ಕಾಲಿಯ ದಮನ

ವೃಂದಾವನದಲ್ಲಿ ಬಿಸಿಲಿನ ದಿನಗಳೆಂದರೆ ಗೋಪಾಲಕರಿಗೆ ಬಲು ಖುಷಿ. ಕೃಷ್ಣನ ಜೊತೆ  ಸಂತಸದಿಂದ ಆಟವಾಡಬಹುದೆಂದು ಲೆಕ್ಕಾಚಾರ. ಕೃಷ್ಣ ಅಲ್ಲಿದ್ದಾನೆಂದರೆ ಮಂಕಾದ ವಾತಾವರಣಕ್ಕೆ ಅವಕಾಶವೇ ಇಲ್ಲ. ಜೀವನೋತ್ಸಾಹ ಅಲ್ಲಿ ತುಂಬಿರುತ್ತಿತ್ತು. ಹಸುಗಳು ಹಸಿರು ಭೂಮಿಯಲ್ಲಿ ಮೇಯುತ್ತಿದ್ದರೆ ಕೃಷ್ಣ ಅವನ ಮಿತ್ರರು ಗಿಡಗಳಿಂದ ಹಣ್ಣು ಕಿತ್ತು ತಿನ್ನುತ್ತಿದ್ದರು. ವೃಂದಾವನದ ಸುಂದರ ಪರಿಸರದಲ್ಲಿ ಕೃಷ್ಣ ಮತ್ತು ಅವನ ಮಿತ್ರರಿಗೆ ಆಟ, ತಿನಿಸಿನಲ್ಲಿ ಸಮಯದ ಪರಿವೆಯೇ ಇರುತ್ತಿರಲಿಲ್ಲ.

ಆದರೆ ಮೋಡವು ಸೂರ್ಯನನ್ನು ಮರೆ ಮಾಡುವಂತೆ ವೃಂದಾವನದ ಶಾಂತಿಯುತ ಬದುಕಿನ ಮೇಲೆ  ಆಗಾಗ್ಗೆ `ದಾಳಿ’ ನಡೆಯುತ್ತಿತ್ತು.

ಅನೇಕ ಹೆಡೆಗಳಿದ್ದ ಕಾಲಿಯ ಸರ್ಪವು ಯಮುನಾ ನದಿಯೊಳಗಿನ ಸರೋವರದಲ್ಲಿ ವಾಸ ಮಾಡುತ್ತಿತ್ತು. ಅದರ ವಿಷದಿಂದ ಇಡೀ ಪ್ರದೇಶ ಎಷ್ಟು ಕಲ್ಮಷವಾಯಿತೆಂದರೆ ಅಲ್ಲಿ ಅವ್ಯಾಹತವಾಗಿ ವಿಷವಾಯು ಹೊರಹೊಮ್ಮುತ್ತಿತ್ತು. ಆ ಪ್ರದೇಶದಲ್ಲಿ ಹಕ್ಕಿಗಳು ಹಾರಾಡಿದರೆ ಅವು ಪ್ರಜ್ಞೆ ತಪ್ಪಿ ಬೀಳುತ್ತಿದ್ದವು ಅಥವಾ ಸಾಯುತ್ತಿದ್ದವು. ನದಿ ಸುತ್ತಲಿನ ಗಿಡ ಮರಗಳೂ ಒಣಗಿ ಹೋಗುತ್ತಿದ್ದವು. ಹಳದಿ ಹೂವುಗಳ ಕದಂಬ ವೃಕ್ಷವೊಂದು ಮಾತ್ರ ಗಟ್ಟಿಯಾಗಿ ನಿಂತಿತ್ತು. ಕಾಲಿಯ ಸರ್ಪವು ಈ ಜಾಗವನ್ನು ತನ್ನ ನೆಲೆ ಮಾಡಿಕೊಂಡಿದ್ದೇಕೆಂದರೆ ಅದಕ್ಕೆ ಮಹಾ ವಿಷ್ಣುವಿನ ವಾಹನ ಗರುಡನ ಭಯವಿತ್ತು.

