ಇಸ್ಕಾನ್ ಬೆಂಗಳೂರು ಶ್ರೀಲ ಪ್ರಭುಪಾದರ ಜೀವನ ಚರಿತ್ರೆ ಸಿಂಗ್, ಡ್ಯಾನ್ಸ್ ಆಂಡ್ ಪ್ರೇ ಪುಸ್ತಕದ ಯುನೈಟೆಡ್ ಕಿಂಗ್ಡಂ (ಯುಕೆ) ಯಾತ್ರೆಯನ್ನು ಯಶಸ್ವಿಗೊಳಿಸಿತು.
ಬೆಂಗಳೂರು, ಮೇ 13, 2023 : ಭಾರತದಲ್ಲಿ ಅನೇಕ ಯಶಸ್ವೀ ಕಾರ್ಯಕ್ರಮಗಳ ಅನಂತರ ಇಸ್ಕಾನ್ ಬೆಂಗಳೂರು ಅತ್ಯಧಿಕವಾಗಿ ಮಾರಾಟವಾಗುತ್ತಿರುವ ಸಿಂಗ್, ಡ್ಯಾನ್ಸ್ ಆಂಡ್ ಪ್ರೇ ಪುಸ್ತಕದ ಪ್ರಚಾರ ಪ್ರವಾಸವನ್ನು ಯುಕೆಯಲ್ಲಿ ಸಂಯೋಜಿಸಿತ್ತು. ಇದು ಅಂತಾರಾಷ್ಟ್ರೀಯ ಹರೇ ಕೃಷ್ಣ ಆಂದೋಲನದ ಸಂಸ್ಥಾಪನಾಚಾರ್ಯರಾದ ಶ್ರೀ ಶ್ರೀಮದ್ ಎ.ಸಿ. ಭಕ್ತಿ ವೇದಾಂತ ಸ್ವಾಮಿ ಪ್ರಭುಪಾದ ಅವರ ಜೀವನ ಚರಿತ್ರೆಯಾಗಿದ್ದು, ವಿಲ್ಬರ್ ಪ್ರಶಸ್ತಿ ವಿಜೇತ ಮತ್ತು ಖ್ಯಾತ ಇತಿಹಾಸಗಾರ ಡಾ. ಹಿಂದೋಲ್ ಸೇನ್ಗುಪ್ತ ಅದರ ಲೇಖಕರಾಗಿದ್ದಾರೆ. ಈ ಪುಸ್ತಕವು ಶ್ರೀಲ ಪ್ರಭುಪಾದರ ಅದ್ಭುತ ಬದುಕಿನ ಅಪೂರ್ವ ಅಂತರ್ದೃಷ್ಟಿಯನ್ನು ಸಮಕಾಲೀನರಿಗೆ ನೀಡುತ್ತದೆ.
