ಶ್ರೀ ಪರಶುರಾಮಾವತಾರ

ನೈಮಿಷಾರಣ್ಯದ ಮುನಿಗಳೆದುರು ಪದ್ಮಾಸನದಲ್ಲಿ ಕುಳಿತಿದ್ದ ಸೂತಮುನಿಗಳು ಕೆಲಕ್ಷಣ ಧ್ಯಾನಾಸಕ್ತರಾಗಿಯೇ ಇದ್ದರು. ದೀರ್ಘಮೌನ ಅಲ್ಲಿ ಆವರಿಸಿಕೊಂಡಿತ್ತು. ಸುತ್ತಲೂ ಅಲ್ಲಲ್ಲಿ ಹೊರಹೊಮ್ಮುತ್ತಿದ್ದ ಮುಂಜಾನೆಯ ಪಕ್ಷಿಗಳ ಕಲರವ, ಕೋಗಿಲೆ ಗೊರವಂಕಗಳ ಸವಿದನಿಯ ರಾಗ, ಆಗೊಮ್ಮೆ ಈಗೊಮ್ಮೆ ಭಯಂಕರವಾಗಿ ಕೇಳಿಸುತ್ತಿದ್ದ ಕ್ರೂರಮೃಗಗಳ ಹಸಿವಿನ ದನಿ – ಇವುಗಳ ನಡುವೆ ಗುರು ಸೂತರು ಭಾಗವತ ಕಥಾನಕವನ್ನು ಬಣ್ಣಿಸಲು ಪ್ರಾರಂಭಿಸುವುದನ್ನೆ ಕುತೂಹಲದಿಂದ ಎದುರು ಕುಳಿತಿದ್ದ ಮುನಿಗಳು ಬಿಟ್ಟ ಕಣ್ಣು ಬಿಟ್ಟುಕೊಂಡು ಕಾದರು.

ಸೂತಮುನಿಗಳು ಧ್ಯಾನದಿಂದೆದ್ದು ಕಣ್ಣು ತೆರೆದು ಹೇಳಿದರು :

`ತಪಸ್ವಿಗಳೇ, ಇಂದಿನ ಕಥಾಭಾಗ ರೋಮಾಂಚಕವಾದದ್ದು. ಬ್ರಹ್ಮಶಕ್ತಿಯ ತಾಂಡವದ ಕಥೆ. ರೋಷಾಗ್ನಿ ಹೇಗೆ ಬಯಸಿದ್ದೆಲ್ಲವನ್ನೂ ಸುಡಬಹುದು ಎಂದು ಕಾಣಿಸುವ ವೃತ್ತಾಂತ. ಪ್ರಿಯ ಮುನಿಗಳೇ, ಈವರೆಗೆ ನೀವು ಕೇಳಿದ ಪುರೂರವ-ಊರ್ವಶಿಯ ಕಥಾವಳಿಯ ಮುಂದುವರಿಕೆಯೆಂಬಂತೆ ಚಂದ್ರವಂಶದ ಮುಂದಿನ ಸಂತಾನದ ಬಗ್ಗೆ ಕೇಳಲಿದ್ದೀರಿ. ಈ ಅಧ್ಯಾಯದಲ್ಲಿ ನಾವು ಸಂಧಿಸಲಿರುವ ಮಹಾಬ್ರಾಹ್ಮಣ, ಪರಶುರಾಮ. ಈ ಮಹನೀಯನ ಮಹಾನ್‌ ಶಕ್ತಿಯನ್ನು ಮನಸ್ಸಿನಲ್ಲಿ ತಿರುವಿಹಾಕುತ್ತಲೇ ನಾನು ಇದುವರೆಗೆ ಧ್ಯಾನಾಸಕ್ತನಾಗಿದ್ದೆ. ಪರಶುರಾಮ, ಆತನ ತಂದೆ ಜಮದಗ್ನಿ ಋಷಿ ನನಗೆ ಯಾವಾಗಲೂ ಪ್ರಾತಃಸ್ಮರಣೀಯರು!’

ನೈಮಿಷಾರಣ್ಯದ ಮುನಿಗಳೆಲ್ಲ ಸಂತಸ-ಗೌರವಗಳಿಂದ ಮಹಾಮಹಿಮ ಪರಶುರಾಮನ ಕಥೆಯನ್ನು ಕೇಳಲು ತೆರೆದ ಮನಸ್ಸಿನಿಂದ ಗುರುಗಳತ್ತ ನೋಡಿದರು.

ಸೂತಮುನಿಗಳು ಶ್ರೀಮದ್ಭಾಗವತ ಕಥೆಯ ಒಂಭತ್ತನೆಯ ಸ್ಕಂಧದ ಹದಿನೈದನೆಯ ಅಧ್ಯಾಯವನ್ನು ಹೇಳಲು ಮೊದಲು ಮಾಡಿದರು :

ಊರ್ವಶಿಯಿಂದ ಪುರೂರವನಿಗೆ ಆರು ಮಂದಿ ಪುತ್ರರು ಜನಿಸಿದರು : ಆಯು, ಶ್ರುತಾಯು, ಸತ್ಯಾಯು, ರಯ, ವಿಜಯ ಮತ್ತು ಜಯ. ಶ್ರುತಾಯುವಿನ ಪುತ್ರ ವಸುಮಾನ್‌. ಸತ್ಯಾಯುವಿನ ಪುತ್ರ ಶ್ರುತಂಜಯ, ರಯನ ಪುತ್ರ ಏಕ, ಜಯನ ಪುತ್ರ ಅಮಿತ, ವಿಜಯನ ಪುತ್ರ ಭೀಮ. ಈ ಭೀಮನಿಗೆ ಕಾಂಚನ ಎಂಬ ಮಗ. ಇವನಿಗೆ ಹೋತ್ರಕನೆಂಬ ಮಗ. ಹೋತ್ರಕನಿಗೆ ಜಹ್ನು ಎನ್ನುವ ಪುತ್ರ. ಈ ಜಹ್ನು ಎಂತಹವನೆಂದರೆ, ಹಿಂದೆ ಭಗೀರಥ ಅಷ್ಟೊಂದು ಮಹಾಪ್ರಯತ್ನಗಳಿಂದ ಭೂಮಿಗಿಳಿಸಿ ತಂದಿದ್ದ ಗಂಗಾನದಿಯ ನೀರೆಲ್ಲವನ್ನೂ ಇವನು ಒಂದೇ ಗುಟುಕಿನಲ್ಲಿ ಆಪೋಶನ ತೆಗೆದುಕೊಂಡುಬಿಟ್ಟ. ಅವನಿಗೇನು ಅಷ್ಟೊಂದು ಹಸಿವೆಯೊ ಅಥವಾ ಶಕ್ತಿ ಪ್ರದರ್ಶನವೊ?

ಈ ಮಹಾನ್‌ ಜಲದಾಹಿ ಜಹ್ನುವಿಗೆ ಪುರು ಎನ್ನುವ ಮಗ. ಇವನ ಮಗ ಬಲಾಕ. ಇವನ ಮಗ ಅಜಕ. ಅಜಕನ ಮಗ ಕುಶ. ಈ ಕುಶನಿಗೆ ಒಬ್ಬನಿಗಿಂತಲೂ ಹೆಚ್ಚು ಮಕ್ಕಳು – ಕುಶಾಂಬು, ತನಯ, ವಸು ಮತ್ತು ಕುಶನಾಭ, ಕುಶಾಂಬುವಿನ ಮಗ ಗಾಧಿ.

ಗಾಧಿಯಿಂದ ಒಂದಿಷ್ಟು ಸ್ವಾರಸ್ಯ ಘಟನೆಗಳು ಪ್ರಾರಂಭವಾಗುತ್ತವೆ. ಗಾಧಿಗೆ ಸತ್ಯವತಿಯೆನ್ನುವ ಸುಂದರ ಕನ್ಯೆಯಿದ್ದಳು. ತನ್ನ ಮಹಾನ್‌ ವಂಶ ವೀರೋಚಿತವಾಗಿ ಮುಂದುವರಿಯುವಂತೆ, ತನ್ನ ಮಗಳಿಗೆ ವೀರನಾದ ಕ್ಷತ್ರಿಯನೊಬ್ಬ ಗಂಡನಾಗಿ ದೊರಕಬೇಕು ಎಂದು ಗಾಧಿ ಬಹಳವಾಗಿ ಬಯಸಿದ್ದ. ಆದರೆ ವಿಧಿಲಿಖಿತದಲ್ಲಿದ್ದದ್ದೆ ಇನ್ನೊಂದು!

