ಸೇವೆ ಅಥವಾ ಗುಲಾಮಗಿರಿ – ಆಯ್ಕೆ ನಿಮ್ಮದು

ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘದ ಸಂಸ್ಥಾಪಕರು ಮತ್ತು ಆಚಾರ್ಯರಾದ
ಶ್ರೀ ಶ್ರೀಮದ್‌ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು
1968ರ ಸೆಪ್ಟೆಂಬರ್‌ನಲ್ಲಿ ಸಿಯೆಟಲ್‌ನ ಹರೇಕೃಷ್ಣ ಕೇಂದ್ರದಲ್ಲಿ ನೀಡಿದ ಉಪನ್ಯಾಸ

ಈ ಲೌಕಿಕ ಜಗತ್ತಿನಲ್ಲಿ ಪ್ರತಿಯೊಬ್ಬರೂ ಸಂತೋಷವನ್ನು ಹುಡುಕಿ, ದುಃಖಗಳಿಂದ ಮುಕ್ತಿ ಪಡೆಯುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ. ನಮ್ಮ ಪ್ರಾಪಂಚಿಕ ಸ್ಥಿತಿಯಿಂದಾಗಿ ಮೂರು ತರಹದ ದುಃಖಗಳು ಉಂಟಾಗುತ್ತವೆ: ಅಧ್ಯಾತ್ಮಿಕ, ಅಧಿಭೌತಿಕ ಮತ್ತು ಅಧಿದೈವಿಕ. ಶರೀರ ಮತ್ತು ಮನಸ್ಸಿನಿಂದುಂಟಾಗುವ ದುಃಖಗಳನ್ನು ಅಧ್ಯಾತ್ಮಿಕ ದುಃಖಗಳೆನ್ನುತ್ತಾರೆ. ಉದಾಹರಣೆಗಾಗಿ, ಶರೀರದ ಚಯಾಪಚಯದ ವಿವಿಧ ಕ್ರಿಯೆಗಳಲ್ಲಿ ಏನಾದರೂ ವ್ಯತ್ಯಾಸವುಂಟಾದರೆ, ನಮಗೆ ಜ್ವರ ಬರುತ್ತದೆ ಅಥವಾ ನೋವುಂಟಾಗುತ್ತದೆ. ಇನ್ನೊಂದು ಪ್ರಕಾರದ ಅಧ್ಯಾತ್ಮಿಕ ದುಃಖವುಂಟಾಗುವುದು ಮನಸ್ಸಿನಿಂದ. ನಮಗೆ ಪ್ರಿಯರಾದವರನ್ನು ನಾವು ಕಳೆದುಕೊಂಡಾಗ, ನಮ್ಮ ಮನಸ್ಸು ನೆಮ್ಮದಿಗೆಡುವುದು. ಇದೂ ಕೂಡ ಕಟುವೇದನೆಯಾಗಿದೆ. ಹೀಗಾಗಿ ಶರೀರದ ರೋಗಗಳು ಅಥವಾ ಮಾನಸಿಕ ವ್ಯಾಕುಲತೆಗಳು ಅಧ್ಯಾತ್ಮಿಕ ದುಃಖಗಳೆನಿಸುತ್ತವೆ.

ಇನ್ನು ಅಧಿಭೌತಿಕ ದುಃಖಗಳ ಬಗ್ಗೆ ಹೇಳುವುದಾದರೆ, ಇತರ ಜೀವಾತ್ಮಗಳಿಂದುಂಟಾದ ವೇದನೆಗಳನ್ನು ಅಧಿಭೌತಿಕ ದುಃಖಗಳೆನ್ನುತ್ತಾರೆ. ಉದಾಹರಣೆಗಾಗಿ, ಮನುಷ್ಯರು ಪ್ರತಿನಿತ್ಯ ಲಕ್ಷಾಂತರ ಮುಗ್ಧ ಪ್ರಾಣಿಗಳನ್ನು ಕಸಾಯಿಖಾನೆಗೆ ಕಳುಹಿಸುತ್ತಿದ್ದಾರೆ. ಆ ಪ್ರಾಣಿಗಳಿಗೆ ತಮ್ಮ ದುಃಖವನ್ನು ತೋಡಿಕೊಳ್ಳಲಾಗದು; ಆದರೆ ಅವುಗಳು ಅನುಭವಿಸುತ್ತಿರುವ ವೇದನೆ ಅಪಾರ. ಅಲ್ಲದೇ ನಾವೂ ಸಹ ಇತರ ಜೀವಾತ್ಮಗಳುಂಟುಮಾಡುವ ದುಃಖಗಳಿಂದ ವೇದನೆಯನ್ನನುಭವಿಸುತ್ತೇವೆ.

ಕೊನೆಯಲ್ಲಿ, ಅಧಿದೈವಿಕ ದುಃಖಗಳಿವೆ. ದೇವತೆಗಳು ಈ ಪ್ರಕಾರದ ದುಃಖಗಳನ್ನು ಉಂಟುಮಾಡುತ್ತಾರೆ. ಇವರು ನೀಡುವ ಸಮಸ್ಯೆಗಳು ಕ್ಷಾಮ, ಭೂಕಂಪ, ಪ್ರವಾಹ, ಮಾರಕಬೇನೆ – ಇನ್ನೂ ಅನೇಕ ಸಮಸ್ಯೆಗಳು. ಇವು ಅಧಿದೈವಿಕ ವೇದನೆಗಳು.