ಯುಕೆಯ ಅನೇಕ ಐತಿಹಾಸಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸ್ಥಳಗಳಲ್ಲಿ ಪುಸ್ತಕ ಪ್ರಚಾರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಯುಕೆಯಲ್ಲಿ ಭಾರತದ ಹೈ ಕಮೀಷನ್ನ ಸಾಂಸ್ಕೃತಿಕ ವಿಭಾಗವಾದ ನೆಹರೂ ಕೇಂದ್ರದಲ್ಲಿ ಇದೇ ಮೇ 4 ರಂದು ಪುಸ್ತಕ ಅನಾವರಣ ಕಾರ್ಯಕ್ರಮ ಆಯೋಜಿತವಾಗಿತ್ತು. ಪುಸ್ತಕ ಬಿಡುಗಡೆಯ ಅನಂತರ ಪ್ರತಿಷ್ಠಿತ ಆಕ್ಸ್ಫರ್ಡ್ ವಿಶ್ವವಿದ್ಯಾಲಯದಲ್ಲಿ ಪುಸ್ತಕವನ್ನು ಕುರಿತು ಸಂವಾದ ನಡೆಯಿತು. ಶ್ರೀಲ ಪ್ರಭುಪಾದರ ಗೌರವಾರ್ಥವಾಗಿ ಹೌಸ್ ಆಫ್ ಕಾಮನ್ಸ್ನಲ್ಲಿ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಶ್ರೀ ಗೀತಾ ಭವನ ಮಂದಿರ, ಶ್ರೀ ಪ್ರಜಾಪತಿ ಸಂಸ್ಥೆ ಮತ್ತು ಶ್ರೀ ಸ್ವಾಮಿನಾರಾಯಣ ಮಂದಿರದಂತಹ ಪ್ರಮುಖ ಆಧ್ಯಾತ್ಮಿಕ ಕೇಂದ್ರಗಳಲ್ಲಿಯೂ ಪುಸ್ತಕ ಅನಾವರಣ ನಡೆಯಿತು. ಪ್ರತಿಷ್ಠಿತ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಮೇ 13 ರಂದು ನಡೆದ ಕಾರ್ಯಕ್ರಮದ ಜೊತೆಗೆ ಯುಕೆ ಪ್ರವಾಸವು ಸಮಾಪ್ತಗೊಂಡಿತು. ಇಸ್ಕಾನ್ ಬೆಂಗಳೂರಿನ ಅಧ್ಯಕ್ಷ ಮತ್ತು ಅಕ್ಷಯಪಾತ್ರಾ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಮಧು ಪಂಡಿತ ದಾಸ ಅವರು ಈ ಕಾರ್ಯಕ್ರಮಗಳ ಅಧ್ಯಕ್ಷತೆ ವಹಿಸಿದ್ದರು. ಇಸ್ಕಾನ್ ಬೆಂಗಳೂರಿನ ಹಿರಿಯ ಉಪಾಧ್ಯಕ್ಷ ಮತ್ತು ಅಕ್ಷಯ ಪಾತ್ರಾ ಪ್ರತಿಷ್ಠಾನದ ಉಪಾಧ್ಯಕ್ಷರಾದ ಶ್ರೀ ಚಂಚಲಾಪತಿ ದಾಸ ಮತ್ತು ಲೇಖಕರು ಭಾಗವಹಿಸಿದರು.

ಕಾರ್ಯಕ್ರಮಗಳಲ್ಲಿ ಗಣ್ಯ ಅತಿಥಿಗಳು, ಪ್ರಾಧ್ಯಾಪಕರು, ತತ್ತ್ವಜ್ಞಾನಿಗಳು, ವಿದ್ಯಾರ್ಥಿಗಳು, ಪುಸ್ತಕಪ್ರೇಮಿಗಳು ಮತ್ತಿತರರು ಭಾಗವಹಿಸಿದ್ದರು. ಪಾಲ್ಗೊಂಡಿದ್ದವರು ಪುಸ್ತಕವನ್ನು ಅಪಾರವಾಗಿ ಮೆಚ್ಚಿಕೊಂಡರು ಮತ್ತು ಶ್ರೀಲ ಪ್ರಭುಪಾದರನ್ನು ಹಾಗೂ ಅವರು ತಂದ ಆಧ್ಯಾತ್ಮಿಕಕ್ರಾಂತಿಯನ್ನು ಕುರಿತ ಸ್ಫೂರ್ತಿದಾಯಕ ಚರ್ಚೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿದರು.