ಆ ಕಾಲದ ಮಹಾತಪಸ್ವಿಗಳಲ್ಲಿ ಒಬ್ಬನಾಗಿದ್ದ ಋಚೀಕ ಋಷಿ ಒಂದು ದಿವಸ ಗಾಧಿರಾಜನನ್ನು ನೋಡಲು ಬಂದ. ಅರಣ್ಯ ತಪಸ್ವಿಯೊಬ್ಬ ಅರಮನೆಗೆ ಅನಿರೀಕ್ಷಿತವಾಗಿ ಆಗಮಿಸಿದ್ದನ್ನು ಕಂಡು ಗಾಧಿರಾಜನಿಗೆ ಅಪಾರ ಸಂತೋಷವಾಯಿತು. ಆ ಅಪಾರ ಆನಂದ ಕ್ಷಣಿಕ ಎಂದವನಿಗೆ ಗೊತ್ತಿರಲಿಲ್ಲ. ಋಷಿಗೆ ರಾಜೋಚಿತ ಗೌರವಾದರಗಳನ್ನು ಸಲ್ಲಿಸಿ ಕೈಮುಗಿದು ನಿಂತು ಹೇಳಿದ : `ಋಷಿವರ್ಯ, ಅನಿರೀಕ್ಷಿತವಾಗಿ ಆಗಮಿಸಿ ನಮ್ಮನ್ನೆಲ್ಲ ಪುನೀತರನ್ನಾಗಿ ಮಾಡಿದ್ದೀರಿ. ಈ ದಿನ ನಮಗೆಲ್ಲ ಮಹಾಸುದಿನ!’

ಋಚೀಕ ಮಹರ್ಷಿ ರಾಜನ ಗೌರವಾದರ ಆತಿಥ್ಯಗಳಿಂದ ಸಂಪ್ರೀತನಾದ. ರಾಜನಲ್ಲಿ ಇವನಿಗೆ ಪ್ರೀತಿವಿಶ್ವಾಸಗಳುಂಟಾಯಿತು. ರಾಜನ ಸುತ್ತಲೂ ನಿಂತಿದ್ದ ರಾಜ ಕುಟುಂಬವನ್ನೂ, ರಾಜಪುತ್ರಿ ಸತ್ಯವತಿಯನ್ನೂ ದಿಟ್ಟಿಸುತ್ತ ಋಚೀಕ ಹೇಳಿದ : `ಪ್ರಿಯ ರಾಜನ್‌, ಗುರುಹಿರಿಯರಲ್ಲಿ ನಿನಗಿರುವ ಗೌರವಾದರಗಳು ನನಗೆ ತುಂಬ ಸಂತೋಷವನ್ನುಂಟುಮಾಡಿದೆ. ಇವೇ ನಿನಗೆ ಶ್ರೀರಕ್ಷೆ, ನೀನು ಸುಖಶಾಂತಿಗಳಿಂದ ಬಹಳ ಕಾಲ ರಾಜ್ಯಭಾರ ಮಾಡುತ್ತೀಯೆ ಎನಿಸುವಂತಿದೆ. ಪ್ರಿಯ ರಾಜನ್‌, ಈಗ ನಿನ್ನೊಂದಿಗೆ ಒಂದು ವಸ್ತುವನ್ನು ಬೇಡಲು ಬಂದಿದ್ದೇನೆ. ಕೋರಬಹುದೇ?’

ಗಾಧಿರಾಜ ಇನ್ನೂ ಆನಂದಗೊಂಡು ಹೇಳಿದ : `ಓಹ್‌, ಅರಮನೆಯ ಸದ್ಗೃಹಸ್ಥನೊಬ್ಬನಿಗೆ ಇದಕ್ಕಿಂತಲೂ ಸಂತೃಪ್ತಿಯ, ಸುಸಂದರ್ಭದ ವಿಷಯ ಇನ್ನೊಂದಿದೆಯೆ? ದಯವಿಟ್ಟು ಆಜ್ಞಾಪಿಸಿ, ಶಿರಸಾವಹಿಸುತ್ತೇನೆ!’

ಋಚೀಕ ಅಧಿಕಾರವಾಣಿಯಲ್ಲಿ ಹೇಳಿದ –

`ಗಾಧಿರಾಜ, ನಾನು ನಿನ್ನ ಮಗಳು ಸತ್ಯವತಿಯನ್ನು ವಿವಾಹ ಆಗಲು ಬಯಸಿ ಬಂದಿದ್ದೇನೆ!’

ರಾಜನಿಗೆ ಸಿಡಿಲು ಬಡಿದಂತಾಯಿತು. ಅವನ ಕುಟುಂಬ ಕುಸಿದು ನರಳಿತು. ಸತ್ಯವತಿ ಚಡಪಡಿಸಿದಳು.

ಈ ನರಪೇತಲ, ಬಡಋಷಿ ತನ್ನ ರಾಜಪುತ್ರಿಗೆ ತಕ್ಕ ವರನಲ್ಲ ಎಂದು ಗಾಧಿರಾಜನಿಗೆ ಅನ್ನಿಸಿತ್ತು. ಆದರೆ, ಋಷಿ ಕೋಪಕ್ಕೆ ತನ್ನ ಉತ್ತರ ದಾರಿಮಾಡಿಕೊಡಬಾರದು ಎನಿಸಿದ್ದರಿಂದ ಅದೇ ಗೌರವಾದರಗಳ ದನಿಯಲ್ಲಿ ಹೇಳಿದ : `ಪೂಜ್ಯ ಮುನಿವರ್ಯರೆ, ನೀವು ಧಾರಾಳವಾಗಿ ನನ್ನ ಪುತ್ರಿಯನ್ನು ಪಾಣಿಗ್ರಹಣ ಮಾಡಿಕೊಳ್ಳಬಹುದು. ಆದರೆ ನಮ್ಮ ವಂಶದ ನಿಯಮದಂತೆ, ಈ ಶ್ರೀಮಂತ ರಾಜಕುಟುಂಬದ ನಿಯಮದಂತೆ, ನೀವೊಂದು ದೊಡ್ಡ ಕನ್ಯಾಶುಲ್ಕ ನೀಡಬೇಕಾಗುತ್ತದೆ. ಅದು ಸಾಧ್ಯವಾದರೆ ನನ್ನ ಪುತ್ರಿಯ ಕೈಹಿಡಿಯಲು, ಅವಳೊಂದಿಗೆ ದಾಂಪತ್ಯ ಜೀವನ ನಡೆಸಲು ನೀವು ಶಕ್ತ್ಯರಾಗುತ್ತೀರಿ. ಇದಕ್ಕೆ ನೀವು ಒಪ್ಪಿದರೆ ಈ ಕನ್ಯಾಶುಲ್ಕ ಏನೆಂದು ಹೇಳುತ್ತೇನೆ!

ಋಚೀಕ ಋಷಿ ಒಪ್ಪಿಗೆ ಇದೆ, ಹೇಳು ಎಂಬಂತೆ ತಲೆಯಾಡಿಸಿದ.

ರಾಜ ಹೇಳಿದ –

`ಬೆಳದಿಂಗಳಿನಂತೆ ತೇಜೋಮಯವಾಗಿರುವ ಒಂದು ಸಾವಿರ ಕುದುರೆಗಳನ್ನು ನೀಡಬೇಕು – ಇವುಗಳಲ್ಲಿ ಪ್ರತಿಯೊಂದರ ಎಡ ಅಥವಾ ಬಲಗಿವಿ ಕಪ್ಪಾಗಿರಬೇಕು!’

ರಾಜನ ಮಾತು ಕೇಳಿದ ಕೂಡಲೇ ಆ ಕೃಶಾಂಗ ತಪಸ್ವಿ ಮಂದಹಾಸ ಬೀರಿದ. ಅವನ ಈ ಮಂದಹಾಸದ ತುಟಿಯಂಚಿನಲ್ಲೊಂದು ಕೊಂಕು ನಗೆಯೂ ಮೂಡಿತ್ತು – ಈ ಶ್ರೀಮಂತ ರಾಜನಿಗೆ ತಾಪಸಿಗಳ ಶ್ರೀಮಂತಿಕೆಯ ಬಗ್ಗೆ ಏನೂ ಗೊತ್ತಿಲ್ಲ ಎಂಬಂತಹ ಅಣಕ ನಗೆ ಅದು! ಈ ವನ್ಯಜೀವಿಗೆ ಹೀಗೊಂದು ಅಸಾಧ್ಯ ಕನ್ಯಾಶುಲ್ಕ ಕೈಗೆಟುಕದ್ದು ಎಂದು ಭಾವಿಸಿ, ರಾಜಪುತ್ರಿಯನ್ನು ತನಗೆ ಕೊಡದಿರಲು ಒಂದು ಉಪಾಯ ಹೂಡಿದ್ದಾನೆ ಎಂದು ಅರ್ಥವಾಯಿತು.

