ಶತಕ್ರತು

ಸ್ವಾಯಂಭುವ ಮನುವಿನ ವಂಶದಲ್ಲಿ ಭಗವಾನ್‌ ವಿಷ್ಣುವಿನ ಅಂಶದಿಂದ ಜನಿಸಿದ ಪೃಥು ಮಹಾರಾಜನು ಮಹತ್ಕಾರ್ಯಗಳನ್ನು ಸಾಧಿಸಿ ಪ್ರಖ್ಯಾತನಾದನು. ಅವನು ಮೊಟ್ಟಮೊದಲ ಮಾದರಿ ರಾಜನಾಗಿ ಪ್ರಜೆಗಳ ಕಷ್ಟಕೋಟಲೆಗಳನ್ನು ಪರಿಹರಿಸಿದನು. ಅವರು ಕ್ಷಾಮದಿಂದ ಪೀಡಿತರಾಗಿರಲು, ಭೂಮಿಯಿಂದ ಸಕಲ ಸಂಪನ್ಮೂಲಗಳನ್ನು ಪಡೆಯುವ ಯೋಗ್ಯಮಾರ್ಗವನ್ನು ತೋರಿಸಿದನು. ಭೂಮಿಯ ಮೇಲ್ಮೈಯನ್ನು ಸಮತಟ್ಟಾಗಿಸಿ ಇಡೀ ಭೂಮಂಡಲವನ್ನೇ ನಗರ, ಗ್ರಾಮ, ಗೋಶಾಲೆ, ಶಿಬಿರ, ಗಣಿಗಳೇ ಮೊದಲಾಗಿ ವಿಂಗಡಿಸಿ ನಗರೀಕರಣವನ್ನಾರಂಭಿಸಿದನು. ಪ್ರಜೆಗಳಿಗೆ ಸೂಕ್ತ ವೃತ್ತಿಗಳನ್ನು ಕಲ್ಪಿಸಿಕೊಟ್ಟು, ಅವರ ಜೀವನವನ್ನು ರೂಪಿಸಿದನು. ಕಳ್ಳಕಾಕರು ಸೊಲ್ಲೆತ್ತದಂತೆ ಮಾಡಿದನು.

ಪೃಥು ಮಹಾರಾಜನು ಶಾಂತಿ, ಸಮೃದ್ಧಿಗಳಿಂದ ತುಂಬಿದ್ದ ತನ್ನ ರಾಜ್ಯವನ್ನಾಳತೊಡಗಿದನು. ಒಮ್ಮೆ, ಅವನು ಸರಸ್ವತೀ ನದಿಯು ಪೂರ್ವದಿಕ್ಕಿಗೆ ಹರಿಯುವ ಪ್ರದೇಶದಲ್ಲಿರುವ ಬ್ರಹ್ಮಾವರ್ತವೆಂಬ ಸ್ಥಳದಲ್ಲಿ ನೂರು ಅಶ್ವಮೇಧಯಾಗಗಳನ್ನು ಮಾಡಲುಪಕ್ರಮಿಸಿದನು. ಯಜ್ಞಗಳು ಒಂದರ ಅನಂತರ ಒಂದು ಯಶಸ್ವಿಯಾಗಿ ನಡೆಯುತ್ತಿರಲು, ಸರ್ವಾಂತರ್ಯಾಮಿಯೂ ಸಕಲ ಲೋಕಗಳ ಗುರುವೂ ಯಜ್ಞೇಶ್ವರನೂ ಆದ ಶ್ರೀಹರಿಯೇ ಯಾಗ ಮಂಟಪದಲ್ಲಿ ಆವಿರ್ಭವಿಸಿದನು! ವಿಷ್ಣುವಿನೊಂದಿಗೆ ಬ್ರಹ್ಮನೂ ಶಿವನೂ ಪ್ರತ್ಯಕ್ಷರಾದರು. ಸಕಲ ದೇವತೆಗಳೂ ಪ್ರತ್ಯಕ್ಷರಾದರು. ಗಂಧರ್ವಾಪ್ಸರೆಯರು ಭಗವಂತನ ಕೀರ್ತಿಯನ್ನು ಹಾಡತೊಡಗಿದರು. ಭಗವಂತನನ್ನು ಸದಾ ಸೇವಿಸುವ ಕಪಿಲ, ನಾರದ, ದತ್ತಾತ್ರೇಯ, ಸನಕಾದಿ ಮುನಿಗಳೆಲ್ಲರೂ ಆ ಯಾಗಗಳಿಗೆ ಆಗಮಿಸಿದರು.

ಆ ಮಹಾಯಜ್ಞಗಳು ನಡೆಯುತ್ತಿದ್ದಾಗ ಭೂಮಿಯು ಕಾಮಧೇನುವಿನಂತೆ ಅನುದಿನವೂ ಯಜ್ಞಗಳಿಗೆ ಅಗತ್ಯವಾದ ಸಕಲ ಸಾಮಗ್ರಿಗಳನ್ನೂ ಒದಗಿಸತೊಡಗಿತು. ಸಕಲ ನದಿಗಳೂ ಹರಿದು ಬಂದು ಸಿಹಿ, ಹುಳಿ, ಖಾರವೇ ಮೊದಲಾದ ರಸಗಳನ್ನೊದಗಿಸಿದವು. ವೃಕ್ಷಗಳು ಹಣ್ಣುಗಳನ್ನೂ, ಜೇನುತುಪ್ಪವನ್ನೂ ಹೇರಳವಾಗಿ ನೀಡಿದವು. ಗೋವುಗಳು ಹಾಲು, ಮೊಸರು, ತುಪ್ಪಗಳನ್ನು ಸುರಿಸಿದವು. ಸಾಗರಗಳೂ, ಗಿರಿಪರ್ವತಗಳೂ ಬಗೆಬಗೆಯ ರತ್ನಗಳನ್ನು ನೀಡಿದವು. ಚರ್ವ್ಯ, ಲೇಹ್ಯ, ಚೂಷ್ಯ, ಪೇಯಗಳೆಂಬ ಚತುರ್ವಿಧ ಅನ್ನಗಳೂ ಹೇರಳವಾಗಿ ಉತ್ಪನ್ನವಾದವು. ಸಕಲ ಗ್ರಹಗಳ ಅಧಿದೇವತೆಗಳು ಪೃಥು ಮಹಾರಾಜನಿಗೆ ಅರ್ಪಿಸಲೆಂದು ಬಹು ವಿಧದ ಕಾಣಿಕೆಗಳನ್ನು ತಂದರು. ಎಲ್ಲ ಪ್ರಜೆಗಳೂ ಪೃಥುವಿಗಾಗಿ ವಿವಿಧ ಉಡುಗೊರೆಗಳನ್ನು ತಂದರು.

ಎಲ್ಲೆಲ್ಲೂ ಹಬ್ಬದ ವಾತಾವರಣ ತುಂಬಿತ್ತು. ಪ್ರಜೆಗಳು ಸಂತೋಷ ಸಂಭ್ರಮಗಳಿಂದ ಹರ್ಷಿಸುತ್ತಿದ್ದರು. ಮಹಾವಿಷ್ಣುವೇ ಮೊದಲ್ಗೊಂಡು ಎಲ್ಲ ದೇವಾನುದೇವತೆಗಳೂ ಪೃಥು ಮಹಾರಾಜನ ಯಶಸ್ಸನ್ನು ಕಂಡು ಸಂತೋಷಿಸಿದರು. ಪೃಥುವಾದರೋ ಶ್ರೀಹರಿಯ ಪರಮ ಭಕ್ತನೇ ಆಗಿದ್ದನು. ಹರಿಯ ಅಪಾರ ಕರುಣೆಯಿಂದಲೇ ಅವನು ಅಷ್ಟೆಲ್ಲವನ್ನೂ  ಸಾಧಿಸಿದ್ದನು.

