತ್ತಾರೆ. ನಿತ್ಯಾನಂದರ ತಂದೆ ಹದಾಯ್ ಪಂಡಿತ್ ಆ ಸಂನ್ಯಾಸಿ, ತಪಸ್ವಿಯನ್ನು ತಮ್ಮ ಅತಿಥಿಯನ್ನಾಗಿ ಸ್ವಾಗತಿಸಿದರು. ಅತ್ಯಂತ ಗೌರವ ಮತ್ತು ಬ್ರಾಹ್ಮಣೀಯ ಧರ್ಮದ ಅನ್ವಯ ಸತ್ಕರಿಸಿದರು. ತಮ್ಮ ಬಳಿ ಇದ್ದುದನ್ನು ಅವರಿಗೆ ನೀಡಿದರು. ದಯೆಯಿಟ್ಟು ನಿಮಗೆ ಬೇಕಾದುದನ್ನೆಲ್ಲ ಸ್ವೀಕರಿಸಿ. ನನ್ನ ಮನೆಯು ನಿಮ್ಮ ಮನೆಯಂತೆಯೇ. ನಿಮಗೆ ಅನಿಸಿದನ್ನು ತೆಗೆದುಕೊಳ್ಳಿ ಎಂದು ಹದಾಯ್ ಪಂಡಿತ್ ಆ ತಪಸ್ವಿಗೆ ಹೇಳಿದರು. ತಮ್ಮದು ಸರಳವಾದ ಬದುಕು ಮತ್ತು ತಮ್ಮ ಅಗತ್ಯಗಳು ಅತ್ಯಂತ ಕಡಮೆಯಾದುದು ಎಂದು ಆ ತಪಸ್ವಿ ವಿವರಿಸಿದರು. ಆದರೆ ತಮಗೆ ಒಂದು ಅಗತ್ಯವಿದೆ ಎಂದು ಅವರು ನುಡಿದರು. ಏನದು? ತಮಗೆ ತಮ್ಮ ಯಾತ್ರೆಗಾಗಿ ಒಬ್ಬ ಸಂಗಾತಿಯ ಅಗತ್ಯವಿದೆ ಮತ್ತು ಅಂತಹ ಸೇವೆಗೆ ಯುವ ನಿತಾಯ್ ಸೂಕ್ತವಾದವ ಎಂದು ಅವರು ವಿವರಿಸಿದರು. ಅದನ್ನು ಕೇಳಿ ಹದಾಯ್ ಪಂಡಿತರ ಎದೆಗುಂದಿತು ಮತ್ತು ಅವರು ಚಿಂತಾಮಗ್ನರಾದರು. ಕೊನೆಗೆ ಮನಸ್ಸಿಲ್ಲದ ಮನಸ್ಥಿತಿಯಲ್ಲಿ ಮಗನನ್ನು ಕಳುಹಿಸಲು ಒಪ್ಪಿದರು. ಏನಾದರಾಗಲಿ, ಸಂನ್ಯಾಸಿಗೆ ಬೇಕಾದುದನ್ನು ನೀಡಲು ಹದಾಯ್ ಪಂಡಿತ ಮೊದಲೇ ಒಪ್ಪಿದ್ದರಲ್ಲವೇ? ಮಾತಿಗೆ ತಪ್ಪಿದರೆ ಅದು ಧರ್ಮಗ್ರಂಥದ ಆದೇಶವನ್ನು ಮೀರಿದಂತೆ ಎನ್ನುವುದು ಅವರಿಗೆ ತಿಳಿದಿತ್ತು.