ವೈಕುಂಠದ ಶಾಶ್ವತ ವಾಸಿಯಾದ ಗರುಡನ ತಂದೆ ಕಶ್ಯಪ ಮುನಿ, ತಾಯಿ ವಿನುತ. ತಾಯಿಯ ಸೋದರಿ ಕದ್ರು ಸರ್ಪಗಳ ಮಾತೆ.

ಗರುಡ ಆಗಾಗ್ಗೆ ನಾಗಾಲಯಕ್ಕೆ ಭೇಟಿ ನೀಡಿ ಅಲ್ಲಿದ್ದ ಹಾವುಗಳನ್ನು ಕೊಲ್ಲುತ್ತಿದ್ದ. ಇದರಿಂದ ಸರ್ಪಗಳ ಸಂಖ್ಯೆ ಕಡಮೆಯಾಗುತ್ತಿತ್ತು.  ಆಗ ಅವುಗಳ ನಾಯಕ ವಾಸುಕಿ ಬ್ರಹ್ಮನ ಮೊರೆ ಹೊಕ್ಕು  ರಕ್ಷಣೆ ಕೋರಿತು. ಆಗ ಬ್ರಹ್ಮನು ಗರುಡನ ಜೊತೆ ಒಪ್ಪಂದ ಮಾಡಿಕೊಂಡ. ಪ್ರತಿ ಅರ್ಧ ಚಂದ್ರದಂದು ಒಂದು ಸರ್ಪವನ್ನು ಮರದ ಬುಡದಲ್ಲಿ ಅರ್ಪಿಸಲಾಗುವುದು ಎಂಬ ಬ್ರಹ್ಮನ ಮಾತಿಗೆ ಗರುಡ ಒಪ್ಪಿದ. ಇದು ಸರಾಗವಾಗಿ ಸಾಗುತ್ತಿದ್ದಾಗ, ಕಾಲಿಯ ಒಮ್ಮೆ ಗರುಡನ ಆಹಾರವನ್ನು ತಾನೇ ಸ್ವಾಹಾ ಮಾಡಿತು. ಇದರಿಂದ ಗರುಡ ಕೋಪಗೊಂಡು ಕಾಲಿಯನ ಮೇಲೆ ಎರಗಿದ. ಜೀವ ಭಯದಿಂದ ಕಾಲಿಯ ಯಮುನೆಯ ಈ ಸರೋವರ ಸೇರಿಕೊಂಡ. ಯೋಗಿ ಸೌಭರಿ ಮುನಿಗಳ ಶಾಪಕ್ಕೆ ಒಳಗಾಗಿದ್ದ ಗರುಡನಿಗೆ ಈ ಸರೋವರಕ್ಕೆ ಪ್ರವೇಶವಿಲ್ಲ. ಯೋಗಿಯು ಈ ಸರೋವರದಲ್ಲಿ ಧಾನ್ಯದಲ್ಲಿ ನಿರತರಾಗಿರುತ್ತಿದ್ದರು. ಗರುಡ ಅಲ್ಲಿಗೆ ಬಂದು ಮೀನುಗಳನ್ನು ಭಕ್ಷಿಸುತ್ತಿದ್ದದ್ದು ಮುನಿಗೆ ಇಷ್ಟವಾಗಲಿಲ್ಲ. ಅವರಿಗೆ ಮೀನುಗಳ ಬಗೆಗೆ ಸಹಾನುಭೂತಿ ಇತ್ತು. ಅಲ್ಲಿಗೆ ಬರಬಾರದೆಂಬ ಮುನಿಯ ಮಾತಿಗೆ ಒಪ್ಪಿಗೆ ಇಲ್ಲವಾದರೂ ಗರುಡ ಒಂದು ದೊಡ್ಡ ಮೀನನ್ನು ಮಾತ್ರ ಒಯ್ದು ಅಲ್ಲಿಗೆ ಪುನಃ ಬರಲಿಲ್ಲ. ಈ ಶಾಪವು ಗೊತ್ತಿದ್ದುದು ಕಾಲಿಯನಿಗೆ ಮಾತ್ರ. ಆದ್ದರಿಂದ ಅದು ಯಮುನೆಯಲ್ಲಿ ಆಶ್ರಯ ಪಡೆಯಿತು. ಸೌಭರಿ ಮುನಿ ಆಗ ಗರುಡನನ್ನು ಹೀಗೆ ಶಪಿಸಿದರು. “ಇನ್ನು ಮುಂದೆ ಮೀನು ತಿನ್ನಲು ಗರುಡ ಇಲ್ಲಿ ಬಂದರೆ ಅವನು ತತ್‌ಕ್ಷಣ ಸಾಯುವನು.”

