ಸ್ವಾಯಂಭುವ ಮನುವಿನ ವಂಶದಲ್ಲಿ ಶ್ರೀಕೃಷ್ಣನ ಪರಮಭಕ್ತನಾದ ಧ್ರುವನು ಹುಟ್ಟಿ ಆ ವಂಶದ ಕೀರ್ತಿಯನ್ನು ಬೆಳಗಿದನು. ಆದರೆ ಸುಕ್ಷೇತ್ರದಲ್ಲಿ ಮುಳ್ಳುಕಂಟೆಗಳು ಬೆಳೆಯುವಂತೆ, ಅದೇ ವಂಶದಲ್ಲಿ, ದುಷ್ಟನಾದ ವೇನನು ಜನಿಸಿದನು. ಇದಕ್ಕೆ ವೇನನ ಮಾತಾಮಹನಾದ ಮೃತ್ಯುವಿನ ಅಂಶವೂ ಕಾರಣವಾಗಿತ್ತು. ವೇನನು ಒಬ್ಬ ರಾಜನಾದರೂ, ದುಷ್ಟನಾದ ಅವನಿಂದ ನಡೆಯುತ್ತಿದ್ದ ಅತ್ಯಾಚಾರಗಳನ್ನು ಮನಗಂಡ ಋಷಿಗಳು ಅವನನ್ನು ಖಂಡಿಸಿ, ಕೊಂದರು. ಆಗ ರಾಜ್ಯವು ಅರಾಜಕವಾಗಲು, ಅವರು ವೇನನ ದೇಹದ ತೋಳುಗಳನ್ನು ಕಡೆದರು. ಅದರಿಂದ, ದಿವ್ಯ ಜೋಡಿಯೊಂದು ಅವತರಿಸಿತು.
ಋಷಿಮುನಿಗಳು ಆ ಸ್ತ್ರೀ ಪುರುಷರನ್ನು ನೋಡಿ ಆನಂದಗೊಂಡು ನುಡಿದರು, “ಈ ಪುರುಷನು ಭಗವಾನ್ ವಿಷ್ಣುವಿನ ಪಾಲಕ ಶಕ್ತಿಯ ಸ್ವಾಂಶ ವಿಸ್ತರಣೆಯಾಗಿದ್ದಾನೆ. ಈ ದಿವ್ಯಸ್ತ್ರೀ, ಆ ಭಗವಂತನನ್ನು ಎಂದೆಂದಿಗೂ ಅಗಲದ ಲಕ್ಷ್ಮೀದೇವಿಯ ಅಂಶವಾಗಿದ್ದಾಳೆ. ಈ ಪುರುಷನು ಪ್ರಪ್ರಥಮ ರಾಜನಾಗುತ್ತಾನೆ. ಇವನ ಯಶಸ್ಸು ಎಲ್ಲೆಲ್ಲೂ ಪ್ರಥಿತವಾಗುತ್ತದೆ. ಹಾಗಾಗಿ ಇವನ ಹೆಸರು ಪೃಥು. ಸದ್ಗುಣಭೂಷಿತೆಯೂ ಸುಂದರ ದಂತಪಂಕ್ತಿಗಳಿಂದ ಕೂಡಿರುವ ಅಪ್ರತಿಮ ಚೆಲುವೆಯೂ ಆದ ಈ ಸ್ತ್ರೀರತ್ನವು, ಅರ್ಚಿಯೆಂಬ ಹೆಸರಿನಿಂದ ಕರೆಯಲ್ಪಟ್ಟು ಪೃಥುವಿನ ರಾಣಿಯಾಗುತ್ತಾಳೆ. ಲೋಕ ರಕ್ಷಣೆಗಾಗಿ ದೇವೋತ್ತಮ ಪರಮ ಪುರುಷನೇ ತನ್ನ ಅಂಶದಿಂದ ಪೃಥುವಾಗಿ ಅವತರಿಸಿದ್ದಾನೆ. ಅಂತೆಯೇ ಅವನ ಸಹವರ್ತಿನಿಯಾದ ಲಕ್ಷ್ಮಿಯೇ ಅರ್ಚಿಯಾಗಿ ಅಂಶತಃ ಜನಿಸಿದ್ದಾಳೆ.”
ವಿಪ್ರವರ್ಯರು ಪೃಥುವನ್ನು ಪ್ರಶಂಸಿಸಿದರು. ಗಂಧರ್ವಾಪ್ಸರೆಯರು ಆನಂದದಿಂದ ಹಾಡಿ ನರ್ತಿಸಿದರು. ದೇವಸಿದ್ಧ ಚಾರಣರು ಪುಷ್ಪವೃಷ್ಟಿಗೈದರು. ಶಂಖಮೃದಂಗ ದುಂದುಭಿಗಳು ಮೊಳಗಿದವು. ದೇವಋಷಿಪಿತೃಗಣಗಳೆಲ್ಲರೂ ಪೃಥುವನ್ನು ನೋಡಲು ಆಗಸದಿಂದ ಇಳಿದು ಬಂದರು!
ಬ್ರಹ್ಮದೇವನು ಪೃಥುವಿನ ಬಲಹಸ್ತದಲ್ಲೂ ಪಾದಗಳಲ್ಲೂ ಶಂಖ ಚಕ್ರ ಗದಾ ಪದ್ಮಗಳ ಚಿಹ್ನೆಗಳಿದ್ದುದನ್ನು ಗಮನಿಸಿ ಅವನು ವಿಷ್ಣುವಿನ ಅಂಶಾವತಾರವೆಂದು ಮನಗಂಡನು.
ಬ್ರಾಹ್ಮಣ ಶ್ರೇಷ್ಠರು ಪೃಥುವಿನ ಪಟ್ಟಾಭಿಷೇಕ ಸಮಾರಂಭವನ್ನು ಆರಂಭಿಸಿದರು. ಆಗ ಜನರೆಲ್ಲರೂ ಅಭಿಷೇಕ ಸಮಾರಂಭಕ್ಕೆ ಅಗತ್ಯವಾದ ಸಿದ್ಧತೆಗಳನ್ನು ಮಾಡಿದರು. ದಿಕ್ಕು ದಿಕ್ಕುಗಳಿಂದಲೂ ಅಗತ್ಯ ಸಾಮಗ್ರಿಗಳನ್ನು ಸಂಗ್ರಹಿಸಿ ತಂದರು. ಆಗ ನದಿಸಾಗರಗಳೂ, ಗಿರಿಪರ್ವತಗಳು, ನಾಗಗಳೂ, ಹಸುಗಳೂ, ಪಕ್ಷಿಗಳೂ, ವನ್ಯಮೃಗಗಳೂ, ಗ್ರಹದೇವತೆಗಳೂ, ಭೂದೇವಿಯೂ ತಮ್ಮ ಯೋಗ್ಯತಾನುಸಾರವಾಗಿ ರಾಜನಿಗೆ ಅರ್ಪಿಸಲೆಂದು ಉಡುಗೊರೆಗಳನ್ನು ತಂದರು. ಪೃಥು ಮಹಾರಾಜನೂ ರಾಣಿ ಅರ್ಚಿಯೂ ಸುಂದರ ವಸ್ತ್ರಾಭರಣಗಳಿಂದ ಅಲಂಕೃತರಾಗಿ ದೇದೀಪ್ಯಮಾನವಾಗಿ ಬೆಳಗಿದರು. ಪಟ್ಟಾಭಿಷಿಕ್ತನಾದ ಪೃಥುವು ಇನ್ನೊಬ್ಬ ಅಗ್ನಿಯಂತೆ ಪ್ರಕಾಶಿಸಿದನು.