ಈ ಅದ್ಭುತ ಸಂನ್ಯಾಸಿಯೊಂದಿಗೆ ಹೋಗುವ ಯಾತ್ರೆಯಲ್ಲಿ ನಾನು ಪವಿತ್ರ ಸ್ಥಳಗಳಿಗೆ ಭೇಟಿ ನೀಡುವುದನ್ನು ಆನಂದಿದುವೆ ಎಂದು ನಿತಾಯ್ ಯೋಚಿಸಿದನು. ಮತ್ತು ಮಹಾಪ್ರಭು ಸಿದ್ಧರಾದ ಮೇಲೆ ನಾನು ನವದ್ವೀಪಕ್ಕೆ ಹೋಗುವೆ ಎಂದೂ ನಿತಾಯ್ ಯೋಚಿಸಿದನು. ಈ ರೀತಿಯಲ್ಲಿ, ನಿತಾಯ್ ಸಂತೋಷದಿಂದ ಏಕಚಕ್ರವನ್ನು ತೊರೆದು ಆ ಪ್ರವಾಸಿ ಸಂನ್ಯಾಸಿಯ ಜೊತೆಯಲ್ಲಿ ಹೊರಟುಬಿಟ್ಟನು.

ಆದರೆ ನಿತಾಯ್ ತಂದೆ ತಾಯಿ ಮಾತ್ರ ಅವನ ಸಂತೋಷದಲ್ಲಿ ಭಾಗಿಯಾಗಲಿಲ್ಲ. ಅವರಿಗೆ ಅದೊಂದು ದುಃಸ್ವಪ್ನವಾಗಿತ್ತು. ಹಾಗಾದರೆ ಆ ಸಂನ್ಯಾಸಿಯು ತಮ್ಮ ಪ್ರೀತಿಯ ಮಗನನ್ನು ಕರೆದುಕೊಂಡು ಹೋಗಲು ಅವರು ಹೇಗೆ ಒಪ್ಪಿದರು? ತಮಗೆ ಏನಾಯಿತು? ಅವರಿಗೇ ತಿಳಿಯದಾಯಿತು.
ಅವರು ಚಿಂತಿಸತೊಡಗಿದರು, ಅವನು ಸದಾ ಪ್ರವಾಸ ಮಾಡುತ್ತ ಕಷ್ಟದ ಬದುಕು ಸಾಗಿಸುತ್ತಿರಬಹದು. ಅವರು ಅವನ ಮಧುರ ಸಂಗವನ್ನು ಕಳೆದುಕೊಂಡರು. ವೃದ್ಧರಾಗುತ್ತಿದ್ದ ಹದಾಯ್ ಪಂಡಿತ್ ಅವರಿಗೆ ನಿತಾಯ್‌ನ ಅಗಲಿಕೆಯನ್ನು ತಡೆದುಕೊಳ್ಳುವುದು ಸಾಧ್ಯವಾಗಲಿಲ್ಲ. ಕೆಲ ಸಮಯದ ಅನಂತರ ಅವರು ಈ ಲೋಕವನ್ನು ತ್ಯಜಿಸಿದರು. ಅಗಲಿಕೆಯ ನೋವು, ದುಃಖದಿಂದ (ಹಾವು ಕಡಿತದಿಂದ) ಅವರು ದೇಹ ತ್ಯಜಿಸಿದರು.
ಮುಂದಿನ 20 ವರ್ಷಗಳ ಕಾಲ ನಿತಾಯ್ ಒಂದು ಪವಿತ್ರ ಸ್ಥಳದಿಂದ ಮತ್ತೊಂದು ಪವಿತ್ರ ಸ್ಥಳಕ್ಕೆ ಯಾತ್ರೆ ಮಾಡುತ್ತಲೇ ಇದ್ದನು. ತನ್ನ ಹಿರಿಯ ಸಂಗಾತಿಯಿಂದ ಬೋಧನೆ ಮತ್ತು ಮೈತ್ರಿಯನ್ನು ಸ್ವೀಕರಿಸುತ್ತ ನಿತಾಯ್ ಈ ಯಾತ್ರೆಯನ್ನು ಆನಂದಿಸುತ್ತಿದ್ದನು.
ನಿತ್ಯಾನಂದರಿಗೆ ಸಂಬಂಧಿಸಿದ ಪ್ರಮುಖ ಸ್ಥಳಗಳು
ಏಕಚಕ್ರ ಗ್ರಾಮ : ನಿತ್ಯಾನಂದ ಪ್ರಭು ತಮ್ಮ ಬಾಲ್ಯವನ್ನು ಇಲ್ಲಿಯೇ ಕಳೆದದ್ದು.
