ಶ್ರೀಕೃಷ್ಣ-ದೇವೋತ್ತಮ ಪರಮ ಪುರುಷ

ಆಧಾರ : ಶ್ರೀಮದ್‌ ಭಾಗವತ ಸ್ಕಂಧ 9, ಅಧ್ಯಾಯ 24

ನೈಮಿಷಾರಣ್ಯದ ಅಸಂಖ್ಯಾತ ಮುನಿಗಳು ಅಂದು ಸೂರ್ಯೋದಯ ಆದಾಗಿನಿಂದಲೂ ಯಾವುದೋ ಒಂದು ರೀತಿಯ ಆನಂದಾತಿರೇಕಗಳ ಭಾವನೆಗಳಲ್ಲಿ ಸುಖ-ಶಾಂತಿಗಳನ್ನು ಅನುಭವಿಸುತ್ತಿದ್ದರು. ಬಹುಬೇಗ ಸ್ನಾನಾಹ್ನೀಕಗಳನ್ನು ಮುಗಿಸಿಕೊಂಡು ಹಿರಿಯರಾದ ಸೂತಮುನಿಗಳ ಶ್ರೀಮದ್ಭಾಗವತ ಕಥಾಶ್ರವಣಕ್ಕೆ ಕಿವಿಗೊಡಲು ಸಂತಸ-ಕುತೂಹಲಗಳಿಂದ ಧಾವಿಸಿದರು.

ಸೂತಮುನಿಗಳ ಮುಖ ಜಾಜ್ವಲ್ಯಮಾನವಾಗಿ ಪ್ರಕಾಶಿಸುತ್ತಿತ್ತು. ಅತ್ಯಂತ ಶಾಂತಚಿತ್ತ, ತಾಪಸೀ ಕಳೆ ಅವರ ಭಾವನೆಗಳಲ್ಲಿ ರಾರಾಜಿಸುತ್ತಿತ್ತು. ಮಹಾಭಾರತದ ಮಹಾನ್‌ ವೈಭವದ ಪ್ರಭಾವಲಯದಲ್ಲೆ ಇನ್ನೂ ಇದ್ದಂತಿದ್ದ ಋಷಿಗಣ ಇಂದಿನ ಕೃಷ್ಣಾವತಾರದ ಕಥಾಭಾಗವನ್ನು ಆಲಿಸಲು ಭಕ್ತಿಶ್ರದ್ಧೆಗಳಿಂದ ನೆರೆದಿದ್ದರು.

ಸೂತಮುನಿಗಳು ಪ್ರಾರಂಭಿಸಿದರು –

`ಪ್ರಿಯ ಮುನಿಗಳೆ, ಇಂದು ನೈಮಿಷಾರಣ್ಯದಲ್ಲಿ ಆನಂದ-ನೆಮ್ಮದಿಗಳ ಮೆರುಗೊಂದು ಆವರಿಸಿಕೊಂಡಂತಿದೆ. ನಮ್ಮೆಲ್ಲರ ಹೃದಯಗಳಲ್ಲಿ ಸಂತಸದ ಕಮಲಗಳು ಅರಳಿವೆ.

`ಯಯಾತಿ ಪುತ್ರರ ರಾಜವಂಶದಲ್ಲಿ ಅಚ್ಚರಿಯ ಒಂದು ಕುಡಿಯಂತೆ ಚಿಗುರೊಡೆದ, ತನ್ನ ತಂದೆ ಕರೆತಂದ ಕನ್ಯೆಯ ಗರ್ಭದಿಂದ ಮೂವರು ಮಕ್ಕಳು – ಕುಶ, ಕಥ, ರೋಮಪಾದ ಅವರನ್ನು ಪಡೆದ ವಿದರ್ಭನ ರಾಜವಂಶ ಮಹಾನ್‌ ವಂಶವಾಗಿ ಬೆಳೆಯಿತು. ರೋಮಪಾದ ತುಂಬ ಪ್ರಸಿದ್ಧನಾಗಿ, ಪ್ರಜೆಗಳ ಅಚ್ಚುಮೆಚ್ಚಿನವನಾಗಿ ಬೆಳೆದ. ಇವನಿಗೆ ಬಬ್ರು ಎಂಬ ಮಗ ಹುಟ್ಟಿದ. ಬಬ್ರುವಿಗೆ ಕೃತಿ, ಕೃತಿಗೆ ಉಶಿಕ, ಉಶಿಕನಿಗೆ ಚೇದಿ, ಚೇದಿಗೆ ಚೈದ್ಯ ಹುಟ್ಟಿದರು. ಪ್ರಸಿದ್ಧರಾದರು.

`ವಿದರ್ಭನ ಇನ್ನೊಬ್ಬ ಮಗ ಕ್ರಥನ ಮಗ ಕುಂತಿ. ಇವನ ಮಗ ವೃಷ್ಣಿ, ಇವನ ಮಗ ನಿರ್‌ವೃತಿ, ಇವನ ಮಗ ದಶಾರ್ಹ, ಇವನ ಮಗ ವೋಮ, ಇವನ ಮಗ ದಾಶಾರ್ಹ, ಇವನ ಮಗ ವೋಮ, ಇವನಿಗೆ ಜೀಮೂತ, ಜೀಮೂತನಿಗೆ ವಿಕೃತಿ, ವಿಕೃತಿಗೆ ಭೀಮರಥ, ಭೀಮರಥನಿಗೆ ನವರಥ, ನವರಥನಿಗೆ ದಶರಥ, ದಶರಥನಿಗೆ ಶಕುನಿ, ಶಕುನಿಗೆ ಕರಂಭಿ, ಕರಂಭಿಗೆ ದೇವರಾತ ಇವನಿಗೆ ದೇವಕ್ಷತ್ರ, ಇವನಿಗೆ ಮಧು, ಮಧುವಿಗೆ ಕುರವಂಶ, ಇವನಿಗೆ ಅನು ಎನ್ನುವ ಮಕ್ಕಳು ಹುಟ್ಟಿದರು.

`ಪ್ರಿಯ ನೈಮಿಷಾರಣ್ಯ ತಾಪಸಿಗಳೆ, ಮುಂದೆ ಶ್ರೀಕೃಷ್ಣ ಅವತರಿಸುವ ಕಥಾಭಾಗ ಬರುವವರೆಗೂ ನಾನು ನಿಮಗೆ ಸಾವಿರಾರು ವರ್ಷಗಳ ವಂಶಾವಳಿಗಳನ್ನೇ ಹೇಳಬೇಕಾಗಿದೆ. ಇದೊಂದು ರೀತಿಯ ಶುಷ್ಕದಾಖಲೆ ಎಂಬಂತನ್ನಿಸಿದರೂ, ಅಲ್ಲಲ್ಲಿ ಒಬ್ಬ ಸಾಧನಶೀಲ ವ್ಯಕ್ತಿ, ಸಾಧನೆಯ ವಿವರಗಳು ಕಂಡಾಗ ಕಥಾಶ್ರವಣ ಒಂದಿಷ್ಟು ಸ್ವಾರಸ್ಯವೆನಿಸಬಹುದು. ಅಂತೆಯೇ, ಈಗ ರಾಜವಂಶಗಳ ಸರಪಳಿಯನ್ನು ಆಲಿಸಲು ನಿಮ್ಮ ಕರ್ಣಗಳನ್ನು ಸಿದ್ಧರಾಗಿಸಿ ಎಂದು ಪ್ರಾರ್ಥಿಸುತ್ತೇನೆ!

ಅನುವಿನ ಮಗ ಪುರುಹೋತ್ರ, ಇವನ ಮಗ ಆಯು ಇವನ ಮಗ ಸಾತ್ವತ, ಇವನಿಗೆ ಭಜಮಾನ, ಭಜಿ, ದಿವ್ಯ, ವೃಷ್ಣಿ, ದೇವಾವೃಧ, ಅಂಧಕ ಮತ್ತು ಮಹಾಭೋಜ ಎಂಬ ಏಳು ಮಂದಿ ಪುತ್ರರು ಜನಿಸಿದರು. ಭಜಮಾನನಿಗೆ ಒಬ್ಬಳು ಪತ್ನಿಯ ಗರ್ಭದಲ್ಲಿ ನಿಮ್ನೋಚಿ, ಕಿಂಕಣ ಮತ್ತು ಧೃಷ್ಟಿ ಎಂಬ ಹೆಸರಿನ ಮೂವರು ಪುತ್ರರು ಜನಿಸಿದರೆ, ಮತ್ತೊಬ್ಬಳು ಪತ್ನಿಯಿಂದ ಸತ್ಯಜಿತ್‌, ಸಹಸ್ರಜಿತ್‌ ಮತ್ತು ಅಯುತಾಜಿತ ಎನ್ನುವ ಮೂವರು ಪುತ್ರರು ಜನಿಸಿದರು.