ಆದರೆ ಒಬ್ಬನಿಗೆ ಮಾತ್ರ ಪೃಥುವಿನ ಏಳ್ಗೆಯನ್ನು ಸಹಿಸಲಾಗಲಿಲ್ಲ. ಅವನೇ ಸ್ವರ್ಗಾಧಿಪತಿ ಇಂದ್ರ! ಈ ಮೊದಲು, ಅವನೊಬ್ಬನೇ ನೂರು ಅಶ್ವಮೇಧಯಜ್ಞಗಳನ್ನು ಆಚರಿಸಿ ಶತಕ್ರತು ಎಂದು ಬಿರುದಾಂಕಿತನಾಗಿದ್ದನು. ಈಗ ಪೃಥುವು ಅಂತಹ ನೂರು ಯಾಗಗಳನ್ನಾಚರಿಸಿ ಅವನನ್ನೂ ಮೀರಿಸುವ ಮಟ್ಟಕ್ಕೆ ಬೆಳೆದಿದ್ದನು. ಇದನ್ನು ಹೇಗಾದರೂ ತಪ್ಪಿಸಬೇಕೆಂದು ನಿರ್ಧರಿಸಿದ ಇಂದ್ರನು, ನೂರನೆಯ ಯಜ್ಞವು ನಡೆಯುತ್ತಿದ್ದಾಗ ಅದೃಶ್ಯನಾಗಿ ಬಂದು ಯಜ್ಞಾಶ್ವವನ್ನು ಅಪಹರಿಸಿಬಿಟ್ಟನು! ಅನಂತರ ಅವನು ಒಬ್ಬ ಸಂನ್ಯಾಸಿಯಂತೆ ವೇಷಮರೆಸಿಕೊಂಡನು. ಆದರೆ ಅತ್ರಿ ಮಹರ್ಷಿಗಳಿಗೆ ದೇವೇಂದ್ರನ ಚತುರೋಪಾಯವು ತಿಳಿದುಹೋಯಿತು. ಅವರು ಕೂಡಲೇ ಪೃಥುವಿನ ಪುತ್ರನಿಗೆ ಇಂದ್ರನ ಕುತಂತ್ರವನ್ನು ತಿಳಿಸಿದರು. ಪೃಥು ಪುತ್ರನು “ನಿಲ್ಲು! ನಿಲ್ಲು!” ಎಂದು ಕೂಗುತ್ತಾ ದೇವೇಂದ್ರನ ಹಿಂದೆ ಓಡಿದನು. ಆದರೆ ಮೈತುಂಬಾ ಭಸ್ಮವನ್ನು ಲೇಪಿಸಿಕೊಂಡು ಜಟೆಗಟ್ಟಿದ್ದ ಕೂದಲನ್ನು ಹೊಂದಿದ್ದ ಸಂನ್ಯಾಸಿ ವೇಷದ ಇಂದ್ರನನ್ನು ಕಂಡ ಅವನು, ಇಂದ್ರನನ್ನು ನಿಜವಾದ ಸಾಧುವೆಂದೇ ಬಗೆದು ಬಾಣ ಪ್ರಯೋಗ ಮಾಡದೆ ಹಿಂದಿರುಗಿದನು.

ಇಂದ್ರನನ್ನು ವಧಿಸದೆ ಹಿಂದಿರುಗಿದ ಪೃಥು ಪುತ್ರನನ್ನು ಕಂಡ ಅತ್ರಿಮಹರ್ಷಿಗಳು ಹೇಳಿದರು; “ವತ್ಸ, ಅವನನ್ನು ಕೂಡಲೇ ಕೊಲ್ಲು! ಅವನನ್ನು ಯಾರೆಂದುಕೊಂಡೆ? ನಮ್ಮ ಯಜ್ಞಕ್ಕೆ ವಿಘ್ನವೊಡ್ಡಿರುವ ಮಹೇಂದ್ರ ಅವನು! ಇಂಥ ನೀಚಕಾರ್ಯ ಮಾಡಿರುವ ಅವನು ಈಗ ದೇವತೆಗಳಲ್ಲೆಲ್ಲ ಅಧಮನಾಗಿರುವನು!”

ಇದನ್ನು ಕೇಳಿ ಪೃಥು ಪುತ್ರನು, ಗೃಧ್ರರಾಜ ಜಟಾಯುವು ರಾವಣನನ್ನು ಬೆನ್ನಟ್ಟಿದಂತೆ ದೇವೇಂದ್ರನನ್ನು ಕೋಪದಿಂದ ಬೆನ್ನಟ್ಟಿದನು. ತನ್ನನ್ನು ಬೆನ್ನಟ್ಟಿ ಬರುತ್ತಿದ್ದ ಪೃಥು ಪುತ್ರನನ್ನು ಕಂಡ ಇಂದ್ರನು ಹೆದರಿ ತನ್ನ ಸಾಧು ರೂಪವನ್ನು ತ್ಯಜಿಸಿದನು. ಕುದುರೆಯನ್ನು ಅಲ್ಲೇ ಬಿಟ್ಟು ಅಂತರ್ಧಾನನಾದನು! ಆಗ ಮಹಾವೀರನಾದ ಪೃಥುವಿನ ಮಗನು ಕುದುರೆಯೊಂದಿಗೆ ಯಾಗ ಶಾಲೆಗೆ ಹಿಂದಿರುಗಿದನು. ಪೃಥು ಪುತ್ರನ ಕಾರ್ಯದಿಂದ ಸಂತೋಷಗೊಂಡ ಮಹರ್ಷಿಗಳು ಅವನನ್ನು ವಿಜಿತಾಶ್ವನೆಂಬ ಹೆಸರಿನಿಂದ ಕರೆದರು.