ನಾವು ಸದಾ ಇವುಗಳಲ್ಲಿ ಒಂದಲ್ಲ ಒಂದು ದುಃಖಕ್ಕೆ ಸಿಲುಕಿ ಸಂಕಟಪಡುತ್ತಿದ್ದೇವೆ. ಈ ಭೌತಿಕ ಪ್ರಕೃತಿಯು ನಮ್ಮನ್ನು ಸಂಕಟಕ್ಕೊಳಪಡಿಸಲೆಂದೇ ರಚಿಸಲಾಗಿದೆ. ಅದು ಭಗವಂತನ ನಿಯಮ. ನಾವು ಈ ಯಾತನೆಯಿಂದ ಪಾರಾಗಲು ತೇಪೆಗಾರಿಕೆಯ ಉಪಾಯಗಳನ್ನು ಬಳಸುತ್ತಿದ್ದೇವೆ. ಪ್ರತಿಯೊಬ್ಬರೂ ವೇದನೆಯಿಂದ ಮುಕ್ತರಾಗಲು ಪ್ರಯತ್ನಿಸುತ್ತಿದ್ದಾರೆ. ಅದು ಸತ್ಯ. ಅಸ್ತಿತ್ವಕ್ಕಾಗಿ ನಡೆದಿರುವ ಇಡೀ ಹೋರಾಟದ ಮುಖ್ಯ ಗುರಿಯೇ ಈ ಯಾತನೆಯಿಂದ ಮುಕ್ತಿ ಹೊಂದುವುದು.

ಲಭ್ಯವಿರುವ ಅನೇಕ ಉಪಾಯಗಳನ್ನು ಬಳಸಿಕೊಂಡು ನಮ್ಮ ಯಾತನೆಗಳನ್ನು ಶಮನ ಮಾಡಲು ಪ್ರಯತ್ನಿಸುತ್ತೇವೆ. ಆಧುನಿಕ ವಿಜ್ಞಾನಿಗಳು ಒಂದು, ತತ್ತ್ವಜ್ಞಾನಿಗಳು ಒಂದು, ನಾಸ್ತಿಕರು ಒಂದು, ಆಸ್ತಿಕರು ಒಂದು, ಕರ್ಮಿಗಳು ಒಂದು – ಹೀಗೆ ಒಬ್ಬೊಬ್ಬರು ಒಂದೊಂದು ವಿಚಾರ ನೀಡುತ್ತಾರೆ. ಅನೇಕ ವಿಚಾರಗಳು ಅಸ್ತಿತ್ವದಲ್ಲಿವೆ. ಆದರೆ ಕೃಷ್ಣಪ್ರಜ್ಞೆಯ ತತ್ತ್ವದ ಪ್ರಕಾರ, ನೀವು ನಿಮ್ಮ ಪ್ರಜ್ಞೆಯನ್ನು ಕೃಷ್ಣಪ್ರಜ್ಞೆಗೆ ತಿರುಗಿಸಿದರೆ ಸಾಕು, ನಿಮ್ಮ ಎಲ್ಲ ವೇದನೆಗಳಿಂದಲೂ ಮುಕ್ತರಾಗಬಲ್ಲಿರಿ. ಅಷ್ಟೆ.

ನಮ್ಮ ಎಲ್ಲ ವೇದನೆಗಳಿಗೆ ಕಾರಣ ಅಜ್ಞಾನ. ನಾವು ಕೃಷ್ಣನ ಶಾಶ್ವತ ಸೇವಕರೆಂಬುದನ್ನು ಮರೆತುಬಿಟ್ಟಿದ್ದೇವೆ. ಒಂದು ಸುಂದರವಾದ ಬಂಗಾಳಿ ಪದ್ಯವು ಈ ಅಂಶವನ್ನು ವಿವರಿಸುತ್ತದೆ:

ಕೃಷ್ಣ ಬಹಿರ್ಮುಖ ಹೈಯಾ ಭೋಗ ವಾಂಛಾ ಕರೇ

ನಿಕಟಸ್ಥ ಮಾಯಾ ತಾರೇ ಜಾಪಟಿಯಾ ಧರೇ

ನಮ್ಮ ಲೌಕಿಕ ಸುಖಾನುಭವ ಅಂದರೆ ಭೌತವಸ್ತುವಿನ ಮೂಲಗಳ ಮೇಲೆ ಹಕ್ಕು ಚಲಾಯಿಸುವ ಪ್ರವೃತ್ತಿಯಿಂದಾಗಿ ನಮ್ಮೊಳಗಿನ ಕೃಷ್ಣಪ್ರಜ್ಞೆಯು ಕಲುಷಿತಗೊಂಡಂದು ನಮ್ಮ ತೊಂದರೆಗಳು ಪ್ರಾರಂಭವಾಗುತ್ತವೆ. ತತ್‌ಕ್ಷಣವೇ ನಾವು ಮಾಯೆಯಲ್ಲಿ ಬೀಳುತ್ತೇವೆ. “ನಾನು ಎಷ್ಟು ಸಾಧ್ಯವೋ ಅಷ್ಟು ಈ ಜಗತ್ತನ್ನು ಆನಂದಿಸಬಲ್ಲೆ” ಎಂದು ಲೌಕಿಕ ಜಗತ್ತಿನಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯೂ ಯೋಚಿಸುತ್ತಿದ್ದಾನೆ. ಒಂದು ಚಿಕ್ಕ ಇರುವೆಯಿಂದ ಹಿಡಿದು ಅತ್ಯುನ್ನತ ಜೀವಾತ್ಮನಾದ ಬ್ರಹ್ಮನವರೆಗೆ ಪ್ರತಿಯೊಬ್ಬನೂ ದೇವರಾಗಲು ಪ್ರಯತ್ನಿಸುತ್ತಿದ್ದಾನೆ. ನಿಮ್ಮ ದೇಶದಲ್ಲಿ ಅನೇಕ ರಾಜಕಾರಣಿಗಳು ಅಧ್ಯಕ್ಷರಾಗಲು ಪ್ರಚಾರ ನಡೆಸಿದ್ದಾರೆ. ಏಕೆ? ಅವರು ಏನೋ ಒಂದು ಪ್ರಕಾರದ ದೇವರಾಗಲು ಬಯಸುತ್ತಿದ್ದಾರೆ. ಇದನ್ನೇ ಭ್ರಮೆ ಅನ್ನೋದು.

