ಸಮುದ್ರ ಮಥನ

ಮೃತ್ಯೋರ್ಮಾ ಅಮೃತಂಗಮಯ

ಅದು ಚಾಕ್ಷುಷ ಮನ್ವಂತರ. ಆ ಮನ್ವಂತರದಲ್ಲಿ ವೈರಾಜನ ಪತ್ನಿಯಾದ ಸಂಭೂತಿಯಲ್ಲಿ ಅಜಿತನೆಂಬ ಹೆಸರಿನಲ್ಲಿ ಭಗವಂತನ ಅಂಶಾವತಾರವಾಗಿತ್ತು. ಈ ಅಜಿತಮೂರ್ತಿಯೇ ಮಂದರ ಪರ್ವತವನ್ನು ಬೆನ್ನಮೇಲೆ ಧರಿಸಿ ದೇವತೆಗಳಿಗೆ ಅಮೃತಮಂಥನದಲ್ಲಿ ನೆರವಾದದ್ದು. ಆಗಲೇ ವಿಶ್ವದ ನೀಹಾರಿಕೆಯೊಂದರಲ್ಲಿ ಮಂಥನವಾಗಿ ಆಸುರೀ ಶಕ್ತಿಗಳ ಪತನವಾಗಿ ದೈವೀಶಕ್ತಿಯು ಅಮೃತವಾದದ್ದು. ಕಾಲಾಹಲ ಹುಟ್ಟಿದ್ದೂ ಆಗಲೇ. ಅಮೃತ ಹುಟ್ಟಿದ್ದೂ ಆಗಲೇ. ಅದು ಜೀವನದ ಹಗಲುರಾತ್ರಿಗಳ ಸಮ್ಮಿಳನ.

ದೇವಾಸುರರ ನಡುವೆ ಸತತವಾಗಿ ಘೋರಸಂಗ್ರಾಮವು ನಡೆದಿತ್ತು. ಅದರಲ್ಲಿ ಅಸುರರ ಕೈಯೇ ಮೇಲಾಗಿತ್ತು. ಅಸುರರಿಗೆ ಅಮೃತತ್ತ್ವ ಇನ್ನೂ ಬಂದಿರದ ಕಾಲ ಅದು. ಸುರರು ಗತಪ್ರಾಣರಾಗಿ ನೆಲಕ್ಕೆ ಬೀಳುತ್ತಿದ್ದರು.

ಆ ಸಂದರ್ಭದಲ್ಲಿ ಸ್ವರ್ಗದ ಸನ್ನಿವೇಶವನ್ನು ಆಯಕಟ್ಟಿನ ಸ್ಥಳಗಳನ್ನು ನೋಡಲು ಇಂದ್ರ ಐರಾವತದ ಮೇಲೆ ಹೋಗುತ್ತಿದ್ದ. ಆಗ ದೂರ್ವಾಸಮುನಿಗಳು ಬಂದು ಅವನನ್ನು ಆಶೀರ್ವದಿಸಿ ತನ್ನ ಕೊರಳಲ್ಲಿದ್ದ ಪುಷ್ಪಮಾಲೆಯನ್ನು ದೇವರಾಜನಿಗೆ ಕೊಟ್ಟನು.

ಇಂದ್ರ ಮದದಿಂದ ಆ ಹಾರವನ್ನು ಐರಾವತದ ಮೇಲೆ ಎಸೆದ. ಆ ಮಹಾಗಜ ಅದನ್ನು ತೆಗೆದು ನೆಲಕ್ಕೆ ಹಾಕಿ ಕಾಲಿನಲ್ಲಿ ಹೊಸಕಿ ಹಾಕಿತು. ದೂರ್ವಾಸ ಮೊದಲೇ ಕ್ರೋಧಿ . ಅವರು ಇದನ್ನು ನೋಡಿ ರೋಷದಿಂದ `ನಿನ್ನ ಐಶ್ವರ್ಯ ನಾಶವಾಗಲಿ’ ಎಂದು ಶಪಿಸಿದರು.

ಮೊದಲೇ ವರ್ಚಸ್ಸನ್ನು ಕಳೆದುಕೊಂಡಿದ್ದ ಸುರರ ಪರಿಸ್ಥಿತಿ ಇದರಿಂದ ಮತ್ತೂ ಶೋಚನೀಯವಾಯಿತು. ಯಜ್ಞಯಾಗಗಳು ನಿಂತವು. ಅವರಿಗೆ ಎಲ್ಲೆಲ್ಲೂ ಸೋಲಾಯಿತು. ಅಸುರರ ಬಳಿ ಸುರರ ಸಮಸ್ತ ಐಶ್ವರ್ಯವೂ ಸೇರಿಕೊಂಡಿತು.