ತನ್ನ ಉಪಾಯವು ನಿಷಲವಾಗಲು ಇಂದ್ರನಿಗೆ ಕಸಿವಿಸಿಯಾಯಿತು. ಅವನು ಪುನಃ ಯಜ್ಞಾಶ್ವವನ್ನು ಅಪಹರಿಸಲು ನಿರ್ಧರಿಸಿದನು. ಅವನು ಯಾಗ ಶಾಲೆಗೆ ಅಪಾರ ಕತ್ತಲೆ ಕವಿಯುವಂತೆ ಮಾಡಿ, ಯಾರಿಗೂ ಏನೂ ಕಾಣದಂತಾಗಲು ಯಜ್ಞಾಶ್ವವನ್ನು ಅಪಹರಿಸಿಬಿಟ್ಟನು. ಆದರೆ ಅತ್ರಿ ಮಹರ್ಷಿಗಳು ಪುನಃ ಇಂದ್ರನನ್ನು ಗುರುತಿಸಿ ಪೃಥು ಪುತ್ರನಿಗೆ ತೋರಿಸಿದರು. ಪೃಥು ಪುತ್ರನು ಇಂದ್ರನನ್ನು ಬೆನ್ನಟ್ಟಿ ಹೋಗಲು, ಇಂದ್ರನು ಕಪಾಲದಂಡಗಳನ್ನು ಹಿಡಿದ ಸಂನ್ಯಾಸಿಯಂತೆ ರೂಪ ಧರಿಸಿದನು. ಇದನ್ನು ಕಂಡ ವಿಜಿತಾಶ್ವನು ಇಂದ್ರನನ್ನು ಕೊಲ್ಲದೆ ಹಿಂದಿರುಗಿದನು. ಅತ್ರಿ ಮಹರ್ಷಿಗಳು ಅವನಿಗೆ ತಿಳಿಹೇಳಿ ಅವನನ್ನು ಪುನಃ ಕಳಿಸಿದರು. ವಿಜಿತಾಶ್ವನು ಮತ್ತೆ ಇಂದ್ರನನ್ನು ಬೆನ್ನಟ್ಟಿದನು. ಹೆದರಿದ ಇಂದ್ರನು ತನ್ನ ಛದ್ಮವೇಷವನ್ನು ತ್ಯಜಿಸಿ ಕುದುರೆಯನ್ನೂ ಬಿಟ್ಟು ಅಂತರ್ಧಾನನಾದನು. ವಿಜಿತಾಶ್ವನು ಯಜ್ಞಾಶ್ವದೊಂದಿಗೆ ಯಾಗ ಶಾಲೆಗೆ ಹಿಂದಿರುಗಿದನು.

ಇಂದ್ರನು ಇಂಥ ವೇಷಗಳನ್ನು ಧರಿಸಿದಂದಿನಿಂದಲೂ ಕೆಲವು ಅಜ್ಞರು ಇಂಥ ಕಪಟ ಸಂನ್ಯಾಸಿ ವೇಷಗಳನ್ನು ಧರಿಸುತ್ತಾ ಬಂದಿದ್ದಾರೆ. ಇಂದ್ರನು ಧರಿಸಿದ ಸಂನ್ಯಾಸಿ ವೇಷಗಳು ಪಾಷಂಡಿಗಳ ವೇಷಗಳಾದವು. ಭಗವಂತನಲ್ಲಿ ನಂಬಿಕೆಯಿಂದ ನಿರೀಶ್ವರವಾದಿಗಳಾದ ಈ ಕಪಟ ಸಂನ್ಯಾಸಿಗಳಲ್ಲಿ ಕೆಲವರು ನಗ್ನರಾಗಿದ್ದರೆ, ಕೆಲವರು ಕೆಂಪು ವಸ್ತ್ರ ಧರಿಸಿದ ಕಾಪಾಲಿಕರಾಗಿರುತ್ತಾರೆ. ಇಂಥವರು ಹಲವಾರು ಉಪಧರ್ಮಗಳನ್ನು ಬೋಧಿಸಿ, ತಮ್ಮ ನಾಸ್ತಿಕವಾದವನ್ನು ಸಮರ್ಥಿಸಲು ವಿವಿಧ ವಾದಗಳನ್ನು ಮಂಡಿಸುತ್ತಾರೆ. ಇವರನ್ನು ದುರ್ಜನರು ಬಹಳ ಮೆಚ್ಚುತ್ತಾರೆ. ನಿಜವಾಗಿ ಇವರು ಧರ್ಮದ ಸೋಗಿನಲ್ಲಿ ಮೆರೆಯುವ ಅಧರ್ಮಿಗಳು, ಜನರು ಭ್ರಾಂತಿಯಿಂದ ಇವರನ್ನು ಧರ್ಮಿಷ್ಠರೆಂದು ನಂಬುತ್ತಾರೆ.

ಇಂದ್ರನ ಈ ಕುತ್ಸಿತ ಕಾರ್ಯದಿಂದ ಬಹಳ ಕೋಪಗೊಂಡ ಪೃಥು ಮಹಾರಾಜನು ಅವನನ್ನು ವಧಿಸಲು ಧನುರ್ಬಾಣಗಳನ್ನು ಕೈಗೆತ್ತಿಕೊಂಡನು. ಆಗ ಮಹರ್ಷಿಗಳು ಅವನನ್ನು ತಡೆದು ಹೇಳಿದರು, “ಹೇ ಮಹಾರಾಜ! ಇಂದ್ರನನ್ನು ನೀನು ಕೊಲ್ಲಬೇಡ! ಯಜ್ಞದಲ್ಲಿ ಯಜ್ಞಪಶುವನ್ನಲ್ಲದೆ ಇನ್ನಾರನ್ನೂ ವಧಿಸುವಂತಿಲ್ಲ. ನಿನ್ನ ಯಜ್ಞವನ್ನು ವಿಘ್ನಗೊಳಿಸಲು ಯತ್ನಿಸಿದ ಆ ಇಂದ್ರನು ಈಗಾಗಲೇ ತೇಜೋಹೀನನಾಗಿದ್ದಾನೆ. ಹಿಂದೆಂದೂ ಉಚ್ಚರಿಸದ ವಿಶೇಷ ಮಂತ್ರಗಳನ್ನುಚ್ಚರಿಸಿ ಆ ನಿನ್ನ ಶತ್ರುವನ್ನು ಹೋಮಾಗ್ನಿಯಲ್ಲಿ ಆಹುತಿ ಮಾಡಿಬಿಡುತ್ತೇವೆ!”

ಹೀಗೆನ್ನುತ್ತಾ ಆ ತೇಜಶ್ಶಾಲಿ ಮುನಿಗಳು ಇಂದ್ರನನ್ನು ಕರೆಯುತ್ತಾ ಕೋಪದಿಂದ ಮಂತ್ರೋಚ್ಚಾರಣೆ ಮಾಡಿದರು. ಮಂತ್ರಗಳ ಸೆಳೆತಕ್ಕೊಳಗಾಗಿ ಇಂದ್ರನು ಆಕಾಶದಿಂದ ಬೀಳುತ್ತಾ ಬಂದನು! ಋಷಿಗಳು ಅಗ್ನಿಗೆ ಹವಿಸ್ಸನ್ನರ್ಪಿಸಿ ಇಂದ್ರನನ್ನು ಆಹುತಿ ಮಾಡಿಬಿಡುವಷ್ಟರಲ್ಲಿ ಬ್ರಹ್ಮದೇವನು ಪ್ರತ್ಯಕ್ಷನಾಗಿ ಅವರನ್ನು ತಡೆದನು.

“ನಿಲ್ಲಿಸಿ! ನೀವು ಇಂದ್ರನನ್ನು ವಧಿಸಬಾರದು! ಅವನು ಪರಮ ಪುರುಷನ ಪ್ರತಿನಿಧಿಯೇ ಆಗಿರುವನು. ಅವನು ಭಗವಂತನ ಸಮರ್ಥ ಸಹಾಯಕನು. ನೀವು ಯಜ್ಞಗಳನ್ನು ಆಚರಿಸಿ ಯಾವ ದೇವತೆಗಳನ್ನು ಮೆಚ್ಚಿಸಬೇಕೆಂದಿರುವಿರೋ, ಅವರೆಲ್ಲರೂ ಇಂದ್ರನ ಭಾಗಗಳೇ ಅಲ್ಲವೇ? ಅಂಥ ಇಂದ್ರನನ್ನೇ ವಧಿಸುವುದು ಸರಿಯೇ? ಯಜ್ಞವನ್ನು ವಿಘ್ನಗೊಳಿಸಲೆಂದು ಅವನು ಕೆಲವು ವೇಷಗಳನ್ನು ಧರಿಸಿದನು. ಮುಂದೆ ಅವು ಅಧಾರ್ಮಿಕ ವ್ಯಕ್ತಿಗಳ ವೇಷಗಳಾಗುತ್ತವೆ. ನೀವು ಇಂದ್ರನನ್ನು ವಿರೋಧಿಸಿದಷ್ಟೂ ಅವನು ಇಂಥ ಅಧಾರ್ಮಿಕ ಪದ್ಧತಿಗಳನ್ನು ರೂಢಿಗೆ ತರುತ್ತಾನೆ. ಈಗ ಪೃಥು ಮಹಾರಾಜನು ಮಾಡುತ್ತಿರುವ ಯಾಗವನ್ನು ನಿಲ್ಲಿಸಲಿ. ಅವನು ತೊಂಬತ್ತೊಂಬತ್ತು ಯಾಗಗಳಿಂದಲೇ ತೃಪ್ತನಾಗಲಿ” ಎಂದು ಬ್ರಹ್ಮನು ನುಡಿದನು.