ಈ ಬಡ ಬ್ರಾಹ್ಮಣನೆಂದರೇನು, ಒಂದು ಸಾವಿರ ಪರಿಶುಭ್ರ ಅಶ್ವಗಳನ್ನು ಕೊಡುವುದೆಂದರೇನು ಅಂದುಕೊಂಡ ಗಾಧಿರಾಜ ತನ್ನ ಮೀಸೆಯ ತುದಿಯಲ್ಲಿ ಅಟ್ಟಹಾಸದ ಮಂದಹಾಸ ಕಾಣಿಸಿದ್ದ.

ಆದರೆ, ಅವನಿಗೆ ತನ್ನದು ತಪ್ಪು ಲೆಕ್ಕಾಚಾರ ಎಂಬ ಅರಿವಿರಲಿಲ್ಲ!

ಆದರೆ, ತನ್ನ ಶ್ರೀಮಂತ ಕನ್ಯಾಶುಲ್ಕ ಕೇಳಿ ಒಂದಿಷ್ಟು ವಿಚಲಿತನಾಗದೆ ಆ ಬಡಋಷಿ ಉತ್ತರಿಸಿದ್ದನ್ನು ಕೇಳಿದಾಗ ಮಾತ್ರ ಗಾಧಿರಾಜನ ವಿಶ್ವಾಸ ಒಂದಿಷ್ಟು ಅಲುಗಾಡಿತು.

ಋಚೀಕ ಹೇಳಿದ –

`ಸರಿ, ನಿನ್ನ ಕನ್ಯಾಶುಲ್ಕಕ್ಕೆ ನನ್ನೊಪ್ಪಿಗೆ ಇದೆ. ಇಷ್ಟರಲ್ಲಿಯೇ ಅದರೊಂದಿಗೆ ಬರುತ್ತೇನೆ!’

ಅವನು ಅರಮನೆಯಿಂದ ಹೋದಮೇಲೂ ಗಾಧಿರಾಜನಿಗೆ ಆ ಮುನಿಯುತ್ತರದಿಂದ ಹೊರಬರಲಾಗಿರಲಿಲ್ಲ. ರಾಜಾಧಿರಾಜರಿಗೇ ತತ್‌ಕ್ಷಣ ಸಾಧ್ಯವಾಗದ ಇಂತಹದೊಂದು ಕನ್ಯಾಶುಲ್ಕವನ್ನು ಈ ಬಡಸಾಧು ಕೊಡುತ್ತೇನೆಂದು ವಿಶ್ವಾಸದ ಮಾತನಾಡಿ ಹೋದನಲ್ಲ! ಅವನಿಗೆ ಚಿಂತಿಸುವಂತಾಯಿತು!

ಋಚೀಕ ಅಲ್ಲಿಂದ ನಡೆದು ವರುಣದೇವರಲ್ಲಿಗೆ ಹೋದ. ತನ್ನ ಬಯಕೆ ಈಡೇರಿಸುವಂತೆ ಪ್ರಾರ್ಥಿಸಿದ. ವರುಣದೇವರು ತಥಾಸ್ತು ಎಂದು ಅವನೊಂದಿಗೆ ಒಂದು ಸಾವಿರ ದಿವ್ಯಾಶ್ವಗಳನ್ನು ಕಳುಹಿಸಿದ.

ಹೀಗೆ ಹೋಗಿ ಹಾಗೆ ಬಂದ ಈ ಕೃಷಾಂಗ ಮುನಿಯನ್ನು, ಅವನ ಹಿಂದೆ ಖರಪುಟ ಸದ್ದು ಮಾಡುತ್ತ ಬರುತ್ತಿದ್ದ ಅತ್ಯಂತ ಸುಂದರ ಶುಭ್ರ ಬಿಳಿ ಅಶ್ವಗಳನ್ನೂ, ಅವುಗಳ ಕಪ್ಪು ಕಿವಿಗಳನ್ನೂ ನೋಡಿ ರಾಜ ಬೆಪ್ಪಾಗಿ ನಿಂತ. ಮುನಿ ಹತ್ತಿರ ಬಂದು ಮಾತನಾಡಿಸಿದಾಗಲೇ ಅವನಿಗೆ ಎಚ್ಚರ. ಬೆಚ್ಚಿ ನೋಡಿದ.

ಋಚೀಕ ಹೇಳಿದ : `ಪ್ರಿಯ ರಾಜನ್‌, ನಿನ್ನ ಅಣತಿಯಂತೆ ಒಂದು ಸಾವಿರ ದಿವ್ಯಾಶ್ವಗಳನ್ನು ತಂದಿದ್ದೇನೆ, ಸ್ವೀಕರಿಸು. ಇನ್ನು ನಿನ್ನ  ಮಗಳನ್ನು ನನಗೆ ದಯಪಾಲಿಸು!’

ಗಾಧಿರಾಜನಿಗೆ ಆ ವೇಳೆಗೆ ಜ್ಞಾನೋದಯವಾಗಿತ್ತು. ಬ್ರಹ್ಮ ಶಕ್ತಿಯ ಮುಂದೆ ಕ್ಷಾತ್ರಶಕ್ತಿ ತಲೆಬಾಗಿತು. ಸಂತೋಷದಿಂದಲೇ ತನ್ನ ಮಗಳು ಸತ್ಯವತಿಯನ್ನು ಋಚೀಕ ಮುನಿಗೆ ಕನ್ಯಾದಾನ ಮಾಡಿದ.

ಸತ್ಯವತಿಯೊಂದಿಗೆ ಹೊರಡುವಾಗ ಬಂದು ಕಾಲಿಗೆರಗಿದ ಗಾಧಿರಾಜನನ್ನು ಕುರಿತು ಋಚೀಕ ಹೇಳಿದ :

`ರಾಜನ್‌, ನಿನ್ನ ರಾಜಪುತ್ರಿಯನ್ನು ನನ್ನಂತಹ ಬಡ ಬ್ರಾಹ್ಮಣನಿಗೆ ಪಾಣಿಗ್ರಹಣ ಮಾಡಿಕೊಟ್ಟು ಅನ್ಯಾಯವಾಗಿ ಹೋಯಿತು ಎಂದು ಭಾವಿಸಬೇಡ. ಇವೆಲ್ಲವೂ ದೈವಪ್ರೇರಿತ, ಮಾನವ ಒಳಿತಿನ ಸಂಸರ್ಗ ಎಂದು ತಿಳಿದುಕೊ. ನಿನ್ನ ವಂಶ ಉದ್ಧಾರವಾಗುತ್ತದೆ – ಮಹಾಪುರುಷರು ಜನಿಸುತ್ತಾರೆ!’

ಗಾಧಿರಾಜನಿಗೆ ಸಂಕೋಚವಾಗಿತ್ತು. ತಲೆಬಾಗಿಸಿದ.

ಮಗಳೊಂದಿಗೆ ಗಾಧಿರಾಣಿಯೂ ಹೊರಟು ನಿಂತಳು. ಋಚೀಕಮುನಿ ಅವರಿಬ್ಬರೊಂದಿಗೆ ತನ್ನ ವನ್ಯಾಶ್ರಮ ಸೇರಿಕೊಂಡ. ಒಂದು ದಿವಸ ಆ ತಾಯಿ-ಮಗಳು ಋಚೀಕ ಮುನಿಯ ಪಾದಗಳಿಗೆರಗಿ ಹೇಳಿದರು : `ನಮ್ಮಿಬ್ಬರಿಗೂ ಪುತ್ರ ಸಂತಾನದ ಅನುಗ್ರಹ ಮಾಡಬೇಕು!’