ಗರ್ಭವಾಸ : ನಿತ್ಯಾನಂದ ಪ್ರಭುಗಳ ಜನ್ಮ ಸ್ಥಳ.
ಬಂಕಿಂ ರಾಯ : ನಿತ್ಯಾನಂದ ಪ್ರಭುಗಳೇ ಸ್ವತಃ ಈ ವಿಗ್ರಹಗಳನ್ನು ಇಲ್ಲಿ ಸ್ಥಾಪಿಸಿದರು.
ನಿತ್ಯಾನಂದ ಪ್ರಭುಗಳು ಭೇಟಿ ನೀಡಿದ ಯಾತ್ರಾ ಸ್ಥಳಗಳು
ವೈದ್ಯನಾಥ, ಗಯಾ, ಕಾಶಿ, ಪ್ರಯಾಗ್, ದ್ವಾರಕಾ, ಸಿದ್ಧಾಪುರ, ಶಿವ ಕಂಚಿ, ವಿಷ್ಣು ಕಂಚಿ, ಕುರುಕ್ಷೇತ್ರ, ನೈಮಿಷಾರಣ್ಯ, ಅಯೋಧ್ಯ, ಹರಿದ್ವಾರ, ಗೋದಾವರಿ, ಮಥುರಾ ಮತ್ತು ವೃಂದಾವನ.
ಪ್ರಥಮ ಭೇಟಿ
ಅದು 1506ನೆಯ ಇಸವಿ. ದಟ್ಟ ಅರಣಗಳಲ್ಲಿ ಪ್ರಯಾಸಕರವಾದ ಪ್ರವಾಸವನ್ನು ಭಾವಪರವಶತೆಯ ಸ್ಥಿತಿಯಲ್ಲಿ ಮತ್ತು ಅತ್ಯಂತ ಸಂತೃಪ್ತ ಭಕ್ತಿಭಾವದಲ್ಲಿ ಪೂರ್ಣಗೊಳಿಸಿದ ಮೇಲೆ, ನಿತ್ಯಾನಂದ ಪ್ರಭು ನದಿಯಾ ಪುಣ್ಯ ಭೂಮಿಯನ್ನು ತಲಪಿದರು. ಆಧ್ಯಾತ್ಮಿಕ ಪರಿಸರವನ್ನು ಆನಂದದಿಂದ ಅನುಭವಿಸುತ್ತ ಅವರು ನೇರವಾಗಿ ನಂದನಾಚಾರ್ಯರ ಮನೆಗೆ ಹೋದರು. ಶ್ರೇಷ್ಠ ಭಕ್ತರಾದ ಅವರು ಗಂಗಾ ಮತ್ತು ಜಲಂಗಿ ಸಂಗಮ ಸ್ಥಳವಾದ ಅಂತರದ್ವೀಪದಲ್ಲಿ ವಾಸವಾಗಿದ್ದರು. ನಿತ್ಯಾನಂದರಿಗೆ ತಮ್ಮದೇ ಮನೆ ಎನ್ನುವ ಭಾವನೆ ಮೂಡಿತು. ಅವರು ಯೋಚಿಸಿದರು, ವಾಸ್ತವವಾಗಿ ಮಹಾಪ್ರಭು ನನ್ನ ತಮ್ಮ. ಮತ್ತು ನನ್ನನ್ನು ನೋಡಲು ಕಾತರರಾಗಿರುತ್ತಾರೆ. ನೋಡೋಣ, ಅವನೊಂದಿಗೆ ಒಂದು ಆಟ ಆಡುವೆ. ಅವನು ನನ್ನನ್ನು ಇಲ್ಲಿ ಕಂಡುಹಿಡಿಯುವನೋ ಏನೋ, ನೋಡುವೆ.