ಆ ಸಮಾರಂಭದಲ್ಲಿ ಧನಾಧಿಪತಿಯಾದ ಕುಬೇರನು ಪೃಥುವಿಗೆ ಹೊನ್ನಿನ ಸಿಂಹಾಸನವೊಂದನ್ನರ್ಪಿಸಿದನು. ವರುಣನು ಚಂದ್ರನಂತೆ ಬೆಳಗುತ್ತಾ ನೀರಿನ ಹನಿಗಳನ್ನು ಸಿಂಪಡಿಸಿ ಹಿತವನ್ನುಂಟುಮಾಡುವಂತಹ ಕೊಡೆಯೊಂದನ್ನು ನೀಡಿದನು. ವಾಯುದೇವನು ಎರಡು ಸುಂದರ ಚಾಮರಗಳನ್ನಿತ್ತರೆ, ಧರ್ಮದೇವನು ಕೀರ್ತಿಯನ್ನು ವಿಸ್ತರಿಸುವ ಪುಷ್ಪಮಾಲೆಯನ್ನು ನೀಡಿದನು. ದೇವೇಂದ್ರನು ಉತ್ಕೃಷ್ಟವಾದ ಕಿರೀಟವನ್ನು ಉಡುಗೊರೆಯಾಗಿತ್ತರೆ, ಯಮನು ಲೋಕಪಾಲನೆ ಮಾಡಲು ದಂಡವೊಂದನ್ನು ನೀಡಿದನು. ಬ್ರಹ್ಮದೇವನು ಬ್ರಹ್ಮಮಯವಾದ ಕವಚವೊಂದನ್ನು ನೀಡಿದರೆ, ಅವನ ಪತ್ನಿ ಸರಸ್ವತೀದೇವಿಯು ಕಂಠೀಹಾರವೊಂದನ್ನು ನೀಡಿದಳು. ಶ್ರೀಮನ್ನಾರಾಯಣನು ಪೃಥುವಿಗೆ ಸುದರ್ಶನ ಚಕ್ರವನ್ನಿತ್ತರೆ, ಲಕ್ಷ್ಮೀದೇವಿಯು ನಾಶವಾಗದ ಐಶ್ವರ್ಯವನ್ನು ಕರುಣಿಸಿದಳು. ಶಿವನು ಪೃಥುವಿಗೆ ಹತ್ತು ಚಂದ್ರರಿಂದ ಅಲಂಕೃತವಾಗಿದ್ದ ಒರೆ ಸಹಿತವಾದ ಒಂದು ಖಡ್ಗವನ್ನು ದಯಪಾಲಿಸಿದರೆ, ಪಾರ್ವತೀದೇವಿಯು ನೂರು ಚಂದ್ರರಿಂದ ಅಲಂಕೃತವಾಗಿದ್ದ ಒಂದು ಗುರಾಣಿಯನ್ನು ನೀಡಿದಳು. ಚಂದ್ರನು ಅಮೃತಮಯವಾದ ಅಶ್ವಗಳನ್ನು ನೀಡಿದರೆ, ವಿಶ್ವಕರ್ಮನು ಸುಂದರವಾದ ಒಂದು ರಥವನ್ನು ಕಾಣಿಕೆಯಾಗಿತ್ತನು. ಅಗ್ನಿದೇವನು ಪೃಥುರಾಜನಿಗೆ ಗೋವುಗಳ ಹಾಗೂ ಆಡುಗಳ ಶೃಂಗಗಳಿಂದ ಮಾಡಲ್ಪಟ್ಟಿದ್ದ ಒಂದು ಧನುಸ್ಸನ್ನು ನೀಡಿದರೆ, ಸೂರ್ಯದೇವನು ತನ್ನ ಕಿರಣಗಳ ಹೊಳಪಿನಿಂದ ಯುಕ್ತವಾಗಿದ್ದ ಬಾಣಗಳನ್ನು ನೀಡಿದನು. ಭೂದೇವಿಯು ಅವನಿಗೆ ಯೋಗಶಕ್ತಿಯಿಂದ ಕೂಡಿದ್ದ ಪಾದುಕೆಗಳನ್ನು ನೀಡಿದರೆ, ಆಕಾಶದ ದೇವತೆಗಳು ದಿನದಿನವೂ ಪುಷ್ಪಗಳನ್ನು ನೀಡಲು ಮೊದಲು ಮಾಡಿದರು. ಆಗಸದಲ್ಲಿ ಸಂಚರಿಸಬಲ್ಲ ಶಕ್ತಿಯುಳ್ಳ ಗಂಧರ್ವರು ಗಾಯನ, ವಾದನ, ನರ್ತನ, ಅಂತರ್ಧಾನವೇ ಮೊದಲಾದ ಕಲೆಗಳನ್ನು ರಾಜನಿಗೆ ಧಾರೆಯೆರೆದರು. ಮಹಾಮುನಿಗಳು ಮಂಗಳಾಶೀರ್ವಾದಗಳನ್ನು ಮಾಡಿದರು. ಸಮುದ್ರ ರಾಜನು, ಸಮುದ್ರದಲ್ಲಿ ಉತ್ಪತ್ತಿಯಾಗುವ ಶಂಖವನ್ನು ಕೊಟ್ಟನು. ನದಿಸಾಗರ ಪರ್ವತಗಳು ರಾಜನ ರಥಕ್ಕೆ ತಡೆಯಾಗದಂಥ ದಾರಿಮಾಡಿಕೊಟ್ಟವು.
ಆಗ ಸೂತ ಮಾಗಧವಂದಿಗಳು ಪೃಥು ಮಹಾರಾಜನನ್ನು ಹಾಡಿಹೊಗಳಲಾರಂಭಿಸಿದರು. ಅವರು ತನ್ನ ಬಗ್ಗೆ ಹಾಗೆ ಹಾಡುವುದನ್ನು ಕಂಡ ಪ್ರತಾಪಶಾಲಿ ಪೃಥರಾಜನು ನಸುನಗುತ್ತಾ ಮೇಘಗಂಭೀರವಾದ ಧ್ವನಿಯಿಂದ ಹೀಗೆಂದರು, “ಎಲೈ ಸೂತಮಾಗಧವಂದಿಗಳೇ, ನೀವೇಕೆ ನನ್ನನ್ನು ಹೀಗೆ ಕೀರ್ತಿಸುತ್ತಿರುವಿರಿ? ಲೋಕದಲ್ಲಿ ಇನ್ನೂ ನನ್ನ ಯಾವ ಗುಣಗಳೂ ಪ್ರಸಿದ್ಧಿಗೆ ಬಂದಿಲ್ಲ. ಇಂಥ ಸದ್ಗುಣಗಳಾವುವೂ ನನ್ನಲ್ಲಿಲ್ಲದಿರುವಾಗ ನೀವೇಕೆ ನನ್ನ ಬಗ್ಗೆ ಹಾಡಿ ವೃಥಾ ಶ್ರಮ ತಂದುಕೊಳ್ಳುವಿರಿ? ಅಯ್ಯಾ ಸೌಮ್ಯ ಗಾಯಕರೇ, ಮುಂದೆ ನನ್ನಲ್ಲಿ ಅಂಥ ಸದ್ಗುಣಗಳು ಕಂಡು ಬಂದಾಗ ಹೀಗೆ ಹಾಡುವಿರಂತೆ. ದೇವೋತ್ತಮ ಪರಮ ಪುರುಷನನ್ನು ಸ್ತುತಿಸುವ ಸಜ್ಜನರು ಅವನಲ್ಲಿರುವ ಗುಣಗಳನ್ನು ಅಂಥ ಗುಣಗಳಿಲ್ಲದ ಮನುಷ್ಯನಲ್ಲಿ ಆರೋಪಿಸುವುದಿಲ್ಲ. ಸದ್ಗುಣಗಳನ್ನು ತನ್ನಲ್ಲಿ ರೂಢಿಸಿಕೊಳ್ಳಲು ಶಕ್ತನಾಗಿರುವ ಯಾವ ಬುದ್ಧಿವಂತನು ತಾನೇ ಅವುಗಳನ್ನು ಪಡೆಯದೆ ಸುಮ್ಮನೆ ಸ್ತುತಿಸಿಕೊಂಡಾನು? `ನೀನು ಚೆನ್ನಾಗಿ ವಿದ್ಯಾಭ್ಯಾಸ ಮಾಡಿದ್ದರೆ ನೀನೊಬ್ಬ ದೊಡ್ಡ ವಿದ್ವಾಂಸನಾಗುತ್ತಿದ್ದೆ’ ಎಂದು ಹೇಳಿ ಒಬ್ಬನನ್ನು ಹೊಗಳುವುದು ಬರಿದೆ ಮೋಸಮಾಡಿದಂತಾಗುತ್ತದೆ. ಇಂಥ ಹೊಗಳಿಕೆಗಳಿಗೆ ಸುಮ್ಮನೆ ತಲೆಬಾಗುವವನು ಅವು ನಿಜವಾಗಿಯೂ ನಿಂದನೆಗಳೆಂದು ತಿಳಿದಿರುವುದಿಲ್ಲ. ಗೌರವಾನ್ವಿತ ವ್ಯಕ್ತಿಗಳೂ ಉದಾರಿಗಳೂ ತಮ್ಮ ಅವಗುಣಗಳನ್ನು ಕೇಳಲು ಇಷ್ಟಪಡದಿರುವಂತೆ, ಪ್ರತಾಪಶಾಲಿಯೂ ಪ್ರಸಿದ್ಧ ಪುರುಷನೂ ತನ್ನ ಹೊಗಳಿಕೆಗಳನ್ನು ಕೇಳಲು ಇಚ್ಛಿಸುವುದಿಲ್ಲ. ನಾನಾದರೋ ಇನ್ನೂ ಯಾವ ಮಹತ್ಕಾರ್ಯವನ್ನೂ ಮಾಡಿ ಪ್ರಸಿದ್ಧನಾಗಿಲ್ಲ. ಹೀಗಿರಲು, ನೀವು ನನ್ನನ್ನು ಮಕ್ಕಳಂತೆ ಸ್ತುತಿಸುವುದು ಸರಿಯೇ?”