ಅನಂತರ ಬ್ರಹ್ಮನು ಪೃಥುವಿನ ಕಡೆಗೆ ತಿರುಗಿ, “ಪೃಥು, ನೀನಾದರೋ ಮೋಕ್ಷ ಮಾರ್ಗವನ್ನು ಚೆನ್ನಾಗಿ ಅರಿತವನು. ಆದ್ದರಿಂದ ಇನ್ನೂ ಹೆಚ್ಚಿನ ಯಾಗಗಳನ್ನಾಚರಿಸುವುದರಿಂದ ಏನೂ ಪ್ರಯೋಜನವಿಲ್ಲ. ನೀನೂ ಇಂದ್ರನೂ ದೇವೋತ್ತಮ ಪರಮ ಪುರುಷನ ವಿಭಿನ್ನಾಂಶಗಳೇ ಆಗಿರುವಿರಿ. ಆದ್ದರಿಂದ ಇಂದ್ರನು ನಿನ್ನಿಂದ ಬೇರೆಯಲ್ಲ. ಅವನ ಮೇಲೆ ನೀನು ಕೋಪಗೊಳ್ಳುವುದು ಸರಿಯಲ್ಲ. ಈ ಯಜ್ಞಾಚರಣೆಯು ನಿನ್ನಿಂದ ಸಮರ್ಪಕವಾಗಿ ನಡೆಯದೆ ಹೋದುದಕ್ಕಾಗಿ ನೀನು ಚಿಂತಿಸಬೇಡ. ವಿಧಿಯ ಬಲದಿಂದ ನಡೆದ ಘಟನೆಯನ್ನು ಕುರಿತು ಹೆಚ್ಚು ಯೋಚಿಸಿ ಮರುಗಬೇಡ. ಹಾಗೆ ಮಾಡಿದರೆ ನಿನ್ನ ಮನಸ್ಸು ಗಾಢಾಂಧಕಾರವನ್ನು ಪ್ರವೇಶಿಸುತ್ತದೆ. ನನ್ನ ಮಾತುಗಳನ್ನು ಸ್ವಲ್ಪ ಗಮನವಿಟ್ಟು ಕೇಳು ಪೃಥು! ಈ ಯಜ್ಞವನ್ನು ಇಲ್ಲಿಗೇ ನಿಲ್ಲಿಸಿಬಿಡು. ಏಕೆಂದರೆ ಇದು ದೇವೇಂದ್ರನಲ್ಲಿ ಅಸೂಯೆಯನ್ನು ತಂದಿದೆ. ಅವನಿಂದ ಕೆಲವು ಪಾಪಕಾರ್ಯಗಳೂ ಅಧಾರ್ಮಿಕ ಚಟುವಟಿಕೆಗಳೂ ಉಂಟಾಗುವಂತೆ ಪ್ರಚೋದಿಸಿದೆ. ನೀನೇ ನೋಡು! ಈ ಇಂದ್ರನು ಯಜ್ಞಾಶ್ವವನ್ನೇ ಅಪಹರಿಸುವಂಥ ಹೇಯ ಕಾರ್ಯವೆಸಗಿದ್ದಾನೆ. ಇದು ಪಾಖಂಡಿಗಳಿಗೆ ಪ್ರೋತ್ಸಾಹ ನೀಡಿದಂತಾಗಿದೆ. ನೀನಾದರೋ ಭಗವಂತನಾದ ವಿಷ್ಣುವಿನ ಅಂಶದಿಂದಲೇ ಜನಿಸಿರುವೆ. ವೇನನಿಂದ ದುರಾಚಾರಗಳು ಹೆಚ್ಚಿ ಧರ್ಮಕ್ಕೆ ಗ್ಲಾನಿಯುಂಟಾದಾಗ ಧರ್ಮರಕ್ಷಣಾರ್ಥವಾಗಿ ಅವನ ದೇಹದಿಂದ ನೀನು ಆವಿರ್ಭವಿಸಿದೆ. ಆದ್ದರಿಂದ ಇಂದ್ರನ ಈ ಕುತ್ಸಿತ ಕಾರ್ಯವನ್ನು ವಿಮರ್ಶಿಸಿ ನೋಡು. ಅವನು ಹುಟ್ಟುಹಾಕಿದ ಈ ಪಾಖಂಡಧರ್ಮವು ಅನೇಕ ಉಪಧರ್ಮಗಳ ಮೂಲವಿದ್ದಂತೆ. ಅದನ್ನು ಬೇಗನೆ ನಿಗ್ರಹಿಸು,” ಎಂದು ಉಪದೇಶಿಸಿದನು.

ಲೋಕಗುರುವಾದ ಬ್ರಹ್ಮದೇವನು ಪೃಥುವಿಗೆ ಹೀಗೆ ಉಪದೇಶಿಸಲು, ಪೃಥುವು ಯಜ್ಞಾಚರಣೆಯನ್ನು ನಿಲ್ಲಿಸಿ ದೇವೇಂದ್ರನೊಡನೆ ಸ್ನೇಹದಿಂದ ಸಂಧಿ ಮಾಡಿಕೊಂಡನು. ಅನಂತರ ಅವನು ಅವಭೃಥ ಸ್ನಾನ ಮಾಡಿ ಸಕಲ ದೇವತೆಗಳ ಆಶೀರ್ವಚನಗಳನ್ನು ಪಡೆದನು. ಯಾಗಗಳಲ್ಲಿ ಉಪಸ್ಥಿತರಾಗಿದ್ದ ಬ್ರಾಹ್ಮಣರಿಗೆ ಭೂರಿದಕ್ಷಿಣೆಗಳನ್ನು ನೀಡಿ, ಅವರನ್ನು ಯೋಗ್ಯ ರೀತಿಯಲ್ಲಿ ಸತ್ಕರಿಸಿದನು. ಅವರೆಲ್ಲರೂ ಬಹು ಸಂತುಷ್ಟರಾಗಿ ಮಂಗಳಾಶೀರ್ವಾದಗಳನ್ನು ಮಾಡುತ್ತಾ ಅವನಿಗೆ ಹೇಳಿದರು, “ಎಲೈ ಆದಿರಾಜನಾದ ಪೃಥುವೇ, ಪಿತೃಗಳೂ, ದೇವತೆಗಳೂ, ಋಷಿಮುನಿಗಳೂ, ಸಾಮಾನ್ಯ ಜನರೂ ನಿನ್ನಿಂದ ಆಹ್ವಾನಿತರಾಗಿ ಈ ಮಹಾಯಜ್ಞಗಳಿಗೆ ಆಗಮಿಸಿದ್ದಾರೆ. ಎಲ್ಲರೂ ನಿನ್ನಿಂದ ಸತ್ಕೃತರಾಗಿ ಸಂತೃಪ್ತರಾಗಿದ್ದಾರೆ. ನಿನಗೆ ಮಂಗಳವಾಗಲಿ!”