ಕೃಷ್ಣಪ್ರಜ್ಞೆಯಲ್ಲಿ ನಮ್ಮ ಪ್ರವೃತ್ತಿಯು ಇದಕ್ಕೆಲ್ಲ ತದ್ವಿರುದ್ಧವಾಗಿದೆ. ನಾವು ಕೃಷ್ಣನ ಸೇವಕನ ಸೇವಕನ ಸೇವಕನ ಸೇವಕರಾಗಲು ಪ್ರಯತ್ನಿಸುತ್ತಿದ್ದೇವೆ (ಗೋಪಿ ಭರ್ತುಃ ಪದಕಮಲಯೋರ್‌ ದಾಸ ದಾಸಾನುದಾಸಃ). ದೇವರಾಗುವ ಬದಲು ನಾವು ಕೃಷ್ಣನ ಸೇವಕರಾಗಲು ಬಯಸುತ್ತೇವೆ.

ಈಗ, ಜನರು ಇದನ್ನು ಗುಲಾಮ ಪ್ರವೃತ್ತಿ ಎನ್ನಬಹುದು: “ನಾನೇಕೆ ಗುಲಾಮನಾಗಬೇಕು? ನಾನು ಒಡೆಯನಾಗುವೆ.” ಈ ಪ್ರವೃತ್ತಿಯೇ ಅವರ ಎಲ್ಲ ವೇದನೆಗೂ ಕಾರಣ. ಇದನ್ನು ಅರಿತುಕೊಳ್ಳಬೇಕು. ಈ ಲೌಕಿಕ ಜಗತ್ತಿನ ಒಡೆಯರಾಗುವ ಪ್ರಯತ್ನದಲ್ಲಿ ನಾವು ನಮ್ಮ ಇಂದ್ರಿಯಗಳ ಗುಲಾಮರಾಗಿದ್ದೇವೆ.

ನಾವು ಸೇವೆ ಸಲ್ಲಿಸುವುದನ್ನು ತಪ್ಪಿಸಲು ಸಾಧ್ಯವಿಲ್ಲ ಈ ಸಭೆಯಲ್ಲಿ ಕುಳಿತಿರುವ ಪ್ರತಿಯೊಬ್ಬರೂ ಸೇವಕರೆ. ಕೃಷ್ಣಪ್ರಜ್ಞೆಯನ್ನು ಸ್ವೀಕರಿಸಿರುವ ಈ ಹುಡುಗ-ಹುಡುಗಿಯರು ಕೃಷ್ಣನ ಸೇವಕರಾಗಲು ಒಪ್ಪಿಕೊಂಡಿದ್ದಾರೆ. ಹಾಗಾಗಿ ಅವರ ಸಮಸ್ಯೆ ಬಗೆಹರಿದಿದೆ. ಆದರೆ ಇತರರು ಯೋಚಿಸುತ್ತಿದ್ದಾರೆ, “ನಾನು ಭಗವಂತನ ಗುಲಾಮ ಏಕೆ ಆಗಬೇಕು? ನಾನು ಒಡೆಯನಾಗುವೆ.” ನಿಜವಾಗಿಯೂ, ಒಡೆಯನಾಗುವುದು ಯಾರಿಂದಲೂ ಸಾಧ್ಯವಿಲ್ಲ. ಹಾಗೊಂದು ವೇಳೆ ಯಾರಾದರೂ ಒಡೆಯನಾಗಲು ಪ್ರಯತ್ನಿಸಿದರೆ, ಅವರು ತಮ್ಮ ಇಂದ್ರಿಯಗಳ ಗುಲಾಮರಾಗಿಬಿಡುತ್ತಾರೆ, ಅಷ್ಟೆ. ಅಂಥವನು ತನ್ನ ಕಾಮ, ಕ್ರೋಧ, ಲೋಭ – ಹೀಗೇ ಇನ್ನೂ ಅನೇಕ ದುಷ್ಟ ಭಾವನೆಗಳ ಗುಲಾಮನಾಗುತ್ತಾನೆ.

ಉನ್ನತ ಹಂತದಲ್ಲಿ, ಒಬ್ಬ ವ್ಯಕ್ತಿಯು ಮಾನವೀಯತೆಯ, ಸಮಾಜದ ಮತ್ತು ತನ್ನ ದೇಶದ ಸೇವಕನಾಗುತ್ತಾನೆ. ಆದರೆ ಒಡೆಯನಾಗುವುದೇ ಮುಖ್ಯ ಉದ್ದೇಶವಾಗಿದೆ. ಅದೊಂದು ರೋಗ. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳು ಬೇರೆ ಬೇರೆ ಪ್ರಣಾಳಿಕೆಗಳನ್ನು ಪ್ರಸ್ತುತಪಡಿಸುತ್ತಾರೆ: “ನಾನು ಬಹಳ ಉತ್ತಮ ರೀತಿಯಲ್ಲಿ ದೇಶವನ್ನು ಸೇವಿಸುವೆ. ದಯವಿಟ್ಟು ನಿಮ್ಮ ಮತ ನನಗೇ ಹಾಕಿ.” ಆದರೆ ಹೇಗಾದರೂ ಮಾಡಿ ರಾಷ್ಟ್ರದ ಒಡೆಯರಾಗುವುದು ಅವರ ಉದ್ದೇಶ. ಇದೊಂದು ಭ್ರಮೆ. 