ಚಿಂತಿತರಾದ ಸುರರು ಸೃಷ್ಟಿಕರ್ತನಾದ ಬ್ರಹ್ಮನ ಬಳಿ ಹೋದರು. ಬ್ರಹ್ಮ ಧ್ಯಾನಬಲದಿಂದ ಮುಂದಾಗುವುದನ್ನು ತಿಳಿದು ಹೇಳಿದ. `ಬನ್ನಿ ಸ್ಥಿತಿಕಾರಕನಾದ ಭಗವಂತನ ಬಳಿ ಹೋಗೋಣ. ಇದು ಸೃಷ್ಟಿಯ ಸಮಸ್ಯೆಯಲ್ಲ. ಸ್ಥಿತಿಯ ಸಮಸ್ಯೆ. ಇವೆಲ್ಲ ಅವನ ಲೀಲೆ. ಸೃಷ್ಟಿ-ಸ್ಥಿತಿ-ಲಯಗಳೆಲ್ಲ ಅವನದೇ. ಮುಖ್ಯವಾಗಿ ಅವನು ಸ್ಥಿತಿಪಾಲಕನಾದ್ದರಿಂದ ಅವನ ಬಳಿ ಹೋಗೋಣ.’

ಎಲ್ಲರೂ ಕ್ಷೀರೋದಕಶಾಯಿ ವಿಷ್ಣುವಿನ ಸ್ಥಾನಕ್ಕೆ, ಶ್ವೇತದ್ವೀಪಕ್ಕೆ ತೆರಳಿದರು. ಆದರೆ ಅಲ್ಲಿ ಆ ದೈವೀ ಆಯಾಮದಲ್ಲೂ ಅವರಿಗೆ ಭಗವಂತ ಕಾಣಿಸಲಿಲ್ಲ. ಆಗ ಬ್ರಹ್ಮ ಇಂದ್ರಿಯಗಳಿಗೆ ಅಗೋಚರನಾಗಿ ವೇದಗಮ್ಯನಾದ ಆ ಶಕ್ತಿಯನ್ನು ವೇದವಾಕ್ಕುಗಳಿಂದಲೇ ಸ್ತುತಿಸತೊಡಗಿದ. “ಭಗವಂತನೇ, ನೀನು ಸರ್ವಾಂತರ್ಯ್ಮಿ, ಜಗತ್ಕಾರಣನಾಗಿದ್ದರೂ ನಿರ್ವಿಕಾರ, ಆದ್ಯಂತ ರಹಿತ, ಅವಿರ್ವಾಚ್ಯಮಹಿಮ, ಮನೋವಾಕ್ಕುಗಳಿಗೆ ಅಗೋಚರ. ಜ್ಞಾನೈಕ ಸ್ವರೂಪ, ನಿರ್ವಿಕಲ್ಪ, ದೇಶಕಾಲಾತೀತ-ಬ್ರಹ್ಮಸ್ವರೂಪ, ನೀನು ಅಂತರ್ಯ್ಮಿ ರೂಪದಿಂದ ಜೀವರಲ್ಲಿಯೂ ಲೀಲಾವಿಗ್ರಹರೂಪದಿಂದ ಗರುಡನ ಮೇಲೆಯೂ ನೆಲಸಿರುವವನು, ಈ ಪೃಥಿವ್ಯಾದಿ ಮಹಾಭೂತಗಳು, ಕಾಲ, ಕರ್ಮ, ಸತ್ಯಾದಿಗುಣಗಳು, ಎಲ್ಲವೂ ನಿನ್ನ ಮಾಯಾಕಲ್ಪಿತ.  ಪರಾವರನೆ! ನೀನು ಪ್ರಸನ್ನನಾಗಿ ನಮ್ಮ ಮುಂದೆ ಪ್ರತ್ಯಕ್ಷನಾಗು. ನಮ್ಮನ್ನು ಉದ್ಧರಿಸು.”

ಬ್ರಹ್ಮನ ಸ್ತುತಿಯಿಂದ ಆಗ ಒಂದದ್ಭುತವು ಸಂಭವಿಸಿತು. ಒಮ್ಮೆಲೇ ಸಹಸ್ರಾರು ಸೂರ್ಯರು ಉದಯಿಸಿದಂತೆ ಅಲ್ಲಿ ಮಹಾತೇಜಸ್ಸೊಂದು ಕಾಣಿಸಿತು. ಆ ಬೆಳಕಿನಿಂದ ಕಣ್ಣು ಕೋರೈಸಿತು. ಸುರರಿಗೆ ಭೂಮಿ, ಸ್ವರ್ಗಗಳು ಯಾವುದೂ ಕಾಣಿಸಲಿಲ್ಲ. ಇನ್ನು ಪರಮಾತ್ಮನ ದರ್ಶನವಾಗುವುದೆಂತು? ಆದರೆ ಇದೆಲ್ಲ ಒಂದು ಕ್ಷಣ. ತಕ್ಷಣವೇ ಎಲ್ಲವೂ ನಿರ್ಮಲವಾಗಿ ಮರಕತಮಣಿಶ್ಯಾಮಲನಾದ ದಿವ್ಯಮಂಗಳ ವಿಗ್ರಹ ಕಾಣಿಸಿತು. ಪೀತಾಂಬರಧರನಾದ, ಕಿರೀಟ ಕುಂಡಲಾಲಂಕೃತನಾದ ಚಕ್ರಾದ್ಯಾಯುಧಗಳಿಂದ ಪೂಜಿತನಾದ ಭಗವಂತ ಸುರರ ಮುಂದೆ ಪ್ರತ್ಯಕ್ಷನಾಗಿದ್ದ.