ಪೃಥು ಮಹಾರಾಜನ ಅಮೃತೋಪಮವಾದ ವಿನಯಪೂರ್ವಕ ಮಾತುಗಳನ್ನು ಕೇಳಿ ವಂದಿಮಾಗಧರಿಗೆ ಬಹಳ ಸಂತೋಷವಾಯಿತು. ಆದರೆ ಮುನಿಗಳು ಅವರನ್ನು ಪ್ರಚೋದಿಸಲು, ಅವರು ಪೃಥುವನ್ನು ಮತ್ತೆ ಸ್ತುತಿಸತೊಡಗಿದರು;
“ಮಹಾರಾಜ! ವೇನನ ದೇಹದಿಂದ ಜನಿಸಿದ್ದರೂ ನೀನು ಭಗವಂತನ ಅಂತರಂಗ ಶಕ್ತಿಯಿಂದ ಅವತರಿಸಿರುವೆ. ನಿನ್ನ ಮಹಿಮೆಯನ್ನು ಎಷ್ಟು ಕೊಂಡಾಡಿದರೂ ಸಾಲದು! ಬ್ರಹ್ಮನಂಥ ವಾಕ್ಚತುರರಿಗೂ ನಿನ್ನ ಮಹಿಮೆಯನ್ನು ಸಂಪೂರ್ಣವಾಗಿ ಸ್ತುತಿಸಲಾಗದು. ಆದರೂ ಮಹರ್ಷಿಗಳ ಉಪದೇಶದಂತೆ ಪರಮ ಉದಾರಿಯೂ, ಶ್ರೀಹರಿಯ ಅಂಶಾವತಾರಿಯೂ ಆದ ನಿನ್ನ ಕಥಾಮೃತವನ್ನು ಕೀರ್ತಿಸಲು ಯತ್ನಿಸುತ್ತೇವೆ.
“ಈ ಮಹಾರಾಜ ಪೃಥುವು ಧರ್ಮವಿದರಲ್ಲಿ ಶ್ರೇಷ್ಠನು. ಇವನು ಲೋಕವನ್ನು ಧರ್ಮದಲ್ಲಿ ನಡೆಸುತ್ತಾನೆ. ಧರ್ಮಾನುಯಾಯಿಗಳನ್ನು ಇವನು ಸದಾ ರಕ್ಷಿಸುತ್ತಾನೆ. ಅಧರ್ಮದ ಹಾದಿಯಲ್ಲಿ ನಡೆಯುವವರನ್ನು ಶಿಕ್ಷಿಸುತ್ತಾನೆ. ಇವನು ಯಜ್ಞಗಳನ್ನಾಚರಿಸಿ, ತನ್ಮೂಲಕ ಇಹಪರಲೋಕಗಳೆರಡಕ್ಕೂ ಹಿತವನ್ನುಂಟು ಮಾಡುತ್ತಾನೆ. ತನ್ನ ಒಂದೇ ದೇಹದಲ್ಲೇ ಸಕಲ ದೇವತೆಗಳನ್ನೂ ಧರಿಸಿ ಕಾಲಕಾಲಕ್ಕೆ ಎಲ್ಲ ಜೀವಿಗಳಿಗೂ ಒಳಿತನ್ನುಂಟು ಮಾಡುತ್ತಾನೆ.
“ಸೂರ್ಯನು ನದಿ, ಸಾಗರಗಳಿಂದ ನೀರನ್ನು ಹೀರಿ ಕಾಲಕಾಲಕ್ಕೆ ಮಳೆಯ ರೂಪದಲ್ಲಿ ಅದನ್ನು ಭೂಮಿಗೇ ಹಿಂದಿರುಗಿಸುವಂತೆ, ಪೃಥುರಾಜನು ಎಲ್ಲ ಪ್ರಜೆಗಳನ್ನು ಸಮನಾಗಿ ಕಾಣುತ್ತಾ ಅವರಿಂದ ತೆರಿಗೆ ವಸೂಲು ಮಾಡಿ ಅಗತ್ಯವಿದ್ದಾಗ ಅದನ್ನು ಅವರಿಗಾಗಿಯೇ ವಿನಿಯೋಗಿಸುತ್ತಾನೆ. ಈ ರಾಜನು ಭೂಮಿಯಂತೆಯೇ ಕ್ಷಮಾಶೀಲನು. ಬಡಬಗ್ಗರು ನೀತಿನಿಯಮಗಳನ್ನು ಉಲ್ಲಂಘಿಸಿ ತನ್ನನ್ನೇ ಅತಿಕ್ರಮಿಸಿ ನಡೆದರೂ ಅವರನ್ನು ಕ್ಷಮಿಸಿಬಿಡುವ ದಯಾಳು ಇವನು. ರಾಜ್ಯದಲ್ಲಿ ಮಳೆಯಾಗದೆ ಇದ್ದಾಗ, ಈ ರಾಜನು ದೇವೇಂದ್ರನಂತೆಯೇ ಮಳೆಗರೆಯಲು ಸಮರ್ಥನಾಗುತ್ತಾನೆ. ಪ್ರಜೆಗಳು ಕ್ಷಾಮಕ್ಕೆ ಸಿಕ್ಕಿ ನರಳದಂತೆ ಅವರನ್ನು ರಕ್ಷಿಸುತ್ತಾನೆ. ತನ್ನ ಆಪ್ಯಾಯಮಾನವಾದ ಸುಂದರ ಮುಖಾರವಿಂದದ ದರ್ಶನವನ್ನು ನೀಡುತ್ತಾ ಪ್ರಜೆಗಳ ಮನಸ್ಸನ್ನು ಆಹ್ಲಾದಗೊಳಿಸುತ್ತಾನೆ.
“ಪೃಥು ಮಹಾರಾಜನ ಕಾರ್ಯಗತಿಯು ನಿಗೂಢವಾಗಿರುತ್ತದೆ. ಗಂಭೀರವಾಗಿ ಆಲೋಚಿಸಿ ಸಕಲ ಕಾರ್ಯಗಳೂ ಯಶಸ್ವಿಯಾಗುವಂತೆ ಮಾಡುತ್ತಾನೆ. ಇವನ ಕೋಶಾಗಾರವು ಗುಪ್ತವಾಗಿರುತ್ತದೆ. ವರುಣನನ್ನು ಎಲ್ಲ ಕಡೆಗಳಿಂದಲೂ ನೀರು ಆವರಿಸಿರುವಂತೆ, ಪೃಥು ರಾಜನನ್ನು ಸದ್ಗುಣಗಳು ಆವರಿಸಿರುತ್ತವೆ. ಅಗ್ನಿಯಂತಿರುವ ಇವನು ವೈರಿಗಳಿಗೆ ದುರತಿಕ್ರಮನಾಗಿರುತ್ತಾನೆ. ದುರ್ಜಯನಾದ ಇವನ ಸನಿಹದಲ್ಲೇ ಶತ್ರುಗಳಿದ್ದರೂ ಇವನ ಬಳಿಗೆ ಹೋಗಲಾಗುವುದಿಲ್ಲ. ತನ್ನ ಗೂಢಚಾರರ ಮೂಲಕ, ಇವನು ಜನರ ಅಂತರಂಗ, ಬಹಿರಂಗಗಳನ್ನು ತಿಳಿದುಕೊಳ್ಳುತ್ತಿರುತ್ತಾನೆ. ವಾಯುವು ಎಲ್ಲ ದೇಹಗಳಲ್ಲಿದ್ದರೂ ಉದಾಸೀನವಾಗಿರುವಂತೆ, ಇವನು ಸ್ತುತಿನಿಂದೆಗಳೆರಡನ್ನೂ ಸಮನಾಗಿ ಕಾಣುತ್ತಾ ಉದಾಸೀನನಾಗಿರುತ್ತಾನೆ. ಸೂರ್ಯದೇವನ ಕಿರಣಗಳು ಮಾನಸ ಸರೋವರದಂಥ ಶೀತಲ ಪ್ರದೇಶಗಳವರೆಗೂ ಹರಡುವಂತೆ, ಈ ಪೃಥುರಾಜನ ಅಪ್ರತಿಹತವಾದ ಪ್ರಭಾವವು ಭೂಮಂಡಲದಲ್ಲೆಲ್ಲಾ ವ್ಯಾಪಿಸುತ್ತದೆ. ಇವನು ತನ್ನ ಉತ್ತಮ ಕಾರ್ಯಗಳಿಂದ ಲೋಕದ ಜನರೆಲ್ಲರನ್ನೂ ರಂಜಿಸುತ್ತಾನೆ. ಆದ್ದರಿಂದ ಇವನನ್ನು ಎಲ್ಲರೂ ರಾಜ ಎಂದು ಕರೆಯುತ್ತಾರೆ. ಇವನು ದೃಢ ಮನಸ್ಕನೂ ಸತ್ಯಸಂಧನೂ ಬ್ರಾಹ್ಮಣರ ಹಾಗೂ ವೃದ್ಧರ ಸೇವೆ ಮಾಡುವವನೂ ಆಗಿರುತ್ತಾನೆ. ಶರಣಾಗತರಕ್ಷಕನೂ ಸರ್ವರನ್ನೂ ಆದರಿಸುವವನೂ ದೀನವತ್ಸಲನೂ ಆಗಿರುತ್ತಾನೆ. ಇವನು ಪರಸ್ತ್ರೀಯರನ್ನು ತನ್ನ ತಾಯಿಯಂತೆ ಕಾಣುತ್ತಾನೆ. ತನ್ನ ಪತ್ನಿಯನ್ನು ತನ್ನ ದೇಹದ ಅರ್ಧಭಾಗವೆಂದೇ ಭಾವಿಸುತ್ತಾನೆ. ಪ್ರಜೆಗಳಿಗೆ ಪ್ರೀತಿಯ ತಂದೆಯಂತಿರುವ ಇವನು ಬ್ರಾಹ್ಮಣರ ಹಾಗೂ ಭಕ್ತರ ವಿಷಯದಲ್ಲಿ ಕಿಂಕರನಂತಿರುತ್ತಾನೆ. ಸಕಲ ಜೀವಿಗಳನ್ನೂ ಇವನು ತನ್ನಂತೆಯೇ ಕಾಣುತ್ತಾನೆ. ಸಜ್ಜನರ ಸಂತೋಷವನ್ನು ಹೆಚ್ಚಿಸುತ್ತಾನೆ. ಐಹಿಕ ಕಲ್ಮಷಗಳಿಂದ ದೂರವಾದವರ ಸಂಗ ಮಾಡುತ್ತಾನೆ. ದುಷ್ಟರ ವಿಷಯದಲ್ಲಾದರೋ ದಂಡಪಾಣಿಯಾಗುತ್ತಾನೆ.