ದೇವಾವೃಧನಿಗೆ ಬಬ್ರು ಎನ್ನುವ ಮಗ ಹುಟ್ಟಿದ. ಈ ಅಪ್ಪ-ಮಗನ ಕೀರ್ತಿ ಆ ಕಾಲದಲ್ಲೇ ಸರ್ವಲೋಕ ತಲಪಿತ್ತು. ಇವರಿಬ್ಬರಿಗೆ ಸಂಬಂಧಿಸಿದಂತೆ ಎರಡು ಶ್ಲೋಕಗಳು ರಚನೆಗೊಂಡು ಯುಗಯುಗಗಳಲ್ಲೂ ಅಮರವಾಗಿ ಉಳಿದುಕೊಂಡವು – `ನಮ್ಮ ಪೂರ್ವಜರು ಅವುಗಳನ್ನು ಹಾಡುತ್ತಿದ್ದರು. ನಾವು ದೂರದಿಂದ ಅವುಗಳನ್ನು ಕೇಳಿಸಿಕೊಂಡಿದ್ದೇವೆ. ಈಗಲೂ ಸಹ ಅವರ ಗುಣಗಾನವನ್ನು ಅದೇ ಕೀರ್ತನೆಗಳಿಂದ ನಾನು ಕೇಳುತ್ತೇನೆ. ಏಕೆಂದರೆ, ಹಿಂದೆ ಕೇಳಿದ್ದನ್ನೇ ನಿತ್ಯನಿರಂತರವಾಗಿ ಇಂದಿಗೂ ಹಾಡಲಾಗುತ್ತಿದೆ!’ – ಎಂದು ಶುಕಮುನಿಗಳು ಸಂತಸದಿಂದ ಹೇಳಿ ಅವೆರಡು ಶ್ಲೋಕಗಳನ್ನು ಪಠಿಸಿ ಅದಕ್ಕೆ ಅರ್ಥವನ್ನೂ ವಿವರಿಸುತ್ತಾರೆ.

`ಮಾನವ ಜೀವಿಗಳಲ್ಲಿ ಬಬ್ರುವನ್ನು ಶ್ರೇಷ್ಠನೆಂದೂ ಮತ್ತು ದೇವಾವೃಧನು ದೇವತೆಗಳಿಗೆ ಸರಿಸಮಾನನೆಂದೂ ನಿರ್ಧರಿಸಲಾಗಿದೆ. ಬಬ್ರು ಮತ್ತು ದೇವಾವೃಧನ ಸಾಹಚರ್ಯದಿಂದಾಗಿ ಅವರ ವಂಶಜರೆಲ್ಲರೂ ಅಂದರೆ, ಹದಿನಾಲ್ಕು ಸಾವಿರದ ಅರವತ್ತೈದು ಮಂದಿ ಮುಕ್ತಿ ಪಡೆದರು!’

ಸರ್ವೋತ್ಕೃಷ್ಟ ಧರ್ಮಾತ್ಮನಾಗಿದ್ದ ದೊರೆ ಮಹಾಭೋಜನ ವಂಶದಲ್ಲಿ ಭೋಜರಾಜರು ಹುಟ್ಟಿದರು. ಮಹಾಭೋಜನ ಸೋದರ ವೃಷ್ಟಿಗೆ ಸುಮಿತ್ರ ಮತ್ತು ಯುಧಾಜಿತರು ಹುಟ್ಟಿದರು. ಯುಧಾಜಿತನಿಗೆ ಶಿನಿ ಮತ್ತು ಅನಮಿತ್ರರು ಜನಿಸಿದರು. ಅನಮಿತ್ರನಿಗೆ ನಿಘ್ನ ಎಂಬ ಮಗ, ಸತ್ರಾಜಿತ ಮತ್ತು ಪ್ರಸೇನರು ನಿಘ್ನನ ಪುತ್ರರು. ನಿಘ್ನನ ಸೋದರ ಶಿನಿ. ಶಿನಿಯ ಪುತ್ರ ಸತ್ಯಕ. ಇವನ ಮಗ ಯುಯುಧಾನ. ಇವನ ಮಗ ಜಯ, ಜಯನ ಮಗ ಕುಣಿ, ಕುಣಿಯ ಮಗ ಯುಗಂಧರ, ನಿಘ್ನನ ಇನ್ನೊಬ್ಬ ಸೋದರ ವೃಷ್ಣಿ. ಇವನಿಗೆ ಶ್ವಫಲ್ಕ ಮತ್ತು ಚಿತ್ರರಥ ಎಂಬಿಬ್ಬರು ಪುತ್ರರು. ಶ್ವಫಲ್ಕನ ಪತ್ನಿ ಗಾಂದಿನೀಯ ಗರ್ಭದಲ್ಲಿ ಅಕ್ರೂರ ಹುಟ್ಟಿದ. ಇವನಿಗೆ ಹನ್ನೆರಡು ಮಂದಿ ಸೋದರರಿದ್ದರು. ಎಲ್ಲರೂ ಶ್ರೀಮದ್ಭಾಗವತ ಪುರಾಣದ ಸುಪ್ರಸಿದ್ಧ ವ್ಯಕ್ತಿಗಳು. ಈ ಹನ್ನೆರಡು ಮಂದಿಯ ಹೆಸರು – ಆಸಂಗ, ಸಾರಮೇಯ, ಮೃದುರ, ಮೃದುವಿತ್‌, ಗಿರಿ, ಧರ್ಮವೃದ್ಧ, ಸುಕರ್ಮಾ, ಕ್ಷೇತ್ರೋಪೇಕ್ಷ, ಅರಿಮರ್ದನ, ಶತ್ರುಘ್ನ, ಗಂಧಮಾದ ಮತ್ತು ಪ್ರತಿಬಾಹು. ಇವರಿಗೆ ಸುಚಾರಾ ಎಂಬ ತಂಗಿಯೊಬ್ಬಳಿದ್ದಳು. ಅಕ್ರೂರನಿಗೆ ದೇವವಾನ್‌ ಮತ್ತು ಉಪದೇವ ಎಂಬ ಇಬ್ಬರು ಗಂಡುಮಕ್ಕಳು. ಚಿತ್ರರಥನಿಗೆ ಪೃಥು ಮತ್ತು ವಿದೂರಥರು ಸೇರಿದಂತೆ ಹಲವಾರು ಮಂದಿ ಪುತ್ರರು ಜನಿಸಿದರು. ಇವರೆಲ್ಲ ವೃಷ್ಣಿ ವಂಶಕ್ಕೆ ಸೇರಿದವರೆಂದೇ ಕೀರ್ತಿಶಾಲಿಗಳಾದರು.

ಇದೇ ವಂಶದ ಅಂಧಕನಿಗೆ ಕುಕುರ, ಭಜಮಾನ, ಶುಚಿ ಮತ್ತು ಕಂಬಲಬರ್ಹಿಷ ಎನ್ನುವ ನಾಲ್ವರು ಪುತ್ರರು. ಕುಕುರನ ಮಗ ವಹ್ನಿ, ಇವನ ಮಗ ವಿಲೋಮ. ವಿಲೋಮನ ಮಗ ಕಪೋತರೋಮ. ಇವನ ಮಗ ಅನು, ಇವನ ಮಿತ್ರ ತುಂಬುರು. ಅನುವಿನ ಮಗ ಅಂಧಕ. ಇವನ ಮಗ ದುಂದುಭಿ. ಇವನ ಮಗ ಅವಿದ್ಯೋತ. ಇವನಿಗೆ ಪುನರ್ವಸು ಹುಟ್ಟಿದರು. ಇವನಿಗೆ ಆಹುಕ ಎನ್ನುವ ಗಂಡು ಮತ್ತು ಆಹುಕೀ ಎನ್ನುವ ಹೆಣ್ಣು ಮಗು ಹುಟ್ಟಿದವು.

ಶ್ರೀಮದ್ಭಾಗವತದ ಮುಂದಿನ ಕಥಾಭಾಗಕ್ಕೆ ಆಹುಕ ಮುಖ್ಯನಾಗುತ್ತಾನೆ. ಇವನಿಗೆ ದೇವಕ ಮತ್ತು ಉಗ್ರಸೇನ ಎನ್ನುವ ಇಬ್ಬರು ಮಕ್ಕಳು. ಉಗ್ರಸೇನನೇ ಕಂಸನ ತಂದೆ.

ದೇವಕನಿಗೆ ದೇವವಾನ್‌, ಉಪದೇವ, ಸುದೇವ ಮತ್ತು ದೇವವರ್ಧನ ಎನ್ನುವ ನಾಲ್ವರು ಪುತ್ರರು. ಮತ್ತು ಶಾಂತಿದೇವಾ, ಉಪದೇವಾ, ಶ್ರೀದೇವಾ, ದೇವರಕ್ಷಿತಾ, ಸಹದೇವಾ, ದೇವಕೀ ಮತ್ತು ಧೃತದೇವಾ ಎನ್ನುವ ಏಳು ಮಂದಿ ಪುತ್ರಿಯರು. ಇದರಲ್ಲಿ ದೇವಕಿಯೇ ಶ್ರೀಕೃಷ್ಣನ ತಾಯಿಯಾಗುವ ಅದೃಷ್ಟ ಪಡೆದವಳು.

ಮುಂದೆ ವಸುದೇವ ಈ ಸಪ್ತಕನ್ಯೆಯರನ್ನೂ ಮದುವೆಯಾದ.

ಕಂಸನಿಗೆ ಜನ್ಮನೀಡಿದ ಉಗ್ರಸೇನನಿಗೆ, ಕಂಸ, ಸುನಾಮಾ, ನ್ಯಗ್ರೋಧ, ಕಂಕ, ಶಂಕು, ಸುಹೂ, ರಾಷ್ಟ್ರಪಾಲ, ಧೃಷ್ಟಿ ಮತ್ತು ತುಷ್ಟಿಮಾನ್‌ ಎನ್ನುವ ಒಂಬತ್ತು ಪುತ್ರರು. ಜೊತೆಗೆ ಪಂಚ ಕನ್ಯಾಸಂತಾನ – ಕಂಸಾ, ಕಂಸವತಿ, ಕಂಕಾ, ಶುರಭೂ ಮತ್ತು ರಾಷ್ಟ್ರಪಾಲಿಕಾ. ಈ ಪಂಚ ಕನ್ಯೆಯರು ವಸುದೇವನ ತಮ್ಮಂದಿರನ್ನು ಮದುವೆಯಾದರು.