ನಿತ್ಯಾನಂದರ ಉಪಸ್ಥಿತಿಯನ್ನು ಅರಿತಿದ್ದ ಮಹಾಪ್ರಭುಗಳು, ಅವರನ್ನು ಹುಡುಕಲು ಹರಿದಾಸ ಠಾಕುರ ಮತ್ತು ಶ್ರೀವಾಸ ಪಂಡಿತರನ್ನು ಕಳುಹಿಸಿದರು. ಆದರೆ ಮೂರು ಗಂಟೆಗಳ ಕಾಲ ಹುಡುಕಿದರೂ ಅವರಿಗೆ ನಿತಾಯ್ ಸಿಗಲಿಲ್ಲ. ಅವರು ಬರಿಗೈಯಲ್ಲಿ ಹಿಂದಿರುಗಿದರು. ಹರಿದಾಸರು ವಿಶ್ವದ ಸೃಷ್ಟಿಕರ್ತ ಬ್ರಹ್ಮ ಮತ್ತು ಶ್ರೀವಾಸರು ಎಲ್ಲಿಗಾದರೂ ಮುಕ್ತವಾಗಿ ಸಂಚರಿಸಬಲ್ಲ ನಾರದ ಮುನಿ. ಏನನ್ನಾದರೂ ಸಾಧಿಸುವಂತಹ ನಿಗೂಢ ಶಕ್ತಿ ಅವರಿಬ್ಬರಲ್ಲಿ ಇತ್ತು. ಆದರೂ ನಿತ್ಯಾನಂದರು ತಮ್ಮ ಪ್ರಬಲ ಅಪೇಕ್ಷೆಯಂತೆ ಆ ಎರಡು ಪವಿತ್ರ ಆತ್ಮಗಳ ಕೈಗೆ ಸಿಗದಂತೆ ತಮ್ಮನ್ನು ಅಡಗಿಸಿಟ್ಟುಕೊಂಡಿದ್ದರು. ನಿತ್ಯಾನಂದರ ಈ ಅಲೌಕಿಕ ಆಟವನ್ನು ಮಹಾಪ್ರಭುಗಳು ಆನಂದಿಸಿದರು. ನಿತಾಯ್‌ನಂತೆಯೆ ತಮ್ಮ ಮೊದಲ ಭೇಟಿಯ ಸವಿ ರುಚಿಯನ್ನು ಅನುಭವಿಸಲು ಅವರೂ ಅಪೇಕ್ಷಿಸಿದ್ದರು.
ನಿತ್ಯಾನಂದರನ್ನು ಕಂಡುಹಿಡಿಯುವಲ್ಲಿ ಸ್ವಲ್ಪ ವಿಳಂಬವಿದೆ ಎನ್ನುವ ವಾಸ್ತವಾಂಶವನ್ನು ಅವರು ಸವಿಯುತ್ತಿದ್ದರು. ಆದರೆ ಸ್ವಲ್ಪ ಸಮಯದ ಅನಂತರ ಅವರಿಗೆ ಇನ್ನು ಕಾಯಲಾಗದೆನ್ನಿಸಿತು. ಆದುದರಿಂದ ಅವರು ಎಲ್ಲ ಭಕ್ತರನ್ನೂ ಸೇರಿಸಿಕೊಂಡು ನಂದನಾಚಾರ್ಯರ ಮನೆಗೆ ನೇರವಾಗಿ ಹೋದರು. ಇಬ್ಬರು ಪ್ರಭುಗಳೂ ಮೊಟ್ಟ ಮೊದಲ ಬಾರಿಗೆ ಪರಸ್ಪರ ಪ್ರತ್ಯಕ್ಷವಾಗಿ ಕಂಡಾಗ, ಭೇಟಿ ಮಾಡಿದಾಗ, ಅವರು ಆ ಕೂಡಲೇ ಆನಂದತುಂದಿಲರಾದರು. ಆಗ ನಿತ್ಯಾನಂದ ಪ್ರಭುಗಳಿಗೆ ಸುಮಾರು 32 ವರ್ಷ ಮತ್ತು ಮಹಾಪ್ರಭುಗಳಿಗೆ 20 ವರ್ಷ. ಅಲ್ಲಿ ನೆರೆದಿದ್ದ ಭಕ್ತರು ಆಶ್ಚರ್ಯ ಚಕಿತರಾದರು ಮತ್ತು ತಾವು ಈ ಅಪೂರ್ವ ಸಂಗಮವನ್ನು ನೋಡುವ ಅವಕಾಶ ದೊರೆತ ಅದೃಷ್ಟವಂತರು ಎಂದು ಭಾವಿಸಿದರು. ಇಂತಹ ಅಪೂರ್ವ ಸಂದರ್ಭವು ಬ್ರಹ್ಮನ ಸಾವಿರಾರು ವರ್ಷಗಳಲ್ಲಿ ಅತ್ಯಂತ ಅಪರೂಪವಾಗಿ ಸಂಭವಿಸುತ್ತದೆಯಷ್ಟೆ. ಉಭಯ ಪ್ರಭುಗಳೂ ಮೊದಲ ಬಾರಿ ಭೇಟಿ ಮಾಡಿದ ಸ್ಥಳವನ್ನು ಒಂದು ಸುಂದರ ದೇಗುಲದ ಮೂಲಕ ಸುಸ್ಮರಣೀವಾಗಿ ಮಾಡಲಾಗಿದೆ. ಅದೇ ಶ್ರೀ ಗೌರ ನಿತ್ಯಾನಂದ ಮಂದಿರ.