“ಇವನು ಸಾಕ್ಷಾತ್ ಭಗವಂತನ ಕಲಾವತಾರವೇ ಆಗಿದ್ದು ಮೂರು ಲೋಕಗಳ ಒಡೆಯನೇ ಆಗಿರುತ್ತಾನೆ. ವಿಕಾರರಹಿತನಾದ ಇವನು, ಅವಿದ್ಯೆಯಿಂದ ಉಂಟಾಗಿರುವ ವಿಶ್ವದ ವೈವಿಧ್ಯವೆಲ್ಲವೂ ನಿರರ್ಥಕವೆಂದು ಕಂಡುಕೊಳ್ಳುತ್ತಾನೆ.
“ಅದ್ವಿತೀಯ ವೀರನಾದ ಈ ಪೃಥುವು ಉದಯಪರ್ವತದಿಂದ ದಕ್ಷಿಣದ ತುದಿಯವರೆಗೂ ವ್ಯಾಪ್ತವಾಗಿರುವ ಸಮಸ್ತ ಭೂಮಂಡಲವನ್ನೂ ರಕ್ಷಿಸುತ್ತಾನೆ, ಹಾಗೂ ವಿಜಯಶಾಲಿಯಾದ ತನ್ನ ರಥವನ್ನೇರಿ ಅಜೇಯ ಧನುಸ್ಸನ್ನು ಹಿಡಿದು ಸೂರ್ಯನಂತೆ ವಿಶ್ವಪರ್ಯಟನೆ ಮಾಡುತ್ತಾನೆ. ಆಗ ಇತರ ರಾಜರೂ ದೇವತೆಗಳೂ ಇವನಿಗೆ ಕಪ್ಪಕಾಣಿಕೆಗಳನ್ನೊಪ್ಪಿಸುತ್ತಾರೆ. ಅವರ ಪತ್ನಿಯರು ಶಂಖಚಕ್ರಧಾರಿಯಾದ ಇವನನ್ನು ಪರಮ ಪುರುಷನನ್ನು ಕೀರ್ತಿಸುವಂತೆ ಕೀರ್ತಿಸುತ್ತಾರೆ.
“ಪ್ರಜಾಪತಿಗಳಂತೆ ಅಸಾಮಾನ್ಯನಾದ ಈ ರಾಜನು ಒಮ್ಮೆ ಗೋರೂಪಧಾರಿಣಿಯಾದ ಭೂದೇವಿಯಿಂದ ಹಾಲು ಕರೆಯುವನು. ಇಂದ್ರನು ತನ್ನ ವಜ್ರಾಯುಧದಿಂದ ಗಿರಿಶಿಖರಗಳನ್ನು ಪುಡಿಮಾಡಿದಂತೆ ಇವನು ತನ್ನ ಮಹಾಧನುಸ್ಸಿನ ತುದಿಯಿಂದಲೇ ಪರ್ವತಶಿಖರಗಳನ್ನು ತುಂಡರಿಸಿ ಭೂಮಿಯನ್ನು ಸಮತಟ್ಟುಗೊಳಿಸುವನು. ಮೃಗರಾಜನಾದ ಸಿಂಹವು ತನ್ನ ಬಾಲವನ್ನೆತ್ತಿ ಸಂಚರಿಸುವಾಗ ಇತರ ಮೃಗಗಳು ಹೆದರಿ ನಡುಗುವಂತೆ, ಅಮಿತೌಜಸ್ವಿಯಾದ ಪೃಥು ಮಹಾರಾಜನು ಧನುರ್ಧಾರಿಯಾಗಿ ಭೂಮಿಯಲ್ಲಿ ಸಂಚರಿಸುವಾಗ ಕಳ್ಳಕಾಕರು ಹೆದರಿ ಅಲ್ಲಲ್ಲೇ ಅಡಗುತ್ತಾರೆ!
“ಈ ಮಹಾರಾಜನು ನೂರು ಅಶ್ವಮೇಧಯಜ್ಞಗಳನ್ನು ಸರಸ್ವತೀ ನದಿಯ ಉಗಮಸ್ಥಳದಲ್ಲಿ ಆಚರಿಸುತ್ತಾನೆ. ಕಡೆಯ ಯಾಗವು ನಡೆಯುತ್ತಿರುವಾಗ, ದೇವೇಂದ್ರನು ಯಜ್ಞಾಶ್ವವನ್ನು ಅಪಹರಿಸುತ್ತಾನೆ.
“ಒಂದು ದಿನ, ತನ್ನ ಅರಮನೆಯ ಉಪವನದಲ್ಲಿ ಇವನು, ನಾಲ್ವರು ಕುಮಾರರಲ್ಲೊಬ್ಬನಾದ ಸನತ್ಕುಮಾರನನ್ನು ಸಂಧಿಸುತ್ತಾನೆ. ಆ ನಿಷ್ಕಲ್ಮಷ ಮುನಿಯನ್ನು ಭಕ್ತಿಯಿಂದ ಸೇವಿಸಿ ಅವನಿಂದ ಪರಬ್ರಹ್ಮನನ್ನು ಕುರಿತ ದಿವ್ಯಜ್ಞಾನೋಪದೇಶವನ್ನು ಪಡೆಯುತ್ತಾನೆ.
“ಹೀಗೆ, ತನ್ನ ಅಪ್ರತಿಹತವಾದ ತೇಜೋಬಲದಿಂದ ದಶದಿಕ್ಕುಗಳನ್ನೂ ಗೆದ್ದು ಈ ಪೃಥುವು ಭೂಮಿಗೆ ಒಡೆಯನಾಗುತ್ತಾನೆ. ಜನರ ಸಂಕಟಗಳನ್ನು ಪರಿಹರಿಸುತ್ತಾನೆ. ಸುರಾಸುರರೆಲ್ಲರೂ ಇವನ ಕೀರ್ತಿಯ ಗುಣಗಾನ ಮಾಡುತ್ತಾರೆ. ಎಲ್ಲೆಲ್ಲೂ ಇವನ ಪ್ರಶಂಸೆಯ ಮಾತುಗಳು ಕೇಳಿಬರುತ್ತಿರುತ್ತವೆ.
ವಂದಿಮಾಗಧರು ಪೃಥು ಮಹಾರಾಜನನ್ನು ಹೀಗೆ ಹಾಡಿ ಸ್ತುತಿಸಲು, ಪೃಥುವು ಆನಂದಗೊಂಡು ಅವರನ್ನು ಅಭಿನಂದಿಸುತ್ತಾ ಉಡುಗೊರೆಗಳನ್ನಿತ್ತನು. ಅನಂತರ ಅವನು ಬ್ರಾಹ್ಮಣ ಪ್ರಮುಖರನ್ನೂ ಇತರ ವರ್ಣದ ಜನರನ್ನೂ ಪೌರಜಾನಪದರನ್ನೂ ಮಂತ್ರಿ-ಸಚಿವರನ್ನೂ ಅಭಿನಂದಿಸಿದನು. ಎಲ್ಲರಿಗೂ ಬಹಳ ಸಂತೋಷವಾಯಿತು.
