ಸರ್ವಶಕ್ತನ ಸರ್ವಶಕ್ತಿ

ದೇವರ ಶಕ್ತಿಗಳನ್ನು ಅರಿಯದ ಕಾರಣ ಕೆಲವು ತತ್ತ್ವಜ್ಞಾನಿಗಳು ಆತನಿಗೆ ಶಕ್ತಿಯೇ ಇಲ್ಲವೆಂಬ ನಿರ್ಧಾರಕ್ಕೆ ಬರುತ್ತಾರೆ.

ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘದ ಸಂಸ್ಥಾಪಕರು ಮತ್ತು ಆಚಾರ್ಯರಾದ
ಶ್ರೀ ಶ್ರೀಮದ್‌ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು
1973ರ ಡಿಸೆಂಬರ್‌ ತಿಂಗಳು ಲಾಸ್‌ಏಂಜಲೀಸ್‌ನಲ್ಲಿ ನೀಡಿದ ಉಪನ್ಯಾಸ.

ಯದಾ ಮುಕುಂದೋ ಭಗವಾನಿಮಾಂ ಮಹೀಂ

ಜಹೌ ಸ್ವತನ್ವಾ ಶ್ರವಣೀಯಸತ್ಕಥಃ ।

ತದಾಹರೇವಾಪ್ರತಿಬುದ್ಧಚೇತಸಾ-

ಮಭದ್ರಹೇತುಃ ಕಲಿರನ್ವವರ್ತತ ॥

ಎಂದು ಪರಮ ಪ್ರಭುವಾದ ಶ್ರೀಕೃಷ್ಣನು ಈ ಮರ್ತ್ಯಲೋಕದಿಂದ ತನ್ನ ಮೂಲರೂಪದಲ್ಲೇ ಹೋದನೋ ಅಂದಿನಿಂದ, ಆಗಲೇ ಭಾಗಶಃ ವ್ಯಕ್ತವಾಗಿದ್ದ ಕಲಿಯು, ಪೂರ್ಣ ಪ್ರಮಾಣದಲ್ಲಿ ವ್ಯಕ್ತವಾದನು. ಇದಕ್ಕೆ ಕಾರಣ ಮಂದಮತಿಗಳು ಅಮಂಗಳಕರ ಸ್ಥಿತಿಗೊಳಗಾಗುವುದೇ ಆಗಿತ್ತು. (ಶ್ರೀಮದ್‌ ಭಾಗವತ 1.15.36)

ಭಗವಾನ್‌ ಶ್ರೀಕೃಷ್ಣ ಇಹಲೋಕದಿಂದ ಅಂತರ್ಧಾನವಾಗುವುದು, ಪುನರಾವಿರ್ಭಿಸುವುದು ಎಲ್ಲವೂ ಆತನ ಸ್ವಶಕ್ತಿಯಿಂದಲೆ. ಭಗವದ್ಗೀತೆಯಲ್ಲಿ (4.6) ಶ್ರೀಕೃಷ್ಣ ಹೇಳುತ್ತಾನೆ, ಸಂಭವಾಮ್ಯಾತ್ಮ ಮಾಯಯಾ “ನನ್ನ ಅವತಾರ ನನ್ನ ಸ್ವ ಶಕ್ತಿಯಿಂದಲೆ.” ದೇವರಿಗೆ ಅಪಾರ ಅನಂತ ಶಕ್ತಿ ಇದೆ. (ಪರಾಸ್ಯ ಶಕ್ತಿಃ ವಿವಿಧೈವ ಶ್ರೂಯತೇ) ಜ್ಞಾನಿಗಳು, ಋಷಿಗಳು, ಮುನಿಗಳು, ಯೋಗಿಗಳು ಇದನ್ನೆ ಭಗವಂತನ ಶಕ್ತಿ ಪಾರಮ್ಯವನ್ನು ವಾಸ್ತವವೆಂದು ಒಪ್ಪಿಕೊಂಡಿದ್ದಾರೆ. ಆದರೂ ಭಗವಂತನಿಗೆ ಶಕ್ತಿಗಳಿಲ್ಲ ಎಂಬುದು ಕೆಲವು ತತ್ತ್ವಜ್ಞಾನಿಗಳ ಅಭಿಪ್ರಾಯ. ಅದು ವಾಸ್ತವವಲ್ಲ. ಭಗವಂತನಿಗೆ ಅಸೀಮಶಕ್ತಿ ಇದೆ ಎಂದು ವೇದವಾಙ್ಮಯ ತಿಳಿಸುತ್ತದೆ.

ಪ್ರಸ್ತುತದಲ್ಲಿ ಭಗವಂತನ ಶಕ್ತಿಯನ್ನು ನಾವು ತಿಳಿಯುವುದು ಹೇಗೆ? ಅಗ್ನಿಯನ್ನು ನಿದರ್ಶನವಾಗಿಟ್ಟುಕೊಳ್ಳುವುದು ಒಂದು ದಾರಿ. ಅದಕ್ಕೆ ಇಬ್ಬಗೆಯ ಶಕ್ತಿ ಇದೆ. ಒಂದು ಶಾಖ, ಇನ್ನೊಂದು ಬೆಳಕು. ಅದು ಉಷ್ಣ ಮತ್ತು ಬೆಳಕಿನ ರೂಪದಲ್ಲಿ ಶಕ್ತಿಯಾಗಿ ವಿಸ್ತೃತ ರೂಪಗೊಳ್ಳುತ್ತದೆ, ಇದು ನಮ್ಮ ಅನುಭವಕ್ಕೆ ಒಳಪಟ್ಟಿದ್ದು. ಅದನ್ನು ಅರ್ಥಮಾಡಿಕೊಳ್ಳುವುದೇನೂ ಕಷ್ಟವಲ್ಲ. ಅಂತೆಯೇ ಸೂರ್ಯನೂ ಸಹ ಉಷ್ಣ ಮತ್ತು ಬೆಳಕಿನ ರೂಪದಲ್ಲಿ ತನ್ನ ಶಕ್ತಿಯನ್ನು ವೃದ್ಧಿಗೊಳಿಸುತ್ತಾನೆ. ಅದು ಆಕಾಶದಲ್ಲಿ ಒಂದು ಮೂಲೆಯಲ್ಲಿದೆ. ಅದರ ಇಬ್ಬಗೆಯ ಶಕ್ತಿ ವಿಶ್ವವ್ಯಾಪಿ. ಸೂರ್ಯನ ಪ್ರಭೆ ಇಡೀ ಆಕಾಶವನ್ನು ಆವರಿಸುತ್ತದೆ. ಎಲ್ಲ ಗ್ರಹಗಳನ್ನೂ ಆವರಿಸುತ್ತದೆ. ಹಾಗೆಯೇ ಅದರ ಬೆಳಕು ಮತ್ತು ಉಷ್ಣ. ಸೂರ್ಯ ಭೂಮಿಯಿಂದ 93 ದಶಲಕ್ಷ ಮೈಲುಗಳ ದೂರದಲ್ಲಿದ್ದಾನೆ. ಆದರೂ ಅದರ ತಾಪ ನಮಗೆ ತಟ್ಟುತ್ತದೆ 40-45 ಡಿಗ್ರಿ.

ಸೂರ್ಯನಂಥ ಒಂದು ಭೌತ ವಸ್ತುವಿಗೆ ಇಷ್ಟೊಂದು ಶಕ್ತಿ ಇರುವುದಾದರೆ, ದೇವೋತ್ತಮ ಪರಮ ಪುರುಷನ ಶಕ್ತಿ ಪಾರಮ್ಯ ಎಷ್ಟಿರಬಹುದು? ಅವನ ಶಕ್ತಿ, ಅಚಿಂತ್ಯ, ಕಲ್ಪನೆಗೆ ಮಿಗಿಲಾದದ್ದು. ಅದು ವೇದವಾಕ್ಯ.