ಋಚೀಕ ಋಷಿ ಅದಕ್ಕೆ ಒಪ್ಪಿ ದೇವರಿಗೆ ನೈವೇದ್ಯ ಸಿದ್ಧಪಡಿಸಲು ಹೇಳಿ ಸ್ನಾನಕ್ಕೆ ಹೋದ. ಅನಂತರ ಆ ಅಡುಗೆಯನ್ನು ದೇವರಿಗರ್ಪಿಸಿ ಎರಡು ಭಾಗ ಮಾಡಿ, ಒಂದಕ್ಕೆ ಬ್ರಾಹ್ಮಣ ಮಂತ್ರವನ್ನು ಜಪಿಸಿ ತನ್ನ ಹೆಂಡತಿಗೆ ಕೊಟ್ಟ, ಇನ್ನೊಂದಕ್ಕೆ ಕ್ಷತ್ರಿಯ ಮಂತ್ರವನ್ನು ಜಪಿಸಿ ಅತ್ತೆಗೆ ಕೊಟ್ಟ.

ಮಗಳು ಅದನ್ನು ತಿನ್ನುವ ಮೊದಲು ಅದನ್ನು ತಾನು ಪಡೆದುಕೊಂಡು ತನ್ನಲ್ಲಿದ್ದ ನೈವೇದ್ಯವನ್ನು ಮಗಳಿಗೆ ತಿನ್ನಲು ಕೊಟ್ಟಳು – ಪತಿಗೆ ಸಹಜವಾಗಿ ಪತ್ನಿಯ ಮೇಲೆ ಹೆಚ್ಚಿನ ಪ್ರೀತಿವಾತ್ಸಲ್ಯಗಳಿರುತ್ತದೆ. ಆದ್ದರಿಂದ ಅವಳಿಗೆ ಕೊಟ್ಟ ನೈವೇದ್ಯ ವಿಶೇಷ ಮಂತ್ರದಿಂದೊಡಗೂಡಿರಬಹುದು ಎಂದು ಭಾವಿಸಿದ ತಾಯಿ, ಹೀಗೆ ನೈವೇದ್ಯಗಳನ್ನು ಅದಲು ಬದಲು ಮಾಡಿದಳು. ತಾಯಿ-ಮಗಳು ಅದನ್ನು ತಿಂದರು.

ಅನಂತರ ಈ ಅದಲು ಬದಲು ತಿಳಿದ ಋಚೀಕ ಹೇಳಿದ:

`ವಿಧಿಲಿಖಿತವನ್ನು ಯಾರಿಂದ ಬದಲಾಯಿಸಲಾಗುತ್ತದೆ? ನೀವು ಮಹಾಪರಾಧ ಮಾಡಿದಿರಿ’ ನೈವೇದ್ಯವನ್ನು ಅದಲು ಬದಲು ಮಾಡಿದಿರಿ. ನನ್ನ ಹೆಂಡತಿಗೆ ಹುಟ್ಟುವ ಮಗ ಸಕಲರನ್ನೂ ದಂಡಿಸುವ ಭೀಷಣ ಕ್ಷತ್ರಿಯನಾಗುತ್ತಾನೆ. ನನ್ನ ಅತ್ತೆಗೆ ಹುಟ್ಟುವ ಮಗ ಅಧ್ಯಾತ್ಮ ಜ್ಞಾನದಲ್ಲಿ ಪ್ರಕಾಂಡ ಪಂಡಿತನಾಗುತ್ತಾನೆ!’

ಹೆಂಗಸರಿಬ್ಬರೂ ಗೋಳಾಡಿದರು. ತಮ್ಮ ಅಪರಾಧ ಮನ್ನಿಸುವಂತೆ ಕೇಳಿಕೊಂಡರು.

ಋಚೀಕ ಹೇಳಿದ –

`ಸರಿ, ನಿನ್ನ ಮಗನ ಬದಲು ನಿನ್ನ ಮೊಮ್ಮಗ ಕ್ಷತ್ರಿಯ ಚೇತನ ಹೊಂದಿದವನಾಗಿರುತ್ತಾನೆ!’ – ಎಂದು ಹೆಂಡತಿಯನ್ನು ಸಮಾಧಾನ ಮಾಡಿದ.

ತಾಯಿಯ ಹೊಟ್ಟೆಯಲ್ಲಿ, ಮುಂದೆ ದೇವರ್ಷಿಯಾದ ವಿಶ್ವಾಮಿತ್ರ ಕ್ಷತ್ರಿಯ ಕುಲದಲ್ಲಿ ಹುಟ್ಟಿದ. ಮಗಳ ಹೊಟ್ಟೆಯಲ್ಲಿ, ಉಗ್ರ ತಪಸ್ವಿ ಜಮದಗ್ನಿ ಹುಟ್ಟಿದ. ಈ ಜಮದಗ್ನಿಗೆ ಉಗ್ರಶಕ್ತಿಯ ಪರಶುರಾಮ ಜನಿಸಿದ.

ಆ ಮಹಾನ್‌ ಮೊಮ್ಮಗನನ್ನು ನೋಡುವ ಮೊದಲೇ, ಸತ್ಯವತಿ ಇಡೀ ಜಗತ್ತನ್ನು ಪಾವನಗೊಳಿಸಲು ಪವಿತ್ರವಾದ ಕೌಶಿಕೀ ನದಿಯಾಗಿ ಹರಿದಳು. ಜಮದಗ್ನಿ, ರೇಣುವಿನ ಪುತ್ರಿ ರೇಣುಕಾಳನ್ನು ಮದುವೆಯಾದ. ಅವನಿಗೆ ಅನೇಕ ಪುತ್ರರು ಜನಿಸಿದರು. ಅವರಲ್ಲಿ ಕಿರಿಯ ಪುತ್ರನೇ ಪರಶುರಾಮ!

ಸೂತಮುನಿಗಳು ಹೇಳಿದರು –

`ಪ್ರಿಯ ಮುನಿಗಳೇ, ಈ ಪರಶುರಾಮ, ಸಹಸ್ರಬಾಹು ಕಾರ್ತವೀಯಾರ್ಜುನನ ವಂಶವನ್ನೇ ನಿರ್ವಂಶಗೊಳಿಸಿದವನು. ಇಪ್ಪತ್ತೊಂದು ಸಲ ಪ್ರಪಂಚ ಪ್ರದಕ್ಷಿಣೆ ಮಾಡಿ ಕ್ಷತ್ರಿಯರನ್ನೆಲ್ಲ ಕೊಚ್ಚಿಹಾಕಿದವನು. ವಾಸುದೇವನ ಸುವಿಖ್ಯಾತ ಅವತಾರ. ಒಂದು ರೀತಿ, ಅಧರ್ಮ ಕಾಡಿದಾಗಲೆಲ್ಲ ನಾನು ಭೂಲೋಕದಲ್ಲಿ ಅವತಾರವೆತ್ತುತ್ತೇನೆ ಎಂದು ವಾಸುದೇವ ನುಡಿದಂತೆ, ಭೂಲೋಕದ ರಾಜವಂಶಜರೆಲ್ಲರೂ ಐಹಿಕ ಗುಣಗಳಾದ ರಜೋಗುಣ ಮತ್ತು ತಮೋಗುಣಗಳಿಂದ ಮದೋನ್ಮತ್ತರಾಗಿದ್ದರು. ಅಧರ್ಮಿಗಳಾಗಿ ಹೋಗಿದ್ದರು. ಧಾರ್ಮಿಕ ವಿಧಿ-ನಿಯಮಗಳನ್ನು ಅಲಕ್ಷಿಸಿದರು. ಈ ಸಂದರ್ಭದಲ್ಲಿ ಪರೀಕ್ಷಿತ ಮಹಾರಾಜ ಶುಕಮುನಿಗಳಿಂದ ಒಂದು ವಿಷಯ ತಿಳಿಯಬಯಸಿದನು – ತಮ್ಮ ಇಂದ್ರಿಯಗಳನ್ನು ನಿಗ್ರಹಿಸಲಾಗದ ಕ್ಷತ್ರಿಯರನ್ನು ಪರಶುರಾಮ ನಾಶಮಾಡಿದ್ದಾದರೂ ಏಕೆ, ಕಾರ್ತವೀಯಾರ್ಜುನ ಮಾಡಿದ ಅಪರಾಧವಾದರೂ ಏನು? ಆಗ ಶುಕಮುನಿಗಳು ಇವೆಲ್ಲದರ ಹಿನ್ನೆಲೆಯನ್ನು ಅವನಿಗೆ ವಿವರಿಸಿದರು.’