ಇವರೆಲ್ಲರೂ ವೃಷ್ಣಿ ಪುತ್ರ ಶ್ವಫಲ್ಕನ ಪೀಳಿಗೆಯವರಾದರೆ, ವೃಷ್ಣಿಯ ಇನ್ನೊಬ್ಬ ಪುತ್ರ ಚಿತ್ರರಥನ ಪುತ್ರ ವಿದೂರಥ, ಇವನ ಮಗ ಶೂರ, ಇವನ ಮಗ ಭಜಮಾನ. ಇವನ ಪುತ್ರ ಶಿನಿ. ಶಿನಿಯ ಮಗ ಭೋಜ, ಭೋಜನಮಗ ಹೃದಿಕ. ಹೃದಕನಿಗೆ ಮೂವರು ಪುತ್ರರು – ದೇವಮೀಢ, ಶತಧನು ಮತ್ತು ಕೃತವರ್ಮ. ದೇವಮೀಢನ ಮಗ ಶೂರ, ಇವನ ಪತ್ನಿ ಮಾರಿಶಾ.

ಶೂರ ಮತ್ತು ಮಾರಿಶಾ ದಂಪತಿ ಆ ಪೀಳಿಗೆಯ ಪುಣ್ಯವಂತ ದಂಪತಿ. ವಸುದೇವನಂತಹ ಮಗ, ಶ್ರೀಕೃಷ್ಣನಂತಹ ಮೊಮ್ಮಗ ಇವರ ಅದೃಷ್ಟದಲ್ಲಿ ಹುದುಗಿತ್ತು. ವಸುದೇವ, ದೇವಭಾಗ, ದೇವಶ್ರವಾ, ಆನಕ, ಸೃಂಜಯ, ಶ್ಯಾಮಕ, ಕಂಕ, ಶಮೀಕ, ವತ್ಸಕ ಮತ್ತು ವೃಕ ಈ ದಂಪತಿಯ ಹತ್ತು ಸುಪುತ್ರರು. ಈ ಹತ್ತು ಸುಪುತ್ರರೂ ಅಕಳಂಕ ಪುಣ್ಯಪುರುಷರಾಗಿದ್ದರು. ವಸುದೇವ ಹುಟ್ಟಿದಾಗ ಸ್ವರ್ಗಲೋಕಗಳಿಂದ ದೇವತೆಗಳು ದುಂದುಭಿ ಮೊಳಗಿಸಿದರು. ದೇವೋತ್ತಮ ಪರಮ ಪುರುಷ ಶ್ರೀಕೃಷ್ಣನ ಆವಿರ್ಭಾವಕ್ಕೆ ಸೂಕ್ತ ತಾಣ ಒದಗಿಸಿದ ವಸುದೇವನು ಆನಕದುಂದುಭಿ ಎಂದೂ ಪ್ರಸಿದ್ಧನು. ಪೃಥಾ, ಶ್ರುತದೇವಾ, ಶ್ರುತಕೀರ್ತಿ, ಶ್ರುತಾಶ್ರವಾ ಮತ್ತು ರಾಜಾಧಿದೇವೀ ಮೊದಲಾದವರು ಶೂರ-ಮಾರಿಶಾ ದಂಪತಿಯ ಸುಪುತ್ರಿಯರು.

ಈ ಸುಪುತ್ರಿಯರಲ್ಲಿ ಒಬ್ಬಳು ಮಹಾಭಾರತದ ಅಡಿಗಲ್ಲುಗಳಲ್ಲಿ ಒಬ್ಬಳಾದ ಕುಂತೀ. ಪೃಥಾ ಎಂದು ತಂದೆತಾಯಿಯರಿಂದ ನಾಮಕರಣಗೊಂಡ ಇವಳು ಸಂತಾನಹೀನನಾದ ಕುಂತೀಭೋಜ ತನ್ನ ಮಗಳಾಗಿ  ದತ್ತು ಸ್ವೀಕರಿಸಿದಾಗ, ಕುಂತೀ ಎನ್ನುವ ಹೊಸ ಹೆಸರು ಪಡೆದುಕೊಂಡಳು ಪಾಂಡು ರಾಜನ ಕೈ ಹಿಡಿದಳು. ಪಾಂಡವರ ಮಹಾಮಾತೆಯಾದಳು.

ತಂದೆಯ ಮನೆಯಲ್ಲಿ ಹಿರಿಯ ರಾಜಕುಮಾರಿಯಾಗಿ ಓಡಾಡಿಕೊಂಡಿದ್ದ ಕುಂತೀ, ಒಂದು ದಿವಸ ಹಿರಿಯ ತಪಸ್ವಿಗಳಾದ ಮಹರ್ಷಿ ದೂರ್ವಾಸರು ಆಗಮಿಸಿದಾಗ, ಅವರಿಗೆ ಅತ್ಯಂತ ಗೌರವಾನ್ವಿತವಾದ ಸತ್ಕಾರ ಮಾಡಿದಳು. ಸಂತೃಪ್ತರಾದ ಮುನಿಗಳು ಅವಳಿಗೆ ಆರು ವರಗಳನ್ನು ನೀಡಿ ಹೇಳಿದರು –

`ಮಗೂ, ಕುಂತೀ, ಬರೀ ನಿನ್ನ ಸತ್ಕಾರವನ್ನು ಗಮನಿಸಿ ಈ ಆರು ವರಗಳನ್ನು ನೀಡುತ್ತಿದ್ದೇನೆಂದು ಭಾವಿಸಬೇಡಮ್ಮ. ನಿನ್ನ ಭವಿಷ್ಯವನ್ನು ದೂರದೃಷ್ಟಿಯಿಂದ ಕಂಡುಕೊಂಡು ಈ ವರಗಳನ್ನು ನೀಡುತ್ತಿದ್ದೇನೆ. ಈ ಒಂದೊಂದು ವರವೂ ಒಂದೊಂದು ಪುತ್ರ ವರ. ಮಹಾನ್‌ ದೇವತೆಗಳ ಅನುಗ್ರಹ ಶಕ್ತಿಯ ಮಹಾಮಂತ್ರ. ಇದನ್ನು ಪಠಿಸಿದರೆ ಆಯಾ ಅಭಿಮಾನಿ ದೇವತೆಗಳು ಬಂದು ಅವರ ಅಂಶವೇ ಆದ ಅತಿ ಶಕ್ತಿಶಾಲಿ, ತೇಜಸ್ವೀ ಗಂಡು ಮಗುವೊಂದನ್ನು ನಿನಗೆ ಕರುಣಿಸುತ್ತಾರಮ್ಮ. ಆದರೆ, ಕುಂತೀ ಈಗ ನೀನಿನ್ನೂ ಕುಮಾರಿ ಎನ್ನುವುದನ್ನು ಮರೆಯಬೇಡ. ಈಗಲೇ ಈ ಮಂತ್ರಗಳನ್ನು ಪ್ರಯೋಗಿಸಿದರೆ ಮದುವೆಯಾಗದ ತಾಯಿ ಎನ್ನುವ ಮಿಥ್ಯಾರೋಪವನ್ನು ಹೊತ್ತು ನಿನ್ನ ವಂಶಕ್ಕೆ ಕಳಂಕವನ್ನುಂಟುಮಾಡುವ ಪರಿಸ್ಥಿತಿ ಬಂದೊದಗಬಹುದು. ಆದ್ದರಿಂದ ಜಾಗ್ರತೆ, ಇವನ್ನು ನಿನ್ನ ಮದುವೆಯಾದ ಮೇಲೆ ಪ್ರಯೋಗಿಸು. ಆಗ ಇದರ ಉಪಯೋಗ ನಿನಗೆ ನಿಜವಾಗಲೂ ಖಂಡಿತವಾಗಿರುತ್ತದೆ!’

ಆಟದ ವಯಸ್ಸಿನ ಪುಟ್ಟ ಹೆಣ್ಣು ಕುಂತೀ ಅವರ ಮಾತುಗಳಿಗೆ ಮನಸಾರೆ ನಕ್ಕುಬಿಟ್ಟಳು.   `ಮಂತ್ರದಿಂದ ಮಗುವಾಗುವುದೆಂದರೇನು? ಅದೂ ದೇವಾಧಿದೇವತೆಗಳೇ ಬಂದು ನನಗೆ ಮಗು ಕೊಡುವುದೆಂದರೇನು? ಏನೋ ಮುನಿಗಳು ಪ್ರೀತಿಯಿಂದ ಮಂತ್ರೋಪದೇಶ ಮಾಡಿದಂತೆ ಮಾಡಿ ಬಳುವಳಿ ನೀಡಿದಂತೆ ಮಾಡಿಹೋಗಿದ್ದಾರೆ!’ ಎಂದುಕೊಂಡಳು.