ನ ತಸ್ಯ ಕಾರ್ಯಂ ಕರಣಂ ಚ ವಿದ್ಯತೇ

ನ ತತ್ಸಮಶ್ಚಾಭ್ಯಧಿಕಶ್ಚ ದೃಶ್ಯತೇ ।

ಪರಾಸ್ಯ ಶಕ್ತಿರ್ವಿವಿಧೈವ ಶ್ರೂಯತೇ

ಸ್ವಾಭಾವಿಕೀ ಜ್ಞಾನ ಬಲಕ್ರಿಯಾ ಚ ॥

ಪರಮ ಪುರುಷ ನಿರ್ವಹಿಸಬೇಕಾದ ಕರ್ತವ್ಯಗಳೇನೂ ಇಲ್ಲ. ಅವನಿಗೆ ಸಮಾನರಿಲ್ಲ. ಅವನಿಗಿಂತ ಹಿರಿಯರಿಲ್ಲ. ಅವನ ಶಕ್ತಿ ವೈವಿಧ್ಯ ಅಸೀಮ. ಅವು ತಂತಾನೆ ಕಾರ್ಯಗತಗೊಳ್ಳುತ್ತವೆ. (ಶ್ವೇತಾಶ್ವತರ ಉಪನಿಷತ್‌: 6.8)

ಇದು ಪರಿಪೂರ್ಣ ಸತ್ಯದ ಬಣ್ಣನೆ – ಇದೇ ಪರಮಪುರುಷ. ಯಾವ ರೀತಿಯ ಪುರುಷ? ನಿಮ್ಮಂತೆ ದಿನವಿಡೀ ಹಣಕ್ಕಾಗಿ ದುಡಿಯುವವನೇ? ಇಲ್ಲ. ನ ತಸ್ಯ ಕಾರ್ಯಂ ಕರಣಂ ಚ ವಿದ್ಯತೇ: ಶ್ರೀಕೃಷ್ಣನಿಗೆ ಮಾಡುವಂಥ ಕರ್ತವ್ಯಗಳೇನೂ ಇಲ್ಲ. ಅವನು ಕೇವಲ ಕೊಳಲು ನುಡಿಸುತ್ತ, ರಾಧಾರಾಣಿಯೊಡನೆ ಲೀಲಾವಿನೋದದಲ್ಲಿ ತೊಡಗಿರುತ್ತಾನೆ, ಅಷ್ಟೆ. ಅವನಿಗೆ ಕಛೇರಿಗೆ ಹೋಗುವ ಉಸಾಬರಿಯಿಲ್ಲ. ಕಾರ್ಖಾನೆ ಕೆಲಸವಿಲ್ಲ. ಆತ ಕೇವಲ ಆನಂದಾನುಭವದಲ್ಲಿ ಲೀನ ಆನಂದಮಯೋಽಭ್ಯಾಸಾತ್‌.

ನಾವು ಕೃಷ್ಣನ ಸುಖಾನುಭವವನ್ನು ಅನುಕರಿಸಲು ಯತ್ನಿಸುತ್ತಿದ್ದೇವೆ. ಯುವ ಬಾಲಕ ಬಾಲಕಿಯರು ಕಲೆತು ಕುಣಿಯಲು ಬಯಸುತ್ತಾರೆ. ಇದೇ ಚಟುವಟಿಕೆಗಳನ್ನು ಕೃಷ್ಣ ಲೀಲಾವಿನೋದದಲ್ಲಿ ಕಾಣಬಹುದು. ಕೃಷ್ಣ ಗೋಪಿಯರೊಡಗೂಡಿ ವನದಲ್ಲಿ ನರ್ತಿಸುತ್ತಾನೆ; ನೀವು ನಿಮ್ಮ ಗೆಳತಿಯರೊಡನೆ ನೈಟ್‌ಕ್ಲಬ್‌ನಲ್ಲಿ ಕುಣಿಯುತ್ತೀರಿ. ಆದರೆ ನಿಮ್ಮ ನರ್ತನ ನಿಮಗೆ ತೃಪ್ತಿ ಕೊಡುವುದಿಲ್ಲ. ಏಕೆಂದರೆ ಅದು ಅನುಕರಣ. ನಿಮಗೆ ನೈಜ ನರ್ತನದ ಅನುಭವ ಬೇಕೆ? ಕೃಷ್ಣನೆಡೆಗೆ ಬನ್ನಿ. ಇದೇ ಕೃಷ್ಣಪ್ರಜ್ಞೆ.

ಅಡ್ಡದಾರಿಗೆ ಇಳಿದವರನ್ನು ಭ್ರಮೆಯಿಂದ ವಾಸ್ತವಕ್ಕೆ ಕರೆದೊಯ್ಯಲು ಪ್ರಯತ್ನಿಸುತ್ತಿದ್ದೇವೆ. ಮಾಯಾವಾದಿ (ನಿರಾಕಾರವಾದಿ) ತತ್ತ್ವಜ್ಞಾನಿಗಳು, ನಾಟ್ಯದಲ್ಲಿ ಸುಖವೇನೂ ಇಲ್ಲ ಎನ್ನುತ್ತಾರೆ. `ಅದು ಶೂನ್ಯವೆಂದು ತಿಳಿ; ಅದನ್ನು ಮರೆ.’ ಆದರೆ ನಾವು ಹಾಗೆನ್ನೆವು. ಪರಮ ಸತ್ಯದ ಮೂಲ ಪರಿಕಲ್ಪನೆಯಲ್ಲಿ ನಾಟ್ಯಕ್ಕೆ ಸ್ಥಾನವಿದೆ. ಅದನ್ನೇ ವೇದಾಂತ ಸೂತ್ರ ಹೇಳುತ್ತದೆ: ಜನ್ಮಾದ್ಯಸ್ಯ ಯತಃ. “ಎಲ್ಲವೂ ಆ ಪರಮ ಸತ್ಯದಿಂದಲೇ ಉತ್ಪನ್ನ.” ನೀವು ಅನುಭವಿಸಿರುವುದೆಲ್ಲ ಎಲ್ಲಿಂದ ಬಂತು? ಅದು ಪರಮ ಸತ್ಯದಿಂದ ಬಂದುದು. ಪರಿಪೂರ್ಣ ಎಂದರೆ ಅದೇನೆ. ಇದು ಸಾಪೇಕ್ಷ ಜಗತ್ತಿನಲ್ಲಿ, ನೃತ್ಯ ಎಂಬುದು ವಿಕೃತರೂಪದಲ್ಲಿ ಬಿಂಬಿತವಾಗಿರುವುದು. ನೀವು ಗೊಂದಲಕ್ಕೀಡಾಗಿದ್ದೀರಿ, ತಬ್ಬಿಬ್ಬಾಗಿದ್ದೀರಿ.

ನೀವು ವಾಸ್ತವಕ್ಕೆ ಬನ್ನಿ ಎಂದು ನಾವು ನಮ್ಮ ಒಂದು ಪ್ರಸ್ತಾವವನ್ನು ನಿಮ್ಮ ಮುಂದಿಡುತ್ತಿದ್ದೇವೆ. ಅದು ಕೃಷ್ಣಪ್ರಜ್ಞೆ. ಇದೇ ನೃತ್ಯ ಅಲ್ಲೂ ಇದೆ. ಉದಾಹರಣೆಗೆ ಇಲ್ಲಿ ಕೃಷ್ಣ ಗೋಪಿಯರೊಡಗೂಡಿ ನರ್ತಿಸುವ ಚಿತ್ರವಿದೆ. ನಾವು ಕೃಷ್ಣನ ಅವಿಭಾಜ್ಯ ಅಂಗವಾಗಿರುವ ಕಾರಣ ನಾವು ಯುವತಿಯೊಡಗೂಡಿ ನರ್ತಿಸಲು ಇಚ್ಛಿಸುತ್ತಿದ್ದೇವೆ. ವೃದ್ಧರೂ ಸಹ ಯುವತಿಯರೊಡನೆ ಕುಣಿಯುತ್ತಾರೆ. ಪ್ಯಾರಿಸ್‌ನಲ್ಲಿ ವೃದ್ಧರಿಗಾಗಿ ಒಂದು ಕ್ಲಬ್‌ ತೆರೆದಿದೆ. ಎಲ್ಲರೂ ಸಾವಿನ ಅಂಚಿನಲ್ಲಿರುವವರೆ. ಅಲ್ಲಿ 50 ಡಾಲರ್‌ ತೆತ್ತು ಕುಡಿದು ಹೆಣ್ಣುಗಳೊಡನೆ ನರ್ತಿಸುತ್ತಾರೆ. ಅವರಿಗೆ ಅನುಭವಿಸುವ ಸಾಮರ್ಥ್ಯವಿಲ್ಲ. ಆದರೂ ಅಲ್ಲಿಗೆ ಬರುತ್ತಾರೆ. ಜರಾಗತೇ ಕಿಂ ಯುವತೀ ನಾರೀ “ವೃದ್ಧನಿಗೆ, ತರುಣಿಯರ ಜೊತೆಗೂಡಿ ಪ್ರಯೋಜನವೇನು?” ಆದರೂ ಮುದಿಯರಿಗೆ ಎಳೆಯ ಹೆಂಗೆಳೆಯರೊಡಗೂಡುವ ಚಪಲ, ಅವರಿಗೆ ಅನುಭವಿಸುವ ಸಾಮರ್ಥ್ಯವಿಲ್ಲದಿದ್ದರೂ ಸಹ. ಹಾಗಾಗಿ ಅವರು ಅತೃಪ್ತರು, ಹತಾಶರು. ಇದು ಕೃಷ್ಣಲೀಲೆಯನ್ನು ಅನುಕರಿಸುವವರು ಪಡುವ ಪಾಡು.