ಕಾರ್ತವೀಯಾರ್ಜುನ ಕ್ಷತ್ರಿಯರಲ್ಲಿ ಶ್ರೇಷ್ಠನಾದ ಹೈಹಯರ ರಾಜ. ವಾಸುದೇವನ ಸ್ವಾಂಶ ವಿಸ್ತರಣೆಯಾದ ದತ್ತಾತ್ರೇಯನನ್ನು ಆರಾಧಿಸಿ ಒಂದು ಸಾವಿರ ಬಾಹುಗಳನ್ನು ಗಳಿಸಿಕೊಂಡನು. ವೈರಿಗಳಿಂದ ಅಜೇಯನಾದನು. ಅನಿರ್ಬಂಧಿತ ಇಂದ್ರಿಯಶಕ್ತಿ, ಸೌಂದರ್ಯ, ಪ್ರಭಾವ, ಪ್ರಾಬಲ್ಯ, ಖ್ಯಾತಿ ಅಲ್ಲದೇ ಅನಿಮಾ ಮತ್ತು ಲಘಿಮಾಗಳಂತಹ ಯೋಗದಲ್ಲಿ ಪರಿಪೂರ್ಣತೆ – ಹೀಗೆ ಅವನು ಯಾರಿಗೂ ಒಳಪಡದ ಅನಿರ್ಬಂಧ ಸಾರ್ವಭೌಮನಾಗಿ ಬೀಗುತ್ತ ವಿಶ್ವವನ್ನೆಲ್ಲ ಸಂಚರಿಸಿದನು.

ಒಂದು ಸಲ ನರ್ಮದಾ ನದಿಯಲ್ಲಿ ಸುಂದರಾಂಗಿಯರಿಂದ ಸುತ್ತುವರಿದು ವಿಜಯಮಾಲೆ ಧರಿಸಿ ಜಲವಿಹಾರ ಮಾಡುತ್ತಿದ್ದಾಗ, ಗರ್ವದಿಂದುಬ್ಬಿ ನದಿಯ ಓಟವನ್ನೇ ನಿಲ್ಲಿಸಿದ. ಆಗ ಅಲ್ಲೇ ಸೈನಿಕರೊಂದಿಗೆ ಬೀಡುಬಿಟ್ಟಿದ್ದ ಹತ್ತು ತಲೆಯ ರಾವಣನ ಇಡೀ ಬೀಡು ನದಿ ಪ್ರವಾಹದಿಂದ ಕೊಚ್ಚಿಹೋಯಿತು. ರೋಷದಿಂದ ಎದ್ದು ಬಂದು ಕಾರ್ತವೀಯಾರ್ಜುನನ್ನು ಎದುರಿಸಿ ನಿಂತ. ಆದರೆ, ಸಹಸ್ರಬಾಹು ಕಾರ್ತ್ಯವೀಯಾರ್ಜುನ ಒಂದೇ ಕ್ಷಣದಲ್ಲಿ ರಾವಣನನ್ನು ಬಂಧಿಸಿ, ಅವಮಾನಿಸಿ ಅನಂತರ ಬಿಡುಗಡೆ ಮಾಡಿದ.

ಇಂತಹ ಪರಮ ವೀರ, ಕೊಬ್ಬಿದ ಗರ್ವಿಷ್ಠ ಕಾರ್ತವೀಯಾರ್ಜುನ ಒಮ್ಮೆ ಗೊತ್ತುಗುರಿ ಇಲ್ಲದೆ ನಿರ್ಜನ ಅರಣ್ಯದಲ್ಲಿ ಬೇಟೆಯಾಡುತ್ತ ಜಮದಗ್ನಿಯ ಆಶ್ರಮ ಪ್ರವೇಶಿಸಿದ. ತಪಸ್ಸಿನಲ್ಲಿ ನಿರತನಾಗಿದ್ದರೂ ಜಮದಗ್ನಿ ದೇಶದ ಸಾರ್ವಭೌಮ ಮತ್ತವನ ಸಾವಿರಾರು ಸೈನಿಕರನ್ನು ಸ್ವಾಗತಿಸಿ, ಅವರಿಗೆ ಬೇಕು ಬೇಕಾದ್ದನ್ನೆಲ್ಲ ಪೂರೈಸಿ ಸತ್ಕರಿಸಿದ.

ಕಾರ್ತವೀಯಾರ್ಜುನನಿಗೆ ಅಚ್ಚರಿ. ಋಷ್ಯಾಶ್ರಮದ ಈ ಬಡ ಬ್ರಾಹ್ಮಣ ಹೀಗೆ ಶ್ರೀಮಂತ ಉಪಚಾರ ಮಾಡಲು ಸಾಧ್ಯವಾದದ್ದಾದರೂ ಹೇಗೆ? ಜಮದಗ್ನಿಯನ್ನು ಕೇಳಿಯೂಬಿಟ್ಟ.

ಜಮದಗ್ನಿ ಹೇಳಿದ –

`ರಾಜನ್‌, ದೈವಾನುಗ್ರಹದಿಂದ ನನ್ನಲ್ಲಿ `ಕಾಮಧೇನು’ ಎನ್ನುವ ಗೋವು ಇದೆ. ಅದರಿಂದಲೇ ಇವೆಲ್ಲ ಸಾಧ್ಯವಾಯಿತು!’

ಕಾರ್ತವೀಯಾರ್ಜುನನಿಗೆ ಇನ್ನೂ ಅಚ್ಚರಿ. ಕೇಳಿದ –

`ಬರೀ ಒಂದು ಗೋವು ಇದ್ದರೆ ಇಷ್ಟೊಂದು ಸಾವಿರ ಜನರನ್ನು ಸತ್ಕರಿಸುವುದು ಸಾಧ್ಯವಾಗುತ್ತದೆಯೇ?’

ಜಮದಗ್ನಿ ಹೇಳಿದ –

`ರಾಜನ್‌, ಇದು ಸಾಮಾನ್ಯ ಗೋವಲ್ಲ. ದೇವಲೋಕದ ಗೋವು. ಕಲ್ಪವೃಕ್ಷ ಕಾಮಧೇನು ಎಂದು ಪ್ರಸಿದ್ಧವಾದ ಕಾಮಧೇನು. ನಾವು ಏನು ಬೇಕೆಂದು ಕೋರಿದರೂ ಅದು ಕೊಡುತ್ತದೆ. ನಿಮಗೆಲ್ಲ ಹೀಗೊಂದು ಭವ್ಯ ಔತಣ ನೀಡಲು ಈ ಕಾಮಧೇನು ಅನುಗ್ರಹವೇ ಕಾರಣ!’

ಕಾರ್ತವೀಯಾರ್ಜುನನಿಗೆ ಮೈ ನವಿರೆದ್ದಿತು. ಹೀಗೊಂದು ಕಾಮಧೇನು ತನ್ನಲ್ಲಿದ್ದರೆ ದೇಶದ ಆಡಳಿತ ಸುಲಭವಾಗಿ ಹೋಗುವುದು, ಐಶ್ವರ್ಯವನ್ನು ಬಾಚಿಕೊಳ್ಳಬಹುದು ಎನಿಸಿತು.

ಅವನು ಹೇಳಿದ –

`ಜಮದಗ್ನಿಗಳೇ, ಇಂತಹ ರಾಜಯೋಗ್ಯ ಗುಣಗಳ ಗೋವು ರಾಜನ ಆಸ್ಥಾನದಲ್ಲಿ ಇರಬೇಕೇ ಹೊರತು ಇಲ್ಲಿ ನಿಮ್ಮ ಬಡ ಆಶ್ರಮದಲ್ಲಲ್ಲ. ಇದನ್ನು ನನಗೆ ಕೊಟ್ಟು ಬಿಡಿ!’

ಜಮದಗ್ನಿ ಒಪ್ಪದಿದ್ದರೂ, ಅಗ್ನಿಹೋತ್ರ ಯಜ್ಞಾಚರಣೆಯ ಕೆಲಸದಲ್ಲಿ ಕಾಮಧೇನು ನಿರತವಾಗಿದ್ದರೂ ಅದನ್ನು ಬಲವಂತವಾಗಿ ಕಾರ್ತವೀಯಾರ್ಜುನನ ಸೈನಿಕರು ಎಳೆದುಕೊಂಡು ಅರಮನೆಗೆ ತಂದುಬಿಟ್ಟರು.

