ಪುಟ್ಟಿ ಮತ್ತು ಮುಳ್ಳು ಗುಲಾಬಿ

ಪುಟ್ಟಿ ತನ್ನ ಗೆಳತಿಯ ಮನೆಗೆ ಆಡಲು ಓಡಿದಳು. ಬೇಸಿಗೆಯ ಬಿಸಿಲಲ್ಲಿ ಹೊರಗೆ ಹೋಗದಂತೆ ಅವಳಮ್ಮ ಮಧ್ಯಾಹ್ನದಿಂದ ಮನೆಯಲ್ಲೇ ಇರಿಸಿಕೊಂಡಿದ್ದರು. ಪುಟ್ಟಿಗೆ ಟಿವಿ ನೋಡುವುದೆಂದರೆ ಬೇಜಾರು. ಕಾಮಿಕ್ಸ್‌ ಓದುತ್ತ ಸಂಜೆಯಾಗುವುದನ್ನೇ ಕಾಯ್ತಿದ್ದಳು ಪುಟ್ಟಿ.

ಗೆಳತಿಯ ಮನೆ ಗೇಟು ತೆಗೆದು ಒಳಗೆ ಹೋಗುತ್ತಿದ್ದ ಹಾಗೆಯೇ ಅವಳಿಗೆ ಅಂಗಳದಲ್ಲಿ ಹೊಸದಾಗಿ ಅರಳಿದ್ದ ಗುಲಾಬಿ ಕಂಡಿತು. ಅಷ್ಟು ಚೆಂದದ ಹೂವಿನ ಪಕ್ಕ ಮುಳ್ಳು ಇದ್ದದ್ದು ಅವಳಿಗೆ ಸರಿಬರಲಿಲ್ಲ. ಗಿಡಕ್ಕೆ ನೀರು ಹಾಕುತ್ತಿದ್ದ ಗೆಳತಿಯ ತಾತನನ್ನು ಕೇಳಿದಳು. “ತಾತಾ, ಅದ್ಯಾಕೆ ಈ ಹೂವಿನ ಪಕ್ಕ ಮುಳ್ಳಿದೆ? ಕೀಳಲಿಕ್ಕೆ ಹೋದಾಗೆಲ್ಲ ಚುಚ್ಚಿ ನೋಯಿಸತ್ತೆ.”

ತಾತ ಹೇಳಿದರು. “ಪುಟ್ಟೀ, ಸ್ವಯಂ ರಕ್ಷಣೆಗೆಂದು ದೇವರುಕೊಟ್ಟ ವರ ಅದು!”

“ಅಂದರೆ?”

“ಚೆಂದದ ಗುಲಾಬಿಯನ್ನು ವಿನಾಕಾರಣ ಕಿತ್ತು ನೋಯಿಸುವವರಿಗೆ ಚುಚ್ಚಲೆಂದೇ ದೇವರು ಹೂವಿನ ಜೊತೆ ಮುಳ್ಳನ್ನು ಇಟ್ಟಿರುವನು.”

ಪುಟ್ಟಿಗೆ ಸಮಾಧಾನವಾಗಲಿಲ್ಲ. ಹೂವು ಇರುವುದೇ ಮುಡಿಯಲಿಕ್ಕೆ, `ಬೊಕೆ’ ಮಾಡಲಿಕ್ಕೆ ಎಂಬುದು ಅವಳ ವಾದ. “ಇಷ್ಟಕ್ಕೂ ಗಿಡಕ್ಕೇನು ಈತ ಕದಿಯಲು ಬಂದವ, ಈತ ಒಳ್ಳೆಯವ ಎಂದು ಗೊತ್ತಾಗುತ್ತದೆಯೋ?”
“ಹಾಗಲ್ಲ ಪುಟ್ಟಿ, ಕದಿಯುವವರು ಗಡಿಬಿಡಿಯಲ್ಲಿ, ಅಂಜಿಕೆಯಲ್ಲಿ ಆದಷ್ಟು ಬೇಗ ಕೆಲಸ ಮುಗಿಸುವ ಆತುರದಲ್ಲಿರುತ್ತಾರೆ. ಹೀಗೆ ಗಿಡವನ್ನ ನೋಯಿಸಿ ಕೀಳುವವರ ಕೈಗೆ ಮುಳ್ಳುಗೀರಿ ಗಾಯವಾಗುತ್ತದೆ. ದೇವರ ಪೂಜೆಗೋ, ಮುಡಿಯಲೋ ಹೂವು ಕೀಳುವಾಗ ಅಕ್ಕರೆಯಿಂದ, ಭಕ್ತಿಯಿಂದ, ಗಿಡಕ್ಕೆ ನೋವಾಗದಂತೆ ತೆಗೆಯುತ್ತಾರೆ. ಆಗ ಸಹಜವಾಗಿ ಮುಳ್ಳು ತಾಗದು ಅಲ್ಲವೇ?”

“ಹೌದು ತಾತಾ!”

ಪುಟ್ಟಿಯ ಆಸಕ್ತಿ ತಾತನ ಹುರುಪನ್ನು ಹೆಚ್ಚಿಸಿತು. ಅವರು ಉತ್ಸಾಹದಿಂದ ಮುಂದುವರಿದರು. “ಭಗವಂತ ಎಷ್ಟೆಲ್ಲ ವೈವಿಧ್ಯದ ವಸ್ತುಗಳನ್ನು ಸೃಷ್ಟಿಸಿದ್ದಾನೆ. ಇವೆಲ್ಲವೂ ಅವನವೇ. ಆದ್ದರಿಂದ ಯಾವ ವಸ್ತುವನ್ನೇ ಆದರೂ ಮೊದಲು ಅವನಿಗೆ ಅರ್ಪಿಸಿ ಆಮೇಲೆ ನಾವು ಪ್ರಸಾದ ರೂಪದಲ್ಲಿ ಪಡೆಯಬೇಕು. ಈ ಹೂವನ್ನೂ ಸಹ!”
ಪುಟ್ಟಿಯ ಕಣ್ಣು ಮಿನುಗಿತು. “ಹೋ! ಅದಕ್ಕೇ ಅಮ್ಮ ದೇವರ ಪಟ್ಟಕ್ಕೇರಿಸಿದ ಹೂವನ್ನು ಮುಡಿಯುತ್ತಾಳೆ!?”
ಹೀಗೆನ್ನುತ್ತಾ ಅವಳು ಭಕ್ತಿಯಿಂದ ಗುಲಾಬಿಯನ್ನು ಕಿತ್ತು, “ಇವತ್ತು ನಾನೂ ಮನೆಯಲ್ಲಿ ಪೂಜೆ ಮಾಡಿ ಹೂ ಮುಡಿಯತ್ತೇನೆ” ಎಂದು ಕುಣಿಯುತ್ತಾ ಮನೆಗೋಡಿದಳು.

ಪುಟ್ಟಿಯೊಡನೆ ಆಡಬಹುದೆಂದು ಕಾದಿದ್ದ ಗೆಳತಿಯೂ, “ಇವತ್ತು ಪುಟ್ಟಿ ಮನೆಯಲ್ಲಿ ಪೂಜೆಯಾಟ ಆಡುವೆವು” ಎನ್ನುತ್ತ ತಾನೂ ಜೊತೆಯಾದಳು.

ಈ ಲೇಖನ ಶೇರ್ ಮಾಡಿ

ಹೊಸ ಪೋಸ್ಟ್‌ಗಳು