ವಿಶ್ವಾದ್ಯಂತ ಇಸ್ಕಾನ್ ಮಂದಿರಗಳಲ್ಲಿ ನಿತಾಯ್ ಗೌರಾಂಗ
ಅಮೃತಸರ, ಭಾರತ
ಹಾಂಕಾಂಗ್
ಚಟೆಯೊರೌಕ್ಸ್, ಫ್ರಾನ್ಸ್
ಕೋಸ್ಟರೀಕಾ
ಡಲ್ಲಾಸ್
ದೆಹಲಿ
ಡೆನ್ವರ್
ಡೆಟ್ರಾಯ್ಟ್
ಹುಬ್ಬಳ್ಳಿ, ಭಾರತ
ಇಲ್ಲಿನಾಯ್ಸ್
ಕ್ರೋಶಿಯಾ
ಉಕ್ರೈನ್
ಜೊಹಾನ್ಸ್‌ಬರ್ಗ್, ದಕ್ಷಿಣ ಆಫ್ರಿಕಾ
ಜುಹು, ಭಾರತ
ಕಾನ್ಸಾಸ್
ಲಗೂನಾ ಬೀಚ್ (ತೀರ)
ಲಾಸ್ ಏಂಜಲ್ಸ್
ಭಕ್ತಿವೇದಾಂತ ಮನೋರ್, ಯುಕೆ
ಮೆಕ್ಸಿಕೋ
ಮಲ್ಬೋರ್ನ್, ಆಸ್ಟ್ರೇಲಿಯಾ
ಮುಮರ್ಸ್ಕ್, ರಷ್ಯ
ನ್ಯೂ ಒರಿಲಾನ್ಸ್
ವೃಂದಾವನ, ಭಾರತ
ಬ್ರೆಜಿಲ್
ಪ್ಯಾರಿಸ್
ಸ್ಯಾನ್ ಡಿಯಾಗೊ
ದಕ್ಷಿಣ ಆಫ್ರಿಕಾ
ದಕ್ಷಿಣ ವೇಲ್ಸ್
ಕರುಣಾ ಸಾಗರ ನಿತ್ಯಾನಂದ ಪ್ರಭು
ಮಹಾಪ್ರಭು ಮತ್ತು ನಿತ್ಯಾನಂದ ಪ್ರಭು ಸಂಕೀರ್ತನಾ ಲೀಲೆಯನ್ನು ಅನುಭವಿಸುತ್ತ, ಆಸ್ವಾದಿಸುತ್ತಾ ಅನೇಕ ವರ್ಷಗಳ ಕಾಲ ನವದ್ವೀಪದಲ್ಲಿ ಜೊತೆಯಲ್ಲಿದ್ದರು. ಮಹಾಪ್ರಭುಗಳ ಹೃದಯದ ಪ್ರವೇಶ ದ್ವಾರದ ಕೀಲಿಯು ನಿತ್ಯಾನಂದರ ಕೈಯಲ್ಲಿದೆ ಎಂದು ಆಚಾರ್ಯರು ಸ್ಪಷ್ಟವಾಗಿ ಒಮ್ಮತದಿಂದ ಪ್ರತಿಪಾದಿಸಿದರು.