ಸ್ವಲ್ಪ ಹೊತ್ತಾದ ಮೇಲೆ ಪರಶುರಾಮ ಆಶ್ರಮಕ್ಕೆ ಹಿಂತಿರುಗಿದನು. ನಡೆದ ವಿಷಯವನ್ನೆಲ್ಲ ಕೇಳಿ ತುಳಿತಕ್ಕೊಳಗಾದ ಸರ್ಪದ ಹಾಗೆ ಕೆರಳಿದನು. ಕೂಡಲೇ ತನ್ನ ಕೊಡಲಿ, ಗುರಾಣಿ, ಬಿಲ್ಲುಬಾಣಗಳೊಂದಿಗೆ ಕಾರ್ತವೀಯಾರ್ಜುನನ ಅರಮನೆಗೆ ಬಂದನು. ಇಡೀ ಸೈನ್ಯ ಇವನಿಗೆದುರಾಗಿ ಬಂದರೂ ಕೆಲವೇ ಸಮಯದಲ್ಲಿ ಧೂಳೀಪಟವಾಗಿತ್ತು. ಪರಶುರಾಮ ಏಕಾಂಗಿಯಾಗಿ, ಎದುರಿಗೆ ಬಂದು ನಿಂತ ಹದಿನೇಳು ಅಕ್ಷೋಹಿಣಿ ಸೇನೆಯನ್ನು ಸದೆಬಡಿದನು.

ಸೂತಮುನಿಗಳು ಹೇಳಿದರು –

`ಭಗವಾನ್‌ ಪರಶುರಾಮನ ಯುದ್ಧ ಕೌಶಲ ಹೇಗಿತ್ತೆಂದರೆ, ಪ್ರಾರಂಭದಲ್ಲಿ ಅವನು ಮನೋವೇಗದಲ್ಲಿ ಮುನ್ನುಗ್ಗಿ ತನ್ನ ಪರಶುವಿನಿಂದ ವೀರಯೋಧರು, ಆನೆಗಳು, ಕುದುರೆಗಳನ್ನು ತುಂಡರಿಸಿದನು. ಅವನು ಹೋದಲ್ಲೆಲ್ಲ ಶತ್ರುಗಳ ಅಂಗಹರಣವಾಗುತ್ತಿತ್ತು. ರಥಗಳು-ಸಾರಥಿಗಳು ನೆಲ ಕಚ್ಚುವಂತಾಯಿತು. ಆನೆಗಳೂ ಕುದುರೆಗಳೂ ಚೆಲ್ಲಾಪಿಲ್ಲಿಯಾಗಿ ಸಾವನ್ನಪ್ಪಿದವು, ಹೀಗೆ ಕಾದಾಡಿದ ಮೇಲೆ ಅಲ್ಪಸ್ವಲ್ಪ ಆಯಾಸವಾಯಿತು ಅನ್ನಿಸಿದಾಗ, ಮನೋವೇಗವನ್ನು ವಾಯುವೇಗಕ್ಕೆ ತಗ್ಗಿಸಿ ಶತ್ರುಗಳ ಉಗ್ರ ಸಂಹಾರವನ್ನು ಅವನು ಮುಂದುವರಿಸಿದನು. ಅನಂತರ ತನ್ನ ಕೊಡಲಿ ಮತ್ತು ಬಾಣ ಪ್ರಯೋಗ ಮಾಡಿ ಕಾರ್ತವೀಯಾರ್ಜುನನ ಸಹೋದರರ ಗುರಾಣಿ, ಧ್ವಜ, ಬಿಲ್ಲು ಹಾಗೂ ಅವರ ದೇಹಗಳನ್ನು ತುಂಡು ತುಂಡು ಮಾಡಿದನು. ಅವರೆಲ್ಲ ನೆಲಕ್ಕೆ ಬಿದ್ದು ಭೂಮಿಯನ್ನು ತಮ್ಮ ರಕ್ತದಿಂದ ತೋಯಿಸಿದರು. ಹೀಗೊಂದು ಹಿನ್ನಡೆ, ಏಕಾಂಗಿ ವೀರನ ಶೌರ್ಯ ಕಂಡ ಕಾರ್ತವೀಯಾರ್ಜುನ ಕನಲಿದ. ತಾನಿನ್ನೂ ಕಾರ್ಯಪ್ರವತ್ತನಾಗಿ ಈ ಕೋಪಿಷ್ಟ ಬ್ರಾಹ್ಮಣನನ್ನು ಸದೆಬಡಿಯಬೇಕು. ಈಗ ತನ್ನ ಸಹಸ್ರಬಾಹುಗಳ ಉಪಯೋಗ ಆಗಬೇಕು ಎಂದು ನಿರ್ಧರಿಸಿದ. ಕೂಡಲೇ ಸಕಲ ಸನ್ನದುಗಳೊಂದಿಗೆ ಯುದ್ಧರಂಗಕ್ಕೆ ನುಗ್ಗಿ ಬಂದ.

ಸಹಸ್ರ ಬಾಹು ಮಹಾವೀರ ಯುದ್ಧರಂಗಕ್ಕೆ ಕಾಲಿಟ್ಟಾಗ ಇಡೀ ಕಾಳಗಕಣವೇ ರೋಮಾಂಚನಗೊಂಡಿತು, ತಲ್ಲಣಗೊಂಡಿತು. ತನ್ನ ಸಹಸ್ರಬಾಹುಗಳ ಸಹಾಯದಿಂದ ಐನೂರು ಬಿಲ್ಲುಗಳಿಗೆ ಐನೂರು ಬಾಣಗಳನ್ನು ಹೂಡಿ ಮಹಾಕೋಪದಿಂದ ಅವೆಲ್ಲವನ್ನೂ ಪರಶುರಾಮನ ಮೇಲೆ ಪ್ರಯೋಗಿಸಿದ.

ಆದರೆ, ಪರಶುರಾಮ ಯಾವಾಗಲೂ ಸಮರಾಗ್ರಣಿ. ಎಷ್ಟು ಸಾವಿರ ಆಯುಧಗಳು ಎದುರಾದರೂ ನಿಭಾಯಿಸಬಲ್ಲ ಶಕ್ತಿ ಅವನಲ್ಲಿತ್ತು.

ಕಾರ್ತವೀಯಾರ್ಜುನ ಕಿರಿಚಿದ –

`ಏಯ್‌ ಒಂಟಿ ಬ್ರಾಹ್ಮಣ, ರಣರಂಗ-ಯುದ್ಧ ಎಂದರೆ ಏನೆಂದು ತಿಳಿದುಕೊಂಡಿದ್ದೀಯ? ಸಮಿತ್ತು ಹಿಡಿಯುವ ಕೈಗಳಿಗೆ ಬಿಲ್ಲುಬಾಣ ಯಾಕೆ ಕೊಟ್ಟು ತೊಂದರೆ ಕೊಡುತ್ತಿದ್ದೀಯ? ಒಂದಿಷ್ಟು ಸೈನಿಕರು, ಮೃಗಗಳನ್ನು ಕೊಂದಕೂಡಲೇ ನೀನೊಬ್ಬ ಮಹಾವೀರ ಅಂದುಕೊಂಡು ಬಿಡಬೇಡ! ಇಗೋ ನಿನ್ನ ಮಾರಣಹೋಮ ಪ್ರಾರಂಭ. ನಿನ್ನ ಇಡೀ ವಂಶವನ್ನು ನಾಶಮಾಡುವ ಕೆಲಸದ ಪ್ರಾರಂಭ!’

ಪರಶುರಾಮ ರೋಷದ ಕಿಡಿಗಳನ್ನು ಹರಡಿಸಿ ಹೇಳಿದ-

`ಏಯ್‌, ಹೇಡಿ! ತಪಸ್ವಿಗಳಾದ ನನ್ನ ತಂದೆ ಅಗ್ನಿಹೋತ್ರ ಯಜ್ಞಾಚರಣೆ ಮಾಡುತ್ತಿದ್ದರು. ಆಗವರು ಏನೂ ಮಾಡುವಂತಿರಲಿಲ್ಲ. ಬೇರೆ ಸಮಯದಲ್ಲಾಗಿದ್ದರೆ, ಅವರೊಮ್ಮೆ ಕಣ್ಣುಬಿಟ್ಟರೆ ಸಾಕು ನೀನು, ನಿನ್ನ ಅಕ್ಷೋಹಿಣಿ ಸೈನ್ಯಗಳೆಲ್ಲ ಸುಟ್ಟು ಭಸ್ಮವಾಗಿ ಹೋಗುತ್ತಿತ್ತು. ಈಗ ನೋಡು ನಾನೊಬ್ಬನೇ ನಿನ್ನ ಹದಿನೇಳು ಅಕ್ಷೋಹಿಣಿ ಸೈನ್ಯವನ್ನು ಸದೆಬಡಿದಿದ್ದೇನೆ. ಇನ್ನು ವಕ್ರವಾಗಿ, ವಿಚಿತ್ರವಾಗಿ, ಅಸಹಜವಾಗಿ, ಪುರುಷ ಮೃಗದಂತೆ ಕಾಣುವ ನಿನ್ನೆಲ್ಲ ಸಹಸ್ರ ಬಾಹುಗಳನ್ನು ತುಂಡರಿಸಿ, ನಿನ್ನನ್ನೂ ಕತ್ತರಿಸಿ ಹದ್ದು ತೋಳಗಳಿಗೆ ಸಮೃದ್ಧ ಆಹಾರವನ್ನೊದಗಿಸುತ್ತೇನೆ. ಹೇಡಿ, ಹೂಡು ಬಾಣ, ಚಾಚು ನಿನ್ನೆದೆಯನ್ನು!’