ಕೃಷ್ಣ ಮಹಾಪುರುಷ ಅವನು ಏಕಕಾಲದಲ್ಲಿ ಯಾರಿಗೂ ಅರಿವಾಗದಂತೆ ಎಲ್ಲ ಕಡೆಯೂ ಇರುತ್ತಾನೆ. ಅವನು ಇದನ್ನು ಭಗವದ್ಗೀತೆಯಲ್ಲಿ ತಿಳಿಸುತ್ತಾನೆ (9.4):

ಮಯಾ ತತಮಿದಂ ಸರ್ವಂ ಜಗದವ್ಯಕ್ತಮೂರ್ತಿನಾ ।

ಮತ್‌ಸ್ಥಾನಿ ಸರ್ವಭೂತಾನಿ ನ ಚಾಹಂ ತೇಷ್ವವಸ್ಥಿತಃ ॥

“ನನ್ನ ಅವ್ಯಕ್ತ ಸ್ವರೂಪದಲ್ಲಿ ನಾನು ಇಡೀ ವಿಶ್ವವನ್ನು ವ್ಯಾಪಿಸಿದ್ದೇನೆ. ಎಲ್ಲ ಜೀವಿಗಳೂ ನನ್ನಲ್ಲಿದ್ದಾರೆ.  ನಾನು ಅವರಲ್ಲಿ ಇಲ್ಲ.”  ಪ್ರತಿಯೊಂದೂ ಶ್ರೀಕೃಷ್ಣನನ್ನೇ ಆಧರಿಸಿದೆ ಎಂಬುದು ಸತ್ಯ, ಎಲ್ಲವೂ ಸೂರ್ಯನನ್ನು, ಸೂರ್ಯಪ್ರಭೆಯನ್ನು ಆಧರಿಸಿರುವಂತೆ ಸೂರ್ಯನ ಶಾಖ ಮತ್ತು ಬೆಳಕಿನಿಂದಲೇ ಎಲ್ಲ ಗ್ರಹಗಳೂ ತಮ್ಮ ಕಕ್ಷೆಯೊಳಗೆ ಚಲಿಸುತ್ತಿವೆ ಎಂಬುದು ವೈಜ್ಞಾನಿಕ ಸತ್ಯ.

`ಎಲ್ಲವೂ ಕೃಷ್ಣನನ್ನೇ ಆಧರಿಸಿವೆ’ ಎಂಬುದರ ಅರ್ಥವೇನು? ಉದಾಹರಣೆಗೆ ಈ ಭೂಮಿಯನ್ನೇ ತೆಗೆದುಕೊಳ್ಳಿ. ಈ ಗ್ರಹದ ಮೇಲಿರುವ ಎಲ್ಲವೂ – ಮರಗಳು, ನದಿಗಳು, ಪರ್ವತಗಳು, ನಗರಗಳು, ಕಾರುಗಳು – ಎಲ್ಲವೂ ಒಂದು ಘಟಕ, ಭೂಗ್ರಹ ಮತ್ತು ಅಲ್ಲಿ ಕೋಟ್ಯನುಕೋಟಿ ಗ್ರಹಗಳಿವೆ. ಅವು ಹೇಗೆ ಇವೆ? ಅವು ಸೂರ್ಯನ ಪ್ರಭೆಯಿಂದ ಅಸ್ತಿತ್ವದಲ್ಲಿವೆ. ಮತ್ತೆ ಆ ಸೂರ್ಯಪ್ರಭೆ ಎಲ್ಲಿಂದ ಬಂತು? ಸೂರ್ಯಪ್ರಭೆ ಸೂರ್ಯನಿಂದ ಬರುತ್ತದೆ, ಮತ್ತದು ಬರುವುದು ದೇವರಿಂದ. ಆದುದರಿಂದ ಎಲ್ಲವೂ ಪರೋಕ್ಷವಾಗಿ ಕೃಷ್ಣನ ಶಕ್ತಿಯನ್ನು ಆಧರಿಸಿವೆ. ಮತ್‌ಸ್ಥಾನಿ ಸರ್ವಭೂತಾನಿ  ಎಂದು ಹೇಳುವಂತೆ “ಎಲ್ಲವೂ ನನ್ನ ಶಕ್ತಿಯನ್ನು ಆಧರಿಸಿವೆ.” ನ ಚಾಹಂ ತೇಷು ಅವಸ್ಥಿತಃ “ಆದರೆ ವೈಯಕ್ತಿಕವಾಗಿ ನಾನು ಯಾವುದರೊಳಗೂ ಇಲ್ಲ.” ಇದು ಅಚಿಂತ್ಯ ಭೇದಾಭೇದ ತತ್ತ್ವ “ಪರಮಾತ್ಮನು ಎಲ್ಲರೊಳಗೂ ಒಂದಾಗಿ, ಎಲ್ಲರಿಂದಲೂ ಭಿನ್ನವಾಗಿಯೂ ಇರುತ್ತಾನೆ. ಇದು ನಮ್ಮ ತತ್ತ್ವ.

ನಮ್ಮ ವಾದವೇನೆಂದರೆ, ಆಧ್ಯಾತ್ಮಿಕ ಲೋಕ (ಪರಂಧಾಮ) ದಲ್ಲಿದ್ದೂ, ಕೃಷ್ಣನು ತನ್ನ ಶಕ್ತಿಯ ಮುಖೇನ, ತನ್ನ ಇರವನ್ನು ಪ್ರಕಟಿಸುತ್ತಾನೆ, ಒಬ್ಬ ಶ್ರೀಮಂತ ತನ್ನ ಮನೆಯಲ್ಲಿದ್ದುಕೊಂಡೇ ವ್ಯಾಪಾರವನ್ನು  ತನ್ನ ಸಿಬ್ಬಂದಿಯಿಂದ ನಡೆಸುವಂತೆ. ತಾನು ವೈಯಕ್ತಿಕವಾಗಿ ಕಛೇರಿಗೆ ಹೋಗುವ ಅಗತ್ಯವಿಲ್ಲ. ನಾವು ಬಿರ್ಲಾ ಅವರನ್ನು ನೋಡಿದ್ದೇವೆ. ತನ್ನ ಮನೆಯಲ್ಲಿದ್ದುಕೊಂಡೇ ವ್ಯಾಪಾರ ನಡೆಸುವಂತೆ, ಅವರು ತಮ್ಮ ಶಕ್ತಿಯಿಂದಲೇ ವ್ಯಾಪಾರ ನಿರ್ವಹಿಸುತ್ತಾರೆ. ಅವರ ಕಾರ್ಯದರ್ಶಿಗಳು, ಗುಮಾಸ್ತ, ಇತ್ಯಾದಿ ಅವರೇ ಎಲ್ಲ ಕೆಲಸಗಳನ್ನು ನಿರ್ವಹಿಸುತ್ತಾರೆ. ಆತ ಕೆಲಸಕ್ಕೆ ಹೋಗುವುದಿಲ್ಲ.

ಹಾಗೆಯೇ, ಕೃಷ್ಣ, ಪ್ರಭು ಸರ್ವೋತ್ತಮ, ಸರ್ವಶಕ್ತನಾದುದರಿಂದ ಆತ ವೈಯಕ್ತಿಕವಾಗಿ ಕೆಲಸ ಮಾಡಬೇಕಾಗಿಲ್ಲ.  ಆತ ಸದಾ ವೇಣುವಾದನ ನಿರತ ಮತ್ತು ಗೋಪಿನೃತ್ಯವಿಲಾಸಿ. ಅಷ್ಟೆ. ಆನಂದಮಯೋಽಭ್ಯಾಸಾತ್‌ ಆತ ಸುಮ್ಮನೆ ಆನಂದಾನುಭವದಲ್ಲಿರುತ್ತಾನೆ.

ಕೃಷ್ಣನ ಶಕ್ತಿ ಪರಲೋಕದಲ್ಲೂ, ಇಹಲೋಕದಲ್ಲೂ ಉಭಯತ್ರ ಪ್ರಕಟಗೊಳ್ಳುತ್ತದೆ. ಹೇಗೆ? ನಾನಾಗಲೇ ಸೂರ್ಯನ ಉದಾಹರಣೆ ಕೊಟ್ಟಿದ್ದೇನೆ. ಸೂರ್ಯ, ಆಗಸದಲ್ಲಿದ್ದಾನೆ, ಸೂರ್ಯಪ್ರಭೆ, ತನ್ನ ಶಕ್ತಿಯನ್ನು ಪ್ರದರ್ಶಿಸುತ್ತಿದೆ. ಸೂರ್ಯನ ಬೆಳಕಿನಿಂದ ಮರಗಳಲ್ಲಿ ಎಲೆಗಳು ಚಿಗುರುತ್ತವೆ. ಸೂರ್ಯನ ಬೆಳಕಿಲ್ಲದಾಗ ಮರಗಳಿಂದ ಎಲೆಗಳು ಉದುರುತ್ತವೆ. ಪ್ರತಿಯೊಂದೂ ಸೂರ್ಯನ ಶಕ್ತಿಯನ್ನು ಅವಲಂಬಿಸಿರುತ್ತದೆ. ಹಾಗೆಯೇ ಪ್ರತಿಯೊಂದೂ ಕೃಷ್ಣನಿಂದ ಹೊಮ್ಮುವ ಶಕ್ತಿಗಳನ್ನು ಆಧರಿಸಿದೆ.