ತತ್ತ್ವದ ಈ ಪ್ರಮುಖ ಅಂಶವನ್ನು ನಾವು ಅರಿತುಕೊಳ್ಳಬೇಕು. ಮೂಲಭೂತವಾಗಿ ನಾವೆಲ್ಲರೂ ಸೇವಕರು. “ನಾನು ಸ್ವತಂತ್ರ. ನಾನೇ ಒಡೆಯ” ಎಂದು ಯಾರೂ ಹೇಳಲಾಗದು. ಯಾರಾದರೂ ಹಾಗೆ ಯೋಚಿಸುತ್ತಿದ್ದರೆ, ಅವರು ಭ್ರಮೆಯಲ್ಲಿದ್ದಂತೆಯೇ. ಈ ಸಭೆಯಲ್ಲಿ ನೆರೆದಿರುವಂಥವರಲ್ಲಿ ಒಬ್ಬರಾದರೂ ನಾನು ಇವನ ಅಥವಾ ಇದರ ಸೇವಕನಲ್ಲ ಎಂದು ಹೇಳಬಲ್ಲಿರಾ? ಇಲ್ಲ. ಏಕೆಂದರೆ ನಮ್ಮ ಮೂಲಭೂತ ಸ್ಥಿತಿಯೇ ಸೇವೆ ಮಾಡುವುದಾಗಿದೆ.

ನಾವು ಕೃಷ್ಣನನ್ನು ಸೇವಿಸಬಹುದು ಅಥವಾ ನಮ್ಮ ಇಂದ್ರಿಯಗಳನ್ನು ಸೇವಿಸಬಹುದು. ಆದರೆ ಇಲ್ಲಿ ಉದ್ಭವಿಸುವ ಸಮಸ್ಯೆಯೆಂದರೆ, ನಾವು ನಮ್ಮ ಇಂದ್ರಿಯಗಳನ್ನು ಸೇವಿಸಿದರೆ, ನಮ್ಮ ದುಃಖ ಜಾಸ್ತಿಯಾಗುತ್ತದೆ. ನೀವು ಯಾವುದೋ ಮಾದಕ ದ್ರವ್ಯವನ್ನು ಸೇವಿಸುವ ಮೂಲಕ ತಾತ್ಕಾಲಿಕವಾಗಿ ತೃಪ್ತಿ ಹೊಂದಬಹುದು. ಅಲ್ಲದೇ ಆ ಮಾದಕ ದ್ರವ್ಯದ ಅಮಲಿನಲ್ಲಿ ನೀವು ಯಾರ ಸೇವಕರೂ ಅಲ್ಲ, ನೀವು ಸ್ವತಂತ್ರರೆಂದು ಯೋಚಿಸಬಹುದು. ಆದರೆ ಈ ವಿಚಾರವು ಕೃತಕವಾದುದಾಗಿದೆ. ಈ ಭ್ರಮೆಯ ಆವರಣವು ಒಮ್ಮೆ ನಿಮ್ಮ ಕಣ್ಣುಗಳಿಂದ ಸರಿದು ಹೋಯಿತೆಂದರೆ, ಮತ್ತೆ ನೀವು ಸೇವಕರೆಂದು ಕಾಣುತ್ತೀರಿ.

ಅಂದರೆ ನಾವು ಸೇವೆಸಲ್ಲಿಸುವಂತೆ ನಮ್ಮನ್ನು ಒತ್ತಾಯಪಡಿಸಲಾಗುತ್ತಿದೆ; ಆದರೆ ನಾವು ಸೇವಿಸಲು ಬಯಸುವುದಿಲ್ಲ. ಇದಕ್ಕೆ ಪರಿಹಾರವೇನು? ಕೃಷ್ಣಪ್ರಜ್ಞೆ. ನೀವು ಕೃಷ್ಣನ ಸೇವಕರಾದರೆ, ಒಡೆಯರಾಗಬೇಕೆಂಬ ನಿಮ್ಮ ಆಸೆಯು ತತ್‌ಕ್ಷಣ ಈಡೇರುತ್ತದೆ. ಉದಾಹರಣೆಗಾಗಿ, ಇಲ್ಲಿ ನಾವು ಕೃಷ್ಣ ಮತ್ತು ಅರ್ಜುನರ ಚಿತ್ರವನ್ನು ನೋಡಬಹುದು (ಗೋಡೆಯ ಮೇಲಿರುವ ಕುರುಕ್ಷೇತ್ರದ ರಣರಂಗದಲ್ಲಿ ಕೃಷ್ಣ ಮತ್ತು ಅರ್ಜುನರ ಚಿತ್ರದ ಕಡೆಗೆ ಶ್ರೀಲ ಪ್ರಭುಪಾದರು ಬೆರಳಿಟ್ಟು ತೋರಿಸುತ್ತಾರೆ).

ಕೃಷ್ಣನು ಪರಮಾತ್ಮ ಮತ್ತು ಅರ್ಜುನ ಜೀವಾತ್ಮ. ಆದರೆ ಅರ್ಜುನನು ಕೃಷ್ಣನನ್ನು ಸ್ನೇಹಿತನಂತೆ ಪ್ರೀತಿಸುತ್ತಾನೆ. ಅದಕ್ಕೆ ಪ್ರತಿಫಲವಾಗಿ ಕೃಷ್ಣನು ಅರ್ಜುನನ ರಥದ ಸಾರಥಿಯಾಗಿದ್ದಾನೆ, ಅವನ ಸೇವಕನಾಗಿದ್ದಾನೆ. ಅದೇ ರೀತಿ, ನಾವು ಕೃಷ್ಣಪ್ರೇಮವನ್ನು ನಮ್ಮಲ್ಲಿ ಮತ್ತೆ ಬರುವಂತೆ ಮಾಡಿದರೆ, ನಮ್ಮ ಒಡೆತನದ ಕನಸು ನನಸಾಗುವುದು. ನೀವು ಕೃಷ್ಣನನ್ನು ಸೇವಿಸಲು ಒಪ್ಪಿದರೆ, ಕಾಲಕ್ರಮೇಣ ಕೃಷ್ಣನು ಕೂಡ ನಿಮ್ಮನ್ನು ಸೇವಿಸುವುದನ್ನು ಕಾಣುತ್ತೀರಿ. ಇದು ಸಾಕ್ಷಾತ್ಕಾರದ ಪ್ರಶ್ನೆ. ಆದ್ದರಿಂದ, ನಾವು ಈ ಲೌಕಿಕ ಜಗತ್ತಿನ ಸೇವೆಯಿಂದ, ನಮ್ಮ ಇಂದ್ರಿಯಗಳ ಸೇವೆಯಿಂದ ನಮ್ಮನ್ನು ಮುಕ್ತವಾಗಿಸಿಕೊಳ್ಳಬೇಕೆಂದು ಬಯಸಿದಲ್ಲಿ, ನಮ್ಮ ಸಕಲ ಸೇವೆಯನ್ನೂ ಕೃಷ್ಣನೆಡೆಗೆ ಹರಿಸಬೇಕು. ಇದು ಕೃಷ್ಣಪ್ರಜ್ಞೆ.