ಆಗಲೇ ಕಾರ್ತವೀರ್ಯ ಹೂಡಿದ ಐನೂರು ಬಾಣಗಳೂ ಪರಶುರಾಮನತ್ತ ನುಗ್ಗಿ ಬಂದವು. ಸಮರಾಗ್ರಣಿ ಪರಶುರಾಮ ಒಂದೇ ಬಾಣ ಹೂಡಿ ಸಹಸ್ರಾರು ಬಾಣಗಳ ಮಳೆ ಸುರಿಯುವಂತೆ ಮಾಡಿದ. ಕಾರ್ತವೀರ್ಯನ ಕೈಯಲ್ಲಿದ್ದ ಬಿಲ್ಲು ಬಾಣಗಳೆಲ್ಲ ತುಂಡಾದವು. ತನ್ನ ಬಿಲ್ಲು ಬಾಣಗಳು ವ್ಯರ್ಥವಾದದ್ದನ್ನು ನೋಡಿ ಅವನು ಅಲ್ಲಿ ಸುತ್ತಲೂ ಇದ್ದ ಗಿಡಮರ ಬೆಟ್ಟಗಳನ್ನು ಬುಡಮೇಲು ಮಾಡಿ ಪರಶುರಾಮನತ್ತ ಎಸೆದ. ಮತ್ತೆ ಅವನತ್ತ ನುಗ್ಗಿ ಬಂದ.

ಸಿಡಿಲಿನ ವೇಗದಲ್ಲಿ ಥಟ್ಟನೆ ಮುನ್ನುಗ್ಗಿದ ಪರಶುರಾಮ ತನ್ನ ಕೊಡಲಿಯನ್ನು ಝಳಪಿಸುತ್ತ ರೋಷಾಗ್ನಿಗಳನ್ನು ಚೆಲ್ಲುತ್ತ ಸರ್ಪದ ಹೆಡೆಯನ್ನು ಕೊಚ್ಚಿ ಹಾಕುವ ಹಾಗೆ ಕಾರ್ತವೀರ್ಯನ ಸಹಸ್ರಬಾಹುಗಳನ್ನೂ ಕೊಚ್ಚಿ ಹಾಕಿದ!

ಕೆಲವೇ ಕ್ಷಣಗಳಲ್ಲಿ, ತತ್ತರಿಸುತ್ತ ಬಿದ್ದಿದ್ದ ಕಾರ್ತವೀರ್ಯನ ತಲೆಯನ್ನು ಹಿಡಿದೆತ್ತಿ ಪರ್ವತದ ಶೃಂಗವನ್ನು ಕತ್ತರಿಸುವ ಹಾಗೆ ಕತ್ತರಿಸಿ ಹಾಕಿದ.

ತಮ್ಮ ನಾಯಕನ ಸಾವು ಆಗುತ್ತಿರುವುದನ್ನು ನೋಡಿದ ಅವನ ಸಹೋದರರು, ಮಕ್ಕಳು, ಸೈನಿಕರು ಎಲ್ಲರೂ ಯುದ್ಧರಂಗವನ್ನು ಬಿಟ್ಟೋಡಿದರು.

ಇಡೀ ಶತ್ರುಪಾಳ್ಯ ನಾಶವಾಗಿತ್ತು. ಆಯುಧವೆತ್ತಿ ಮುಂದೆ ನಿಲ್ಲುವ ಯಾವ ಅತಿರಥರೂ ಮಹಾರಥರೂ ಎದುರಾಗಲಿಲ್ಲ. ಪರಶುರಾಮ ಆ ರೋಷದ ಹೊಳೆಯಲ್ಲೆ ಮುಂದೆ ಹರಿದು ಹೋಗಿ ಬಂಧನದಲ್ಲಿದ್ದ ಕಾಮಧೇನುವನ್ನು ಬಿಡುಗಡೆಗೊಳಿಸಿದ. ಬಂಧನದಲ್ಲಿ ತೀವ್ರ ಯಾತನೆ ಅನುಭವಿಸಿದ ಕಾಮಧೇನುವನ್ನು ಅದರ ಕರುವಿನ ಜೊತೆಗೆ ತನ್ನ ಆಶ್ರಮಕ್ಕೆ ಕರೆತಂದು ತಂದೆಯ ವಶಕ್ಕೆ ನೀಡಿದ. ತನ್ನ ಸಾಧನೆಗಾಗಿ ಸಂತೋಷ, ಸಂತೃಪ್ತಿಗಳಿಂದ ಮನೆಯವರೆಲ್ಲರ ಮುಂದೆ ಎದೆಯುಬ್ಬಿಸಿ ನಿಂತುಕೊಂಡ.

ತಂದೆ ಜಮದಗ್ನಿ ಮಹರ್ಷಿ, ತಾಯಿ ರೇಣುಕಾದೇವಿ ಮತ್ತು ಸೋದರರು, ಪರಶುರಾಮನ ವೀರಾವೇಶದ, ಶತ್ರುರಕ್ತ ಸಿಂಚಿತ ಶರೀರವನ್ನೇ ದಿಟ್ಟಿಸಿ ನೋಡಿದರು.

ಪರಶುರಾಮ ಎತ್ತರಿಸಿದ ದನಿಯಲ್ಲಿ ಹೇಳಿದ –

`ಏನು ನೋಡುತ್ತಿದ್ದೀರಿ? ನನಗೊಂದು ಅಣುವಷ್ಟೂ ಏಟುಬಿದ್ದಿಲ್ಲ, ಒಂದು ಹನಿ ರಕ್ತವೂ ಚಿಮ್ಮಿಲ್ಲ. ಆದರೆ ಅಲ್ಲಿ ರಣರಂಗದಲ್ಲಿ ರಕ್ತದ ಕೋಡಿ ಹರಿಯಿತು, ಲಕ್ಷಾಂತರ ಸೈನಿಕರ, ಆನೆ ಕುದುರೆಗಳ ಮಾರಣಹೋಮ ನಡೆಯಿತು. ಕಾರ್ತವೀಯಾರ್ಜುನನ್ನು ಚೂರುಚೂರು ಮಾಡಿಬಿಟ್ಟೆ. ಅವನ ಸೋದರರು, ಮಕ್ಕಳು ಬೆದರಿ ಓಡಿಹೋದರು! ಅಪ್ಪ, ಇಗೋ ನಿಮ್ಮ ಪ್ರೀತಿಯ ಕಾಮಧೇನು, ವಾಪಸ್ಸು ತಂದಿದ್ದೇನೆ! ಇನ್ನು ಮೇಲೆ ಇದನ್ನು ಮುಟ್ಟುವ ಧೈರ್ಯವೂ ಯಾರಿಗೂ ಆಗುವುದಿಲ್ಲ!’

ಪರಶುರಾಮ ಇಡೀ ಅರಣ್ಯ ತಲ್ಲಣಿಸುವ ಹಾಗೆ, ಸದ್ದು ಮುಗಿಲು ಮುಟ್ಟುವ ಹಾಗೆ ವಿಜಯೋತ್ಸವದ ದನಿ ಮಾಡಿದ. ಅವನ ಹಿರಿಯ ಸೋದರರೆಲ್ಲರೂ ತಾವೂ ಕೇಕೆ ಹಾಕಿ ಕೂಗಿ ದನಿಗೂಡಿಸಿದರು.