ಒಮ್ಮೆ ಕೃಷ್ಣ ಬಲರಾಮ ಮತ್ತು ಅವರ ಮಿತ್ರರು ಹಸು ಮೇಯಿಸಲು ಯಮುನಾ ತೀರಕ್ಕೆ ಹೋದರು. ನೀರಡಿಕೆಯಿಂದ ಹಸುಗಳು ನದಿ ನೀರು ಕುಡಿದಾಗ ವಿಷಪೂರಿತ ಜಲದಿಂದಾಗಿ ಪ್ರಜ್ಞೆ ತಪ್ಪಿ ಬಿದ್ದವು. ಹಸು ಮೇಯಿಸುತ್ತಿದ್ದ ಬಾಲಕರು ಸಹಾಯಕ್ಕಾಗಿ ಕೂಗತೊಡಗಿದರು.  ಗಲಾಟೆ ಕೇಳಿ ಕೃಷ್ಣ ಅಲ್ಲಿಗೆ ಬಂದ. ಹಸುಗಳು ಬಿದ್ದಿರುವುದನ್ನು ನೋಡಿ ಕೂಡಲೇ ಕದಂಬ ಮರವೇರಿ ನೀರಿನಲ್ಲಿ ಧುಮುಕಿದ. ಇದರಿಂದ ಕಾಲಿಯದ ರೋಷ ಮುಗಿಲು ಮುಟ್ಟಿತು. ಜೋರಾಗಿ ಶಬ್ದ ಮಾಡುತ್ತ ನಾಲಗೆ ತೋರುತ್ತ ಕೃಷ್ಣನ ಮೇಲೆ ಎರಗಲು ಮುಂದಾಯಿತು. ವಿಷ ಕಾರುತ್ತ ತನ್ನ ಕೋಪವನ್ನು ಹೊರಗೆಡಹಿತು. ವೇಗದಿಂದ ಬಂದು ತನ್ನ ಸುರುಳಿಯಲ್ಲಿ ಸುತ್ತಿಕೊಳ್ಳಲು ಮುಂದಾಯಿತು. ಆದರೆ ಕೃಷ್ಣ ಸುಲಭವಾಗಿ ಜಾರಿಕೊಂಡ. ಕಾಲಿಯಾಗೆ ಅಚ್ಚರಿ. ಕೋಪ ನೆತ್ತಿಗೇರಿತು. ತನ್ನ ಹೆಡೆಗಳಿಂದ ಜಾಲ ಬೀಸಿತು.