ಪ್ರಮುಖ ಭಾಷಣಕಾರರಲ್ಲಿ ಕೆಲವರು:
• ಯುಕೆಯ ಸಂಸದ ಶ್ರೀ ವೀರೇಂದ್ರ ಶರ್ಮ
• ವೇದಾಂತ ರಿಸೋರ್ಸಸ್ ಲಿಮಿಟೆಡ್ನ ಸ್ಥಾಪಕ ಮತ್ತು ಅಧ್ಯಕ್ಷರಾದ ಶ್ರೀ ಅನಿಲ್ ಅಗರ್ವಾಲ್
• ಹಿಂದೂಜಾ ಸಮೂಹ ಸಂಸ್ಥೆಯ ಸಹ ಅಧ್ಯಕ್ಷ ಶ್ರೀ ಗೋಪಿಚಂದ್ ಹಿಂದೂಜಾ
• ನೆಹರೂ ಕೇಂದ್ರದ ನಿರ್ದೇಶಕ ಶ್ರೀ ಅಮೀಶ್ ತ್ರಿಪಾಠಿ
• ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಮತ್ತು ಪೊಲೈಟಿಕಲ್ ಸೈನ್ಸ್ನಲ್ಲಿ ಬೋಧಿಸುತ್ತಿದ್ದ ಡಾ. ಗೌತಮ್ ಸೆನ್
• ಹಿಂದೂ ಅಧ್ಯಯನಗಳ ಆಕ್ಸ್ಫರ್ಡ್ ಕೇಂದ್ರದ (ಒಸಿಎಚ್ಎಸ್) ನಿರ್ದೇಶಕ ಶ್ರೀ ಶೌನಕ ಋಷಿ ದಾಸ್
• ಒಸಿಎಚ್ಎಸ್ನಲ್ಲಿ ಗ್ರಂಥಪಾಲಕ ಮತ್ತು ಫೆಲೋ ಡಾ. ರೇಂಬರ್ಟ್ ಲುಟ್ಜೆಹರ್ಮ್ಸ್
• ಒಸಿಎಚ್ಎಸ್ನಲ್ಲಿ ಶೈಕ್ಷಣಿಕ ನಿರ್ದೇಶಕ ಪ್ರೊ. ಗವಿನ್ ಫ್ಲಡ್
• ಆಕ್ಸ್ಫರ್ಡ್ ವಿಶ್ವವಿದ್ಯಾಲಯದಲ್ಲಿ ಪೌರಾತ್ಯ ಧರ್ಮ ಮತ್ತು ನೀತಿ ಶಾಸ್ತ್ರದ ಪ್ರಾಧ್ಯಾಪಕ ಶ್ರೀ ದಿವಾಕರ ಆಚಾರ್ಯ
• ಆಕ್ಸ್ಫರ್ಡ್ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ಸಾಹಿತ್ಯ ಮತ್ತು ಇತಿಹಾಸದ ಪೋಸ್ಟ್ ಡಾಕ್ಟರೇಟ್ ಸಂಶೋಧಕ ಶ್ರೀ ವಿಶಾಲ್ ಶರ್ಮ
• ಬ್ರಸೆನೋಸ್ ಕಾಲೇಜಿನಲ್ಲಿ ಕ್ವೊನ್ಡಮ್ ಫೆಲೊ ಮತ್ತು ಸಾಹಿತ್ಯದ ಅಧ್ಯಾಪಕ ಡಾ. ಜೊನಾಥನ್ ಕಟ್ಸ್
• ಧರ್ಮಶಾಸ್ತ್ರ ಮತ್ತು ಧರ್ಮ ವಿಭಾಗದ ಡಾ. ಆಂಡ್ರೂ ಡೇವಿಸ್
• ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ವಿಭಾಗದ ಪ್ರೊ. ಶ್ರಿಯಾ ಅಯ್ಯರ್.