ದೇವತೆಗಳೂ ಬ್ರಾಹ್ಮಣರೂ ಪೃಥುವನ್ನು ಶ್ಲಾಘಿಸಿ ಆಶೀರ್ವದಿಸಲು ಅವನು ಸಂತೋಷಭರಿತನಾದನು.

ಯಜ್ಞ ಮಂಟಪದಲ್ಲಿ ಆವಿರ್ಭವಿಸಿದ್ದ ಶ್ರೀಮನ್ನಾರಾಯಣನು ಪೃಥುವಿನ ಕಾರ್ಯದಿಂದ ಸಂತುಷ್ಟನಾಗಿ ಅವನಿಗೆ ಹೇಳಿದನು; “ನನ್ನ ಪ್ರಿಯ ರಾಜನೇ, ಈ ಇಂದ್ರನಿಂದ ನಿನ್ನ ಶತಯಾಗಾಚರಣೆಗೆ ವಿಘ್ನವುಂಟಾಗಿದೆ. ಆದರೆ ಈಗ ಕ್ಷಮೆಯಾಚಿಸುತ್ತಿರುವ ಅವನನ್ನು ಕ್ಷಮಿಸಿಬಿಡು. ಸಾಧುಗಳೂ, ಸುಜ್ಞಾನಿಗಳೂ ಎಂದಿಗೂ ಇತರರನ್ನು ದ್ವೇಷಿಸುವುದಿಲ್ಲ. ಇತರರ ಬಗ್ಗೆ ಅಸೂಯಾಪರರಾಗಿರುವುದಿಲ್ಲ. ಏಕೆಂದರೆ ಅವರಿಗೆ ದೇಹವೇ ಆತ್ಮವಲ್ಲವೆಂದು ಚೆನ್ನಾಗಿ ತಿಳಿದಿರುತ್ತದೆ. ರಾಜ! ಜ್ಞಾನವೃದ್ಧರನ್ನು ಸೇವಿಸಿ ಪ್ರಗತಿಯನ್ನು ಸಾಧಿಸಿರುವ ನಿನ್ನಂಥ ಜನರು ನನ್ನ ಮಾಯೆಗೆ ಒಳಗಾಗಿಬಿಟ್ಟರೆ, ನೀವು ಮಾಡಿದ ಸಾಧನೆಯೆಲ್ಲವೂ ವ್ಯರ್ಥವಾದಂತೆ!”

“ಮಹಾರಾಜ, ಯಾವ ವಿದ್ವಾಂಸನು ಈ ದೇಹವು ಅವಿದ್ಯೆಯಿಂದಲೂ ಕಾಮ್ಯಕರ್ಮಗಳಿಂದಲೂ ಉಂಟಾಗಿದೆಯೆಂದು ತಿಳಿದಿರುವನೋ ಅವನು ದೇಹದಲ್ಲಿ ಅತ್ಯಾಸಕ್ತಿ ತೋರುವುದಿಲ್ಲ. ಅಂತಹ ಜ್ಞಾನಿಯು, ದೇಹದ ಉತ್ಪನ್ನಗಳೇ ಆದ ಮನೆ, ಮಕ್ಕಳು, ಹಣ, ಮೊದಲಾದವುಗಳಲ್ಲಿ ವ್ಯಾಮೋಹ ತೋರುವನೇ? ಪರಮಾತ್ಮನು ಏಕನೂ, ಶುದ್ಧನೂ, ಸ್ವಯಂಪ್ರಕಾಶನೂ, ಭೌತಿಕಗುಣಗಳಿಲ್ಲದವನೂ, ಸದ್ಗುಣಗಳಿಗೆ ಆಶ್ರಯನೂ ಆಗಿದ್ದಾನೆ. ಎಲ್ಲೆಡೆಯೂ ವ್ಯಾಪಿಸಿರುವ ಅವನು ಭೌತಿಕ ಆವರಣರಹಿತನಾಗಿ ಸಕಲಕರ್ಮಗಳಿಗೂ ಸಾಕ್ಷಿಯಾಗಿರುತ್ತಾ ಜೀವಿಗಳಿಂದ ವಿಭಿನ್ನನಾಗಿದ್ದಾನೆ. ಜೀವಾತ್ಮ ಪರಮಾತ್ಮರನ್ನು ಕುರಿತು ಯಾರು ಈ ರೀತಿ ಅರಿತಿರುವರೋ, ಅಂಥವರು ಭೌತಿಕ ಜಗತ್ತಿನಲ್ಲಿದ್ದರೂ ಅದರ ಗುಣಗಳಿಂದ ಬಾಧಿತರಾಗದೆ ನನ್ನಲ್ಲೇ ತಮ್ಮ ಮನಸ್ಸನ್ನು ನೆಟ್ಟಿರುತ್ತಾರೆ. ಯಾವನು ಆಶಾರಹಿತನಾಗಿ ತನ್ನ ಧರ್ಮವನ್ನಾಚರಿಸುತ್ತಲೇ ಸದಾ ನನ್ನನ್ನು ಸೇವಿಸುವನೋ, ಅವನ ಮನಸ್ಸು ಬಹುಬೇಗನೆ ಪ್ರಸನ್ನಗೊಳ್ಳುತ್ತದೆ. ಭೌತಿಕ ಗುಣಗಳಿಂದ ದೂರವಾಗಿ ನಿರ್ಮಲವಾದ ಮನಸ್ಸನ್ನು ಹೊಂದಿದ ಅವನು ಎಲ್ಲವನ್ನೂ ಸಮವಾಗಿ ಕಾಣುತ್ತಾ ಶಾಂತಿಯನ್ನು ಪಡೆದು ನನಗೆ ಸಮಾನವಾದ ನೆಲೆಯಲ್ಲಿರುತ್ತಾನೆ. ಪಂಚಭೂತಗಳು, ಜ್ಞಾನೇಂದ್ರಿಯಗಳು, ಕರ್ಮೇಂದ್ರಿಯಗಳು ಮತ್ತು ಮನಸ್ಸಿನಿಂದಾಗಿರುವ ಈ ಭೌತಿಕ ದೇಹವು ಉದಾಸೀನನೂ, ಪ್ರತ್ಯಕ್ಷದರ್ಶಿಯೂ ಆಗಿರುವ ಆತ್ಮನ ಮೇಲ್ವಿಚಾರಣೆಗೊಳಪಟ್ಟಿದೆ ಎಂದು ತಿಳಿದಿರುವವನಿಗೆ ಶುಭವಾಗುತ್ತದೆ. ದೇಹದಿಂದ ತಾನು ಬೇರೆ ಎಂದು ಅರಿತಿರುವ ಅಂಥವನು ದೇಹಕ್ಕೆ ಸಂಬಂಧಿಸಿದ ಸುಖದುಃಖಗಳಿಂದ ವಿಚಲಿತನಾಗುವುದಿಲ್ಲ.”