ಈ ಮಧ್ಯೆ ವೃಂದಾವನದಲ್ಲಿ ಈ ವಿಷಯ ಹರಡಿತು. ಆತಂಕಗೊಂಡ ಯಶೋದ, ನಂದ ಮಹಾರಾಜ ಓಡೋಡಿ ಬಂದರು. ಅಲ್ಲಿನ ದೃಶ್ಯ ನೋಡಿದಾಗ ಅವರ ಎದೆ ಜಲ್ಲೆಂದಿತು. ಬೃಹದಾಕಾರದ ಸರ್ಪವು ನೀರಿನಲ್ಲಿ ರೋಷದಿಂದ ಹರಿದಾಡುತ್ತಿತ್ತು. ಅದು ಕೃಷ್ಣನನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಂತೆ ಕಾಣುತ್ತಿತ್ತು. ಮಗನ ನೆರವಿಗೆ ಧಾವಿಸಲು ನಂದ

ಮಹಾರಾಜ ಮುಂದಾದ. ಆದರೆ ಎಲ್ಲರೂ ಅವನನ್ನು ತಡೆದರು. ಎಲ್ಲರಿಗೂ ಅಸಹಾಯಕತೆಯಿಂದ ನೋಡುವಂತಾಯಿತು.

ವಿಪತ್ತಿನ ಚಿಹ್ನೆ ಕಂಡು ವೃಂದಾವನ ವಾಸಿಗಳು ಭಯಭೀತರಾದರು. ನೀರಿನೊಳಗೆ ಕೃಷ್ಣ ಕಾಲಿಯ ಸಮರ ಸಾಗಿತ್ತು. ಸರ್ಪವನ್ನು ಕೃಷ್ಣ ತಳ ಭಾಗಕ್ಕೆ ಒಯ್ದ. ಕೃಷ್ಣನನ್ನು ಹಿಡಿತದಲ್ಲಿ ಇಟ್ಟುಕೊಳ್ಳಬೇಕೆಂಬ ಕಾಲಿಯ ಪ್ರಯತ್ನ ಸಫಲವಾಗಲಿಲ್ಲ. ಯಮುನಾ ನೀರು ವಿಷಪೂರಿತವಾದಂತೆ ಕಂಡಿತು. ಎಲ್ಲರಿಗೂ ಕೃಷ್ಣನ ಬಗೆಗೆ ಆತಂಕ. ಆಗ ದಿಢೀರನೆ ಪ್ರಬಲ ಆನೆಯಂತೆ ಕೃಷ್ಣ ನೀರಿನ ಮೇಲೆ ಕಾಣಿಸಿಕೊಂಡ. ಕಾಲಿಯನ ಹೆಡೆಗಳ ಮೇಲೆ ನರ್ತಿಸಲಾರಂಭಿಸಿದ. ಕಾಲಿಯಗೆ  ಸುಸ್ತಾಗಿ ಹೋಯಿತು. ಸೋತು ಸುಣ್ಣವಾಯಿತು. ಕೃಷ್ಣನ ನರ್ತನ ಲೀಲೆ ಕಂಡು ಯಶೋದ ಆದಿಯಾಗಿ ಎಲ್ಲರಿಗೂ ಸಮಾಧಾನ. ತನ್ನ ಮಗು ಸುರಕ್ಷಿತ ಎಂದು ಅವಳಿಗೆ ಸಂತಸ. ತನ್ನ ಮಗ ಬೃಹದಾಕಾರದ ಸರ್ಪವನ್ನು ಮಣಿಸಿದ್ದು ಹೇಗೆ ಎಂಬುದು ಅವಳಿಗೆ ತಿಳಿಯದು. ಆದರೆ ಮಗ ಸುರಕ್ಷಿತ ಎಂಬುದಷ್ಟೇ ಅವಳಿಗೆ ಮುಖ್ಯ. ದೂರದಲ್ಲಿ ನಿಂತಿದ್ದ ಬಲರಾಮ ಇದೆಲ್ಲ ನೋಡಿ ನಗುತ್ತಿದ್ದ.

ಸರ್ಪವನ್ನು ಮಣಿಸುತ್ತಾನೆಂದು ಅವನಿಗೆ ತಿಳಿದಿತ್ತು.