ಏಕದೇಶಸ್ಥಿತಸ್ಯಾಗ್ನೇಃ ಜ್ಯೋತ್ಸ್ನಾ ವಿಸ್ತಾರಿಣೀ ಯಥಾ ।

ಪರಸ್ಯ ಬ್ರಹ್ಮಣಃ ಶಕ್ತಿಃ ತಥೇದಂ ಅಖಿಲಂ ಜಗತ್‌ ॥

“ಅಗ್ನಿಯು ಒಂದು ಸ್ಥಳದಲ್ಲಿದ್ದರೂ, ಅದು ತನ್ನ ಶಾಖ ಮತ್ತು ಬೆಳಕುಗಳನ್ನು ಪಸರಿಸುತ್ತದೆ. ಅದೇ ರೀತಿ, ಭಗವಂತನು ತನ್ನ ಶಕ್ತಿಗಳನ್ನು ಬೇರೆ ಬೇರೆ ರೀತಿಗಳಲ್ಲಿ ಪಸರಿಸುತ್ತಾನೆ.” ಈ ಬ್ರಹ್ಮಾಂಡದಲ್ಲಿ ಪ್ರಕಟವಾದುದೆಲ್ಲವೂ ಕೇವಲ ಭಗವಂತನ ಶಕ್ತಿ ಸಮುಚ್ಚಯದ ಪ್ರಾತ್ಯಕ್ಷಿಕೆಯೇ.

ಹೀಗಾಗಿ ನಾವು ಜನ್ಮ ಪಡೆಯುತ್ತೇವೆ ಮತ್ತು ಸಾವನ್ನು ಒಪ್ಪಿಕೊಳ್ಳುತ್ತೇವೆ. ನಾವು ಭಗವಂತನ ಭೌತಿಕ ಶಕ್ತಿಯ ನಿಯಂತ್ರಣದಲ್ಲಿದ್ದೇವೆ. ಭಗವಂತನ ಶಕ್ತಿ ಸ್ವರೂಪಗಳು ಅನೇಕ. ಇವು ಮೂರು ಬಗೆ. ಒಂದು ಆಂತರಿಕ, ಇನ್ನೊಂದು ಬಾಹ್ಯ, ಮೂರನೆಯದು ತಟಸ್ಥಶಕ್ತಿ. ಬಾಹ್ಯಶಕ್ತಿ ಎಂಬುದು ಐಹಿಕ ಶಕ್ತಿ – ಅನೇಕ ವಿಶ್ವಗಳು, ಗ್ರಹಗಳು, ನಕ್ಷತ್ರಗಳು ಇತ್ಯಾದಿ, ಇವೆಲ್ಲ ಕೃಷ್ಣನ ಬಾಹ್ಯ ಶಕ್ತಿಗಳು. ಮತ್ತೆ ಆಂತರಿಕ ಶಕ್ತಿ – ಅದು ಆಧ್ಯಾತ್ಮಿಕ ಲೋಕಕ್ಕೆ ಸಂಬಂಧಿಸಿದ್ದು, ಅದನ್ನು ನಾವು ನೋಡಲಾಗದು. ಅದು ಅನುಭವವೇದ್ಯವಲ್ಲ. ಪಾರಮಾರ್ಥಿಕ ಲೋಕದ ಬಗ್ಗೆ ಭಗವದ್ಗೀತೆಯಲ್ಲಿ ಮಾಹಿತಿಗಳು ಲಭ್ಯವಾಗುತ್ತವೆ (8.20) ಪರಸ್ತಸ್ಮಾತ್ತು ಭಾವೋಽನ್ಯೋಽವ್ಯಕ್ತೋಽವ್ಯಕ್ತಾತ್ಸನಾತನಃ “ಈ ಭೌತಿಕ ಪ್ರಕೃತಿಯಿಂದಾಚೆ ಮತ್ತೊಂದು ಪ್ರಕೃತಿ ಇದೆ. ಅದು ಶಾಶ್ವತ.” ಭೌತಿಕ ಪ್ರಕೃತಿ ಶಾಶ್ವತವಲ್ಲ. ಉದಾ ನಿಮ್ಮ ದೇಹವನ್ನೇ ತೆಗೆದುಕೊಳ್ಳಿ. ಅದು ಶಾಶ್ವತವಲ್ಲ. ಹಾಗೆಯೇ, ಬ್ರಹ್ಮಾಂಡದ ದೈತ್ಯಾಕಾರವೂ ಶಾಶ್ವತವಲ್ಲ. ಅದಕ್ಕೆ ಸೃಷ್ಟಿ ಸ್ಥಿತಿ ಲಯ ಕಾಲನಿರ್ಣಯ ಇದೆ. ಆದರೆ ಆಧ್ಯಾತ್ಮಿಕ ಪ್ರಕೃತಿ ಶಾಶ್ವತ – ಅದಕ್ಕೆ ಸೃಷ್ಟಿಯೂ ಇಲ್ಲ ಲಯವೂ ಇಲ್ಲ.

ನಾವು ಭಗವಂತನ ತಟಸ್ಥಶಕ್ತಿ. ಉದಾಹರಣೆಗೆ ನಾವು ಶಾಂತಸಾಗರದ ತೀರದಲ್ಲಿ ನಡೆದಾಗ, ಕೆಲವು ದಿನಗಳು ಕರಾವಳಿಯನ್ನು ಸಮುದ್ರ ನೀರು ಆವರಿಸಿಕೊಂಡಂತೆ ನಮಗೆ ತೋರುತ್ತದೆ. ಮತ್ತೆ ಕೆಲವು ದಿನಗಳು ಅದು ತೆರೆದಂತೆ ಇರುತ್ತದೆ, ಅಲ್ಲಿ ನೀರಿಲ್ಲ. ಆದ್ದರಿಂದ ಕೆಲವೊಮ್ಮೆ ಆವೃತವಾದ, ಕೆಲವೊಮ್ಮೆ ಮುಕ್ತವಾದ ತೀರಕ್ಕೆ ತಟಸ್ಥ ಎಂದು ಕರೆಯುತ್ತೇವೆ. ಅಂತೆಯೇ ಕೃಷ್ಣನ ತಟಸ್ಥ ಶಕ್ತಿಯಿಂದ ಆವರಿಸಲ್ಪಟ್ಟ ನಾವು ಕೆಲವೊಮ್ಮೆ ಭೌತಿಕ ಪ್ರಕೃತಿ ಮತ್ತೊಮ್ಮೆ ಆಧ್ಯಾತ್ಮಿಕ ಪ್ರಕೃತಿಯಿಂದ ಪ್ರಭಾವಿತರಾಗುತ್ತೇವೆ.

ವಾಸ್ತವವಾಗಿ ನಾವು ಆಧ್ಯಾತ್ಮಿಕ ಪ್ರಕೃತಿಗೆ ಸೇರಿದವರು. ಆದರೆ ನಾವು ತೃಣಸಮಾನರಾದ ಜೀವಾತ್ಮರು, ಆದುದರಿಂದ ನಾವು ಐಹಿಕ ಪ್ರಕೃತಿಯೊಡನೆ ಹೇಗೋ ಸಂಪರ್ಕ ಹೊಂದಿದ್ದೇವೆ. ಇದು ನಮಗೆ ಸಾಮರಸ್ಯವಿಲ್ಲದ್ದು, ಇಲ್ಲಿ ಶಾಶ್ವತ ಹೊಂದಾಣಿಕೆ ಸಾಧ್ಯವಿಲ್ಲ. ಹಾಗಾಗಿ ನಾವಿಲ್ಲಿ ಸುಖಾನುಭವ ಮತ್ತು ದುಃಖಾನುಭವ, ಎರಡಕ್ಕೂ ತೆರೆದುಕೊಂಡಿದ್ದೇವೆ. ಮತ್ತೆ ಬೇರೆ ದೇಹ, ಇನ್ನೊಂದು ದೇಹ ಹೀಗೆ.

