
ಆಲೂಗೆಡ್ಡೆಯಿಂದ ಮಾಡುವ ತಿನಿಸುಗಳು ಮತ್ತು ಅದರ ಉಪಯೋಗಗಳನ್ನು ಕೊಟ್ಟಿದ್ದೇವೆ. ಈ ತಿನಿಸುಗಳನ್ನು ತಯಾರಿಸಿ ಶ್ರೀ ರಾಧಾಕೃಷ್ಣರಿಗೆ ಅರ್ಪಿಸಿ ಮನೆಯವರೊಂದಿಗೆ ಸೇವಿಸಿ.
ಆಲೂ ಬಟಾಣಿ ಮಸಾಲೆ

ಬೇಕಾಗುವ ಸಾಮಗ್ರಿಗಳು :
ಬೇಯಿಸಿ ಸಿಪ್ಪೆ ತೆಗೆದ ಆಲೂಗೆಡ್ಡೆ – 2
ಬೇಯಿಸಿದ ಹಸಿ ಬಟಾಣಿ – 1 ಕಪ್
ಸಣ್ಣಗೆ ಹೆಚ್ಚಿದ ಟೊಮ್ಯಾಟೊ 1
ತುರಿದ ಶುಂಠಿ – 1/2 ಚಮಚ
ಮೊಸರು – 1/2 ಕಪ್
ಕರಿಬೇವು – ಸ್ವಲ್ಪ
ಕೊತ್ತಂಬರಿ ಸೊಪ್ಪು – ಸ್ವಲ್ಪ
ಕೆಂಪು ಮೆಣಸಿನಕಾಯಿ ಪುಡಿ – 2 ಚಮಚ
ಧನಿಯಾ ಪುಡಿ – 1 ಚಮಚ
ಅರಿಶಿನ – ಸ್ವಲ್ಪ
ಸಾಸಿವೆ – 1/2 ಚಮಚ
ಜೀರಿಗೆ – 1/2 ಚಮಚ
ಎಣ್ಣೆ – 2 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಮಾಡುವ ವಿಧಾನ : ಆಲೂಗೆಡ್ಡೆಯನ್ನು ದೊಡ್ಡದಾಗಿ ಕತ್ತರಿಸಿ. ಎಣ್ಣೆ ಬಿಸಿ ಮಾಡಿ, ಜೀರಿಗೆ ಮತ್ತು ಸಾಸಿವೆ ಹಾಕಿ ಸಿಡಿಯಲು ಬಿಡಿ. ಅನಂತರ ಶುಂಠಿ, ಟೊಮ್ಯಾಟೊ ಹಾಕಿ ಬೇಯಿಸಿ. ಎಣ್ಣೆ ಬಿಡುವವರೆಗೂ ಹುರಿಯಿರಿ. ಆಮೇಲೆ ಮಸಾಲೆ ಪದಾರ್ಥಗಳು, ಉಪ್ಪು, ಮೊಸರು ಸೇರಿಸಿ. ಅನಂತರ ಬಟಾಣಿ, ಆಲೂಗೆಡ್ಡೆ, ಅರ್ಧ ಕಪ್ ನೀರು ಹಾಕಿ ಕುದಿಸಿ. ಆಗಾಗ್ಗೆ ಕಲಕುತ್ತಿರಿ. ಕೊನೆಯದಾಗಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಆಲೂ ಬಟಾಣಿ ಮಸಾಲೆ ಸವಿಯಲು ಸಿದ್ಧ.