ಎಲ್ಲರೂ ದಂಡಪ್ರಣಾಮ ಮಾಡಿ ದೇವದೇವನನ್ನು ಮತ್ತೆ ಸ್ತುತಿಸಿದರು. `ನಿನ್ನ ದರ್ಶನದಿಂದ, ಕಾಡುಗಿಚ್ಚಿನಿಂದ ಬೆಂದು ನೊಂದಿರುವ ಕಾಡಾನೆಗಳು ಗಂಗಾಜಲವನ್ನು ಕಂಡು ನಲಿಯುವಂತೆ ಪರಮಾನಂದ ಭರಿತರಾದೆವು. ನಾವು ಬಂದಿರುವ ಉದ್ದೇಶವನ್ನು   ಗ್ರಹಿಸಿ   ನಮಗೆ ದಾರಿತೋರಿಸು’ ಎಂದು ಚತುರ್ಮುಖ ನುಡಿದ.

ಸರ್ವಜ್ಞನಾದ ಪರಮಾತ್ಮನಿಗೆ ವಿಷಯದ ಬಗ್ಗೆ ಹೇಳಬೇಕೆ? ಅವನು ವಿಷಯವನ್ನು ಗ್ರಹಿಸಿ ಮೇಘಗಂಭೀರ ಧ್ವನಿಯಿಂದ      ಹೇಳಿದ. `ಬ್ರಹ್ಮರುದ್ರಾದಿಗಳಿರಾ’   ನೀವು ಅಸುರರೊಡನೆ ಸಂಧಿಮಾಡಿಕೊಳ್ಳಬೇಕು. ಅಮೃತದ ಆಸೆಯನ್ನು ಅವರಲ್ಲಿ ಹುಟ್ಟಿಸಿ ಅವರು ಸುಮ್ಮನಿದ್ದರೆ ಅಮೃತವನ್ನು  ಹೊಂದುವ ದಾರಿ ತೋರುತ್ತೇವೆಂದು ಹೇಳಿರಿ. ಶತ್ರುಗಳೊಡನೆ ಸಂಧಿಯೇನೆಂದು ಶಂಕಿಸಬೇಡಿ. ಬುಟ್ಟಿಯೊಳಗಿರುವ ಸರ್ಪ ತಪ್ಪಿಸಿಕೊಳ್ಳಲು ರಂಧ್ರಕೊರೆಯಲು ಇಲಿಯೊಡನೆ ಸಂಧಿ  ಮಾಡಿಕೊಂಡಂತೆಯೇ ಇದೂ. ಅಮೃತ ಸಂಪಾದನೆಗೆ ಪ್ರಯತ್ನಿಸಿ ಆಗ ಅಮರರಾಗುವಿರಿ. ದೈತ್ಯರು ಆಗ ನಿಮ್ಮನ್ನೇನೂ ಮಾಡಲಾರರು. ಸರ್ವಮೂಲಿಕೆಗಳನ್ನು ಕ್ಷೀರಸಮುದ್ರಕ್ಕೆ ಹಾಕಿ ಮಂದರಗಿರಿಗೆ ವಾಸುಕಿಯನ್ನು ಸುತ್ತಿ ಕಡೆಯಿರಿ. ನಾನೂ ಸಹಾಯ ಮಾಡುತ್ತೇನೆ. ದಾನವರಿಗೆ ಪ್ರಯಾಸ, ನಿಮಗೆ ಅಮೃತಲಾಭ. ಸಮುದ್ರ ಮಂಥನದಲ್ಲಿ ಅನೇಕ ದಿವ್ಯವಸ್ತುಗಳು ಹುಟ್ಟುತ್ತವೆ. ಅದಕ್ಕೆ ಆಸೆಪಡಬೇಡಿ.