ಇನ್ನೊಂದು ದಿವಸ ಅರಮನೆ ಉದ್ಯಾನದಲ್ಲಿ ಒಬ್ಬಳೇ ಅಡ್ಡಾಡುತ್ತ ಅವಳಿಗೆ ಬೇಸರವಾಗಿತ್ತು. ಸಖಿಯರು ಯಾರೂ ಜೊತೆಗಿರಲಿಲ್ಲ. ಇದ್ದಕ್ಕಿದ್ದ ಹಾಗೆಯೇ ದುರ್ವಾಸರ ಮಂತ್ರಗಳ ನೆನಪು ಬಂದಿತು. ಜೋರಾಗಿ ನಗುವೂ ಬಂದಿತು. `ಇದು ನಿಜವೊ, ಸುಳ್ಳೊ, ಒಂದು ಮಂತ್ರವನ್ನು ಪ್ರಯೋಗಿಸಿ ನೋಡಿದರೆ ಹೇಗೆ? ಏನಾಗುತ್ತದೆ ಮಹಾ?

ಅಷ್ಟೇ!

ಮರುಕ್ಷಣವೇ ಅವಳು ಮೊದಲ ಮಂತ್ರವಾದ ಸೂರ್ಯಮಂತ್ರವನ್ನು ಪಠಿಸಿಬಿಟ್ಟಳು!

ಥಟ್ಟನೆ ಸುತ್ತಲೂ ಜಾಜ್ವಲ್ಯಮಾನವಾದ, ಕಣ್ಣುಕೋರೈಸುವ ಪ್ರಕಾಶ; ಎಲ್ಲೆಲ್ಲೂ ಬೆಂಕಿ ಹರಿದಾಡಿದಂತೆ ಅನುಭವ!

`ಪೃಥೆ’! ಎಂದೊಂದು ಚುರುಕಿನ ದನಿ ಕೇಳಿಸಿತು.

ಕುಂತೀ ಬೆಚ್ಚಿ ನೋಡಿದಳು!

ಅವಳೆದುರೊಂದು ದೇವಾಕೃತಿ. ಪ್ರಪಂಚದ ಬೆಳಕೆಲ್ಲ ಒಂದು ಅಂಶವಾಗಿ ಪ್ರತ್ಯಕ್ಷವಾಗಿ ನಿಂತಂತನ್ನಿಸಿತು. ಕುಂತೀ ದಿಕ್ಕೆಟ್ಟು ನೋಡಿದಳು.

`ಪ್ರಿಯ ಪೃಥೇ, ನಾನು ಸೂರ್ಯದೇವ, ನಿನ್ನ ಮಂತ್ರದ ಆಹ್ವಾನಕ್ಕೆ ಒಲಿದು ಆಗಮಿಸಿದ್ದೇನೆ!’

ಕುಂತಿಯ ಇಡೀ ದೇಹ ನಡುಗಿ ಹೋಯಿತು. ದೂರ್ವಾಸರ ಮಂತ್ರಗಳು ಸುಳ್ಳಲ್ಲ. ಅವರ ಎಚ್ಚರಿಕೆಯ ಮಾತುಗಳನ್ನು ಕೇಳದೆ ಮೊದಲ ಮಂತ್ರವನ್ನು ಪ್ರಯೋಗಿಸಿದ್ದಾಗಿ ಹೋಗಿದೆ!

ಕುಂತೀ ಹೇಳಿದಳು –

`ಸೂರ್ಯದೇವನೇ, ಯೋಗಮಂತ್ರದ ಪರಿಣಾಮ ಏನಿರಬಹುದು ಎಂದು ಪರೀಕ್ಷೆ ಮಾಡಲು ಮಂತ್ರ ಪಠಿಸಿಬಿಟ್ಟೆ, ಅನಗತ್ಯವಾಗಿ ನಿನ್ನನ್ನು ಕರೆದದ್ದಕ್ಕೆ ಕ್ಷಮಿಸು. ದಯವಿಟ್ಟು ಹಿಂತಿರುಗು!’

ಸೂರ್ಯದೇವ ಹೇಳಿದ –

`ಹೇ, ಸುಂದರೀ, ಪೃಥೇ… ಯೋಗಮಂತ್ರ ಶಕ್ತಿ ನಿಷ್ಪಲವಾಗಲಾರದು. ದೇವತಾಭೇಟಿ ವ್ಯರ್ಥವಾಗಲಾರದು. ನಿನಗೆ ಗರ್ಭಾಧಾನ ಮಾಡುತ್ತೇನೆ. ನಿನಗೊಬ್ಬ  ತೇಜಸ್ವೀ ಪುತ್ರ ಜನಿಸುತ್ತಾನೆ. ನೀನಿನ್ನೂ ಅವಿವಾಹಿತೆಯಾಗಿರುವುದರಿಂದ ನಿನ್ನ ಕನ್ಯತ್ವ ಹರಣವಾಗದಂತೆ ನೋಡಿಕೊಳ್ಳುತ್ತೇನೆ!

ಮರುಕ್ಷಣದಲ್ಲೇ, ಕುಂತೀ ಏನಾಗುತ್ತಿದೆ ಎಂದು ಯೋಚಿಸುವ ಮೊದಲೇ, ಸೂರ್ಯದೇವ ಅವಳ ಗರ್ಭದಲ್ಲಿ ಪುತ್ರ ಪ್ರದಾನ ಮಾಡಿಬಿಟ್ಟು ತನ್ನ ಲೋಕಕ್ಕೆ ಹಿಂತಿರುಗಿಬಿಟ್ಟಿದ್ದ.

ತತ್‌ಕ್ಷಣದಲ್ಲೆ ಕುಂತಿಗೆ ಅತಿಸುಂದರ ಮಗುವೊಂದು ಹುಟ್ಟಿತು. ಕರ್ಣಕುಂಡಲ ಕವಚಗಳನ್ನು ಧರಿಸಿಕೊಂಡಿದ್ದ, ಸೂರ್ಯನಂತೆ ಬೆಳಗುತ್ತಿದ್ದ, ನಸುನಗುತ್ತಿದ್ದ ತೇಜಸ್ವೀ ಮಗುವೊಂದು ಜನಿಸಿತ್ತು.

ಕುಂತೀ ಆ ರೇಷ್ಮೆಯ ಪುತ್ಥಳಿಯನ್ನು ಎದೆಗವಚಿಕೊಂಡಳು, ಮುದ್ದಾಡಿದಳು. ಅದು ತನ್ನ ದೇಹದ ಒಂದು ತುಣುಕು ಎಂಬಂತನ್ನಿಸಿತು.

ಮರುಕ್ಷಣವೇ ಅವಳಿಗೆ ನಿಜಸ್ಥಿತಿಯ ಅರಿವಾಗಿತ್ತು!

ತಾನು ಕುಮಾರಿ. ಮದುವೆಗೆ ಮೊದಲು ತನ್ನ ಕೈಯಲ್ಲೊಂದು ಮಗು! ತನಗೂ ಅಪವಾದ, ತಂದೆತಾಯಿ-ರಾಜ್ಯ-ಪ್ರಜೆಗಳಿಗೆಲ್ಲರಿಗೂ ಅಪಮಾನ!

ಕೂಡಲೇ ಬುಟ್ಟಿಯೊಂದರಲ್ಲಿ ಆ ಮಗುವನ್ನಿರಿಸಿ ನದಿಯಲ್ಲಿ ಅದನ್ನು ತೇಲಿಬಿಟ್ಟಳು.

ಬಹುಬೇಗ ಪಾಂಡುರಾಜನೊಂದಿಗೆ ಅವಳ ಮದುವೆಯಾಯಿತು.

ಕುಂತಿಯ ತಂಗಿಯರಿಗೂ ಒಬ್ಬೊಬ್ಬರಾಗಿ ಮದುವೆಯಾಯಿತು.

ಶ್ರುತದೇವಾಳನ್ನು ಕರೂಷದ ದೊರೆ ವೃದ್ಧಶರ್ಮ ವಿವಾಹವಾದ. ಇವರಿಗೆ ದಂತವಕ್ರ ಹುಟ್ಟಿದ. ಸನಕ ಮೊದಲಾದ ಋಷಿಗಳಿಂದ ಶಾಪಗ್ರಸ್ತನಾಗಿದ್ದ ದಂತವಕ್ರ ಮೊದಲು ಹಿರಣ್ಯಾಕ್ಷನೆಂಬ ದ್ವಿತಿಯ ಪುತ್ರನಾಗಿ ಜನಿಸಿದ್ದನು.

ಶ್ರುತಕೀರ್ತಿಯನ್ನು ಕೇಕಯದ ದೊರೆ ಧೃಷ್ಟಕೇತು ಮದುವೆ ಆದನು. ಇವರಿಗೆ ಸಂತರ್ದನನೇ ಮೊದಲಾದ ಐವರು ಪುತ್ರರು ಹುಟ್ಟಿದರು.

ರಾಜಾಧಿದೇವಿಯನ್ನು ಜಯಸೇನ ಮದುವೆಯಾಗಿ ವಿಂದ, ಅನುವಿಂದ ಎಂಬಿಬ್ಬರು ಮಕ್ಕಳನ್ನು ಪಡೆದ.

ಶ್ರುತಶ್ರವಳನ್ನು ಚೇದಿ ದೊರೆ ದಮಘೋಷ ಮದುವೆಯಾದ. ಇವರ ಪುತ್ರ ಶಿಶುಪಾಲ.

ವಸುದೇವನ ತಮ್ಮನಾದ ದೇವಭಾಗನಿಗೆ ಕಂಸಾಳ ಗರ್ಭದಲ್ಲಿ ಚಿತ್ರಕೇತು ಮತ್ತು ಬೃಹದ್ಬಲ ಎಂಬಿಬ್ಬರು ಮಕ್ಕಳು ಹುಟ್ಟಿದರು.