ಪೃಥುವು ವಿಪ್ರರ್ಷಿಗಳಿಂದ ಪಟ್ಟಾಭಿಷಿಕ್ತನಾಗಲು, ಒಂದು ದಿನ, ಆಹಾರದ ಅಭಾವದಿಂದ ಕಂಗೆಟ್ಟ ಜನರು ಅವನ ಬಳಿಗೆ ಬಂದರು. “ಮಹಾರಾಜ!” ಅವರು ಭಿನ್ನವಿಸಿಕೊಂಡರು.
“ಮರವು ತನ್ನ ಪೊಟರೆಯೊಳಗಿನ ಅಗ್ನಿಯಿಂದ ದಹಿಸಲ್ಪಡುವಂತೆ ನಾವು ಹಸಿವಿನಿಂದ ದಹಿಸಲ್ಪಡುತ್ತಿದ್ದೇವೆ! ಪ್ರಭು! ಜನರಿಗೆ ವೃತ್ತಿಗಳನ್ನು ಕಲ್ಪಿಸಿಕೊಡುವ ಪ್ರಜಾಪಾಲಕನು ನೀನು. ಕ್ಷುದ್ಬಾಧೆಯಿಂದ ಬಳಲುತ್ತಿರುವ ನಮಗೆ ಅನ್ನವನ್ನು ನೀಡುವ ನರರೂಪದ ದೇವರು ನೀನು. ಆದ್ದರಿಂದ ಶರಣಾಗತರಕ್ಷಕನಾದ ನಿನ್ನಲ್ಲಿ ಶರಣು ಬಂದಿದ್ದೇವೆ. ನಮ್ಮನ್ನು ಈ ಭಯಂಕರ ಹಸಿವಿನಿಂದ ರಕ್ಷಿಸು ಪ್ರಭು! ಇಲ್ಲವಾದರೆ ನಾವು ಆಹಾರವಿಲ್ಲದೆ ತೇಜೋಹೀನರಾಗಿ ನಾಶವಾಗಿ ಹೋಗುತ್ತೇವೆ.”
ಆಹಾರ ಧಾನ್ಯಗಳ ಕೊರತೆಯಿಂದ ಕಾರ್ಪಣ್ಯಕರ ಸ್ಥಿತಿಗೊಳಗಾಗಿದ್ದ ಪ್ರಜೆಗಳ ಸಂಕಟವನ್ನು ಕಂಡ ಪೃಥುವು ದುಃಖಗೊಂಡನು. ಇಂಥ ಚಿಂತಾಜನಕಸ್ಥಿತಿಗೆ ಕಾರಣವೇನಿರಬಹುದೆಂದು ದೀರ್ಘವಾಗಿ ಆಲೋಚಿಸಿದನು. ಧಾನ್ಯಗಳನ್ನು ಉತ್ಪತ್ತಿಮಾಡುವುದು ಭೂಮಿಯಲ್ಲವೇ? ಆ ಭೂಮಿಯ ಮೇಲೆಯೇ ಅವನು ಕೋಪಗೊಂಡನು. ಕೂಡಲೇ ತನ್ನ ಬಿಲ್ಲನ್ನು ಹಿಡಿದು ಶಿವನು ತ್ರಿಪುರಗಳಿಗೆ ಬಾಣವನ್ನು ಗುರಿಯಿಟ್ಟಂತೆ ಭೂಮಿಯ ಕಡೆಗೆ ಗುರಿಯಿಟ್ಟು ಬಾಣ ಹೂಡಿದನು. ಪೃಥುವು ತನ್ನನ್ನು ಕೊಲ್ಲಲು ಧನುರ್ಬಾಣಗಳನ್ನು ಧರಿಸಿದುದನ್ನು ಕಂಡು ಭೂದೇವಿಯು ಭಯಭೀತಳಾದಳು. ಅವನಿಂದ ತಪ್ಪಿಸಿಕೊಳ್ಳಲೆಂದು ಗೋವಿನ ರೂಪಧರಿಸಿ ಬೇಡನನ್ನು ಕಂಡು ಹೆದರಿ ಓಡುವ ಜಿಂಕೆಯಂತೆ ಓಡಿದಳು. ಇದರಿಂದ ಪೃಥುವು ಮತ್ತಷ್ಟು ಕುಪಿತನಾಗಿ ಕಣ್ಣುಗಳನ್ನು ಕೆಂಪಗೆ ಮಾಡಿಕೊಂಡು ಅವಳು ಎಲ್ಲೆಲ್ಲಿ ಓಡಿದರೂ ಬೆನ್ನಟ್ಟಿಹೋದನು. ಭೂದೇವಿಯು ಕಂಗೆಟ್ಟು ದಿಕ್ಕುದಿಕ್ಕುಗಳಲ್ಲಿ ಓಡಿದಳು. ಆದರೆ ಮನುಷ್ಯಮಾತ್ರನು ಮೃತ್ಯುವಿನ ಕೈಗಳಿಂದ ತಪ್ಪಿಸಿಕೊಳ್ಳಲಾಗದಂತೆ ಅವಳು ಪೃಥುವಿನಿಂದ ತಪ್ಪಿಸಿಕೊಳ್ಳಲಾರಳಾದಳು. ಆಗವಳು ಹತಾಶೆಯಿಂದ ಹಿಂದೆ ನೋಡಿ ಪೃಥುವನ್ನು ದೈನ್ಯದಿಂದ ಪ್ರಾರ್ಥಿಸಿದಳು :
“ಎಲೈ ಧರ್ಮಜ್ಞನೇ, ಆಪನ್ನ ರಕ್ಷಕನೇ, ನನ್ನನ್ನು ರಕ್ಷಿಸು! ಸಕಲ ಜೀವಿಗಳಿಗೂ ರಕ್ಷಕನೂ ಪಾಲಕನೂ ಆಗಿರುವ ರಾಜನಲ್ಲವೇ ನೀನು? ಎಲ್ಲರೂ ನಿನ್ನನ್ನು ಧರ್ಮವಿದನೆನ್ನುತ್ತಾರೆ. ಧರ್ಮವನ್ನರಿತಿರುವ ನೀನು ಯಾವ ತಪ್ಪನ್ನೂ ಮಾಡದಿರುವ ದೀನಳಾದ ಹೆಣ್ಣೊಬ್ಬಳನ್ನು ಕೊಲ್ಲುವುದು ಸರಿಯೇ? ತಿಳಿದವರು ತಪ್ಪು ಮಾಡಿರುವ ಹೆಣ್ಣಿನ ಮೇಲೆಯೂ ಕೈಯೆತ್ತರು. ಹೀಗಿರುವಾಗ ಕರುಣಾಶಾಲಿಯೂ, ದೀನರನ್ನು ಪೊರೆಯುವ ರಾಜನೂ ಆದ ನೀನು ಹೀಗೆ ಮಾಡಬಹುದೆ? ರಾಜ, ಇಡೀ ವಿಶ್ವವೇ ಶಕ್ತಿಯುತವಾದ ದೋಣಿಯಂತಿರುವ ನನ್ನನ್ನು ಆಧರಿಸಿ ನಿಂತಿದೆ. ನೀನು ನನ್ನನ್ನೇ ಕೊಂದು ತುಂಡರಿಸಿಬಿಟ್ಟರೆ ನೀನೂ, ನಿನ್ನ ಪ್ರಜೆಗಳೂ ಹೇಗೆ ಉಳಿಯುವಿರಿ? ನೀವೆಲ್ಲರೂ ಜಲಸಮಾಧಿಯಾಗಿಬಿಡುವುದಿಲ್ಲವೆ?”