ಈಗ ನಾಗಪತ್ನಿಯರು ಎಚ್ಚರಗೊಂಡರು. ಕಾಲಿಯ ಸೋತ ಕೂಡಲೇ ಅವನ ಪತ್ನಿಯರು, ನಾಗಪತ್ನಿಯರು ಕೃಷ್ಣನ ಬಳಿಗೆ ಓಡೋಡಿ ಬಂದರು. ಈ ಸುಂದರ ಬಾಲಕ ಸಾಮಾನ್ಯನಲ್ಲ ಎಂದು ಅವರಿಗೆ ಅರಿವಾಗಿಬಿಟ್ಟಿತು! ಅವರು ಶರಣಾದರು; `ಪ್ರೀತಿಯ ಕೃಷ್ಣ, ದಯೆಯಿಟ್ಟು ನಮ್ಮ ಗಂಡನನ್ನು ಕೊಲ್ಲಬೇಡ. ಇಲ್ಲದಿದ್ದರೆ ನಾವೂ ಸಾಯುತ್ತೇವೆ. ನೀನು ಈಗಾಗಲೇ ಅವನ ವಿಷವನ್ನು ತೆಗೆದು ಬಿಟ್ಟಿದ್ದೀಯ. ಅವನು ಇನ್ನು ಯಾರನ್ನೂ ಯಾವಾಗಲೂ ಹಿಂಸಿಸಲಾರ. ಕೃಷ್ಣ, ದಯೆಮಾಡಿ ಕೃಪೆ ತೋರು.’

`ಕಾಲಿಯ, ಈ ಯಮುನೆ ಬಿಟ್ಟು ಹೋಗು’ ಎಂದು ಕೃಷ್ಣ ಹೇಳಿದ.

`ಆದರೆ, ಕೃಷ್ಣ, ಸಾಗರದಲ್ಲಿ ಅವನು ಬದುಕಲಾರ. ಗರುಡ ಅವನನ್ನು ಬಿಡುವುದಿಲ್ಲ’  ನಾಗಪತ್ನಿಯರು ಅಳತೊಡಗಿದರು.

`ಭಯ ಬೇಡ. ಅವನ ಶಿರದ ಮೇಲೆ ನನ್ನ ಕಾಲು ಗುರುತು ನೋಡಿದರೆ ಗರುಡ ಏನೂ ಅಪಾಯ ಮಾಡುವುದಿಲ್ಲ.’ ಎಂದು ಕೃಷ್ಣ ಸಾಂತ್ವನ ನುಡಿಗಳಾಡಿದ.

ನದಿಯಿಂದ ಕೃಷ್ಣ ಹೊರಗೆ ಬರುತ್ತಿದ್ದಂತೆ ಗೋಪಾಲಕರೆಲ್ಲ ಹರ್ಷೋದ್ಗಾರಗೈದರು. ಈ ಹರ್ಷದ ಹೊನಲಿನಲ್ಲಿ  ನದಿ ನೀರು ಮತ್ತೆ ತಿಳಿಯಾಗಿ ಮಿಂಚಿದ್ದನ್ನು ಅವರು ಯಾರೂ ಗಮನಿಸಲಿಲ್ಲ. ಸುತ್ತಲಿನ ಮರಗಳು ಪುನಃ ಹಸುರಿನಿಂದ ಕಂಗೊಳಿಸಿದವು.

ತಾಯಿ ಯಶೋದ ತನ್ನ ಮಗನನ್ನೆತ್ತಿಕೊಂಡು ಮುದ್ದಾಡಿದಳು. ಅಂತಹ ಸರ್ಪವನ್ನು  ಮಣಿಸಿದ್ದು ಹೇಗೆ ಎಂದು ಒಂದು ಕ್ಷಣ ಅವಳ ಮನದಲ್ಲಿ ಹಾದು ಹೋದರೂ ತನ್ನ ಮಗ ಪುನಃ ತನ್ನ ಮಡಿಲಿಗೆ ಬಂದನೆಂಬ ಸಂತೋಷವೇ ಹೆಚ್ಚಾಯಿತು. 

ಈ ಲೇಖನ ಶೇರ್ ಮಾಡಿ