ಕಂಸವತಿಯನ್ನು ವಸುದೇವನ ಇನ್ನೊಬ್ಬ ತಮ್ಮ ದೇವಶ್ರವ ಮದುವೆಯಾಗಿ ಸುವೀರ ಮತ್ತು ಇಷುಮಾನ್‌ ಎನ್ನುವ ಪುತ್ರರನ್ನು ಪಡೆದ. ಕಂಕ ಮದುವೆಯಾದ ಕಂಕಾಳ ಗರ್ಭದಲ್ಲಿ ಸತ್ಯಜಿತ್‌ ಮತ್ತು ಪುರುಜಿತ್‌ ಹುಟ್ಟಿದರು. ದೊರೆ ಸೃಂಜಯ ತನ್ನ ಪತ್ನಿ ರಾಷ್ಟ್ರಪಾಲಿಕಾಳಲ್ಲಿ ವೃಷ ಮತ್ತು ದುರ್ಮರ್ಷಣ ಮೊದಲಾದ ಕೆಲವು ಪುತ್ರರನ್ನು ಪಡೆದ. ದೊರೆ ಶ್ಯಾಮಕ ತನ್ನ ಪತ್ನಿ ಶೂರಭೂಮಿಯ ಗರ್ಭದಲ್ಲಿ ಹರಿಕೇಶ ಮತ್ತು ಹಿರಣ್ಯಾಕ್ಷ ಎಂಬ ಮಕ್ಕಳನ್ನು ಪಡೆದ. ದೊರೆ ವತ್ಸಕ ತನ್ನ ಪತ್ನಿ ಅಪ್ಸರೆ ಮಿಶ್ರಕೇಶಿಯ ಗರ್ಭದಲ್ಲಿ ವೃಕ ಮೊದಲಾದ ಪುತ್ರರನ್ನು ಪಡೆದನು. ವೃಕ ಹೆಂಡತಿ ದುರ್ವಾಕ್ಷಿಯ ಮೂಲಕ ತಕ್ಷ, ಪುಷ್ಕರ, ಶಾಲ ಮೊದಲಾದ ಪುತ್ರರನ್ನು ಪಡೆದನು. ಸುಧಾಮನಿಯ ಗರ್ಭದಲ್ಲಿ ಸಮೀಕನಿಗೆ ಸುಮಿತ್ರ, ಅರ್ಜುನಪಾಲ ಮತ್ತಿತರ ಮಕ್ಕಳು ಹುಟ್ಟಿದರು. ಆನಕ ಅಂಕನು ತನ್ನ ಪತ್ನಿ ಕರ್ಣಿಕಾಳ ಗರ್ಭದಲ್ಲಿ ಋತುಧಾಮಾ ಮತ್ತು ಜಯ ಎಂಬ ಹೆಸರಿನ ಇಬ್ಬರು ಪುತ್ರರನ್ನು ಪಡೆದನು.

ಆನಕ ದುಂದುಭಿ ಎಂದು ಕೀರ್ತಿಶಾಲಿಯಾಗಿದ್ದ ವಸುದೇವ, ದೇವಕಿ, ಪೌರವಿ, ರೋಹಿಣಿ, ಭದ್ರಾ, ಮದಿರಾ, ರೋಚನಾ, ಇಳಾ ಮೊದಲಾದ ಸೋದರಿಯರನ್ನು ಮದುವೆಯಾಗಿದ್ದ. ಇವರಲ್ಲಿ ದೇವಕಿ ಪಟ್ಟದರಾಣಿಯಾಗಿದ್ದಳು.

ವಸುದೇವ ತನ್ನ ಪತ್ನಿ ರೋಹಿಣಿಯ ಗರ್ಭದಲ್ಲಿ ಬಲ, ಗದ, ಸಾರಣ, ದುರ್ಮದ, ವಿಫು, ಧ್ರುವ, ಕೃತ ಮತ್ತಿತರ ಪುತ್ರರನ್ನು ಪಡೆದನು.

ಹೀಗೆಯೇ ವಸುದೇವ ತನ್ನ ಇತರ ಪತ್ನಿಯರಲ್ಲೂ ಸುಪುತ್ರರನ್ನು ಪಡೆದನು. ಪೌರವಿಯಲ್ಲಿ ಭೂತ, ಸುಭದ್ರ, ಭದ್ರಬಾಹು, ದುರ್ಮದ ಮತ್ತು ಭದ್ರ ಎಂಬ ಪುತ್ರರು ಜನಿಸಿದರು. ಮದಿರಾಳ ಗರ್ಭದಲ್ಲಿ ನಂದ, ಉಪನಂದ, ಕೃತಕ, ಶೂರ ಮತ್ತಿತರರು ಜನಿಸಿದರು. ಭದ್ರಾ (ಕಾಶಲ್ಯಾ)ಳಿಗೆ ಕೇಶಿ ಎಂಬೊಬ್ಬನೇ ಮಗ. ರೋಬ್‌ನಾಗೆ ಹಸ್ತ, ಹೇಮಾಂಗದ ಮತ್ತಿತರ ಮಕ್ಕಳು ಹುಟ್ಟಿದರು. ಇಳಾಳಲ್ಲಿ ಉರುವಲ್ಕ ಮೊದಲಾದವರು ಹುಟ್ಟಿದರು. ಇವರೆಲ್ಲರೂ ಯದುವಂಶದ ಪ್ರಮುಖರಾದರು. ಧೃತದೇವಿ ಎನ್ನುವ ಇನ್ನೊಬ್ಬ ಪತ್ನಿಯಲ್ಲಿ ವಿಪೃಷ್ಠ ಎಂಬ ಪುತ್ರ ಜನಿಸಿದ. ಶಾಂತಿದೇವಾಳಿಗೆ ಪ್ರಶಮ, ಪ್ರಸೀತ ಮತ್ತಿತರರು ಹುಟ್ಟಿದರು. ವಸುದೇವನಿಗೆ ಉಪದೇವಾ ಎನ್ನುವೊಬ್ಬ ಹೆಂಡತಿಯೂ ಇದ್ದಳು. ಇವಳಿಂದ ರಾಜನ್ಯ, ಕಲ್ಪ ಮತ್ತು ವರ್ಷ ಮೊದಲಾದವರು ಹುಟ್ಟಿದರು. ಮತ್ತೊಬ್ಬಳು ಪತ್ನಿ ಶ್ರೀದೇವಾಳ ಗರ್ಭದಲ್ಲಿ ವಸು, ಹಂಸ ಮತ್ತು ಸುವಂಶ ಮೊದಲಾದ ಆರು ಮಂದಿ ಪುತ್ರರು ಜನಿಸಿದರು. ದೇವರಕ್ಷಿತಾಳ ಗರ್ಭದಲ್ಲಿ ಗದಾ ಮೊದಲಾದ ಒಂಬತ್ತು ಮಂದಿ ಪುತ್ರರು ಹುಟ್ಟಿದರು. ಸಹದೇವಾ ಎನ್ನುವ ಪತ್ನಿಗೆ ಶ್ರುತ ಮತ್ತು ಪ್ರವರ ಮೊದಲಾದ ಎಂಟು ಮಂದಿ ಪುತ್ರರು ಹುಟ್ಟಿದರು.

ವಸುದೇವನ ಪತ್ನಿ ಸಹದೇವಾಳಿಗೆ ಹುಟ್ಟಿದ ಈ ಎಂಟು ಮಂದಿ ಪುತ್ರರೂ ನಿರ್ದಿಷ್ಟವಾಗಿ ಸ್ವರ್ಗಲೋಕಗಳಲ್ಲಿನ ಎಂಟು ವಸುಗಳ ಅವತಾರವೇ ಆಗಿದ್ದರು.

ವಸುದೇವ ದೇವಕಿಯ ಗರ್ಭದಲ್ಲಿ ಶ್ರೇಷ್ಠ ಗುಣ ಸಂಪನ್ನರಾದ ಎಂಟು ಮಂದಿ ಪುತ್ರರನ್ನು ಪಡೆದನು. ಇವರುಗಳೆಂದರೆ, ಕೀರ್ತಿಮಾನ್‌, ಸುಷೇಣ, ಭದ್ರಸೇನ, ಋಜು, ಸಮ್ಮರ್ದನ, ಭದ್ರ ಮತ್ತು ನಿಯಾಮಕನೂ, ಶೇಷಾವತಾರನೂ ಆದ ಸಂಕರ್ಷಣ.

ಎಂಟನೆ ಪುತ್ರನೇ ಎಲ್ಲರಿಗೂ ಪ್ರಿಯನಾದ, ಸ್ವಯಂ ದೇವೋತ್ತಮ ಪರಮ ಪುರುಷನಾದ ಶ್ರೀಕೃಷ್ಣ.

ಇವರೆಲ್ಲರ ಏಕಮಾತ್ರ ಸುಪುತ್ರಿ, ಸುಭದ್ರೆ!

ಸೂತ ಮುನಿಗಳು ಕೈಗಳನ್ನು ಜೋಡಿಸುತ್ತ ಭಕ್ತಿಪೂರ್ವಕ ನಮಸ್ಕಾರ ಮಾಡುತ್ತ ಹೇಳಿದರು.