ಜಮದಗ್ನಿ ಕೆಲಹೊತ್ತು ವೌನವಾಗಿ ನೋಡುತ್ತ ನಿಂತು ಅನಂತರ ಎಲ್ಲವೂ ಶಾಂತವಾದ ಮೇಲೆ ಹೇಳಿದ –

`ಮಗೂ, ಪರಶುರಾಮ, ನೀನು ಮಹಾವೀರ, ಆತ್ಮವಿಶ್ವಾಸಿ ನನಗೆ ಗೊತ್ತು. ಆದರೆ, ದೇವತಾ ಸ್ವರೂಪಿಯೇ ಆದ ನಮ್ಮ ದೊರೆಯನ್ನೇ ಸಂಹಾರ ಮಾಡಿದ್ದು ನನಗೇನೊ ಸರಿಯೆನಿಸಲಿಲ್ಲ. ನಿನ್ನ ರೋಷದ ತೃಪ್ತರ್ಥವಾಗಿ, ನಿನ್ನ ಕೊಡಲಿಗೊಂದು ಸಾಹಸಪ್ರಯೋಗ ಎಂಬುದಕ್ಕಾಗಿ, ಒಂದು ಗೋವಿನ ಕಾರಣಕ್ಕಾಗಿ ಹೀಗೊಂದು ಮಾನವ ಮಾರಣಹೋಮ ಮಾಡಿದ್ದು ದೇವರು ಒಪ್ಪತಕ್ಕ ವಿಷಯವೆನಿಸುತ್ತಿಲ್ಲ. ಮಗೂ, ನಮ್ಮ ದೈವಸ್ವರೂಪೀ ದೊರೆಯ ಸಂಹಾರ, ನಮ್ಮ ದೇಶ ಕಾಪಾಡುವ ಯೋಧರ ಸಂಹಾರ ಇವೆಲ್ಲದರಿಂದ ನೀನು ಮಹಾಪಾಪ ಎಸಗಿದ್ದೀಯ ಎಂದೇ ನನ್ನ ಭಾವನೆ. ನನ್ನ ಪ್ರೀತಿಯ ಪುತ್ರನೇ, ನಾವೆಲ್ಲ ಬ್ರಾಹ್ಮಣರು. ನಮ್ಮಲ್ಲಿನ ಕ್ಷಮಾಗುಣದಿಂದಾಗಿ ಸಾಮಾನ್ಯ ಜನರ ದೃಷ್ಟಿಯಲ್ಲಿ ಪೂಜನೀಯರಾಗಿದ್ದೇವೆ. ಈ ಗುಣದಿಂದಾಗಿಯೇ ಬ್ರಹ್ಮಾಂಡದ ಪರಮ ಗುರುವಾದ ಬ್ರಹ್ಮನು ತನ್ನ ಸ್ಥಾನವನ್ನು ಸಾಧಿಸಿದ್ದಾನೆ. ಸೂರ್ಯನಂತೆ ಪ್ರಕಾಶಮಯವಾದ ಕ್ಷಮಾಗುಣವನ್ನು ಬೆಳೆಸಿಕೊಳ್ಳುವುದು ಬ್ರಾಹ್ಮಣನ ಕರ್ತವ್ಯ. ದೇವೋತ್ತಮ ಪರಮ ಪುರುಷನಾದ ಶ್ರೀಹರಿಯು ಕ್ಷಮಾಗುಣಶೀಲತೆಯಿಂದ ಸಂತುಷ್ಟನಾಗುವನು. ನನ್ನ ಪ್ರೀತಿಯ ಪುತ್ರನೇ, ಚಕ್ರವರ್ತಿ ಸಾರ್ವಭೌಮನನ್ನು ಸಂಹಾರ ಮಾಡುವುದು ಬ್ರಾಹ್ಮಣನ ಹತ್ಯೆಗಿಂತಲೂ ಘೋರವಾದ ಮಹಾಪಾಪ. ಇದಕ್ಕೆ ಪರಿಹಾರವಾಗಿ ನಿನ್ನಿಂದೊಂದು ಪ್ರಾಯಶ್ಚಿತ್ತ ಕಾರ್ಯ ಆಗಲೇಬೇಕು!’

ತಂದೆಯ ಮಾತು ಕೇಳಿ ಪರಶುರಾಮನ ವೀರೋತ್ಸವವೆಲ್ಲ ಜರ್ರನೆ ಇಳಿದು ಹೋಯಿತು. ಮೈಯೆಲ್ಲ ಬೆವತು ಹೋಯಿತು. ಏನೊ ಅಚಾತುರ್ಯ ಮಾಡಿದವನ ಹಾಗೆ ಪಾಪಪ್ರಜ್ಞೆಯೊಂದು ಅವನನ್ನು ಸಂಪೂರ್ಣವಾಗಿ ಆವರಿಸಿಕೊಂಡಿತು.

ತಂದೆ, ಮಹಾನ್‌ ಮಹರ್ಷಿ ಜಮದಗ್ನಿಯ ಮುಂದೆ ತಲೆತಗ್ಗಿಸಿ ನಿಂತು ಕೇಳಿದ :

`ತಂದೆಯೇ, ನನ್ನಿಂದ ತಪ್ಪಾಗಿದೆಯೆಂದು ಮನವರಿಕೆಯಾಗಿದೆ. ಇಷ್ಟು ಸಣ್ಣ ವಿಷಯಕ್ಕೆ ಇಷ್ಟೊಂದು ದೊಡ್ಡ ಮಾರಣ ಹೋಮ ಆಗಬೇಕಾಗಿರಲಿಲ್ಲವೇನೊ? ನಾನು ತಪ್ಪು ಮಾಡಿದ್ದೇನೆ. ನಿಮ್ಮ ಆಜ್ಞೆಯಂತೆ ನಡೆಯುತ್ತೇನೆ. ನೀವು ಹೇಳಿದ ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತೇನೆ!’

ಜಮದಗ್ನಿ ಖಚಿತವಾದ ದನಿಯಲ್ಲಿ ಹೇಳಿದ –

`ನೀನಿನ್ನು ಇಲ್ಲಿರಬೇಡ. ಇಲ್ಲಿನ ಆಗುಹೋಗುಗಳು ನಿನ್ನ ಮನಸ್ಸಿನ ಮೇಲೆ ಪರಿಣಾಮ ಬೀರುವುದು ಬೇಡ. ಈಗಲೇ ನೀನು ಕೃಷ್ಣಪ್ರಜ್ಞೆ ಹೊಂದಿ ಪವಿತ್ರ ತೀರ್ಥಕ್ಷೇತ್ರಗಳ ಯಾತ್ರೆಯನ್ನು ಕೈಗೊಳ್ಳುವಂತಹವನಾಗು. ನಿನ್ನ ಈ ಮಹಾನ್‌ ಪಾಪ ಈ ಮಹಾನ್‌ ತೀರ್ಥಯಾತ್ರೆಯ ಪರಿಣಾಮದಿಂದ ಸ್ವಲ್ಪವಾದರೂ ಶಮನವಾಗುವುದು!’

ಪರಶುರಾಮ ತಂದೆ-ತಾಯಿಗೆ ಸಾಷ್ಟಾಂಗ ನಮಸ್ಕಾರ ಮಾಡಿದ.

ಸೋದರರನ್ನು ಆತ್ಮೀಯವಾಗಿ ಅಪ್ಪಿಕೊಂಡ.

ಎಲ್ಲರ ಅನುಮತಿ ಬೇಡಿ ತೀರ್ಥಯಾತ್ರೆಗೆ ಹೊರಟು ನಿಂತ.

ಅಂದಿನ ಕಥಾ ಭಾಗವನ್ನು ಈ ರೀತಿಯಾಗಿ ಮುಕ್ತಾಯಗೊಳಿಸಿದ ಸೂತಮುನಿ ಮತ್ತೆ ತಮ್ಮ ಮುಖದಮೇಲೆ ಮಂದಹಾಸವನ್ನು ತಂದುಕೊಳ್ಳುತ್ತ ಹೇಳಿದರು:

`ಒಬ್ಬ ಕ್ಷತ್ರಿಯನನ್ನು ಕೊಚ್ಚಿಹಾಕಿದ್ದಕ್ಕಾಗಿ ಪರಶುರಾಮನು ಪವಿತ್ರ ಕ್ಷೇತ್ರಗಳ ತೀರ್ಥಯಾತ್ರೆ ಮಾಡುವಂತಾಯಿತು. ತಾನು ಪಾಪಕಾರ್ಯವೆಸಗಿದ್ದೇನೆ ಎಂದವನಿಗೆ ಅನ್ನಿಸಿತು. ಆದರೆ ಈ ತೀರ್ಥಯಾತ್ರೆಯಿಂದ ಹಿಂತಿರುಗಿದ ಕೂಡಲೇ ಅವನು ಇನ್ನೊಂದು ಮಾರಣ ಹೋಮಕ್ಕೆ ಹೊರಡಬೇಕಾಗಿ ಬಂದದ್ದೊಂದು ವಿಪರ್ಯಾಸ!’

ಈ ಲೇಖನ ಶೇರ್ ಮಾಡಿ