ಶ್ರೀಲ ಪ್ರಭುಪಾದ ಅವರಿಗೆ ಗೌರವಗಳನ್ನು ಅರ್ಪಿಸಿದ ಗಣ್ಯರು, ಅತ್ಯಲ್ಪ ಕಾಲದಲ್ಲಿಯೇ ಅವರು ತಂದ ಆಧ್ಯಾತ್ಮಿಕ ಕ್ರಾಂತಿಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಅವುಗಳಲ್ಲಿ ಆಯ್ದ ಭಾಗ ಇಲ್ಲಿವೆ :
ಶ್ರೀ ಅನಿಲ್ ಅಗರ್ವಾಲ್ ನುಡಿದರು : “ಶ್ರೀಲ ಪ್ರಭುಪಾದರು 69ರ ಇಳಿ ವಯಸ್ಸಿನಲ್ಲಿ ವಿಶ್ವಾದ್ಯಾಂತ ಕೃಷ್ಣ ಭಕ್ತಿ ಆಂದೋಲನವನ್ನು ಸ್ಥಾಪಿಸಿದ್ದು, ಅವರ ಜೀವನ ಮತ್ತು ಕಾರ್ಯಗಳನ್ನು ಕುರಿತು ಅರಿತಾಗ ನಾನು ತುಂಬಾ ಸ್ಫೂರ್ತಿಗೊಂಡೆ! ಅವರನ್ನು ನಾನು ಸರ್ವಕಾಲೀನ ಶ್ರೇಷ್ಠ ಆಂಟ್ರಪ್ರೆನ್ಯುರ್ ಎಂದು ಪರಿಗಣಿಸುವೆ. ಜಗತ್ತಿಗೆ ಅವರ ಕೊಡುಗೆಯು ವಿಶ್ವವ್ಯಾಪಿ ಸಂಸ್ಥೆಯನ್ನು ಸ್ಥಾಪಿಸಿರುವುದಷ್ಟೇ ಅಲ್ಲ, ಸಮಾಜಕ್ಕೆ 108 ಸಾಂಸ್ಕೃತಿಕ ಕೇಂದ್ರಗಳನ್ನು ಬಿಟ್ಟು ಹೋಗಿರುವುದಾಗಿದೆ. ಸಿಂಗ್, ಡ್ಯಾನ್ಸ್ ಆಂಡ್ ಪ್ರೇ ಒಂದು ಧಾರ್ಮಿಕ ಪುಸ್ತಕವಲ್ಲ, ಅದೊಂದು ಸ್ಫೂರ್ತಿದಾಯಕ ಪುಸ್ತಕವಾಗಿದೆ. ತಮ್ಮ ಬದುಕಿನಲ್ಲಿ ಸ್ಫೂರ್ತಿಯನ್ನು ಬಯಸುವವರೆಲ್ಲರೂ ಈ ಪುಸ್ತಕವನ್ನು ಅವಶ್ಯವಾಗಿ ಓದಲೇಬೇಕು.”

ಶ್ರೀ ಅಮೀಶ್ ತ್ರಿಪಾಠಿ ತಿಳಿಸಿದರು : “ ಯಾರೂ ಕೂಡ ಹಸಿವಿನಿಂದ ಇರಬಾರದು ಎನ್ನುವ ಶ್ರೀಲ ಪ್ರಭುಪಾದರ ಕನಸು, ದೃಷ್ಟಿಯು ವಿಶ್ವವ್ಯಾಪಿ ಸಂಸ್ಥೆ ಅಕ್ಷಯಪಾತ್ರಾದಲ್ಲಿ ಸಾಕಾರಗೊಂಡಿದೆ. ಭಾರತದಲ್ಲಿ ಆರಂಭಗೊಂಡ ಇದು ಯುಕೆಯಲ್ಲಿ ಕೂಡ ಸತ್ಕಾರ್ಯವನ್ನು ಮಾಡುತ್ತಿದೆ. ವಸುಧೈವ ಕುಟುಂಬಕಂ ಎನ್ನುವ ಅವರ ಸಂದೇಶವನ್ನು ಅಕ್ಷರ ಪಾತ್ರಾವು ಎಲ್ಲಡೆ ಸಾರುತ್ತಿದೆ. ನೀವು ಬೇರೆ ಬೇರೆ ಸ್ಥಳಗಳಲ್ಲಿ ಹುಟ್ಟಿದ್ದರೂ, ಎಷ್ಟು ಜನರಿಗೆ ಸಾಧ್ಯವೋ ಅಷ್ಟು ಜನರಿಗೆ ಸಹಾಯ ಮಾಡಬೇಕಾದುದು ನಮ್ಮ ಕರ್ತವ್ಯ. ಸ್ವಲ್ಪ ಸಂಪತ್ತಿನ ಅನುಗ್ರಹ ನಮಗಾಗಿದ್ದರೆ, ನಾವು ಆ ಅನುಗ್ರಹವನ್ನು ಹಂಚುವುದು ನಮ್ಮ ಕರ್ತವ್ಯ.”