ಮನೆ ಮನೆಗೆ ತೆರಳಿ ಬೋಧಿಸುವ ಸೇವೆ ಸಲ್ಲಿಸಬೇಕೆಂದು ಮಹಾಪ್ರಭುಗಳು ನಿತ್ಯಾನಂದ ಮತ್ತು ಹರಿದಾಸ ಠಾಕುರರಿಗೆ ತಿಳಿಸಿದರು. ನವದ್ವೀಪದ ಪ್ರತಿಯೊಂದ ಮನೆಗೂ ಭಗವಂತನ ಪ್ರೇಮ ಸಂದೇಶವನ್ನು ಹರಡಬೇಕೆಂದು ಅವರು ಹೇಳಿದರು. ಇದೇ ಸಮಯದಲ್ಲಿಯೇ ನಿತ್ಯಾನಂದ ಮತು ಹರಿದಾಸ ಅವರುಗಳು ಜಗಾಯ್ ಮತ್ತು ಮದಾಯ್ ಸೋದರರನ್ನು ಭೇಟಿ ಮಾಡಿದರು.
ಈ ಜಗಾಯ್ ಮತ್ತು ಮದಾಯ್. ಈ ಸೋದರರು ಒಂದು ಉತ್ತಮ ಬ್ರಾಹ್ಮಣ ಕುಟುಂಬದಲ್ಲಿ ಜನಿಸದವರು. ಆದರೆ ಕೆಟ್ಟ ಸಹವಾಸದ ಕಾರಣ ಅವರು ಕುಡುಕರಾದರು. ವೇಶ್ಯೆಯರ ಸಹವಾಸ ಮಾಡಿದರು, ಜೂಜುಕೋರರಾದರು ಮತ್ತು ಮಾಂಸ ಭಕ್ಷಕರಾದರು.
ನಿತ್ಯಾನಂದ ಪ್ರಭು ಮತ್ತು ಹರಿದಾಸ ಠಾಕುರರು ಹರಿನಾಮ ಬೋಧನೆಗೆಂದು ಹೊರಟಿದ್ದರು. ನೀವು ಚೈತನ್ಯ ಮಹಾಪ್ರಭುಗಳ ಭಕ್ತರಾಗಬೇಕು ಎಂದು ಅವರು ಮನೆ ಮನೆಗೆ ತೆರಳಿ ಪ್ರಚಾರ ಮಾಡುತ್ತಿದ್ದರು. ಈ ಪ್ರಚಾರಕರನ್ನು ಸೃಷ್ಟಿಸುವುದೇ ಶ್ರೀ ಚೈತನ್ಯ ಮಹಾಪ್ರಭುಗಳ ಧ್ಯೇಯವಾಗಿತ್ತು. ಎಲ್ಲ ಕಡೆಗೂ ಹೋಗಿ ಎಂದು ಅವರು ನಿತ್ಯಾನಂದ ಮತ್ತು ಹರಿದಾಸರನ್ನು ಕಳುಹಿಸುತ್ತಿದ್ದರು ಮತ್ತು ಹರೇ ಕೃಷ್ಣ ಎಂದು ಜಪಿಸಿ, ದಯೆಯಿಟ್ಟು ಹರೇ ಕೃಷ್ಣ ಎಂದು ಜಪಿಸಿ. ಹಾಗೂ ಕೃಷ್ಣನಿಗೆ ಶರಣಾಗಿ ಎಂದು ಪ್ರಚಾರ ಮಾಡಿ ಎನ್ನುತ್ತಿದ್ದರು. ಆಗ ಕೆಲವರು ಜಗಾಯ್, ಮದಾಯ್ ಸೊದರರ ಬಗೆಗೆ ತಿಳಿಸಿದರು. ಅಲ್ಲಿ ಇಬ್ಬರು ಸೋದರರಿದ್ದಾರೆ. ಪಾಪಿಷ್ಟರು. ಅವರು ಎಲ್ಲ ಕಡೆ ಗದ್ದಲ ಉಂಟು ಮಾಡುತ್ತಿದ್ದಾರೆ. ಶಾಂತಿ ಕದಡುತ್ತಿದ್ದಾರೆ. ಆಗ ನಿತ್ಯಾನಂದರು ಹೇಳಿದರು, ಈ ಕೂಡಲೇ ಈ ಸೋದರರನ್ನು ವಿಮೋಚನೆ ಮಾಡೋಣ. ಆಗ ಇದು ಚೈತನ್ಯ ಮಹಾಪ್ರಭುಗಳಿಗೆ ದೊಡ್ಡ ಕೀರ್ತಿಯನ್ನು ತಂದು ಕೊಡುತ್ತದೆ.