ಶ್ರೀಲ ರೂಪ ಗೋಸ್ವಾಮಿಗಳು ತಮ್ಮ `ಭಕ್ತಿ ರಸಾಮೃತ ಸಿಂಧು’ವಿನಲ್ಲಿ ಇಂದ್ರಿಯ ಸೇವೆಗೆ ಸಂಬಂಧಿಸಿದ ಉತ್ತಮವಾದ ಶ್ಲೋಕವೊಂದನ್ನು ಹೇಳುತ್ತಾರೆ: ಕಾಮಾದಿನಾಂ ಕತಿ ನ ಕತಿಧಾ ಪಾಲಿತಾ ದುರ್ನಿದೇಶಾ. ಇಲ್ಲಿ ಒಬ್ಬ ಭಕ್ತನು ತನ್ನ ಇಂದ್ರಿಯಗಳನ್ನು ಬಹುಕಾಲದಿಂದ ಸೇವಿಸಿರುವುದಾಗಿ (ಕಾಮಾದಿನಾಂ ಕತಿ ನ ಕತಿಧಾ) ಕೃಷ್ಣನಿಗೆ ಹೇಳುತ್ತಿದ್ದಾನೆ. ಅವನು ಹೇಳುತ್ತಾನೆ, “ನನ್ನ ಕಾಮದ ನಿರಂಕುಶಾಜ್ಞೆಯಿಂದಾಗಿ ಮಾಡಬಾರದ್ದನ್ನೆಲ್ಲ ಮಾಡಿದ್ದೇನೆ.” ಒಬ್ಬ ವ್ಯಕ್ತಿಯು ಗುಲಾಮನಾಗಿದ್ದಾಗ, ಅವನಿಗೆ ಮಾಡಲು ಇಷ್ಟವಿಲ್ಲದ ಕೆಲಸಗಳನ್ನು ಮಾಡುವಂತೆ ಒತ್ತಾಯಿಸಲಾಗುತ್ತದೆ. ಅವನನ್ನು ಒತ್ತಾಯಿಸಲಾಗುತ್ತದೆ. ಅಂದರೆ ಇಲ್ಲಿ ಭಕ್ತನು ತನ್ನ ಕಾಮದ ನಿರಂಕುಶಾಜ್ಞೆಯಡಿಯಲ್ಲಿ ಮಣಿದು ಪಾಪಕೃತ್ಯಗಳನ್ನು ಎಸಗಿದ್ದಾನೆ ಎಂಬುದನ್ನು ಒಪ್ಪಿಕೊಳ್ಳುತ್ತಿದ್ದಾನೆ.

ಆಗ ಯಾರೋ ಒಬ್ಬರು ಆ ಭಕ್ತನಿಗೆ ಹೇಳಬಹುದು: “ಸರಿ. ನೀನು ನಿನ್ನ ಇಂದ್ರಿಯಗಳನ್ನು ಸೇವಿಸಿದ್ದೀಯಾ. ಆದರೆ ಆ ಸೇವೆ ಇಲ್ಲಿಗೆ ಮುಗಿಯಿತು. ಈಗ ಎಲ್ಲವೂ ಸರಿಯಾಗಿದೆ.” ಆದರೆ ಈಗಿರುವ ಸಮಸ್ಯೆ ಇದು: ತೇಷಾಂ ಜಾತಾ ಮಯೀ ನ ಕರುಣಾ ನ ತ್ರಪಾ ನೋಪಶಾಂತಿಃ. ಆ ಭಕ್ತನು ಹೇಳುತ್ತಾನೆ: “ನಾನು ನನ್ನ ಇಂದ್ರಿಯಗಳನ್ನು ಎಷ್ಟೊಂದು ಸೇವಿಸಿದ್ದೇನೆ; ಆದರೂ ಅವುಗಳು ತೃಪ್ತವಾಗಿಲ್ಲ. ಅದೇ ನನ್ನ ಸಮಸ್ಯೆ. ನನ್ನ ಇಂದ್ರಿಯಗಳಾಗಲೀ ನಾನಾಗಲೀ ತೃಪ್ತಿ ಹೊಂದಿಲ್ಲ. ಅಲ್ಲದೇ ನನ್ನ ಇಂದ್ರಿಯಗಳು ನನಗೆ ನೆಮ್ಮದಿ ಕರುಣಿಸುವಷ್ಟು ಮತ್ತು ನಾನು ಅವುಗಳನ್ನು ಸೇವಿಸಿದ್ದಕ್ಕಾಗಿ ನನಗೆ ವಿಶ್ರಾಂತಿ ವೇತನ ನೀಡುವಷ್ಟು ದಯಾಳುಗಳಲ್ಲ. ಅದು ನನ್ನ ಸ್ಥಿತಿ. ನಾನು ನನ್ನ ಇಂದ್ರಿಯಗಳನ್ನು ಅನೇಕ ವರ್ಷಗಳವರೆಗೆ ಸೇವಿಸಿರುವುದರಿಂದ ಅವುಗಳು ತೃಪ್ತಿ ಹೊಂದಿರಬಹುದೆಂದು ನಾನು ನಂಬಿದ್ದೆ. ಆದರೆ, ಅವುಗಳು ತೃಪ್ತಿ ಹೊಂದಿಲ್ಲ. ಅವು ಇನ್ನೂ ನನ್ನ ಮೇಲೆ ನಿರಂಕುಶಾಜ್ಞೆಯನ್ನು ಹೇರುತ್ತಿವೆ.”