“ಮಹಾವೀರ! ಉತ್ತಮ, ಮಧ್ಯಮ, ಅಧಮರೆಲ್ಲರಲ್ಲೂ ಸಮಭಾವನೆಯನ್ನು ಹೊಂದು. ಸುಖದುಃಖಗಳೆಂಬ ದ್ವಂದ್ವಗಳಿಂದ ಬಾಧಿತನಾಗದೆ ಜಿತೇಂದ್ರಿಯನಾಗಿರು. ನಾನು ವ್ಯವಸ್ಥೆ ಮಾಡಿರುವ ನೀತಿ ನಿಯಮಗಳಿಗನುಸಾರವಾಗಿ ನಿನ್ನ ಪ್ರಜೆಗಳ ಹಿತರಕ್ಷಣೆಯಲ್ಲಿ ತೊಡಗಿ, ರಾಜನಾಗಿ ನಿನ್ನ ಕರ್ತವ್ಯವನ್ನು ಪರಿಪಾಲಿಸು. ರಾಜನಾದವನು ಪ್ರಜಾರಕ್ಷಣೆಯೆಂಬ ತನ್ನ ಕರ್ತವ್ಯವನ್ನು ಸರಿಯಾಗಿ ಪಾಲಿಸಿದಲ್ಲಿ, ಪ್ರಜೆಗಳು ಮಾಡಿದ ಪುಣ್ಯಕರ್ಮಗಳ ಫಲದ ಆರನೆಯ ಒಂದು ಭಾಗವನ್ನು ತನ್ನ ಮರುಜನ್ಮದಲ್ಲಿ ಅನುಭವಿಸುತ್ತಾನೆ. ಹಾಗಲ್ಲದೆ ಅವನು ಕೇವಲ ತೆರಿಗೆಗಳನ್ನು ವಸೂಲುಮಾಡಿ, ಪ್ರಜೆಗಳಿಗೆ ರಕ್ಷಣೆ ನೀಡದಿದ್ದರೆ ಅವನ ಪುಣ್ಯಫಲಗಳು ಅವರಿಗೆ ಹೋಗುತ್ತವೆ. ಅಲ್ಲದೆ ಅವರು ಮಾಡಿದ ಪಾಪಕಾರ್ಯಗಳ ಫಲ ಇವನಿಗೆ ತಟ್ಟುತ್ತದೆ!”

“ರಾಜ! ಹೀಗೆ ನೀನು ದ್ವಿಜಶ್ರೇಷ್ಠರ, ಗುರುಹಿರಿಯರ ಉಪದೇಶಗಳಿಗನುಸಾರವಾಗಿ ವಿಷಯಾಸಕ್ತನಾಗದೆ ನಿನ್ನ ಕರ್ತವ್ಯಪಾಲನೆಯಲ್ಲಿ ನಿರತನಾಗಿರು. ಬಹು ಬೇಗನೆ ನಿನ್ನ ಮನೆಗೆ ಸನಕ, ಸನಂದನ, ಸನಾತನ, ಸನತ್ಕುಮಾರರೆಂಬ ಮುನಿಶ್ರೇಷ್ಠ ಕುಮಾರರು ಆಗಮಿಸಿ ಜ್ಞಾನೋಪದೇಶ ಮಾಡುವರು.”

“ಪುರುಷೋತ್ತಮ! ನನ್ನಿಂದ ಯಾವ ವರವನ್ನಾದರೂ ಯಾಚಿಸು. ನಿನ್ನ ಉತ್ತಮ ಗುಣಶೀಲಗಳಿಗೆ ನಾನು ಪರವಶನಾಗಿದ್ದೇನೆ. ಇಂಥ ಗುಣಶೀಲಗಳಿಲ್ಲದೆ ಕೇವಲ ಯಜ್ಞಾಚರಣೆಗಳಿಂದಾಗಲೀ, ತಪಸ್ಸಿನಿಂದಾಗಲೀ, ಯೋಗಾಚರಣೆಯಿಂದಾಗಲೀ ನನ್ನ ಸಾಕ್ಷಾತ್ಕಾರ ದುರ್ಲಭ. ಯಾರು ನನ್ನ ಭಕ್ತನಾಗಿ ಎಲ್ಲರನ್ನೂ ಸಮಭಾವದಿಂದ ನೋಡುವರೋ ಅಂಥವರ ಹೃದಯದಲ್ಲಿ ನಾನು ಕಾಣಿಸಿಕೊಳ್ಳುವೆ.”

ವಿಶ್ವಕ್ಕೇ ಗುರುವಾದ ಶ್ರೀಹರಿಯು ಹೀಗೆ ನುಡಿಯಲು, ಪೃಥು ಮಹಾರಾಜನು ಅವನ ಆದೇಶವನ್ನು ಶಿರಸಾ ಧರಿಸಿದನು.

ದೇವೇಂದ್ರನಿಗೆ ತಾನು ಮಾಡಿದ ಕೆಲಸಕ್ಕೆ ನಾಚಿಕೆಯಾಯಿತು. `ಪರಮ ಪುರುಷನೇ ಒಲಿದಿರುವ ಧೀಮಂತ ರಾಜನಿಗೆ ತಾನೆಂಥ ಅಪರಾಧವೆಸಗಿದೆ! ಛೆ!’ ಎಂದುಕೊಂಡ ಕೂಡಲೇ ಅವನು ಪೃಥು ಮಹಾರಾಜನ ಪಾದಗಳನ್ನು ಸ್ಪರ್ಶಿಸಲು ಬಾಗಿದನು. ಆಗ ಪೃಥುವು ಅವನನ್ನು ಹಿಡಿದೆತ್ತಿ ಆಲಂಗಿಸಿಕೊಂಡನು. ಅವನ ಮೇಲಿನ ದ್ವೇಷವನ್ನು ಸಂಪೂರ್ಣವಾಗಿ ತೊರೆದನು.

ಪೃಥುವು ದೇವೋತ್ತಮ ಪರಮ ಪುರುಷನ ಪಾದಗಳನ್ನು ಭಕ್ತಿಯಿಂದ ಸಂಪೂಜಿಸಿದನು. ಕ್ಷಣಕ್ಷಣಕ್ಕೂ ಅವನಿಗೆ ಶ್ರೀಹರಿಯಲ್ಲಿ ಪ್ರೇಮಭಕ್ತಿಯು ವರ್ಧಿಸಿತು. ಭಗವಂತನು ಹೊರಡಲನುವಾದನು. ಆದರೆ ಭಕ್ತಿಯೆಂಬ ಸೌಂದರ್ಯದಿಂದ ಕಂಗೊಳಿಸುತ್ತಿದ್ದ, ತಾವರೆಯಂಥ ಕಂಗಳಿಂದ ಕೂಡಿದ್ದ ಪೃಥುವನ್ನು ಬಿಟ್ಟು ಹೋಗಲು ಅವನಿಗೂ ಮನಸ್ಸಾಗಲಿಲ್ಲ. ಅವನಿಗೆ ಮತ್ತಷ್ಟು ಅನುಗ್ರಹ ತೋರಲೆಂದು ಅಲ್ಲೇ ನಿಂತನು. ಭಗವಂತನು ಭಕ್ತಜನಪ್ರಿಯನಲ್ಲವೇ?