ಭಗವಂತನ ಮಾತು ಮುಗಿ ದೊಡನೆಯೇ   ಭಗವಂತ ಮಾಯವಾದ. ಎಲ್ಲವೂ ಮೊದಲಿನಂತಾಯಿತು. ಎಲ್ಲರೂ ನಮಸ್ಕರಿಸಿ ಹೊರಟರು. ಮುಂದಿನ ಅಂತರಿಕ್ಷಲೋಕದ ಅದ್ಭುತವೊಂದಕ್ಕೆ ವೇದಿಕೆ ಸಿದ್ಧವಾಯಿತು.

ಇಂದ್ರ ಇತರ ದೇವತೆಗಳೊಂದಿಗೆ ಕೂಡಲೇ ದಾನವೇಂದ್ರನಾದ ಬಲಿಚಕ್ರವರ್ತಿಯ ಬಳಿಗೆ ಹೋದರು. ನಿರಾಯುಧರಾಗಿ ಬಂದ ಅವನನ್ನು ಸಂದೇಹಿಸಿ ಅಸುರರು ಅವರ ಮೇಲೆ ಬೀಳಲು ಉದ್ಯುಕ್ತರಾದಾಗ ಬಲಿಯು ತಡೆದನು. ಸಂಧಿ  ವಿಗ್ರಹಗಳನ್ನೆಲ್ಲ ತಿಳಿದವನಲ್ಲವೇ ಅವನು?

ಸುರರು ಮೃದುಮಧುರವಾದ ಮಾತುಗಳಿಂದ ತಮ್ಮ ಸಂಧಿಯೋಜನೆಯನ್ನು ತಿಳಿಸಿದರು. ರಾಕ್ಷಸರಿಗೆ ಈ ಯೋಜನೆ ಹಿಡಿಸಿತು. ಅನ್ಯೋನ್ಯಮೈತ್ರಿಯಿಂದ ಅಮೃತವನ್ನು ಸಾಧಿಸಲು ಸಮ್ಮತಿಸಿದರು.

ಮೊಟ್ಟಮೊದಲ ಕಾರ್ಯ ಮಂದರಗಿರಿಯನ್ನು ಹೊತ್ತು ತರುವುದು. ರಾಕ್ಷಸರು ಅಬ್ಬರಮಾಡುತ್ತ ಹೊರಟು ಪರಾಕ್ರಮದಿಂದ ಮಂದರಗಿರಿಯನ್ನು ಕಿತ್ತು ಹೊತ್ತುಕೊಂಡು ಬ್ರಹ್ಮಾಂಡವೇ ಬಿರಿಯುವಂತೆ ಬೊಬ್ಬಿರಿಯುತ್ತಾ ಹೊರಟರು. ಮಂದರಗಿರಿಯ ಭಾರ ಸಾಮಾನ್ಯವಲ್ಲ. ದೈತ್ಯರೂ ಬಸವಳಿದರು. ಪರ್ವತವನ್ನು ಕೆಳಗೆ ಹಾಕಿದರು. ಅದರಡಿಸಿಕ್ಕ ದೇವದಾನವರು ಅನೇಕರು ಪುಡಿಪುಡಿಯಾದರು.

ಭಗವಂತ ಸರ್ವಾಂತರ್ಯ್ಮಿ ಪರಿಸ್ಥಿತಿಯನ್ನು ತಿಳಿದು ತಕ್ಷಣವೇ ಅಲ್ಲಿಗೆ ಗರುಡಾರೂಢನಾಗಿ ಬಂದನು ಅವನ್ನು ಲೀಲೆಯಿಂದ ಬೆಟ್ಟವನ್ನು ಗರುಡನ ಮೇಲಿಟ್ಟುಕೊಂಡು ಸಮುದ್ರಕ್ಕೆ ತೆರಳಿದ. ಅಲ್ಲಿ ಮಂದರಗಿರಿಯನ್ನು ಸಮುದ್ರದ ನಡುವಿನಲ್ಲಿ ಗರುಡನು ತೆಗೆದಿಟ್ಟು ಪ್ರಭುವಿನ ಅನುಮತಿ ಪಡೆದು ಮಾಯವಾದ.

ಭಗವಂತನದೇ ಆದ ಈ ಯೋಜನೆಯನ್ನು ಕಾರ್ಯಗತವಾಗುವಂತೆ ಮಾಡುವವನೂ ಅವನೇ. ಅವನು ಭಯಕೃತ್‌ ಹಾಗೂ ಭಯನಾಶನ.

ಯೋಜನೆಯ ಸಿದ್ಧತೆಯ ಘಟ್ಟವನ್ನು ದಾಟಿಸಿದ ಪರಾತ್ಪರ. ಈಗ ಉಳಿದಿರುವುದು ವಾಸುಕಿಯನ್ನು ತಂದು ಸಮುದ್ರ ಮಂಥನ ಮಾಡುವುದು.

ದೇವಾಸುರರೆಲ್ಲರೂ ವಾಸುಕಿಯನ್ನು ಒಪ್ಪಿಸಲು ಹೊರಟರು.   ಅಮೃತದಲ್ಲಿ   ಅವನಿಗೂ ಪಾಲುಕೊಡುತ್ತೇವೆಂದು ಹೇಳಿ ಒಪ್ಪಿಸಿ ಅವನನ್ನು ಕರೆತಂದು ಮಂದರಗಿರಿಗೆ ಸುತ್ತಿ ಸಾಗರವನ್ನು ಕಡೆಯಲು ಎಲ್ಲರೂ ಸಿದ್ಧರಾದರು. ಶ್ರೀಹರಿಯೇ ಸ್ವತಃ ವಾಸುಕಿಯ ತಲೆಯಬಳಿ ತುದಿಯಲ್ಲಿ ನಿಂತನು. ದೇವತೆಗಳೆಲ್ಲ ಅವನ ಕಡೆ ನಿಂತರು.

ಬಾಲದ   ಕಡೆ   ನಿಲ್ಲುವುದು   ಈಗ ಅಸುರರದ್ದಾಯಿತು. ಇದು ಅವರಿಗೆ ಹಿಡಿಸಲಿಲ್ಲ. ಪೂರ್ವದೇವತೆಗಳಾದ ತಾವು ಬಾಲ ಹಿಡಿಯುವುದೇ? ಅಮಂಗಳಕರವಾದ ಬಾಲವನ್ನು ತಾವು ಹಿಡಿಯುವುದಿಲ್ಲ ಎಂದು ಹೇಳಿ ಅವರು ಸುಮ್ಮನೆ ನಿಂತರು. ಇದನ್ನು ನೋಡಿ ಭಗವಂತನು ನಗುತ್ತಾ ಬಾಲದಕಡೆ ಬಂದು ಹಿಡಿದುಕೊಂಡನು. ದೇವತೆಗಳೂ ಬಾಲವನ್ನೇ ಹಿಡಿದರು. ರಾಕ್ಷಸರು ತಲೆಯ ಕಡೆ.

ಆ ಮಹಾಮಥನ ಆರಂಭವಾಯಿತು. ಆದರೆ ಮಂದರಗಿರಿ ಸಮುದ್ರದ ಮೇಲೆ ನಿರಾಧಾರವಾಗಿ ಹೇಗೆ   ನಿಲ್ಲಲು   ಸಾಧ್ಯ.   ಅದು ಮುಳುಗಿಹೋಯಿತು. ಎಲ್ಲರೂ ಭ್ರಮಿಸಿ ನಿಂತರು. ಈ ಮಹಾವಿಘ್ನವನ್ನು ಕಂಡು ದೇವದೇವನು ಕೂರ್ಮ ರೂಪ ಧರಿಸಿ ನೀರೊಳಗೆ ಮುಳುಗಿ ಬೆಟ್ಟವನ್ನು ಬೆನ್ನಲ್ಲಿ ಧರಿಸಿ ನಿಂತನು. ಅದು ಎಂತಹ ಮಹಾದ್ಭುತ ದೃಶ್ಯ.’

ಭಗವಂತನು ಸ್ವತಃ ದೇವದಾನವರೊಳಗೆ ಅವರವರ ಗುಣಗಳಾಗಿ ಹೊಕ್ಕು ಅವರ ಉತ್ಸಾಹವನ್ನು ಹೆಚ್ಚಿಸಿದನು. ಮಂಥನ ಪ್ರಾರಂಭವಾಯಿತು. ಆಗ ದೈತ್ಯರು ನಿರೀಕ್ಷಿಸದಿದ್ದ ಒಂದು ಘಟನೆ ಸಂಭವಿಸಿತು. ವಾಸುಕಿಯ ಬಾಯಿಂದ ವಿಷಾಗ್ನಿಜ್ವಾಲೆಗಳು ಹೊರಬಂದು ದೈತ್ಯರನ್ನು ದಹಿಸಿದುವು. ದೇವತೆಗಳೂ ದಣಿದರು. ಆಗ ಭಗವಂತನು ಸ್ವತಃ ತಾನೇ ಮಥಿಸತೊಡಗಿದನು. ಭಕ್ತರಕ್ಷಕ ಅವನು ನಂಬಿದವರನ್ನು ಕೈಬಿಡನು. ಸ್ವತಃ ವಿಭುಶಕ್ತಿಯೇ ಮಥಿಸತೊಡಗಿದಾಗ ಭಯಂಕರವಾದ ಹಾಲಾಹಲವು ಹೊರಹೊಮ್ಮಿತು. ಅದು ಲೋಕವನ್ನೇ ಧಗಿಸತೊಡಗಿತು. ಯಾವುದೇ ಮಥನದ ಮೊದಲ ಪರಿಣಾಮ ಹಾಲಾಹಲ!!