ಈ ಸಂದರ್ಭದಲ್ಲಿ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ ಶ್ರೀ ಮಧು ಪಂಡಿತ ದಾಸ ಅವರು ಹೇಳಿದರು : “ ಈ ಯುಕೆ ಪ್ರವಾಸದ ಭಾಗವಾಗಿರುವುದು ನನಗೆ ಸಂತೋಷ ಉಂಟುಮಾಡಿದೆ. ಸಿಂಗ್, ಡ್ಯಾನ್ಸ್ ಆಂಡ್ ಪ್ರೇ ಪುಸ್ತಕದ ಅನಾವರಣವನ್ನು ಅತ್ಯಂತ ಯಶಸ್ವಿಗೊಳಿಸಲು ಸಹಕರಿಸಿದ ಎಲ್ಲ ಸಂಸ್ಥೆಗಳ ಮುಖ್ಯಸ್ಥರಿಗೆ ಮತ್ತು ಇತರ ಗಣ್ಯರಿಗೆ ನಾನು ಕೃತಜ್ಞತೆ ಅರ್ಪಿಸುತ್ತೇನೆ. ಶ್ರೀಲ ಪ್ರಭುಪಾದರು ಲಂಡನ್ ಅನ್ನು ಪ್ರಪಂಚದ ಒಂದು ಪ್ರಮುಖ ನಗರವೆಂದು ಭಾವಿಸಿದ್ದರು. ಇಲ್ಲಿ ನಾವು ಅವರಿಗೆ ಗೌರವ ಅರ್ಪಿಸಿದ್ದು ಆನಂದವನ್ನು ಉಂಟುಮಾಡಿದೆ. ಶ್ರೀಲ ಪ್ರಭುಪಾದರ ಜೀವನ ಚರಿತ್ರೆಯನ್ನು ಓದಿ ಮತ್ತು ಅವರ ಅದ್ಭುತ ಬದುಕು, ಜಗತ್ತಿಗೆ ಅವರು ನೀಡಿದ ಸಂದೇಶ ಮತ್ತು ಆದ್ಯಾತ್ಮಿಕ ದೃಷ್ಟಿಯನ್ನು ಹರಡಲು ನಮಗೆ ನೆರವಾಗಿ ಎಂದು ಕೋರುವೆ.”

ಡಾ. ಹಿಂದೋಲ್ ಸೆನ್ಗುಪ್ತ ನುಡಿದರು : “ ಶ್ರೀಲ ಪ್ರಭುಪಾದರು ತಮ್ಮ ಕೃಷ್ಣಪ್ರಜ್ಞಾ ಆಂದೋಲನದ ಆರಂಭಿಕ ಯಶಸ್ಸನ್ನು ಅಮೆರಿಕದಲ್ಲಿ ಕಂಡರು. ಆದರೆ ಬೀಟಲ್ಸ್ ಜೊತೆಗೆ ಸಂಪರ್ಕ ಮತ್ತು ಜಾರ್ಜ್ ಹ್ಯಾರಿಸನ್ ಅವರ ಶಿಷ್ಯನಾದ ಮೇಲೆ ಇಂಗ್ಲೆಂಡಿನಲ್ಲಿ ಇಸ್ಕಾನ್ ಹೆಚ್ಚು ಜನರನ್ನು ತಲಪುವುದು ಸಾಧ್ಯವಾಯಿತು. ಇಂಗ್ಲಂಡಿನಲ್ಲಿ ಪ್ರಭುಪಾದರು ತಮ್ಮ ಮಹಾ ಮಂತ್ರವನ್ನು ಅತ್ಯಧಿಕ ಮಾರಾಟದ ರೆಕಾರ್ಡ್ ಆಗಿ ಪರಿವರ್ತಿಸಿದರು. ಆದುದರಿಂದ ಇಂಗ್ಲೆಂಡ್ ಅವರಿಗೆ ವಿಶೇಷ ನಗರವಾಗಿತ್ತು ಮತ್ತು ಅದನ್ನು ಶ್ರೇಷ್ಠ ನಗರವೆಂದು ಅವರು ಪರಿಗಣಿಸಿದ್ದರು. ಆಕ್ಸ್ ಫರ್ಡ್ ಮತ್ತು ಕೇಂಬ್ರಿಡ್ಜ್ ಸೇರಿದಂತೆ ಯುಕೆಯ ವಿವಿಧ ಸ್ಥಳಗಳಲ್ಲಿನ ಪುಸ್ತಕ ಪ್ರವಾಸವು ನನಗೆ ಗೌರವದ ಸಂಗತಿಯಾಗಿದೆ. ಇದರಿಂದ ದೊಡ್ಡ ಕನಸು ನನಸಾಗಿದೆ.”