“ಎಲೈ ಭೂದೇವಿ! ನನ್ನ ಶಾಸನಗಳಿಗೆ ವಿಮುಖಳಾಗಿರುವ ನಿನ್ನನ್ನು ಈಗಲೇ ವಧಿಸಿಬಿಡುತ್ತೇನೆ! ಯಜ್ಞಗಳಲ್ಲಿ ನಿನ್ನ ಪಾಲಿನ ಹವಿರ್ಭಾಗವನ್ನು ನೀನು ಸ್ವೀಕರಿಸಿದ್ದರೂ ಸಾಕಷ್ಟು ಆಹಾರಧಾನ್ಯಗಳನ್ನು ಉತ್ಪತ್ತಿ ಮಾಡುತ್ತಿಲ್ಲ. ಗೋವಿನ ರೂಪನ್ನು ಧರಿಸಿದ ಮಾತ್ರಕ್ಕೆ ದುಷ್ಟಳಾದ ನೀನು ಅವಧ್ಯಳೆಂದು ಭಾವಿಸಬೇಡ. ಅನುದಿನವೂ ಹಸಿರು ಹುಲ್ಲನ್ನು ಸೇವಿಸುತ್ತಿದ್ದರೂ ಯೋಗ್ಯ ಪ್ರಮಾಣದ ಹಾಲು ನೀಡದ ನೀನು ಉದ್ದೇಶಪೂರ್ವಕವಾಗಿಯೇ ತಪ್ಪು ಮಾಡುತ್ತಿರುವೆ! ಮಂದಮತಿಯಾದ ನೀನು, ಈ ಮೊದಲೇ ಧಾನ್ಯಗಳೂ ಔಷಧಿಬೀಜಗಳೂ ಬ್ರಹ್ಮದೇವನಿಂದ ಸೃಷ್ಟಿಸಲ್ಪಟ್ಟಿದ್ದರೂ ಅವುಗಳನ್ನು ನಿನ್ನಲ್ಲೇ ಹುದುಗಿಸಿಕೊಂಡಿರುವೆ. ನನ್ನನ್ನೂ ಧಿಕ್ಕರಿಸಿ ನೀನು ಅವುಗಳನ್ನು ನೀಡುತ್ತಿಲ್ಲ. ಈಗ ನಿನ್ನನ್ನು ತುಂಡರಿಸಿ, ಕ್ಷುಧಾತುರರಾಗಿ ನರಳುತ್ತಿರುವ ನನ್ನ ಪ್ರಜೆಗಳಿಗೆ ನಿನ್ನ ಮಾಂಸವನ್ನು ಉಣಬಡಿಸಿ ಅವರ ಹಸಿವನ್ನು ಹೋಗಲಾಡಿಸುತ್ತೇನೆ. ದುಷ್ಟನಾದ ಯಾವ ವ್ಯಕ್ತಿಯನ್ನಾದರೂ, ಅವನು ಗಂಡಾಗಲೀ, ಹೆಣ್ಣಾಗಲೀ, ನಪುಂಸಕನಾಗಲೀ ಅವನನ್ನು ರಾಜನಾದವನು ಕೊಲ್ಲಬಹುದು. ಅಂಥ ವಧೆ ವಧೆಯೆನ್ನಿಸುವುದಿಲ್ಲ. ನೀನಾದರೋ ದುರಹಂಕಾರದಿಂದ ಕೂಡಿ ಮಾಯಾಗೋವಿನ ರೂಪ ತಾಳಿರುವೆ. ನಿನ್ನನ್ನು ತುಂಡು ತುಂಡಾಗಿ ಕತ್ತರಿಸಿ ಹಾಕುತ್ತೇನೆ. ಅನಂತರ, ನನ್ನ ಯೋಗಶಕ್ತಿಯಿಂದಲೇ ಎಲ್ಲ ಪ್ರಜೆಗಳನ್ನೂ ಧರಿಸುತ್ತೇನೆ,” ಪೃಥುವು ಗುಡುಗಿದನು.
ಸಾಕ್ಷಾತ್ ಯಮರಾಜನಂತೆ ಕಾಣುತ್ತಾ, ಕೋಪವೇ ಮೂರ್ತಿವೆತ್ತಂತಿದ್ದ ಪೃಥುವನ್ನು ಕಂಡು ಭೂದೇವಿಯು ಗಡಗಡನೆ ನಡುಗಿ ಹೋದಳು. ಕೂಡಲೇ ಅವನಿಗೆ ಶರಣಾಗಿ ತನ್ನ ಕೈಗಳನ್ನು ಜೋಡಿಸಿಕೊಂಡು ಹೇಳಿದಳು, “ದೇವೋತ್ತಮ ಪರಮ ಪುರುಷನಿಗೆ ನಮೋ ನಮಃ! ಪ್ರಭು, ನೀನು ದಿವ್ಯ ಪುರುಷನಾದರೂ, ನಿನ್ನ ಬಹಿರಂಗ ಶಕ್ತಿಯಾದ ಮಾಯೆಯಿಂದ ವಿವಿಧ ರೂಪಗಳಾಗಿ ವಿಸ್ತರಿಸಿಕೊಳ್ಳುವೆ. ಆದರೆ ಈ ನಿನ್ನ ವೈವಿಧ್ಯಮಯ ಸೃಷ್ಟಿಯಲ್ಲಿ ತ್ರಿಗುಣಗಳ ಪ್ರಕ್ರಿಯೆಯಾಗುತ್ತಿದ್ದರೂ ನೀನು ನಿನ್ನ ಸ್ವರೂಪದಲ್ಲೇ ನೆಲೆಗೊಂಡಿರುತ್ತೀಯೆ. ಸಕಲ ಜೀವಿಗಳನ್ನೂ, ಧರಿಸಲೆಂದೇ ನನ್ನನ್ನು ನೀನು ಸೃಷ್ಟಿಸಿರುವೆ. ಈಗ ನೀನೇ ನನ್ನನ್ನು ಕೊಲ್ಲಲುದ್ಯುಕ್ತನಾದರೆ, ನಾನು ರಕ್ಷಣೆಗಾಗಿ ಯಾರ ಬಳಿಗೆ ಹೋಗಲಿ? ಪ್ರಭು, ಆದಿಯಲ್ಲಿ ನೀನು ನಿನ್ನ ಅಚಿಂತ್ಯ ಮಾಯಾಶಕ್ತಿಯಿಂದ ಸಕಲ ಚರಾಚರಗಳನ್ನೂ ಸೃಷ್ಟಿಸಿ ಎಲ್ಲಕ್ಕೂ ಆಶ್ರಯನೂ ಆದೆ. ನಾನೂ ನಿನ್ನಿಂದಲೇ ರಕ್ಷಿತಳು. ಆದರೆ ಈಗೇಕೆ ಧರ್ಮಕೋವಿದನಾದ ನೀನು ನನ್ನನ್ನು ವಧಿಸಲುದ್ಯುಕ್ತನಾಗಿರುವೆ? ನೀನು ಒಬ್ಬನೇ ಆದರೂ ನಿನ್ನ ಶಕ್ತಿಯಿಂದ ಅನೇಕ ರೂಪಗಳಾಗಿ ವಿಸ್ತರಿಸಿಕೊಳ್ಳುವೆ. ಬ್ರಹ್ಮದೇವನ ಮೂಲಕ ನೀನೇ ಈ ವಿಶ್ವವನ್ನು ಸೃಜಿಸುವೆ. ಆದರೆ ನಿನ್ನ ದಿವ್ಯ ತತ್ತ್ವವನ್ನು ಅಜ್ಞರು ಅರಿಯಲಾರರು. ನಿನ್ನ ಶಕ್ತಿಗಳಿಂದಲೇ ಸೃಷ್ಟಿ, ಸ್ಥಿತಿ, ಲಯಗಳು ನಡೆಯುತ್ತವೆ. ಭೌತಿಕ ದ್ರವ್ಯಗಳಿಗೂ, ಜ್ಞಾನೇಂದ್ರಿಯ ಕರ್ಮೇಂದ್ರಿಯಗಳಿಗೂ, ಅವುಗಳ ನಿಯಂತ್ರಕರಿಗೂ ನಿನ್ನ ಶಕ್ತಿಯ ಮೂಲಕ ನೀನೇ ಕಾರಣ ಪುರುಷನಾಗಿದ್ದೀಯೆ. ಅಂತಹ ಕಾರಣ ಪುರುಷನಾದ ನೀನೇ ಹಿಂದೊಮ್ಮೆ ಆದಿವರಾಹ ರೂಪವನ್ನು ತಾಳಿ ರಸಾತಳದಲ್ಲಿ ಮುಳುಗಿಹೋಗುತ್ತಿದ್ದ ನನ್ನನ್ನು ಎತ್ತಿ ಉದ್ಧರಿಸಿದೆ. ಹಾಗಾಗಿ ನೀನು ಧರಾಧರನೆಂದು ಹೆಸರುವಾಸಿಯಾದೆ. ಆದರೆ ಅಂತಹ ವೀರ ರಕ್ಷಕನಾದ ನೀನೇ ಈಗ ಉಗ್ರಶರಗಳನ್ನು ಧನುಸ್ಸಿಗೆ ಅನುಸಂಧಾನ ಮಾಡಿ ನನ್ನನ್ನು ಕೊಲ್ಲಲುದ್ಯುಕ್ತನಾಗಿರುವೆ.”
“ಪ್ರಭು! ನಿನ್ನ ಶಕ್ತಿಯ ಸೃಷ್ಟಿಯಾದ ನನ್ನನ್ನೂ ಸೇರಿಸಿ ಅಜ್ಞರಾದವರಿಗೆ ನಿನ್ನ ಲೀಲೆಗಳನ್ನು ಅರ್ಥಮಾಡಿಕೊಳ್ಳಲಾಗುವುದಿಲ್ಲ. ನಾವು ಮಾಯಾವಿಮೋಹಿತರು ಪ್ರಭು! ಅಂಥ ದಿವ್ಯ ಲೀಲೆಗಳನ್ನು ಮಾಡುವ ನಿನ್ನ ವಿವಿಧ ಅವತಾರ ಮೂರ್ತಿಗಳಿಗೆ ನನ್ನ ಗೌರವಪೂರ್ವಕ ನಮನಗಳು.”