ಪ್ರಿಯ ಮುನಿಗಳೆ, ಧಾರ್ಮಿಕ ತತ್ತ್ವಗಳು ಕ್ಷೀಣಿಸಿ, ಅಧಾರ್ಮಿಕ ತತ್ತ್ವಗಳು ವೃದ್ಧಿಸಿದಾಗ ಪರಮ ನಿಯಾಮಕನೂ ಪರಮ ದೇವೋತ್ತಮ ಪುರುಷನೂ ಆದ ಶ್ರೀಹರಿಯು ಸ್ವಯಂ ಇಚ್ಛೆಯಿಂದ ಆವಿರ್ಭವಿಸುತ್ತಾನೆ. ಭಗವಂತನ ಸ್ವಂತ ಅಭಿಲಾಷೆ ಹೊರತಾಗಿ ಅವನ ಆವಿರ್ಭಾವ, ಅದೃಶ್ಯತೆ ಅಥವಾ ಕಾರ್ಯ ಚಟುವಟಿಕೆಗಳಿಗೆ ಬೇರಾವ ಕಾರಣವೂ ಇಲ್ಲ. ಪರಮಾತ್ಮನಾಗಿ ಅವನಿಗೆ ಸಕಲವೂ ಗೊತ್ತು. ಪರಿಣಾಮವಾಗಿ ಯಾವುದೇ ಕಾರಣವೂ ಅವನನ್ನು ಬಾಧಿಸುವುದಿಲ್ಲ. ಕಾಮ್ಯಕರ್ಮ ಚಟುವಟಿಕೆಗಳ ಫಲವೂ ಅವನನ್ನು ಬಾಧಿಸುವುದಿಲ್ಲ! ಜೀವಿಯನ್ನು ತನ್ನ ಅನುಕಂಪದಿಂದ ಉದ್ಧಾರ ಮಾಡಲು ಹಾಗೂ ಜೀವಿಯ ಜನನ, ಮರಣ ಮತ್ತು ಐಹಿಕ ಜೀವನದ ಆಯುರ್ಮಾನವನ್ನು ತಡೆಗಟ್ಟಲೋಸುಗ ದೇವೋತ್ತಮ ಪರಮ ಪುರುಷನು ತನ್ನ ಐಹಿಕ ಶಕ್ತಿಯಿಂದ ವಿಶ್ವದ ಸೃಷ್ಟಿ, ಸ್ಥಿತಿ, ಲಯಗಳಲ್ಲಿ ತೊಡಗುತ್ತಾನೆ. ಹೀಗೆ ಅವನು ಜೀವಿಯು ಭಗವದ್ಧಾಮಕ್ಕೆ ಹಿಂತಿರುಗಲು ಅನುಕೂಲ ಮಾಡಿಕೊಡುತ್ತಾನೆ!

ಆ ಸಂದರ್ಭದಲ್ಲಿ ಶೌನಕ ಮುನಿಗಳು ಎದ್ದುನಿಂತು ಸವಿನಯದಿಂದ ಕೇಳಿದರು.

`ಗೌರವಾನ್ವಿತ ಗುರುಗಳೆ, ಜೀವಿಗಳು ಕಷ್ಟನಷ್ಟಗಳನ್ನು ಅನುಭವಿಸುವ ಈ ಐಹಿಕ ಪ್ರಪಂಚವನ್ನು ಭಗವಂತ ಏಕೆ ಸೃಷ್ಟಿಸಿದ್ದಾನೆ?’

ಸೂತಮುನಿಗಳು ಮುಖದ ಮೇಲೆ ಮಂದಹಾಸವನ್ನು ತಂದುಕೊಳ್ಳುತ್ತ ಹೇಳಿದರು.

`ಪ್ರಿಯ ಶೌನಕರೆ, ನಿಮ್ಮ ಪ್ರಶ್ನೆಗೆ ಉತ್ತರ ನಿಮಗೆ ತಿಳಿಯದ್ದೇನಲ್ಲ. ಆದರೂ ಪ್ರಾಪಂಚಿಕ ತಿಳಿವಳಿಕೆಗಾಗಿ ಎಂಬಂತೆ ಕೇಳಿದ್ದೀರಿ ಎಂದೇ ಭಾವಿಸುತ್ತೇನೆ. ಐಹಿಕ ಸೃಷ್ಟಿಯು ನಿಶ್ಚಯವಾಗಿಯೂ ದೇವೋತ್ತಮ ಪರಮ ಪುರುಷನ ಅಂಶವಾದ ಬದ್ಧಾತ್ಮರ ಯಾತನೆಗಾಗಿಯೇ ಇದೆ. ಈ ಬದ್ಧ ಜಗತ್ತಿನಲ್ಲಿರುವ ಜೀವಿಗಳು ಅವನ ಶಾಶ್ವತ ಅಂಶಗಳು. ಬದ್ಧ ಜೀವನದಿಂದಾಗಿ ಅವರು ಮನಸ್ಸೂ ಸೇರಿದಂತೆ ಆರು ಇಂದ್ರಿಯಗಳಿಂದೊಡಗೂಡಿ ಬಲುಶ್ರಮದಿಂದ ಹೆಣಗಾಡುತ್ತಿದ್ದಾರೆ. ಸಕಲ ಜೀವಿಗಳೂ ದೇವೋತ್ತಮ ಪರಮ ಪುರುಷನ ವಿಭಿನ್ನಾಂಶಗಳು. ಗುಣಾತ್ಮಕವಾಗಿ ಅವರು ಭಗವಂತನಿದ್ದಂತೆಯೇ. ಆದರೆ ಪರಿಮಾಣಾತ್ಮಕವಾಗಿ ಅವರಲ್ಲಿ ಅಪಾರ ಭೇದವಿದೆ!’

ನೈಮಿಷಾರಣ್ಯ ಮುನಿಯೊಬ್ಬರು ಕೇಳಿದರು –

`ಹಿರಿಯ ಮುನಿಗಳೇ, ಈ ಭೇದ ಎಂತಹುದು ಎಂದು ತಿಳಿಯಬಹುದೇ?

ಸೂತ ಮುನಿಗಳು ಹೇಳಿದರು –

`ಭಗವಂತ ಅಪರಿಮಿತನು, ಆದರೆ ಜೀವಿಗಳು ಪರಿಮಿತರು. ಹೀಗೆ ಭಗವಂತನು ಅಪರಿಮಿತ ಭೋಗ ಶಕ್ತಿಯನ್ನು ಹೊಂದಿದ್ದಾನೆ. ಜೀವಿಗಳು ಸೀಮಿತ ಭೋಗಶಕ್ತಿಯನ್ನು ಹೊಂದಿದ್ದಾರೆ. ಭಗವಂತ ಮತ್ತು ಜೀವಿ ಉಭಯರೂ ಗುಣಾತ್ಮಕವಾಗಿ ಚೇತನಾತ್ಮರಾದ್ದರಿಂದ ಶಾಂತಿಯುತ ಭೋಗ ಪ್ರವೃತ್ತಿಯುಳ್ಳವರು. ಆದರೆ, ದುರದೃಷ್ಟವಶಾತ್‌, ದೇವೋತ್ತಮ ಪರಮ ಪುರುಷನ ಅಂಶವು ಕೃಷ್ಣರಹಿತವಾಗಿ ಸ್ವತಂತ್ರ ಭೋಗಾಪೇಕ್ಷೆಯನ್ನು ವ್ಯಕ್ತಪಡಿಸಿದಾಗ ಅವನನ್ನು ಐಹಿಕ ಜಗತ್ತಿಗೆ ಕಳುಹಿಸಲಾಗುವುದು. ಅಲ್ಲಿ ಅವನು ಬ್ರಹ್ಮನಾಗಿ ಜೀವನ ಆರಂಭಿಸಿ ಕ್ರಮೇಣ ಇರುವೆ ಅಥವಾ ಮಲದಲ್ಲಿನ ಕ್ರಿಮಿಯ ಸ್ಥಾನಕ್ಕೆ ಪತನಹೊಂದುತ್ತಾನೆ. ಅಸ್ತಿತ್ವಕ್ಕಾಗಿ ಅವನು ತೀವ್ರವಾಗಿ ಹೆಣಗಾಡಬೇಕಾಗುತ್ತದೆ. ಏಕೆಂದರೆ ಐಹಿಕ ಪ್ರಕೃತಿಯಿಂದ ಬದ್ಧನಾದ ಜೀವಿಯು ಪ್ರಕೃತಿಯ ಸಂಪೂರ್ಣ ನಿಯಂತ್ರಣದಲ್ಲಿದ್ದಾನೆ!’

ಶ್ರೀಮದ್ಭಾಗವತದ ಅಂದಿನ ಸ್ಕಂಧ ಮತ್ತು ಅಧ್ಯಾಯಗಳು ಅಂತಿಮ ಘಟ್ಟಕ್ಕೆ ಬಂದಿದ್ದರಿಂದ ಹೇಳುವರು-ಕೇಳುವವರೆಲ್ಲರೂ ಯಾವ ಬಿಗುವೂ ಇಲ್ಲದೆ ಹಾಯಾಗಿ ಪುರಾಣದಾಚೆಯ ವಿಷಯಗಳನ್ನು ತಿಳಿದುಕೊಳ್ಳುವುದರಲ್ಲಿ ಉತ್ಸುಕರಾಗಿದ್ದರು. ಮಹಾನ್‌ ಜ್ಞಾನಿಗಳಾದ ಸೂತಮುನಿಗಳು, ಶ್ರೀವೇದವ್ಯಾಸರ ಮತ್ತು ಶ್ರೀಶುಕಮುನಿಗಳ ಜ್ಞಾನಸಂಪದವನ್ನು ಎಲ್ಲರ ಮುಂದೆಯೂ ಇಡಲು ಸಿದ್ಧರಾಗಿದ್ದಾಗ, ಇದರ ಪರಿಪೂರ್ಣ ಉಪಯೋಗ ಪಡೆದುಕೊಳ್ಳಬೇಕೆಂದು ಎಲ್ಲರೂ ನಿರ್ಧರಿಸಿದಂತಿತ್ತು.