ಜಗತ್ತನ್ನೇ ದಹಿಸಲು   ಉಪಕ್ರಮಿಸಿದ ಹಾಲಾಹಲವನ್ನು ಕಂಡು ಜನರು ಲೋಕಪಾಲರೊಡಗೂಡಿ  ಈಶ್ವರನ ಬಳಿಗೋಡಿದರು. ಲಯಾಧಿಪತಿಯಾದ, ಮಹತತ್ತ್ವ ಸ್ವರೂಪನಾದ,  ಕಾಲಸ್ವರೂಪನಾದ, ಧರ್ಮಸ್ವರೂಪನಾದ ಸದಾಶಿವನು ದೀನರಾದ ಪ್ರಜೆಗಳ ಸಂಕಟವನ್ನು ನಿವಾರಿಸಲು ಆ ಭಯಂಕರವಾದ ಕಾಲಕೂಟವನ್ನು ಕುಡಿದುಬಿಟ್ಟನು. ಅದರಿಂದ ನೀಲಕಂಠನಾದನು. ಜಗತ್ತು ಒಂದು ಮಹಾವಿಪತ್ತಿನಿಂದ ಪಾರಾಯಿತು.

ಮತ್ತೆ ಮಂಥನ ಪ್ರಾರಂಭವಾಯಿತು. ಆಗ ಸಮುದ್ರದಿಂದ ಕಾಮಧೇನು ಹೊರಬಂದಿತು ಅದನ್ನು ಮಹರ್ಷಿಗಳು ಸ್ವೀಕರಿಸಿದರು. ಮತ್ತು ಉಚ್ಟೈಶ್ರವಸ್ಸು, ಐರಾವತ, ದಿಗ್ಗಜಗಳು, ಕೌಸ್ತುಭರತ್ನ-ಕಲ್ಪವೃಕ್ಷ, ಅಪ್ಸರೆಯರು, ನಂತರ ಲಕ್ಷ್ಮಿ, ನಾನುಣೀದೇವಿ…… ಎಲ್ಲರೂ,ಎಲ್ಲ ಶಕ್ತಿಗಳೂ ಜನಿಸಿದುವು.

ಆಗ ಇಂತಹ ಮಹಾಸಾಹಸದ ಫಲಿತವಾದ ಆ ಮಹಾಘಟನೆ ಸಂಭವಿಸಿತು. ಸಮುದ್ರಮಧ್ಯದಿಂದೊಬ್ಬ ಮಹಾಪುರುಷ ಮೇಲೆದ್ದನು. ಅವನ ಕೈಯಲ್ಲಿ ಅಮೃತಕಲಶವಿತ್ತು. ಆತನೇ ಧನ್ವಂತರಿ.

ಆತ ಹೊರಬಂದೊಡನೆಯೇ ಅಸುರರು ಅವನ ಕೈಯಿಂದ ಅಮೃತಕಲಶವನ್ನು ಕಿತ್ತುಕೊಂಡು ಹೋದರು. ಸುರರು ಅವರ ಬೆನ್ನಟ್ಟಲಾರದೆ ಶ್ರೀಹರಿಯ ಮೊರೆಹೊಕ್ಕರು. ಭಕ್ತಾರ್ತಿಛಂದನನಾದ ಹರಿಯು ತನ್ನ ಮಾಯೆಯಿಂದ ಅವರಿಗೆ ಅಮೃತವನ್ನು ಸಾಧಿಸಿಕೊಡುವೆನೆಂದು ಹೇಳಿ ಅಂತರ್ಧಾನ ಹೊಂದಿದನು.

ಇತ್ತ ಅಮೃತವನ್ನು ಕುಡಿಯಲು ದಾನವರೊಳಗೆ ಸ್ಪರ್ಧೆ ಪ್ರಾರಂಭವಾಗಿತ್ತು. ಆಗ ಹರಿಯು ಪರಮಾದ್ಭುತವಾದ ಸ್ತ್ರೀರೂಪಧರಿಸಿ ಮೋಹಿನೀ ರೂಪದಲ್ಲಿ ದಾನವರ ನಡುವೆ ಪ್ರತ್ಯಕ್ಷನಾದನು. ಲೋಕೋತ್ತರ ಸೌಂದರ್ಯವನ್ನು ಹೊಂದಿದ್ದ ಮೋಹಿನಿಯನ್ನು ನೋಡಿ ದಾನವರು ಪರವಶರಾದರು. ಅವಳ ಲಾವಣ್ಯ, ಶ್ಯಾಮಲ ಮೈಬಣ್ಣ, ದರ್ಪಣದಂತಹ ಕೆನ್ನೆಗಳು, ಮೋಹಕವಾಗಿದ್ದುವು. ಅವಳು ತನ್ನ ಲಜ್ಜಾಯುಕ್ತ ಮಂದಸ್ಮಿತದಿಂದಲೂ, ಭ್ರೂವಿಲಾಸದಿಂದಲೂ, ಬೆಡಗಿನ ನೋಟಗಳಿಂದಲೂ ದಾನವರ ಮನಸ್ಸನ್ನು ಸೂರೆಗೊಳ್ಳುತ್ತ ಅತ್ತಿತ್ತ ಸುಳಿದಾಡಿದಳು.