ಈ ಸಂದರ್ಭದಲ್ಲಿ ನನ್ನ ವಿದ್ಯಾರ್ಥಿಯೊಬ್ಬರು ನನಗೆ ಹೇಳಿದ ಸಂಗತಿಯನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸಬಹುದು: ಅವನ ವೃದ್ಧ ತಾಯಿಯು ಮದುವೆಯಾಗಲಿರುವಳಂತೆ. ಅಲ್ಲದೇ ಅವನ ಅಜ್ಜಿ ಕೂಡ ಮತ್ತೊಮ್ಮೆ ಮದುವೆಯಾಗಿದ್ದಾಳೆಂದು ಬೇರೊಬ್ಬರು ದೂರಿದರು. ನೀವೇ ನೋಡಿ: ಐವತ್ತು ವರ್ಷಗಳು, ಎಪ್ಪತ್ತೈದು ವರ್ಷಗಳಷ್ಟು ವಯಸ್ಸಾದರೂ ಇಂದ್ರಿಯಗಳು ಮಾತ್ರ ಇನ್ನೂ ಆಜ್ಞೆಯನ್ನು ನೀಡುವಷ್ಟು ಪ್ರಬಲವಾಗಿವೆ. “ಹೌದು, ನೀವು ಮದುವೆಯಾಗಲೇಬೇಕು.” ಇಂದ್ರಿಯಗಳು ಎಷ್ಟು ಬಲಿಷ್ಠವಾಗಿವೆಯೆಂಬುದನ್ನು ಅರಿತುಕೊಳ್ಳಲು ಪ್ರಯತ್ನಿಸಿ. ಬರೀ ಯುವಕರಷ್ಟೇ ತಮ್ಮ ಇಂದ್ರಿಯಗಳ ಸೇವಕರಾಗಿಲ್ಲ. ಎಪ್ಪತ್ತು ವರ್ಷ ಆಗಿರಬಹುದು, ಎಂಬತ್ತು ವರ್ಷ ವಯಸ್ಸಾಗಿರಬಹುದು ಅಥವಾ ಸಾವಿನ ಅಂಚಿನಲ್ಲಿದ್ದಾಗ ಕೂಡ ಮನುಷ್ಯನು ಇಂದ್ರಿಯಗಳ ಸೇವಕನಾಗಿದ್ದಾನೆ. ಈ ಇಂದ್ರಿಯಗಳು ಎಂದಿಗೂ ತೃಪ್ತರಾಗುವುದಿಲ್ಲ.

ಹೀಗಿದೆ ಲೌಕಿಕ ಪರಿಸ್ಥಿತಿ. ನಾವು ನಮ್ಮ ಇಂದ್ರಿಯಗಳ ಸೇವಕರಾಗಿದ್ದೇವೆ. ಆದರೆ ಅವುಗಳನ್ನು ಸೇವಿಸುವುದರಿಂದ ನಮಗಷ್ಟೇ ಅಲ್ಲ ನಮ್ಮ ಇಂದ್ರಿಯಗಳಿಗೂ ತೃಪ್ತಿಯಿಲ್ಲ. ಅಲ್ಲದೇ ಅವುಗಳು ನಮಗೆ ಕರುಣೆ ತೋರುವುದಿಲ್ಲ. ಎಲ್ಲವೂ ತುಂಬ ಗೊಂದಲಮಯವಾಗಿದೆ!

ಆದ್ದರಿಂದ, ಅತ್ಯುತ್ತಮವಾದ ಕೆಲಸವೆಂದರೆ, ಕೃಷ್ಣನ ಸೇವಕರಾಗುವುದು. ಭಗವದ್ಗೀತೆ (18.66) ಯಲ್ಲಿ ಕೃಷ್ಣ ಹೇಳುತ್ತಾನೆ,

ಸರ್ವಧರ್ಮಾನ್‌ ಪರಿತ್ಯಜ್ಯ ಮಾಮ್‌ ಏಕಂ ಶರಣಂ ವ್ರಜ

ಅಹಂ ತ್ವಾಂ ಸರ್ವ ಪಾಪೇಭ್ಯೋ ಮೋಕ್ಷಯಿಷ್ಯಾಮಿ ಮಾ ಶುಚಃ

ನೀವು ಅನೇಕ ಜನ್ಮಗಳಲ್ಲಿ, ಜನ್ಮ ಜನ್ಮಾಂತರಗಳಲ್ಲಿ, 84,00,000 ಜೀವಿಗಳ ರೂಪದಲ್ಲಿ ನಿಮ್ಮ ಇಂದ್ರಿಯಗಳನ್ನು ಸೇವಿಸಿರುವಿರಿ. ಪಕ್ಷಿಗಳು, ಪ್ರಾಣಿಗಳು, ಮನುಷ್ಯರು, ದೇವತೆಗಳು – ಈ ಲೌಕಿಕ ಜಗತ್ತಿನಲ್ಲಿರುವ ಎಲ್ಲರೂ ತಮ್ಮ ಇಂದ್ರಿಯಗಳನ್ನು ಸೇವಿಸುತ್ತ, ಇಂದ್ರಿಯಸುಖದಲ್ಲಿ ತೊಡಗಿದ್ದಾರೆ. ಕೃಷ್ಣ ಹೇಳುತ್ತಾನೆ, ”ಆದ್ದರಿಂದ, ನನಗೆ ಶರಣಾಗತರಾಗಿ ಸಾಕು. ನನ್ನನ್ನು ಸೇವಿಸಲು ಒಪ್ಪಿಕೊಂಡರೆ ಸಾಕು, ಆಗ ನಿಮ್ಮ ಸಂಪೂರ್ಣ ಹೊಣೆ ನನ್ನದು. ನಿಮ್ಮ ಇಂದ್ರಿಯಗಳ ಆಜ್ಞೆಗಳಿಂದ ಮುಕ್ತರಾಗುವಿರಿ.”