ಶ್ರೀಲ ಪ್ರಭುಪಾದರ ಕೊಡುಗೆಯ ಸುಸ್ಮರಣೆಗೆ ಇಸ್ಕಾನ್ ಬೆಂಗಳೂರಿನ ಪ್ರಯತ್ನಗಳು
ಭಾರತದ ಸಾಂಸ್ಕೃತಿಕ ಇತಿಹಾಸದಲ್ಲಿ ಪ್ರಮುಖ ಮೈಲಿಗಲ್ಲಾದ ಶ್ರೀಲ ಪ್ರಭುಪಾದರ 125ನೆಯ ಜನ್ಮದಿನೋತ್ಸವವನ್ನು ಇಸ್ಕಾನ್ ಬೆಂಗಳೂರು ಅವರ ನೆನಪಿಗಾಗಿ ಅನೇಕ ಕಾರ್ಯಕ್ರಮಗಳ ಮೂಲಕ ಆಚರಿಸುತ್ತಿದೆ. ಅವರ ಬದುಕು, ಸಂದೇಶ ಮತ್ತು ಕೊಡುಗೆಯನ್ನು ಕುರಿತು ಭಾರತ ಮತ್ತು ವಿದೇಶಗಳಲ್ಲಿ ಅರಿವು ಮೂಡಿಸಲು ಜೀವನ ಚರಿತ್ರೆ ಪುಸ್ತಕ ಅನಾವರಣ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. 125ನೆಯ ಜನ್ಮದಿನೋತ್ಸವದ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸ್ಮರಣ ನಾಣ್ಯವನ್ನು ಬಿಡುಗಡೆ ಮಾಡಿದ್ದನ್ನು ನೆನಪು ಮಾಡಿಕೊಳ್ಳಬಹುದು.
ಸಿಂಗ್, ಡ್ಯಾನ್ಸ್ ಆಂಡ್ ಪ್ರೇ ಪುಸ್ತಕವು ವಿಶ್ವಕ್ಕೆ ಭಾರತದ ಅತಿ ಶ್ರೇಷ್ಠ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ರಾಯಭಾರಿಯಾದ ಶ್ರೀಲ ಪ್ರಭುಪಾದರ ಬದುಕನ್ನು ಕುರಿತಂತೆ ಅತ್ಯುತ್ತಮವಾಗಿ ಸಂಶೋಧನೆ ಮಾಡಿ ಬರೆದ ಜೀವನ ಚಿತ್ರವಾಗಿದೆ. ಭಾರತದ ಆಧ್ಯಾತ್ಮಿಕ ನಾಯಕ, ಚಿಂತಕ ಮತ್ತು ಸುಧಾರಕರೊಬ್ಬರು ಪಶ್ವಿಮ ರಾಷ್ಟ್ರಗಳಿಗೆ ಶಾಂತಿ ಮತ್ತು ಸದ್ಭಾವನೆಯ ಸಂದೇಶವನ್ನು ತೆಗೆದುಕೊಂಡು ಹೋಗಿದ್ದು ಮತ್ತು ಆ ಮೂಲಕ ವಿಶ್ವದ ಸುಖಕ್ಕಾಗಿ ಆದ್ಯಾತ್ಮಿಕ ಕ್ರಾಂತಿಯನ್ನು ಉಂಟು ಮಾಡಿದುದು ಇತಿಹಾಸದಲ್ಲಿಯೇ ಇದೇ ಮೊದಲು. ದೃಢ ಸಂಕಲ್ಪ ಮತ್ತು ಅಗಾಧ ಕರುಣೆಯ ಅವರ ಅದ್ಭುತ ಗಾಥೆಗೆ ಇದು ಒಂದು ಗೌರವಾರ್ಪಣೆ.