ದಾನವರು ತಮ್ಮನ್ನು ತಾವು ಮರೆತರು. ಕಾಮವು ಅವರನ್ನು ಆವರಿಸಿಕೊಂಡಿತು. ನೀನಾರು, ನೀನು ಬಂದ ಕಾರ್ಯವೇನು ಎಂದು ಅವಳನ್ನು ಕೇಳುತ್ತಾ ಅವಳ ಸುತ್ತ ಸುತ್ತಿದ ಅಸುರರು ಈ ಅಮೃತವನ್ನು ಹೇಗೆ ಹಂಚುವುದೆಂಬುದು ನಮಗೆ ಗೊತ್ತಿಲ್ಲ. ನಮ್ಮೊಳಗೆ ಕಲಹವೇ ಆಗಿಬಿಡುತ್ತದೆ. ನೀನೇ ಹಂಚಿಬಿಡು ಎನ್ನುತ್ತಾ ಅವಳ ಕುಡಿಮಿಂಚಿನ ಕಟಾಕ್ಷಕ್ಕಾಗಿ ಹಾತೊರೆಯುತ್ತ ಕಲಶವನ್ನು ಆಕೆಗೆ ಒಪ್ಪಿಸಿದರು.

ಈ ಕಾಮಚೇಷ್ಟಿತರ ಅಜ್ಞಾನಾಂಧಕಾರವನ್ನು ನೋಡಿ ಮೋಹಿನಿಯು ಕಿರುನಗೆ ಬೀರುತ್ತಾ ಸವಿನುಡಿಗಳಿಂದ ಅವರಿಗೆ ಹೇಳಿದಳು. `ನಾನು ಮಾಡುವುದು ಒಳ್ಳೆಯದಾಗಲಿ, ಕೆಟ್ಟದ್ದಾಗಲಿ, ನೀವೆಲ್ಲರೂ ಒಪ್ಪಿಕೊಂಡರೆ ನಾನು ಹಂಚುತ್ತೇನೆ’ ಎಂದಳು. ಕಾಮಮೋಹಿತರಾಗಿದ್ದ ದೈತ್ಯರು ಒಪ್ಪಿದರು.

ಆಕೆಯ    ಮಾತಿನಂತೆ    ಎಲ್ಲರೂ ಮಂಗಳಸ್ನಾನಮಾಡಿ ಹೋಮಾದಿಗಳನ್ನು ಆಚರಿಸಿ ದರ್ಭಾಸನಗಳಲ್ಲಿ ಕುಳಿತಳು. ಕಲಶವನ್ನು ಹೊತ್ತು ತಂದ ಮೋಹಿನಿಯು ದೇವದಾನವರನ್ನು ಬೇರೆ ಬೇರೆ ಪಂಕ್ತಿಗಳಲ್ಲಿ ಕುಳ್ಳಿರಿಸಿದಳು. ದೈತ್ಯರನ್ನು ಸವಿನುಡಿಗಳಿಂದ ಮೋಹಗೊಳಿಸುತ್ತಾ ಸುರರಿಗೆ ಮಾತ್ರ ಅಮೃತವನ್ನು ಹಂಚಿದಳು. ದೈತ್ಯರು ಅವಳ ಹಾವಭಾವಗಳನ್ನು ನೋಡುತ್ತ ತಮ್ಮ ಸರದಿಯೂ ಬರುವುದೆಂದು ಕಾಯುತ್ತಿದ್ದರು.

ಅಷ್ಟರೊಳಗೆ ಸ್ವರ್ಭಾನುವೆಂಬ ದೈತ್ಯ ಇದನ್ನೆಲ್ಲ ಗಮನಿಸಿ ಶಂಕಿಸಿ, ದೇವರೂಪವನ್ನು ಧರಿಸಿ ದೇವತೆಗಳ ನಡುವೆ ಕುಳಿತ. ಅವರೊಡನೆ ಅಮೃತಕುಡಿದ. ಲೋಕವನ್ನೇ ಗಮನಿಸುವ ಸೂರ್ಯಚಂದ್ರರು ಇದನ್ನು ಗಮನಿಸಿ ಮೋಹಿನಿಗೆ ಹೇಳಿದರು. ಶ್ರೀಹರಿಯು ತಕ್ಷಣ ತನ್ನ ಚಕ್ರಾಯುಧದಿಂದ ಅವನ ತಲೆಯನ್ನು ಕತ್ತರಿಸಿದನು. ಅಮೃತವು ಶರೀರಕ್ಕೆ ಇಳಿದಿರಲಿಲ್ಲವಾದ್ದರಿಂದ ಶರೀರ ಬಿದ್ದುಹೋಯಿತು. ತಲೆಯು ಮಾತ್ರ ಅಮರತ್ವ ಪಡೆಯಿತು. ಬ್ರಹ್ಮ ಆ ತಲೆಯನ್ನು ಒಂದು ಗ್ರಹವಾಗಿ ಮಾಡಿದನು.