ನಾವು ಆಧ್ಯಾತ್ಮಿಕ ಪ್ರಕೃತಿಗೆ ಸೇರಿದವರಾದುದರಿಂದ, ಬಯಸಿದರೆ, ಪಾರಲೌಕಿಕ ಸಂಪರ್ಕ ಪಡೆದು, ಆಧ್ಯಾತ್ಮಿಕ ಪ್ರಪಂಚಕ್ಕೆ ವರ್ಗಾಂತರ ಹೊಂದಬಹುದು, ಶಾಶ್ವತವಾಗಿ ನೆಲೆಗೊಳ್ಳಬಹುದು. ಆತ್ಮದ ಪಾರಮಾರ್ಥಿಕ ಸ್ವರೂಪವನ್ನು ಭಗವದ್ಗೀತೆ ಹೀಗೆ ಬಣ್ಣಿಸುತ್ತದೆ; (2.20) ನ ಜಾಯತೇ ಮ್ರಿಯತೇ ವಾ ಕದಾಚಿನ್‌…..ನ ಹನ್ಯತೇ ಹನ್ಯಮಾನೇ ಶರೀರೇ “ಆತ್ಮ ಜನಿಸುವುದಿಲ್ಲ, ಸಾಯುವುದೂ ಇಲ್ಲ.” ಅರ್ಥಾತ್‌ ಇದು ಶಾಶ್ವತ, ಚಿರಂತನ. ಹಾಗಿದ್ದರೆ ಸಾವು ಎಂದರೇನು? ಭೌತಿಕ ಶರೀರವು, ಪ್ರಕೃತಿಲೀನವಾಗಿ, ಲಯ ಹೊಂದುವುದು, ಆತ್ಮದ ಲಯವಲ್ಲ, ಅದೇ ಮರಣ. ಆದುದರಿಂದ ನ ಹನ್ಯತೇ ಹನ್ಯಮಾನೇ ಶರೀರೇ ಎಂದು ಹೇಳಿದೆ. ಆತ್ಮ ಸಾಯುವುದಿಲ್ಲ. ಶರೀರ ಲಯ ಹೊಂದಿದ ಮೇಲೂ, ಅದೂ ಯಥಾಸ್ಥಿತಿಯಲ್ಲೆ ಯಥಾರೂಪದಲ್ಲೇ ಇರುತ್ತದೆ. ನಾವು ಪರಿಧಿಯಲ್ಲಿರುವುದರಿಂದ, ಆಧ್ಯಾತ್ಮಿಕ ಮತ್ತು ಭೌತಿಕ ಸ್ವರೂಪಗಳ ನಡುವೆ ಇದ್ದು ಕೃಷ್ಣನ ಬಾಹ್ಯ, ಭೌತಿಕ ಶಕ್ತಿಗೆ ಒಳಪಟ್ಟು ತಾತ್ಪೂರ್ತಿಕವಾಗಿ ಭೌತಿಕ ಶರೀರದೊಡನೆ ಗುರುತಿಸಿಕೊಂಡಿದ್ದೇವೆ. ವಸ್ತುಶಃ ನಾವು ಅಧ್ಯಾತ್ಮಕ್ಕೆ ಒಳಪಟ್ಟವರು, ನಮ್ಮ ವಾಸ್ತವ ಸ್ವರೂಪ ಚಿರಂತನ. ನಾವು ಹುಟ್ಟುವುದೂ ಇಲ್ಲ ಸಾಯುವುದೂ ಇಲ್ಲ. ಆದರೆ ನಾವು ಲೌಕಿಕ ಪ್ರಕೃತಿಯೊಡನೆ ಸಂಪರ್ಕ ಹೊಂದುವುದರಿಂದ ನಮ್ಮದು ಪಾರ್ಥಿವ ಶರೀರ. ಈ ಶರೀರಗಳು ನಿರಂತರ ಬದಲಾಗುತ್ತಿರುತ್ತವೆ. ಆ ಕಾರಣ ನಾವು ಜನನ ಮರಣಗಳನ್ನು ಸ್ವಾಭಾವಿಕವೆಂದು ಒಪ್ಪಿಕೊಂಡು ಸ್ವೀಕರಿಸಿದ್ದೇವೆ. ಆದರೆ ಇದು ನಮ್ಮ ನೈಜ ಸ್ವರೂಪವಲ್ಲ.

ವರ್ತಮಾನದಲ್ಲಿ ನಾವು ಭೌತಿಕ ಸ್ವರೂಪದಲ್ಲಿದ್ದೇವೆ, ಪ್ರಯತ್ನಿಸಿದರೆ ನಾವು ಈ ಭೌತಿಕ ಆಚ್ಛಾದನವನ್ನು ಕಳಚಿಕೊಂಡು ಆಧ್ಯಾತ್ಮಿಕ ಪ್ರಕೃತಿಯೊಡನೆ ಸಂಪರ್ಕ ಹೊಂದಬಹುದು. ಇದು ಕೃಷ್ಣಪ್ರಜ್ಞೆ – ಆ ತಟಸ್ಥ ಸ್ಥಿತಿಯನ್ನು ಬಿಟ್ಟು ಮತ್ತು “ಭೂಮಿ”ಯಲ್ಲಿ ನೆಲೆಗೊಳ್ಳುವುದು ಅಲ್ಲಿ “ಜಲದ” ಅಡೆತಡೆ ಇರುವುದಿಲ್ಲ. ನೀವು ಪರಿಧಿಯಲ್ಲಿದ್ದರೆ ಕೆಲವೊಮ್ಮೆ  ಜಲಾವೃತರಾಗಿರುತ್ತೀರಿ. ಮತ್ತೆ ಕೆಲವು ಸಂದರ್ಭಗಳಲ್ಲಿ ಶುಷ್ಕವಾಗಿರುತ್ತೀರಿ. ಆದರೆ ಸ್ವಲ್ಪ ಮುಂದೆ ಹೆಜ್ಜೆಯಿಟ್ಟರೆ ಭೂಪ್ರದೇಶಕ್ಕೆ ಬಂದಾಗ, ಸಾಗರ ನಿಮ್ಮನ್ನು ಬಾಧಿಸದು.

ಕೃಷ್ಣ ನಮ್ಮಂತಿಲ್ಲ. ಪ್ರಸ್ತುತ, ಭಾಗವತ ಶ್ಲೋಕದಲ್ಲಿ ಕೃಷ್ಣ ಈ ಲೋಕದಿಂದ ಅಂತರ್ಧಾನನಾದನೆಂದು ತಿಳಿದು ಬರುತ್ತದೆ; ಅದರ ಅರ್ಥ ನಾವು ದೇಹತ್ಯಾಗ ಮಾಡಿದಂತೆ ಶ್ರೀಕೃಷ್ಣನೂ ಮಾಡಿದ ಎಂದಲ್ಲ. ನಮ್ಮ ದೇಹಾವಸಾನ ಎಂದರೆ, ನಾವು ಈ ದೇಹವನ್ನು ವಿಸರ್ಜಿಸಿ ಮತ್ತೊಂದು ದೇಹವನ್ನು ಪಡೆಯುತ್ತೇವೆ. ಇವತ್ತು ನಾವು ಅಮೆರಿಕದ ಶರೀರ ಹೊಂದುತ್ತೇವೆ. ಮರುಜನ್ಮದಲ್ಲಿ ರಷ್ಯನ್‌ ದೇಹವನ್ನು ಪಡೆಯಬಹುದು. ರಷ್ಯನ್‌ರೊಡನೆ ಸೆಣಸುತ್ತಿರುವ ಅಮೆರಿಕವಾಸಿ, ಮುಂದಿನ ಜನ್ಮದಲ್ಲಿ ರಷ್ಯಾವಾಸಿಯಾಗಿಯೇ ಹುಟ್ಟಬಹುದು. (ಇದು ನಿಸರ್ಗನಿಯಮ: ಸದಾ ತತ್‌ಭಾವ ಭಾವಿತಃ ಸಾವಿನ ಸಮಯದಲ್ಲಿ ಹೊಂದಿರುವ ಯೋಚನೆಯು ವ್ಯಕ್ತಿಯ ಮರುಜನ್ಮವನ್ನು ನಿರ್ಧರಿಸುತ್ತದೆ). ಮತ್ತೆ ರಷ್ಯಾ ದೇಹ ಹೊತ್ತು ಅಮೆರಿಕದವರೊಡನೆ ಕಾದಾಡುತ್ತಾನೆ, ಮರುಜನ್ಮದಲ್ಲಿ ಅಮೆರಿಕ ಪ್ರಜೆಯಾಗಿಯೇ ಹುಟ್ಟುತ್ತಾನೆ. ಇದು ನಡೆಯುತ್ತಲೇ ಇರುತ್ತದೆ: ಭೂತ್ವಾ ಭೂತ್ವಾ ಪ್ರಲೀಯತೇ ಕೆಲವೊಮ್ಮೆ ರಷ್ಯನರು, ಕೆಲವೊಮ್ಮೆ ಅಮೆರಿಕನರು, ಹೋರಾಡುತ್ತಲೆ ಇರುವುದು ಅಷ್ಟೆ. ಇದು `ಮಾಯೆ’ ಭ್ರಮೆ.