ಶ್ರೀಲ ಪ್ರಭುಪಾದರ ಜೀವನ ಚರಿತ್ರೆಯನ್ನು ಕುರಿತಂತೆ
ಸಿಂಗ್, ಡ್ಯಾನ್ಸ್ ಆಂಡ್ ಪ್ರೇ ಪುಸ್ತಕವು ಭಾರತದ ಪುರಾತನ ಆಧ್ಯಾತ್ಮಿಕ ಸಂಸ್ಕೃತಿಯನ್ನು 20ನೆಯ ಶತಮಾನದ ಪಾಶ್ಚಿಮಾತ್ಯ ಜಗತ್ತಿಗೆ ಶ್ರೀಲ ಪ್ರಭುಪಾದರ ಪ್ರಸ್ತುತಿಯನ್ನು ಸ್ಷಷ್ಟವಾಗಿ ವಿವರಿಸುತ್ತದೆ. ಶ್ರೀಲ ಪ್ರಭುಪಾದರ ಜೀವನ, ಅವರ ಅಪೂರ್ವ ಗುಣ ಮತ್ತು ಅವರ ಅಗಾಧ ಪ್ರಭಾವವನ್ನು ಸಮಕಾಲೀನರಿಗೆ ಸ್ಫುಟಪಡಿಸುತ್ತದೆ. ಅಮೆರಿಕದಲ್ಲಿ 60 ಮತ್ತು 70ರ ದಶಕದಲ್ಲಿ ಇದ್ದ ಕೌಂಟರ್ ಕಲ್ಚರ್ ದ ಸಂದರ್ಭದಲ್ಲಿ ಅವರು ಅನೇಕ ಕಷ್ಟಕೋಟಲೆಗಳ ಮಧ್ಯೆಯೂ ನಿರಂತರವಾಗಿ ಪ್ರಯತ್ನಿಸುತ್ತ ಮತ್ತು ಶ್ರೀ ಕೃಷ್ಣನಲ್ಲಿ ಅಪಾರವಾದ ನಿಷ್ಠೆಯಿಂದ ಸಕಾರಾತ್ಮಕ ಸಾಂಸ್ಕೃತಿಕ ಪಲ್ಲಟವನ್ನು ತಂದ ವಿವರವನ್ನು ಈ ಪುಸ್ತಕವು ನೀಡುತ್ತದೆ. ಆ ಕಾಲದ ಗಣ್ಯರು ಮತ್ತು ಇತರ ಪ್ರಮುಖ ಜನರ ಮೇಲೆ ಅವರ ಪ್ರಭಾವವನ್ನು ಇದು ತಿಳಿಸುತ್ತದೆ. ಬೀಟಲ್ಸ್ ನಾಯಕತ್ವದ ಖ್ಯಾತ ಗಿಟಾರ್ ವಾದಕ ಜಾರ್ಜ್ ಹ್ಯಾರಿಸನ್, ಜಾನ್ ಲೆನನ್ ಅವರಲ್ಲಿ ಪ್ರಮುಖರು. ಅಮೆರಿಕದ ಕವಿ ಮತ್ತು ಲೇಖಕ ಅಲೆನ್ ಗಿನ್ಸ್ ಬರ್ಗ್ ಅವರ ಮೇಲೆ ಕೂಡ ಶ್ರೀಲ ಪ್ರಭುಪಾದರ ಪ್ರಭಾವವಿತ್ತು. ಇವುಗಳನ್ನು ಪುಸ್ತಕದಲ್ಲಿ ತಿಳಿಸಲಾಗಿದೆ.