ಭೂದೇವಿಯು ಹೀಗೆ ಪ್ರಾರ್ಥಿಸಿದರೂ ಪೃಥುರಾಜನು ಶಾಂತನಾಗಲಿಲ್ಲ. ಕೋಪದಿಂದ ಅವನ ಅಧರಗಳು ಅದುರುತ್ತಿದ್ದವು. ಆಗ ಭೂದೇವಿಯು ಹೆದರಿದ್ದರೂ ಪುನಃ ಪ್ರಾರ್ಥಿಸಿದಳು, “ಮಹಾರಾಜ! ದಯವಿಟ್ಟು ಶಾಂತನಾಗು. ನಿನ್ನ ಕೋಪವನ್ನು ನಿಗ್ರಹಿಸು. ನಾನು ಹೇಳುವುದನ್ನು ಸ್ವಲ್ಪ ಕೇಳು. ದುಂಬಿಯು ಎಲ್ಲ ಹೂಗಳಿಂದಲೂ ಜೇನನ್ನು ಸಂಗ್ರಹಿಸುವಂತೆ ಬುದ್ಧಿವಂತರು ಎಲ್ಲರಿಂದಲೂ ಜ್ಞಾನವನ್ನು ಗ್ರಹಿಸುತ್ತಾರೆ. ಶ್ರೇಯೋಭಿಲಾಷಿಗಳಾದ ಮಹಾನ್ ಋಷಿಗಳು, ಮನುಷ್ಯನು ಈ ಜನ್ಮದಲ್ಲೂ ಮುಂದಿನ ಜನ್ಮದಲ್ಲೂ ಒಳ್ಳೆಯದನ್ನು ಪಡೆಯಲು ಮಾಡಬೇಕಾದ ಕಾರ್ಯಗಳನ್ನು ವಿಧಿಸಿದ್ದಾರೆ. ಯಾರಾದರೂ ಅಂಥ ವಿಧಿನಿಯಮಗಳನ್ನು ಸರಿಯಾಗಿ ಪಾಲಿಸಿದರೆ ಬಹುಬೇಗನೆ ಸುಖವನ್ನು ಹೊಂದುತ್ತಾನೆ. ಆದರೆ ಮೂರ್ಖನಾದವನು ಅಂಥ ವಿಧಿಗಳನ್ನುಲ್ಲಂಘಿಸಿ ತನ್ನದೇ ಆದ ಕುಮಾರ್ಗಗಳಿಂದ ಅರ್ಥಪ್ರಾಪ್ತಿಗೆ ಪ್ರಯತ್ನಿಸಿದರೆ ಅವನ ಕಾರ್ಯಗಳು ವಿಫಲವಾಗುವವು.
“ಮಹಾರಾಜ! ಹಿಂದೆಯೇ ಬ್ರಹ್ಮದೇವನು ಎಲ್ಲ ಔಷಧಿಗಳನ್ನೂ ಸೃಷ್ಟಿಸಿದನೆಂದು ಹೇಳಿದೆಯಲ್ಲವೇ? ನಾನು ನೋಡುತ್ತಿರುವಂತೆಯೇ ಅವೆಲ್ಲವನ್ನೂ ದುಷ್ಟರು ಬಳಸುತ್ತಿದ್ದಾರೆ. ನಿನ್ನಂತಹ ಮಹಾರಾಜರಿಂದ ನಾನು ಪಾಲಿಸಲ್ಪಡದೆ, ಚೋರರ ಭಯಕ್ಕೊಳಗಾದೆ. ಹಾಗಾಗಿ ಯಜ್ಞಗಳಿಗಾಗಿ ಬಳಸಬೇಕಿದ್ದ ಈ ಎಲ್ಲ ಧಾನ್ಯಗಳನ್ನೂ, ಔಷಧಿಗಳನ್ನೂ ನನ್ನಲ್ಲಿಯೇ ಹುದುಗಿಸಿಕೊಂಡೆ. ಹೀಗೆ ದೀರ್ಘಕಾಲದಿಂದ ಹುದುಗಿಸಲ್ಪಟ್ಟು ಅವು ಕ್ಷೀಣಿಸುತ್ತಾ ಸತ್ವರಹಿತವಾಗಿವೆ. ನೀನೂ ಪೂರ್ವಾಚಾರ್ಯರು ವಿಧಿಸಿದ ಸೂಕ್ತ ವಿಧಾನಗಳಿಂದ ಅವುಗಳನ್ನು ಹೊರತೆಗೆ.
“ಪರಮ ವೀರ, ನನಗೊಂದು ಕರುವನ್ನು ಕಲ್ಪಿಸು. ಅಂತೆಯೇ ಹಾಲು ಕರೆಯಲು ಒಂದು ಪಾತ್ರೆಯನ್ನೂ, ಹಾಲು ಕರೆಯುವ ವ್ಯಕ್ತಿಯನ್ನೂ ವ್ಯವಸ್ಥೆ ಮಾಡು. ಕರುವಿನ ಮೇಲಿನ ವಾತ್ಸಲ್ಯದಿಂದ ನಾನು ಸಹಜವಾಗಿಯೇ ಹಾಲು ಕೊಡುವೆ. ಆಗ ಎಲ್ಲರೂ ತಮಗಿಷ್ಟವಾದ ಕಾಮನೆಗಳನ್ನು ಹಾಲಿನ ರೂಪದಲ್ಲಿ ಕರೆದುಕೊಳ್ಳಬಹುದು.
“ರಾಜ, ಇನ್ನೊಂದು ವಿನಂತಿ, ನನ್ನ ಮೇಲ್ಮೈಯನ್ನು ನೀನು ಸಮತಟ್ಟುಗೊಳಿಸಬೇಕು. ಇದರಿಂದ, ಮಳೆಗಾಲವಿಲ್ಲದಿರುವಾಗಲೂ ನೆಲದಲ್ಲಿ ನೀರು ನಿಂತು ತೇವಾಂಶವಿರುತ್ತದೆ. ಆಗ ಧಾನ್ಯೋತ್ಪಾದನೆಗೆ ಬಹಳ ಅನುಕೂಲವಾಗುತ್ತದೆ.”
ಭೂದೇವಿಯು ಹೀಗೆ ಹಿತಕರವೂ, ಪ್ರಿಯಕರವೂ ಆದ ಮಾತುಗಳನ್ನಾಡಲು ಪೃಥು ಮಹಾರಾಜನು ಕೋಪವನ್ನು ತ್ಯಜಿಸಿ ಅವಳ ಮಾತುಗಳಿಗೊಪ್ಪಿದನು. ಅವನು ಸ್ವಾಯಂಭುವ ಮನುವನ್ನೇ ಕರುವನ್ನಾಗಿ ಮಾಡಿಕೊಂಡು ಗೋರೂಪಧಾರಿಣಿಯಾದ ಭೂದೇವಿಯಿಂದ ಸಕಲ ಔಷಧಿಗಳನ್ನೂ ಧಾನ್ಯಗಳನ್ನೂ ಕರೆದನು. ಅವನ್ನು ತನ್ನ ಬೊಗಸೆಯಲ್ಲೇ ಹಿಡಿದನು. ಆಗ ಬುದ್ಧಿವಂತರಾದ ಇತರರನೇಕರು ಪೃಥುವಿನ ಮಾರ್ಗವನ್ನನುಸರಿಸಿ ತಮಗೆ ಬೇಕಾದ ಕಾಮನೆಗಳನ್ನು ಆ ಧೇನುವಿನಿಂದ ಕರೆದುಕೊಂಡರು.