ಆಲೂ ಟಿಕ್ಕಿ

ಬೇಕಾಗುವ ಸಾಮಗ್ರಿಗಳು :
ಬೇಯಿಸಿ ಸಿಪ್ಪೆ ತೆಗೆದ ಆಲೂಗೆಡ್ಡೆ – 3
ಬ್ರೆಡ್ ಕ್ರಮ್ಸ್ – 3 ಚಮಚ
ಹಸಿ ಮೆಣಸಿನಕಾಯಿ – 3
ಶುಂಠಿ – 1/2 ಇಂಚು
ಕೊತ್ತಂಬರಿ ಸೊಪ್ಪು – ಸ್ವಲ್ಪ
ಜೀರಿಗೆ ಪುಡಿ – 1/4 ಚಮಚ
ಧನಿಯಾ ಪುಡಿ – 1/2 ಚಮಚ
ಮಾವಿನ ಪುಡಿ – 1/2 ಚಮಚ
ಉಪ್ಪು – ರುಚಿಗೆ
ಎಣ್ಣೆ – ಕರಿಯಲು
ಮಾಡುವ ವಿಧಾನ : ಆಲೂಗೆಡ್ಡೆಯನ್ನು ಬೇಯಿಸಿ ತಣ್ಣಗಾಗಲು ಬಿಡಿ. ಅನಂತರ ಆಲೂವಿನ ಸಿಪ್ಪೆ ತೆಗೆದು ಸಣ್ಣಗೆ ಪುಡಿ ಮಾಡಿಕೊಳ್ಳಿ. ಇದಕ್ಕೆ ಸಣ್ಣಗೆ ಕತ್ತರಿಸಿದ ಶುಂಠಿ, ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಜೀರಿಗೆ ಪುಡಿ, ಧನಿಯಾ ಪುಡಿ, ಮಾವಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕಲಸಿ. ಅನಂತರ ಇದನ್ನು ಕೈಯಲ್ಲಿ ಟಿಕ್ಕಿಯಾಕಾರದಲ್ಲಿ ತಟ್ಟಿ ಎರಡು ಕಡೆಯು ಬ್ರೆಡ್ ಕ್ರಮ್ಸ್‌ನಲ್ಲಿ ಅದ್ದಿ ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೂ ಕರಿದರೆ ಬಿಸಿ ಬಿಸಿಯಾದ ಆಲೂಟಿಕ್ಕಿ ಸವಿಯಲು ಸಿದ್ಧ. ಇದನ್ನು ಸಿಹಿ ಮತ್ತು ಹಸಿರು ಚಟ್ನಿ ಜೊತೆ ತಿನ್ನಲು ಕೊಡಿ.
ಆಲೂಗಡ್ಡೆಯಿಂದ ಆಗುವ ಉಪಯೋಗಗಳು:

1. ತೂಕ ಇಳಿಸಲು – ಆಲೂಗೆಡ್ಡೆಯಲ್ಲಿ ಅತಿ ಕಡಮೆ ಪ್ರಮಾಣದ ಕೊಬ್ಬು ಮತ್ತು ಸೋಡಿಯಂನ ಅಂಶಗಳಿವೆ. ಈ ಕಾರಣದಿಂದಾಗಿ ಆಲೂ ಸಿಪ್ಪೆಯು ನಿಮ್ಮ ತೂಕ ಇಳಿಸುವಲ್ಲಿ ಒಂದು ಭಾಗವಾಗಬಹುದು.
2. ರೋಗ ನಿರೋಧಕ ಶಕ್ತಿಗೆ ಉತ್ತೇಜಕ – ವಿಟಮಿನ್ `ಸಿ’ ಯಿಂದ ತುಂಬಿ ತುಳುಕುತ್ತಿರುವ ಆಲೂಗೆಡ್ಡೆ ಸಿಪ್ಪೆಯು ಆ್ಯಂಟಿ ಆಕ್ಸಿಡಂಟ್ ಏಜಂಟ್ ಆಗಿ ಪಾತ್ರವಹಿಸುತ್ತದೆ. ಅಲ್ಲದೆ ಸಿಪ್ಪೆಯಲ್ಲಿ ಬಿ-ಕಾಂಪ್ಲೆಕ್ಸ್ ವಿಟಮಿನ್ ಮತ್ತು ಕ್ಯಾಲ್ಸಿಯಂ ಅಧಿಕವಾಗಿದೆ. ಇದು ಆರೋಗ್ಯಕರ ರಕ್ಷಣಾ ವ್ಯವಸ್ಥೆಯಲ್ಲಿ ಪರಿಪೂರ್ಣ ಪಾತ್ರ ನಿರ್ವಹಿಸುತ್ತದೆ. ಇದರಿಂದ ರೋಗ ನಿರೋಧಕ ಶಕ್ತಿ ವೃದ್ಧಿಯಾಗುತ್ತದೆ.