ಪ್ರಶ್ನೆಗಳು-ಉತ್ತರಗಳು, ಅನುಮಾನಗಳು-ಪರಿಹಾರಗಳು ಅಂದಿನ ಉಪನ್ಯಾಸಕ್ಕೊಂದು ಮಹತ್ತರ ಅರ್ಥವಂತಿಕೆಯ ಮೆರುಗನ್ನು ಹೊದಿಸಿತು.

ಸೂತ ಮುನಿಗಳು ಹೇಳಿದರು –

`ಪ್ರಿಯ ಮುನಿಗಳೆ, ತನ್ನ ಸೀಮಿತ ಜ್ಞಾನದಿಂದಾಗಿ ಜೀವಿಯು ಐಹಿಕ ಜಗತ್ತಿನಲ್ಲಿ ತಾನು ಸುಖಿ ಎಂದೇ ಭಾವಿಸುತ್ತಾನೆ. ವಾಸ್ತವವಾಗಿ ಜೀವಿಯು ಐಹಿಕ ಪ್ರಕೃತಿಯ ನಿಯಂತ್ರಣದಲ್ಲಿದ್ದಾನೆ. ಆದರೂ ಅವನು ತಾನು ಸ್ವತಂತ್ರ ಎಂದು ಭಾವಿಸುವುದು ಎಂತಹ ವಿಕಲ್ಪವಲ್ಲವೇ? ಕಲ್ಪನಾತ್ಮಕ ಜ್ಞಾನದಿಂದ ಉನ್ನತಿ ಹೊಂದಿದಾಗಲೂ ಮತ್ತು ಬ್ರಹ್ಮನ್‌ ಅಸ್ತಿತ್ವದಲ್ಲಿ ವಿಲೀನನಾಗಲು ಪ್ರಯತ್ನಿಸುವಾಗಲೂ ಇದೇ ವ್ಯಾಧಿ ಮುಂದುವರಿದಿರುತ್ತದೆ. ಪರಮ ಪದವನ್ನು ಸೇರಿದಾಗಲೂ, ನಿರಾಕಾರ ಬ್ರಹ್ಮನ್‌ನಲ್ಲಿ ವಿಲೀನವಾದಾಗ್ಯೂ ಜೀವಿಯು ಮತ್ತೆ ಐಹಿಕ ಜಗತ್ತಿಗೆ ಪತನ ಹೊಂದುತ್ತಾನೆ!’

ಇನ್ನೊಂದು ಪ್ರಶ್ನೆ ತೇಲಿ ಬಂದಿತು –

`ಗುರುಗಳೇ, ಜೀವಿಗೆ ತಿಳಿವಳಿಕೆಗೆ ಅವಕಾಶವಾಗುವುದು ಹೇಗೆ?

ಸೂತಮುನಿಗಳು ಹೇಳಿದರು –

`ಒಂದು ರೀತಿ ಬದ್ಧಾತ್ಮನು ಈ ಐಹಿಕ ಪ್ರಪಂಚದಲ್ಲಿ ಅಸ್ತಿತ್ವಕ್ಕಾಗಿ ತೀವ್ರ ಹೋರಾಟ ನಡೆಸುತ್ತಾನೆ. ಆಗ ಭಗವಂತ ಅವನ ಬಗ್ಗೆ ಸಹಾನುಭೂತಿಯಿಂದಾಗಿ ಈ ಪ್ರಪಂಚದಲ್ಲಿ ಆವಿರ್ಭವಿಸಿ ಅವನಿಗೆ ಉಪದೇಶ ನೀಡುತ್ತಾನೆ. ತನ್ನ ನಿಜವಾದ ಸ್ಥಾನಮಾನವನ್ನು ಅರ್ಥಮಾಡಿಕೊಳ್ಳಲು ಜೀವಿಗೆ ಒಂದು ಅವಕಾಶ ಕಲ್ಪಿಸುವ ಸಲುವಾಗಿ ಈ ಐಹಿಕ ಪ್ರಪಂಚವನ್ನು ಸೃಷ್ಟಿಸುತ್ತಾನೆ. ತಾನು ಏನು, ತನ್ನ ನಿಜವಾದ ಸ್ಥಾನಮಾನ ಏನು, ದೇವೋತ್ತಮ ಪರಮ ಪುರುಷನೊಂದಿಗೆ ತನ್ನ ಸಂಬಂಧ ಏನು ಎಂಬುದನ್ನು ಮಾನವನಿಗೆ ಅರ್ಥಮಾಡಿಸುವ ಸಲುವಾಗಿಯೇ ವೇದ ಸಾಹಿತ್ಯಗಳು ಇವೆ. ಇದನ್ನು ಬ್ರಹ್ಮಜಿಜ್ಞಾಸಾ ಎಂದು ಕರೆಯಲಾಗಿದೆ. ಪ್ರತಿಯೊಬ್ಬ ಬದ್ಧಾತ್ಮನೂ ಹೋರಾಟ ನಡೆಸಿದ್ದಾನೆ!’

ಸೂತಮುನಿಗಳು ಮಾತು ನಿಲ್ಲಿಸಿದಾಗ ಒಂದಿಷ್ಟು ಹೊತ್ತು ಆ ಪರಿಸರದಲ್ಲಿ ಮೌನ ಆವರಿಸಿತ್ತು. ಹಕ್ಕಿಗಳ ಚಿಲಿಪಿಲಿ, ಆಗಾಗ ಯಾವುದೊ ಮೃಗವೊಂದರ ಆರ್ಭಟ ಕಿವಿಗೆ ಬೀಳುತ್ತಿತ್ತು.

ಸೂತಮುನಿಗಳು ಮುಂದುವರಿಸಿದರು –

`ಪ್ರಿಯ ಮುನಿವರೇಣ್ಯರೇ, ದೇವೋತ್ತಮ ಪರಮ ಪುರುಷನಾದ ಕೃಷ್ಣನು ಸಂಕರ್ಷಣ ಮತ್ತು ಬಲರಾಮರ ಸಹಕಾರದಿಂದ ಬ್ರಹ್ಮ ಮತ್ತು ಶಿವರಂತಹ ಮಹಾಪುರುಷರ ಮನೋಗ್ರಹಿಕೆಗೂ ಮೀರಿದ ಕಾರ್ಯಚಟುವಟಿಕೆಗಳನ್ನು ನೆರವೇರಿಸಿದನು. ಮುಂದೆ ಹುಟ್ಟುವ ಭಕ್ತರಿಗೆ ನಿರ್ವ್ಯಾಜ ಅನುಗ್ರಹ ತೋರುವ ಸಲುವಾಗಿ ದೇವೋತ್ತಮ ಪರಮ ಪುರುಷನು ತನ್ನ ಸ್ಮರಣ ಮಾತ್ರದಿಂದಲೇ ಜೀವಿಯು ಸಕಲ ಶೋಕ ಮತ್ತು ಐಹಿಕ ಅಸ್ತಿತ್ವದ ಅಸುಖದಿಂದ ಮುಕ್ತನಾಗುವಂತೆ ವರ್ತಿಸಿದನು.

`ಪ್ರಿಯ ಮುನಿಗಳೇ, ಶುದ್ಧ ದಿವ್ಯ ಕರ್ಣಗಳ ಮೂಲಕ ಭಗವಂತನ ಮಹಿಮೆಗಳನ್ನು ಕೇಳುವುದರಿಂದಲೇ ಭಗವದ್‌ ಭಕ್ತರು ಕೂಡಲೇ ಎಲ್ಲ ಐಹಿಕ ಆಸೆ ಆಕಾಂಕ್ಷೆಗಳಿಂದ ಹಾಗೂ ಕಾಮ್ಯಕರ್ಮ ಚಟುವಟಿಕೆಗಳಿಂದ ಮುಕ್ತರಾಗುತ್ತಾರೆ!’

ಹೀಗೆಲ್ಲ ಮಾನವ ಬದುಕಿನ ಕುರಿತು ಆಳವಾದ ಒಳಮುಖಗಳನ್ನು ಬಿಡಿಸಿ ಹೇಳಿದ ಸೂತಮುನಿಗಳು ಶ್ರೀಕೃಷ್ಣನ ಜೀವಿತದ ಉಳಿದ ಭಾಗವನ್ನು ತಿಳಿಸಲುಪಕ್ರಮಿಸಿದರು.

ಭೋಜ, ವೃಷ್ಟಿ, ಅಂಧಕ, ಶೂರಸೇನ, ದಶಾರ್ಹ, ಕುರು, ಸೃಂಜಯ ಮತ್ತು ಪಾಂಡು ಈ ವಂಶಜರ ನೆರವಿನಿಂದ ಭಗವಾನ್‌ ಶ್ರೀಕೃಷ್ಣನು ನಾನಾ ಕಾರ್ಯಗಳನ್ನು ಮಾಡಿದನು. ತನ್ನ ದಿವ್ಯ ಶರೀರದಲ್ಲಿ  ಆವಿರ್ಭವಿಸಿದ  ಭಗವಂತನು  ತನ್ನ ಮಂದಹಾಸದಿಂದ, ತನ್ನ ವಾತ್ಸಲ್ಯ ಪೂರ್ಣ ನಡಾವಳಿಯಿಂದ, ಬೋಧನೆಗಳಿಂದ, ಗೋವರ್ಧನಗಿರಿಯನ್ನು ಎತ್ತುವಂತಹ ಅಸಾಧಾರಣ ಲೀಲೆಗಳಿಂದ ಮಾನವ ಸಮಾಜವನ್ನು ಸಂತುಷ್ಟಗೊಳಿಸಿದನು.