ದೇವತೆಗಳೆಲ್ಲರೂ ಅಮೃತ ಕುಡಿದು ಮುಗಿದಿದುದರಿಂದ ಮೋಹಿನಿಯ ರೂಪಬಿಟ್ಟು ತನ್ನ ರೂಪವನ್ನು ಶ್ರೀಹರಿಯು ಧರಿಸಿದನು. ಹರಿಯನ್ನು ನಂಬಿದ ದೇವತೆಗಳು ಜರಾಮರಣರಹಿತರಾದರು. ಭಗವಂತನನ್ನು ನಂಬದ ಆಸುರೀ ಶಕ್ತಿಗಳು ಪರಾಸ್ತವಾದುವು.

ಮುಂದೆ ನಡೆದ ದೇವಾಸುರರ ಯುದ್ಧದಲ್ಲಿ ದೇವತೆಗಳು ವಿಜಯಿಗಳಾದರು. ದೈತ್ಯಶಕ್ತಿ ಸೋತಿತು. ಭಗವಂತನಲ್ಲಿ ಭಕ್ತಿಯಿದ್ದರೆ ಅವನು ದೈವೀಶಕ್ತಿಯನ್ನು ಜಾಗೃತಗೊಳಿಸಿ ಉದ್ಧಾರ ಮಾಡುತ್ತಾನೆ.

ಭಗವಂತನ ದೈವೀಶಕ್ತಿಯ ಆವಿರ್ಭವವಾಗುವುದೂ ದುಷ್ಟಶಕ್ತಿಗಳು ಮೇಲುಗೈ ಸಾಧಿಸಿ ಲೋಕಕಂಟಕವಾದಾಗ ಸಾತಿ್ತ್ವಕ ಶಕ್ತಿಗಳನ್ನು ಉಳಿಸಲು ಆ ವಿಶ್ವಶಕ್ತಿಯ ಆವಿರ್ಭಾವವಾಗುತ್ತದೆ. ಈ   ಆವಿರ್ಭಾವದ    ಹಿಂದೆ    ಒಂದು ಮಹಾಮಂಥನವಾಗುತ್ತದೆ. ಅದರಿಂದ ಕಾಲಕೂಟ ಉದ್ಭವಿಸುತ್ತದೆ. ನಂತರ ಅಮೃತೋದ್ಭವ. ಅದು ಸಾತಿ್ತ್ವಕ ಶಕ್ತಿಗಳ ಕೈಸೇರುವಂತೆ ಲೀಲಾಮಯನಾದ ಪ್ರಭುವು ಮಾಡುತ್ತಾನೆ.

ಅವನು ಸೃಷ್ಟಿಸುವ ಈ ಎಲ್ಲ ಸಂಭವಗಳಲ್ಲೂ ಭೌತಿಕ ಹಾಗೂ ದೈವೀ ಆಯಾಮಗಳಿರುತ್ತವೆ. ಎಲ್ಲ ಆಯಾಮಗಳಲ್ಲೂ ಅವನೇ ಅಂತರ್ಯ್ಮಿಯಲ್ಲವೇ? ಅವನಲ್ಲಿ ಭಕ್ತಿಯಿರಬೇಕು. ಆಗ ಅವನೇ ಎಲ್ಲ ಜೀವಿಗಳನ್ನೂ ಮೃತ್ಯುವಿನಿಂದ ಅಮೃತದ ಕಡೆ ಒಯ್ಯುತ್ತಾನೆ. ಅವನನ್ನು ನಂಬಿದವರಿಗೆ ಭಕ್ತಿಯಿಂದ ಮುಕ್ತಿ ದೊರೆಯುತ್ತದೆ. ತಮಸ್ಸಿನಿಂದ ಅಂತಹವರು ಜ್ಯೋತಿಯ ಕಡೆಗೆ ನಡೆಯುತ್ತಾರೆ.

“ಮೃತ್ಯೋರ್ಮಾ ಅಮೃತಂಗಮಯ”

ಈ ಲೇಖನ ಶೇರ್ ಮಾಡಿ

ಹೊಸ ಪೋಸ್ಟ್‌ಗಳು