ಏಕೆಂದರೆ, ನಮ್ಮ ಇಂದ್ರಿಯಗಳ ಆಜ್ಞೆಗಳಿಂದಾಗಿಯೇ ನಾವು ಜನ್ಮದ ಮೇಲೆ ಜನ್ಮ ಕಳೆದಂತೆಲ್ಲ ಪಾಪಕೃತ್ಯಗಳನ್ನು ಎಸಗುತ್ತಿದ್ದೇವೆ. ಆದ್ದರಿಂದಲೇ ನಾವು ದೇಹದ ಬೇರೆ ಬೇರೆ ಸ್ತರಗಳಲ್ಲಿದ್ದೇವೆ. ನಿಮ್ಮಲ್ಲಿ ಪ್ರತಿಯೊಬ್ಬರೂ ಒಂದೇ ಹಂತದಲ್ಲಿದ್ದೀರೆಂದು ಯೋಚಿಸಬೇಡಿ. ಇಲ್ಲ. ಒಬ್ಬ ವ್ಯಕ್ತಿಯ ಚಟುವಟಿಕೆಗಳಿಗನುಗುಣವಾಗಿ, ಅವನಿಗೆ ನಿರ್ದಿಷ್ಟವಾದ ಶರೀರ ದೊರೆಯುತ್ತದೆ. ಅಲ್ಲದೇ ಈ ವಿವಿಧ ಪ್ರಕಾರದ ಶರೀರಗಳು ಇಂದ್ರಿಯ ತೃಪ್ತಿಯ ಬೇರೆ ಬೇರೆ ಶ್ರೇಣಿಗಳನ್ನು ಒದಗಿಸುತ್ತವೆ. ಒಂದು ಹಂದಿಯ ಜೀವನದಲ್ಲಿಯೂ ಇಂದ್ರಿಯಸುಖವಿದೆ; ಆದರೆ ಅದು ತುಂಬ ಕೆಳಮಟ್ಟದ್ದಾಗಿದೆ. ಹಂದಿಯು ಎಷ್ಟೊಂದು ವಿಷಯಲಂಪಟವಾಗಿರುತ್ತದೆಯೆಂದರೆ, ಅದು ತನ್ನ ತಾಯಿ, ಸಹೋದರಿ ಅಥವಾ ತನ್ನ ಮಗಳೊಂದಿಗೂ ಸಂಭೋಗಿಸಲು ಹಿಂಜರಿಯುವುದಿಲ್ಲ. ಮಾನವ ಸಮಾಜದಲ್ಲಿ ಕೂಡ ತಮ್ಮ ತಾಯಿಯೊಂದಿಗೆ ಅಥವಾ ಸಹೋದರಿಯೊಂದಿಗೆ ಸಂಭೋಗಿಸುವ ಬಗ್ಗೆ ತಲೆಕೆಡಿಸಿಕೊಳ್ಳದ ಜನರಿದ್ದಾರೆ. ಇಂದ್ರಿಯಗಳು ತುಂಬ ಪ್ರಬಲವಾಗಿವೆ.

ಹೀಗೆ ನಾವು ನಮ್ಮ ಇಂದ್ರಿಯಗಳ ಆಜ್ಞೆಗಳಿಗನುಗುಣವಾಗಿ ಅವುಗಳ ಸೇವೆ ಮಾಡುತ್ತಿರುವುದೇ ನಮ್ಮ ಸರ್ವದುಃಖಕ್ಕೂ ಮೂಲವಾಗಿದೆ ಎಂದು ಅರ್ಥಮಾಡಿಕೊಳ್ಳಬೇಕು. ನಾವು ಯಾವ ಮೂರು ದುಃಖಗಳಿಂದಾಗಿ – ನಾವು ಯಾವ ದುಃಖಗಳಿಂದ ಮುಕ್ತರಾಗಬಯಸುತ್ತಿರುವೆವೋ – ಬಳಲುತ್ತಿರುವೆವೋ ಅವುಗಳಿಗೆಲ್ಲ ನಮ್ಮ ಇಂದ್ರಿಯಗಳ ಆಜ್ಞೆಗಳೇ ಕಾರಣ. ಆದರೆ ನಾವು ಕೃಷ್ಣನ ಸೇವೆಗೆ ಆಕರ್ಷಿತರಾದರೆ, ನಮ್ಮ ಇಂದ್ರಿಯಗಳ ಆಜ್ಞೆಗಳನ್ನು ಅನುಸರಿಸುವಂತೆ ಒತ್ತಾಯಕ್ಕೊಳಗಾಗುವುದಿಲ್ಲ. ಕೃಷ್ಣನ ಅನೇಕ ಹೆಸರುಗಳಲ್ಲಿ ಒಂದು ಮದನಮೋಹನ ಅಂದರೆ, “ಕಾಮವನ್ನು ಅಥವಾ ಮನ್ಮಥನನ್ನು ಜಯಿಸುವವನು.” ನೀವು ನಿಮ್ಮ ಪ್ರೇಮವನ್ನು ಇಂದ್ರಿಯಗಳಿಂದ ಕೃಷ್ಣನೆಡೆಗೆ ಸ್ಥಳಾಂತರಿಸಿದರೆ, ಎಲ್ಲ ದುಃಖಗಳಿಂದಲೂ ನೀವು ಮುಕ್ತರಾಗುವಿರಿ. ತತ್‌ಕ್ಷಣವೇ.

