ಪರಶುರಾಮ ಅವತಾರ

ಒಮ್ಮೆ ಕಾರ್ತವೀರ್ಯಾರ್ಜುನನೆಂಬ ರಾಜನು ಅರಣ್ಯದಲ್ಲಿ ವಿಹರಿಸುತ್ತಾ ಜಮದಗ್ನಿ ಮಹರ್ಷಿಯ ಆಶ್ರಮಕ್ಕೆ ಬಂದನು. ಅವರು ರಾಜ ಮತ್ತು ಅವನ ಅನುಚರನನ್ನು ಸ್ವಾಗತಿಸಿದರು. ಈ ಅತಿಥಿಗಳನ್ನು ಸತ್ಕರಿಸಲು ಬೇಕಾದ ಎಲ್ಲ ವಸ್ತುಗಳನ್ನು ನೀಡಿ ಉಪಚರಿಸಿದರು. ಇದು ಎಲ್ಲ ಆಸೆಗಳನ್ನು ಈಡೇರಿಸುವ ಸಾಮರ್ಥ್ಯವುಳ್ಳ ಕಾಮಧೇನು ಎಂಬ ಹಸುವಿನ ದಿವ್ಯ ಶಕ್ತಿಗಳಿಂದ ಸಾಧ್ಯವಾಯಿತು. ಅದನ್ನು ಗರ್ವಿಷ್ಠನಾದ ಕಾರ್ತವೀರ್ಯಾರ್ಜುನನು ತನ್ನ ರಾಜಧಾನಿಗೆ ಎಳೆದುಕೊಂಡು ಹೋಗಲು ತನ್ನ ಸೈನಿಕರಿಗೆ ಆದೇಶ ನೀಡಿದನು. ಕಂಬನಿಗರೆಯುತ್ತಿದ್ದ ಕಾಮಧೇನುವನ್ನು ಅದರ ಕರುವಿನ ಜೊತೆಗೆ ತನ್ನ ರಾಜಧಾನಿಯಾದ ಮಾಹಿಷ್ಮತಿಗೆ ಎಳೆದುಕೊಂಡು ಹೋದನು.

ಕಾರ್ತವೀರ್ಯಾರ್ಜುನ ಕಾಮಧೇನುವಿನೊಂದಿಗೆ ನಿರ್ಗಮಿಸಿದ ನಂತರ ಪರಶುರಾಮನು ಆಶ್ರಮಕ್ಕೆ ಹಿಂತಿರುಗಿದನು. ಜಮದಗ್ನಿಯ ಕಿರಿಯ ಪುತ್ರನಾದ ಪರಶುರಾಮನು ಕಾರ್ತವೀರ್ಯಾರ್ಜುನನ ಮಹಾಪಾತಕವನ್ನು ಕೇಳಿದ ಕೂಡಲೇ ತುಳಿತಕ್ಕೊಳಗಾದ ಸರ್ಪದಂತೆ ಕೆರಳಿದನು. ಪರಶುರಾಮನು, ತನ್ನ ಭೀಕರವಾದ ಕೊಡಲಿ, ಗುರಾಣಿ, ಬಿಲ್ಲು ಬಾಣಗಳನ್ನು ತೆಗೆದುಕೊಂಡು ಸಿಂಹವು ಆನೆಯ ಬೆನ್ನಟ್ಟಿ ಹೋಗುವಂತೆ ತೀವ್ರ ಕೋಪದಿಂದ ಕಾರ್ತವೀರ್ಯಾರ್ಜುನನ ಬೆನ್ನಟ್ಟಿ ಹೋದನು. ಪರಶುರಾಮನನ್ನು ಕಂಡ ಕೂಡಲೇ ಕಾರ್ತವೀರ್ಯಾರ್ಜುನನು ಹೆದರಿದನು. ಪರಶುರಾಮನನ್ನು ತಡೆಯಲು ಸೈನ್ಯವನ್ನು ಕಳುಹಿಸಿದನು. ಪರಶುರಾಮನು ಏಕಾಂಗಿಯಾಗಿ ಎಲ್ಲರನ್ನು ಸದೆ ಬಡಿದನು. ಇದನ್ನು ಕಂಡ ಸಹಸ್ರ ಬಾಹುಗಳುಳ್ಳ ಕಾರ್ತವೀರ್ಯಾರ್ಜುನನು ತಾನೇ ಯುದ್ಧಕ್ಕೆ ಬಂದು ಏಕಕಾಲದಲ್ಲಿ 500 ಬಿಲ್ಲುಗಳಲ್ಲಿ ಬಾಣಗಳನ್ನು ಹೂಡಿದನು. ಪರಶುರಾಮನು ಒಂದೇ ಬಿಲ್ಲಿನಲ್ಲಿ ಸಾಕಷ್ಟು ಬಾಣಗಳನ್ನು ಹೂಡಿ ಕಾರ್ತವೀರ್ಯಾರ್ಜುನನ ಕೈಯಲ್ಲಿದ್ದ ಎಲ್ಲ ಬಿಲ್ಲುಗಳನ್ನು ತುಂಡು ತುಂಡು ಮಾಡಿದನು. ಪರಶುರಾಮನು ಪರಾಕ್ರಮದಿಂದ ಸರ್ಪದ ಹೆಡೆಗಳನ್ನು ಕೊಚ್ಚಿಹಾಕುವಂತೆ ಕಾರ್ತವೀರ್ಯಾರ್ಜುನನ ಬಾಹುಗಳನ್ನು ಮತ್ತು ತಲೆಯನ್ನು ಕತ್ತರಿಸಿಹಾಕಿದನು. ತಂದೆಯು ಹತನಾದದ್ದನ್ನು ನೋಡಿ ಕಾರ್ತವೀರ್ಯಾರ್ಜುನನ 1000 ಮಕ್ಕಳು ಓಡಿಹೋದರು.

ಶತ್ರು ವಧೆ ಮಾಡಿದ ಪರಶುರಾಮನು ಶತ್ರುವಿನ ಬಂಧನದಲ್ಲಿ ತೀವ್ರ ಯಾತನೆಯನ್ನು ಅನುಭವಿಸಿದ ಕಾಮಧೇನು ಮತ್ತು ಅದರ ಕರುವನ್ನು ಕರೆದುಕೊಂಡು ಬಂದು ಜಮದಗ್ನಿಯ ವಶಕ್ಕೆ ನೀಡಿದನು. ಅಲ್ಲಿ ನಡೆದ ವೃತ್ತಾಂತವನ್ನು ಕೇಳಿದ ಜಮದಗ್ನಿಯು ತೀವ್ರವಾಗಿ ನೊಂದು ಪ್ರಾಯಶ್ಚಿತ್ತಕ್ಕಾಗಿ ಪವಿತ್ರ ತೀರ್ಥಕ್ಷೇತ್ರಗಳ ಯಾತ್ರೆ ಕೈಗೊಳ್ಳುವಂತೆ ಪರಶುರಾಮನಿಗೆ ಸೂಚನೆಯನ್ನಿತ್ತರು.

ತೀರ್ಥಯಾತ್ರೆ ಮುಗಿಸಿಕೊಂಡು ಬಂದ ಪರಶುರಾಮನು ತನ್ನ ತಂದೆಯು ಕಾರ್ತವೀರ್ಯಾರ್ಜುನನ ಮಕ್ಕಳಿಂದ ಕೊಲ್ಲಲ್ಪಟ್ಟರು ಎಂದು ತಿಳಿದು ಕುಪಿತನಾಗಿ ಕಾರ್ತವೀರ್ಯಾರ್ಜುನನ ಎಲ್ಲಾ ಮಕ್ಕಳನ್ನು ಸಂಹರಿಸಿದನು ಹಾಗೂ ಎಲ್ಲ ದುಷ್ಟ  ಕ್ಷತ್ರಿಯರನ್ನು ಸಂಹರಿಸಿದನು. ಅನಂತರ ಪರಶುರಾಮನು ತನ್ನ ತಂದೆ ಜಮದಗ್ನಿಯ ತಲೆಯನ್ನು ದೇಹಕ್ಕೆ ಸೇರಿಸಿ ಅನೇಕ ಯಜ್ಞಗಳನ್ನು ಆಚರಿಸಿ ಅವರನ್ನು ಬದುಕಿಸಿದನು.

ಇಂತಹ ಅದ್ಭುತ ಕಾರ್ಯಗಳನ್ನು ಮಾಡಿದ ಮಹಾನ್‌ ಪರಾಕ್ರಮಿಯಾದ ಪರಶುರಾಮನು ಈಗಲೂ ಮಹೇಂದ್ರ ಪರ್ವತದಲ್ಲಿ ನೆಲೆಸಿದ್ದಾನೆ ಎಂದು ಹೇಳಲಾಗುತ್ತದೆ. ಭಗವಂತನಾದ ಶ್ರೀ ಕೃಷ್ಣನ ಅವತಾರವಾದ ಪರಶುರಾಮನಿಗೆ ಭಕ್ತಿಯಿಂದ ನಮಿಸೋಣ. 

ಹರೇಕೃಷ್ಣ.

ಈ ಲೇಖನ ಶೇರ್ ಮಾಡಿ