3. ಕ್ಯಾನ್ಸರ್ ವಿರುದ್ಧ ರಕ್ಷಣೆ – ಫಿಟೊಕೆಮಿಕಲ್ಸ್ ಆಲೂ ಸಿಪ್ಪೆಯಲ್ಲಿ ಸಮೃದ್ಧವಾಗಿದೆ. ಇದು ಕ್ಯಾನ್ಸರ್ ರೋಗದ ವಿರುದ್ಧದ ಹೋರಾಟದಲ್ಲಿ ದೇಹವನ್ನು ರಕ್ಷಿಸುತ್ತದೆ.
4. ರಕ್ತದಲ್ಲಿ ಕೊಲೆಸ್ಟರಾಲ್ ಕಡಮೆ ಮಾಡುವ ಗುಣ – ಅಧಿಕ ಪ್ರಮಾಣದ ನಾರಿನಂಶದ ಜೊತೆಗೆ ಆ್ಯಂಟಿ ಆಕ್ಸಿಡಂಟ್ಸ್, ಪಾಲಿಫೆನಾಲ್‌ಗಳು ದೇಹದ ಮೇಲೆ ಕೊಲೆಸ್ಟರಾಲ್ ಕಡಮೆ ಮಾಡುವ ಪ್ರಭಾವವನ್ನು ಪ್ರೇರೇಪಿಸುತ್ತವೆ. ಆದುದರಿಂದ ಆಲೂಗೆಡ್ಡೆ ಸಿಪ್ಪೆಯಿಂದ ಆರೋಗ್ಯ ಪಡೆಯಲು ಇಚ್ಛಿಸುವವರು ಸಿಪ್ಪೆ ತೆಗೆಯದೆ ಹಾಗೆ ಆಹಾರದಲ್ಲಿ ಬಳಸಬೇಕು.
5. ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಕಾಪಾಡುತ್ತದೆ – ನೀವು ಹಸಿವಿನ ನೋವು ಅನುಭವಿಸುತ್ತಿರುವಿರಾ? ಹಾಗಾದರೆ ಮನಸೋ ಇಚ್ಛೆ ತಿನ್ನುವುದಕ್ಕೆ ತಡೆ ಹಾಕಲು ನಿಮ್ಮ ಆಹಾರದಲ್ಲಿ ಆಲೂಗೆಡ್ಡೆ ಸಿಪ್ಪೆ ಸೇರಿಸುವುದು ಸೂಕ್ತ. ಅಧಿಕ ನಾರಿನಾಂಶದ ಜೊತೆಗೆ ಆಲೂವಿನ ಸಿಪ್ಪೆಯಲ್ಲಿ ದೇಹದ ರಕ್ತದಲ್ಲಿನ ಸಕ್ಕರೆ ಮಟ್ಟವು ಏರುವುದನ್ನು ತಡೆಯಲು ಅಗತ್ಯವಾದ ಪೌಷ್ಟಿಕಾಂಶಗಳಿವೆ.
6. ಸುಟ್ಟ ಗಾಯಕ್ಕೆ ರಾಮ ಬಾಣ – ಚರ್ಮದ ಸುಟ್ಟ ಗಾಯಕ್ಕೆ ಒಂದು ಪರಿಣಾಮಕಾರಿಯಾದ ಮತ್ತು ಸರಳವಾದ ಮನೆ ಮದ್ದು ಎಂದರೆ ಆಲೂಸಿಪ್ಪೆ. ಇದು ಆ್ಯಂಟಿ ಬ್ಯಾಕ್ಟೀರಿಯ ಏಜಂಟ್‌ನಂತೆ ಕಾರ್ಯ ನಿರ್ವಹಿಸುವುದರ ಜೊತೆಗೆ ಅದು ಚರ್ಮಕ್ಕೆ ತೇವಾಂಶವನ್ನು ನೀಡುತ್ತದೆ. ಹಾಗೂ ಸಣ್ಣ ಪ್ರಮಾಣದ ಸುಟ್ಟ ಗಾಯಕ್ಕೆ ಹೆಚ್ಚು ಪರಿಣಾಮಕಾರಿಯಾಗಿ ಉಪಯೋಗವಾಗುತ್ತದೆ.