ಪೃಥು ಮಹಾರಾಜನ ಕಂಗಳು ಭಕ್ತಿರಸಜಲದಿಂದ ತುಂಬಿ ಬಂದವು. ಆಗ ಅವನಿಗೆ ಶ್ರೀಹರಿಯನ್ನು ನೋಡಲೂ ಆಗದಂತಾಯಿತು! ಅವನ ಕಂಠವು ಪ್ರೇಮವಿಹ್ವಲತೆಯಿಂದ ಬಿಗಿದು ಬಂದು, ಏನೂ ಮಾತನಾಡಲಾರದಂತಾದನು! ಭಗವಂತನನ್ನು ತನ್ನ ಹೃದಯದಲ್ಲೇ ಗಾಢವಾಗಿ ಆಲಂಗಿಸಿಕೊಂಡು ಅಂಜಲೀಬದ್ಧನಾಗಿ ನಿಂತುಬಿಟ್ಟನು.

ಭಗವಂತನು ತನ್ನ ಒಂದು ಕೈಯನ್ನು ಗರುಡನ ಹೆಗಲ ಮೇಲಿರಿಸಿ ತನ್ನ ಪಾದಪದ್ಮಗಳು ಇನ್ನೇನು ನೆಲಕ್ಕೆ ಸ್ಪರ್ಶಿಸುವವೋ ಎಂಬಂತೆ ನಿಂತಿದ್ದನು. ಪೃಥುವು ಒಂದೇ ಸಮನೆ ತನ್ನ ಕಂಗಳಿಂದ ಹರಿಯುತ್ತಿದ್ದ ಆನಂದಬಾಷ್ಪಗಳನ್ನು ಒರೆಸಿಕೊಂಡು ನೊಂದವರ ತಾಪಗಳನ್ನು ಒಮ್ಮೆಲೇ ಆರಿಸುವಂತಿದ್ದ ಭಗವಂತನ ಸುಂದರತಮ ರೂಪವನ್ನು ಕಣ್ತುಂಬ ನೋಡಲು ಪ್ರಯತ್ನಿಸಿದನು. ಆದರೆ ಎಷ್ಟು ನೋಡಿದರೂ ಭಗವಂತನನ್ನು ಮತ್ತೆ ಮತ್ತೆ ನೋಡಬೇಕೆನಿಸುತ್ತಿತ್ತು. ತನ್ನ ಆನಂದೋದ್ವೇಗವನ್ನು ತಡೆಯುತ್ತಾ ಗದ್ಗದ ಕಂಠದಿಂದ ನಿಧಾನವಾಗಿ ಶ್ರೀಹರಿಯನ್ನು ಸ್ತುತಿಸಿದನು.

“ಪ್ರಭೋ! ಪ್ರಾಕೃತಿಕ ತ್ರಿಗುಣಗಳಿಂದ ಬಾಧಿತರಾಗಿರುವ ಜನರಿಗಾಗಿಯೇ ಇರುವ ವರಗಳನ್ನು ಬುದ್ಧಿವಂತರಾದವರು ಬೇಡುವರೇ? ಅವು ನರಕದಲ್ಲಿ ನರಳುತ್ತಿರುವವರಿಗೂ ದೊರೆಯುತ್ತವೆ. ಪ್ರಭು! ನಾನು ನಿನ್ನಲ್ಲಿ ಐಕ್ಯವಾಗುವ ಕೈವಲ್ಯ ಪದವಿಯನ್ನೂ ಅಪೇಕ್ಷಿಸುವುದಿಲ್ಲ. ಏಕೆಂದರೆ ಆಗ ನಿನ್ನ ಚರಣಕಮಲಗಳ ಮಕರಂದವನ್ನು ಸವಿಯುವ ಅವಕಾಶವೇ ಇರುವುದಿಲ್ಲವಲ್ಲ! ಆದ್ದರಿಂದ ಪ್ರಭು, ನೀನು ನನಗೆ ವರವನ್ನು ದಯಪಾಲಿಸುವುದಾದರೆ ನನಗೆ ಅಸಂಖ್ಯಾತ ಕಿವಿಗಳನ್ನು ದಯಪಾಲಿಸು! ನಿನ್ನ ಭಕ್ತರ ಬಾಯಿಂದ ನಿನ್ನ ಲೀಲಾವೈಭವಗಳನ್ನು ಮನಸಾರೆ ಕೇಳಿ ತೃಪ್ತನಾಗುವೆ. ಭಗವದ್ಭಕ್ತರು ನಿನ್ನ ಲೀಲೆಗಳನ್ನು ಭಕ್ತಿಯಿಂದ ವರ್ಣಿಸುವಾಗ ನಿನ್ನ ಚರಣಾಂಬುಜಗಳ ಸುಧೆಯ ಗಂಧವನ್ನು ಹೊತ್ತು ತರುವ ಮಾರುತವು, ನಿನ್ನೊಡನಿರುವ ಮರೆತುಹೋದ ನಮ್ಮ ಸಂಬಂಧವನ್ನು ನೆನಪಿಸುತ್ತದೆ. ಆದ್ದರಿಂದ ನನಗೆ ಈ ಒಂದು ವರವೇ ಸಾಕು. ನಿನ್ನ ಭಕ್ತಿಸೇವೆಯಲ್ಲಿ ನಿರತವಾಗುವ ಭಾಗ್ಯವಲ್ಲದೆ ಮತ್ತೇನೂ ಬೇಡ.”

“ಪರಮ ಪ್ರಭುವೆ! ಮಹಾಮಹಿಮನೇ! ಪರಮ ಮಂಗಳಕರವಾಗಿರುವ ನಿನ್ನ ಕಥಾಪ್ರಸಂಗಗಳನ್ನು ಭಕ್ತರ ಸಂಗದಲ್ಲಿ ಒಮ್ಮೆ ಕೇಳಿದರೂ ಸಾಕು, ಪಶುವಲ್ಲದ ಯಾರೇ ಆದರೂ ಅಂಥ ಭಕ್ತರ ಸಂಗವನ್ನು ಬಿಡುವುದಿಲ್ಲ. ಸಾಕ್ಷಾತ್‌ ಲಕ್ಷ್ಮೀದೇವಿಯೇ ನಿನ್ನ ಮಹಿಮೆಗಳನ್ನು ಕೇಳುವ ಆಸೆಯಿಂದ ಅಂಥ ಭಕ್ತರ ಸಂಗವನ್ನು ಬಯಸುವಳು!”

“ಶ್ರೀಹರಿ! ನಾನೂ ಲಕ್ಷ್ಮೀದೇವಿಯಂತೆಯೇ ಕೈಯಲ್ಲಿ ಪದ್ಮಪುಷ್ಪವನ್ನು ಹಿಡಿದು ನಿನ್ನ ಪಾದಸೇವೆ ಮಾಡುತ್ತೇನೆ. ಆಗ ಒಂದೇ ಕೆಲಸದಲ್ಲಿ ನಿರತರಾಗುವ ನಮ್ಮೀರ್ವರಲ್ಲೂ ಕಲಹವೇ ಉಂಟಾಗಬಹುದು! ಜಗಜ್ಜನನಿಯಾದ ಲಕ್ಷ್ಮೀದೇವಿಯ ಸೇವೆಗೆ ನನ್ನಿಂದ ಅಡ್ಡಿಯಾದರೆ ಅವಳಿಗೆ ನನ್ನ ಮೇಲೆ ಕೋಪವೇ ಉಂಟಾಗಬಹುದು! ಆಗ ನೀನು ನನ್ನ ಅಲ್ಪಕಾರ್ಯವನ್ನೂ ದೊಡ್ಡದೆಂದು ಭಾವಿಸಿ ನನ್ನ ಪರವಾಗುವೆಯಲ್ಲವೇ? ಸ್ವಯಂ ಪರಿಪೂರ್ಣನಾದ ನಿನಗೆ ಲಕ್ಷ್ಮೀಯಿಂದೇನೂ ಆಗಬೇಕಿಲ್ಲವಲ್ಲ!”

“ಭಗವಂತನೇ! ಸಾಧುಜನರು ಮಾಯೆಯ ಹಿಡಿತದಿಂದ ಬಿಡುಗಡೆ ಹೊಂದಲೆಂದು ನಿನ್ನ ಪಾದಪದ್ಮಗಳನ್ನು ಭಜಿಸುವರು. ನಿನ್ನ ಪಾದಪದ್ಮಗಳನ್ನು ಬಿಟ್ಟರೆ ಮಾಯಾಬಂಧನದಿಂದ ಬಿಡುಗಡೆ ಹೊಂದಲು ಬೇರಾವ ಮಾರ್ಗವೂ ಇಲ್ಲ.”

“ವರವನ್ನು ಬೇಡು ಎಂದು ನೀನು ಹೇಳಿದುದು ಜಗತ್ತನ್ನೇ ಮೋಹಗೊಳಿಸುವಂತಿದೆ. ವೇದಗಳಲ್ಲಿ ಬರುವ ಹೂವಿನಂಥ ಮಾತುಗಳಿಗೆ ಮರುಳಾಗಿ ಜನರು ಮತ್ತೆ ಮತ್ತೆ ಕಾಮ್ಯಕರ್ಮಗಳಲ್ಲಿ ತೊಡಗುತ್ತಾರೆ. ಆದರೆ ಇವು ಶುದ್ಧ ಭಕ್ತರಿಗಲ್ಲ. ನಿನ್ನ ಮಾಯಾಶಕ್ತಿಗೆ ಒಳಗಾಗಿ ಆತ್ಮಜ್ಞಾನರಹಿತರಾದ ಜನರು ಲೌಕಿಕ ವಸ್ತುಗಳಲ್ಲೇ ಆಸಕ್ತರಾಗಿರುತ್ತಾರೆ. ದಯವಿಟ್ಟು ಅಂತಹ ಲೌಕಿಕ ಪ್ರಯೋಜನಕ್ಕಾಗಿ ವರವನ್ನು ಬೇಡೆಂದು ಹೇಳಬೇಡ. ಮಗನು ಕೇಳದೆಯೇ ತಂದೆಯು ಅವನಿಗೆ ಒಳ್ಳೆಯದನ್ನು ಮಾಡುವಂತೆ ನನಗೆ ಹಿತವಾದುದನ್ನು ನೀನೇ ಅನುಗ್ರಹಿಸು.”

ಆದಿರಾಜನಾದ ಪೃಥುವಿನ ಮಾತುಗಳನ್ನು ಕೇಳಿ ಸಂತುಷ್ಟನಾದ ಭಗವಂತನು ಅವನಿಗೆ ಹೇಳಿದನು; “ರಾಜನೇ! ನಿನಗೆ ನನ್ನಲ್ಲಿ ಸದಾ ಭಕ್ತಿಯಿರಲಿ. ನಿನ್ನಂತೆಯೇ ಬುದ್ಧಿಯಿರುವವರು ದಾಟಲಶಕ್ಯವಾದ ನನ್ನ ಮಾಯೆಯನ್ನು ಸುಲಭವಾಗಿ ದಾಟುವರು. ನಾನು ನೀಡಿದ ಆದೇಶವನ್ನು ಶ್ರದ್ಧೆಯಿಂದ ಪಾಲಿಸು. ಎಲೈ ಪ್ರಜಾಪಾಲಕನೇ, ನನ್ನ ಆದೇಶಗಳನ್ನು ಪಾಲಿಸುವವನಿಗೆ ಸದಾ ಎಲ್ಲೆಡೆಗಳಿಂದಲೂ ಶುಭವಾಗುತ್ತದೆ.”

ಭಗವಂತನು ಹೀಗೆ ನುಡಿಯಲು, ಪೃಥು ಚಕ್ರವರ್ತಿಯು ಅವನನ್ನು ಯಥಾವಿಧಿಯಾಗಿ ಅರ್ಚಿಸಿದನು. ಅವನ ಅರ್ಚನೆಯಿಂದ ಶ್ರೀಹರಿಯೂ ಸಂತೃಪ್ತನಾದನು. ಅನಂತರ ಪೃಥುವು ದೇವರ್ಷಿಗಳನ್ನೂ, ಗಂಧರ್ವರನ್ನೂ, ಸಿದ್ಧಚಾರಣ ಪನ್ನಗರನ್ನೂ, ಅಪ್ಸರಕಿನ್ನರರನ್ನೂ, ಮನುಷ್ಯರನ್ನೂ, ಪಶುಪಕ್ಷಿಗಳನ್ನೂ ಪೂಜಿಸಿ ತೃಪ್ತಿಪಡಿಸಿದನು. ತನ್ನ ಸುಮಧುರ ನುಡಿಗಳಿಂದ ಎಲ್ಲರನ್ನೂ ಸಂತೋಷಪಡಿಸಿದನು. ಎಲ್ಲರೂ ಅವನನ್ನು ಅಭಿವಂದಿಸಿ, ವೈಕುಂಠಪತಿಯನ್ನನುಸರಿಸಿ ತಂತಮ್ಮ ಲೋಕಗಳಿಗೆ ಹೊರಟರು. ಭಗವಂತನಾದ ಶ್ರೀಮನ್ನಾರಾಯಣನೂ ಪೃಥುವಿನ ಮತ್ತು ನೆರೆದಿದ್ದವರೆಲ್ಲರ ಮನಸ್ಸನ್ನು ಅಪಹರಿಸಿ ತನ್ನ ದಿವ್ಯಧಾಮಕ್ಕೆ ತೆರಳಿದನು.

ದೇವೋತ್ತಮ ಪರಮ ಪುರುಷನಾದ ಶ್ರೀಮನ್ನಾರಾಯಣನ ದರ್ಶನವು ಅತ್ಯಂತ ದುರ್ಲಭವಾದುದು. ಸ್ಥಾವರ ಜಂಗಮಗಳಿಗೆ ಸದಾ ಅಗೋಚರನಾದ ಅವನು ಪೃಥುವಿಗೆ ದರ್ಶನವಿತ್ತನು. ಅವನ ನೇತ್ರಕಮಲಗಳಿಗೆ ಗೋಚರನಾದನು. ಪರಮ ಪ್ರಭುವಿನ ದಿವ್ಯದರ್ಶನದಿಂದ ರೋಮಾಂಚನಗೊಂಡ ಪೃಥುವು ಭಗವಂತನಿಗೆ ಮತ್ತೆ ಮತ್ತೆ ಭಕ್ತಿಯಿಂದ ನಮಸ್ಕರಿಸಿದನು. ಅವನು ಹೋದ ಬಳಿಕವೂ ತನಗಾದ ದಿವ್ಯ ಅನುಭವವನ್ನು ನೆನೆನೆನೆದು ಆಗಸವನ್ನೇ ದಿಟ್ಟಿಸಿ ನೋಡುತ್ತಾ ನಿಂತನು.

ಈ ಲೇಖನ ಶೇರ್ ಮಾಡಿ