ಈ ಪುಸ್ತಕವು ಭಾರತದಲ್ಲಿ ಅತ್ಯಧಿಕವಾಗಿ ಮಾರಾಟವಾಗಿದೆ. ದೇಶಾದ್ಯಂತ ಇದಕ್ಕೆ ಒಳ್ಳೆಯ ವಿಮರ್ಶೆಯೂ ಬಂದಿದೆ. ಡಾ. ಜಾನ್ ಸ್ಟ್ರಾಟನ್ ಹಾಲೀ (ಧರ್ಮ ಕುರಿತು ಕ್ಲೈರ್ ಟೌ ಪ್ರಾಧ್ಯಾಪಕ, ಕೊಲಂಬಿಯಾ ವಿಶ್ವ ವಿದ್ಯಾಲಯ) ಮತ್ತು ಪ್ರಾನ್ಸಿಸ್ ಎಕ್ಸ್. ಕ್ಲೂನೆ (ದಿವ್ಯ ಶಾಸ್ತ್ರದ ಪರ್ಕ್ಮನ್ ಪ್ರಾಧ್ಯಾಪಕ, ಹಾರ್ವಡ್ ವಿಶ್ವ ವಿದ್ಯಾಲಯ) ಅವರಂತಹ ಅಂತಾರಾಷ್ಟೀಯ ವಿದ್ವಾಂಸರಲ್ಲದೆ ಶಶಿ ತರೂರ್ (ಸಂಸತ್ ಸದಸ್ಯ ಮತ್ತು ಲೇಖಕ) ಅವರಂತಹ ನಾಯಕರು ಮತ್ತು ಸ್ವಪನ್ ದಾಸ್ಗುಪ್ತ (ಪತ್ರಕರ್ತ ಮತ್ತು ಚಿಂತಕ) ಅವರೂ ಕೂಡ ಈ ವಿದ್ವತ್ಪೂರ್ಣ ಕೃತಿಯನ್ನು ಮೆಚ್ಚಿಕೊಂಡು ಶ್ಲಾಘಿಸಿದ್ದಾರೆ.
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ, ಉಪ ರಾಷ್ಟ್ರಪತಿ ಶ್ರೀ ಜಗದೀಶ್ ಧನ್ಕರ್ ಗೃಹ ಸಚಿವ ಶ್ರೀ ಅಮಿತ್ ಶಾ ಅವರುಗಳು ಈ ಪುಸ್ತಕವನ್ನು ಸ್ವೀಕರಿಸಿದ್ದಾರೆ. ಮಾಜಿ ರಾಷ್ಟ್ರಪತಿ ಶ್ರೀ ರಾಮನಾಥ ಕೋವಿಂದ್, ಮಾಜಿ ಉಪ ರಾಷ್ಟ್ರಪತಿ ಶ್ರೀ ವೆಂಕಯ್ಯ ನಾಯ್ಡು, ಖ್ಯಾತ ಶಿಕ್ಷಣ ತಜ್ಞರೂ ದಾನಿಗಳೂ ಆದ ಶ್ರೀಮತಿ ಸುಧಾ ಮೂರ್ತಿ ಅವರಂತಹ ಗಣ್ಯರು ಈ ಪುಸ್ತಕವನ್ನು ಮೆಚ್ಚಿಕೊಂಡಿದ್ದಾರೆ ಮತ್ತು ಭಾರತದಲ್ಲಿ ಈ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದಾರೆ.