ಇಲ್ಲಿ ವಿವಿಧ ರೀತಿಯ ಪಲ್ಯಗಳನ್ನು ಮಾಡುವ ವಿಧಾನವನ್ನು ಕೊಟ್ಟಿದ್ದೇವೆ. ಈ ತಿನಿಸುಗಳನ್ನು ತಯಾರಿಸಿ ಶ್ರೀ ರಾಧಾಕೃಷ್ಣರಿಗೆ ಅರ್ಪಿಸಿ ಮನೆಯವರೊಂದಿಗೆ ಸೇವಿಸಿ.
ಬೀನ್ಸ್ ಪಲ್ಯ

ಬೇಕಾಗುವ ಸಾಮಗ್ರಿಗಳು :
ಚೂರು ಮಾಡಿರುವ ಬೀನ್ಸ್ – 1 ಕಪ್
ತೊಗರಿ ಬೇಳೆ – 1/4 ಕಪ್
ಉಪ್ಪು – ರುಚಿಗೆ ತಕ್ಕಷ್ಟು
ಕೆಂಪು ಮೆಣಸಿನಕಾಯಿ ಚೂರು – 6 ರದು
ಕರಿಬೇವು – 1 ಎಸಳು
ಸಾಸಿವೆ – ಸ್ವಲ್ಪ
ಕಾಯಿ ತುರಿ – 1/4 ಕಪ್
ಹುಣಸೇರಸ – 3/4 ಕಪ್
ಎಣ್ಣೆ – 2, 3 ಚಮಚ
ಮಾಡುವ ವಿಧಾನ : ಸಾಕಷ್ಟು ನೀರಿನಲ್ಲಿ ಬೇಳೆ ಮತ್ತು ಬೀನ್ಸ್ ಬೇಯಿಸಬೇಕು. ತಣ್ಣಗಾದ ಅನಂತರ ಬೆಂದ ಬೀನ್ಸ್‌ನಲ್ಲಿ ನೀರಿನಂಶ ತೆಗೆದು ಬಾಂಡ್ಲಿಯಲ್ಲಿ ಎಣ್ಣೆ ಹಾಕಿ ಕಾದನಂತರ ಸಾಸಿವೆ, ಕರಿಬೇವು, ಕೆಂಪು ಮೆಣಸಿನಕಾಯಿ ಸೇರಿಸಿ ಒಗ್ಗರಿಸಿ ಬೆಂದ ಬೀನ್ಸ್ ಅನ್ನು ಹಾಕಿ ಹುರಿದು ಹುಣಸೆ ನೀರು ಉಪ್ಪು ಸೇರಿಸಿ ಕೆದಕಿ ಕಾಯಿತುರಿಯನ್ನು ಸೇರಿಸಿದರೆ ರುಚಿಯಾದ ಪಲ್ಯ ರೆಡಿ. ತೆಗೆದ ನೀರಿನಂಶಕ್ಕೆ ತಿಳಿ ಸಾರಿನತರಹ ಮಾಡಬಹುದು.
ತೊಂಡೆಕಾಯಿ ಪಲ್ಯ

ಬೇಕಾಗುವ ಸಾಮಗ್ರಿಗಳು :
ತೊಂಡೆಕಾಯಿ ಹೋಳುಗಳು – 1 ಕಪ್
ಕೆಂಪು ಮೆಣಸಿನಕಾಯಿ – 3, 4
ಉಪ್ಪು – ರುಚಿಗೆ ತಕ್ಕಷ್ಟು
ಧನಿಯಾ – 1/4 ಕಪ್
ಉದ್ದಿನಬೇಳೆ ಕಡ್ಲೆಬೇಳೆ ಸೇರಿ – 3/4 ಚಮಚ
ಒಣಕೊಬ್ಬರಿ ತುರಿ – 1 ಚಮಚ
ಸಾಸಿವೆ – 1/4 ಕಪ್
ಕರಿಬೇವು – 1 ಕಡ್ಡಿ
ಎಣ್ಣೆ – 4 ಚಮಚ
ಗರಂ ಮಸಾಲಾ ಪೌಡರ್ – ಸ್ವಲ್ಪ
ನಿಂಬೆ ರಸ – 1/2 ಹೋಳು
ಮಾಡುವ ವಿಧಾನ: ಉದ್ದಿನ ಬೇಳೆ, ಕಡ್ಲೆಬೇಳೆ, ಕೆಂಪು ಮೆಣಸಿನಕಾಯಿ ಹಾಗೂ ಧನಿಯಾ ಬೇರೆ ಬೇರೆಯಾಗಿ ಹುರಿದು, ಉದ್ದಿನಬೇಳೆ, ಕಡ್ಲೆಬೇಳೆ ಸೇರಿಸಿ ಪುಡಿ ಮಾಡಬೇಕು. ಧನಿಯಾ ಕೆಂಪು ಮೆಣಸಿನಕಾಯನ್ನು ಸೇರಿಸಿ ಪುಡಿಮಾಡಿ. ಕೊಬ್ಬರಿ ತುರಿಯನ್ನು ಸ್ವಲ್ಪ ಬಿಸಿ ಮಾಡಬೇಕು. ತೊಂಡೆಕಾಯಿ ಹೋಳುಗಳನ್ನು ಆವಿಯಲ್ಲಿ ಬೇಯಿಸಬೇಕು. ಬಾಂಡ್ಲಿಯಲ್ಲಿ ಎಣ್ಣೆ ಕಾಯಿಸಿ ಸಾಸಿವೆ ಕೆದಕಿ ಬೆಂದ ಹೋಳುಗಳನ್ನು ಹಾಕಿ ಕೆದಕಿ ಪುಡಿಗಳನ್ನು ಒಂದರನಂತರ ಒಂದನ್ನು ಹಾಕಿ ಚೆನ್ನಾಗಿ ಕೆದಕಿ ಗರಂ ಮಸಾಲಾ ಪೌಡರನ್ನು ಸೇರಿಸಿ ಕೊನೆಗೆ ಉಪ್ಪು ನಿಂಬೆರಸವನ್ನು ಸೇರಿಸಿ ಕೆದಕಿದರೆ ರುಚಿಯಾದ ತೊಂಡೆಕಾಯಿ ಪಲ್ಯ ರೆಡಿ.
ದಪ್ಪ ಮೆಣಸಿನಕಾಯಿ ಪಲ್ಯ

ಬೇಕಾಗುವ ಸಾಮಗ್ರಿಗಳು :
ದಪ್ಪ ಮೆಣಸಿನಕಾಯಿ – 2
ಹುರಿಗಡಲೆ – 5 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಹುಣಸೇಹಣ್ಣು – 1/2 ಲೋಟ
ಒಣಕೊಬ್ಬರಿ ತುರಿ – 2 ಚಮಚ
ಕೆಂಪುಮೆಣಸಿನಕಾಯಿ – 3, 4
ಮಾಡುವ ವಿಧಾನ: ದಪ್ಪ ಮೆಣಸಿನ ಕಾಯಿಯ ಹೊರತು ಮೇಲೆ ತಿಳಿಸಿದ ಸಾಮಗ್ರಿಗಳನ್ನು ಸೇರಿಸಿ ಪುಡಿ ಮಾಡಬೇಕು. ಮೆಣಸಿನ ಕಾಯಿಗಳನ್ನು ಮಧ್ಯಕ್ಕೆ ಹೆಚ್ಚಿ ಪುಡಿಯ ಮಿಶ್ರಣಕ್ಕೆ ಸ್ವಲ್ಪ ನೀರನ್ನು ಹಾಕಿ ಗಟ್ಟಿಯಾಗಿ ಕಲೆಸಿ ಕತ್ತರಿಸಿದ ಹೋಳುಗಳ ಮಧ್ಯದಲ್ಲಿ ಸಾಕಷ್ಟು ತುಂಬಿ ಆವಿಯಲ್ಲಿ ಬೇಯಿಸಿದರೆ ರೆಡಿ.
ಬೀಟ್‌ರೂಟ್ ಪಲ್ಯ

ಬೇಕಾಗುವ ಸಾಮಗ್ರಿಗಳು :
ಬೀಟ್‌ರೂಟ್ ಹೋಳುಗಳು – 1 ಕಪ್
ಹಸಿರು ಮೆಣಸಿನಕಾಯಿ – 3
ಕಾಯಿತುರಿ – 1/4 ಕಪ್
ಗೋಡಂಬಿ – 4
ಉಪ್ಪು – ರುಚಿಗೆ ತಕ್ಕಷ್ಟು
ಕಡ್ಲೆಬೇಳೆ – 1/4 ಕಪ್
ಎಣ್ಣೆ – 2 ಚಮಚ
ಸಾಸಿವೆ – 1/4 ಚಮಚ
ಕರಿಬೇವು – 1 ಕಡ್ಡಿ
ಮಾಡುವ ವಿಧಾನ: ಬೀಟ್‌ರೂಟ್ ಹೋಳುಗಳನ್ನು ಆವಿಯಲ್ಲಿ ಬೇಯಿಸಿರಿ. ಹಸಿಯ ಮೆಣಸಿನಕಾಯಿ, ಕಾಯಿತುರಿ, ಗೋಡಂಬಿ ಮತ್ತು ಉಪ್ಪನ್ನು ಸೇರಿಸಿ ಮಿಕ್ಸಿಯಲ್ಲಿ ಸ್ವಲ್ಪ ತರಿಯಂತೆ ಮಾಡಿ. ಎಣ್ಣೆ ಕಾಯಿಸಿ ಸಾಸಿವೆ, ಕರಿಬೇವು ಸಿಡಿಸಿ ಕಡ್ಲೆಬೇಳೆಯನ್ನು ಹಾಕಿ ಕೆದಕಿ ತಯಾರಿಸಿದ ಮಿಶ್ರಣ ಮತ್ತು ಬೆಂದ ಬೀಟ್‌ರೂಟ್ ಸೇರಿಸಿ ಸ್ವಲ್ಪ ಹೊತ್ತು ಕೆದಕಿದರೆ ರೆಡಿ.