ಈ ವಿಶ್ವದಲ್ಲಿ ಪ್ರತಿಯೊಬ್ಬನೂ ಭ್ರಮಾರಿಷ್ಟನಾಗಿರುತ್ತಾನೆ. ಈ ಪೃಥ್ವಿಯಲ್ಲಿ (ಲೌಕಿಕ ಸ್ವರೂಪದಲ್ಲಿ) ಜೀವಿಗಳು ಅಲೆದಾಡುತ್ತಲೇ ಇರುತ್ತಾರೆ, ಕೆಲವೊಮ್ಮೆ ಈ ಶರೀರದಲ್ಲಿ, ಕೆಲವೊಮ್ಮೆ ಆ ಶರೀರದಲ್ಲಿ, ಕೆಲವೊಮ್ಮೆ ಹೀಗೆ, ಕೆಲವೊಮ್ಮೆ ಹಾಗೆ. ಸುಮ್ಮನೆ ಅಲೆಯುತ್ತಿರುತ್ತವೆ. ಎಲ್ಲಿ ಆಸರೆ ಹುಡುಕುವುದೆಂಬುದು ಯಾರಿಗೂ ತಿಳಿಯದು, ಶಾಶ್ವತ ನೆಲೆಯೆಲ್ಲಿ, ಶಾಶ್ವತ ನೆಮ್ಮದಿ ಎಲ್ಲಿ, ಶಾಶ್ವತ ಸುಖವೆಲ್ಲಿ ಎಂಬುದು ಗೊತ್ತಿಲ್ಲದೆ ಸುಮ್ಮನೆ ಸರ್ಕಾರವನ್ನು ಬದಲಿಸುತ್ತಲೇ ಇರುತ್ತಾರೆ: ಒಬ್ಬ ಅಯೋಗ್ಯನನ್ನ ಚುನಾಯಿಸಿ, ತಿರಸ್ಕರಿಸಿ, ಮತ್ತೊಬ್ಬನನ್ನು ಆಯ್ಕೆ ಮಾಡಿ, ಮತ್ತೆ ಅವನನ್ನು ತಿರಸ್ಕರಿಸುತ್ತಲೆ ಹೋಗುತ್ತಾರೆ. ಏಕೆಂದರೆ ಎಲ್ಲ ಅಭ್ಯರ್ಥಿಗಳೂ ಅಯೋಗ್ಯರೆ. ಮತದಾರರಿಗೆ ಬೇರೆ ಆಯ್ಕೆ ಇಲ್ಲ. ಒಬ್ಬ ಅಯೋಗ್ಯನನ್ನೇ ಆಯ್ಕೆ ಮಾಡಬೇಕು. “ನಾವು ಈ ಅಯೋಗ್ಯನನ್ನು ಆಯ್ಕೆ ಮಾಡಿದರೆ, ಸುಖಿ ಎಂಬ ಭಾವನೆ ಅವರಿಗೆ.” ಅಂಧಾ ಯಥಾಂಧೈರುಪನೀಯಮಾನಾಃ ಜನರೆಲ್ಲ ಕುರುಡರು, ಮತ್ತೊಬ್ಬ ಕುರುಡನನ್ನು ನಾಯಕನನ್ನಾಗಿ ಒಪ್ಪಿಕೊಂಡಿದ್ದಾರೆ. ಲಾಭವೇನು? ನೀವು ಕುರುಡಾಗಿದ್ದರೆ, ನಿಮ್ಮನ್ನು ಮತ್ತೊಬ್ಬ ಕುರುಡ ಕೈಹಿಡಿದು ನಡೆಸಿದರೆ ಇಬ್ಬರೂ ಚರಂಡಿಯೊಳಗೆ ಬೀಳುತ್ತೀರಿ.

ಆದುದರಿಂದ, ನಿಮಗೆ ನೈಜಸುಖ ಪ್ರಾಪ್ತಿಯಾಗಬೇಕಿದ್ದರೆ, ಯಾರಿಗೆ ದೃಷ್ಟಿ ಸ್ಪಷ್ಟವಾಗಿರುತ್ತದೆಯೋ ಆತನನ್ನು ನಾಯಕನಾಗಿ ಆಯ್ಕೆ ಮಾಡಬೇಕು. ಯಾರ ಕಣ್ಣು ತೆರೆದಿದೆ? ವೇದ ಸಾಹಿತ್ಯದಲ್ಲಿ ಇದು ವಿವರಿಸಲ್ಪಟ್ಟಿದೆ:

ಓಂ ಅಜ್ಞಾನತಿಮಿರಾನ್ಧಸ್ಯ ಜ್ಞಾನಾಞ್ಜನಶಲಾಕಯಾ ।

ಚಕ್ಷುರ್‌ ಉನ್ಮೀಲಿತಂ ಯೇನ ತಸ್ಮೈ ಶ್ರೀ ಗುರವೇ ನಮಃ ॥

ಪ್ರತಿಯೊಬ್ಬನೂ ಕುರುಡ, ಮೌಢ್ಯದ ಅಂಧಕಾರದಲ್ಲಿ ಮುಳುಗಿರುವವ. ಅವನ ಕಣ್ತೆರೆಸುವುದು ಗುರುವಿನ ಕರ್ತವ್ಯ. ವಸ್ತುಗಳನ್ನು ಯಥಾರೂಪದಲ್ಲಿ ನೋಡಲು ಸಹಾಯ ಮಾಡುವುದು. ಅದು ಗುರುಗಳ ಕೆಲಸ.

ಕತ್ತಲನ್ನು ನಿವಾರಿಸುವುದು ಬೆಳಕಿನಿಂದ. ಇರುಳಲ್ಲಿ ನಾವು ನೋಡಲಾರೆವು. ಎಲ್ಲವೂ ಅಂಧಕಾರಮಯ. ಏಕೆಂದರೆ ಸೂರ್ಯ, ಬಾನಂಗಳದಲ್ಲಿಲ್ಲ. ಆದರೆ ಪ್ರಾತಃಕಾಲ ಸೂರ್ಯೋದಯವಾಗುತ್ತಿದ್ದಂತೆ ನಾವು ಸೂರ್ಯನನ್ನು ಕಾಣಬಹುದು. ನಾವು ಮೌಢ್ಯದ ಅಂಧಕಾರದಲ್ಲಿ ಇರುವುದರಿಂದ, ಯಾವುದೂ ಸ್ಪಷ್ಟವಾಗಿ ಗೋಚರಿಸದು. ಜೀವಾತ್ಮ ಮತ್ತು ಪರಮಾತ್ಮ ಇಬ್ಬರ ಅಸ್ತಿತ್ವವೂ ದಿಟ. ಆದರೆ ಇಬ್ಬರನ್ನೂ ಕಾಣೆವು. ಅತೀಂದ್ರಿಯ ಜ್ಞಾನಜ್ಯೋತಿಯ ನೆರವಿನಿಂದ ಅವೆಲ್ಲವನ್ನು ಸ್ಪಷ್ಟವಾಗಿ ಯಥಾರೂಪದಲ್ಲಿ ಕಾಣಬಹುದು. ಇದು ಅಗತ್ಯ.

ಆದುದರಿಂದ ವೇದಸಾಹಿತ್ಯ ನಮಗೆ ಹಿತವಚನ ಹೇಳುತ್ತದೆ, ತಮಸೋಮಾ ಜ್ಯೋತಿರ್ಗಮಯ “ಕತ್ತಲೊಳಗೆ ಇರಬೇಡ, ಬೆಳಕಿನೆಡೆಗೆ ಬಾ.” ಮಾನವ ಜೀವನದಲ್ಲಿ ಇದು ಸಾಧ್ಯ. ಪ್ರಾಣಿಜೀವನದಲ್ಲಿ, ಕತ್ತಲೊಳಗೇ ಇರುತ್ತೀರಿ, ಏಕೆಂದರೆ ಬೆಳಕಿನತ್ತ ಬರುವ ಸಾಧ್ಯವಿರದು. ಲಾಸ್‌ಏಂಜಲೀಸ್‌ನ ಎಲ್ಲ ಬೆಕ್ಕು, ನಾಯಿಗಳನ್ನು ಭಗವದ್ಗೀತಾ ಪ್ರವಚನಕ್ಕೆ ನಾನು ಆಹ್ವಾನಿಸಿದರೆ ಅವು ಬರುವುದಿಲ್ಲ. ಏಕೆಂದರೆ ಅವು ಪ್ರಾಣಿಗಳು. ನಾನು ಮನುಷ್ಯರಲ್ಲಿ ಮನವಿ ಮಾಡಿದರೆ, ಅವರಲ್ಲಿ ಕೆಲವರಿಗೆ ಆಸಕ್ತಿ ಮೂಡಬಹುದು. ಅವರೆಲ್ಲರಿಗೂ ಆಸಕ್ತಿ ಮೂಡಬೇಕು, ಕಾಲಕೆಟ್ಟದು, ಯಾರೊಬ್ಬರಿಗೂ ಅಭಿರುಚಿಯಿಲ್ಲ. ಆದರೂ ಕೆಲವರಿಗಾದರೂ ಆಸ್ಥೆ ಇರಬಹುದು, ಬೆಕ್ಕು ನಾಯಿಗಳಿಗಲ್ಲ.