ಈ ಒಡೆಯನಾಗುವ – “ನಾನು ಕಂಡದ್ದೆಲ್ಲಕ್ಕೂ ನಾನೇ ಸಮ್ರಾಟ” ಎನ್ನುವ ಹರಸಾಹಸವನ್ನು ಬಿಟ್ಟುಬಿಡಬೇಕು. ಮೂಲಭೂತವಾಗಿ ನಮ್ಮಲ್ಲಿ ಪ್ರತಿಯೊಬ್ಬರೂ ಸೇವಕರಾಗಿದ್ದೇವೆ. ಈಗ ನಾವು ನಮ್ಮ ಇಂದ್ರಿಯಗಳನ್ನು ಸೇವಿಸುತ್ತಿದ್ದೇವೆ; ಆದರೆ ಈ ಸೇವೆಯನ್ನು ನಾವು ಕೃಷ್ಣನೆಡೆಗೆ ಹರಿಯುವಂತೆ ಮಾಡಬೇಕು. ನೀವು ಕೃಷ್ಣನನ್ನು ಸೇವಿಸಿದಾಗ, ನೀವು ನಿಷ್ಠಾವಂತರಾದಂತೆಲ್ಲ, ಕೃಷ್ಣನು ತಾನಾಗಿಯೇ ನಿಮ್ಮ ಮುಂದೆ ಪ್ರಕಟಗೊಳ್ಳುತ್ತಾನೆ. ಆಗ ನಿಮ್ಮ ಮತ್ತು ಕೃಷ್ಣನ ನಡುವಿನ ಸೇವಾ ವಿನಿಮಯವು ಸೊಗಸಾಗಿ ಸಾಗುವುದು. ನೀವು ಅವನನ್ನು ಸ್ನೇಹಿತನಂತೆ ಅಥವಾ ಒಡೆಯನಂತೆ ಅಥವಾ ಪ್ರಿಯಕರನಂತೆ ಪ್ರೇಮಿಸಬಹುದು; ಕೃಷ್ಣನನ್ನು ಪ್ರೇಮಿಸಲು ಅನೇಕ ಹಾದಿಗಳಿವೆ.

ನೀವು ಕೃಷ್ಣನನ್ನು ಪ್ರೇಮಿಸಲು ಪ್ರಯತ್ನಿಸಬೇಕು; ಆಗ ನೀವು ಎಷ್ಟು ತೃಪ್ತರಾಗಿದ್ದೀರಿ ಎಂದು ನಿಮಗೆ ಗೊತ್ತಾಗುತ್ತದೆ. ಇದೊಂದನ್ನು ಬಿಟ್ಟರೆ ಸಂಪೂರ್ಣ ತೃಪ್ತಿ ಹೊಂದಲು ಬೇರೆ ಯಾವ ಮಾರ್ಗವೂ ಇಲ್ಲ. ದೊಡ್ಡ ಪ್ರಮಾಣದಲ್ಲಿ ಹಣಗಳಿಸುವುದರಿಂದ ನಿಮಗೆ ಎಂದಿಗೂ ತೃಪ್ತಿ ದೊರೆಯದು. ಮುಂಚೆ, ಕಲ್ಕತ್ತಾದಲ್ಲಿ ತಿಂಗಳಿಗೆ ಆರು ಸಾವಿರ ಡಾಲರ್‌ಗಳನ್ನು ಗಳಿಸುತ್ತಿದ್ದ ಸಜ್ಜನರನ್ನು ಭೇಟಿಯಾಗಿದ್ದೆ. ಅವರು ಆತ್ಮಹತ್ಯೆ ಮಾಡಿಕೊಂಡರು. ಕಾರಣ? ಆ ಹಣವು ಅವರಿಗೆ ಸಂತೃಪ್ತಿ ನೀಡಲಿಲ್ಲ. ಅವರು ಬೇರೆ ಏನನ್ನೋ ಗಳಿಸಲು ಪ್ರಯತ್ನಿಸುತ್ತಿದ್ದರು.

ನಿಮ್ಮಲ್ಲಿ ನಾನು ವಿನಂತಿಸಿಕೊಳ್ಳುವುದಿಷ್ಟೆ, ನೀವು ಜೀವನದ ಈ ಮಹೋನ್ನತವಾದ ದೈವಾನುಗ್ರಹವನ್ನು ಅಂದರೆ ಕೃಷ್ಣಪ್ರಜ್ಞೆಯನ್ನು ಅರಿತುಕೊಳ್ಳಲು ಪ್ರಯತ್ನಿಸಿ. ಕೇವಲ ಹರೇಕೃಷ್ಣ ಮಂತ್ರವನ್ನು ಜಪಿಸುವ ಮೂಲಕ ಕ್ರಮೇಣ ಕೃಷ್ಣನಿಗಾಗಿ ಆಧ್ಯಾತ್ಮಿಕ ಪ್ರೇಮ ಪ್ರವೃತ್ತಿಯನ್ನು ನಿಮ್ಮಲ್ಲಿ ಬೆಳೆಸಿಕೊಳ್ಳುವಿರಿ. ಅಲ್ಲದೇ ನೀವು ಕೃಷ್ಣನನ್ನು ಪ್ರೇಮಿಸಲು ಪ್ರಾರಂಭಿಸಿದ ತತ್‌ಕ್ಷಣ ನಿಮ್ಮ ಎಲ್ಲ ತೊಂದರೆಗಳೂ ನಿರ್ಮೂಲನೆಯಾಗುವುವು ಮತ್ತು ನಿಮಗೆ ಸಂಪೂರ್ಣ ತೃಪ್ತಿಯ ಅನುಭವವಾಗುವುದು.

ಧನ್ಯವಾದಗಳು.

ಈ ಲೇಖನ ಶೇರ್ ಮಾಡಿ