ಸಮಸ್ತ ಋಷಿಮುನಿಗಳೂ ಬೃಹಸ್ಪತಿಯನ್ನು ಕರುವನ್ನಾಗಿ ಮಾಡಿಕೊಂಡು ಇಂದ್ರಿಯಗಳನ್ನೇ ಪಾತ್ರೆಯನ್ನಾಗಿಸಿ ಪವಿತ್ರ ವೈದಿಕ ಜ್ಞಾನವನ್ನು ಕರೆದರು. ಸುರಗಣಗಳು ದೇವೇಂದ್ರನನ್ನು ಕರುವನ್ನಾಗಿ ಮಾಡಿಕೊಂಡು ಹಿರಣ್ಮಯವಾದ ಪಾತ್ರೆಯಲ್ಲಿ ಸೋಮರಸವನ್ನು ಕರೆದುಕೊಂಡರು. ಅದರ ಸೇವನೆಯಿಂದ ಅವರು ಬಲವೀರ್ಯ ತೇಜಸ್ಸುಗಳನ್ನು ಪಡೆದರು. ದಿತಿಯ ಮಕ್ಕಳಾದ ದೈತ್ಯರೂ, ದಾನವರೂ ಅಸುರವರೇಣ್ಯನಾದ ಪ್ರಹ್ಲಾದನನ್ನು ಕರುವನ್ನಾಗಿ ಕಲ್ಪಿಸಿಕೊಂಡು, ಕಬ್ಬಿಣದ ಪಾತ್ರೆಯಲ್ಲಿ ಮದ್ಯವನ್ನು ಕರೆದರು. ಗಂಧರ್ವಾಪ್ಸರೆಯರು ವಿಶ್ವಾವಸುವನ್ನು ಕರುವನ್ನಾಗಿ ಮಾಡಿಕೊಂಡು ಕಮಲಪುಷ್ಪಪಾತ್ರೆಯಲ್ಲಿ ಸಂಗೀತವೇ ಮೊದಲಾದ ಗಂಧರ್ವಕಲೆಗಳನ್ನು ಕರೆದುಕೊಂಡರು. ಪಿತೃದೇವತೆಗಳು ಅರ್ಯಮನನ್ನು ಕರುವನ್ನಾಗಿ ಮಾಡಿಕೊಂಡು ಹಸಿಮಣ್ಣಿನ ಮಡಕೆಯಲ್ಲಿ ಕವ್ಯವೆಂಬ ಅನ್ನವನ್ನು ಕರೆದುಕೊಂಡರು. ಸಿದ್ಧರೂ, ವಿದ್ಯಾಧರರೂ ಕಪಿಲ ಮಹಾಮುನಿಗಳನ್ನು ಕರುವನ್ನಾಗಿ ಕಲ್ಪಿಸಿಕೊಂಡು ಆಕಾಶವನ್ನೇ ಪಾತ್ರೆಯಾಗಿಸಿ ಆಗಸದಲ್ಲಿ ಸಂಚರಿಸುವ ಕಲೆಯನ್ನೂ ಅಷ್ಟ ಸಿದ್ಧಿಗಳನ್ನೂ ಕರೆದುಕೊಂಡರು. ಕಿಂಪುರುಷರು ಮಯಾಸುರನನ್ನು ಕರುವನ್ನಾಗಿ ಕಲ್ಪಿಸಿಕೊಂಡು ಅಂತರ್ಧಾನವಾಗುವ ಶಕ್ತಿಯನ್ನೂ ವಿವಿಧ ಮಾಯಾಶಕ್ತಿಗಳನ್ನೂ ಕರೆದುಕೊಂಡರು. ಮಾಂಸಾಹಾರಿಗಳಾದ ಯಕ್ಷರಾಕ್ಷಸರೂ, ಭೂತಪಿಶಾಚಿಗಳೂ ರುದ್ರನನ್ನು ಕರುವನ್ನಾಗಿ ಮಾಡಿಕೊಂಡು ರಕ್ತವನ್ನು ಕಪಾಲಗಳ ಪಾತ್ರೆಗಳಲ್ಲಿ ಕರೆದುಕೊಂಡರು. ನಾಗಗಳೂ, ಸರ್ಪಗಳೂ ಚೇಳುಗಳೂ ತಕ್ಷಕನನ್ನು ಕರುವನ್ನಾಗಿ ಮಾಡಿಕೊಂಡು ಹುತ್ತದ ಬಿಲದ ಪಾತ್ರೆಯಲ್ಲಿ ವಿಷವನ್ನು ಕರೆದುಕೊಂಡವು. ಗೋವುಗಳೇ ಮೊದಲಾದ ಚತುಷ್ಪಾದಿ ಪಶುಗಳು ಶಿವನ ವಾಹನವಾದ ವೃಷಭವನ್ನು ಕರುವನ್ನಾಗಿ ಕಲ್ಪಿಸಿಕೊಂಡು ಅರಣ್ಯವನ್ನೇ ಪಾತ್ರೆಯನ್ನಾಗಿಸಿ ಹಸಿರುಹುಲ್ಲನ್ನು ಕರೆದುಕೊಂಡವು. ಹುಲಿಯೇ ಮೊದಲಾದ ಮಾಂಸಾಹಾರಿ ಪ್ರಾಣಿಗಳು ಸಿಂಹವನ್ನು ಕರುವನ್ನಾಗಿಸಿ ತಮ್ಮ ಶರೀರಗಳೆಂಬ ಪಾತ್ರೆಗಳಲ್ಲಿ ಮಾಂಸವನ್ನು ಕರೆದುಕೊಂಡವು. ಪಕ್ಷಿಗಳೋ ಗರುಡನನ್ನು ಕರುವನ್ನಾಗಿಸಿ ಸ್ಥಾವರಜಂಗಮಗಳೆರಡನ್ನೂ (ಸಸ್ಯಾಹಾರ, ಮಾಂಸಾಹಾರ) ಕರೆದುಕೊಂಡವು. ವೃಕ್ಷಗಳು ವಟವೃಕ್ಷವನ್ನು ಕರುವನ್ನಾಗಿ ಮಾಡಿಕೊಂಡು ವಿವಿಧ ಬಗೆಯ ಮಧುರ ರಸಗಳನ್ನು ಕರೆದುಕೊಂಡವು. ಗಿರಿಪರ್ವತಗಳು ಹಿಮಾಲಯವನ್ನು ಕರುವನ್ನಾಗಿಸಿ ಶಿಖರಗಳೆಂಬ ಪಾತ್ರೆಗಳಲ್ಲಿ ಬಗೆಬಗೆಯ ಖನಿಜಗಳನ್ನು ಕರೆದುಕೊಂಡವು.
ಹೀಗೆ ಪೃಥು ಮಹಾರಾಜನಿಂದ ಮೊದಲ್ಗೊಂಡು ಅನೇಕರು ಬೇರೆ ಬೇರೆ ಕರುಗಳನ್ನಿಟ್ಟುಕೊಂಡು ಗೋರೂಪಧಾರಿಣಿಯಾದ ಭೂದೇವಿಯಿಂದ ವಿವಿಧ ಬಗೆಯ ಆಹಾರಗಳನ್ನೂ ಕಾಮನೆಗಳನ್ನೂ ಪಡೆದುಕೊಂಡರು. ಭೂದೇವಿಯು ಹೀಗೆ ಎಲ್ಲರಿಗೂ ಅವರವರ ಕಾಮನೆಯ ವಸ್ತುಗಳನ್ನು ನೀಡಲು ಪೃಥುವಿಗೆ ಅವಳಲ್ಲಿ ಮಗಳ ವಾತ್ಸಲ್ಯ ಮನೆಮಾಡಿತು. ಅವಳನ್ನು ಅವನು ತನ್ನ ಮಗಳಂತೆಯೇ ಕಂಡನು.
ಅನಂತರ ಪೃಥುವು ತನ್ನ ಧನುಸ್ಸಿನಿಂದ ನಿಶಿತಬಾಣಗಳನ್ನು ಪ್ರಯೋಗಿಸಿ ಗಿರಿಪರ್ವತಗಳ ಶಿಖರಗಳನ್ನು ಕತ್ತರಿಸಿದನು. ಆಗ ಭೂಮಂಡಲದ ಮೇಲ್ಮೈ ಸಮವಾಯಿತು. ಪೃಥುವು ಭೂಮಿಯನ್ನು ಪುರಗಳು, ಪಟ್ಟಣಗಳು, ಗ್ರಾಮಗಳು, ಗೊಲ್ಲಹಟ್ಟಿಗಳು, ರಾಜಶಿಬಿರಗಳು, ಗಣಿಗಳು ಮೊದಲಾದ ವಿವಿಧ ಪ್ರದೇಶಗಳನ್ನಾಗಿ ವಿಂಗಡಿಸಿ, ಪ್ರಜೆಗಳಿಗೆ ಬಗೆಬಗೆಯ ವೃತ್ತಿಗಳನ್ನೂ ನಿವಾಸಗಳನ್ನೂ ಕಲ್ಪಿಸಿಕೊಟ್ಟನು.
ಪೃಥುವಿಗೆ ಮೊದಲು ಭೂಮಿಯಲ್ಲಿ ಇಂಥ ಸುವ್ಯವಸ್ಥೆ ಇರಲಿಲ್ಲ. ಅವನು ಇಂಥ ಉತ್ತಮ ವ್ಯವಸ್ಥೆಯನ್ನು ಮಾಡಲು ಜನರೆಲ್ಲರೂ ನಿರ್ಭೀತಿಯಿಂದ ಸುಖವಾಗಿ ವಾಸಿಸತೊಡಗಿದರು. ಪೃಥು ಮಹಾರಾಜನು ಪೃಥ್ವಿಯನ್ನು ನಿರ್ವಿಘ್ನವಾಗಿ ಆಳತೊಡಗಿದನು.