ಮಾನವ ಸ್ವರೂಪದಲ್ಲಿ ಬೆಳಕಿಗೆ ಬಂದು, ಸಮಸ್ಯೆಗಳಿಗೆ ಪರಿಹಾರ ಹುಡುಕುವ ಅಗತ್ಯ ಇದೆ. ಆದುದರಿಂದ ಕೃಷ್ಣನು ಜಗತ್ತಿನಲ್ಲಿ ಅವತರಿಸುತ್ತಾನೆ. ಅವನು ಭಗವದ್ಗೀತೆಯಲ್ಲಿ ಹೇಳುತ್ತಾನೆ, ಪ್ರಕೃತಿಂ ಸ್ವಾಮಧಿಷ್ಠಾಯ ಸಮ್ಭವಾಮ್ಯಾತ್ಮಮಾಯಯಾ : “ನಾನು ನನ್ನ ಶಕ್ತಿಯಿಂದ ನನ್ನ ಅಲೌಕಿಕ ರೂಪದಲ್ಲಿ ಬರುತ್ತೇನೆ.” ಭೌತಿಕ ಸ್ವರೂಪದ ನಿಯಂತ್ರಣದಲ್ಲಿ ನಾವಿದ್ದೇವೆ. ಆದರೆ ಕೃಷ್ಣನಿಗೆ ಈ ನಿಯಂತ್ರಣವಿಲ್ಲ. ಇದು ಅರ್ಥವಾಗಬೇಕು. ಆದುದರಿಂದ, ಭಾಗವತದ ಪ್ರಸ್ತುತ ಶ್ಲೋಕ ಹೇಳುತ್ತದೆ, ಜಹೌ ಸ್ವತನ್ವಾ. ಸ್ವ ಎಂದರೆ `ಸ್ವಂತ’ ಮತ್ತು ತನು ಎಂದರೆ `ದೇಹ’. ಅರ್ಥಾತ್‌ ಕೃಷ್ಣ ತನ್ನ ಅತೀಂದ್ರಿಯ ಶರೀರದಿಂದಲೆ ಅಂತರ್ಧಾನನಾದ.

ಕೃಷ್ಣ ಅವತರಿಸುವಾಗ, ಅಂತರ್ಧಾನವಾಗುವಾಗ ತನ್ನ ಅತೀಂದ್ರಿಯ ಶರೀರದಿಂದಲೆ ಆಗುತ್ತಾನೆ. ನಮಗೆ ಶರೀರ ಮತ್ತು ಆತ್ಮಗಳ ನಡುವೆ ಭೇದವಿದೆ. ನಾನು ಆಧ್ಯಾತ್ಮಿಕ ಆತ್ಮ, ಆದರೆ ನನ್ನ ಶರೀರ ಭೌತಿಕ. ಈಗ ಭೇದ ಯಾಕೆಂದರೆ, ನಾವು ಭೌತಿಕ ಶರೀರಕ್ಕೆ ಒಳಪಟ್ಟಿದ್ದೇನೆ. ಆದರೆ ಕೃಷ್ಣನಿಗೆ ಈ ಪಾರ್ಥಿವ ಶರೀರದ ನಿಯಂತ್ರಣವಿಲ್ಲ. ಆದ್ದರಿಂದ ಅದು ತಿಳಿಸುವುದೇನೆಂದರೆ, ಜಹೌ ಸ್ವತನ್ವಾ “ಆತ ತನ್ನಿಚ್ಛೆಯಂತೆಯೇ ಸ್ವ, ಸ್ವರೂಪವನ್ನು ಹೊತ್ತು ಆರೋಹಣ ಮಾಡಿದ.

ಓರ್ವ ನಾಮ್‌ಕೇ ವಾಸ್ತೇ ಪಂಡಿತ ಭಗವದ್ಗೀತೆ ವ್ಯಾಖ್ಯಾನ ಬರೆದಿದ್ದಾನೆ. ಆತನಿಗೆ ಕೃಷ್ಣನ ಬಗ್ಗೆ ತಿಳಿವಳಿಕೆ ಸಾಲದು, ಅದರಲ್ಲಿ ಕೃಷ್ಣನ ಆತ್ಮಕ್ಕೂ ದೇಹಕ್ಕೂ ಅಂತರ ಹುಡುಕಲು ಪ್ರಯತ್ನಿಸಿದ್ದಾನೆ. ಕೃಷ್ಣ ಹೇಳುತ್ತಾನೆ (ಭಗವದ್ಗೀತೆ: 9.34), ಮನ್ಮನಾ ಭವ ಮದ್ಭಕ್ತೋ ಮದ್ಯಾಜೀ ಮಾಂ ನಮಸ್ಕುರು : “ನನ್ನ ಧ್ಯಾನ ಮಾಡು, ನನ್ನ ಭಕ್ತನಾಗು, ನಿನ್ನ ನಮನಗಳನ್ನು ನನಗೆ ಸಲ್ಲಿಸು, ನನ್ನನ್ನು ಪೂಜಿಸು.” ಈ ಅಯೋಗ್ಯ ವ್ಯಾಖ್ಯಾನಕಾರ ನಾವು ನಮಸ್ಕರಿಸಬೇಕಾದುದು ವೈಯಕ್ತಿಕವಾಗಿ ಕೃಷ್ಣನನ್ನು ಅಲ್ಲ, ಆದರೆ ಅವನೊಳಗಿರುವ ಆತ್ಮಕ್ಕೆ” ಎಂದು ಅರ್ಥೈಸಿದ್ದಾನೆ. ಎಂಥ ಮೂಢ ನೋಡಿ. ಕೃಷ್ಣನಿಗೆ ದೇಹ ಮತ್ತು ಆತ್ಮದೊಳಗೆ ಭೇದವಿಲ್ಲ ಎಂಬುದನ್ನು ಅರಿಯನು. ಅವನ `ಸ್ವ’ ಅಥವಾ ಆತ್ಮ ಅಥವಾ ಸಂಪೂರ್ಣ ಶರೀರದೊಳಗೆ ಭೇದವೇ ಇಲ್ಲವೆಂಬುದು ಆತನಿಗೆ ತಿಳಿಯದು. ಈ ಮೂಢ ಮೊದಲ ಶ್ರೇಣಿಯ ಅಯೋಗ್ಯ ಭಗವದ್ಗೀತೆ ಬರೆದಿದ್ದಾನೆ ಮತ್ತು ಪಂಡಿತ ಎಂದು ಸ್ವೀಕರಿಸಲ್ಪಟ್ಟಿದ್ದಾನೆ. ಈ ಅಪದ್ಧ ಇಡೀ ಜಗತ್ತಿಗೆ ವ್ಯಾಪಿಸುತ್ತಿದೆ.

ಆದುದರಿಂದ ಕೃಷ್ಣ ಹೇಳುತ್ತಾನೆ, ಅವಜಾನನ್ತಿ ಮಾಂ ಮೂಢಾ ಮಾನುಷೀಂ ತನುಮ್‌ ಆಶ್ರಿತಂ – “ಅಯೋಗ್ಯರು, ನಾನು ಮಾನುಷ ರೂಪದಲ್ಲಿ ಪ್ರಕಟವಾಗಿರುವುದರಿಂದ ನಾನು ಸಾಮಾನ್ಯ ಮನುಷ್ಯನೆಂದು ಅಂದುಕೊಂಡಿದ್ದಾರೆ. ಮತ್ತೆ ಪರಂ ಭಾವಂ  ಅಜಾನಂತಃ `ಅವರಿಗೆ ನನ್ನ ಮಹಾನ್‌ ಶಕ್ತಿಯ ಅರಿವಿಲ್ಲ.” ಆದರೂ ಈ  ಅಯೋಗ್ಯರು ಭಗವದ್ಗೀತಾ ಪ್ರವಚನ ಮಾಡುತ್ತಿದ್ದಾರೆ.

ಹೀಗಾಗಿ, ನಮಗೆ ದೇಹ ಮತ್ತು ಆತ್ಮದ ನಡುವೆ ಭೇದ ಭಾವ ಇದ್ದರೂ, ಕೃಷ್ಣನಿಗೆ ಆ ಭೇದವಿಲ್ಲ. ಜೊತೆಗೆ ಕೃಷ್ಣನಿಗೂ, ಅವನ ಅರ್ಚಾವಿಗ್ರಹಕ್ಕೂ ವ್ಯತ್ಯಾಸವಿಲ್ಲ. ಯಾಕೆ? ಯಾಕೆಂದರೆ  ಆ ಕಲ್ಲು ಕೂಡ ಕೃಷ್ಣನ ಶಕ್ತಿ. ಭೂಮಿ, ನೀರು, ಅಗ್ನಿ, ವಾಯು, ಪ್ರತಿಯೊಂದೂ ಕೃಷ್ಣನ ಶಕ್ತಿಯೆ. ಅದನ್ನು ಹಿಂದೆಯೇ ವಿವರಿಸಿದ್ದೇವೆ. ಆದ್ದರಿಂದ ಆತ ಯಾವುದೇ ರೂಪದಲ್ಲಾದರೂ ಅವತಾರವೆತ್ತಬಹುದು, ಎಲ್ಲಾದರೂ, ಯಾವುದರಿಂದಲಾದರೂ. ಅದು ಶ್ರೀಕೃಷ್ಣನ ಶಕ್ತಿ.  ಆದುದರಿಂದ ಶ್ರೀಕೃಷ್ಣ ಯಾರೆಂದು ನೀವು ಅರ್ಥಮಾಡಿಕೊಳ್ಳಬೇಕು. ಕೃಷ್ಣನನ್ನು ಯಥಾವತ್ತಾಗಿ ಅರ್ಥಮಾಡಿಕೊಂಡ ತತ್‌ಕ್ಷಣ ನೀವು ಮುಕ್ತರು. ಜನ್ಮ ಕರ್ಮ ಚ ಮೇ ದಿವ್ಯಮೇವಂ ಯೋ ವೇತ್ತಿ ತತ್ತ್ವತಃ । ತ್ಯಕ್ತ್ವಾ ದೇಹಂ ಪುನರ್ಜನ್ಮ ನೈತಿ ಮಾಮೇತಿ ಸೋಽರ್ಜುನ.

ಇಲ್ಲಿ ಭಾಗವತ ಹೇಳುತ್ತದೆ ಜಹೌ ಸ್ವ ತನ್ವಾ : “ಕೃಷ್ಣ ಸ್ವ ಸ್ವರೂಪದಲ್ಲಿ ಇಹಲೋಕವನ್ನು ತ್ಯಜಿಸಿದ.” ಕೃಷ್ಣ ನಮ್ಮೆಲ್ಲರಂತೆ ದೇಹತ್ಯಾಗ ಮಾಡುವುದಿಲ್ಲ. ಇಲ್ಲ. ನಾವು ಒಂದು ದೇಹವನ್ನು ತ್ಯಜಿಸಿ ಮತ್ತೊಂದು ದೇಹದೊಳಗೆ ಹೋಗುತ್ತೇವೆ. ಪ್ರಕೃತೇಃ ಕ್ರಿಯಮಾಣಾನಿ ಗುಣೈಃ ಕರ್ಮಾಣಿ ಸರ್ವಶಃ “ಪ್ರತಿಯೊಂದೂ ಪ್ರಕೃತಿ ನಿಯಕ್ಕನುಸಾರವಾಗಿ ನಡೆಯುತ್ತಿದೆ. ಆದರೆ ಕೃಷ್ಣ ಪ್ರಕೃತಿ ನಿಯಮಗಳಿಗೆ ಬದ್ಧನಲ್ಲ ಅಥವಾ ಅವನ ಆತ್ಮಕ್ಕೂ ಶರೀರಕ್ಕೂ ನಡುವೆ ಅಂತರವೇ ಇಲ್ಲ. ಇದು ಅರ್ಥವಾಗಬೇಕು. ಕೃಷ್ಣ ನಮ್ಮಂತೆಯೇ ದೇಹತ್ಯಾಗ, ಕೊನೆಯುಸಿರೆಳೆದನೆಂದು ಯಾರಾದರೂ ಭಾವಿಸಿದ್ದರೆ ಆತ ಮೂಢ, ಅಯೋಗ್ಯ. ಅಯೋಗ್ಯರನ್ನು ಮೂಢರನ್ನಾಗಿಸಲು, ಕೃಷ್ಣ ದೇಹತ್ಯಾಗ ಮಾಡಿದಂತೆ ಭ್ರಮೆ ಹುಟ್ಟಿಸಿದ. ಕೃಷ್ಣ ನಮ್ಮಂತೆಯೇ ಎಂದು ಅಯೋಗ್ಯರು ಭಾವಿಸಿದ್ದಾರೆ. ಹಾಗಾಗಿ, ಅವರಿಗೆ ಅಚ್ಚರಿ ತರಲು ಕೃಷ್ಣನು ಒಂದು ಭ್ರಮಾತ್ಮಕ ಶರೀರವನ್ನು ತ್ಯಾಗಮಾಡುತ್ತಾನೆ, ಅದನ್ನು ಕಂಡು ಆ ರೀತಿಯಲ್ಲೆ ತಿಳಿಯಲಿ ಎಂಬ ಕಾರಣಕ್ಕಾಗಿ. ವಾಸ್ತವವಾಗಿ ಇಲ್ಲೊಂದು ಮರ್ಮವಿದೆ: ಜಹೌ ಸ್ವ ತನ್ವಾ. “ಕೃಷ್ಣ ತನ್ನ ಮೂಲದೇಹದೊಡನೆ ಈ ಜಗತ್ತಿನಿಂದ ನಿರ್ಗಮಿಸಿದ.

ಇಲ್ಲಿ ಇನ್ನೊಂದು ಮಾತನ್ನೂ ಹೇಳುತ್ತದೆ, ಶ್ರವಣೀಯ ಸತ್‌ ಕಥಾಃ “ಕೃಷ್ಣನ ಕುರಿತ ಮಾತುಗಳೂ ಸಹ ಅಲೌಕಿಕ” ಅವನ ಶರೀರ, ನಮ್ಮ ಶರೀರದಂತೆಯೇ ಇದ್ದಿದ್ದರೆ – ಆತನಿಗೆ ಭೌತಿಕ ದೇಹವಿದ್ದಿದ್ದರೆ – ಆ ದೇಹ ಹೊತ್ತವನ ಆಟಪಾಟಗಳು, ಲೀಲಾವಿನೋದಗಳೆಲ್ಲವನ್ನು ತಿಳಿದೇನು ಪ್ರಯೋಜನ? ನಮಗೆ ಭಗವದ್ಗೀತೆಯಲ್ಲಿರುವ ಕೃಷ್ಣನ ಮಾತುಗಳನ್ನು ಲೀಲಾವಿನೋದಗಳನ್ನು ತಿಳಿಯುವ ಕುತೂಹಲ. ಆದರೆ ಕೃಷ್ಣ ನಮ್ಮಂತೆಯೇ ಇರುವುದಾದರೆ, ಅದರಲ್ಲೇನು ಆಸಕ್ತಿ ನಮಗೆ? ವಾಸ್ತವವಾಗಿ, ಕೃಷ್ಣನನ್ನು ಕುರಿತು ಕೇಳಿದರೆ ನೀವು ಮುಕ್ತರಾಗುತ್ತೀರಿ. ಆದುದರಿಂದ ಆತ ನಮ್ಮಂತೆಯೇ ಒಬ್ಬ ಸಾಧಾರಣ ಮನುಷ್ಯನಾಗಿರಲು ಸಾಧ್ಯವೇ ಇಲ್ಲ. ಅಪ್ರಬುದ್ಧರು ಮಾತ್ರ (ಅಪ್ರಬುದ್ಧ ಚೇತಸಾಂ) ಹಾಗೆ ಯೋಚಿಸಬಹುದು.

ಭಾಗವತದ ಶ್ಲೋಕಗಳು ಪರಿಸಮಾಪ್ತಿಗೊಳ್ಳುವುದು ಕಲಿರನ್ವರ್ತತ ಎಂಬ ಪದಗಳಿಂದ ಕೃಷ್ಣಾವತಾರ ಮುಗಿದು, ಕೃಷ್ಣನ ತೇಜಸ್ಸಂಕ್ರಮಣವಾಗುತ್ತಿದ್ದಂತೆ ಕಲಿಗೆ (ವರ್ತಮಾನದ ಸಂಘರ್ಷದ ಮೂರ್ತರೂಪ) ಪ್ರವೇಶಾವಕಾಶ ಲಭಿಸಿತು: ಇದು ಒಂದಷ್ಟು ನಿಜ. ಕೃಷ್ಣನೇ ಸರ್ವಸ್ವವಾದರೆ ಆತ ಹೇಗೆ ನಿರ್ಗಮಿಸುತ್ತಾನೆ? ಕೃಷ್ಣ ನಿಮ್ಮೊಳಗೆ ಶಾಶ್ವತವಾಗಿ ನೆಲೆಸಿರುತ್ತಾನೆ. ಕೃಷ್ಣಪ್ರಜ್ಞೆಯಿಂದ ಕೃಷ್ಣನ ಸಂಗದಲ್ಲಿಯೇ ನೀವಿರುವುದಾದರೆ, ಕಲಿಗೆ ಪ್ರವೇಶಾವಕಾಶವೆಲ್ಲಿಯದು? ಎಲ್ಲಿಯ ಅವಕಾಶ? ಆದುದರಿಂದ ಯಾವಾಗಲೂ ಕೃಷ್ಣಪ್ರಜ್ಞೆಯೊಡನೆ ನೀವು ಸದಾ ಇದ್ದರೆ, ಕಲಿ ಪ್ರವೇಶಿಸಲಾರ, ನಿಮ್ಮನ್ನು ಮುಟ್ಟಲಾರ.

ಹರೇ ಕೃಷ್ಣ , ಧನ್ಯವಾದಗಳು.

ಈ ಲೇಖನ ಶೇರ್ ಮಾಡಿ