ಇವನು ಬೋಧಕ. ಇವನು ತನ್ನ ಗುರುವಿನ ಕೀರ್ತಿಯನ್ನು ಕುರಿತು ಯೋಚಿಸುತ್ತಿದ್ದಾನೆ. ತನ್ನನ್ನು ಕುರಿತು ಅಲ್ಲ. ಅವನು ತನ್ನ ಜೀವವನ್ನು ಅಪಾಯಕ್ಕೆ ಒಡ್ಡುತ್ತಿದ್ದಾನೆ. ಈ ಸೋದರರು ಬೀದಿಗಳಲ್ಲಿ ಗದ್ದಲ ಉಂಟುಮಾಡುತ್ತಿದ್ದಾರೆ. ಮತ್ತು ಅಲ್ಲಿ ಜನರ ಗುಂಪು ಇದೆ. ಎಂದು ಜನರು ಹೇಳುತ್ತಿದ್ದರು. ಆದರೆ ನಿತ್ಯಾನಂದ ಪ್ರಭು ಎಷ್ಟು ಹಠದ ಸ್ವಭಾವದವರಾಗಿದ್ದರೆಂದರೆ, ಈ ಇಬ್ಬರು ವ್ಯಕ್ತಿಗಳಲ್ಲಿ ಕೆಟ್ಟ ನಡವಳಿಕೆ, ಪಾಪಗಳಿದ್ದರೂ ಅವರನ್ನು ವಿಮೋಚನೆ ಮಾಡೋಣ ಎಂದು ನಿರ್ಧರಿಸಿದರು.
ಆ ಸೋದರರು ನಿತ್ಯಾನಂದ ಪ್ರಭುಗಳ ಮೇಲೆ ಎರಗಿ ಅವರನ್ನು ಗಾಯಗೊಳಿಸಿದರು. ಸರಿ, ಸರಿ. ನೀವು ಗಾಯಗೊಳಿಸಿರುವಿರಿ. ರಕ್ತ ಸುರಿಯುತ್ತಿದೆ. ಪರವಾಗಿಲ್ಲ. ನೀವು ಹರೇ ಕೃಷ್ಣ ಮಂತ್ರವನ್ನು ಜಪಿಸಿ. ಅದು ಬೋಧನೆ. ನಾನು ಸುರಕ್ಷಿತವಾಗಿರುವೆನು ಮತ್ತು ಹರೇ ಕೃಷ್ಣ ಮಂತ್ರವನ್ನು ಜಪಿಸುತ್ತಿರುವೆ ಎಂದಲ್ಲ. ನಾವು ಈಗ ಹೋಗಬೇಕು. ಬೋಧಿಸಬೇಕು. ಅದೇ ಚೈತನ್ಯ ಮಹಾಪ್ರಭುಗಳ ಧ್ಯೇಯ. ಎಂದು ನಿತ್ಯಾನಂದರು ನುಡಿದರು. ಶ್ರೀ ಚೈತನ್ಯ ಮಹಾಪ್ರಭುಗಳಿಗೆ ಕೋಪ ಬಂದಿತು. ಏಕೆಂದರೆ ಈ ಸೋದರರು ನಿತ್ಯಾನಂದರನ್ನು ಗಾಯಗೊಳಿಸಿದ್ದಾರೆ. ಮಹಾಪ್ರಭುಗಳು ಬೆಂಕಿಯಂತಾದರು. ಕೋಪೋದ್ರಿಕ್ತರಾದರು. ಆಗ ನಿತ್ಯಾನಂದ ಪ್ರಭುಗಳು ಮನವಿ ಮಾಡಿದರು, ನನ್ನ ಪ್ರೀತಿಯ ಪ್ರಭು, ಈ ಅವತಾರದಲ್ಲಿ ಕೊಲ್ಲಲು ನೀವು ಯಾವುದೇ ಆಯುಧವನ್ನು ಕೈಗೆತ್ತಿಕೊಳ್ಳುವುದಿಲ್ಲ ಎಂದು ವಚನವಿತ್ತಿದ್ದೀರಿ. ಆದುದರಿಂದ ಅವರನ್ನು ಕೊಲ್ಲಬೇಡಿ. ಅವರ ಬಗೆಗೆ ಕರುಣೆ ಇರಲಿ. ಇದು ವೈಷ್ಣವ ಧರ್ಮ. ಆಗ ಶ್ರೀ ಚೈತನ್ಯ ಮಹಾಪ್ರಭು ಆ ಸೋದರರಿಗೆ ಒಂದು ಷರತ್ತು ಹಾಕಿದರು, ನಿಮ್ಮ ಜೀವನವು ಪಾಪ ಕರ್ಮಗಳಿಂದ ತುಂಬಿದೆ. ನಾನು ಇನ್ನು ಪಾಪ ಕರ್ಮಗಳನ್ನು ಮಾಡುವುದಿಲ್ಲ ಎಂದು ನೀವು ನನಗೆ ವಚನವಿತ್ತರೆ, ನಾನು ನಿಮ್ಮನ್ನು ಸ್ವೀಕರಿಸುವೆ.
ಬಂಕಿಂ ರಾಯನ ರೂಪದಲ್ಲಿ ವಿಲೀನ
ಏಕಚಕ್ರ ಗ್ರಾಮದಲ್ಲಿ, ನಿತ್ಯಾನಂದ ಪ್ರಭುಗಳ ಜನ್ಮ ಸ್ಥಳಕ್ಕೆ ಸಮೀಪದಲ್ಲಿಯೇ ಬಂಕಿಂ ರಾಯ ಎಂದು ಪ್ರಸಿದ್ಧಿಯಾದ ಕೃಷ್ಣನ ವಿಗ್ರಹವಿದೆ. ಈ ವಿಗ್ರಹವನ್ನು ಸ್ವತಃ ನಿತ್ಯಾನಂದ ಪ್ರಭುಗಳೇ ಸ್ಥಾಪಿಸಿದ್ದರು. ನಿತ್ಯಾನಂದ ಪ್ರಭು ತಮ್ಮ ಶಾಶ್ವತ ಲೀಲೆಗೆಂದು ಈ ಲೋಕವನ್ನು ತ್ಯಜಿಸಲು ಸಿದ್ಧರಾದಾಗ, ಅವರು ಬಂಕಿಂ ರಾಯನ ರೂಪದಲ್ಲಿ ವಿಲೀನರಾದರು ಎಂದು ಪ್ರತೀತಿ ಇದೆ, ಹೇಳಲಾಗಿದೆ. ಭಕ್ತರು ನಿತ್ಯಾನಂದ ಪ್ರಭುಗಳ ಉಪಸ್ಥಿತಿಯನ್ನು ಸದಾ ತಮ್ಮದೇ ಆಧ್ಯಾತ್ಮಿಕ ಗುರುವಿನ ಸಮ್ಮುಖದಲ್ಲಿ ಅನುಭವಿಸುತ್ತಾರೆ. ಏಕೆಂದರೆ, ಆಧ್ಯಾತ್ಮಿಕ ಗುರುಗಳನ್ನು ಸ್ವತಃ ನಿತ್ಯಾನಂದ ಪ್ರಭುಗಳ ವ್ಯಕ್ತ ರೂಪ ಎಂದು ಪರಿಗಣಿಸಲಾಗಿದೆ.

ನಿತಾಯ್ ಮತ್ತು ಗೌರ ಗುಣಮಣಿ ನರ್ತಿಸುತ್ತಿದ್ದಾರೆ ಮತ್ತು ನರ್ತಿಸುತ್ತಿದ್ದಾರೆ…