ಕೃಷ್ಣನ ಮುಖವು ಮಕರವನ್ನು ಹೋಲುವಂತಹ ಕರ್ಣಕುಂಡಲಗಳಿಂದ ಅಲಂಕೃತವಾಗಿದೆ. ಅವನ ಕಿವಿಗಳು ಸುಂದರವಾಗಿವೆ. ಅವನ ಕಪೋಲಗಳು ಫಳಫಳಿಸುತ್ತಿದ್ದು ಅವನ ಮಂದಹಾಸವು ಪ್ರತಿಯೊಬ್ಬರಿಗೂ ಆಕರ್ಷಣೀಯವಾಗಿದೆ. ಭಗವಾನ್‌ ಶ್ರೀಕೃಷ್ಣನನ್ನು ಯಾರೇ ನೋಡಲಿ ಅವರ ಕಣ್ಣಿಗೆ ಅವನೊಂದು ಹಬ್ಬ. ಅವನ ಮುಖ ಮತ್ತು ದೇಹ ಪ್ರತಿಯೊಬ್ಬರಿಗೂ ತೃಪ್ತಿದಾಯಕ.

ಲೀಲಾಪುರುಷೋತ್ತಮ ಎಂದು ಪ್ರಖ್ಯಾತನಾದ ದೇವೋತ್ತಮ ಪರಮ ಪುರುಷ ಶ್ರೀಕೃಷ್ಣನು ವಸುದೇವ ಪುತ್ರನಾಗಿ ಆವಿರ್ಭವಿಸಿದನು. ಆದರೆ ತತ್‌ಕ್ಷಣ ತನ್ನ ತಂದೆಯ ಮನೆಯನ್ನು ತ್ಯಜಿಸಿ ತನ್ನ ಆಪ್ತಭಕ್ತರೊಂದಿಗೆ ತನ್ನ ಮಧುರ ಬಾಂಧವ್ಯ ವಿಸ್ತರಿಸಲು ವೃಂದಾವನಕ್ಕೆ ತೆರಳಿದನು. ವೃಂದಾವನದಲ್ಲಿ ಅನೇಕ ರಾಕ್ಷಸರ ಸಂಹಾರ ಮಾಡಿದನು. ಅನಂತರ ದ್ವಾರಕೆಗೆ ಹಿಂತಿರುಗಿದನು. ಅನೇಕ ಸ್ತ್ರೀಯರನ್ನು ವಿವಾಹ ಮಾಡಿಕೊಂಡನು. ಇವರೆಲ್ಲ ಸ್ತ್ರೀರತ್ನರಾಗಿದ್ದು, ಇವರಿಂದ ಶ್ರೀಕೃಷ್ಣನು ನೂರಾರು ಪುತ್ರರನ್ನು ಪಡೆದನು. ಗೃಹಸ್ಥಾಶ್ರಮದ ತತ್ತ್ವಗಳನ್ನು ಸ್ಥಾಪಿಸಲು ಸ್ವಯಮಾರಾಧನೆಗಾಗಿ ಯಜ್ಞಗಳನ್ನು ಆಚರಿಸಿದನು.

ಅನಂತರ ಶ್ರೀಕೃಷ್ಣನು ಭೂಭಾರ ಹರಣ ಮಾಡಲು ಕುಟುಂಬದ ಸದಸ್ಯರಲ್ಲಿ ವೈಮನಸ್ಯ ಉಂಟುಮಾಡಿದನು. ನೋಟ ಮಾತ್ರದಿಂದ ಅವನು ಕುರುಕ್ಷೇತ್ರ ಯುದ್ಧರಂಗದಲ್ಲಿ ರಾಕ್ಷಸಿ ದೊರೆಗಳನ್ನು ನಾಶಮಾಡಿ ಅರ್ಜುನನ ವಿಜಯ ಘೋಷ ಮಾಡಿದನು. ಅಂತಿಮವಾಗಿ ಅವನು ಉದ್ಧವನಿಗೆ ದಿವ್ಯ ಜೀವನ ಮತ್ತು ಭಕ್ತಿಯ ಬಗ್ಗೆ ಉಪದೇಶ ಮಾಡಿದನು.

ಅಂತಿಮವಾಗಿ ಸೂತಮುನಿಗಳು ಹೇಳಿದರು –

`ಕೊನೆಗೂ ಶ್ರೀಕೃಷ್ಣಾವತಾರಕ್ಕೊಂದು ಮುಕ್ತಾಯ ಬಂದಿತು. ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಂ ಎನ್ನುವ ನಿಯೋಜನೆಯೊಂದಿಗೆ ಮಾನವ ಲೋಕದಲ್ಲಿ ಉದಿಸಿದ ಭಗವಂತನ ಕಾರ್ಯವೆಲ್ಲ ಕುರುಕ್ಷೇತ್ರ ಯುದ್ಧರಂಗದಲ್ಲಿ ನೆರವೇರಿತು. ಲೋಕೋದ್ಧಾರ ಕಾರ್ಯ ಪೂರ್ಣಗೊಂಡಿತು. ಭಗವಾನ್‌ ಶ್ರೀಕೃಷ್ಣ ಅನಂತರ ಕಾಲಕ್ರಮೇಣ ತನ್ನ ಮೂಲ ರೂಪದಲ್ಲಿ ತನ್ನ ಸ್ವಧಾಮಕ್ಕೆ ತೆರಳಿದನು. ಅವತಾರ ಕಾಲದಲ್ಲಿ ಭಗವಂತ ಜ್ಞಾನ ಮತ್ತು ವೈರಾಗ್ಯ ಪ್ರಮುಖವಾದ ಬೋಧನೆಯನ್ನು ಮಾಡಿದನು.

`ಪ್ರಿಯ ಮುನಿಗಳೇ, ಮಾನವ ಜನ್ಮದಲ್ಲಿ ನಾವು ಎರಡು ಸಂಗತಿಗಳನ್ನು ಕಲಿತುಕೊಳ್ಳಬೇಕು : ಮೊದಲನೆಯದು, ಐಹಿಕ ಪ್ರಪಂಚದಿಂದ ವಿರಕ್ತರಾಗುವುದು ಹೇಗೆ? ಎರಡನೆಯದು, ಆಧ್ಯಾತ್ಮಿಕ ಜೀವನದಲ್ಲಿ ಪೂರ್ಣಜ್ಞಾನ ಪಡೆಯುವುದು ಹೇಗೆ?

`ಪ್ರಿಯ ನೈಮಿಷಾರಣ್ಯದ ತಾಪಸಿಗಳೆ, ಶ್ರೀಮದ್ಭಾಗವತದ ಒಂಬತ್ತನೆಯ ಸ್ಕಂಧ ಇಲ್ಲಿಗೆ ಮುಗಿಯುತ್ತದೆ. ಈ ಸ್ಕಂಧದ ಕೊನೆಯಲ್ಲಿ ಈ ಅಧ್ಯಾಯದಲ್ಲಿ ನಮಗೆ ಕೃಷ್ಣನ ಸೌಂದರ್ಯದ ಸುಳಿವು ಸಿಗುತ್ತದೆ. ವಿಶೇಷವಾಗಿ ಅವನ ಮುಖಲಕ್ಷಣವನ್ನು ವರ್ಣಿಸಲಾಗಿದೆ. ಈ ಸ್ಕಂಧವನ್ನು ಮುಗಿಸಿ ನಾವು ಕೃಷ್ಣನ ಶಿರೋಭಾಗವೆನಿಸಿದ ಹತ್ತನೆಯ ಸ್ಕಂಧಕ್ಕೆ ಹೋಗಲಿದ್ದೇವೆ!’

ಸೂತಮುನಿಗಳು ಅಷ್ಟು ದಿನಗಳಿಂದ ಹೇಳುತ್ತಿದ್ದ ಶ್ರೀಮದ್ಭಾಗವತ ಒಂಬತ್ತನೆಯ ಸ್ಕಂಧದ ಇಪ್ಪತ್ತ ನಾಲ್ಕು ಅಧ್ಯಾಯಗಳ ಉಪನ್ಯಾಸವನ್ನು ಮುಗಿಸಿ ಮಂಗಳವನ್ನು ಮಾಡಿದರು. ಭಗವಂತನಿಗೆ ನಮಿಸಿ ನೈಮಿಷಾರಣ್ಯದ ಮುನಿವರ್ಯರೆಲ್ಲರಿಗೂ ಫಲಮಂತ್ರಾಕ್ಷತೆ ಪ್ರದಾನ ಮಾಡಿದರು.

ಅಂದು ಮುಸ್ಸಂಜೆ ಮುಗಿದು ನಿಧಾನವಾಗಿ ಕತ್ತಲು ಆವರಿಸಿಕೊಳ್ಳಲು ಪ್ರಾರಂಭವಾದಾಗ, ಮುಗಿಲಿನಿಂದ ಸುಂದರ ಪುಷ್ಪವೃಷ್ಟಿಯ ಹಾಗೆ ತುಂತುರು ಮಳೆ ಧರೆಗಿಳಿಯಲು ಪ್ರಾರಂಭಿಸಿತು! ಭೂಮಿ ತಣಿದಿತ್ತು!  

ಈ ಲೇಖನ ಶೇರ್ ಮಾಡಿ